ADVERTISEMENT

ಆಳ ಅಗಲ: ದೇಶಭ್ರಷ್ಟರ ಕರೆತರಲು ಭಾರತದ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 23:41 IST
Last Updated 15 ಏಪ್ರಿಲ್ 2025, 23:41 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದಲ್ಲಿ ಭಾರತಕ್ಕೆ ಬೇಕಾಗಿರುವ ವಜ್ರ ವ್ಯಾಪಾರಿ ಮೆಹುಲ್‌ ಚೋಕ್ಸಿಯನ್ನು, ಭಾರತದ ಮನವಿಯ ಮೇರೆಗೆ ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಮುಂಬೈ ದಾಳಿ ಪ್ರಕರಣದ ಸಂಚುಕೋರರಲ್ಲಿ ಒಬ್ಬನಾದ ತಹವ್ವುರ್‌ ರಾಣಾನನ್ನು ಅಮೆರಿಕವು ಭಾರತಕ್ಕೆ ಹಸ್ತಾಂತರಿಸಿದ ಕೆಲವೇ ದಿನಗಳಲ್ಲಿ ಚೋಕ್ಸಿಯ ಬಂಧನವಾಗಿದೆ. ಅವರನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ, ದೇಶಭ್ರಷ್ಟರಾಗಿ ವಿದೇಶದಲ್ಲಿ ನೆಲಸಿರುವ ಆರ್ಥಿಕ ಅಪರಾಧಿಗಳು, ಭಯೋತ್ಪಾದನೆ, ಕೊಲೆ, ಸುಲಿಗೆ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಬೇಕಾದ ಹಲವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ ಮುಂದುವರಿಸಿದೆ. 

ದೇಶಭ್ರಷ್ಟರಾಗಿರುವ ಮತ್ತು ಹೊರದೇಶಗಳಲ್ಲಿ ತಲೆಮರೆಸಿಕೊಂಡಿರುವ 178 ಮಂದಿಯನ್ನು ಹಸ್ತಾಂತರಿಸುವಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿವಿಧ ದೇಶಗಳಿಗೆ ಮನವಿ ಮಾಡಿದೆ. ಆದರೆ, ಐದು ವರ್ಷಗಳಲ್ಲಿ 23 ಮಂದಿ ಮಾತ್ರ ಭಾರತಕ್ಕೆ ಹಸ್ತಾಂತರಗೊಂಡಿದ್ದಾರೆ.

ADVERTISEMENT

ಅಪರಾಧಿಗಳು, ಆರೋಪಿಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತವು ಅಮೆರಿಕ, ಕೆನಡಾ ಬ್ರಿಟನ್‌, ಯುಎಇ ಸೇರಿದಂತೆ  48 ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಅಲ್ಲದೇ, ಸಿಂಗಪುರ, ಸ್ವೀಡನ್, ಇಟಲಿ ಸೇರಿದಂತೆ 12 ರಾಷ್ಟ್ರಗಳೊಂದಿಗೆ ಹಸ್ತಾಂತರಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ಹೊಂದಿದೆ.

ವಿವಿಧ ಪ್ರಕರಣಗಳಲ್ಲಿ ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಪ್ರಮುಖರ ವಿವರಗಳನ್ನು ಇಲ್ಲಿ ನೀಡಲಾಗಿದೆ.

ನೀರವ್ ಮೋದಿ

ಭಾರತದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ (ಎಫ್‌ಇಒ) ಮೆಹುಲ್ ಚೋಕ್ಸಿಯ ಸೋದರಳಿಯ, ವಜ್ರದ ವ್ಯಾಪಾರಿ ನೀರವ್ ಮೋದಿ ದೇಶದ ಎಫ್‌ಇಒಗಳ ಪಟ್ಟಿಯಲ್ಲಿದ್ದಾರೆ. ಮಾವ–ಅಳಿಯನ ಈ ಜೋಡಿ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನಿಂದ (ಪಿಎನ್‌ಬಿ) ₹13,800 ಸಾಲ ಪಡೆದು ವಂಚಿಸಿತ್ತು. ವಂಚನೆ ಪ್ರಕರಣ ದಾಖಲಾಗುವ ಕೆಲವೇ ದಿನಗಳ ಮುನ್ನ, 2018ರಲ್ಲಿ ನೀರವ್ ದೇಶದಿಂದ ಪಲಾಯನ ಮಾಡಿದ್ದರು. 2019ರ ಮಾರ್ಚ್‌ 19ರಂದು ನೀರವ್‌ರನ್ನು ಇಂಗ್ಲೆಂಡ್‌ನಲ್ಲಿ ಬಂಧಿಸಲಾಗಿದೆ. ನೀರವ್ ಅಂದಿನಿಂದಲೂ ಜೈಲಿನಲ್ಲಿಯೇ ಇದ್ದಾರೆ. 2021ರಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅಲ್ಲಿನ ಕೋರ್ಟ್ ಸಮ್ಮತಿಸಿತ್ತು. ಹಸ್ತಾಂತರ ವಿರೋಧಿಸಿ ನೀರವ್ ನ್ಯಾಯಾಂಗ ಹೋರಾಟ ಮುಂದುವರಿಸಿದ್ದಾರೆ. ನೀರವ್ ಸಹೋದರ ನೀಶಲ್ ಮೋದಿ ಕೂಡ ಈ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದು, ಅವರೂ ದೇಶಭ್ರಷ್ಟ ಅಪರಾಧಿಯಾಗಿದ್ದಾರೆ.

ವಿಜಯ್‌ ಮಲ್ಯ

ಕಿಂಗ್‌ಫಿಷರ್‌ ಏರ್‌ಲೈನ್ಸ್‌ಗಾಗಿ ಬ್ಯಾಂಕುಗಳಿಂದ ₹9,000 ಕೋಟಿ ಸಾಲ ಪಡೆದು ಅದನ್ನು ಪಾವತಿಸದ ಪ್ರಕರಣದಲ್ಲಿ ಭಾರತಕ್ಕೆ ಬೇಕಾದ ಪ್ರಮುಖ ಆರ್ಥಿಕ ಅಪರಾಧಿ. ಮದ್ಯದ ದೊರೆ ಎಂದೇ ಕರೆಸಿಕೊಳ್ಳುತ್ತಿದ್ದ ಮಲ್ಯ, 2016ರಲ್ಲಿ ಭಾರತದಿಂದ ಪರಾರಿಯಾಗಿದ್ದರು. 2018ರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ಅಡಿಯಲ್ಲಿ ‘ಆರ್ಥಿಕ ಅಪರಾಧಿ’ ಎಂದು ಘೋಷಿಸಲಾದ ಮೊದಲ ವ್ಯಕ್ತಿ ಮಲ್ಯ. 2019ರಲ್ಲಿ ಈ ಘೋಷಣೆ ಮಾಡಲಾಗಿದ್ದು, ಅಂದಿನಿಂದ ಅವರು ಭಾರತಕ್ಕೆ ಬೇಕಾಗಿದ್ದಾರೆ. ಸದ್ಯ ಬ್ರಿಟನ್‌ನಲ್ಲಿ ವಾಸವಿರುವ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ತಮ್ಮ ಹಸ್ತಾಂತರದ ವಿರುದ್ಧ ವಿಜಯ್‌ ಮಲ್ಯ ಕಾನೂನು ಹೋರಾಟ ನಡೆಸುತ್ತಿದ್ದಾರೆ.   

ಲಲಿತ್‌ ಮೋದಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ರೂವಾರಿಯಾಗಿರುವ ಲಲಿತ್‌ ಮೋದಿ, ಐಪಿಎಲ್‌ ಕಮಿಷನರ್‌ ಆಗಿದ್ದ ಸಂದರ್ಭದಲ್ಲಿ ಹಣಕಾಸಿನ ಅವ್ಯವಹಾರ ನಡೆಸಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಮಾಧ್ಯಮ ಹಕ್ಕುಗಳ ಹರಾಜಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಹಣ ಅಕ್ರಮ ವರ್ಗಾವಣೆ, ತೆರಿಗೆ ವಂಚನೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನು ಅವರು ಎದುರಿಸುತ್ತಿದ್ದಾರೆ. ನೂರಾರು ಕೋಟಿ ರೂಪಾಯಿ ಅಕ್ರಮ ಎಸಗಿರುವ ಆಪಾದನೆ ಅವರ ಮೇಲಿದೆ. ಅಕ್ರಮಗಳ ಕುರಿತಾಗಿ ಇ.ಡಿ. ತನಿಖೆ ಕೈಗೆತ್ತಿಕೊಂಡ ಬೆನ್ನಲ್ಲೇ ಭಾರತ ತೊರೆದಿರುವ ಅವರು, 2010ರಿಂದ  ಲಂಡನ್‌ನಲ್ಲಿ ವಾಸವಿದ್ದಾರೆ.  

ಸೌರಭ್ ಚಂದ್ರಾಕರ್

ಸೌರಭ್ ಚಂದ್ರಾಕರ್ ಅವರು ಛತ್ತೀಸಗಢ ಮೂಲದವರಾಗಿದ್ದು, ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ನ (ಎಂಒಬಿ) ಪ್ರವರ್ತಕರಲ್ಲಿ ಒಬ್ಬರಾಗಿದ್ದರು. ಇವರು ₹6,000 ಕೋಟಿ ಮೊತ್ತದ ಹಗರಣದ ಸೂತ್ರಧಾರ. ಆನ್‌ಲೈನ್ ಬೆಟ್ಟಿಂಗ್‌ನಿಂದ ಬಂದ ಅಕ್ರಮ ಹಣದಲ್ಲಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಅಪಾರ ಮೊತ್ತದ ಲಂಚ ನೀಡಿದ್ದರು ಎನ್ನಲಾಗಿದೆ. ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳಿಗೆ ವೇದಿಕೆಯಾಗಿ ಎಂಒಬಿ ಕೆಲಸ ಮಾಡುತ್ತಿತ್ತು ಎಂದು ಇ.ಡಿ. ಹೇಳಿದೆ. 2023ರ ಫೆಬ್ರುವರಿಯಲ್ಲಿ ದುಬೈನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದ ಸೌರಭ್, ಅದಕ್ಕಾಗಿ ₹200 ಕೋಟಿ ವ್ಯಯಿಸಿದ್ದರು. ರವಿ ಉಪ್ಪಾಲ್ ಎನ್ನುವ ಮತ್ತೊಬ್ಬ ಪ‍್ರಮುಖ ಆರೋಪಿಯೊಂದಿಗೆ ಸೌರಭ್ ಅವರನ್ನು 2024ರ ಅಕ್ಟೋಬರ್‌ನಲ್ಲಿ ದುಬೈನಲ್ಲಿ ಬಂಧಿಸಲಾಗಿತ್ತು. 

ಸಂಜಯ್‌ ಭಂಡಾರಿ

ಹಣ ಅಕ್ರಮ ವರ್ಗಾವಣೆ ಮತ್ತು ತೆರಿಗೆ ವಂಚನೆ ಪ್ರಕರಣಗಳಲ್ಲಿ ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಶಸ್ತ್ರಾಸ್ತ್ರಗಳ ಮಧ್ಯವರ್ತಿ ಸಂಜಯ್‌ ಭಂಡಾರಿ ಅವರು 2016ರಲ್ಲಿ ಬ್ರಿಟನ್‌ಗೆ ಪರಾರಿಯಾಗಿದ್ದಾರೆ. 62 ವರ್ಷದ ಭಂಡಾರಿ ಅವರು ವಿದೇಶದಲ್ಲಿರುವ ತಮ್ಮ ಆಸ್ತಿ ವಿವರಗಳನ್ನು ಹಳೆಯ ದಾಖಲೆಗಳನ್ನು ಬಳಸಿಕೊಂಡು ಮುಚ್ಚಿಟ್ಟಿದ್ದರು. ಆ ಆಸ್ತಿಗಳಿಂದ ಬರುತ್ತಿರುವ ಆದಾಯದ ಬಗ್ಗೆ ಭಾರತದ ತೆರಿಗೆ ಇಲಾಖೆಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಬ್ರಿಟನ್‌ ಸರ್ಕಾರ 2022ರಲ್ಲಿ ಅವರ ಹಸ್ತಾಂತರಕ್ಕೆ ಅನುಮತಿ ನೀಡಿತ್ತು. ಇದರ ವಿರುದ್ಧ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬ್ರಿಟನ್‌ ಹೈಕೋರ್ಟ್‌ ಇತ್ತೀಚೆಗೆ ಹಸ್ತಾಂತರಕ್ಕೆ ತಡೆ ಒಡ್ಡಿದೆ.

ದಾವೂದ್‌ ಇಬ್ರಾಹಿಂ

1993ರ ಮುಂಬೈ ಬಾಂಬ್‌ ಸ್ಫೋಟ ಸೇರಿದಂತೆ ದೇಶದಲ್ಲಿ ನಡೆದ ಹಲವು ಸಂಘಟಿತ ಅಪರಾಧ ಕೃತ್ಯಗಳ ಸಂಚುಕೋರನಾಗಿರುವ ಕುಖ್ಯಾತ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ನೆರೆಯ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ದಾವೂದ್‌ ಮಾದಕ ದ್ರವ್ಯ ಜಾಲದಲ್ಲೂ ಸಕ್ರಿಯನಾಗಿದ್ದ. 69 ವರ್ಷದ ದಾವೂದ್‌ ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ. 

ಟೈಗರ್ ಮೆಮನ್

ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್, ದಾವೂದ್ ಸಹಚರನಾಗಿದ್ದವನು ಮತ್ತು ಭಯೋತ್ಪಾದಕ. ಇವನು 1993ರ ಮುಂಬೈ ಸ್ಫೋಟದ ಮುಖ್ಯ ಸೂತ್ರಧಾರ. ಈ ಪ್ರಕರಣದಲ್ಲಿ ಟೈಗರ್ ಮೆಮನ್ ಸೇರಿದಂತೆ ಇವರ ಕುಟುಂಬದ ಯಾಕೂಬ್, ಎಸ್ಸಾ, ರುಬಿನಾ ಮತ್ತು ರಹಿಲ್ ಅವರನ್ನು ಅಪರಾಧಿಗಳೆಂದು ಕೋರ್ಟ್ ತೀರ್ಪು ನೀಡಿದೆ. ಇವರ ಪೈಕಿ ಯಾಕೂಬ್‌ನನ್ನು 2015ರಲ್ಲಿ ಗಲ್ಲಿಗೇರಿಸಲಾಯಿತು. ಟೈಗರ್ ಮೆಮನ್ ದೇಶ ತೊರೆದು ಪಲಾಯನ ಮಾಡಿದ್ದು, ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾನೆ ಎನ್ನಲಾಗಿದೆ. 

ಅರ್ಶ್‌ ಡಲ್ಲಾ

ಅರ್ಶ್‌ ಡಲ್ಲಾ ಎಂದು ಗುರುತಿಸಿಕೊಂಡಿರುವ ‘ಅರ್ಶ್‌ದೀಪ್‌ ಸಿಂಗ್‌ ಗಿಲ್‌’ ಭಾರತಕ್ಕೆ ಬೇಕಾದ ಕುಖ್ಯಾತ ಭಯೋತ್ಪಾದಕ. ಈತ ನಿಷೇಧಿತ ಖಾಲಿಸ್ತಾನ್‌ ಟೈಗರ್‌ ಫೋರ್ಸ್‌ನ ಮುಖ್ಯಸ್ಥ ಎಂದು ನಂಬಲಾಗಿದೆ. ಕೆನಡಾದಲ್ಲಿ ವಾಸವಾಗಿರುವ ಈತನ ವಿರುದ್ಧ ಭಾರತದಲ್ಲಿ ಭಯೋತ್ಪಾದನಾ ಕೃತ್ಯ, ಕೊಲೆ, ಕೊಲೆ ಯತ್ನ, ಸುಲಿಗೆ, ಭಯೋತ್ಪಾದನೆಗೆ ಆರ್ಥಿಕ ನೆರವು ಸೇರಿದಂತೆ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಭಾರತವು ಈತನನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಡಲ್ಲಾನು ಹತ್ಯೆಗೀಡಾಗಿರುವ ಖಾಲಿಸ್ತಾನಿ ಮುಖಂಡ ಹರ್ದೀಪ್‌ ಸಿಂಗ್‌ನ ಆಪ್ತ ಎನ್ನಲಾಗಿದೆ. ಭಾರತವು ಆತನ ಹಸ್ತಾಂತರಕ್ಕೆ ಪ್ರಯತ್ನಿಸುತ್ತಿದೆ. ಕೆನಡಾದಲ್ಲಿ ಬಂಧನಕ್ಕೆ ಒಳಗಾಗಿದ್ದ ಆತ ಈಗ ಜಾಮೀನಿನ ಮೇಲೆ ಹೊರಗಿದ್ದಾನೆ. 

ಅನ್ಮೋಲ್‌ ಬಿಷ್ಣೋಯಿ

ಭಾರತದಲ್ಲಿ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯ ತಮ್ಮ ಈ ಅನ್ಮೋಲ್‌. ಅಮೆರಿಕದಲ್ಲಿ ನೆಲಸಿದ್ದಾನೆ. ಲಾರೆನ್ಸ್‌ ಜೈಲಿನಲ್ಲಿದ್ದುಕೊಂಡೇ ಅನ್ಮೋಲ್‌ ಮೂಲಕ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ಎನ್‌ಸಿಪಿ ಮುಖಂಡರಾಗಿದ್ದ ಬಾಬಾ ಸಿದ್ದಿಕಿ ಹತ್ಯೆ ಹಿಂದೆ ಈತನ ಪಾತ್ರವಿದೆ ಎಂದು ಹೇಳಲಾಗುತ್ತಿದ್ದು, ಹಲವು  ಪ್ರಮುಖರ ಹತ್ಯೆ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ. ಕಳೆದ ವರ್ಷ ಮುಂಬೈನಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮನೆ ಮುಂಭಾಗದಲ್ಲಿ ನಡೆದ ಗುಂಡಿನ ದಾಳಿಯ ಹೊಣೆಯನ್ನು ಅನ್ಮೋಲ್‌ ಹೊತ್ತುಕೊಂಡಿದ್ದ. ಆ ಬಳಿಕ ಪೊಲೀಸರು ಈತನಿಗಾಗಿ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದರು. ಆತನ ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನವನ್ನೂ ಘೋಷಿಸಿದ್ದರು.  

ಗೋಲ್ಡಿ ಬ್ರಾರ್ 

ಗೋಲ್ಡಿ ಬ್ರಾರ್, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹಚರ. ಈತನ ಮೂಲ ಹೆಸರು ಸತೀಂದರ್‌ಜೀತ್ ಸಿಂಗ್. ಪಂಜಾಬ್‌ನ ಮುಕ್ತಾರ್ ಸಾಹಿಬ್‌ನ ನಿವಾಸಿಯಾಗಿದ್ದ ಈತ 2017ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ಕೆನಡಾಗೆ ಹೋಗಿ, ನಂತರ ಅಲ್ಲಿಯೇ ನೆಲಸಿ, ಬಿಷ್ಣೋಯಿ ಗ್ಯಾಂಗ್‌ನ ಸಕ್ರಿಯ ಸದಸ್ಯನಾಗಿ ಕೆಲಸ ಮಾಡುತ್ತಿದ್ದಾನೆ. ಬಬ್ಬರ್ ಖಾಲ್ಸಾ ಎನ್ನುವ ಸಂಘಟನೆಯ ಸದಸ್ಯನಾದ ಈತನನ್ನು ಭಾರತ ಸರ್ಕಾರವು ಭಯೋತ್ಪಾದಕ ಎಂದು ಘೋಷಿಸಿದೆ. ಈತ ಗಾಯಕ ಸಿದ್ದು ಮೂಸೆವಾಲಾ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಜತೆಗೆ ಹಲವು ಕೊಲೆ, ಸುಲಿಗೆ ಆರೋಪಗಳೂ ಈತನ ಮೇಲಿವೆ. ಈತನ ಸುಳಿವು ನೀಡಿದವರಿಗೆ ಭಾರತ ಸರ್ಕಾರವು ₹10 ಲಕ್ಷ ಬಹುಮಾನ ಘೋಷಿಸಿದೆ.   

ಭಾರತಕ್ಕೆ ಹಸ್ತಾಂತರಗೊಂಡ ಪ್ರಮುಖರು

ತಹವ್ವುರ್‌ ರಾಣಾ: 26/11ರ ಮುಂಬೈ ದಾಳಿ ಪ್ರಕರಣದ ಸಂಚುಕೋರರಲ್ಲಿ ಒಬ್ಬನಾಗಿರುವ ತಹವ್ವುರ್‌ ರಾಣಾನನ್ನು ಅಮೆರಿಕವು ಇದೇ 10ರಂದು ಭಾರತಕ್ಕೆ ಹಸ್ತಾಂತರಿಸಿತ್ತು

ಅಬು ಸಲೇಂ: 1993ರ ಮುಂಬೈ ಸ್ಫೋಟ ಪ್ರಕರಣಗದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದ ಅಬುಸಲೇಂ,  ಕೊಲೆ ಮತ್ತು ಸುಲಿಗೆ ನಡೆಸಿರುವ ಆರೋಪವನ್ನೂ ಎದುರಿಸುತ್ತಿದ್ದ. ಪೋರ್ಚುಗಲ್‌ನಲ್ಲಿ ಆಶ್ರಯ ಪಡೆದಿದ್ದ ಆತನನ್ನು 2005ರಲ್ಲಿ ಭಾರತಕ್ಕೆ ಕರೆ ತರಲಾಗಿತ್ತು

ಛೋಟಾ ರಾಜನ್‌: ದಾವೂದ್‌ ಇಬ್ರಾಹಿಂನ ಅತ್ಯಾಪ್ತ ಮತ್ತು ಹಲವು ಅಪರಾಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ ಪಾತಕಿ ಛೋಟಾ ರಾಜನ್‌ನನ್ನು ಇಂಡೊನೇಷ್ಯಾದಿಂದ 2015ರಲ್ಲಿ ಕರೆತರಲಾಗಿತ್ತು

ಕ್ರಿಸ್ಟಿಯನ್‌ ಮೈಕೆಲ್‌: ಆಗಸ್ಟಾವೆಸ್ಟ್‌ಲ್ಯಾಂಡ್‌ ಅತಿಗಣ್ಯರ ಹೆಲಿಕಾಪ್ಟರ್‌ ಹಗರಣದಲ್ಲಿ ಬೇಕಾಗಿದ್ದ ಮಧ್ಯವರ್ತಿ ಕ್ರಿಸ್ಟಿಯನ್‌ ಮೈಕೆಲ್‌ನನ್ನು 2018ರಲ್ಲಿ ಯುಎಇ, ಭಾರತಕ್ಕೆ ಹಸ್ತಾಂತರಿಸಿತ್ತು

ರವಿ ಪೂಜಾರಿ: ನೂರಾರು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ ಭೂಗತಪಾತಕಿ ರವಿಪೂಜಾರಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಲಾಗಿತ್ತು. ಅವನನ್ನು 2020ರಲ್ಲಿ ಸೆನೆಗಲ್‌ನಿಂದ ಭಾರತಕ್ಕೆ ಕರೆತರಲಾಗಿತ್ತು

ಆಧಾರ: ಪಿಟಿಐ, ಸಂಸತ್ತಿನಲ್ಲಿ ಸಚಿವರ ಹೇಳಿಕೆ, ಮಾಧ್ಯಮ ವರದಿಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.