ADVERTISEMENT

ಆಳ–ಅಗಲ: ಎಪ್‌ಸ್ಟೈನ್ ಫೈಲ್ಸ್ ರಾಜಕೀಯ ಬಿರುಗಾಳಿ

ಅಮೆರಿಕದ ಲೈಂಗಿಕ ಅಪರಾಧಿಯೊಂದಿಗೆ ನಂಟು: ವಿವಿಧ ದೇಶಗಳ ಘಟಾನುಘಟಿಗಳ ತಲೆದಂಡ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 23:31 IST
Last Updated 22 ಫೆಬ್ರುವರಿ 2026, 23:31 IST
ಕಲೆ: ಸಂತೋಷ್‌ ಸಸಿಹಿತ್ಲು
ಕಲೆ: ಸಂತೋಷ್‌ ಸಸಿಹಿತ್ಲು   
ಎಪ್‌ಸ್ಟೈನ್ ಫೈಲ್ಸ್ ಹಲವು ದೇಶಗಳಲ್ಲಿ ತಲ್ಲಣ ಉಂಟುಮಾಡಿದೆ. ಇಂಗ್ಲೆಂಡ್‌ ಪ್ರಧಾನಿ ಕೀರ್ ಸ್ಟಾರ್ಮರ್ ಆಪ್ತ, ಪೀಟರ್ ಮ್ಯಾಂಡೆಲ್‌ಸನ್ ತಲೆದಂಡವಾಗಿದೆ. ಪ್ರಧಾನಿಯ ರಾಜೀನಾಮೆಗೂ ಒತ್ತಡ ಹೇರಲಾಗುತ್ತಿದೆ. ಮಾಜಿ ರಾಜಕುಮಾರ ಆಂಡ್ರ್ಯೂ ಮೌಂಟ್‌ಬ್ಯಾಟನ್ ವಿಂಡ್ಸರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಎಪ್‌ಸ್ಟೈನ್‌ ಫೈಲ್ಸ್‌ನಿಂದ ಜಾಗತಿಕ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಣಾಮಗಳು ಘಟಿಸಲಿವೆ ಎಂದು ಹೇಳಲಾಗುತ್ತಿದೆ

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ಗೆ ಸಂಬಂಧಿಸಿದ ದಾಖಲೆಗಳು (ಫೈಲ್ಸ್‌) ಜನವರಿ 30ರಂದು ಬಹಿರಂಗವಾದ ನಂತರ ಜಾಗತಿಕ ಮಟ್ಟದಲ್ಲಿ ತಲ್ಲಣ ಉಂಟಾಗಿದೆ. ರಾಜಕಾರಣ, ಉದ್ದಿಮೆ, ಮನರಂಜನೆ ಮತ್ತು ಶೈಕ್ಷಣಿಕ ವಲಯದ ಘಟಾನುಘಟಿಗಳ ಹೆಸರುಗಳು ಎಪ್‌ಸ್ಟೈನ್ ಫೈಲ್ಸ್‌ನಲ್ಲಿ ಸ್ಥಾನ ಪಡೆದಿವೆ. ಹೀನ ಚಾರಿತ್ರ್ಯದ ಎಪ್‌ಸ್ಟೈನ್‌ನೊಂದಿಗೆ ನಂಟು ಹೊಂದಿದ್ದವರ ಹೆಸರುಗಳು ಹೊರಬರುತ್ತಿವೆ.

ಅಮೆರಿಕದ ನ್ಯಾಯಾಂಗ ಇಲಾಖೆಯು 30 ಲಕ್ಷ ಪುಟಗಳ ದಾಖಲೆಗಳು, 1.8 ಲಕ್ಷ ಚಿತ್ರಗಳು, ಎರಡು ಸಾವಿರ ವಿಡಿಯೊಗಳನ್ನು ಬಿಡುಗಡೆ ಮಾಡಿದೆ. ಜಗತ್ತಿನ ವಿವಿಧ ಕ್ಷೇತ್ರಗಳ ಖ್ಯಾತನಾಮರಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೊಗಳು, ಇಮೇಲ್‌ಗಳು ಅವುಗಳಲ್ಲಿವೆ. ಫೈಲ್ಸ್‌ನಲ್ಲಿ ಪ್ರಸ್ತಾಪವಾಗಿರುವ ಎಲ್ಲರೂ ತಪ್ಪಿತಸ್ಥರು ಎಂದು ಹೇಳಲಾಗದಿದ್ದರೂ ಮಾನವ ಕುಲದ ಇತಿಹಾಸದಲ್ಲಿಯೇ ಅತ್ಯಂತ ನೀಚತನದ ಕೃತ್ಯವೆಸಗಿದ ಎಪ್‌ಸ್ಟೈನ್‌ ಜತೆಗೆ ನಂಟು ಹೊಂದಿದ್ದುದೇ ಮಹಾ ಕಳಂಕ ಎನ್ನುವಂತಾಗಿದೆ.

ಪೀಟರ್‌ ಮ್ಯಾಂಡಲ್‌ಸನ್‌

ADVERTISEMENT

ಮಹಿಳೆಯರ ಕಳ್ಳಸಾಗಣೆ ಮತ್ತು ಬಾಲಕಿಯರ ಮೇಲೆ ಅತ್ಯಾಚಾರದಂಥ ಅನೇಕ ಹೇಯ ಕೃತ್ಯಗಳನ್ನು ಎಸಗಿದ್ದ ಎಪ್‌ಸ್ಟೈನ್, ಇಂಥ ಸರಣಿ ಅಪರಾಧಗಳಲ್ಲಿ ತೊಡಗಿದ್ದ. ತನ್ನ ಐಷಾರಾಮಿ ಮನೆಗಳಲ್ಲಿ ಬಾಲಕಿಯರನ್ನು ಕೂಡಿಹಾಕಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯಲು ಕಾರಣನಾಗಿದ್ದ. ವಿವಿಧ ದೇಶಗಳ ಜನಪ್ರತಿನಿಧಿಗಳು, ಪ್ರಭಾವಶಾಲಿಗಳು, ಉದ್ಯಮಿಗಳು ಎಪ್‌ಸ್ಟೈನ್ ಜತೆಗೆ ನಂಟು ಹೊಂದಿದ್ದರು. ಈ ಪೈಕಿ ಅನೇಕರು ಅವನ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸಿದ್ದರು. ತನ್ನ ವಿರುದ್ಧದ ಪ್ರಕರಣಗಳ ಕಾರಣದಿಂದ ಜೈಲು ಸೇರಿದ್ದ ಎಪ್‌ಸ್ಟೈನ್, 2019ರಲ್ಲಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋದ. ಆನಂತರ ತನಿಖೆಯ ವೇಳೆ ಪತ್ತೆಯಾಗಿದ್ದ ಇಮೇಲ್‌ಗಳು, ವಿಡಿಯೊಗಳು ಮತ್ತಿತರ ದಾಖಲೆಗಳನ್ನು ಬಹಿರಂಗ ಮಾಡುವಂತೆ ಜನ ಒತ್ತಾಯ ಹೇರತೊಡಗಿದರು. ಡೊನಾಲ್ಡ್ ಟ್ರಂಪ್ ಸರ್ಕಾರವು ಅವುಗಳನ್ನು ಹಂತಹಂತವಾಗಿ ಬಹಿರಂಗ ಮಾಡುತ್ತಿದೆ.

ಎಪ್‌ಸ್ಟೈನ್ ಫೈಲ್ಸ್‌ನಿಂದ ಮೊದಲು ತಳಮಳ ಉಂಟಾಗಿದ್ದೇ ಅಮೆರಿಕದಲ್ಲಿ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದಲೇ ಪಟ್ಟಿ ಮೊದಲಾಗುತ್ತದೆ. ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಅವರ ಮಾಜಿ ಖಜಾನೆ ಕಾರ್ಯದರ್ಶಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯ ಮಾಜಿ ಅಧ್ಯಕ್ಷ ಲ್ಯಾರಿ ಸಮರ್ಸ್, ಟ್ರಂಪ್ ಸರ್ಕಾರದ ಹಣಕಾಸು ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ಟ್ರಂಪ್ ಅವರ ಮಾಜಿ ಸಲಹೆಗಾರ ಸ್ಟೀವ್ ಬ್ಯಾನನ್ ಸೇರಿದಂತೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಮತ್ತು ಈಗಲೂ ಸಕ್ರಿಯವಾಗಿರುವ ಅನೇಕರು ಎಪ್‌ಸ್ಟೈನ್ ಜತೆಗೆ ನಂಟು ಹೊಂದಿರುವುದು ಪತ್ತೆಯಾಗಿದೆ. ಈ ಪೈಕಿ ಬಹುತೇಕರು, ಎಪ್‌ಸ್ಟೈನ್ ಜತೆಗಿನ ತಮ್ಮ ನಂಟನ್ನು ಒಪ್ಪಿಕೊಂಡರೂ, ತಾವು ಯಾವುದೇ ತ‍ಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ, ಯಾರೂ ತಮ್ಮ ಹುದ್ದೆ/ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿಲ್ಲ. ಎಪ್‌ಸ್ಟೈನ್‌ ಸಂಗಾತಿ ಎನ್ನಲಾಗುವ ಗಿಲೇನ್ ಮ್ಯಾಕ್ಸ್‌ವೆಲ್ 2021ರಲ್ಲೇ ಅಪರಾಧಿ ಎಂದು ಸಾಬೀತಾಗಿದ್ದು, 20 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದಾಳೆ. ಬಾಲಕಿಯರನ್ನು ಎಪ್‌ಸ್ಟೈನ್‌ಗೆ ಪೂರೈಸುತ್ತಿದ್ದ ಆರೋಪ ಹೊತ್ತಿರುವ ಅವಳ ತನಿಖೆಯಿಂದ ಹಗರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ.

ಆಂಡ್ರ್ಯೂ ಮೌಂಟ್‌ ಬ್ಯಾಟನ್ ವಿಂಡ್ಸರ್

ಬ್ರಿಟನ್‌ನಲ್ಲಿ ಬಿರುಗಾಳಿ: 

ಬ್ರಿಟನ್‌ನ ರಾಜಕೀಯದಲ್ಲಂತೂ ಎಪ್‌ಸ್ಟೈನ್ ದಾಖಲೆಗಳು ಬಿರುಗಾಳಿಯನ್ನೇ ಎಬ್ಬಿಸಿವೆ. ಎಪ್‌ಸ್ಟೈನ್ ಜತೆಗಿನ ಸಂಪರ್ಕ ಹೊಂದಿದ್ದು ಬಹಿರಂಗವಾದ ಕಾರಣಕ್ಕೆ ಮಾಜಿ ಸಚಿವ ಮತ್ತು ಅಮೆರಿಕಕ್ಕೆ ಬ್ರಿಟನ್‌ನ ರಾಯಭಾರಿಯಾಗಿದ್ದ ಪೀಟರ್ ಮ್ಯಾಂಡೆಲ್‌ಸನ್ ತಮ್ಮ ಲೇಬರ್ ಪಕ್ಷದ ಸ್ಥಾನಕ್ಕೆ ಫೆಬ್ರುವರಿ 1ರಂದು ರಾಜೀನಾಮೆ ನೀಡಿದರು. ವಿವಾದ ತೀವ್ರಗೊಳ್ಳುತ್ತಿದ್ದಂತೆ ಫೆ.4ರಂದು ಮೇಲ್ಮನೆಗೂ ರಾಜೀನಾಮೆ ಸಲ್ಲಿಸಿದರು. ಅವರು ಎಪ್‌ಸ್ಟೈನ್‌ನಿಂದ ಹಣ ಪಡೆದ ದಾಖಲೆಗಳು ಬಹಿರಂಗವಾಗಿವೆ. 2009ರಲ್ಲಿ ವ್ಯವಹಾರ ಕಾರ್ಯದರ್ಶಿ ಆಗಿದ್ದ ಕಾಲದಲ್ಲಿ ಸರ್ಕಾರದ ಆಂತರಿಕ ವಿಚಾರಗಳನ್ನು ಅವರು ಎಪ್‌ಸ್ಟೈನ್‌ಗೆ ರವಾನಿಸಿರುವುದು ಇಮೇಲ್‌ಗಳಿಂದ ದೃಢವಾಗಿದೆ. ಮ್ಯಾಂಡೆಲ್‌ಸನ್ ನೇಮಕಕ್ಕೆ ಶಿಫಾರಸು ಮಾಡಿದ್ದ ಸ್ಟಾರ್ಮರ್ ಸರ್ಕಾರದ ಸಿಬ್ಬಂದಿ ಮುಖ್ಯಸ್ಥ ಮಾರ್ಗನ್ ಮೆಕ್‌ಸ್ವೀನಿ ಹುದ್ದೆಯಿಂದ ಕೆಳಗಿಳಿದರು. ಇದೇ ವಿವಾದಕ್ಕೆ ಸಂಬಂಧಿಸಿದಂತೆ, ಸಂವಹನ ನಿರ್ದೇಶಕ ಟಿಮ್ ಅಲಾನ್ ಕೂಡ ಹುದ್ದೆ ತ್ಯಾಗ ಮಾಡಿದರು. ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್ ಅವರೂ ರಾಜೀನಾಮೆ ನೀಡ ಬೇಕೆಂದು ಸ್ಕಾಟ್ಲೆಂಡ್‌ನ ಲೇಬರ್ ಪಕ್ಷದ ಮುಖಂಡ ಎನಸ್ ಸಾರ್ವರ್ ಸೇರಿದಂತೆ ಹಲವರು ಒತ್ತಾಯಿಸುತ್ತಿದ್ದಾರೆ. ಮ್ಯಾಂಡೆಲ್‌ಸನ್ ವಿರುದ್ಧ ತನಿಖೆ ನಡೆಯುತ್ತಿದ್ದು, ಮುಂದೆಯೂ ಇದು ಹಲವರ ತಲೆದಂಡಕ್ಕೆ ಕಾರಣವಾಗಬಹುದು ಎನ್ನುವ ಮಾತುಗಳಿವೆ.

ಎಪ್‌ಸ್ಟೈನ್ ಫೈಲ್ಸ್‌ನಿಂದ ಇಂಗ್ಲೆಂಡ್‌ನ ರಾಜಮನೆತನದಲ್ಲಿಯೂ ತಲ್ಲಣ ಮೂಡಿದೆ. ಎಪ್‌ಸ್ಟೈನ್‌ ಜತೆ ಆತ್ಮೀಯತೆ ಹೊಂದಿದ್ದರು ಎನ್ನುವುದು ಬಹಿರಂಗವಾಗುತ್ತಿದ್ದಂತೆಯೇ ಮಾಜಿ ರಾಜಕುಮಾರ ಆಂಡ್ರ್ಯೂ ಮೌಂಟ್‌ಬ್ಯಾಟನ್ ವಿಂಡ್ಸರ್ ಅವರನ್ನು ಮೊದಲು ಬಕಿಂಗ್ ಹ್ಯಾಮ್ ಅರಮನೆಯಿಂದ ಹೊರಹಾಕಲಾಗಿತ್ತು. ನಂತರ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. 2010ರಲ್ಲಿ ಅವರು ದೇಶದ ರಹಸ್ಯ ಮಾಹಿತಿಯನ್ನು ಎಪ್‌ಸ್ಟೈನ್‌ಗೆ ರವಾನಿಸಿದ್ದರು ಎನ್ನಲಾಗಿದೆ. ಆಂಡ್ರ್ಯೂ ವಿರುದ್ಧ ತನಿಖೆ ನಡೆಯುತ್ತಿದೆ.

ಫ್ರಾನ್ಸ್‌ನಲ್ಲೂ ಎಪ್‌ಸ್ಟೈನ್‌ ದಾಖಲೆಗಳು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿವೆ. ಸಂಸ್ಕೃತಿ ಸಚಿವರಾಗಿದ್ದ ಜ್ಯಾಕ್‌ ಲ್ಯಾಂಗ್‌ ಮತ್ತು ಅವರ ಕುಟುಂಬದವರು ಎಪ್‌ಸ್ಟೈನ್‌ ಜೊತೆ ಹಣಕಾಸಿನ ವ್ಯವಹಾರ ಹೊಂದಿದ್ದ ವಿಷಯ ದಾಖಲೆಗಳಿಂದ ಬಯಲಾದ ಬೆನ್ನಲ್ಲೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಫೈಲ್ಸ್‌ ಅನ್ನು ಪರಿಶೀಲಿಸಲು ಅಲ್ಲಿ ನ್ಯಾಯಾಧೀಶರ ಒಂದು ತಂಡವನ್ನೇ ರಚಿಸಲಾಗಿದೆ.

ನಾರ್ವೆ, ಸ್ಲೊವಾಕಿಯಾ, ಸ್ವೀಡನ್‌ಗಳಲ್ಲೂ ಎಪ್‌ಸ್ಟೈನ್‌ ದಾಖಲೆಗಳ ಕಾರಣಕ್ಕೆ ಕೆಲವರ ತಲೆದಂಡವಾಗಿದೆ.  

ಅಧಿಕಾರ ಕಳೆದುಕೊಂಡ ಪ್ರಮುಖರು
ಥಾರ್ಬ್‌ಜೊರ್ನ್‌ ಜಾಗ್‌ಲ್ಯಾಂಡ್‌:
ನಾರ್ವೆಯ ಮಾಜಿ ಪ್ರಧಾನಿ ಥಾರ್ಬ್‌ಜೊರ್ನ್‌ ಜಾಗ್‌ಲ್ಯಾಂಡ್‌ ಅವರ ಹೆಸರು ಎಪ್‌ಸ್ಟೈನ್‌ ದಾಖಲೆಗಳಲ್ಲಿ ಉಲ್ಲೇಖವಾಗಿರುವುದು ನಾರ್ವೆಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅವರ ಹೆಸರು ಬಹಿರಂಗವಾಗುತ್ತಿದ್ದಂತೆಯೇ ಅಲ್ಲಿನ ಪೊಲೀಸರು ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿದ್ದಾರೆ. ಎಪ್‌ಸ್ಟೈನ್‌ ಮತ್ತು ಜಾಗ್‌ಲ್ಯಾಂಡ್‌ ಅವರು ಇ–ಮೇ‌ಲ್‌ ಮೂಲಕ ಸಂಪರ್ಕದಲ್ಲಿದ್ದರು ಎನ್ನುವುದು ದಾಖಲೆಗಳಿಂದ ಬಹಿರಂಗವಾಗಿದೆ.
ಮೊನಾ ಜೂಲ್‌:
ಜೋರ್ಡನ್‌ ಮತ್ತು ಇರಾಕ್‌ಗೆ ನಾರ್ವೆಯ ರಾಯಭಾರಿಯಾಗಿದ್ದ ಮೊನಾ ಜೂಲ್‌ ಅವರ ಹೆಸರು ಎಪ್‌ಸ್ಟೈನ್‌ ದಾಖಲೆಗಳಲ್ಲಿ ಉಲ್ಲೇಖವಾಗಿರುವುದು ತಿಳಿಯುತ್ತಲೇ ಫೆ.8ರಂದು ವಿದೇಶಾಂಗ ವ್ಯವಹಾರಗಳ ಇಲಾಖೆಯು ಅವರನ್ನು ಅಮಾನತು ಮಾಡಿದೆ. ಆ ಬಳಿಕ ಆಕೆ ತಮ್ಮ ಹುದ್ದೆಗೆ ರಾಜೀನಾಮೆಯನ್ನೂ ನೀಡಿದ್ದಾರೆ. ಮೊನಾ ಮತ್ತು ಅವರ ಪತಿ ತೇರ್ಜೆ ರೊಡ್‌–ಲಾರ್ಸೆನ್‌ ಅವರು ಎಪ್‌ಸ್ಟೈನ್‌ನೊಂದಿಗೆ ಹಣಕಾಸು ವ್ಯವಹಾರ ಹೊಂದಿದ್ದರು. ಈಗ ನಾರ್ವೆ ಪೊಲೀಸರು ದಂಪತಿ ವಿರುದ್ಧ ಭ್ರಷ್ಟಾಚಾರ ‍ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ಜೊಯನ್ನಾ ರುಬಿನ್‌ಸ್ಟೈನ್‌:
ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಹೈಕಮಿಷನ್‌ನಲ್ಲಿ ಸ್ವೀಡನ್‌ ಅನ್ನು ಪ್ರತಿನಿಧಿಸುತ್ತಿದ್ದ ಜೊಯೆನ್ನಾ ರುಬಿನ್‌ಸ್ಟೈನ್‌ ಅವರು ಮತ್ತು ಕುಟುಂಬದೊಂದಿಗೆ 2012ರಲ್ಲಿ ಎಪ್‌ಸ್ಟೈನ್‌ನ ಖಾಸಗಿ ದ್ವೀಪಕ್ಕೆ ಭೇಟಿ ನೀಡಿದ ಸಂಗತಿ ದಾಖಲೆಗಳಿಂದ ಬಹಿರಂಗವಾಗಿತ್ತು. ಆ ಬಳಿಕ ತಮ್ಮ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದಾರೆ. 
ಮಿರೊಸ್ಲಾವ್‌ ಲಾಯ್‌ಚಾಕ್‌:
ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್‌ ಫಿಕೊ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಮಿರೊಸ್ವಾವ್‌ ಲಾಯ್‌ಚಾಕ್‌ ಹೆಸರು ಎಪ್‌ಸ್ಟೈನ್ ದಾಖಲೆಗಳಲ್ಲಿ ಇರುವುದು ಗೊತ್ತಾಗುತ್ತಿದ್ದಂತೆಯೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಒಬ್ಬ ಮಹಿಳೆಯನ್ನು ಎ‍‍ಪ್‌ಸ್ಟೈನ್ ಮತ್ತು ಮಿರೊಸ್ಲಾವ್‌ ಲೇವಡಿ ಮಾಡಿದ್ದು ಇಮೇಲ್ ದಾಖಲೆಗಳಲ್ಲಿ ಪ್ರಸ್ತಾಪವಾಗಿದೆ.

ಬಿಜೆಪಿ, ಕೇಂದ್ರ ಸರ್ಕಾರಕ್ಕೆ ಮುಜುಗರ

ಎಪ್‌ಸ್ಟೈನ್‌ ದಾಖಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ, ಉದ್ಯಮಿ ಅನಿಲ್‌ ಅಂಬಾನಿ ಸೇರಿದಂತೆ ಭಾರತದ ಹಲವರ ಹೆಸರುಗಳಿವೆ. ಈ ದಾಖಲೆಗಳು ದೇಶದ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟಿನ ಸದ್ದು ಮಾಡಿಲ್ಲ. ಆದರೆ, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಮುಜುಗರ ಉಂಟುಮಾಡಿರುವುದು ಸತ್ಯ. ಪ್ರಧಾನಿ ಮೋದಿ ಅವರು ನೇರವಾಗಿ ಎಪ್‌ಸ್ಟೈನ್‌ನನ್ನು ಭೇಟಿ ಮಾಡಿಲ್ಲ. ಎಪ್‌ಸ್ಟೈನ್‌, ಅನಿಲ್‌ ಅಂಬಾನಿ ಅವರನ್ನು ‘ಮೋದಿಯರ ವ್ಯಕ್ತಿ’ ಎಂದು ಸಂಬೋಧಿಸಿದ್ದ ಎನ್ನುವುದು ದಾಖಲೆಗಳಿಂದ ತಿಳಿಯುತ್ತದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪರವಾಗಿ ಅನಿಲ್‌ ಅಂಬಾನಿ ಮಾತನಾಡಿರುವುದು ದಾಖಲೆಗಳಲ್ಲಿದೆ. ಕೇಂದ್ರ ಸರ್ಕಾರವು ಇದನ್ನು ತಳ್ಳಿ ಹಾಕಿದೆ. ಅನಿಲ್ ಅಂಬಾನಿ ಇದುವರೆಗೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಾಂಗ್ರೆಸ್‌, ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಎಪ್‌ಸ್ಟೈನ್‌ ದಾಖಲೆಗಳನ್ನು ಮುಂದಿಟ್ಟುಕೊಂಡು ಹರ್ದೀಪ್‌ ಸಿಂಗ್‌ ಪುರಿ ಅವರನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಿವೆ. ಅವರ ರಾಜೀನಾಮೆಗೂ ಒತ್ತಾಯಿಸುತ್ತಿವೆ. ಸಚಿವ ಪುರಿ ಅವರು ತಾವು ಮೂರು ಬಾರಿ ಎಪ್‌ಸ್ಟೈನ್‌ ಅನ್ನು ಭೇಟಿಯಾಗಿರುವುದು ನಿಜ ಎಂದು ಒಪ್ಪಿಕೊಂಡರೂ, ‘ಆತನೊಂದಿಗೆ ಸೇರಿ ಕೆಟ್ಟದ್ದೇನನ್ನೂ ಮಾಡಿಲ್ಲ. ದೇಶದಲ್ಲಿ ಉದ್ಯಮಕ್ಕೆ ಇರುವ ಅವಕಾಶದ ಬಗ್ಗೆ ಮಾತನಾಡಿದ್ದೇನೆ. ದೇಶಕ್ಕೆ ಒಳಿತಾಗುವ ವಿಷಯವನ್ನಷ್ಟೇ ಚರ್ಚಿಸಿದ್ದೇನೆ’ ಎಂದು ಹೇಳಿದ್ದಾರೆ. ಬಿಜೆಪಿಯು ಪುರಿಯವರ ಬೆಂಬಲಕ್ಕೆ ನಿಂತಿದೆಯಾದರೂ, ಮಾಧ್ಯಮಗಳಲ್ಲಿ ಪುರಿ ಅವರಷ್ಟೇ ತಮ್ಮನ್ನು ಸಮರ್ಥಿಸಿಕೊಳ್ಳುವುದು ಹೆಚ್ಚು ಕಾಣಿಸುತ್ತಿದೆ. 

ಹರ್ದೀಪ್‌ ಸಿಂಗ್‌ ಪುರಿ

ಮೊದಲ ಬಾರಿಗೆ 2008ರಲ್ಲಿ ಎಪ್‌ಸ್ಟೈನ್‌ ಶಿಕ್ಷೆಗೆ ಗುರಿಯಾಗಿದ್ದ. ಆತ ಅಪರಾಧಿ ಎಂದು ತಿಳಿದಿದ್ದರೂ, ಪುರಿ, ಅನಿಲ್‌ ಅಂಬಾನಿ ಹಾಗೂ ದೇಶದ ಇನ್ನಿತರರು ಆತನೊಂದಿಗೆ ಸಂಪರ್ಕ (2014ರ ನಂತರದಲ್ಲಿ) ಇಟ್ಟುಕೊಂಡಿದ್ದು ವಿವಿಧ ವಲಯಗಳಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. 

ಆಧಾರ: ಟೈಮ್, ಸಿಎನ್‌ಎನ್, ನ್ಯೂಯಾರ್ಕ್ ಟೈಮ್ಸ್, ಎಎಫ್‌ಪಿ, ಪಿಟಿಐ, ರಾಯಿಟರ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.