
ಇಂಗಾಲ
ಇಂಗಾಲ ಹೊರಸೂಸುವಿಕೆ ಅಧಿಕವಾಗಿರುವ ಲೋಹಗಳ ಮೇಲೆ ಐರೋಪ್ಯ ಒಕ್ಕೂಟ (ಇಯು) ಇಂಗಾಲದ ತೆರಿಗೆ (ಕಾರ್ಬನ್ ಟ್ಯಾಕ್ಸ್) ವಿಧಿಸಿದ್ದು, ಅದು ಗುರುವಾರದಿಂದ (ಜ.1) ಜಾರಿಗೆ ಬಂದಿದೆ. ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡುವಲ್ಲಿ ಇಂಗಾಲದ ತೆರಿಗೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಇಯು ಪ್ರತಿಪಾದಿಸಿದೆ. ಆದರೆ, ಈ ತೆರಿಗೆಯು ಭಾರತದ ಉಕ್ಕು, ಅಲ್ಯೂಮಿನಿಯಂ ಸೇರಿದಂತೆ ಕೆಲವು ಲೋಹಗಳ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ. ಅನೇಕ ಸಣ್ಣ ರಫ್ತುದಾರರನ್ನು ಇದು ಇಯು ಮಾರುಕಟ್ಟೆಯಿಂದಲೇ ಹೊರತಳ್ಳುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ
ಸುಂಕಗಳನ್ನು ವಿಧಿಸುವ ಮೂಲಕ ಸಮರ ಸಾರುವ, ಸುಂಕಗಳನ್ನು ವಿಧಿಸುವ ಮೂಲಕವೇ ಇನ್ನೊಂದು ದೇಶದ ಮೇಲೆ ಒತ್ತಡ ಹೇರುವ ಕಾಲಘಟ್ಟದಲ್ಲಿ ಕೆಲವು ಸರಕುಗಳಿಗೆ ಐರೋಪ್ಯ ಒಕ್ಕೂಟ ವಿಧಿಸಿರುವ ಹೊಸ ಬಗೆಯ ಸುಂಕವೊಂದರ ತಲೆಬಿಸಿ ಭಾರತಕ್ಕೆ ಗುರುವಾರದಿಂದ ಶುರುವಾಗಿದೆ. ಆದರೆ ಇದು ಮೇಲ್ನೋಟಕ್ಕೆ ರಾಜಕೀಯ ಉದ್ದೇಶದ ಸುಂಕಕ್ಕಿಂತಲೂ, ಪರಿಸರ ಕಾಳಜಿಯ ಸುಂಕದಂತೆ ಇದೆ.
ಐರೋಪ್ಯ ಒಕ್ಕೂಟವು ‘ಇಂಗಾಲದ ತೆರಿಗೆ’ ಹೆಸರಿನ ಸುಂಕವೊಂದನ್ನು ಜನವರಿ 1ರಿಂದ ಜಾರಿಗೆ ತಂದಿದೆ. ಇದು ಭಾರತದ ಕೆಲವು ರಫ್ತು ವಲಯಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬುದು ತಜ್ಞರ ಅಂದಾಜು. ಅದರಲ್ಲೂ ಉಕ್ಕು ರಫ್ತಿನ ಮೇಲೆ ವ್ಯಾಪಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ತಯಾರಿಕಾ ಹಂತದಲ್ಲಿ ಇಂಗಾಲವನ್ನು ವಿಸರ್ಜಿಸುವ ಸರಕುಗಳ ಮೇಲೆ 27 ದೇಶಗಳ ಐರೋಪ್ಯ ಒಕ್ಕೂಟವು ಈ ತೆರಿಗೆ ವಿಧಿಸಲಾರಂಭಿಸಿದೆ.
ಬ್ಲಾಸ್ಟ್ ಫರ್ನೆಸ್ ಮೂಲಕ ಉಕ್ಕು ತಯಾರಿಸುವಾಗ ಇಂಗಾಲದ ಡೈ ಆಕ್ಸೈಡ್ ವಿಸರ್ಜನೆಯು ಅತಿಹೆಚ್ಚಿನ ಮಟ್ಟದಲ್ಲಿರುತ್ತದೆ. ಅದೇ ರೀತಿ, ಅಲ್ಯೂಮಿನಿಯಂ ತಯಾರಿಕೆಯ ಸಂದರ್ಭದಲ್ಲಿ ಕಲ್ಲಿದ್ದಲಿನಿಂದ ಉತ್ಪಾದಿಸಿದ ವಿದ್ಯುತ್ ಬಳಕೆ ಮಾಡಿದರೆ, ಆ ಪ್ರಕ್ರಿಯೆಯಲ್ಲಿ ಇಂಗಾಲದ ಡೈ ಆಕ್ಸೈಡ್ ವಿಸರ್ಜನೆ ಹೆಚ್ಚಿರುತ್ತದೆ. ಇದರಿಂದಾಗಿ ಪಾವತಿ ಮಾಡಬೇಕಾದ ಇಂಗಾಲದ ತೆರಿಗೆಯ ಮೊತ್ತವೂ ಹೆಚ್ಚಾಗುತ್ತದೆ ಎಂದು ಆರ್ಥಿಕತೆ ಕುರಿತ ಅಧ್ಯಯನ ವರದಿಗಳನ್ನು ಸಿದ್ಧಪಡಿಸುವ ‘ಗ್ಲೋಬಲ್ ಟ್ರೇಡ್ ರಿಸರ್ಚ್ ಇನ್‌ಸ್ಟಿಟ್ಯೂಟ್’ (ಜಿಟಿಆರ್‌ಐ) ಹೇಳಿದೆ.
ಭಾರತದಿಂದ ಐರೋಪ್ಯ ಒಕ್ಕೂಟದ ದೇಶಗಳಿಗೆ ಲೋಹಗಳನ್ನು ರಫ್ತುಮಾಡುವ ಹಲವು ಕಂಪನಿಗಳು, ರಫ್ತುದಾರರು ತಮ್ಮ ಉತ್ಪನ್ನಗಳ ಬೆಲೆಯನ್ನು ಶೇಕಡ 15ರಿಂದ ಶೇ 22ರಷ್ಟು ಕಡಿಮೆ ಮಾಡಬೇಕಾಗುತ್ತದೆ. ಆಗ ಐರೋಪ್ಯ ಒಕ್ಕೂಟದಲ್ಲಿ ಆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವವರು ಬೆಲೆ ಇಳಿಕೆಯ ಪ್ರಯೋಜನವನ್ನು ಬಳಸಿಕೊಂಡು, ಇಂಗಾಲದ ತೆರಿಗೆಯನ್ನು ಅಲ್ಲಿ ಪಾವತಿಸಲು ಸಾಧ್ಯವಾಗುತ್ತದೆ ಎಂದು ಜಿಟಿಆರ್‌ಐ ವಿವರಿಸಿದೆ.
ಇಂಗಾಲ
ಸಂಕೀರ್ಣ ಪ್ರಕ್ರಿಯೆ: ಇಂಗಾಲದ ತೆರಿಗೆ ಪಾವತಿ ವ್ಯವಸ್ಥೆಯು ಬಹಳ ಸಂಕೀರ್ಣವಾದ ಪ್ರಕ್ರಿಯೆಗಳನ್ನು ಒಳಗೊಂಡಿದೆ ಎಂದು ಜಿಟಿಆರ್‌ಐ ಕಂಡುಕೊಂಡಿದೆ. ಸಂಕೀರ್ಣ ಪ್ರಕ್ರಿಯೆಯ ಕಾರಣದಿಂದಾಗಿ ಭಾರತದ ಕಂಪನಿಗಳ ಕೆಲವು ವೆಚ್ಚಗಳು ಹೆಚ್ಚುತ್ತವೆ. ಇದರಿಂದಾಗಿ ದೇಶದ ಕೆಲವು ಸಣ್ಣ ಕಂಪನಿಗಳು ಯುರೋಪಿನ ಮಾರುಕಟ್ಟೆಯಿಂದ ಪೂರ್ತಿಯಾಗಿ ಹೊರಬರಬೇಕಾದ ಸ್ಥಿತಿಯೂ ಎದುರಾಗಬಹುದು ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
‘ಇಂಗಾಲದ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಪ್ರತಿ ಘಟಕದ ಮಟ್ಟದಲ್ಲಿ ಇಂಗಾಲದ ವಿಸರ್ಜನೆ ಎಷ್ಟು ಎಂಬುದರ ಲೆಕ್ಕ ಇಡಬೇಕು. ಆ ಘಟಕದಲ್ಲಿ ನೇರವಾಗಿ ಬಳಕೆಯಾಗುವ ಇಂಧನದಿಂದ ಎಷ್ಟು ಇಂಗಾಲದ ವಿಸರ್ಜನೆ ಆಯಿತು, ವಿದ್ಯುತ್ ಬಳಕೆಯಿಂದ ಎಷ್ಟು ಇಂಗಾಲದ ವಿಸರ್ಜನೆ ಆಯಿತು ಎಂಬುದನ್ನು ಇದು ಒಳಗೊಳ್ಳಬೇಕು’ ಎಂದು ಅವರು ವಿವರಿಸಿದ್ದಾರೆ.
ಇಂಧನದ ಬಳಕೆ, ವಿದ್ಯುತ್ ಬಳಕೆ, ತಯಾರಿಕಾ ಪ್ರಮಾಣದ ಬಗ್ಗೆ ರಫ್ತು ಉದ್ದೇಶಕ್ಕಾಗಿ ತಯಾರಿಕೆ ಮಾಡುವವರು ತ್ರೈಮಾಸಿಕದ ಆಧಾರದಲ್ಲಿ ಲೆಕ್ಕ ಇರಿಸಬೇಕಾಗುತ್ತದೆ. ಈ ಲೆಕ್ಕವು ಐರೋಪ್ಯ ಒಕ್ಕೂಟದ ವಿಧಾನಗಳಿಗೆ ಅನುಗುಣವಾಗಿ ಇರಬೇಕು, ಲೆಕ್ಕವು ತಪಾಸಣೆಗೆ ಲಭ್ಯವಿರುವಂತೆ ಇರಬೇಕು... ಇವೆಲ್ಲ ಹಣಕಾಸಿನ ಲೆಕ್ಕಪತ್ರಗಳ ಪರಿಶೀಲನೆಯನ್ನು ಹೋಲುತ್ತವೆ.
ಲಾಭ ಯಾರಿಗೆ?: ಇಂಗಾಲದ ಹೊರಸೂಸುವಿಕೆ ಕಡಿಮೆ ಇರುವ ತಯಾರಿಕಾ ಕಂಪನಿಗಳಿಗೆ, ಶುದ್ಧ ಇಂಧನವನ್ನು ಬಳಕೆ ಮಾಡುವವರಿಗೆ ಈ ವ್ಯವಸ್ಥೆಯು ಐರೋಪ್ಯ ಒಕ್ಕೂಟದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಅನುಕೂಲಗಳನ್ನು ಕಲ್ಪಿಸಿಕೊಡುತ್ತದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಇಂಗಾಲದ ತೆರಿಗೆ ವಿಧಿಸುವ ಕ್ರಮವು ಈಗ ಐರೋಪ್ಯ ಒಕ್ಕೂಟದ ಜೊತೆ ಭಾರತ ನಡೆಸುತ್ತಿರುವ ವ್ಯಾಪಾರ ಒಪ್ಪಂದ ಕುರಿತ ಮಾತುಕತೆಯಲ್ಲಿಯೂ ಪ್ರಸ್ತಾಪ ಆಗಿದೆ.
ಇಂಗಾಲದ ತೆರಿಗೆ ಅಂದರೆ ಏನು?
ಐರೋಪ್ಯ ಒಕ್ಕೂಟವು ಇದನ್ನು ತಾಂತ್ರಿಕವಾಗಿ ‘ಇಂಗಾಲದ ಗಡಿ ಹೊಂದಾಣಿಕೆ ವ್ಯವಸ್ಥೆ’ (ಸಿಬಿಎಎಂ) ಎಂದು ಕರೆದಿದೆ. ಇದನ್ನು ಆಡುಮಾತಿನಲ್ಲಿ ಇಂಗಾಲದ ತೆರಿಗೆ ಎಂದು ಕರೆಯಲಾಗುತ್ತಿದೆ. ಐರೋಪ್ಯ ಒಕ್ಕೂಟದಲ್ಲಿನ ವಿವಿಧ ಕಂಪನಿಗಳು ತಾವು ವಿಸರ್ಜಿಸುವ ಇಂಗಾಲಕ್ಕೆ ಪ್ರತಿಯಾಗಿ ಒಂದಿಷ್ಟು ಶುಲ್ಕವನ್ನು ಪಾವತಿಸುತ್ತವೆ. ಇದೇ ಬಗೆಯಲ್ಲಿ, ಐರೋಪ್ಯ ಒಕ್ಕೂಟಕ್ಕೆ ವಿವಿಧ ಉತ್ಪನ್ನಗಳನ್ನು ಬೇರೆ ದೇಶಗಳಿಂದ ರಫ್ತು ಮಾಡುವ ಕಂಪನಿಗಳೂ ತಾವು ವಿಸರ್ಜಿಸುವ ಇಂಗಾಲಕ್ಕೆ ಪ್ರತಿಯಾಗಿ ಶುಲ್ಕ ಪಾವತಿಸುವಂತೆ ಆಗಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇಂಗಾಲದ ವಿಸರ್ಜಿಸುವಿಕೆ ಹೆಚ್ಚಿನ ಪ್ರಮಾಣದಲ್ಲಿ ಇರುವ ಉಕ್ಕು, ಅಲ್ಯೂಮಿನಿಯಂ, ರಸಗೊಬ್ಬರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವವರು, ಆ ಉತ್ಪನ್ನಗಳಿಂದ ಆಗುವ ಇಂಗಾಲದ ಡೈ ಆಕ್ಸೈಡಿನ ವಿಸರ್ಜನೆ ಎಷ್ಟು ಎಂಬುದನ್ನು ಘೋಷಿಸಬೇಕಾಗುತ್ತದೆ. ವಿಸರ್ಜನೆ ಪ್ರಮಾಣವು ಐರೋಪ್ಯ ಒಕ್ಕೂಟ ನಿಗದಿ ಮಾಡಿರುವ ಮಟ್ಟಕ್ಕಿಂತ ಹೆಚ್ಚಿದ್ದರೆ, ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ.
ಈ ನಿಯಮದ ಬಗ್ಗೆ ಟೀಕೆಗಳೂ ಇವೆ. ಇದು ಯುರೋಪಿನ ತಯಾರಕರಿಗೆ ಹೆಚ್ಚು ಅನುಕೂಲ ಮಾಡಿಕೊಡುವಂತೆ ಇದೆ ಎಂದು ಕೆಲವರು ಟೀಕಿಸಿದ್ದಾರೆ. ಆದರೆ ಈ ನಿಯಮವು ಪರಿಸರಕ್ಕೆ ಪೂರಕವಾಗುವ ಕ್ರಮಗಳನ್ನು ಉತ್ತೇಜಿಸುತ್ತದೆ ಎಂದು ಒಕ್ಕೂಟ ಪ್ರತಿಪಾದಿಸಿದೆ.
ರಷ್ಯಾ ವಿರೋಧ: ಇಂಗಾಲದ ತೆರಿಗೆ ವ್ಯವಸ್ಥೆಯು ಅಂತರರಾಷ್ಟ್ರೀಯ ವ್ಯಾಪಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ರಷ್ಯಾ ಆಕ್ಷೇಪ ದಾಖಲಿಸಿದೆ. ಈ ವಿಚಾರವಾಗಿ ಅದು ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ಮೊರೆ ಹೋಗಿದೆ. ಐರೋಪ್ಯ ಒಕ್ಕೂಟದ ಕ್ರಮವನ್ನು ಚೀನಾ ಕೂಡ ವಿರೋಧಿಸಿದೆ. ಇದು ‘ವ್ಯಾಪಾರದ ವಿಚಾರವಾಗಿ ಕೈಗೊಂಡಿರುವ ಏಕಪಕ್ಷೀಯ ಕ್ರಮ’ ಎಂದು ಚೀನಾ ಹೇಳಿದೆ.
ಏನಿರಲಿದೆ ಭಾರತದ ನಡೆ?
ದೇಶದ ರಫ್ತು ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಬಗೆಯಲ್ಲಿ ಬ್ರಿಟನ್ ದೇಶವು ಇಂಗಾಲದ ತೆರಿಗೆಯನ್ನು ವಿಧಿಸಿದ್ದೇ ಆದಲ್ಲಿ ಭಾರತವು ‘ಪ್ರತಿಕ್ರಿಯಿಸಬೇಕಾಗುತ್ತದೆ, ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು 2024ರ ಜುಲೈನಲ್ಲಿ ಎಚ್ಚರಿಸಿದ್ದರು.
ಆದರೆ ಈಗ ಸಿಬಿಎಎಂ ನಿಯಮಗಳನ್ನು ಐರೋಪ್ಯ ಒಕ್ಕೂಟವು ಜಾರಿಗೆ ತಂದಿದೆ. ಕೇಂದ್ರವು ಈಗ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಗಮನಿಸಬೇಕಿದೆ.
ಬ್ರಿಟನ್ ದೇಶವು ಸಿಬಿಎಎಂ ನಿಯಮಗಳನ್ನು 2027ರಿಂದ ಜಾರಿಗೆ ತರುವ ನಿರೀಕ್ಷೆ ಇದೆ. ಐರೋಪ್ಯ ಒಕ್ಕೂಟದ ಸಿಬಿಎಎಂ ನಿಯಮಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದ ಗೋಯಲ್ ಅವರು ‘ಇದರಿಂದ ಒಕ್ಕೂಟಕ್ಕೇ ಹೆಚ್ಚಿನ ನಷ್ಟ ಆಗಲಿದೆ’ ಎಂದು ಹೇಳಿದ್ದರು.
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ವಿಚಾರವಾಗಿ ಮಾತುಕತೆ ನಡೆಯುತ್ತಿದೆ. ಸಿಬಿಎಎಂ ಬಗ್ಗೆಯೂ ಆ ಮಾತುಕತೆಗಳಲ್ಲಿ ಪ್ರಸ್ತಾಪ ಆಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಈಚೆಗೆ ತಿಳಿಸಿದ್ದರು.
ಕಾಂಗ್ರೆಸ್ ಕಳವಳ
ಐರೋಪ್ಯ ಒಕ್ಕೂಟ ವಿಧಿಸಿರುವ ಇಂಗಾಲದ ತೆರಿಗೆಯಿಂದ ಕೆಲವು ಸರಕುಗಳ ರಫ್ತು ಬೆಲೆ ಹೆಚ್ಚಳವಾಗಲಿದ್ದು, ಈ ತೆರಿಗೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಜಿಟಿಆರ್‌ಐ ವರದಿಯಲ್ಲಿನ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಜತೆಗೆ, ದಾಖಲೀಕರಣ, ಇಂಗಾಲದ ಹೊರಸೂಸುವಿಕೆ ವರದಿ ಇತ್ಯಾದಿ ಪ್ರಕ್ರಿಯೆಗಳಿಂದ ದೇಶದ ರಫ್ತುದಾರರ ಹೊರೆ ಹೆಚ್ಚಾಗಲಿದೆ; ಈ ನಿಯಂತ್ರಣಾ ಕ್ರಮವನ್ನು ಇದೇ ತಿಂಗಳಲ್ಲಿ ಅಂತಿಮಗೊಳ್ಳಲಿರುವ ಭಾರತ–ಇಯು ಮುಕ್ತ ವ್ಯಾಪಾರ ಒಪ್ಪಂದದ ವೇಳೆ ಚರ್ಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಡಿಮೆ ಆದಾಯದ ದೇಶಗಳಿಗೆ ಹೊಡೆತ
l ಇಂಧನಕ್ಕಾಗಿ ಹೆಚ್ಚು ವೆಚ್ಚ ಮಾಡುವ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಮೇಲೆ ಮತ್ತು ಸಿಮೆಂಟ್, ಉಕ್ಕು, ಅಲ್ಯೂಮಿನಿಯಂ, ವಿದ್ಯುತ್ ಮುಂತಾದ ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ
l ಇಂಗಾಲದ ತೆರಿಗೆಯ ಜಾರಿಯ ನಂತರ ಹಸಿರುಮನೆ ಅನಿಲಗಳ ಹೊರಸೂಸುವಿಕೆಯಲ್ಲಿ ಎಷ್ಟು ಕಡಿತ ಆಗಿದೆ ಎನ್ನುವುದನ್ನು ನಿಖರವಾಗಿ ಕಂಡುಕೊಳ್ಳುವುದು ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ಹೀಗಾಗಿ ಇಂಗಾಲದ ತೆರಿಗೆ ವಿಧಿಸುವುದಕ್ಕಿಂತ ಭಿನ್ನವಾದ, ನೇರವಾದ ಕ್ರಮಗಳನ್ನು ಅನುಸರಿಸುವುದು ಹೆಚ್ಚು ಫಲಪ್ರದ
l ಇಂಗಾಲದ ತೆರಿಗೆ ವಿಧಿಸುವುದಕ್ಕೆ ಫ್ರಾನ್ಸ್ ಸೇರಿದಂತೆ ಯುರೋಪ್‌ನ ಹಲವು ದೇಶಗಳಲ್ಲಿಯೂ ಪ್ರಬಲ ವಿರೋಧ ವ್ಯಕ್ತವಾಗಿದೆ. ಕೆಲವರು ನ್ಯಾಯಾಲಯದಲ್ಲಿಯೂ ಅದನ್ನು ಪ್ರಶ್ನಿಸಿದ್ದಾರೆ
l ಇಂಧನ ಬಳಸುವ ಬೃಹತ್ ಉದ್ದಿಮೆಗಳು ಇಂಗಾಲದ ತೆರಿಗೆಯನ್ನು ವಿರೋಧಿಸಿವೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಈ ತೆರಿಗೆ ನೀತಿಯಿಂದ ಹೊರತಾದ ದೇಶಗಳೊಂದಿಗೆ ಸ್ಪರ್ಧಿಸುವುದು ಕಷ್ಟವಾಗಲಿದೆ. ಉತ್ಪಾದಕರು ದೇಶ ತೊರೆಯುವ ಸಾಧ್ಯೆತಗಳೂ ಇವೆ
l ಸಮೂಹ ಬ್ಯಾಟರಿಚಾಲಿತ ವಾಹನಗಳ (ಇವಿ) ಅಳವಡಿಕೆ, ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚು ಬಂಡವಾಳ ಹೂಡಿಕೆ, ಮೂಲಸೌಕರ್ಯ ವೃದ್ಧಿ, ಆರ್ಥಿಕ ಸಹಾಯ ನೀಡುವಂಥ ಪರೋಕ್ಷ ಕ್ರಮಗಳ ಮೂಲಕ ಅಲ್ಪ ಅವಧಿಯಲ್ಲೇ ಹಸಿರು ಅನಿಲಗಳ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು
ಆಧಾರ: ಪಿಟಿಐ, ಎಎಫ್‌ಪಿ ವರದಿಗಳು, ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ (ಪಿಐಬಿ), ಅರ್ಥ್.ಒಆರ್ಜಿ
ಇಂಗಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.