ADVERTISEMENT

ಆಳ –ಅಗಲ: ಹಿಂದುಳಿದ ಪ್ರದೇಶ ತಲುಪದ ಸಿಎಸ್‌ಆರ್

ಬಿ.ವಿ. ಶ್ರೀನಾಥ್
ಸೂರ್ಯನಾರಾಯಣ ವಿ.
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
ಕರ್ನಾಟಕವು ಕಂಪನಿಗಳಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಪಡೆಯುವ ರಾಜ್ಯಗಳ ಪಟ್ಟಿಯಲ್ಲಿ (2023–24ನೇ ಸಾಲಿನಲ್ಲಿ) ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ, ನಂತರದ ಸ್ಥಾನದಲ್ಲಿ ಗುಜರಾತ್ ಇವೆ. ಕಂಪನಿಗಳು ಸಿಎಸ್‌ಆರ್ ನಿಧಿಯನ್ನು ನೀಡುವಾಗ ಮುಂದುವರಿದ ರಾಜ್ಯಗಳತ್ತಲೇ ಹೆಚ್ಚು ಗಮನ ಹರಿಸುತ್ತಿವೆ; ನೆರವಿನ ಅಗತ್ಯ ಇರುವ ರಾಜ್ಯಗಳತ್ತ, ಹಿಂದುಳಿದ ಪ್ರದೇಶಗಳತ್ತ, ಸೂಕ್ಷ್ಮ ವಲಯಗಳತ್ತ ಚಿತ್ತ ಹರಿಸುತ್ತಿಲ್ಲ ಎನ್ನುವ ದೂರು ಇದೆ. ಅಂಕಿಅಂಶಗಳೂ ಅದನ್ನೇ ಹೇಳುತ್ತಿವೆ.

ಬೆಂಗಳೂರಿನ ರಸ್ತೆ ಗುಂಡಿಗಳು ಸೇರಿದಂತೆ ಬೆಂಗಳೂರಿನಲ್ಲಿ ಮೂಲಸೌಕರ್ಯದ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ಕೆಲವು ಉದ್ಯಮಿಗಳು ಬಹಿರಂಗವಾಗಿಯೇ ಆಕ್ಷೇಪಿಸಿದ್ದರು. ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ರಾಜ್ಯದ ಸಚಿವರು, ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್‌) ನಿಧಿಯಿಂದ ಮೂಲಸೌಕರ್ಯ ಅಭಿವೃದ್ಧಿ‍ಪಡಿಸಲಿ ಎಂದು ಪ್ರತಿಕ್ರಿಯಿಸಿದ್ದರು. ಈ ವಿದ್ಯಮಾನದಿಂದ ಕಂಪನಿಗಳು ನೀಡುವ ಸಿಎಸ್‌ಆರ್ ನಿಧಿಯು ಯಾವ ವಲಯಗಳಿಗೆ ಹೆಚ್ಚು ವೆಚ್ಚವಾಗುತ್ತಿದೆ ಎನ್ನುವ ಪ್ರಶ್ನೆಗಳೂ ಹುಟ್ಟಿಕೊಂಡಿದ್ದವು.     

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಸಿಎಸ್‌ಆರ್ ನಿಧಿ ಹೆಚ್ಚುತ್ತಲೇ ಸಾಗುತ್ತಿದೆ. 2023–24ನೇ ಸಾಲಿನಲ್ಲಿ ಈ ಹಣದಲ್ಲಿ ದೇಶದಾದ್ಯಂತ 59,634 ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪ್ರತಿ ಯೋಜನೆಯ ಸರಾಸರಿ ವೆಚ್ಚ ₹58.5 ಲಕ್ಷ. ಅಗ್ರ 10 ಕಂಪನಿಗಳನ್ನು ಹೊರತುಪಡಿಸಿದರೆ, ಉಳಿದ ಕಂಪನಿಗಳು ಸರಾಸರಿಯಾಗಿ ತಲಾ ₹1.07 ಕೋಟಿ ಕೊಡುಗೆ ನೀಡಿವೆ. ನಿಧಿಯಲ್ಲಿ ಶೇ 60ರಷ್ಟು ಹಣವನ್ನು ವಿವಿಧ ವಲಯಗಳಲ್ಲಿ ಮೂಲಸೌಕರ್ಯ ವೃದ್ಧಿಗೆ ಬಳಸಲಾಗಿದೆ.

ಏನಿದು ಸಿಎಸ್‌ಆರ್ ನಿಧಿ?

ಕಂಪನಿಗಳ ಕಾಯ್ದೆ–2013ರ 135ನೇ ಸೆಕ್ಷನ್ ಪ್ರಕಾರ, ₹500 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳು ಅಥವಾ ₹1,000 ಕೋಟಿ ವಹಿವಾಟು ನಡೆಸುವ ಕಂಪನಿಗಳು ಅಥವಾ ಹಣಕಾಸು ವರ್ಷದಲ್ಲಿ ₹5 ಕೋಟಿ ನಿವ್ವಳ ಲಾಭ ಮಾಡಿದ ಕಂಪನಿಗಳು ತಮ್ಮ ಮೂರು ವರ್ಷಗಳ ಸರಾಸರಿ ಲಾಭಾಂಶದಲ್ಲಿ ಕನಿಷ್ಠ ಶೇ 2ರಷ್ಟು ಮೊತ್ತವನ್ನು ಸಿಎಸ್‌ಆರ್ ಚಟುವಟಿಕೆಗಳಿಗೆ ನೀಡುವುದು ಕಡ್ಡಾಯವಾಗಿದೆ. ಸಿಎಸ್‌ಆರ್ ಹಣವನ್ನು ನೀಡಬಹುದಾದ 24 ಅಭಿವೃದ್ಧಿ ವಲಯಗಳನ್ನೂ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. 

ADVERTISEMENT

ಪ್ರಾದೇಶಿಕ ವ್ಯತ್ಯಾಸ

2014ರಲ್ಲಿ ಕಂಪನಿಗಳು ಸಿಎಸ್‌ಆರ್ ನಿಧಿಗೆ ₹10 ಸಾವಿರ ಕೋಟಿ ಕೊಡುಗೆ ನೀಡಿದ್ದವು. 2023–24ರಲ್ಲಿ ಈ ಮೊತ್ತವು ದಾಖಲೆಯ ₹34,909 ಕೋಟಿಗೆ ಏರಿದ್ದು, ಹಿಂದಿನ ವರ್ಷಕ್ಕಿಂತ (2022–23) ಶೇ 13ರಷ್ಟು ಹೆಚ್ಚಳವಾಗಿದೆ. ಆದರೆ, ಹೆಚ್ಚು ಉದ್ದಿಮೆಗಳು ಇರುವ, ಆರ್ಥಿಕ ಅಭಿವೃದ್ಧಿಯಲ್ಲಿ ಮುಂದೆ ಇರುವ ಆರು ರಾಜ್ಯಗಳಿಗೆ ಶೇ 60ರಷ್ಟು  ಸಿಎಸ್‌ಆರ್ ನಿಧಿ ಸಂದಾಯವಾಗುತ್ತಿದೆ. ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು, ದೆಹಲಿ ರಾಜ್ಯಗಳಿಗೆ ಹೆಚ್ಚು ಸಿಎಸ್‌ಆರ್ ನಿಧಿ ಸಿಕ್ಕಿದೆ. ಹಿಂದುಳಿದ ಮಿಜೋರಾಂ (₹4.48 ಕೋಟಿ), ಮೇಘಾಲಯ (₹38 ಕೋಟಿ), ಡಿಯು ಮತ್ತು ದಮನ್‌ (₹13 ಕೋಟಿ), ತ್ರಿಪುರಾ (₹9.45 ಕೋಟಿ), ಪುದುಚೇರಿ (₹32.68 ಕೋಟಿ), ನಾಗಾಲ್ಯಾಂಡ್‌ (₹15.41 ಕೋಟಿ) ರಾಜ್ಯಗಳಿಗೆ ಕಡಿಮೆ ಕೊಡುಗೆ ಸಂದಾಯವಾಗಿದೆ. 

ಕರ್ನಾಟಕದಲ್ಲಿಯೂ ಇದೇ ಪ್ರವೃತ್ತಿ ಕಂಡುಬಂದಿದೆ. ಗದಗ (₹4.15 ಕೋಟಿ), ಕೊಪ್ಪಳ (₹10.76 ಕೋಟಿ), ಬೀದರ್‌ನಂತಹ (₹13 ಕೋಟಿ) ಹಿಂದುಳಿದ ಜಿಲ್ಲೆಗಳಿಗಿಂತ ಮೈಸೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆಗಳಿಗೆ ಹೆಚ್ಚು ಸಿಎಸ್‌ಆರ್ ನಿಧಿ ಸಿಕ್ಕಿದೆ. 

ಕಂಪನಿಗಳು, ತಾವು ಕಾರ್ಯಾಚರಿಸುತ್ತಿರುವ ರಾಜ್ಯ/ಪ್ರದೇಶದಲ್ಲಿಯೇ ಹೆಚ್ಚು ಹಣ ವೆಚ್ಚ ಮಾಡುತ್ತಿವೆ. ನಿಯಮಗಳ ಪ್ರಕಾರ ಇದು ಕಡ್ಡಾಯವೇನಲ್ಲ. ಹಾಗಾಗಿ ಹಿಂದುಳಿದಿರುವ ರಾಜ್ಯ, ಜಿಲ್ಲೆ, ಪ್ರದೇಶಗಳಿಗೆ ಹೆಚ್ಚು ಹಣವನ್ನು ಕೊಡುಗೆಯಾಗಿ ನೀಡಬೇಕು ಎಂದು ಅಧ್ಯಯನಗಳು ಶಿಫಾರಸು ಮಾಡಿವೆ.      

ವಲಯವಾರು ಕೊಡುಗೆಯನ್ನು ಗಮನಿಸಿದರೆ, ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ಸುಸ್ಥಿರತೆ, ಗ್ರಾಮೀಣಾಭಿವೃದ್ಧಿ ಮತ್ತು ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಆದರೆ, ಹಿರಿಯ ನಾಗರಿಕರ ಯೋಗಕ್ಷೇಮ, ಕೊಳೆಗೇರಿ ಅಭಿವೃದ್ಧಿ, ಲಿಂಗ ಸಮಾನತೆಯಂಥ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ.

ಶಿಕ್ಷಣ, ಆರೋಗ್ಯ, ಬಡತನ ನಿವಾರಣೆಗೆ ಒತ್ತು

ಪ್ರತಿ ವರ್ಷ ಕಂಪನಿಗಳು ತಮ್ಮ ಸಿಎಸ್‌ಆರ್‌ ಚಟುವಟಿಕೆಯಲ್ಲಿ ಶಿಕ್ಷಣ, ಅಂಗವಿಕಲರಿಗೆ ನೆರವು ಮತ್ತು ಜೀವನೋಪಾಯಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿವೆ. 2023–24ರಲ್ಲಿ ಈ ಉದ್ದೇಶಕ್ಕೆ ವ್ಯಯಿಸಿದ ಮೊತ್ತ ₹16,288 ಕೋಟಿ. ಕರ್ನಾಟಕದಲ್ಲಿ ಈ ಉದ್ದೇಶಕ್ಕೆ ₹1,162 ಕೋಟಿ ಬಳಸಲಾಗಿದೆ. 

ಆರೋಗ್ಯ, ಹಸಿವು–ಬಡತನ ನಿವಾರಣೆ, ಶುದ್ಧ ಕುಡಿಯುವ ನೀರು, ಅಪೌಷ್ಟಿಕತೆ ನಿವಾರಣೆ ಮತ್ತು ಸ್ವಚ್ಛತೆಗೆ ದೇಶದಲ್ಲಿ ₹9,087 ಕೋಟಿ ಖರ್ಚು ಮಾಡಲಾಗಿದೆ. ರಾಜ್ಯದಲ್ಲಿ ಈ ಮೊತ್ತ ₹428 ಕೋಟಿ.

ಪ‍ರಿಸರ, ಪ್ರಾಣಿಗಳು ಮತ್ತು ಸಂಪನ್ಮೂಲಗಳ ಸಂರಕ್ಷಣೆಗಾಗಿ ದೇಶದಲ್ಲಿ ₹3,459 ಕೋಟಿಯಷ್ಟು ಖರ್ಚು ಮಾಡಲಾಗಿದೆ. ಗ್ರಾಮೀಣ ಅಭಿವೃದ್ಧಿಗೆ ₹2,408 ಕೋಟಿ, ಲಿಂಗಸಮಾನತೆ, ಮಹಿಳಾ ಸಬಲೀಕರಣ, ವೃದ್ಧಾಶ್ರಮಗಳ ನೆರವಿಗಾಗಿ ₹1,092 ಕೋಟಿಯಷ್ಟು ಹಣವನ್ನು ಬಳಸಲಾಗಿದೆ. ಪಾರಂಪರಿಕ ಕಲೆ ಮತ್ತು ಸಂಸ್ಕೃತಿಗಾಗಿ ₹704 ಕೋಟಿ ಖರ್ಚು ಮಾಡಲಾಗಿದೆ. 

ಆಧಾರ: ನ್ಯಾಷನಲ್ ಸಿಎಸ್‌ಆರ್ ಪೋರ್ಟಲ್, ಭಾರತ್ ಸಿಎಸ್‌ಆರ್ ಪರ್ಫಾರ್ಮೆನ್ಸ್ ರಿಪೋರ್ಟ್ (2018–2023) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.