ADVERTISEMENT

ಆಳ–ಅಗಲ | ಬದಲಾದ ಹವಾಮಾನ: ಹವಳ ದಿಬ್ಬ ನಿರ್ನಾಮ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:25 IST
Last Updated 29 ಜುಲೈ 2025, 2:25 IST
   
ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮಗಳು ಭೂಮಿಯ ಮೇಲಷ್ಟೇ ಅಲ್ಲ, ಸಮುದ್ರದ ನೀರಿನೊಳಗೂ ಕಾಣತೊಡಗಿವೆ. ಸಮುದ್ರದ ನೀರಿನ ಮೇಲ್ಮೈನ ತಾಪಮಾನದಲ್ಲಿ ಹೆಚ್ಚಳವಾಗಿರುವುದು ಮತ್ತು ಅಲೆಗಳು ತೀವ್ರಗೊಂಡಿರುವುದರಿಂದ ಹವಳದ ದಿಬ್ಬಗಳು ಬಿಳಿಚಿಕೊಳ್ಳುತ್ತಿದ್ದು, ಹವಳಗಳು ಜೀವ ಕಳೆದುಕೊಳ್ಳುತ್ತಿವೆ. 1998ರಿಂದ ಭಾರತದ ಲಕ್ಷದ್ವೀಪದಲ್ಲಿ ಈ ರೀತಿ ಶೇ 50ರಷ್ಟು ಹವಳದ ದಿಬ್ಬಗಳು ನಿರ್ನಾಮವಾಗಿವೆ ಎಂದು  24 ವರ್ಷದ ಅಧ್ಯಯನ ವರದಿ ತಿಳಿಸಿದೆ. ಜಾಗತಿಕ ಮಟ್ಟದಲ್ಲಿಯೂ ಇದೇ ಪ್ರವೃತ್ತಿ ಕಂಡುಬಂದಿದ್ದು, ಇದು ಹವಳಗಳ ದಿಬ್ಬದ ಕಣ್ಮರೆಯ ವಿಚಾರ ಮಾತ್ರವೇ ಆಗಿರದೇ ಅರ್ಥ ವ್ಯವಸ್ಥೆ, ಪ್ರಾಕೃತಿಕ ಸಮತೋಲನ ಮತ್ತು ಜೀವಜಾಲದ ಅಳಿವು ಉಳಿವಿನ ಪ್ರಶ್ನೆಯೂ ಆಗಿದೆ

ಲಕ್ಷದ್ವೀಪದ ಸಮುದ್ರ ತೀರಗಳಲ್ಲಿ ಕಂಡುಬರುವ ಬಣ್ಣಬಣ್ಣದ ಹವಳದ ದಿಬ್ಬಗಳು ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಅಲ್ಲಿ ಇಂಥ ಹಲವು ಹವಳದ ದಿಬ್ಬಗಳಿದ್ದು, ಜಾಗತಿಕ ತಾಪಮಾನ ಬದಲಾವಣೆಯಿಂದ ಅವುಗಳ ಅಸ್ತಿತ್ವಕ್ಕೇ ಅಪಾಯ ಎದುರಾಗಿದೆ. 1998ರಿಂದ 2022ರ ನಡುವೆ ಲಕ್ಷದ್ವೀಪದಲ್ಲಿನ ಹವಳದ ಮುಚ್ಚುಗೆಯು ಶೇ 37.24ರಿಂದ ಶೇ 19.6ಕ್ಕೆ ಕುಸಿದಿದೆ ಎಂದು ‘ಡೈವರ್ಸಿಟಿ ಆ್ಯಂಡ್ ಡಿಸ್ಟ್ರಿಬ್ಯೂಷನ್’ ಎನ್ನುವ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ತಿಳಿಸಿದೆ.  

ಸುಮಾರು ಒಂದು ಅಡಿ ಎತ್ತರದವರೆಗೆ ಬೆಳೆಯುವ ಮೃದು ಸಮುದ್ರ ಜೀವಿಗಳೇ ಹವಳಗಳು. ಈ ಜೀವಿಗಳು ತಮ್ಮ ವಾಸಕ್ಕಾಗಿ ನೀರಿನಲ್ಲಿಯೇ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ. ಕ್ರಮೇಣ ಇಂಥ ಅನೇಕ ಗೂಡುಗಳು ಸೇರಿ ಬಣ್ಣ ಬಣ್ಣದ ಹವಳದ ದಿಬ್ಬಗಳು ರೂಪುಗೊಳ್ಳುತ್ತವೆ. ಹವಳದ ದಿಬ್ಬಗಳಿಂದಲೇ ಕೂಡಿದ ದ್ವೀಪಗಳೂ ರೂಪುಗೊಂಡಿವೆ. ಇವು ರೂಪುಗೊಳ್ಳಲು ಸಾವಿರಾರು ವರ್ಷಗಳೇ ಬೇಕು. 

ನೀರಿನಲ್ಲಿ ಹವಳ ಮತ್ತು ಪಾಚಿ ಸಹಜೀವನ ನಡೆಸುತ್ತಿದ್ದು, ಹವಳಗಳು ಅತ್ಯಂತ ಸುಂದರವಾಗಿ ರೂಪುಗೊಳ್ಳಲು, ಚಿತ್ತಾಕರ್ಷಕ ಬಣ್ಣಗಳನ್ನು ಪಡೆಯಲು ಪಾಚಿಯೇ ಮೂಲ ಕಾರಣ. ಬಣ್ಣಬಣ್ಣದ ಮೀನುಗಳು ಸೇರಿದಂತೆ ಸಮುದ್ರ ಜೀವಿಗಳ ಪೈಕಿ ಶೇ 25ರಷ್ಟು ಜೀವಿಗಳಿಗೆ ಹವಳದ ದಿಬ್ಬಗಳೇ ಆಶ್ರಯತಾಣವಾಗಿವೆ. ಹೆಚ್ಚುತ್ತಿರುವ ತಾಪಮಾನದಿಂದ ಹವಳಗಳು ಪಾಚಿಯನ್ನು ಬಿಟ್ಟು ತೆರಳುತ್ತಿವೆ. ಇದರಿಂದ ಹವಳಗಳು ಅಶಕ್ತಗೊಳ್ಳುತ್ತಿದ್ದು, ತಮ್ಮ ಬಣ್ಣ ಕಳೆದು ಕೊಳ್ಳುತ್ತಿವೆ. ಇದು ಮುಂದುವರಿದು, ಹವಳದ ದಿಬ್ಬಗಳು ಕ್ರಮೇಣ ನಾಶವೂ ಆಗುತ್ತಿವೆ.  

ADVERTISEMENT

24 ವರ್ಷಗಳಲ್ಲಿ ಶೇ 50ರಷ್ಟು ನಾಶ: ಲಕ್ಷದ್ವೀಪದ ಇಂಥ ಹವಳದ ದಿಬ್ಬಗಳಲ್ಲಿ ಪ್ರಕೃತಿ ಸಂರಕ್ಷಣಾ ಪ್ರತಿಷ್ಠಾನವು 1998ರಿಂದ ಸುದೀರ್ಘ ಕಾಲ ಅಧ್ಯಯನ ನಡೆಸಿತು. ಹವಾಮಾನ ಬದಲಾವಣೆಯಿಂದ ಸಮುದ್ರದ ಮೇಲ್ಮೈ ತಾಪಮಾನ ಏರುತ್ತಿರುವುದರಿಂದ 24 ವರ್ಷಗಳಲ್ಲಿ  ಅಲ್ಲಿ ಶೇ 50ರಷ್ಟು ಹವಳದ ದಿಬ್ಬಗಳು ನಾಶವಾಗಿವೆ ಎಂದು ಅಧ್ಯಯನ ವರದಿ ಉಲ್ಲೇಖಿಸಿದೆ. ಈ ಅವಧಿಯಲ್ಲಿ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಿ, ಹವಳವು ಹೆಚ್ಚಿನ ಉಷ್ಣಾಂಶದ ಎಷ್ಟು ಅಲೆಗಳಿಗೆ ತೆರೆದುಕೊಂಡಿದೆ ಮತ್ತು ಅದರಿಂದ ಅದರ ಸಂರಚನೆಯಲ್ಲಿ ಏನೇನು ಬದಲಾವಣೆಗಳು ಘಟಿಸಿವೆ ಎನ್ನುವುದನ್ನು ಅಧ್ಯಯನ ಮಾಡಲಾಗಿದೆ.

ಅವಸಾನದ ಅಂಚಿನಲ್ಲಿರುವ ದಿಬ್ಬಗಳನ್ನು ಮತ್ತು ಅವುಗಳ ಪುನಶ್ಚೇತನಗೊಳ್ಳುವ ಸಾಮರ್ಥ್ಯವನ್ನು ಗುರುತಿಸುವುದು ಅಧ್ಯಯನದ ಮುಖ್ಯ ಉದ್ದೇಶವಾಗಿತ್ತು. ಆದಾಗ್ಯೂ, ತಾಪಮಾನದ ಏರಿಕೆಗೆ ಹವಳದ ದಿಬ್ಬಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದು ಅವು ಅಲೆಗಳಿಗೆ ಒಡ್ಡಿಕೊಂಡ ರೀತಿ ಮತ್ತು ಅವು ಎಷ್ಟು ಆಳದಲ್ಲಿವೆ ಎನ್ನುವಂಥ ಸ್ಥಳೀಯ ಅಂಶಗಳನ್ನು ಆಧರಿಸಿರುತ್ತದೆ ಎಂದು ವರದಿ ಹೇಳಿದೆ. 

ಒಮ್ಮೆ ಹೆಚ್ಚಿನ ಉಷ್ಣಾಂಶದ ಅಲೆಗಳ ಹೊಡೆತಕ್ಕೆ ಸಿಲುಕಿ ಬಿಳಿಚಿಕೊಂಡ ಹವಳದ ದಿಬ್ಬವು ಪುನಶ್ಚೇತನ ಹೊಂದಲು ಅದಕ್ಕೆ ಒಂದಿಷ್ಟು ಕಾಲಾವಕಾಶ ಬೇಕಾಗುತ್ತದೆ; ಆರು ವರ್ಷಗಳ ನಂತರ ಅದರ ಚೇತರಿಕೆಯ ಲಕ್ಷಣಗಳು ವೇಗ ಪಡೆದುಕೊಳ್ಳುತ್ತವೆ. ತಾಪಮಾನ ಬದಲಾವಣೆಯ ಪರಿಣಾಮಗಳಿಗೆ ಈ ಜೀವಿಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದು ಅವುಗಳ ಜೈವಿಕ ಗುಣಲಕ್ಷಣಗಳನ್ನು ಆಧರಿಸಿರುತ್ತದೆ ಎಂದು ವರದಿ ಹೇಳಿದೆ.

ಸಮುದ್ರ ಜೀವಿಗಳಿಗೆ ಸಂಚಕಾರ: ದಿಬ್ಬಗಳು ನಾಶವಾದರೆ, ಹವಳಗಳು ಮಾತ್ರ ನಾಶವಾಗುವುದಿಲ್ಲ. ಅವುಗಳಲ್ಲಿ ಆಶ್ರಯ ಪಡೆದಿರುವ ಅನೇಕ ರೀತಿಯ ಸಮುದ್ರಜೀವಿಗಳೂ ಅವಸಾನ ಹೊಂದುತ್ತವೆ. ಲಕ್ಷದ್ವೀಪದ ಇತರೆ ಸ್ಥಳಗಳಲ್ಲಿ ಮತ್ತು ಬೇರೆ ಬೇರೆ ಪ್ರದೇಶಗಳಲ್ಲಿಯೂ ಭವಿಷ್ಯದ ಜಾಗತಿಕ ತಾಪಮಾನ ಹೆಚ್ಚಳದ ಹೊಡೆತಗಳಿಗೆ ಹವಳದ ದಿಬ್ಬಗಳು ಹೇಗೆ ಪ್ರತಿಸ್ಪಂದಿಸುತ್ತವೆ, ಹೇಗೆ ಬದುಕುಳಿಯುತ್ತವೆ ಎನ್ನುವುದರ ಬಗ್ಗೆ ಒಂದು ಚೌಕಟ್ಟು ರೂಪಿಸುವ ದೃಷ್ಟಿಯಿಂದ ಈ ಅಧ್ಯಯನದ ಫಲಿತಾಂಶವು ಮಹತ್ವಪೂರ್ಣವಾದುದಾಗಿದೆ. ಅವು ಎಷ್ಟು ಆಳದಲ್ಲಿವೆ, ಅವುಗಳ ಪುನಶ್ಚೇತನ ದರ ಎಷ್ಟು ಮತ್ತು ಅವು ಎಂತಹ ಅಲೆಗಳಿಗೆ ಗುರಿಯಾಗಿವೆ ಎನ್ನುವುದರ ಆಧಾರದಲ್ಲಿ ಭಿನ್ನ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಎಂದು ವರದಿ ಹೇಳಿದೆ. 

ಹವಳಗಳ ದಿಬ್ಬಗಳು ನಾಶವಾಗುವುದನ್ನು ತಡೆಯಲು ನಿರ್ದಿಷ್ಟ ‍ಪ್ರದೇಶ ಆಧಾರಿತವಾದ ಕ್ರಮಗಳಿಂದ ಮಾತ್ರವೇ ಸಾಧ್ಯವಿಲ್ಲ; ಸೂಕ್ತ ನೀತಿ ನಿಯಮ ರೂಪಿಸುವುದು, ಬೃಹತ್ ಮಟ್ಟದಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವುದು ಇಂದಿನ ತುರ್ತಾಗಿದೆ ಎಂದು ವರದಿ ಹೇಳಿದೆ.

ವಿಜ್ಞಾನಿಗಳ ಎಚ್ಚರಿಕೆ: ತಾಪಮಾನ ಬದಲಾವಣೆ, ಸಮುದ್ರದ ನೀರಿನಲ್ಲಿ ಮನುಷ್ಯನ ಅತಿಯಾದ ಹಸ್ತಕ್ಷೇಪ, ಎಲ್‌ನಿನೊ ‍ಪರಿಣಾಮದಿಂದ ಹವಳದ ದಿಬ್ಬಗಳ ಸಾವು ಸಂಭವಿಸುತ್ತಿದೆ. ಜಾಗತಿಕ ಮಟ್ಟದಲ್ಲಿ, 30 ವರ್ಷಗಳಲ್ಲಿ ಅನೇಕ ಹವಳದ ದಿಬ್ಬಗಳು ಕಾಣೆಯಾಗಿವೆ. ಮುಂದಿನ ದಿನಗಳಲ್ಲಿಯೂ ಪರಿಸ್ಥಿತಿ ಹೀಗೇ ಮುಂದುವರಿದರೆ, 2050ರ ಹೊತ್ತಿಗೆ ಮುಕ್ಕಾಲು ಭಾಗದಷ್ಟು ದಿಬ್ಬಗಳು ನಾಮಾವಶೇಷವಾಗುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಹವಳಗಳು ಮತ್ತು ಹವಳದ ದಿಬ್ಬಗಳಿಗೆ ಪ್ರಕೃತಿಯ ಸಮತೋಲನದ ದೃಷ್ಟಿಯಿಂದ ಮಹತ್ವದ ಸ್ಥಾನವಿದೆ. ಸಮುದ್ರದಲ್ಲಿ ಬಲವಾದ ಅಲೆಗಳು, ಬಿರುಗಾಳಿ ಸೃಷ್ಟಿಯಾದಾಗ, ಅವುಗಳ ತರಂಗ ಶಕ್ತಿಯನ್ನು ಹವಳದ ದಿಬ್ಬಗಳು ತಡೆದು, ‌ಅವುಗಳ ತೀವ್ರತೆಯನ್ನು ಕಡಿಮೆ ಮಾಡುತ್ತವೆ. ಸಮುದ್ರ ತೀರ ಸವಕಳಿ ಆಗದಂತೆ ತಡೆಯುತ್ತವೆ. ಪರೋಕ್ಷವಾಗಿ ಕೋಟ್ಯಂತರ ಜನರ ಜೀವ ಮತ್ತು ಜೀವನೋಪಾಯಕ್ಕೆ ನೆರವಾಗುತ್ತಿದ್ದು, ಪ್ರವಾಸೋದ್ಯಮವೂ ಸೇರಿದಂತೆ ವಿವಿಧ ಉದ್ದಿಮೆಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟಿಗೆ ಕಾರಣವಾಗುತ್ತಿವೆ. ಇವುಗಳ ಅವಸಾನವು ಮನುಷ್ಯನಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದೆ. 

ಲಕ್ಷದ್ವೀಪವೇ ಏಕೆ?

ಹಿಂದೂ ಮಹಾಸಾಗರದ ಉತ್ತರಕ್ಕಿರುವ ಲಕ್ಷದ್ವೀಪ ದ್ವೀಪ ಸಮೂಹಗಳಲ್ಲಿ 12 ಹವಳಗಳ ದಿಬ್ಬಗಳಿವೆ. ಸಮೂಹವು 10 ದ್ವೀಪಗಳನ್ನು ಒಳಗೊಂಡಿದೆ. 2011ರ ಜನಗಣತಿಯ ಪ್ರಕಾರ, ಜಾಗತಿಕವಾಗಿ ಅತ್ಯಂತ ಹೆಚ್ಚು ಸಾಂದ್ರತೆ ಹೊಂದಿರುವ ಹವಳಗಳ ದಿಬ್ಬಗಳು ಇಲ್ಲಿವೆ. ಅಧ್ಯಯನದ ಅವಧಿಯಲ್ಲಿ ಎಲ್‌ನಿನೊ ಪರಿಣಾಮದಿಂದಾಗಿ ಮೂರು ಬಾರಿ ಇಲ್ಲಿನ ಸಾಗರದ ಮೇಲ್ಮೆ ಉಷ್ಣತೆಯಲ್ಲಿ ಹೆಚ್ಚಳ ಕಂಡುಬಂದಿತ್ತು (1998, 2010 ಮತ್ತು 2016).

ಹವಳ ದಿಬ್ಬಗಳ ಮೇಲ್ವಿಚಾರಣೆಗಾಗಿ ಅಧ್ಯಯನಕಾರರು ಕವರಟ್ಟಿ, ಕಡಮಟ್‌ ಮತ್ತು ಅಗಟ್ಟಿ ಎಂಬ ಮೂರು ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಮಾದರಿ ಸಂಗ್ರಹಕ್ಕಾಗಿ ಹೆಚ್ಚು ಆಳದಲ್ಲಿರುವ (16 ಮೀಟರ್‌) ಹವಳ ದಿಬ್ಬ ಮತ್ತು ಕಡಿಮೆ ಆಳದಲ್ಲಿರುವ (8 ಮೀಟರ್‌) ಹವಳ ದಿಬ್ಬಗಳ ಪ್ರದೇಶಗಳನ್ನು ಆಯ್ಕೆ ಮಾಡಿದ್ದರು. 

ಅಧ್ಯಯನ ಹೇಳುವುದೇನು?

  • ಎಲ್ಲ ಪ್ರಭೇದಗಳೂ ಆಳ ಸಮುದ್ರದಲ್ಲಿ ಆಶ್ರಯ ಪಡೆಯುವುದಿಲ್ಲ. ಪೊರೈಟ್ಸ್‌ ಮತ್ತು ಪವೊನ ಎಂಬ ಹೆಸರಿನ ಎರಡು ತಳಿಗಳನ್ನು ಬಿಟ್ಟು ಉಳಿದೆಲ್ಲ ಹವಳಗಳು ಕಡಿಮೆ ಆಳದಲ್ಲಿವೆ

  • ಬಿಳಿಚುವಿಕೆ ಪ್ರಕ್ರಿಯೆ ನಂತರ ಹವಳಗಳು ಸತ್ತು, ಮತ್ತೆ ಹೊಸ ಹವಳಗಳು ಹುಟ್ಟಲು ಗಣನೀಯ ಪ್ರಮಾಣದ ಸಮಯ ಅವಶ್ಯಕ

  • ಮೂರು ಬಿಳಿಚುವಿಕೆ ಪ್ರಕ್ರಿಯೆಗಳ ನಂತರ ಅಧ್ಯಯನ ನಡೆಸಲಾದ ಪ್ರದೇಶದಲ್ಲಿ ಹವಳಗಳ ಪುನಶ್ಚೇತನ ದರ ಶೇ 2ರಿಂದ ಶೇ 5ರಷ್ಟಿತ್ತು

  • 47 ಹವಳಗಳ ಪ್ರಭೇದಗಳ ಪೈಕಿ 29 ಪ್ರಭೇದಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು

  • ಪ್ರತಿಯೊಂದು ಹವಳ ದಿಬ್ಬದ ಮೇಲೆ ಹೆಚ್ಚು ಉಷ್ಣಾಂಶ ಹೊಂದಿರುವ ಸಾಗರದ ಅಲೆಗಳ ಪರಿಣಾಮ ಭಿನ್ನವಾಗಿತ್ತು. ನೈರುತ್ಯ ಮಾರುತದ ವೇಗವು ಪಶ್ಚಿಮ ದಿಕ್ಕಿನಲ್ಲಿ ಹೆಚ್ಚು ಪ್ರಬಲವಾಗಿದ್ದು, ಪೂರ್ವ ದಿಕ್ಕಿನಲ್ಲಿ ಇದರ ಪ್ರಭಾವ ಕಡಿಮೆ ಇತ್ತು. ಹಾಗಾಗಿ, ಪಶ್ಚಿಮದಲ್ಲಿರುವ ಹವಳ ದಿಬ್ಬಗಳ ಮೇಲೆ ಹೆಚ್ಚು ಶಾಖದ ಅಲೆಗಳು ಪರಿಣಾಮ ಬೀರುತ್ತಿವೆ

  • 24 ವರ್ಷಗಳಲ್ಲಿ ಹವಳ ದಿಬ್ಬಗಳ ಪ್ರಮಾಣದಲ್ಲಿ ಶೇ 50ರಷ್ಟು ಕುಸಿತ ಕಂಡರೂ ಪ್ರತಿ ಬಿಳಿಚುವಿಕೆ ಪ್ರಕ್ರಿಯೆ ನಂತರ ಹವಳಗಳ ಸಾಮೂಹಿಕ ಸಾವಿನ ಪ್ರಮಾಣ ಕುಂಠಿತವಾಗಿದೆ

  • 2016ರ ಹೆಚ್ಚು ಉಷ್ಣತೆಯ ಅಲೆಯ ಹೊಡೆತದ ನಂತರವೂ ಕವರಟ್ಟಿ, ಕಡಮಟ್‌ ಪ್ರದೇಶದಲ್ಲಿ ಹವಳಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ

  • ಒಂದು ಮತ್ತು ಇನ್ನೊಂದು ಬಿಳಿಚುವಿಕೆ ಪ್ರಕ್ರಿಯೆಯ ನಡುವಿನ ಅವಧಿ ಹೆಚ್ಚಿದಷ್ಟೂ ಹವಳಗಳ ಪುನಶ್ಚೇತನ ದರ ಹೆಚ್ಚಿರುತ್ತದೆ

  • ಅಲೆಗಳಿಗೆ ಒಡ್ಡಿಕೊಳ್ಳುವಿಕೆ ಮತ್ತು ಸಮುದ್ರದ ಆಳವು ಪುನಶ್ಚೇತನದ ಒಟ್ಟಾರೆ ಪ್ರವೃತ್ತಿ ಮೇಲೆ ಪರಿಣಾಮ ಬೀರುತ್ತದೆ. ಮೊದಲ (1998) ಬಿಳಿಚುವಿಕೆಯ ನಂತರ ಸಾಗರದ ಹೆಚ್ಚು ಆಳದ ಪ್ರದೇಶದಲ್ಲಿ ಹವಳ ದಿಬ್ಬಗಳು ಶೇ 18.7ರಷ್ಟು ಪ್ರಮಾಣದಲ್ಲಿ ಪುನಶ್ಚೇತನಗೊಂಡಿದ್ದವು. ಕಡಿಮೆ ಆಳದ ಪ್ರದೇಶದಲ್ಲಿ ಈ ಪ್ರಮಾಣ ಶೇ 42.4ರಷ್ಟಿತ್ತು

  • ಕೆಲವು ಪ್ರಭೇದಗಳ ಹವಳಗಳು ಬಹುಬೇಗ ಪುನಶ್ಚೇತನಗೊಂಡರೆ, ಇನ್ನೂ ಕೆಲವು ಹವಳಗಳ ಪುನಶ್ಚೇತನ ಪ್ರಕ್ರಿಯೆ ನಿಧಾನವಾಗಿದೆ

ಆಧಾರ: ‘ಡೈವರ್ಸಿಟಿ ಆ್ಯಂಡ್ ಡಿಸ್ಟ್ರಿಬ್ಯೂಷನ್’ ವರದಿ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.