ಅಂಗವಿಕಲರ ಹಕ್ಕುಗಳ ಬಗ್ಗೆ ದೇಶದಲ್ಲಿ ಕಾನೂನುಗಳಿವೆ. ಅವರ ಹಕ್ಕುಗಳ ರಕ್ಷಣೆಯ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಮಹತ್ವದ ತೀರ್ಪುಗಳನ್ನೂ ನೀಡಿದೆ. ಆದರೆ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಸಾರ್ವಜನಿಕ ಬದುಕಿನ ಬಹುತೇಕ ಎಲ್ಲ ವಲಯಗಳಲ್ಲೂ ಅಂಗವಿಕಲರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಮಹಿಳಾ ಅಂಗವಿಕಲರ ಪರಿಸ್ಥಿತಿಯಂತೂ ದಯನೀಯವಾಗಿದೆ. ಕೇಂದ್ರವು ಅನುದಾನ ನೀಡದಿರುವುದು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾಯ್ದೆ ಸಮರ್ಪಕವಾಗಿ ಜಾರಿಯಾಗಿಲ್ಲ. ನ್ಯಾಯಾಲಯದ ಆದೇಶ, ಕಾಯ್ದೆಯಲ್ಲಿನ ಆಶಯಗಳಿಗೂ ಅಂಗವಿಕಲರ ಪರಿಸ್ಥಿತಿಗೂ ಅಗಾಧವಾದ ಅಂತರವಿದೆ..
––––––
2011ರ ಜನಗಣತಿಯ ದತ್ತಾಂಶದ ಪ್ರಕಾರ, ದೇಶದಲ್ಲಿ ಅಂಗವಿಕಲರ ಪ್ರಮಾಣವು ಶೇ 2.21ರಷ್ಟಿದೆ. ಆದರೆ, ವಾಸ್ತವದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿದೆ ಎನ್ನಲಾಗಿದೆ. 2019ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತ, ತಜಿಕಿಸ್ತಾನ ಮತ್ತು ಲಾವೋಸ್‌ಗಳಲ್ಲಿ ನಡೆಸಿದ ಅಂಗವಿಕಲರ ಮಾದರಿ ಸಮೀಕ್ಷೆಯ ಪ್ರಕಾರ, ಭಾರತದ ಯುವಜನರಲ್ಲಿ ತೀವ್ರ ಅಂಗವೈಕಲ್ಯದ ಪ್ರಮಾಣವು ಶೇ 16ರಷ್ಟು ಇದೆ. ಅಂಗವಿಕಲರಿಗೆ ಸೂಕ್ತ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಮೊದಲು ಅವರ ನಿಖರ ಜನಸಂಖ್ಯೆ ತಿಳಿಯಬೇಕಿದೆ. ಆದರೆ, ಈವರೆಗೂ ಈ ದಿಸೆಯಲ್ಲಿ ಗಂಭೀರ ಪ್ರಯತ್ನಗಳೇ ನಡೆದಿಲ್ಲ.
ಅಂಗವೈಕಲ್ಯ ಆಧರಿತ ತಾರತಮ್ಯದ ವಿರುದ್ಧದ ರಕ್ಷಣೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಇದೇ ಮಾರ್ಚ್‌ನಲ್ಲಿ ತೀರ್ಪು ನೀಡಿದೆ. ಈ ಮೂಲಕ ಅದು ಅಂಗವಿಕಲ ಹಕ್ಕುಗಳ ಕಾಯ್ದೆ 2016ರ (ಆರ್‌ಪಿಡಬ್ಲ್ಯುಡಿ) ಆಶಯಗಳನ್ನು ಎತ್ತಿಹಿಡಿದಿದೆ. ಆದರೆ, ಸರ್ಕಾರದ ಕಾಯ್ದೆ, ನ್ಯಾಯಾಲಯಗಳ ತೀರ್ಪುಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ಲೋಪಗಳಾಗಿರುವ ಬಗ್ಗೆ ಹಲವು ಅಧ್ಯಯನಗಳು ಗಮನ ಸೆಳೆಯುತ್ತಿವೆ.
ಸಾಧ್ಯವಾಗದ ಸಮಾನ, ಮುಕ್ತ ಅವಕಾಶ: 2006ರ ವಿಶ್ವಸಂಸ್ಥೆಯ ಅಂಗವಿಕಲರ ಸಮಾವೇಶದ ನಿರ್ಣಯಗಳಿಗನುಸಾರ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಅಂಗವಿಕಲರ ಹಕ್ಕುಗಳ ಕಾಯ್ದೆ 1995ಕ್ಕೆ ತಿದ್ದುಪಡಿ ತರಲಾಗಿತ್ತು. 1995ರ ಕಾಯ್ದೆಯಲ್ಲಿ, ಅಂಗವಿಕಲರಿಗೆ ರಾಜ್ಯದ ಆರ್ಥಿಕ ಸ್ಥಿತಿಯ ಮಿತಿಯೊಳಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಹೇಳಲಾಗಿತ್ತು.
2016ರ ಅಂಗವಿಕಲರ ಹಕ್ಕುಗಳ ಕಾಯ್ದೆಯಲ್ಲಿ ಅದಕ್ಕೆ ತಿದ್ದುಪಡಿ ತಂದು, ‘ರಾಜ್ಯದ ಆರ್ಥಿಕ ಶಕ್ತಿಯ ಮಿತಿಯೊಳಗೆ’ ಎನ್ನುವ ಅಂಶವನ್ನು ತೆಗೆದುಹಾಕಲಾಗಿತ್ತು. ಅಂದರೆ, ಆರ್ಥಿಕ ಸ್ಥಿತಿಯ ಹೊರತಾಗಿಯೂ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಅಂಗವಿಕಲರಿಗೆ ಸಮಾಜದ ಎಲ್ಲ ವಲಯಗಳಲ್ಲೂ– ಸಂಚಾರ, ಕಟ್ಟಡಗಳ ಪ್ರವೇಶ, ಗ್ರಾಹಕ ಸೇವೆ ಸೇರಿದಂತೆ ಸಾಂಸ್ಥಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಸಮಾನ ಮತ್ತು ಮುಕ್ತ ಅವಕಾಶ ನೀಡಬೇಕು.
ಅಂಗವಿಕಲರ ಪಾಲ್ಗೊಳ್ಳುವಿಕೆಗೆ ಅಗತ್ಯವಾದ ಮೂಲಸೌಕರ್ಯವನ್ನು ಕಲ್ಪಿಸಲು 2022ರ ಗಡುವನ್ನೂ ನೀಡಲಾಗಿತ್ತು. ಈ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಬೇಕು ಎಂದು ಕಾಯ್ದೆ ಹೇಳಿತ್ತು. ಆದರೆ, ಈ ವಿಚಾರದಲ್ಲಿ ಆದ ಕೆಲಸ ಅತ್ಯಲ್ಪ. ಒಂದು ವರದಿಯ ಪ್ರಕಾರ, ದೇಶದಲ್ಲಿ ಶೇ 3ರಷ್ಟು ಕಟ್ಟಡಗಳು ಮಾತ್ರ ಅಂಗವಿಕಲ ಸ್ನೇಹಿ ಸೌಕರ್ಯಗಳನ್ನು ಹೊಂದಿವೆ. ಬಸ್, ರೈಲು ಮತ್ತು ಇತರ ಸಂಚಾರ ವ್ಯವಸ್ಥೆಗಳಲ್ಲಿ ಅಂಗವಿಕಲರಿಗಾಗಿ ಸೌಲಭ್ಯ ಕಲ್ಪಿಸಿದ ಅಂಕಿಅಂಶಗಳೇ ಲಭ್ಯವಿಲ್ಲ.
ಅಂಗವಿಕಲರ ಕಾಯ್ದೆ 2016ರ ಜಾರಿಯು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳ ಜವಾಬ್ದಾರಿಯಾಗಿದೆ. ಆದರೆ, ಬಹುತೇಕ ರಾಜ್ಯ ಸರ್ಕಾರಗಳು ಇಚ್ಛಾಶಕ್ತಿ ಮತ್ತು ಹಣಕಾಸಿನ ಕೊರತೆಯಿಂದಾಗಿ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. 2018ರವರೆಗೆ, ಮೂರನೇ ಒಂದರಷ್ಟು ರಾಜ್ಯಗಳು ಮಾತ್ರ ಕಾಯ್ದೆ ಜಾರಿಗೆ ಅಧಿಸೂಚನೆ ಹೊರಡಿಸಿದ್ದವು. ನಂತರ ಕೆಲವು ರಾಜ್ಯಗಳಲ್ಲಿ ನೆಪಮಾತ್ರಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಕಾಯ್ದೆಯ ಅಸಮರ್ಪಕ ಜಾರಿಗೆ ಕಾರಣಗಳು ಅನೇಕ. ಕಾಯ್ದೆ ಜಾರಿಯ ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸಿರುವ ಕೇಂದ್ರ ಸರ್ಕಾರವು ಅದಕ್ಕೆ ಅಗತ್ಯವಾದ ಸಂಪನ್ಮೂಲವನ್ನು ಒದಗಿಸುತ್ತಿಲ್ಲ ಎನ್ನುವ ಆರೋಪವಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರಗಳು ಸ್ಥಳೀಯ ಆಡಳಿತಗಳಿಗೆ ಸೂಕ್ತ ಅನುದಾನ ನೀಡುತ್ತಿಲ್ಲ. ಅಂಗವಿಕಲರ ಕಾಯ್ದೆ ಜಾರಿ ಸಂಬಂಧ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಣಕಾಸು ಹಂಚಿಕೆಯ ಸೂತ್ರವೇ ಸಿದ್ಧವಾಗಿಲ್ಲ.
ಕೇಂದ್ರದ ಅನುದಾನದಲ್ಲಿ ಕುಸಿತ: ಕೇಂದ್ರ ಸರ್ಕಾರವು ಕಾಯ್ದೆ ಜಾರಿಗೆ 2022–23ರಲ್ಲಿ ₹240.39 ಕೋಟಿ ಮೀಸಲಿಟ್ಟರೆ, 2023-24ರಲ್ಲಿ ಅದರ ಪ್ರಮಾಣ ₹150 ಕೋಟಿಗೆ ಇಳಿಯಿತು (ಶೇ 37.5ರಷ್ಟು ಕಡಿಮೆ). ಇದರಲ್ಲಿ 2024–25ನೇ ಸಾಲಿನಲ್ಲಿ ಮತ್ತೆ ಶೇ 9.78ರಷ್ಟು (₹135 ಕೋಟಿ) ಕಡಿಮೆ ಮಾಡಲಾಗಿದೆ. ಕೇಂದ್ರದ ಬಜೆಟ್‌ನಲ್ಲಿ ಅಂಗವಿಕಲರಿಗಾಗಿ ಶೇ 5ರಷ್ಟು ಹಣ ಮೀಸಲಿಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದ್ದರೂ ಶೇ 0.025ರಷ್ಟು ಮಾತ್ರ ಮೀಸಲಿಡುತ್ತಿದೆ ಎನ್ನುವ ಆಕ್ಷೇಪಣೆಗಳು ಕೇಳಿಬಂದಿವೆ.
ಅಂಗವಿಕಲರ ಶಿಕ್ಷಣ ಸ್ಥಿತಿಗತಿ ದಾರುಣವಾಗಿದೆ. 2011ರ ಜನಗಣತಿಯ ಪ್ರಕಾರ, ದೇಶದಲ್ಲಿ 21.3 ಲಕ್ಷ ಮಕ್ಕಳು ಅಂಗವಿಕಲರಿದ್ದು, ಅವರಲ್ಲಿ ಶೇ 28ರಷ್ಟು ಮಂದಿ ಶಾಲೆಯಿಂದ ಹೊರಗಿದ್ದರು. 2018ರ ರಾಷ್ಟ್ರೀಯ ಮಾದರಿ ಸಮೀಕ್ಷೆ ಪ್ರಕಾರ, ಶೇ 48ರಷ್ಟು ಅಂಗವಿಕಲರು ಅನಕ್ಷರಸ್ಥರು. ಅವರಲ್ಲಿ ಬಹುತೇಕರು ಪ್ರಾಥಮಿಕ ಹಂತದಲ್ಲಿಯೇ ಶಾಲೆ ತೊರೆಯುತ್ತಾರೆ. ಪ್ರೌಢಶಾಲೆ ಉತ್ತೀರ್ಣರಾದವರು ಶೇ 9ರಷ್ಟು ಮಾತ್ರ.
ಮಹಿಳೆಯರ ದಾರುಣ ಸ್ಥಿತಿ: ಅಂಗವಿಕಲರಲ್ಲಿ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಶೋಷಣೆಗೆ ಗುರಿಯಾಗುತ್ತಿದ್ದಾರೆ. ನಿದರ್ಶನಕ್ಕೆ, ಅಂಗವೈಕಲ್ಯ ಹೊಂದಿರುವ ಮಹಿಳೆಯರು ಹೆಚ್ಚು ಕೌಟುಂಬಿಕ ಹಿಂಸೆಗೆ ಒಳಗಾಗುತ್ತಾರೆ. 2018ರ ವಿಶ್ವಬ್ಯಾಂಕ್ ಅಧ್ಯಯನದ ಪ್ರಕಾರ, ಅಂಗವೈಕಲ್ಯ ಹೊಂದಿರುವ ಮಹಿಳೆಯರು ಇತರೆ ಮಹಿಳೆಯರಿಗಿಂತ ಹೆಚ್ಚು ಶೋಷಣೆ/ಅತ್ಯಾಚಾರಗಳಿಗೆ ಬಲಿಯಾಗುತ್ತಿದ್ದಾರೆ. ಅನೇಕ ಮಹಿಳಾ ಅಂಗವಿಕಲರನ್ನು ಬಲವಂತವಾಗಿ ಸಂತಾನಶಕ್ತಿಹರಣ ಶಸ್ತ್ರಕ್ರಿಯೆಗಳಿಗೆ ಒಳಪಡಿಸಲಾಗುತ್ತಿದೆ. ಆದರೆ, ಕಾನೂನು ಮತ್ತು ನೀತಿ ನಿಯಮಗಳನ್ನು ರೂಪಿಸುವಾಗ ಈ ಲಿಂಗ ಸೂಕ್ಷ್ಮವನ್ನು ಯಾರೂ ಪರಿಗಣಿಸುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.
ಅಂಗವಿಕಲರ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ಆಗಬೇಕಿರುವ ಕೆಲಸಗಳು ಅಗಾಧವಾಗಿವೆ. ಅಂಗವೈಕಲ್ಯದ ವ್ಯಾಖ್ಯಾನ ಬದಲಾಗಬೇಕಿದೆ, ಅವರೆಡೆಗಿನ ಜನರ ದೃಷ್ಟಿಕೋನ ಬದಲಾಗಬೇಕಿದೆ. ಮುಖ್ಯವಾಗಿ, ಶಿಕ್ಷಣ, ಮೂಲಸೌಕರ್ಯಗಳ ನಿರ್ಮಾಣ, ಸವಲತ್ತುಗಳನ್ನು ಒದಗಿಸುವುದು ಸೇರಿದಂತೆ ಇಡೀ ಸಾರ್ವಜನಿಕ ವ್ಯವಸ್ಥೆಯನ್ನೇ ಅಂಗವಿಕಲರ ದೃಷ್ಟಿಯಿಂದ ಪುನರ್ ರೂಪಿಸಬೇಕಿದೆ ಎನ್ನುವ ಒತ್ತಾಯ ಕೇಳಿಬಂದಿದೆ. ಈ ದಿಸೆಯಲ್ಲಿ ನ್ಯಾಯಾಲಯದ ಆದೇಶ ಪಾಲನೆ ಮತ್ತು 2016ರ ಕಾಯ್ದೆ ಜಾರಿ ಅತ್ಯಂತ ಅಗತ್ಯವಾಗಿದೆ.
‘ಸುಪ್ರೀಂ’ ಪ್ರಮುಖ ತೀರ್ಪುಗಳು
* ನ್ಯಾಯಾಂಗ ಸೇವೆಗಳಿಗೆ ಮರು ನೇಮಕ ಮತ್ತು ಮಧ್ಯಪ್ರದೇಶದ ರಿಜಿಸ್ಟ್ರಾರ್ ಜನರಲ್ ನಡುವಿನ ಪ್ರಕರಣ, 2025: ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ನ್ಯಾಯಾಂಗ ಸೇವಾ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಅಂಗವಿಕಲ ಅಭ್ಯರ್ಥಿಗಳನ್ನು ಕೈಬಿಟ್ಟಿರುವ ಪ್ರಕರಣದಲ್ಲಿ ಈ ವರ್ಷದ ಮಾರ್ಚ್ 3ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಅಂಗವಿಕಲರ ಉದ್ಯೋಗ ಪಡೆಯುವ ಹಕ್ಕನ್ನು ಸಮರ್ಥಿಸಿಕೊಂಡಿತ್ತು. ಈ ನೇಮಕಾತಿಗೆ ಸಂಬಂಧಿಸಿದ ಹೈಕೋರ್ಟ್ ಆದೇಶಗಳು, ಪರೀಕ್ಷಾ ಅಧಿಸೂಚನೆಗಳನ್ನು ವಜಾಗೊಳಿಸಿತ್ತು
* ಸೀಮಾ ಗಿರಿಜಾ ಲಾಲ್ ಮತ್ತು ಕೇಂದ್ರ ಸರ್ಕಾರ ನಡುವಿನ ಪ್ರಕರಣ, 2024: 2016ರ ಅಂಗವಿಕಲರ ಹಕ್ಕುಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ‘ಟುಗೆದರ್ ವಿ ಕ್ಯಾನ್’ ಎಂಬ ವೇದಿಕೆಯು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕಾಯ್ದೆಯ ಅನುಷ್ಠಾನದಲ್ಲಿ ಆಗುತ್ತಿರುವ ಲೋಪಗಳನ್ನು ಎತ್ತಿ ತೋರಿಸಿತ್ತು. ಆಂಧ್ರಪ್ರದೇಶ, ಮಹಾರಾಷ್ಟ್ರದಂತಹ ರಾಜ್ಯಗಳು, ಲಡಾಖ್ ಕೇಂದ್ರಾಡಳಿತ ಪ್ರದೇಶವು ಕಾಯ್ದೆಯ ಸೆಕ್ಷನ್ 101ರ ಅಡಿಯಲ್ಲಿ ನಿಯಮಗಳನ್ನು ರೂಪಿಸಲು ವಿಫಲವಾಗಿವೆ. ದೇಶದ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೆಕ್ಷನ್ 72ರ ಅಡಿಯಲ್ಲಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಿಲ್ಲ ಎಂದು ಹೇಳಿತ್ತು. ಈ ಸಮಿತಿಗಳನ್ನು ರಚಿಸುವಂತೆ, ಅಂಗವಿಕಲರಿಗಾಗಿ ವಿಶೇಷ ನ್ಯಾಯಾಲಯಗಳು, ವೈದ್ಯಕೀಯ ಪರಿಶೀಲನಾ ಮಂಡಳಿ, ರಾಜ್ಯ ಅಂಗವೈಕಲ್ಯ ನಿಧಿ ಸ್ಥಾಪನೆ (ಸೆಕ್ಷನ್ 88), ಸ್ವತಂತ್ರ ಆಯುಕ್ತರ ನೇಮಕಾತಿ (ಸೆಕ್ಷನ್ 79) ಮಾಡುವಂತೆ ನ್ಯಾಯಪೀಠ ರಾಜ್ಯಗಳಿಗೆ ಸೂಚಿಸಿತ್ತಲ್ಲದೆ, ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆಯೂ ನಿರ್ದೇಶಿಸಿತ್ತು
* ಓಂಕಾರ್ ರಾಮಚಂದ್ರ ಗೊಂಡ್ ಮತ್ತು ಕೇಂದ್ರ ಸರ್ಕಾರ ನಡುವಿನ ಪ್ರಕರಣ 2024: ಮಾತು ಮತ್ತು ಉಚ್ಚಾರಣೆಯಲ್ಲಿ ಶೇ 44ರಿಂದ 45ರಷ್ಟು ಶಾಶ್ವತ ವೈಕಲ್ಯ ಹೊಂದಿರುವ 2024ರ ನೀಟ್ ಅಭ್ಯರ್ಥಿ ಓಂಕಾರ್ ರಾಮಚಂದ್ರ ಗೊಂಡ್ ಅವರು ವೈದ್ಯಕೀಯ ಕಾಲೇಜು ಪ್ರವೇಶ ಪಡೆಯಲು ಅನರ್ಹರು ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ಮಧ್ಯಂತರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಓಂಕಾರ್ ಹೊಂದಿರುವ ಅಂಗವೈಕಲ್ಯವು ಅವರು ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುವುದಕ್ಕೆ ತಡೆಯಾಗಬಾರದು ಎಂದು ತನ್ನ ಮಧ್ಯಂತರ ತೀರ್ಪಿನಲ್ಲಿ ‘ಸುಪ್ರೀಂ’ ಅಭಿಪ್ರಾಯಪಟ್ಟಿತ್ತಲ್ಲದೇ, ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಲ್ಲಿ ಅವರನ್ನು ಹೊಸದಾಗಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿತ್ತು. ಅಲ್ಲದೇ ಓಂಕಾರ್ ಅವರು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು
* ಅಂಗವಿಕಲಸ್ನೇಹಿ ಪಾದಚಾರಿ ಮಾರ್ಗಗಳನ್ನು ಹೊಂದುವ ಹಕ್ಕು ಸಂವಿಧಾನದ 21ನೇ ವಿಧಿ ಅನುಸಾರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಈ ವರ್ಷದ ಮೇ 14ರಂದು ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು
* ಅಂಗವಿಕಲರಿಗೂ ಡಿಜಿಟಲ್ ಕೆವೈಸಿ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಈ ವರ್ಷದ ಏಪ್ರಿಲ್ 25ರಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್, ಅದು ಸಂವಿಧಾನದ 21ನೇ ವಿಧಿಯಲ್ಲಿ ಬರುವ ಮೂಲಭೂತ ಹಕ್ಕಿನ ಭಾಗ ಎಂದು ಅಭಿಪ್ರಾಯಪಟ್ಟಿತ್ತು
–––
ವಿಶೇಷ ಕೈಪಿಡಿ
ಅಂಗವಿಕಲರಿಗೆ ಸಂಬಂಧಿಸಿದಂತೆ 2024ರಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ವಿಶೇಷ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದ್ದರು. ಅಂಗವಿಕಲರನ್ನು ಗುರುತಿಸುವಾಗ, ಅವರ ಬಗ್ಗೆ ಮಾತನಾಡುವಾಗ, ಅವರೊಂದಿಗೆ ನಡೆದುಕೊಳ್ಳುವಾಗ ಬಳಸುವ ಭಾಷೆ, ಮತ್ತು ತೀರ್ಪುಗಳಲ್ಲಿ ಅವರ ಬಗ್ಗೆ ಉಲ್ಲೇಖಿಸುವ ಪದಗಳ ಬಳಕೆ ಸೇರಿದಂತೆ ಒಟ್ಟಾರೆಯಾಗಿ ಅಂಗವಿಕಲರನ್ನು ಗೌರವದಿಂದ ಕಾಣುವ, ಘನತೆಯಿಂದ ನಡೆಸಿಕೊಳ್ಳುವುದಕ್ಕೆ ಸಂಬಂಧಿಸಿದ ಅಂಶಗಳನ್ನು ಕೈಪಿಡಿ ಒಳಗೊಂಡಿದೆ.
ಸಂವಿಧಾನದ 21ನೇ ವಿಧಿ
ಅಂಗವಿಕಲಸ್ನೇಹಿ ಪಾದಚಾರಿ ಮಾರ್ಗಗಳನ್ನು ಹೊಂದುವ ಹಕ್ಕು ಸಂವಿಧಾನದ 21ನೇ ವಿಧಿ ಅನುಸಾರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಈ ವರ್ಷದ ಮೇ 14ರಂದು ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು
ಕೆವೈಸಿ ಸೌಲಭ್ಯ
ಅಂಗವಿಕಲರಿಗೂ ಡಿಜಿಟಲ್ ಕೆವೈಸಿ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಈ ವರ್ಷದ ಏಪ್ರಿಲ್ 25ರಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್ ಅದು ಸಂವಿಧಾನದ 21ನೇ ವಿಧಿಯಲ್ಲಿ ಬರುವ ಮೂಲಭೂತ ಹಕ್ಕಿನ ಭಾಗ ಎಂದು ಅಭಿಪ್ರಾಯಪಟ್ಟಿತ್ತು.
––––––––
ಆಧಾರ: ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್, ಡಿಸೇಬಿಲಿಟಿರೈಟ್ಸ್‌ಇಂಡಿಯಾ.ಕಾಮ್, ಮಾಧ್ಯಮ ವರದಿಗಳು
******
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.