ADVERTISEMENT

ಆಳ ಅಗಲ| ನವೋದ್ಯಮ: ಭಾರತದಲ್ಲಿ ಆಗಬೇಕಿರುವುದೇನು?

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 0:29 IST
Last Updated 14 ಏಪ್ರಿಲ್ 2025, 0:29 IST
<div class="paragraphs"><p>ನವೋದ್ಯಮ</p></div>

ನವೋದ್ಯಮ

   

ಚೀನಾ ತಂತ್ರಜ್ಞಾನ ಕ್ಷೇತ್ರದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಕೃತಕ ಬುದ್ಧಿಮತ್ತೆ (ಎಐ), ರೊಬೊಟಿಕ್ಸ್ ಮುಂತಾದ ಉನ್ನತ ತಂತ್ರಜ್ಞಾನ (ಡೀಪ್ ಟೆಕ್) ವಲಯದಲ್ಲಿ ಅದು ಭಾರಿ ಸಾಧನೆ ಮಾಡುತ್ತಿದ್ದು, ಅಮೆರಿಕಕ್ಕೆ ಪೈಪೋಟಿ ನೀಡುತ್ತಿದೆ. ಆದರೆ, ಭಾರತದ ನವೋದ್ಯಮಗಳು (ಸ್ಟಾರ್ಟ್ ಅಪ್ ಕಂಪನಿಗಳು) ಫುಡ್ ಡೆಲಿವರಿ, ಕ್ವಿಕ್ ಕಾಮರ್ಸ್ ವಲಯಗಳು ಸೇರಿದಂತೆ ಗ್ರಾಹಕ ಕೇಂದ್ರಿತವಾಗಿಯೇ ಉಳಿದುಬಿಟ್ಟಿವೆ ಎಂದು ಕೇಂದ್ರ ಸಚಿವರು ಇತ್ತೀಚೆಗೆ ಆಕ್ಷೇಪಿಸಿದ್ದರು. ಈ ಹೇಳಿಕೆ ಬಗ್ಗೆ ದೇಶದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಚೀನಾದಲ್ಲಿ ನವೋದ್ಯಮಗಳ ಬೆಳವಣಿಗೆಗೆ ಪೂರಕವಾಗಿ ಎಂತಹ ವಾತಾವರಣ ಇದೆ, ಭಾರತದಲ್ಲಿ ಅವು ಏಕೆ ಹಿಂದುಳಿದಿವೆ, ಇದರಲ್ಲಿ ಸರ್ಕಾರದ ಪಾತ್ರವೇನು ಮುಂತಾದ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ

ದೆಹಲಿಯಲ್ಲಿ ಇತ್ತೀಚೆಗೆ ನಡೆದ ನವೋದ್ಯಮ (ಸ್ಟಾರ್ಟ್‌ಅಪ್‌) ಮಹಾಕುಂಭದ ಎರಡನೇ ಆವೃತ್ತಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರು ಹೇಳಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿವೆ. ಚೀನಾದ ಹೆಸರನ್ನು ಪ್ರಸ್ತಾಪಿಸದೇ, ಅಲ್ಲಿನ ನವೋದ್ಯಮಗಳು ಡೀಪ್ ಟೆಕ್ ಕ್ಷೇತ್ರದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿವೆ. ಆದರೆ, ಭಾರತದ ಈ ವಲಯವು ಬಹುತೇಕ ಗ್ರಾಹಕರ ಸೇವೆ ಆಧಾರಿತ ಆ್ಯಪ್‌ಗಳನ್ನು ರೂಪಿಸುವುದರಲ್ಲೇ ಮಗ್ನವಾಗಿದೆ ಎಂದು ಅವರು ಹೇಳಿದ್ದರು.  

ADVERTISEMENT

ದೇಶದ ಬಹುತೇಕ ನವೋದ್ಯಮಗಳ ಸ್ಥಾಪಕರು ಐಸ್‌ಕ್ರೀಮ್ ಬ್ರ್ಯಾಂಡ್‌ಗಳು, ದಿನಸಿ ಹಾಗೂ ಇತರ ಉತ್ಪನ್ನಗಳು ಕಡಿಮೆ ಸಮಯದಲ್ಲಿ ಗ್ರಾಹಕರಿಗೆ ತಲುಪಿಸುವ ಆ್ಯಪ್‌ಗಳು, ಬೆಟ್ಟಿಂಗ್ ಮತ್ತು ಫ್ಯಾಂಟಸಿ ಸ್ಪೋರ್ಟ್ಸ್ ಅಪ್ಲಿಕೇಷನ್‌ಗಳ ಬಗ್ಗೆ ಗಮನಹರಿಸುತ್ತಿದ್ದಾರೆ; ಚೀನಾದಲ್ಲಿ ಹೊಸ ಕಾಲದ ಕಂಪನಿಗಳು ಸೆಮಿಕಂಡಕ್ಟರ್, ರೊಬೊಟಿಕ್ಸ್, ಎಐ, ಎಲೆಕ್ಟ್ರಿಕಲ್ ವೆಹಿಕಲ್‌, ತ್ರಿ–ಡಿ ಮ್ಯಾನುಫ್ಯಾಕ್ಚರಿಂಗ್ ಮತ್ತು ಮಷೀನ್ ಲರ್ನಿಂಗ್‌ ವಲಯಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಭಾರತದಲ್ಲಿ ನವೋದ್ಯಮವು ಭವಿಷ್ಯದ ದೃಷ್ಟಿಕೋನವಿಲ್ಲದೇ ಅಲ್ಪಕಾಲೀನವಾದ, ಗ್ರಾಹಕರಿಗೆ ಡಿಜಿಟಲ್ ಅನುಕೂಲ ಪೂರೈಸುವುದರಲ್ಲಿಯೇ ತೊಡಗಿವೆ ಎನ್ನುವುದು ಮುಖ್ಯ ಆಕ್ಷೇಪ.

ಬಂಡವಾಳ ಹೂಡಿಕೆ, ಬಳಕೆದಾರರ ಸಂಖ್ಯೆ, ಉದ್ಯೋಗ ಸೃಷ್ಟಿ, ಆದಾಯ ಮತ್ತು ಲಾಭದ ದೃಷ್ಟಿಯಿಂದ ಭಾರತದ ನವೋದ್ಯಮಗಳು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಆದರೆ, ಇವು ಚೀನಾ ಮತ್ತು ಇತರ ದೇಶಗಳ ಕಂಪನಿಗಳ ರೀತಿಯಲ್ಲಿ ನಾವೀನ್ಯದ ಗಡಿಗಳನ್ನು ವಿಸ್ತರಿಸಿ, ನವೋದ್ಯಮ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿಲ್ಲ ಎನ್ನುವ ಟೀಕೆ ಇದೆ.

ಎರಡು ದಶಕಗಳಿಂದ ಭಾರತ ಮತ್ತು ಚೀನಾ, ಜಾಗತಿಕ ನವೋದ್ಯಮ ಬೆಳವಣಿಗೆಯ ಪ್ರಮುಖ ರಾಷ್ಟ್ರಗಳೆನಿಸಿವೆ.  ಬೃಹತ್ ಜನಸಂಖ್ಯೆ, ತ್ವರಿತ ಡಿಜಿಟಲೀಕರಣ, ಬಂಡವಾಳ ಹೂಡಿಕೆ ಎರಡೂ ರಾಷ್ಟ್ರಗಳ ಶಕ್ತಿಯಾಗಿದೆ. ಜಗತ್ತಿನಲ್ಲಿ 2024ರ ಹೊತ್ತಿಗೆ ಚೀನಾವು ಅಲಿಬಾಬಾ, ಬೈಟ್‌ಡಾನ್ಸ್, ಟೆನ್‌ಸೆಂಟ್‌ ಮುಂತಾದ ಕಂಪನಿಗಳ ಬೆಳವಣಿಗೆಯೊಂದಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನ ಪಡೆದಿದೆ. ಅತಿ ಹೆಚ್ಚು ನವೋದ್ಯಮಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನ ಹೊಂದಿದೆ ಎಂಬುದು ಕೇಂದ್ರ ಸರ್ಕಾರದ ಹೇಳಿಕೆ. ಆದರೆ, ಆರಂಭದ ಭರವಸೆಯ ಹೊರತಾಗಿಯೂ ದೇಶದ ನವೋದ್ಯಮ ಕ್ಷೇತ್ರವು ತನ್ನ ಅಲ್ಪಕಾಲೀನ, ಗ್ರಾಹಕಕೇಂದ್ರಿತ ಯೋಜನೆಗಳಲ್ಲಿ ತೊಡಗಿ, ತನ್ನ ಗಾತ್ರ ಮತ್ತು ಲಾಭದ ದೃಷ್ಟಿಯಿಂದ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಹೂಡಿಕೆಯ ಕೊರತೆ, ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡದಿರುವುದೇ ಮುಖ್ಯ ಕಾರಣ ಎನ್ನಲಾಗಿದೆ.

ಡೀಪ್ ಟೆಕ್ ಆವಿಷ್ಕಾರಗಳಿಗೆ ಹೆಚ್ಚು ಸಮಯ ಬೇಕು ಮತ್ತು ಹೆಚ್ಚು ಬಂಡವಾಳವನ್ನೂ ಬೇಡುತ್ತವೆ. ನವೋದ್ಯಮಿಗಳಲ್ಲಿ ದೀರ್ಘಾವಧಿ ರಿಸ್ಕ್ ತೆಗೆದುಕೊಳ್ಳುವ ಮನಃಸ್ಥಿತಿ ಇಲ್ಲ, ತಕ್ಷಣವೇ ಲಾಭ ಕಾಣಬೇಕು ಎನ್ನುವ ಧೋರಣೆಯಿಂದಾಗಿ ಗ್ರಾಹಕಕೇಂದ್ರಿತ ನವೋದ್ಯಮಗಳಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಹೀಗಾಗಿ ಉನ್ನತ ತಾಂತ್ರಿಕತೆ ರೂಪುಗೊಳ್ಳಲು ನಮ್ಮಲ್ಲಿ ಸಾಧ್ಯವಾಗಿಲ್ಲ ಎನ್ನುವ ವಾದವೂ ಇದೆ.

ಆದರೆ, ಈ ಹಿಂದುಳಿದಿರುವಿಕೆಯಲ್ಲೂ ಬೆಳವಣಿಗೆಯ ಭರವಸೆ ಇದೆ ಎನ್ನುವುದು ಉದ್ಯಮ ರಂಗದ ಕೆಲವರ ಮಾತು. ಗ್ರಾಹಕರ ಅನುಕೂಲದ ದೃಷ್ಟಿಯಿಂದ ಆರಂಭ ವಾದ ಇಂಟರ್‌ನೆಟ್‌ ಆಧಾರಿತ ಗ್ರಾಹಕ ಕಂಪನಿಗಳೇ ಮುಂದೆ ತಾಂತ್ರಿಕ ಜಗತ್ತಿನಲ್ಲಿ ಮಹತ್ವದ ಕಾರ್ಯ ಮಾಡಿವೆ ಎನ್ನುವುದು ಕ್ವಿಕ್ ಕಾಮರ್ಸ್ ಕಂಪನಿಯಾದ ಜೆಪ್ಟೊನ ಸಂಸ್ಥಾಪಕ ಆದಿತ್ ಪಲಿಚಾ ಅವರ ಅಭಿಪ್ರಾಯ. ಇಂಟರ್‌ನೆಟ್‌ ಆಧಾರಿತ ಗ್ರಾಹಕ ಕಂಪನಿಯಾದ ಅಮೆಜಾನ್, ಇಂದು ಕ್ಲೌಡ್ ಕಂಪ್ಯೂಟಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಈಗ ಎಐ ವಲಯದಲ್ಲಿ ಹೆಸರು ಮಾಡಿರುವ ಫೇಸ್‌ಬುಕ್, ಗೂಗಲ್ ಒಂದು ಕಾಲದಲ್ಲಿ ಇಂಟರ್ನೆಟ್ ಆಧಾರಿತ ಗ್ರಾಹಕ ಕಂಪನಿಗಳಾಗಿದ್ದವು ಎಂದು ವಿಶ್ಲೇಷಿಸಲಾಗುತ್ತಿದೆ.     

ಭಾರತವು ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರೆ, ಡೀಪ್ ಟೆಕ್ ಸ್ಟಾರ್ಟ್ಅಪ್‌ಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಾಗಬೇಕು. ಜತೆಗೆ ಸರ್ಕಾರದ ನೀತಿಗಳು ಕೂಡ ಇದಕ್ಕೆ ಪೂರಕವಾಗಿರಬೇಕು ಎನ್ನುವುದು ಕೆಲವರ ಅನಿಸಿಕೆ. ‌

2015ರಲ್ಲಿ ‘ಮೇಡ್ ಇನ್ ಚೀನಾ–2025’ ಯೋಜನೆ ಮೂಲಕ ಪ್ರಮುಖ ವಲಯಗಳನ್ನು ಗುರುತಿಸಿ, ಅವುಗಳ ಪ್ರಗತಿಗೆ ಎಲ್ಲ ಸೌಲಭ್ಯಗಳನ್ನೂ ಚೀನಾ ಒದಗಿಸಿತು. ತನ್ನ 14ನೇ ಪಂಚವಾರ್ಷಿಕ ಯೋಜನೆಯಲ್ಲೂ ಸುಸ್ಥಿರ ಅಭಿವೃದ್ಧಿ ಮತ್ತು ತಾಂತ್ರಿಕ ಅಭಿವೃದ್ಧಿಗೆ ಆದ್ಯತೆ ನೀಡಿತು. 2023ರಲ್ಲಿ ಭಾರತದ ನವೋದ್ಯಮದ ಒಟ್ಟು ಹೂಡಿಕೆಯಲ್ಲಿ ಶೇ 5ರಷ್ಟು ಮಾತ್ರ ಡೀಪ್ ಟೆಕ್ ವಲಯದಲ್ಲಿ ತೊಡಗಿಸಲಾಗಿತ್ತು; ಇದೇ ವೇಳೆ, ಚೀನಾದಲ್ಲಿ ನವೋದ್ಯಮದ ಒಟ್ಟು ಹೂಡಿಕೆಯಲ್ಲಿ ಶೇ 35ರಷ್ಟು ಡೀಪ್ ಟೆಕ್ ವಲಯದಲ್ಲಿ ಹೂಡಿಕೆ ಮಾಡಲಾಗಿತ್ತು.  

ಚೀನಾ ಅಷ್ಟೇ ಅಲ್ಲ, ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್, ಜರ್ಮನಿ ಮುಂತಾದ ರಾಷ್ಟ್ರಗಳು ಕೂಡ ದೀಘಾರ್ವಧಿಯ, ಡೀಪ್ ಟೆಕ್ ಆವಿಷ್ಕಾರಗಳಲ್ಲಿ ತೊಡಗಿವೆ. ‘ಈ ವಿಚಾರದಲ್ಲಿ ಭಾರತ ಸಾಗಬೇಕಾದ ಹಾದಿ ಇನ್ನೂ ದೀರ್ಘವಾಗಿದೆ; ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಬಹಳ ಮುಖ್ಯವಾಗಿದೆ. ನವೋದ್ಯಮಗಳಿಗೆ ಹೆಚ್ಚಿನ ಬಂಡವಾಳ ಮತ್ತು ಅವುಗಳ ಬೆಳವಣಿಗೆಗೆ ಪೂರಕವಾದ ನೀತಿ ನಿರೂಪಣೆಗಳ ಅಗತ್ಯವಿದೆ’ ಎಂಬುದು ನವೋದ್ಯಮಿಗಳ ಅಭಿಪ್ರಾಯ.

ಚೀನಾ ಪರಿಸ್ಥಿತಿ

* ನವೋದ್ಯಮ ಪರವಾದ ಸರ್ಕಾರದ ನೀತಿಗಳು, ದೊಡ್ಡ ಪ್ರಮಾಣದ ಆರ್ಥಿಕ ನೆರವು. ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು

* ಭಾರಿ ಪ್ರಮಾಣದಲ್ಲಿ ತೆರಿಗೆವಿನಾಯಿತಿ. ಮಾಧ್ಯಮಗಳ ವರದಿ ಪ್ರಕಾರ, 2024ರಲ್ಲಿ ಚೀನಾವು ಡೀಪ್ ಟೆಕ್‌ ನವೋದ್ಯಮಗಳಿಗೆ ₹31.08 ಲಕ್ಷ ಕೋಟಿಯಷ್ಟು ತೆರಿಗೆ ಮತ್ತು ಶುಲ್ಕಗಳ ವಿನಾಯಿತಿ ನೀಡಿದೆ

* ಎಐ, ಸೆಮಿಕಂಡಕ್ಟರ್‌, ರೊಬೊಟಿಕ್ಸ್‌ ನವೋದ್ಯಮ ಕ್ಷೇತ್ರದಲ್ಲಿ ನಾವೀನ್ಯ ಕಲ್ಪನೆಗಳ ಅಭಿವೃದ್ಧಿಗಾಗಿ ಖಾಸಗಿ ಕಂಪನಿಗಳಿಂದ ಭಾರಿ ಪ್ರಮಾಣದ ಬಂಡವಾಳ ಹೂಡಿಕೆ. ಸೌತ್‌ ಚೀನಾ ಪೋಸ್ಟ್‌ ಪ್ರಕಾರ, 2023ರಲ್ಲಿ ಚೀನಿ ನವೋದ್ಯಮಗಳು ವಿವಿಧ ಕಂಪನಿಗಳಿಂದ ₹3.92 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿದ್ದವು. ಎಐ ಮತ್ತು ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಈ ಹೂಡಿಕೆ ಮೊತ್ತ  ₹1.06 ಲಕ್ಷ ಕೋಟಿ

* ವಿದ್ಯುತ್‌ ಚಾಲಿತ ವಾಹನ, ಎಐ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣತಿ 

* ಜಾಗತಿಕ ಮಟ್ಟದ ಕಂಪನಿಗಳ ಉಪಸ್ಥಿತಿ

* ಮೂಲಸೌಕರ್ಯದ ಲಭ್ಯತೆ, ಬಾಹ್ಯಕಾಶ ತಂತ್ರಜ್ಞಾನ, ಅತಿ ವೇಗದ ರೈಲು, ನವೀಕೃತ ಇಂಧನ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಬಂಡವಾಳ ಹೂಡಿಕೆ

ಭಾರತ ಸ್ಥಿತಿಗತಿ

* ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳ ಕೊರತೆ

* ಸರ್ಕಾರದ ಸ್ಟಾರ್ಟ್‌ ಅಪ್‌ ಇಂಡಿಯಾ ಯೋಜನೆಯ ದೊಡ್ಡ ಲಾಭ ನವೋದ್ಯಮಿಗಳಿಗೆ ಸಿಕ್ಕಿಲ್ಲ. ಕಡಿಮೆ ಅವಧಿಗೆ (ಮೂರು ವರ್ಷ) ತೆರಿಗೆ ವಿನಾಯಿತಿ, ಅಧಿಕಾರಶಾಹಿಯ ವಿಳಂಬ ಧೋರಣೆ, ಕಠಿಣ ನಿಯಮಗಳು

* ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸೀಮಿತ ಪ್ರಗತಿ 

* ಬಾಹ್ಯಾಕಾಶ, ಡೀಪ್‌ ಟೆಕ್‌ ತಂತ್ರಜ್ಞಾನ, ಸೆಮಿಕಂಡಕ್ಟರ್‌ಗಳು, ಎಐ, ರೊಬೊಟಿಕ್ಸ್‌ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣತಿ ಮತ್ತು ಮೂಲಸೌಕರ್ಯಗಳ ಕೊರತೆ

* ಜಾಗತಿಕ ಮಟ್ಟದ ಸಂಸ್ಥೆಗಳ ಅನುಪಸ್ಥಿತಿ 

* ತಂತ್ರಜ್ಞಾನ ನವೋದ್ಯಮಗಳಲ್ಲಿ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಸಮಯ ಬೇಕು. ಫಲಿತಾಂಶವೂ ವಿಳಂಬವಾಗಿ ಬರುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ನವೋದ್ಯಮಿಗಳ ನಿರಾಸಕ್ತಿ

* ನವೋದ್ಯಮಿಗಳಿಂದ ಡಿಜಿಟಲ್‌ ಆಧಾರಿತ ಗ್ರಾಹಕ ಸೇವೆಗಳಿಗೆ ಹೆಚ್ಚು ಒತ್ತು   

* ಕಡಿಮೆ ಬಂಡವಾಳ ಹೂಡಿಕೆ. 2024ರಲ್ಲಿ ದೇಶದ ನವೋದ್ಯಮಗಳು ಸಂಗ್ರಹಿಸಿದ ಒಟ್ಟು ಬಂಡವಾಳ ಮೊತ್ತ ₹1.18 ಲಕ್ಷ ಕೋಟಿ. ಡೀಪ್‌ ಟೆಕ್‌ ನವೋದ್ಯಮಗಳು ಸಂಗ್ರಹಿಸಿದ್ದು ಕೇವಲ ₹13,776 ಕೋಟಿ

* ಡೀಪ್‌ ಟೆಕ್‌ ನವೋದ್ಯಮಗಳು ರೂಪಿಸಿದ ಉತ್ಪನ್ನಗಳಿಗೆ ಗ್ರಾಹಕರಿಂದ ಸಿಗದ ಸ್ಪಂದನೆ

* ಪ್ರತಿಭಾ ಪಲಾಯನ, ಕೌಶಲಯುಕ್ತ ತಂತ್ರಜ್ಞರ ಕೊರತೆ

ಆಶಾದಾಯಕ ಬೆಳವಣಿಗೆ

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ತಂತ್ರಜ್ಞಾನ ನವೋದ್ಯಮ ಕ್ಷೇತ್ರ ಬೆಳೆಯುತ್ತಿದೆ ಎಂದು 2024ರಲ್ಲಿ ಭಾರತದ ತಂತ್ರಜ್ಞಾನ ನವೋದ್ಯಮ ವಲಯಕ್ಕೆ ಸಂಬಂಧಿಸಿದಂತೆ ನಾಸ್ಕಾಂ, ಜಿನ್ನೊವ್‌ ಸಹಭಾಗಿತ್ವದಲ್ಲಿ ಸಿದ್ಧಪಡಿಸಿದ ವರದಿ ಹೇಳುತ್ತದೆ. ಅದರ ಪ್ರಕಾರ,

* 2024ರಲ್ಲಿ 2,000ಕ್ಕೂ ಹೆಚ್ಚು ಟೆಕ್‌ ನವೋದ್ಯಮಗಳು ಸ್ಥಾಪನೆಯಾಗಿವೆ

* 900ಕ್ಕೂ ಹೆಚ್ಚು ಡೀಪ್‌ ಟೆಕ್‌ ನವೋದ್ಯಮಗಳು ಸ್ಥಾಪನೆಗೊಂಡಿವೆ

* 2023ಕ್ಕೆ ಹೋಲಿಸಿದರೆ, 2024ರಲ್ಲಿ ಟೆಕ್‌ ನವೋದ್ಯಮಗಳ ಹೂಡಿಕೆ ಪ್ರಮಾಣ ಶೇ 23ರಷ್ಟು ಹೆಚ್ಚಿದೆ

* ಡೀಪ್‌ ಟೆಕ್‌ ನವೋದ್ಯಮಗಳಿಗೆ ಮಾಡಿದ ಹೂಡಿಕೆ ಪ್ರಮಾಣದಲ್ಲೂ ಶೇ 78ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಡೀಪ್‌ಟೆಕ್‌ ನವೋದ್ಯಮಗಳ ಮೇಲೆ ₹13,776 ಕೋಟಿ ಬಂಡವಾಳ ಹೂಡಲಾಗಿದೆ

* ಡೀಪ್‌ಟೆಕ್‌ ನವೋದ್ಯಮಗಳ ಮೇಲೆ ಮಾಡಲಾದ ಹೂಡಿಕೆಯ ಪೈಕಿ ಶೇ 87ರಷ್ಟು ಹೂಡಿಕೆ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ನವೋದ್ಯಮಗಳಲ್ಲಿ ಮಾಡಲಾಗಿದೆ

*  ಟೆಕ್‌ ನವೋದ್ಯಮಗಳ ಮೇಲೆ ಕಾರ್ಪೊರೇಟ್‌ ಕಂಪನಿಗಳ ವಿಶ್ವಾಸ ಹೆಚ್ಚಾಗಿದ್ದು, ಅವುಗಳ ಹೂಡಿಕೆ ಪ್ರಮಾಣ ಶೇ 70ರಷ್ಟು ಅಭಿವೃದ್ಧಿ ಕಂಡಿದೆ

*  ಸಂಶೋಧನೆ ಮತ್ತು ಅಭಿವೃದ್ಧಿಗೆ 2025ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ₹20 ಸಾವಿರ ಕೋಟಿ ಮೀಸಲಿಟ್ಟಿದೆ

ಆಧಾರ: ‍ಪಿಟಿಐ, ಬಿಬಿಸಿ, ನಾಸ್ಕಾಂ ವರದಿ,ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಸಚಿವಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.