ರಾಜ್ಯದಲ್ಲಿ ಕೆಲವು ತಿಂಗಳುಗಳಿಂದೀಚೆಗೆ ತೆಂಗಿನಕಾಯಿ, ಕೊಬ್ಬರಿ, ಕೊಬ್ಬರಿ ಎಣ್ಣೆ ಸೇರಿದಂತೆ ತೆಂಗಿನಕಾಯಿ ಉತ್ಪನ್ನಗಳ ಬೆಲೆ ಗಗನಮುಖಿಯಾಗಿದೆ. ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಮತ್ತು ಕೊಬ್ಬರಿ ಬೆಲೆಯೂ ದಾಖಲೆ ಮಟ್ಟಕ್ಕೆ ತಲುಪಿದೆ. ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಉಂಡೆ ಕೊಬ್ಬರಿ ಕ್ವಿಂಟಲ್‌ಗೆ ₹31,606ಕ್ಕೆ ಮಾರಾಟವಾಗಿದೆ. ಜೂನ್ 27ರಂದು ಹಾಸನ ಜಿಲ್ಲೆಯ ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಲ್ ಉಂಡೆ ಕೊಬ್ಬರಿ ಧಾರಣೆ ₹30,508 ತಲುಪಿತ್ತು (ಮಂಗಳವಾರ ಅದು ₹29,090ಕ್ಕೆ ಇಳಿದಿದೆ). ರಾಜ್ಯದಾದ್ಯಂತ ಒಂದು ಕೆ.ಜಿ ತೆಂಗಿನಕಾಯಿಗೆ ₹50ರಿಂದ ₹80ರವರೆಗೂ ದರ ಇದೆ. ಕೊಬ್ಬರಿ ಎಣ್ಣೆಯ ಬೆಲೆಯಲ್ಲೂ ಹೆಚ್ಚಳವಾಗಿದ್ದು, ₹300–₹350ರ ಆಸುಪಾಸಿನಲ್ಲಿದ್ದ ಲೀಟರ್ ಎಣ್ಣೆಯ ಬೆಲೆ ₹450ರಿಂದ ₹500ರವೆಗೂ ಏರಿಕೆ ಕಂಡಿದೆ.
ಮಾರುಕಟ್ಟೆಯಲ್ಲಿ ತೆಂಗಿನಕಾಯಿ, ಕೊಬ್ಬರಿಗೆ ಬೇಡಿಕೆ ಇರುವುದರಿಂದ ತೆಂಗು ಬೆಳೆಯುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಆದರೆ, ಇಳುವರಿ ಕಡಿಮೆ ಇರುವುದರಿಂದ ಬೆಲೆ ಹೆಚ್ಚಳದ ಲಾಭ ದೊಡ್ಡ ಮಟ್ಟದಲ್ಲಿ ಬೆಳೆಗಾರರಿಗೆ ಸಿಗುತ್ತಿಲ್ಲ.
‘ಕೊಬ್ಬರಿಯನ್ನು ಸಂಗ್ರಹಿಸಿ ಇಟ್ಟುಕೊಂಡಿರುವ ಮಧ್ಯವರ್ತಿಗಳು, ನಾಫೆಡ್‌ಗೆ ಇದರ ಲಾಭ ಸಿಗುವಂತಾಗಿದೆ. ರೈತರಿಗೆ ಇಳುವರಿಯಲ್ಲಿ ಆಗುವ ನಷ್ಟ ಬರುವ ಲಾಭದಲ್ಲಿ ಸರಿದೂಗುತ್ತಿದೆ’ ಎಂದು ಹೇಳುತ್ತಾರೆ ತೆಂಗು ಕೃಷಿಕರು.
ರಾಜ್ಯದಲ್ಲಿ 5.65 ಲಕ್ಷ ಹೆಕ್ಟೇರ್‌ಗೂ (14 ಸಾವಿರ ಎಕರೆ) ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಅಂದಾಜು ಎಂಟು ಲಕ್ಷಕ್ಕೂ ಹೆಚ್ಚು ಕೃಷಿಕರು ತೆಂಗು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ತುಮಕೂರು, ಹಾಸನ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ರೈತರು ತೆಂಗಿನಕಾಯಿ, ಕೊಬ್ಬರಿಗಿಂತ ಎಳನೀರು ಮಾರಾಟಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
ಶ್ರಾವಣ ಮಾಸ, ಗಣೇಶ ಚತುರ್ಥಿ, ದಸರಾ, ದೀಪಾವಳಿ... ಮುಂದೆ ಸಾಲು ಸಾಲು ಹಬ್ಬಗಳಿದ್ದು, ತೆಂಗಿನಕಾಯಿ ಉತ್ಪನ್ನಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ, ಇನ್ನಷ್ಟು ಸಮಯ ಬೆಲೆ ಹೀಗೆಯೇ ಏರುಮುಖವಾಗಿರಲಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲಿ ಕೊಬ್ಬರಿಗೆ ಬೇಡಿಕೆ ಇದ್ದು, ರಾಜ್ಯದ ವಿವಿಧ ಭಾಗಗಳಿಂದ ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಜಮ್ಮು–ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಿಗೆ ರವಾನೆಯಾಗುತ್ತಿದೆ
ಸಿಹಿ ತಿನಿಸು, ಅಡುಗೆಯಲ್ಲಿ ಕೊಬ್ಬರಿ ಎಣ್ಣೆಯ ಬಳಕೆ ಹೆಚ್ಚಾಗಿದೆ. ತಿಪಟೂರು ಭಾಗದ ಕೊಬ್ಬರಿಯಲ್ಲಿ ಎಣ್ಣೆ ಹಾಗೂ ಸಿಹಿ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಆಹಾರದಲ್ಲಿ ಹೆಚ್ಚು ಬಳಸುತ್ತಾರೆ.
ಆರೋಗ್ಯದ ದೃಷ್ಟಿಯಿಂದಲೂ ತೆಂಗಿನಕಾಯಿ, ಕೊಬ್ಬರಿ ಎಣ್ಣೆ ಬಳಕೆ ಹೆಚ್ಚಾಗಿದೆ
ತೆಂಗು ಇಳುವರಿ ಕುಸಿತದಿಂದ ಪೂರೈಕೆ ಕಡಿಮೆ, ಹೆಚ್ಚಾದ ಬೇಡಿಕೆ
ನೆರೆಯ ತಮಿಳುನಾಡು, ಕೇರಳ ರಾಜ್ಯದಲ್ಲೂ ಉತ್ಪಾದನೆ ಕಡಿಮೆಯಾಗಿದ್ದು, ರಾಜ್ಯದಿಂದ ಅಲ್ಲಿಗೆ ಪೂರೈಕೆಯಾಗುತ್ತಿದೆ
ಎಳನೀರಿಗೆ ಉತ್ತಮ ಬೆಲೆ ಇರುವುದರಿಂದ ರೈತರು ತೋಟದಲ್ಲೇ ಎಳನೀರು ಮಾರಾಟ ಮಾಡುತ್ತಿದ್ದಾರೆ. ದಲ್ಲಾಳಿಗಳು, ವ್ಯಾಪಾರಿಗಳು ಎಳನೀರನ್ನು ತೋಟದಲ್ಲೇ ₹30ರಿಂದ ₹40ಕ್ಕೆ ಖರೀದಿಸುತ್ತಾರೆ. ಇದರಿಂದ ತಕ್ಷಣಕ್ಕೆ ಹಣ ಸಿಗುತ್ತದೆ. ಕಾಯಿ ಬಲಿತು, ಅದನ್ನು ಕೊಬ್ಬರಿ ಮಾಡಲು ವರ್ಷ ಕಾಯಬೇಕು. ಮುಂಬೈ, ದೆಹಲಿ ಸೇರಿದಂತೆ ಮಹಾ ನಗರಗಳಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚುತ್ತಿದ್ದು, ಬೆಳೆಗಾರರು ಎಳನೀರು ಕಾಯಿಗಳ ಮಾರಾಟಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿ ಕಾಯಿಯ ಇಳುವರಿ ಕಡಿಮೆಯಾಗಿದೆ
ಈ ಬಾರಿ ತೆಂಗಿನಕಾಯಿಗೂ ಉತ್ತಮ ಬೆಲೆ ಇದೆ. ಒಂದು ದಪ್ಪ ಕಾಯಿ ₹50ರಿಂದ ₹80ರವರೆಗೂ ಮಾರಾಟವಾಗುತ್ತಿದೆ. ಕಾಯಿ ಕೊಬ್ಬರಿಯಾಗಲು ಒಂದು ವರ್ಷ ಕಾಯಬೇಕು. ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ತೆಂಗಿನಕಾಯಿಯನ್ನೇ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಕೊಬ್ಬರಿಗೆ ತೆಂಗಿನಕಾಯಿ ದಾಸ್ತಾನು ಮಾಡುವುದು ಕಡಿಮೆಯಾಗಿದೆ
ರೋಗ ಬಾಧೆಯೂ ತೆಂಗಿನ ಮರಗಳನ್ನು ಕಾಡುತ್ತಿದೆ. ಗರಿ ಒಣಗುವುದು, ಕಪ್ಪುಮೂತಿ ಹುಳು ಕಾಟದಿಂದ ಬೆಳೆ ಹಾಳಾಗುತ್ತಿರುವುದು ಇಳುವರಿ ಕಡಿಮೆಯಾಗುವುದಕ್ಕೆ ಕಾರಣವಾಗಿದೆ
ಅಡಿಕೆಯ ಬೆಲೆ ಹೆಚ್ಚುತ್ತಿರುವುದರಿಂದ ತೆಂಗಿನ ಬೆಳೆ ನಿರ್ವಹಣೆ ಕಡಿಮೆ ಮಾಡಿ, ಅಡಿಕೆ ಬೆಳೆಯತ್ತ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಹೊಸದಾಗಿ ತೆಂಗು ನೆಡುತ್ತಿಲ್ಲ. ನಿಧಾನವಾಗಿ ತೆಂಗಿನ ಜಾಗವನ್ನು ಅಡಿಕೆ ಬೆಳೆ ಆವರಿಸಿಕೊಳ್ಳುತ್ತಿರುವುದು ಕೂಡ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ
ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಈ ಹಿಂದೆ ಕೊಬ್ಬರಿ ಹರಾಜು ಪಾರದರ್ಶಕವಾಗಿ ನಡೆಯುತ್ತಿರಲಿಲ್ಲ. ಒಬ್ಬ ವರ್ತಕ ನಿಗದಿಪಡಿಸಿದ ಬೆಲೆಯಲ್ಲೇ ಇತರೆ ವರ್ತಕರು ಕೊಬ್ಬರಿ ಖರೀದಿಸುತ್ತಿದ್ದರು. ಇದನ್ನು ತಪ್ಪಿಸುವುದಕ್ಕಾಗಿ ಕೊಬ್ಬರಿ ಹರಾಜು ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹಿಂದೆ ವಾರಕ್ಕೆ ಮೂರು ದಿನ ಹರಾಜು ನಡೆಯುತ್ತಿದ್ದರೆ, ಈ ವರ್ಷದ ಮಾರ್ಚ್ ತಿಂಗಳಿಂದ ವಾರಕ್ಕೆ ಎರಡು ಬಾರಿ ಹರಾಜು ನಡೆಯುತ್ತಿದೆ. ಹಿಂದೆ ವರ್ತಕರು ನಿಗದಿಪಡಿಸಿದ ಬೆಲೆಗೆ ಎಲ್ಲರೂ ಖರೀದಿಸುತ್ತಿದ್ದರು. ಆದರೆ ಈಗ ಹರಾಜು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲಾಗಿದೆ. ಯಾರು ಬೇಕಾದರೂ ಮುಕ್ತವಾಗಿ ಹರಾಜಿನಲ್ಲಿ ಭಾಗವಹಿಸಬಹುದು. ಆನ್‌ಲೈನ್ ಮೂಲಕವೂ ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಕೊಬ್ಬರಿ ಖರೀದಿದಾರರು, ಬೇಡಿಕೆಗೆ ಅನುಗುಣವಾಗಿ ಬೆಲೆ ನಿಗದಿಪಡಿಸಿ ಖರೀದಿಸುತ್ತಾರೆ.
ರೈತರಿಗಿಲ್ಲ ಲಾಭ
ಬೆಲೆ ಹೆಚ್ಚಾಗಿದೆ. ಆದರೆ, ರೈತರ ಬಳಿ ತೆಂಗಿನಕಾಯಿ, ಕೊಬ್ಬರಿಯೇ ಇಲ್ಲದಾಗಿದೆ. ಬೆಲೆ ಏರಿಕೆಯ ಪ್ರಯೋಜನ ಬೆಳೆಗಾರರಿಗೆ ಸಿಗುತ್ತಿಲ್ಲ. ಬೆಲೆ ಕುಸಿತದಿಂದ ಕಂಗಾಲಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸಿತ್ತು. ಆಗ, ಸಿಕ್ಕಷ್ಟು ಸಿಗಲಿ ಎಂದು ರಾತ್ರಿಯಿಡೀ ಸರದಿಯಲ್ಲಿ ನಿಂತು ನೋಂದಣಿ ಮಾಡಿದ್ದೆವು. ನಂತರ ಅಷ್ಟೇ ಕಷ್ಟಪಟ್ಟು ಮಾರಾಟವನ್ನೂ ಮಾಡಿದ್ದೆವು. ಈಗ ಪಶ್ಚಾತ್ತಾಪ ಪಡುವಂತಾಗಿದೆ
– ವಿರೂಪಾಕ್ಷಪ್ಪ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ
ದಾಖಲೆ ಬೆಲೆ
ನನ್ನ 30 ವರ್ಷಗಳ ಕೊಬ್ಬರಿ ವ್ಯಾಪಾರದಲ್ಲಿ ಈ ಮಟ್ಟದಲ್ಲಿ ಬೆಲೆ ಏರಿಕೆ ನೋಡಿರಲಿಲ್ಲ. ಈ ಬಾರಿ ದಾಖಲೆ ಬರೆದಿದೆ. ಬೇಡಿಕೆಯಷ್ಟು ಆವಕ ಇಲ್ಲದೆ ಬೆಲೆ ಹೆಚ್ಚಳವಾಗಿದೆ. ರೈತರು ಹಂತ ಹಂತವಾಗಿ ಕೊಬ್ಬರಿಯನ್ನು ಮಾರುಕಟ್ಟೆಗೆ ತಂದರೆ ಧಾರಣೆ ಇದೇ ಮಟ್ಟದಲ್ಲಿ ಮುಂದುವರಿಯಬಹುದು. ಅವಸರವಾಗಿ ಎಲ್ಲರೂ ಒಟ್ಟಿಗೆ ತಂದರೆ ಬೆಲೆಯಲ್ಲಿ ಏರಿಳಿತ ಉಂಟಾಗಬಹುದು
– ಸುಧಾಕರ್, ವರ್ತಕ, ತಿಪಟೂರು, ತುಮಕೂರು ಜಿಲ್ಲೆ
ಶೇ 50ರಷ್ಟು ಇಳುವರಿ ಕುಸಿತ
ಹೊಂಬಾಳೆಯಲ್ಲಿ ಗುಳ್ಳು ನಿಲ್ಲುತ್ತಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಂತೆ ಕೀಟನಾಶಕ, ಗೊಬ್ಬರ, ನೀರು ಕೊಟ್ಟಿದ್ದೇವೆ. ಆದರೂ ಮರಗಳಲ್ಲಿ ಫಲ ಇಲ್ಲದಾಗಿದೆ. ಈ ವರ್ಷ ಶೇ 50ರಷ್ಟು ಇಳುವರಿ ಕುಸಿದಿದೆ. ಬೆಳೆ ಹೆಚ್ಚಿಲ್ಲದಿರುವುದರಿಂದ ಧಾರಣೆ ಜಾಸ್ತಿ ಇದ್ದರೂ ಲಾಭ ಸಿಕ್ಕಿಲ್ಲ
–ಲವಕುಮಾರ್, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
ಆಷಾಢ ಮಾಸದಲ್ಲೇ ಏರಿಕೆ
ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಕೊಬ್ಬರಿ ಬೆಲೆಯಲ್ಲಿ ಹೆಚ್ಚಳವಾಗುತಿತ್ತು. ಆದರೆ ಈ ಬಾರಿ ಶ್ರಾವಣ ಮಾಸಕ್ಕೂ ಮುನ್ನ ಆಷಾಢ ಮಾಸದಲ್ಲೇ ಉತ್ತಮ ಬೆಲೆ ಸಿಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಕೊಬ್ಬರಿಯನ್ನು ಮಾರುಕಟ್ಟೆಗೆ ತಂದರೆ ಬೆಲೆಯಲ್ಲಿ ಸ್ಥಿರತೆ ಕಾಣಬಹುದು
–ದೇವರಾಜು ತಿಮ್ಲಾಪುರ, ತೆಂಗು ಬೆಳೆಗಾರ, ತುಮಕೂರು ಜಿಲ್ಲೆ
ನೇರ ಮಾರಾಟದಲ್ಲಷ್ಟೇ ಲಾಭ
ದರ ಏರಿಕೆಯಾದ ಮೇಲೆ ರೈತರಿಗೆ, ತೆಂಗಿನಕಾಯಿಗೆ ಕೆ.ಜಿ.ಗೆ ₹70ರವರೆಗೆ ಬೆಲೆ ಸಿಗುತ್ತಿದೆ. ನೇರ ಮಾರಾಟ ಮಾಡಿದರೆ ಮಾತ್ರ ಈ ಲಾಭ ಸಿಗುತ್ತದೆ. ಆದರೆ, ತೋಟದಲ್ಲಿ ಇಳುವರಿ ಶೇ 40ರಷ್ಟು ಕಡಿಮೆ ಇದೆ. ಇಳುವರಿಯ ನಷ್ಟ ಈ ಲಾಭದಲ್ಲಿ ಸರಿದೂಗುತ್ತಿದೆ. ರೈತನಿಗೆ ನಿಜವಾಗಿ ಲಾಭ ಸಿಗಬೇಕಾದರೆ, ಇಳುವರಿ ಹೆಚ್ಚಿರಬೇಕು
–ರಮೇಶ್ ನೂಜಿಪ್ಪಾಡಿ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
ಸದ್ಯಕ್ಕೆ ಇಳಿಕೆಯಾಗದು
ತೆಂಗಿಗೆ ತಗುಲಿರುವ ರೋಗ ಇಳುವರಿ ಕುಂಠಿತಕ್ಕೆ ಕಾರಣವಾಗಿದೆ. ಜೊತೆಗೆ, ತೆಂಗಿನಕಾಯಿಯ ಉತ್ಪನ್ನಗಳು, ಕೊಬ್ಬರಿ ಎಣ್ಣೆ ಬಳಕೆ ಬಗ್ಗೆ ಜನರಲ್ಲಿ ಮೂಡಿರುವ ಜಾಗೃತಿ, ಎಳನೀರಿನ ಉಪ ಉತ್ಪನ್ನಗಳಾದ ಪಾನೀಯ, ಐಸ್‌ಕ್ರೀಮ್ ತಯಾರಿಕೆ ಹೆಚ್ಚಿದ ಮೇಲೆ ತೆಂಗಿನಕಾಯಿಯ ಬೆಲೆ ಏರುತ್ತಾ ಸಾಗಿದೆ. ದರ ಸದ್ಯದಲ್ಲಿ ಇಳಿಕೆಯಾಗುವ ಲಕ್ಷಣಗಳು ಇಲ್ಲ. ಕೆ.ಜಿ.ಗೆ ₹120ರವರೆಗೆ ತಲುಪಿದರೂ ಅಚ್ಚರಿಯಿಲ್ಲ
–ಯತೀಶ್ ಕೆ.ಎಸ್., ತೆಂಗು ರೈತ ಉತ್ಪಾದಕರ ಸಂಸ್ಥೆಯ ಮುಖ್ಯ ಸಲಹೆಗಾರ, ದಕ್ಷಿಣ ಕನ್ನಡ ಜಿಲ್ಲೆ
ತೆಂಗಿನಕಾಯಿ ಕೊಬ್ಬರಿ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ತೆಂಗಿನಕಾಯಿ ಚಿಪ್ಪಿಗೂ ಬೇಡಿಕೆ ಹೆಚ್ಚಾಗಿದೆ. ಇದ್ದಿಲು ತಯಾರಿಸಲು ಚಿಪ್ಪನ್ನು ಬಳಸಲಾಗುತ್ತದೆ. 2021– 22ನೇ ಸಾಲಿನಲ್ಲಿ ಟನ್‌ಗೆ ₹18 ಸಾವಿರ ಇದ್ದ ಚಿಪ್ಪಿನ ಬೆಲೆ ಇದೀಗ ₹30 ಸಾವಿರಕ್ಕೆ ಏರಿದೆ. ಅಧಿಕ ಲಾಭ ಕಡಿಮೆ ಶ್ರಮ ಇರುವುದರಿಂದ ಬೆಳೆಗಾರರು ಎಳನೀರು ಮಾರಾಟಕ್ಕೆ ಆದ್ಯತೆ ನೀಡುತ್ತಿದ್ದು ಉಂಡೆ ಕೊಬ್ಬರಿಯ ಜೊತೆಗೆ ಚಿಪ್ಪಿನ ಕೊರತೆಯೂ ಎದುರಾಗಿದೆ. ಬೇಡಿಕೆಯಷ್ಟು ಪ್ರಮಾಣದ ಚಿಪ್ಪು ದೊರೆಯದೇ ಇರುವುದರಿಂದ ಕಾರ್ಖಾನೆಗಳ ವರ್ತಕರು ಗಾಡಿಗಳಲ್ಲಿ ಬಂದು ‘ಚಿಪ್ಪು ಇದೆಯಾ’ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಶದಲ್ಲಿ ದಕ್ಷಿಣದ ರಾಜ್ಯಗಳು ತೆಂಗು ಬೆಳೆಯಲ್ಲಿ ಮುಂಚೂಣಿಯಲ್ಲಿವೆ. ಅದರಲ್ಲೂ ಕೇರಳ 2016ರಿಂದಲೂ ಮೊದಲ ಸ್ಥಾನ ಪಡೆದಿತ್ತು. ಆದರೆ ನಂತರ ಕರ್ನಾಟಕ ಮೊದಲ ಸ್ಥಾನಕ್ಕೇರಿದೆ. ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ (ಸಿಡಿಬಿ) ಅಂಕಿಅಂಶದ ಪ್ರಕಾರ 2021–22ರಲ್ಲಿ ಕೇರಳದಲ್ಲಿ 552 ಕೋಟಿ ತೆಂಗಿನಕಾಯಿ ಉತ್ಪಾದನೆಯಾದರೆ ಕರ್ನಾಟಕದಲ್ಲಿ 518 ಕೋಟಿ ಉತ್ಪಾದನೆಯಾಗಿದ್ದವು. ಆದರೆ 2022–23ರಲ್ಲಿ ಕರ್ನಾಟಕವು 595 ಕೋಟಿ ತೆಂಗಿನ ಕಾಯಿಗಳ ಉತ್ಪಾದನೆಯೊಂದಿಗೆ ಪ್ರಥಮ ಸ್ಥಾನಕ್ಕೇರಿದರೆ ಕೇರಳ (563 ಕೋಟಿ) ಎರಡನೆಯ ಸ್ಥಾನಕ್ಕೆ ಕುಸಿಯಿತು. 2023–24ರಲ್ಲಿ ಕೇರಳದ ಸ್ಥಾನ ಮತ್ತಷ್ಟು ಕುಸಿದಿದೆ. 615.1 ಕೋಟಿ ತೆಂಗಿನ ಕಾಯಿಗಳ ಉತ್ಪಾದನೆಯೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿಯೇ ಇದ್ದರೆ 609 ಕೋಟಿ ಉತ್ಪಾದನೆಯೊಂದಿಗೆ ತಮಿಳುನಾಡು ಎರಡನೇ ಸ್ಥಾನಕ್ಕೇರಿದೆ. ಕೇರಳ ಮೂರನೇ (562 ಕೋಟಿ) ಸ್ಥಾನಕ್ಕೆ ಕುಸಿದಿದೆ. ದೇಶದ ಉಂಡೆ ಕೊಬ್ಬರಿಯ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 72.8ರಷ್ಟು. ದೇಶದ ತೆಂಗು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 28.5. ರಾಜ್ಯದ ಒಟ್ಟು ಉತ್ಪಾದನೆಯಲ್ಲಿ ಶೇ 80ರಷ್ಟು ತುಮಕೂರು ಹಾಸನ ಮಂಡ್ಯ ಜಿಲ್ಲೆಗಳಲ್ಲಿಯೇ ಉತ್ಪಾದನೆಯಾಗುತ್ತಿದೆ. ಕೇರಳದಲ್ಲಿ ಕರ್ನಾಟಕಕ್ಕಿಂತಲೂ ಹೆಚ್ಚು ಭೂಮಿಯಲ್ಲಿ ತೆಂಗು ಬೆಳೆಯಲಾಗುತ್ತಿದ್ದರೂ ವಿವಿಧ ಕಾರಣಗಳಿಂದ ಅಲ್ಲಿಗಿಂತಲೂ ನಮ್ಮಲ್ಲಿ ಇಳುವರಿ ಹೆಚ್ಚಿದೆ.
ಮಾಹಿತಿ: ಪ್ರಜಾವಾಣಿ ಬ್ಯೂರೊಗಳು. ಆಧಾರ: ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.