ಪ್ರಾತಿನಿಧಿಕ ಚಿತ್ರ
ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಭಾಗವಾಗಿ ಜಾರಿಗೊಳಿಸಿರುವ ‘ಯುವನಿಧಿ’ (ವಿದ್ಯಾವಂತ ನಿರುದ್ಯೋಗಿಗಳಿಗೆ ಭತ್ಯೆ) ಪ್ರಯೋಜನ ಪಡೆಯಲು 2026ರ ಜ.1ರವರೆಗೆ ಒಟ್ಟು 3.79 ಲಕ್ಷ ಯುವಕ ಯುವತಿಯರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ (ಶೇ 13) ಗಮನಾರ್ಹವಾಗಿದೆ. 43,529 ಎಂಜಿನಿಯರಿಂಗ್ ಪದವೀಧರರ ಜತೆಗೆ ಎಂಜಿನಿಯರಿಂಗ್ ಸ್ನಾತಕೋತ್ತರ (374), ಡಿಪ್ಲೊಮಾ (4,250) ಪಡೆದವರೂ ಇದ್ದಾರೆ.
ದೇಶದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿಗಳು ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಅಪಾರ ಹುರುಪು ಹುಟ್ಟಿಸಿದ್ದ ಕೋರ್ಸ್‌ಗಳಾಗಿದ್ದವು. ಬಹುತೇಕ ಪೋಷಕರು ಇವೆರಡರಲ್ಲಿ ಯಾವುದಾದರೊಂದನ್ನು ಓದಬೇಕು ಎಂದು ತಮ್ಮ ಮಕ್ಕಳ ಮೇಲೆ ಒತ್ತಡ ಹೇರುತ್ತಾ, ಈ ಬಗ್ಗೆ ಅಪಾರ ಆಸೆ, ಕನಸು ಕಟ್ಟಿಕೊಂಡಿರುತ್ತಿದ್ದರು. ಅತಿ ಹೆಚ್ಚು ಅಂಕಗಳನ್ನು ಪಡೆದ ಕೆಲವರು ವೈದ್ಯಕೀಯ ಆಯ್ದುಕೊಂಡರೆ, ನಂತರದ ಬಹುತೇಕರು ಎಂಜಿನಿಯರಿಂಗ್ ಸೇರುತ್ತಿದ್ದರು. ಎಂಜಿನಿಯರಿಂಗ್ ಪದವೀಧರರ ಪೈಕಿ ಗಣನೀಯ ಸಂಖ್ಯೆಯ ಮಂದಿ ವಿದೇಶಗಳಲ್ಲಿ ಕೆಲಸ ಗಿಟ್ಟಿಸುವುದರೊಂದಿಗೆ ಪದವಿಯ ಬಗೆಗಿನ ಆಕರ್ಷಣೆ ಮತ್ತಷ್ಟು ಹೆಚ್ಚಾಯಿತು. ಬೇಡಿಕೆಯನ್ನು ಆಧರಿಸಿ ಹೊಸಹೊಸ ಎಂಜಿನಿಯರಿಂಗ್ ಕಾಲೇಜುಗಳೂ ಹುಟ್ಟಿಕೊಂಡವು. ಹೀಗೆ ದಶಕಗಳಿಂದ ತಾಂತ್ರಿಕ ಪದವೀಧರರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿರುವುದರ ಪರಿಣಾಮ ಈಗ ಕಾಣತೊಡಗಿದೆ. ತಾಂತ್ರಿಕ ಪದವಿ ಪಡೆದವರ ನಡುವೆ ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಿದೆ.
ಅಂದಾಜಿನ ಪ್ರಕಾರ, ಭಾರತದಲ್ಲಿ 8,917 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಈ ಪೈಕಿ 2,292 ಸರ್ಕಾರಿ ಮತ್ತು 6,625 ಖಾಸಗಿ ಕಾಲೇಜುಗಳಾಗಿವೆ. ಪ್ರತಿವರ್ಷ ಸುಮಾರು 15 ಲಕ್ಷ ಮಂದಿ ಪದವೀಧರರು ಈ ಕಾಲೇಜುಗಳಿಂದ ಹೊರಬರುತ್ತಿದ್ದು, ಇವರ ಪೈಕಿ ಬಹುತೇಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಇಲ್ಲವೇ ಕಡಿಮೆ ಸಂಬಳದ ಉದ್ಯೋಗಗಳಲ್ಲಿ ನೆಲೆ ನಿಲ್ಲುತ್ತಿದ್ದಾರೆ. 2025ರಲ್ಲಿ ಎಂಜಿನಿಯರಿಂಗ್ ಪದವೀಧರರ ನಡುವೆ ನಿರುದ್ಯೋಗದ ಪ್ರಮಾಣವು ಶೇ 83ರಷ್ಟಿದೆ ಎಂದು ಅಂತರರಾಷ್ಟ್ರೀಯ ನೇಮಕಾತಿ ಸಂಸ್ಥೆ ‘ಅನ್‌ಸ್ಟಾಪ್’ನ ಅಧ್ಯಯನ ವರದಿ ತಿಳಿಸಿದೆ.
ಕಾರಣಗಳು: ಎಂಜಿನಿಯರಿಂಗ್ ಪದವೀಧರರಲ್ಲಿ ಉದ್ಯಮಕ್ಕೆ ಅಗತ್ಯವಾದ ಪ್ರಾಯೋಗಿಕ ಜ್ಞಾನದ ಕೊರತೆ, ಹೊಸ ಬೆಳವಣಿಗೆಗಳ ತಿಳಿವಳಿಕೆ ಇಲ್ಲದಿರುವುದು, ಕಾಲೇಜು–ಕಂಪನಿಗಳ ನಡುವಿನ ಸಮನ್ವಯದ ಸಮಸ್ಯೆ ಪದವೀಧರರ ನಿರುದ್ಯೋಗಕ್ಕೆ ಮುಖ್ಯ ಕಾರಣಗಳಾಗಿವೆ. ಜತೆಗೆ, ಹಳೆಯ ಕೋರ್ಸ್‌ಗಳು, ಹಳೆಯ ಪಠ್ಯಕ್ರಮ ಉದ್ಯಮ ಮತ್ತು ಕೋರ್ಸ್‌ಗಳ ನಡುವಿನ ಅಂತರ ಹೆಚ್ಚಿಸುತ್ತಿವೆ ಎನ್ನಲಾಗುತ್ತಿದೆ. ಕಂಪನಿಗಳಿಗೆ ಅಗತ್ಯವಾದ ಕೌಶಲಗಳು ಕಾಲೇಜಿನಲ್ಲಿ ಕಲಿಸಲಾಗುತ್ತಿಲ್ಲ. ಉದಾಹರಣೆಗೆ, ಅಂತರಶಿಸ್ತೀಯ ಕೌಶಲಗಳಿಗೆ ಕಂಪನಿಗಳಲ್ಲಿ ಬೇಡಿಕೆ ಇದೆ. ಆದರೆ, ಬಹುತೇಕ ಕಾಲೇಜುಗಳಲ್ಲಿ ಅವುಗಳನ್ನು ಕಲಿಸುವ ವ್ಯವಸ್ಥೆ ಇಲ್ಲ. ಈ ಅಂತರಗಳನ್ನು ನೀಗಲು ಪಠ್ಯಕ್ರಮ ರೂಪಿಸುವುದರಲ್ಲಿ ಉದ್ಯಮ ರಂಗದವರನ್ನೂ ಭಾಗೀದಾರರನ್ನಾಗಿ ಮಾಡಿಕೊಳ್ಳುವುದು ಉತ್ತಮ ಎನ್ನುವ ಸಲಹೆ ವ್ಯಕ್ತವಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ಹೇಳುವಂತೆ, ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ತಾಂತ್ರಿಕತೆ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಅದಕ್ಕೆ ತಕ್ಕಂತೆ ಅಪ್‌ಡೇಟ್ ಆಗುವ ಜತೆಗೆ ಕೌಶಲ ಅಭಿವೃದ್ಧಿ ಮಾಡಿಕೊಳ್ಳಬೇಕು. ಸಾಫ್ಟ್‌ವೇರ್‌ಗಳು, ಸಾಧನಗಳು, ಪ್ರಯೋಗಗಳು ತುಂಬಾ ದುಬಾರಿಯಾಗಿರುವುದರಿಂದ ಅದಕ್ಕೆ ಸಾಕಷ್ಟು ಸಂಪನ್ಮೂಲಗಳು ಬೇಕು.
‘ಪದವೀಧರರಲ್ಲಿ ಹೆಚ್ಚಿನವರು ಉದ್ಯಮ ರಂಗವನ್ನು ಆಯ್ದುಕೊಳ್ಳುತ್ತಿರುವುದರಿಂದ ಕಾಲೇಜುಗಳಲ್ಲಿ ಉತ್ತಮ ಅಧ್ಯಾಪಕರ ಕೊರತೆ ಇದ್ದು, ಇದೂ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿ, ಶ್ರದ್ಧೆ, ಗಾಂಭೀರ್ಯ, ಶ್ರಮ ಕಡಿಮೆಯಾಗುತ್ತಿವೆ. ಉತ್ತಮ ವಿದ್ಯಾರ್ಥಿಗಳಿಗೆ ಕೆಲಸ ಸಿಕ್ಕೇ ಸಿಗುತ್ತದೆ. ಆರಂಭದಲ್ಲಿ ಸಂಬಳ ಕಡಿಮೆ ಇದ್ದರೂ ನಂತರದಲ್ಲಿ ಉತ್ತಮ ಕಂಪನಿಗಳಲ್ಲಿ ಅವಕಾಶ ಸಿಗುತ್ತದೆ’ ಎನ್ನುತ್ತಾರೆ ಅವರು.
ಕೆಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪನಿಗಳು ಸ್ಕಿಲ್ ಲ್ಯಾಬ್‌ಗಳನ್ನು ರೂಪಿಸಿದ್ದು, ಅಲ್ಲಿ ಪದವಿಯ ಜತೆಗೆ ವಿದ್ಯಾರ್ಥಿಗಳಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಹೀಗಾಗಿ ಅಂಥ ಕಾಲೇಜುಗಳ ಶೇ 85ರಷ್ಟು ಪದವೀಧರರಿಗೆ ಉದ್ಯೋಗ ಸಿಗುತ್ತಿದೆ. ವಿದ್ಯಾರ್ಥಿಗಳು ಮತ್ತು ಕಾಲೇಜುಗಳು ಕಾಲಮಾನದ ಅಗತ್ಯ, ಬೇಡಿಕೆಗಳಿಗೆ ತಕ್ಕಂತೆ ಸಜ್ಜುಗೊಳ್ಳಬೇಕು ಎನ್ನುವುದು ಪರಿಣತರ ಅಭಿಪ್ರಾಯ.
ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ಸಿಗುವುದು ಕಷ್ಟ ಎನ್ನುವುದನ್ನು ಸಾಮಾನ್ಯೀಕರಿಸಲಾಗುವುದಿಲ್ಲ. ಎಂಜಿನಿಯರಿಂಗ್‌ನಲ್ಲಿ ಎಲ್ಲ ವಿಭಾಗಗಳೂ ಬೇಡಿಕೆ ಕಳೆದುಕೊಂಡಿವೆ ಎನ್ನಲೂ ಆಗುವುದಿಲ್ಲ. ನಿರ್ದಿಷ್ಟ ನಗರಗಳ, ನಿರ್ದಿಷ್ಟ ಕಾಲೇಜುಗಳಲ್ಲಿ, ಐಐಟಿಗಳಲ್ಲಿ ಓದಿದವರಿಗೆ ವಿಶೇಷ ಬೇಡಿಕೆ ಇದೆ. ಹಾಗೆಯೇ, ಮಷೀನ್ ಲರ್ನಿಂಗ್, ಡೇಟಾ ಸೈನ್ಸ್, ಕೃತಕ ಬುದ್ಧಿಮತ್ತೆ ಮುಂತಾದ ಕೆಲವು ಕೋರ್ಸ್‌ಗಳನ್ನು ಮಾಡಿದವರಿಗೂ ಬೇಡಿಕೆ ಇದೆ. ಆದರೆ, ಇವುಗಳಲ್ಲಿಯೂ ಹಿಂದಿನ ದಿನಗಳಿಗೆ ಹೋಲಿಸಿದರೆ ಪರಿಸ್ಥಿತಿ ಬದಲಾಗಿದೆ ಎನ್ನುವುದು ಸುಳ್ಳಲ್ಲ. ಐಐಟಿಗಳಲ್ಲಿ ಪದವಿ ಪಡೆದವರ ನಡುವೆ ನಿರುದ್ಯೋಗ ಹೆಚ್ಚುತ್ತಿದೆ ಮತ್ತು ಉದ್ಯೋಗ ಪಡೆದವರ ಸಂಬಳದ ಪ್ಯಾಕೇಜ್ ಕಡಿಮೆ ಆಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ದಿಸೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಕಾಲೇಜುಗಳು, ಪೋಷಕರು ಜಾಗೃತರಾಗಬೇಕಾದ ಸಮಯ ಇದಾಗಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ.
2025ರಲ್ಲಿ ದೇಶದ 12 ರಾಜ್ಯಗಳ 30,120 ಮಂದಿ ಪದವೀಧರರನ್ನು ಸಂಪರ್ಕಿಸಿ, ಸಿದ್ಧಪಡಿಸಿರುವ ವರದಿ
ಸಮೀಕ್ಷೆಗಾಗಿ ಸಂಪರ್ಕಿಸಿರುವವರ ಪೈಕಿ ಶೇ 72ರಷ್ಟು ಮಂದಿ ಎಂಜಿನಿಯರಿಂಗ್ ಪದವೀಧರರು. ಶೇ 16ರಷ್ಟು ಬಿ–ಸ್ಕೂಲ್ ಪದವೀಧರರು ಮತ್ತು ಶೇ 12ರಷ್ಟು ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳ ಪದವೀಧರರು ಕೂಡ ಭಾಗಿ
ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ 700 ಉದ್ದಿಮೆಗಳೂ ಸಮೀಕ್ಷೆಯಲ್ಲಿ ಭಾಗಿ
2025ರಲ್ಲಿ ಪದವಿ ಪಡೆದಿದ್ದ ಎಂಜಿನಿಯರಿಂಗ್ ಪದವೀಧರರಲ್ಲಿ ಶೇ 83ರಷ್ಟು ಮಂದಿಗೆ ಕೆಲಸದ ಆಫರ್ ಸಿಕ್ಕಿಲ್ಲ
ಕೆಲಸ ಸಿಕ್ಕಿದವರಿಗೂ ಸಂಬಳ ಕಡಿಮೆ
ಪದವೀಧರರಲ್ಲಿ ಕೌಶಲಗಳ ಕೊರತೆ. ಶೇ 63ರಷ್ಟು ಕಂಪನಿಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ
ನೇಮಕಾತಿ ಸಂದರ್ಭದಲ್ಲಿ ಕೌಶಲಕ್ಕೆ ಆದ್ಯತೆ ಕೊಟ್ಟು, ನಂತರ ಸಂದರ್ಶನದಲ್ಲಿ ಅವರ ಪ್ರದರ್ಶನ, ಆ ಬಳಿಕ ಅವರ ಶೈಕ್ಷಣಿಕ ಸಾಧನೆಯ ಬಗ್ಗೆ ಗಮನ ಹರಿಸುತ್ತವೆ
ಇಂಟರ್ನ್‌ಶಿಪ್‌ಗೆ ಸೇರಿದ ಎಂಜಿನಿಯರಿಂಗ್ ಪದವೀಧರರಲ್ಲಿ ನಾಲ್ವರಲ್ಲಿ ಒಬ್ಬರಿಗೆ ಗೌರವ ಧನ ಸಿಗುವುದೇ ಇಲ್ಲ, ನಾಲ್ವರಲ್ಲಿ ಒಬ್ಬರಿಗೆ ₹10 ಸಾವಿರದಷ್ಟು ಸಿಗುತ್ತದೆ
ಈಗಿನ ತಂತ್ರಜ್ಞಾನ ಮತ್ತು ಮಾರುಕಟ್ಟೆಯಲ್ಲಿರುವ ಬೇಡಿಕೆಗೆ ತಕ್ಕಂತೆ ಎಂಜಿನಿಯರಿಂಗ್ ಪಠ್ಯಗಳ ಪರಿಷ್ಕರಣೆ ನಡೆಯಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಉದ್ದಿಮೆಗಳೊಂದಿಗೆ ಪಾಲುದಾರಿಕೆ ಹೊಂದಬೇಕು. ಕೋರ್ಸ್‌ಗಳನ್ನು ರೂಪಿಸುವುದಕ್ಕಾಗಿ ಹಾಗೂ ಆಗಬೇಕಿರುವ ಬದಲಾವಣೆಗಳು ಮತ್ತು ಅಗತ್ಯವಿರುವ ಕೌಶಲಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲು ಉದ್ದಿಮೆ ತಜ್ಞರನ್ನೊಳಗೊಂಡ ಸಲಹಾ ಸಮಿತಿಗಳನ್ನು ವಿಶ್ವವಿದ್ಯಾಲಯಗಳು ರಚಿಸಬೇಕು
ವಿದ್ಯಾರ್ಥಿಗಳು/ಪದವೀಧರರಿಗೆ ಉದ್ದಿಮೆ ಹಾಗೂ ಮಾಡುವ ಕೆಲಸದ ಬಗ್ಗೆ ಪ್ರಾಯೋಗಿಕ ಅನುಭವ ಸಿಗುವಂತೆ ಮಾಡಬೇಕು. ಗೌರವಧನ ಸಹಿತ ಇಂಟರ್ನ್‌ಶಿಪ್‌ಗೆ ಅವಕಾಶ ಕಲ್ಪಿಸುವುದಕ್ಕಾಗಿ ಶಿಕ್ಷಣ ಸಂಸ್ಥೆಗಳು ವಿವಿಧ ಕಂಪನಿಗಳು, ನವೋದ್ಯಮಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳ ಜೊತೆ ಪಾಲುದಾರಿಕೆ ಹೊಂದಬೇಕು
ಈಗಿರುವ ಕೋರ್ಸ್‌ಗಳ ಜೊತೆಗೆ ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ಸೈಬರ್ ಭದ್ರತೆ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ತಾಂತ್ರಿಕ, ಪ್ರೋಗ್ರಾಮಿಂಗ್ ಮತ್ತು ಕೌಶಲಗಳ ತರಬೇತಿಗಳನ್ನು ಸೇರ್ಪಡೆಗೊಳಿಸಲು ವಿವಿಗಳು ಕ್ರಮ ಕೈಗೊಳ್ಳಬೇಕು
ಎಂಜಿನಿಯರಿಂಗ್ ಕೋರ್ಸ್ ಮಾಡುತ್ತಿರುವಾಗಲೇ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕೌನ್ಸೆಲಿಂಗ್ ನಡೆಸಬೇಕು. ವಿವಿಗಳು ರಚನಾತ್ಮಕವಾದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ರೂಪಿಸಬೇಕು
ಹೊಸ ಪದವೀಧರರನ್ನು ನೇಮಕ ಮಾಡಿಕೊಳ್ಳುವ ಕಂಪನಿಗಳಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು
ಉದ್ಯೋಗಾವಕಾಶಗಳು ನಗರ ಕೇಂದ್ರಿತವಾಗುವುದನ್ನು ತಪ್ಪಿಸಲು ಸಣ್ಣ ನಗರಗಳಲ್ಲಿ ಉದ್ಯೋಗ ಸೃಷ್ಟಿಗೆ, ಮೂಲಸೌಕರ್ಯ ಅಭಿವೃದ್ಧಿ ಪಡಿಸಲು, ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಕ್ರಮ ವಹಿಸಬೇಕು
ಆಧಾರ: ರಾಜ್ಯ ಸರ್ಕಾರದ ಪ್ರಕಟಣೆ, ಅನ್‌ಸ್ಟಾಪ್ ಟ್ಯಾಲೆಂಟ್ ವರದಿ (2025), ಇಂಟರ್‌ನ್ಯಾಷನಲ್ ಜರ್ನಲ್ ಆಫ್ ರಿಸರ್ಚ್ ಇನ್ ಸೋಷಿಯಲ್ ಸೈನ್ಸ್ ಆ್ಯಂಡ್ ಹ್ಯುಮಾನಿಟೀಸ್ (ಐಜೆಆರ್‌ಎಸ್‌ಎಸ್), ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.