ADVERTISEMENT

ಆಳ–ಅಗಲ: ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತೆ ಚರ್ಚೆಗೆ

ಸೂರ್ಯನಾರಾಯಣ ವಿ.
Published 7 ಜುಲೈ 2025, 23:51 IST
Last Updated 7 ಜುಲೈ 2025, 23:51 IST
<div class="paragraphs"><p>ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಮತದಾರರ ಖಾತರಿಗಾಗಿ ಭರ್ತಿ ಮಾಡಿದ ಅರ್ಜಿಯನ್ನು ಮತದಾರರು ಪ್ರದರ್ಶಿಸಿದರು</p></div>

ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಮತದಾರರ ಖಾತರಿಗಾಗಿ ಭರ್ತಿ ಮಾಡಿದ ಅರ್ಜಿಯನ್ನು ಮತದಾರರು ಪ್ರದರ್ಶಿಸಿದರು

   
ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್‌) ವಿವಾದಕ್ಕೀಡಾಗಿದೆ. ಚುನಾವಣೆ ಹತ್ತಿರದಲ್ಲಿರುವಾಗ ಪರಿಷ್ಕರಣೆ ನಡೆಸುವ ಅಗತ್ಯವನ್ನು ಕಾಂಗ್ರೆಸ್‌, ಆರ್‌ಜೆಡಿ ಸೇರಿದಂತೆ ವಿರೋಧ ಪಕ್ಷಗಳು ಪ್ರಶ್ನಿಸಿವೆ. ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರನ್ನು ಕೈಬಿಡುವ ದುರುದ್ದೇಶದಿಂದ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಅವು ಆರೋಪಿಸಿವೆ. ತನ್ನ ನಿರ್ಧಾರವನ್ನು ಆಯೋಗ ಸಮರ್ಥಿಸಿಕೊಂಡಿದೆ. ಸ್ಥಳೀಯ ವಲಸಿಗರು, ವಿದೇಶದ ಅಕ್ರಮ ವಲಸಿಗರು ಸೇರಿದಂತೆ ಹಲವು ವಿಚಾರಗಳು ಇದರ ಹಿಂದೆ ತಳಕುಹಾಕಿಕೊಂಡಿವೆ. ಈ ವಿಚಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಹೊತ್ತಿಗೆ ಮೊದಲ ಹಂತದ ಪರಿಷ್ಕರಣೆ ಬಹುತೇಕ ಮುಗಿದಿದೆ. ಕಳೆದ ವರ್ಷದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಚರ್ಚೆ ನಡೆದಿತ್ತು. ಈಗ ಮತ್ತೆ ಅಂತಹುದೇ ಚರ್ಚೆಯನ್ನು ಬಿಹಾರದ ವಿಶೇಷ ಸಮಗ್ರ ಪರಿಷ್ಕರಣೆ ಹುಟ್ಟುಹಾಕಿದೆ‌     

ಈ ವರ್ಷದ ಅಕ್ಟೋಬರ್‌–ನವೆಂಬರ್‌ನಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ‘ಜನತಂತ್ರದ ಹಬ್ಬ’ಕ್ಕೆ ಕೆಲವೇ ತಿಂಗಳುಗಳಿರುವಾಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು(ಸ್ಪೆಷಲ್‌ ಇಂಟೆನ್ಸಿವ್‌ ರಿವಿಜನ್‌) ಚುನಾವಣಾ ಆಯೋಗ ಆರಂಭಿಸಿದೆ. ಇದು ಕಾಂಗ್ರೆಸ್‌, ಆರ್‌ಜೆಡಿ, ಟಿಎಂಸಿ ಸೇರಿದಂತೆ ಹಲವು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಆಯೋಗ ನಡೆಸಿದ್ದ ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ರಾಜ್ಯದಾದ್ಯಂತ ಭಾರಿ ಪ್ರಮಾಣದಲ್ಲಿ ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಗಿತ್ತು; ಇದರಿಂದ ಬಿಜೆಪಿಗೆ ಅನುಕೂಲವಾಗಿದೆ ಎಂದು ಕಾಂಗ್ರೆಸ್‌ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದರು. ‘ಮಹಾರಾಷ್ಟ್ರದಲ್ಲಿ 2024ರ ಲೋಕಸಭೆ ಮತ್ತು ನವೆಂಬರ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಗಳ ನಡುವೆ ಮತದಾರರ ಸಂಖ್ಯೆಯಲ್ಲಿ 41 ಲಕ್ಷ ಹೆಚ್ಚಳವಾಗಿದೆ. ಚುನಾವಣೆಯಲ್ಲಿ ವಂಚನೆ ನಡೆದಿದೆ’ ಎಂದು ಹೇಳಿದ್ದ ಅವರು, ‘ಮ್ಯಾಚ್‌ ಫಿಕ್ಸಿಂಗ್‌’ ಮೂಲಕ ಬಿಜೆಪಿ ಅಲ್ಲಿ ಗೆದ್ದಿದೆ ಎಂದು ದೂರಿದ್ದರು. ಆದರೆ, ಅದನ್ನು ಚುನಾವಣಾ ಆಯೋಗ ತಳ್ಳಿ ಹಾಕಿತ್ತು. ಬಿಹಾರದಲ್ಲೂ ಮಹಾರಾಷ್ಟ್ರದ ರೀತಿಯಲ್ಲಿಯೇ ‘ಮ್ಯಾಚ್‌ ಫಿಕ್ಸಿಂಗ್‌’ ನಡೆಯಲಿದೆ ಎಂದೂ ಜೂನ್‌ ತಿಂಗಳ ಆರಂಭದಲ್ಲಿ ರಾಹುಲ್‌ ಗಾಂಧಿ ಹೇಳಿದ್ದರು.

ಇದಾಗಿ ಎರಡು ವಾರಗಳಲ್ಲಿ, ಜೂನ್‌ 24ರಂದು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸುವ ಸಂಬಂಧ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಇದಕ್ಕೆ ವಿರೋಧ ಪಕ್ಷಗಳಿಂದ ಆರೋಪ ವ್ಯಕ್ತವಾಗಿದ್ದ ಬೆನ್ನಲ್ಲೇ, ‘ಈಗಿನ ಮತದಾರರ ಪಟ್ಟಿ ಸರಿಯಿಲ್ಲ ಎಂದು ಬಿಹಾರದ ಬಹುತೇಕ ಪಕ್ಷಗಳು ಹೇಳಿದ್ದವು. ಪರಿಷ್ಕರಣೆ ಮಾಡಬೇಕು ಎಂದೂ ಒತ್ತಾಯಿಸಿದ್ದವು. ಕಾನೂನಿನ ಅಡಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಿಸುವುದು ಅಗತ್ಯವಾಗಿದೆ’ ಎಂದು ಬಿಹಾರದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಹೇಳಿದ್ದಾರೆ. ಇದೇ 4ರಿಂದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಮೊದಲ ಹಂತದ ಪರಿಷ್ಕರಣೆ ಕಾರ್ಯ ಬಹುತೇಕ ಮುಗಿದಿದೆ. ಇದರ ನಡುವೆಯೇ ಆರ್‌ಜೆಡಿ, ಪಿಯುಸಿಎಲ್‌, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್‌ ಅವರು ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಗುರುವಾರ ವಿಚಾರಣೆ ನಡೆಸುವುದಾಗಿ ‘ಸುಪ್ರೀಂ’ ಹೇಳಿದೆ.

ADVERTISEMENT

ಏನಿದು ‘ವಿಶೇಷ ಸಮಗ್ರ ಪರಿಷ್ಕರಣೆ’?

ಚುನಾವಣಾ ಆಯೋಗವು ನಾಲ್ಕು ರೀತಿಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತದೆ. ಅವುಗಳಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಒಂದು. ಸಮಗ್ರ (ಇಂಟೆನ್ಸಿವ್‌), ಸಂಕ್ಷಿಪ್ತ (ಸಮ್ಮರಿ) ಹಾಗೂ ಭಾಗಶಃ ಸಮಗ್ರ ಮತ್ತು ಭಾಗಶಃ ಸಂಕ್ಷಿಪ್ತ ಎನ್ನುವುದು ಇನ್ನುಳಿದ ಪರಿಷ್ಕರಣೆಯ ವಿಧಾನಗಳು.

ಸಮಗ್ರ ಪರಿಷ್ಕರಣೆಯಲ್ಲಿ ಪ್ರತಿ ಕುಟುಂಬದ ಪರಿಶೀಲನೆ ನಡೆಸಲಾಗುತ್ತದೆ. ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ತೆಗೆಯುವುದಕ್ಕೆ ಸಂಬಂಧಿಸಿದಂತೆ ಜನರಿಂದ ಬಂದ ಕೋರಿಕೆಗಳು ಮತ್ತು ಆಕ್ಷೇಪಣೆಗಳನ್ನು ಆಹ್ವಾನ ಮಾಡಿ, ನಂತರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲಾಗುವುದಿಲ್ಲ. ಭಾಗಶಃ ಸಮಗ್ರ ಮತ್ತು ಭಾಗಶಃ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಇದೇ ಸಮಯದಲ್ಲಿ ಮತಗಟ್ಟೆ ಅಧಿಕಾರಿಗಳು ಮನೆಮಂದಿಯ ಪರಿಶೀಲನೆ ನಡೆಸುತ್ತಾರೆ.

ವಿಶೇಷ ಸಮಗ್ರ ಪರಿಷ್ಕರಣೆಯನ್ನು ಮತದಾರರ ಪಟ್ಟಿಯನ್ನು ಯಾವುದೇ ದೋಷವಿಲ್ಲದಂತೆ ಸಿದ್ಧಪಡಿಸುವುದಕ್ಕಾಗಿ ತುರ್ತು ಕ್ರಮವಾಗಿ ಕೈಗೊಳ್ಳಲಾಗುತ್ತದೆ. ಸದ್ಯ ಬಿಹಾರದಲ್ಲಿ ಇದನ್ನು ಮಾಡಲಾಗುತ್ತಿದೆ. ಚುನಾವಣಾ ಆಯೋಗವು ಗಣತಿ ಅರ್ಜಿಯನ್ನು ಮುದ್ರಿಸಿ ಮತದಾರರಿಗೆ ಹಂಚುತ್ತಿದ್ದು, ಅದರಲ್ಲಿ ವಿವರಗಳನ್ನು ತುಂಬಿ ಪೂರಕ ದಾಖಲೆಗಳೊಂದಿಗೆ ಆಯೋಗಕ್ಕೆ ನೀಡಬೇಕು.

ಬಿಹಾರದಲ್ಲಿ ಈ ಹಿಂದೆ 2003ರಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆದಿತ್ತು. ಇದರ ಅಡಿಯಲ್ಲಿ 2003ರ ಮತದಾರರ ಪಟ್ಟಿಯಲ್ಲಿದ್ದವರು ತಾವು ರಾಜ್ಯದ ಮತದಾರರು ಎಂಬುದಕ್ಕೆ ಯಾವುದೇ ಆಧಾರ ಅಥವಾ ದಾಖಲೆ ನೀಡಬೇಕಾಗಿಲ್ಲ. 2003ರ ನಂತರ 2024ರವರೆಗೆ ನಡೆದಿದ್ದ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಿದವರು ಪೂರಕ ದಾಖಲೆಯನ್ನು (ಹುಟ್ಟಿದ ಸ್ಥಳ, ದಿನಾಂಕಕ್ಕೆ ಸಂಬಂಧಿಸಿದ ದಾಖಲೆ ಮತ್ತು ಅವರ ಪೋಷಕರಿಗೆ ಸಂಬಂಧಿಸಿದ ದಾಖಲೆ) ಸಲ್ಲಿಸಿ, ತಾವು ರಾಜ್ಯದ ಮತದಾರರು ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕಾಗುತ್ತದೆ. ಆಗಿನ ಪಟ್ಟಿಯಲ್ಲಿದ್ದ 4.96 ಕೋಟಿ ಮತದಾರರು ಈಗಿನ ಪರಿಷ್ಕರಣೆಯಲ್ಲಿ ಯಾವುದೇ ದಾಖಲೆಯನ್ನು ನೀಡಬೇಕಾಗಿಲ್ಲ. ಆದರೆ, ಗಣತಿ ಅರ್ಜಿಯನ್ನು ಭರ್ತಿ ಮಾಡಬೇಕು.

ಎಷ್ಟು ಮಂದಿ ದಾಖಲೆ ಕೊಡಬೇಕಾಗುತ್ತದೆ?

2003ರ ನಂತರ ಬಿಹಾರದಲ್ಲಿ 2.93 ಕೋಟಿ ಮಂದಿಯ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ, 2003–2024ರ ನಡುವೆ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದವರು ತಮ್ಮ ಜನನ ಸ್ಥಳ /ಜನ್ಮದಿನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲದೇ, ಇಬ್ಬರು ಪೋಷಕರ ಪೈಕಿ ಒಬ್ಬರ ಜನ್ಮದಿನ/ ಜನನ ಸ್ಥಳದ ದಾಖಲೆಯನ್ನು ಸಲ್ಲಿಸಬೇಕು. ಪರಿಷ್ಕರಣೆಯ ಮೊದಲ ಹಂತ ಬಹುತೇಕ ಪೂರ್ಣಗೊಂಡಿದ್ದು, 2.88 ಕೋಟಿಯಷ್ಟು ಮತದಾರರಿಂದ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಇನ್ನೂ 18 ದಿನಗಳ ಕಾಲಾವಕಾಶ ಇದೆ.

ಚುನಾವಣಾ ಆಯೋಗ ಹೇಳುವುದೇನು?

ಎರಡು ದಶಕಗಳಲ್ಲಿ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ದೊಡ್ಡ ಮಟ್ಟದಲ್ಲಿ ಮತದಾರರ ಹೆಸರು ಸೇರ್ಪಡೆಯಾಗಿದೆ ಮತ್ತು ಕೈಬಿಡಲಾಗಿದೆ. ನಗರೀಕರಣ ಮತ್ತು ಶಿಕ್ಷಣ, ಜೀವನೋಪಾಯದ ಕಾರಣದಿಂದ ಜನರ ವಲಸೆ ಹೆಚ್ಚಿದೆ. ಅರ್ಹರ ಹೆಸರು ಪಟ್ಟಿಯಲ್ಲಿ ಇಲ್ಲ. ನಿಧನರಾದವರ ಹೆಸರನ್ನು ಕೈಬಿಡಲಾಗಿಲ್ಲ. ಅಕ್ರಮ ವಲಸಿಗರ ಹೆಸರುಗಳು ಕೂಡ ಪಟ್ಟಿಗೆ ಸೇರ್ಪಡೆಗೊಂಡಿವೆ. ಒಬ್ಬ ಮತದಾರರ ಹೆಸರು ಎರಡೆರಡು ಕ್ಷೇತ್ರಗಳಲ್ಲಿ ನೋಂದಣಿಯಾಗಿದೆ. ಹೀಗಾಗಿ, ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸುವುದು ಅನಿವಾರ್ಯವಾಗಿದೆ. ಅರ್ಹ ಮತದಾರರ ಹೆಸರನ್ನು ಸೇರ್ಪಡೆಗೊಳಿಸುವುದು ಮತ್ತು ಅನರ್ಹರ ಹೆಸರನ್ನು ಕೈಬಿಡುವ ಮೂಲಕ ಅತ್ಯಂತ ಪಾರದರ್ಶಕವಾಗಿ ದೋಷ ರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ತನ್ನ ನಿರ್ಧಾರಕ್ಕೆ ಸಂವಿಧಾನದ 326ನೇ ವಿಧಿಯನ್ನು ಆಯೋಗವು ಉಲ್ಲೇಖಿಸಿದೆ. ಅದರ ಪ್ರಕಾರ, ಭಾರತದ ನಾಗರಿಕರು ಮಾತ್ರ ಮತದಾನದ ಹಕ್ಕು ಚಲಾಯಿಸಲು ಅರ್ಹರು. ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 16ರನ್ನೂ ಅದು ಪ್ರಸ್ತಾಪಿಸಿದೆ (ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವ ಬಗ್ಗೆ ಈ ಸೆಕ್ಷನ್‌ ಹೇಳುತ್ತದೆ).

ವಿರೋಧ ಪಕ್ಷಗಳು ಆಕ್ಷೇಪಿಸುತ್ತಿರುವುದೇಕೆ?

ಕಾಂಗ್ರೆಸ್‌, ಆರ್‌ಜೆಡಿ, ತೃಣಮೂಲ ಕಾಂಗ್ರೆಸ್‌, ಸಿಪಿಎಂ, ಸಿಪಿಎಂಎಲ್‌ಎಲ್‌ ಸೇರಿದಂತೆ ಹಲವು ಪಕ್ಷಗಳು, ಪಿಯುಸಿಎಲ್‌, ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ನಂತಹ ಪ್ರಗತಿಪರ ಸಂಘಟನೆಗಳು, ಎನ್‌ಜಿಒಗಳು ಕೂಡ ಈ ಪರಿಷ್ಕರಣೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಈ ಪರಿಷ್ಕರಣೆಯನ್ನು 2016ರಲ್ಲಿ ನಡೆದ ನೋಟು ರದ್ದತಿಗೆ (ನೋಟ್‌ಬಂದಿ) ಹೋಲಿಸಿರುವ ವಿರೋಧ ಪಕ್ಷಗಳು ‘ವೋಟ್‌ಬಂದಿ’ ಎಂದು ವ್ಯಂಗ್ಯವಾಡಿವೆ.

ಪರಿಷ್ಕರಣೆಗೆ ಆಯ್ಕೆ ಮಾಡಿರುವ ಸಮಯವನ್ನು (ಚುನಾವಣೆ ಹತ್ತಿರದಲ್ಲಿರುವಾಗ) ಪ್ರಶ್ನಿಸಿರುವ ವಿರೋಧ ಪಕ್ಷಗಳ ಮುಖಂಡರು, ‘ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈ ಬಿಡುವ ಹುನ್ನಾರ ಇದರ ಹಿಂದಿದೆ’ ಎಂದು ಆರೋಪಿಸಿದ್ದಾರೆ.

ಬಿಹಾರದ ಮತದಾರರ ಪೈಕಿ ಶೇ 20ರಷ್ಟು ವಲಸಿಗರಿದ್ದಾರೆ. ಉದ್ಯೋಗವನ್ನು ಅರಸಿ ಕೆಲವರು ಅಲ್ಪ ಅವಧಿಗೆ ವಲಸೆ ಹೋದರೆ, ಇನ್ನೂ ಕೆಲವರು ದೀರ್ಘಾವಧಿಗೆ ವಲಸೆ ಹೋಗುತ್ತಾರೆ. ಈಗ ನಡೆಯುತ್ತಿರುವ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಇವರು ಭಾಗವಹಿಸಿ, ದಾಖಲೆಗಳನ್ನು ಸಲ್ಲಿಸದಿದ್ದರೆ, ಆಯೋಗ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಿದೆ. ಹೀಗಾದ ಪಕ್ಷದಲ್ಲಿ ದೊಡ್ಡ ಸಂಖ್ಯೆಯ ಜನರು ಚುನಾವಣಾ ‍ಪ್ರಕ್ರಿಯೆಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗದ ಈ ಕ್ರಮವು 1950ರ ಜನಪ್ರಾತಿನಿಧ್ಯ ಕಾಯ್ದೆಯ ನಿಯಮಗಳು ಮತ್ತು 1960ರ ಮತದಾರರ ನೋಂದಣಿ ನಿಯಮಾವಳಿಯ 21ಎ ನಿಯಮದ ಉಲ್ಲಂಘನೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಹೇಳಿದೆ. ಆಯೋಗದ ನಿರ್ಧಾರದ ವಿರುದ್ಧ ಅದು ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

‘2024ರ ಅ. 29ರಿಂದ 2025ರ ಜನವರಿ 6ರ ನಡುವೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಮುಕ್ತಾಯವಾಗಿದೆ. ಹಾಗಿರುವಾಗ ಮತ್ತೆ ಇದರ ಅಗತ್ಯವೇನಿದೆ’ ಎಂದು ಅದು ತನ್ನ ಅರ್ಜಿಯಲ್ಲಿ ಪ್ರಶ್ನಿಸಿದೆ.

ಆಧಾರ್‌ ಪಟ್ಟಿಯಲ್ಲಿಲ್ಲ

ಭರ್ತಿ ಮಾಡಿರುವ ಅರ್ಜಿಗಳೊಂದಿಗೆ ನೀಡಬೇಕಾದ ದಾಖಲೆಗಳ ಪಟ್ಟಿಯನ್ನು ಚುನಾವಣಾ ಆಯೋಗ ನೀಡಿದೆ. ಆದರೆ, ಈ ಪಟ್ಟಿಯಲ್ಲಿ ಆಧಾರ್‌ ಅನ್ನು ಸೇರಿಸಲಾಗಿಲ್ಲ.

ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್‌, ಗುರುತಿನ ಚೀಟಿಗಳು ಅಥವಾ ಪಿಂಚಣಿ ಪಾವತಿ ಆದೇಶಗಳು, ಕಾಯಂ ವಿಳಾಸ ದೃಢೀಕರಿಸುವ ಪ್ರಮಾಣಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ರಾಜ್ಯ ಅಥವಾ ಸ್ಥಳೀಯ ಆಡಳಿತಗಳು ಸಿದ್ಧಪಡಿಸಿರುವ ಕುಟುಂಬ ನೋಂದಣಿ ಪ್ರಮಾಣಪತ್ರ, ಜಮೀನು ಅಥವಾ ಮನೆ ಹಂಚಿಕೆ ಪ್ರಮಾಣಪತ್ರ. ಇವುಗಳಲ್ಲಿ ಯಾವುದಾದರೊಂದು ದಾಖಲೆ ಸಲ್ಲಿಸಿದರೆ ಸಾಕು. ಈಗ ವಿರೋಧ ಪಕ್ಷಗಳು ಹಾಗೂ ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾದ ನಂತರ ಆಯೋಗವು ದಾಖಲೆ ಸಲ್ಲಿಕೆ ನಿಯಮದಲ್ಲಿ ಕೊಂಚ ಬದಲಾವಣೆ ಮಾಡಿದ್ದು, ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರವೂ ಪೂರಕ ದಾಖಲೆಗಳನ್ನು ನೀಡಲು ಅವಕಾಶ ಕಲ್ಪಿಸಿದೆ.

ಆಧಾರ: ಪಿಟಿಐ, ಪಿಐಬಿ ಪ್ರಕಟಣೆ, ಚುನಾವಣಾ ಆಯೋಗ ಪ್ರಕಟಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.