ADVERTISEMENT

ವಾರದ ವಿಶೇಷ | ಅರಿಜೀತ್ ಸಿಂಗ್: ಭಾವಗಾರುಡಿಗನ ಗಾನಪಯಣ

ವಿಶಾಖ ಎನ್.
Published 30 ಜನವರಿ 2026, 23:46 IST
Last Updated 30 ಜನವರಿ 2026, 23:46 IST
ಅರಿಜೀತ್ ಸಿಂಗ್
ಅರಿಜೀತ್ ಸಿಂಗ್   
ಭಾರತದ ಯಾವ ಹಿನ್ನೆಲೆ ಗಾಯಕ–ಗಾಯಕಿಯೂ ಈ ವೃತ್ತಿಯಿಂದ ನಿವೃತ್ತಿಯನ್ನು ಘೋಷಿಸಿದ ಉದಾಹರಣೆಗಳಿಲ್ಲ. ದೇಶದ ಜನಪ್ರಿಯ ಗಾಯಕ ಅರಿಜೀತ್ ಸಿಂಗ್ ಅಂತಹುದೊಂದು ಘೋಷಣೆ ಮಾಡಿ ಚರ್ಚೆಗಳನ್ನು, ಪ್ರಶ್ನೆಗಳನ್ನು ತೇಲಿಬಿಟ್ಟಿದ್ದಾರೆ. ಹದಿನೈದು ವರ್ಷಗಳಲ್ಲಿ ವಾರಕ್ಕೆ ಸರಾಸರಿ ಒಂದರಂತೆ ಸಿನಿಮಾ ಹಾಡನ್ನು ಕೊಟ್ಟ ಅವರ ಬಾಳಪಥ ಆಸಕ್ತಿಕರವಾಗಿದೆ.

ಇನ್ನು ಆಟ ನಿಲ್ಲಿಸುವುದಾಗಿ ಕ್ರಿಕೆಟಿಗರು ತಮ್ಮ ಮೂವತ್ತೆಂಟನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸುವುದು ಮಾಮೂಲಿ ಸುದ್ದಿ. ಅದೇ ವಯಸ್ಸಿನ ಒಬ್ಬ ಹಾಡುಗಾರ ಸಿನಿಮಾ ಹಿನ್ನೆಲೆ ಗಾಯನಕ್ಕೆ ಪೂರ್ಣವಿರಾಮ ಹಾಕುವುದಾಗಿ ಪ್ರಕಟಿಸಿದರೆ ಅದು ಹೊಸ ಕಾಲದ ಸೋಜಿಗ. ಅಂತಹ ಬೆರಗುಗೊಳಿಸುವ ನಿರ್ಧಾರವನ್ನು ಅರಿಜೀತ್ ಸಿಂಗ್ ಪ್ರಕಟಿಸಿದ್ದಾರೆ; ಅದೂ ಸಾಮಾಜಿಕ ಮಾಧ್ಯಮದ ಸಂದೇಶದ ಮೂಲಕ.

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಬಳಿಯ ಜಿಯಾಗಂಜ್ ಎಂಬ ಪಟ್ಟಣದಲ್ಲಿ ಅರಿಜೀತ್ ಮನೆ ಇದೆ. ಅದು ಬಂಗಲೆಯೇನೂ ಅಲ್ಲ. ಅಲ್ಲಿ ಸುಸಜ್ಜಿತ ಸ್ಟುಡಿಯೊ ಒಂದನ್ನು ನಿರ್ಮಿಸಿಕೊಂಡಿದ್ದಾರೆ. ಧ್ವನಿಮುದ್ರಣಕ್ಕೆ ಅಗತ್ಯವಿರುವ ಆಧುನಿಕ ತಂತ್ರಜ್ಞಾನದ ಸಕಲವೂ ಅಲ್ಲಿದೆ. ಅದನ್ನು ಅವರು ಅಪ್‌ಡೇಟ್‌ ಕೂಡ ಮಾಡುತ್ತಿರುತ್ತಾರೆ. ಅವರು ಎಲ್ಲರೊಳಗೆ ಒಂದಾಗುವವರಂತೆ ಸ್ಕೂಟರ್‌ ಏರಿ ಅಂಗಡಿಗೆ ಹೋಗಿ, ದಿನಸಿ ತರುತ್ತಾರೆ. ನಿತ್ಯವೂ ಶೇವ್ ಮಾಡುವುದಿಲ್ಲ, ಗಡ್ಡ ಟ್ರಿಮ್‌ ಮಾಡುವುದೂ ಅಪರೂಪ. ಹಾಕುವ ಬಟ್ಟೆಗಳು ಸರಳಾತಿ ಸರಳ. ವೇದಿಕೆ ಮೇಲೆ ಕಾರ್ಯಕ್ರಮ ನೀಡುವಾಗಲೂ ಅವರು ದಿರಿಸಿನ ಕಡೆ ಅಷ್ಟಾಗಿ ಲಕ್ಷ್ಯ ಕೊಟ್ಟವರಲ್ಲ. ಅವರು ಹೀಗೆ– ಕೆಲವರ ದೃಷ್ಟಿಯಲ್ಲಿ– ಅಸಡಾ ಬಸಡಾ ಆಗಿ ಇದ್ದರೂ ತಲೆಮಾರುಗಳು ಅವರ ಕಂಠವನ್ನು ಎದೆಗೆ ಇಳಿಸಿಕೊಂಡಿವೆ. ಭಗ್ನ ಪ್ರೇಮಿಗಳಿಗೆ ಅವರ ರಾಗಾಲಾಪ ಇಷ್ಟ. ಪ್ರೇಮಿಗಳಿಗಂತೂ ಅವರ ನಾದದ ಗುಂಗು ಆಪ್ಯಾಯಮಾನ. 

2005ರಲ್ಲಿ ‘ಫೇಮ್ ಗುರುಕುಲ್’ ಎಂಬ ರಿಯಾಲಿಟಿ ಶೋ ಒಂದರಲ್ಲಿ ಮೊದಲಿಗೆ ಅರಿಜೀತ್ ಕಾಣಿಸಿಕೊಂಡದ್ದು. ಆಗ ಅವರ ಕಂಠ ಬೇರೆಯದೇ ರೀತಿ ಇತ್ತು. ಅನುಕರಣೆ ಶೈಲಿಯ ಹಾಡುಗಾರಿಕೆ. ಆ ರಿಯಾಲಿಟಿ ಶೋನಲ್ಲಿ ಅವರು ಗೆಲ್ಲಲಿಲ್ಲ. ಆದರೆ, ಬದುಕಿಗೆ ಒಂದು ಅಧ್ಯಾಯವನ್ನು ಸೇರಿಸಿಕೊಂಡರು. ಸಂಗೀತದಲ್ಲಿ ಏನಾದರೂ ಸಾಧಿಸಬೇಕು ಎಂಬ ಗುರಿ ಇಟ್ಟುಕೊಂಡು ಕೋಲ್ಕತ್ತಕ್ಕೆ ಅವರು ವಲಸೆ ಹೋದರು. ಅಲ್ಲಿ ಮ್ಯೂಸಿಕಲ್ ಪ್ರೋಗ್ರಾಮರ್ ಆಗಿ, ಸಹಾಯಕರಾಗಿ ಸ್ಟುಡಿಯೊ ಕೆಲಸದ ಸೂಕ್ಷ್ಮಗಳನ್ನು ಕಲಿತುಕೊಂಡರು. ಕೆಲವು ವರ್ಷಗಳು ಆ ಕಲಿಕೆಯಲ್ಲೇ ಸರಿದುಹೋದವು. ಶಂಕರ್ ಎಹ್ಸಾನ್ ಲಾಯ್ ಮೊದಲಿಗೆ ಒಂದು ಗೀತೆ ಹಾಡುವ ಅವಕಾಶ ಕೊಟ್ಟರಾದರೂ ಅದು ಹಿಟ್ ಆಗಲಿಲ್ಲ. ‘ಮರ್ಡರ್ 2’ ಹಿಂದಿ ಸಿನಿಮಾದ ‘ದಿಲ್ ಸಂಭಲ್ ಝರಾ’ (ಹೃದಯವೇ ನಿಧಾನಿಸು) ಎಂಬ ಹಾಡು ಹಿಟ್ ಆಯಿತು. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ‘ಆಶಿಕಿ 2’ ಹಿಂದಿ ಸಿನಿಮಾದ ‘ತುಮ್ ಹೀ ಹೋ’ (ನೀನೇ ಸರ್ವಸ್ವ ಎಂಬ ಧ್ವನ್ಯರ್ಥ) ಗೀತೆ. ಈ ಎರಡೂ ಹಾಡುಗಳು ವ್ಯಾಪಕವಾಗಿ ಯುವಕರ ಮೊಬೈಲ್ ರಿಂಗ್ ಟೋನ್ ಆದವು. ಹೋಟೆಲ್, ಕ್ಲಬ್, ಎಫ್‌.ಎಂ ಎಲ್ಲೆಡೆಯೂ ಅದೇ ಹಾಡು ತಿಂಗಳುಗಟ್ಟಲೆ ಅನುರಣಿಸಿತು. ಪ್ರೇಮಿಗಳಿಗೆ ಅದೊಂದು ಭಾವಗೀತೆಯಂತೆ ಕಾಡಿದ್ದೇ ಅರಿಜೀತ್ ಮನೆಮಾತಾದರು.

ADVERTISEMENT

ಪಶ್ಚಿಮ ಬಂಗಾಳದ ಅರಿಜೀತ್ ಬಾಲಪ್ರತಿಭೆ. ಅಮ್ಮ ಅದಿತಿ ಸಿಂಗ್, ಅಜ್ಜಿ, ಚಿಕ್ಕಮ್ಮ ಎಲ್ಲರೂ ಶಾಸ್ತ್ರೀಯ ಸಂಗೀತ ಹಾಡುತ್ತಿದ್ದವರೇ. ಅವರಿಂದ ಸಹಜ ಪ್ರೇರಣೆ ಪಡೆದ ಬಾಲಕನಲ್ಲೂ ಸಂಗೀತದ ಸ್ವರಗಳು ಮಿಳಿತಗೊಂಡವು. ಕೈಗೆ ಹಾರ್ಮೋನಿಯಂ ಬಂದದ್ದು ಬೆರಳುಗಳು ಪುಟ್ಟದಾಗಿರುವಾಗಲೇ. ಬೀರೇಂದ್ರ ಪ್ರಸಾದ್ ಹಜಾರಿ ಅವರಲ್ಲಿ ಮೂಲಪಾಠ ಕಲಿತ ಅರಿಜೀತ್, ಅದಾಗಲೇ ಭರವಸೆ ಮೂಡಿಸಿದ್ದರು. 

ಪ್ರಾಯಕ್ಕೆ ಬರುವ ಹುಡುಗರಿಗೆ ಗಂಟಲು ಒಡೆದಾಗ ಒಂದು ಬಗೆಯ ಕರ್ಕಶವಾದ ಸದ್ದು ಮೂಡುತ್ತದೆ. ಅರಿಜೀತ್ ಹಾಡುಗಾರಿಕೆಯಲ್ಲಿ ಅಂತಹ ಒಡಕು ಅಲ್ಲಲ್ಲಿ ಇದೆ. ವಿಶೇಷವಾಗಿ ತಾರಕ ಸ್ವರಕ್ಕೆ ಏರಿದಾಗ ‘ಗರ್’ ಎಂಬಂತಹ ಶಬ್ದದ ಎಳೆ ಸಹಜವೆಂಬಂತೆ ಕೇಳುತ್ತದೆ. ಅದು ಒಂದು ಬಗೆಯಲ್ಲಿ ಭಗ್ನಪ್ರೇಮಿಯ ಆರ್ತನಾದದಂತೆ ಭಾಸವಾಗತೊಡಗಿತು. ಎದೆಯಾಳದಲ್ಲಿ ನೋವು ಹುದುಗಿಸಿಕೊಂಡು ಹಾಡಿದಾಗ, ಸಾಲುಗಳ ಮೇಲೆ ದುಃಖದ ಸಿಂಚನ ಆದಂತೆ ಭಾಸವಾಗುವ ಶ್ರುತಿ ಅದು. ಶಾಸ್ತ್ರೀಯ ಸಂಗೀತದ ವೈಯಾಕರಣಿಗಳು ಇದನ್ನು ‘ಶುದ್ಧ ಸಂಗೀತ’ದ ನಿಕಷಕ್ಕೆ ಒಡ್ಡಿ, ಅಲ್ಲಗಳೆದ ಪ್ರಸಂಗಗಳೂ ಇವೆ. 

ಟೀಕೆಗಳ ಬಗ್ಗೆ ಅರಿಜೀತ್ ತಲೆ ಕೆಡಿಸಿಕೊಂಡವರಲ್ಲ. ಅವರು ಕಣ್ಮುಚ್ಚಿ ಹಾಡಲು ಅನುವಾದರೆ, ಒಂದೊಂದು ಕಛೇರಿಯಲ್ಲೂ ತಮ್ಮದೇ ಹಳೆಯ ಗೀತೆಯನ್ನು ಬೇರೆಯದೇ ಬಗೆಯಲ್ಲಿ ಹಾಡುತ್ತಾರೆ. ತಮಗೆ ಇಷ್ಟವಾದ, ಬೇರೆಯವರು ಹಾಡಿದ ಗೀತೆಗಳನ್ನು ಹಾಡಲೂ ಅವರು ಹಿಂಜರಿದಿಲ್ಲ. ‘ಹಮಾರಿ ಅಧೂರಿ ಕಹಾನಿ’, ‘...ದಿಲ್ ಹೈ ಮುಷ್ಕಿಲ್’, ‘ಪಚ್ತಾವೋಗೆ’, ‘ಬೇಖಯಾಲಿ’ ಇವೆಲ್ಲ ಹಾಡುಗಳು ಭಗ್ನಪ್ರೇಮಿಗಳು ತಮ್ಮ ಪರಿಸ್ಥಿತಿಗೆ ಹೊಂದಿಸಿಕೊಂಡು ಅನುಭವಿಸಿದಂಥವು. ‘ಮೈ ರಂಗ್ ಶರಬತೋಂ ಕಾ’, ‘ಕೇಸರಿಯಾ ತೇರಾ’ ತರಹದ ಲವಲವಿಕೆಯ ಹಾಡನ್ನೂ ಅರಿಜೀತ್ ಕೊಟ್ಟಿದ್ದಾರೆ. ‘ಲಾ ಪತಾ ಲೇಡೀಸ್’ ಸಿನಿಮಾದ ‘ಸಜ್ನಿ ರೇ’ ಹಾಡು ಒಂದೂವರೆ ತಿಂಗಳು ವಿವಿಧ ವೇದಿಕೆಗಳಲ್ಲಿ ನಂಬರ್ ಒನ್‌ ಗೀತೆ ಎಂದೆನಿಸಿಕೊಂಡು ಜನಪ್ರಿಯವಾಗಿತ್ತು. 

ಪ್ರೀತಂ, ರೆಹಮಾನ್, ವಿಶಾಲ್ ಶೇಖರ್, ಅಮಿತ್ ತ್ರಿವೇದಿ ಸ್ವರ ಸಂಯೋಜನೆಯ ಅನೇಕ ಹಾಡುಗಳಿಗೆ ಅರಿಜೀತ್ ಶಾರೀರ ನ್ಯಾಯ ಒದಗಿಸಿದೆ. ಡಚ್ ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಹಾಗೂ ಬ್ರಿಟನ್‌ನ ಜನಪ್ರಿಯ ಗಾಯಕ ಎಡ್ ಶೀರನ್ ಭಾರತದಲ್ಲಿ ಸಂಗೀತ ಪ್ರವಾಸ ಮಾಡಿದಾಗ ಅರಿಜೀತ್ ವಾಸವಿದ್ದ ಊರಿಗೇ ಹೋಗಿದ್ದರು. ಅಲ್ಲಿಯೇ ಸ್ಟುಡಿಯೊದಲ್ಲಿ ಕಾಲ ಕಳೆದು ಬಂದಿದ್ದರು. ಗೀತೆಯನ್ನೂ ಗುನುಗಿದ್ದರು. 

ಒಂದು ಕಾರ್ಯಕ್ರಮಕ್ಕೆ ಅವಧಿಯನ್ನು ಆಧರಿಸಿ ಎರಡು ಕೋಟಿ ರೂಪಾಯಿಯಿಂದ ₹12 ಕೋಟಿವರೆಗೆ ಅರಿಜೀತ್ ಪಡೆಯುತ್ತಾರೆ ಎಂದು ಸಂಗೀತ ನಿರ್ದೇಶಕ ಮಾಂಟಿ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದರು. 

‘ನನಗೆ ಜನಪ್ರಿಯತೆ ಆಗಿಬರುವುದಿಲ್ಲ’ ಎಂದು 2017ರಲ್ಲಿ ಸಂದರ್ಶನವೊಂದರಲ್ಲಿ ಈ ಗಾಯಕ ಹೇಳಿಕೊಂಡಿದ್ದರು. ‘ಹೋದ ಕಡೆಯೆಲ್ಲ ನನ್ನದೇ ಹಾಡುಗಳನ್ನು ನಾನೇ ಕೇಳಿಸಿಕೊಳ್ಳುವುದು ಮುಜುಗರದ ಸಂಗತಿ’ ಎಂಬುದು ಅವರ ಆತ್ಮವಿಮರ್ಶೆಯ ನುಡಿಯಾಗಿತ್ತು. ಒಂದೇ ಕೆಲಸವನ್ನು ಮಾಡುವುದು ತಮಗೆ ಬಹು ಬೇಗ ಬೇಸರ ತರಿಸುತ್ತದೆ ಎಂದು ಹೇಳಿದ್ದವರೂ ಅವರೇ. ಹಿನ್ನೆಲೆ ಗಾಯನಕ್ಕೆ ಒಲ್ಲೆ ಎಂದು ಅವರು ಹೇಳಿರುವುದಕ್ಕೆ ನಿರ್ದಿಷ್ಟ ಕಾರಣಗಳನ್ನು ಕೊಟ್ಟಿಲ್ಲ. ಹಲವು ಕಾರಣಗಳಿವೆ ಎಂದಷ್ಟೇ ಉಲ್ಲೇಖಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಪುತ್ರಿ ಅಭಿನಯಿಸಲಿರುವ ಸಿನಿಮಾವೊಂದನ್ನು ಅವರು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಇದೆ. ಶಾಸ್ತ್ರೀಯ ಸಂಗೀತದ ಪ್ರಯೋಗಗಳಿಗೆ ಕೈಹಾಕುವ ಸೂಚನೆಯನ್ನೂ ಕೊಟ್ಟಿದ್ದಾರೆ. ರಾಜಕೀಯ ಪಕ್ಷ ಕಟ್ಟುತ್ತಾರೆ ಎಂಬ ವದಂತಿ ಕೂಡ ಹರಡಿದೆ. 

‘ಮಹಾಪ್ರತಿಭೆಯಿಂದ ಹೊಸತೇನೋ ಬರಲಿದೆ... ಅದಕ್ಕಾಗಿ ಕಾಯುವೆ’ ಎನ್ನುವುದು ಗಾಯಕಿ ಶ್ರೇಯಾ ಘೋಷಾಲ್ ಕುತೂಹಲ. ಸಿನಿಮಾ ಸಂಗೀತದಲ್ಲಿ ಗಾಯಕನ ಕ್ರಿಯಾಶೀಲತೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ಇರುವುದಿಲ್ಲ. ಅದರಿಂದ ಹೊರಬಂದು, ತಮ್ಮದೇ ಪಥದಲ್ಲಿ ನಡೆಯುವ ದೃಢನಿಶ್ಚಯವನ್ನು ಇವರು ಮಾಡಿರಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.

ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ನಟ ಸಲ್ಮಾನ್ ಖಾನ್ ಈ ಗಾಯಕ ತೊಟ್ಟಿದ್ದ ಉಡುಗೆ ನೋಡಿ, ‘ನಿದ್ದೆಯಿಂದ ಎದ್ದು ಬಂದಂತಿದೆ’ ಎಂದು ಗೇಲಿ ಮಾಡಿದ್ದರು. ‘ನಿಮ್ಮಂಥವರು ನಮ್ಮನ್ನು ಮಲಗಿಸಿ ಬಿಟ್ಟಿದ್ದೀರಿ’ ಎಂದು ಅದಕ್ಕೆ ಅರಿಜೀತ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಇದರಿಂದಾಗಿ ಇಬ್ಬರ ನಡುವೆ ವರ್ಷಗಳ ಕಾಲ ಮುನಿಸು ಮೂಡಿತ್ತು. ಅದು ಆಮೇಲೆ ಬಗೆಹರಿಯಿತು. ತಮ್ಮಿಂದಲೇ ಆದ ತಪ್ಪು ಅದು ಎಂದು ಸಲ್ಮಾನ್ ಸ್ಪಷ್ಟನೆ ಕೊಟ್ಟರು. ಈಗ ಸಲ್ಮಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ ಹಿಂದಿ ಸಿನಿಮಾಕ್ಕೆ ಒಂದು ಹಾಡನ್ನು ಅರಿಜೀತ್ ಹಾಡಿದ್ದಾರೆ.  

ಒಂದಷ್ಟು ಪ್ರಶ್ನೆಗಳು ಹಾಗೂ ಕುತೂಹಲದ ಮೂಟೆಯನ್ನು ತೇಲಿಬಿಟ್ಟು, ಅರಿಜೀತ್ ತಮ್ಮ ಪಾಡಿಗೆ ತಮ್ಮ ಸ್ಟುಡಿಯೊದಲ್ಲಿ ಈಗ ಕುಳಿತಿದ್ದಾರೆ. ಅವರ ಮುಂದಿನ ಸಂಗೀತದ ಅಲೆ ಎಂಥದ್ದಾಗಿರುವುದೋ ಎನ್ನುವ ನಿರೀಕ್ಷೆಯಂತೂ ಉಳಿದಿದೆ. 

₹414 ಕೋಟಿ ಆಸ್ತಿ

ಸಾಮಾನ್ಯವಾಗಿ ಗಾಯಕ–ಗಾಯಕಿಯ ಆಸ್ತಿಯ ಮೌಲ್ಯದ ಬಗ್ಗೆ ಯಾರೂ ಮಾತಾಡುವುದಿಲ್ಲ. ಅರಿಜೀತ್ ಸಿಂಗ್ ಈ ವಿಷಯದಲ್ಲೂ ಸುದ್ದಿಯಾದರು. ‘ಮಿಂಟ್’ ಪತ್ರಿಕೆಯು ವರದಿ ಮಾಡಿದಂತೆ ಈ ಗಾಯಕನ ಆಸ್ತಿಯ ಮೌಲ್ಯ ₹414 ಕೋಟಿ.

ಒಂದು ಹಾಡಿಗೆ ಅವರು ₹8 ಲಕ್ಷದಿಂದ ₹10 ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಾರೆ. ಸಂಗೀತ ಕಾರ್ಯಕ್ರಮಗಳಿಂದಲೇ ಅವರಿಗೆ ಹೆಚ್ಚು ಆದಾಯ ಬರುತ್ತದೆ. ವರ್ಷಕ್ಕೆ ಸರಾಸರಿ ₹70 ಕೋಟಿಯಷ್ಟು ಗಳಿಕೆ ಅವರದ್ದು ಎಂಬ ಅಂದಾಜಿದೆ. 

ದೇಶ–ವಿದೇಶಗಳಲ್ಲಿ ಪ್ರವಾಸ ಅವರಿಗೆ ಸಹಜ ಎಂಬಂತಾಗಿತ್ತು. ಆದರೆ, ಬೇರೆಲ್ಲಿಯೂ ಅವರು ರೆಸ್ಟೋರೆಂಟ್ ತೆರೆಯುವ ಹಾದಿ ಹಿಡಿಯಲಿಲ್ಲ. ತಮ್ಮ ತವರೂರಿನಲ್ಲೇ ‘ಹೆಶೆಲ್’ ಎಂಬ ಹೆಸರಿನ ಹೋಟೆಲ್ ನಡೆಸುತ್ತಾರೆ. ಅಲ್ಲಿ ₹40ಕ್ಕೆ ಊಟ ಸಿಗುತ್ತದೆನ್ನುವುದು ವಿಶೇಷ. 

ನವಿ ಮುಂಬೈನಲ್ಲಿ ₹8 ಕೋಟಿ ಮೌಲ್ಯದ ಮನೆಯೊಂದನ್ನು ಕೊಂಡುಕೊಂಡಿದ್ದರೂ ಅಲ್ಲಿ ಯಾವಾಗಲೂ ವಾಸ ಮಾಡುವುದಿಲ್ಲ. ಮರ್ಸಿಡಿಸ್ ಬೆಂಜ್, ಲ್ಯಾಂಡ್‌ ರೋವರ್ ಕಾರುಗಳನ್ನು ಕೊಂಡಿದ್ದಾರಾದರೂ ಅವುಗಳಲ್ಲಿ ಓಡಾಡಿ ರೀಲ್ಸ್‌ ಮಾಡುವ ಗೀಳಿನವರ ಪೈಕಿ ಅಲ್ಲ. ಒಟ್ಟು ₹3.5 ಕೋಟಿ ಮೌಲ್ಯದ ವಾಹನಗಳು ಅವರ ಬಳಿ ಇವೆ ಎಂದೂ ವರದಿಯಾಗಿದೆ. 

ಖಾಸಗಿ ಬದುಕಿನ ವಿವರಗಳನ್ನು ಹಂಚಿಕೊಳ್ಳದ ಅವರದ್ದು ಸಂಕೋಚದ ಸ್ವಭಾವ. ಹಿಂದೆ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಕೋಯೆಲ್ ರಾಯ್ ಎಂಬವರನ್ನು 2014ರಲ್ಲಿ ಅರಿಜೀತ್ ಮದುವೆಯಾದರು. ಅದಕ್ಕೂ ಮೊದಲು, ರೂಪರೇಖಾ ಬ್ಯಾನರ್ಜಿ ಎಂಬ ಗಾಯಕಿಯೊಟ್ಟಿಗೆ ಇದ್ದ ಸಂಬಂಧ ಮುರಿದುಬಿದ್ದಿತ್ತು. ಕೋಯೆಲ್ ಅವರನ್ನು ಆಕೆಯ ಪುತ್ರಿಯ ಸಹಿತ ಅರಿಜೀತ್ ತಮ್ಮ ಕುಟುಂಬಕ್ಕೆ ಸೇರಿಸಿಕೊಂಡರು.

ಕನ್ನಡದಲ್ಲೂ ಹಾಡಿದ್ದರು

ಪುನೀತ್ ರಾಜ್‌ಕುಮಾರ್ ಅಭಿನಯದ ‘ನಿನ್ನಿಂದಲೆ’ ಕನ್ನಡ ಸಿನಿಮಾಕ್ಕೆ ಅರಿಜೀತ್ ‘ಮೌನ ತಾಳಿತೆ ದಾರಿ’ ಎಂಬ ಗೀತೆ ಹಾಡಿದ್ದರು. ಮಣಿ ಶರ್ಮ ಸ್ವರ ಸಂಯೋಜನೆ ಮಾಡಿದ್ದ ಆ ಹಾಡಿನಲ್ಲಿ ಅವರ ಕಂಠ ಹಿಂದಿಯ ಜನಪ್ರಿಯ ಗೀತೆಗಳಿಗಿಂತ ಹೊರತೇ ಆಗಿರುವಂತೆ ಕೇಳುತ್ತದೆ. 

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲಂಡನ್‌ನ ಟಾಟೆನ್‌ಹಮ್ ಹಾಟ್‌ಸ್ಪರ್‌ ಕ್ರೀಡಾಂಗಣದಲ್ಲಿ ಅರಿಜೀತ್ ಕಾರ್ಯಕ್ರಮ ನಡೆದಿತ್ತು. ಅಲ್ಲಿ ಟಿಕೆಟ್‌ ಬೆಲೆಯು ₹26 ಸಾವಿರದಿಂದ ₹3.05 ಲಕ್ಷದವರೆಗೆ ಇರುತ್ತದೆ. ಭಾರತದ ಯಾವ ಸಂಗೀತಗಾರನಿಗೂ ಅಲ್ಲಿ ಕಾರ್ಯಕ್ರಮ ನೀಡುವ ಅವಕಾಶ ಅದಕ್ಕೂ ಮೊದಲು ದೊರೆತಿರಲಿಲ್ಲ. ಅಲ್ಲಿಯೂ ಅಷ್ಟೂ ಟಿಕೆಟ್‌ಗಳು ಮಾರಾಟವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.