ಭಾರತೀಯರು ಜೀವನದಲ್ಲಿ ಹೆಚ್ಚು ಸಂತೃಪ್ತರಾಗಿಲ್ಲ ಎಂದು ಜಾಗತಿಕ ಸಂತೃಪ್ತಿ ವರದಿ ಹೇಳಿದೆ. ಭಾರತ 118ನೇ ರ‍್ಯಾಂಕ್ ಗಳಿಸಿದೆ. ಯುರೋಪ್, ಪಶ್ಚಿಮ ರಾಷ್ಟ್ರಗಳು ಅಷ್ಟೇ ಏಕೆ ನೆರೆಯ ಪಾಕಿಸ್ತಾನ, ನೇಪಾಳ, ಚೀನಾ ರಾಷ್ಟ್ರಗಳು ಕೂಡ ಭಾರತಕ್ಕಿಂತ ಹೆಚ್ಚಿನ ರ‍್ಯಾಂಕ್ ಪಡೆದಿವೆ. ವಿವಿಧ ಮಾನದಂಡಗಳ ಆಧಾರದಲ್ಲಿ ನೀಡಲಾಗುತ್ತಿರುವ ಈ ರ‍್ಯಾಂಕಿಂಗ್ ಜಗತ್ತಿನ ಜನರ ಯೋಗಕ್ಷೇಮದ ಮೇಲೆ ಬೆಳಕು ಚೆಲ್ಲಿದೆ
‘ಸಂತೃಪ್ತಿ ಎನ್ನುವುದು ಎಲ್ಲಿಯೋ ಸಿಗುವ ಸಿದ್ಧ ಸರಕಲ್ಲ, ನಾವು ಮಾಡುವ ಕ್ರಿಯೆಗಳಿಂದಲೇ ದಕ್ಕುವಂಥದ್ದು’
–ಟಿಬೆಟಿಯನ್ನರ ಧರ್ಮಗುರು ದಲೈಲಾಮ ಅವರು ಸಂತೃಪ್ತಿಯನ್ನು (happiness) ಹೀಗೆ ವಿಶ್ಲೇಷಿಸಿದ್ದಾರೆ.
ಸಂತೃಪ್ತಿ ಎನ್ನುವುದು ಮನುಷ್ಯನ ಜೀವನ, ಯೋಗಕ್ಷೇಮದ ಕನ್ನಡಿ. ಜೀವನ ಸಂತೃಪ್ತಿಯಿಂದ ಕೂಡಿರುವುದಕ್ಕೆ ಹಲವು ಅಂಶಗಳು ಕಾರಣವಾಗುತ್ತವೆ. ಒಂದು ದೇಶ ಅಥವಾ ಪ್ರದೇಶದ ಸಾಮಾಜಿಕ ಸ್ಥಿತಿಗತಿ, ಅಲ್ಲಿ ಜಾರಿಯಲ್ಲಿರುವ ಪರಿಣಾಮಕಾರಿ ಆಡಳಿತ ವ್ಯವಸ್ಥೆ, ಸಮಾಜದೊಂದಿಗೆ ಜನರ ಒಡನಾಟ, ಆದಾಯ, ಆರೋಗ್ಯಯುತ ಜೀವನ, ಸಮಾಜದ ಸಹಕಾರ, ಜನರಲ್ಲಿರುವ ಹಿತಚಿಂತನೆ ಗುಣ... ಹೀಗೆ ಪಟ್ಟಿ ಸಾಗುತ್ತದೆ. ಈ ಅಂಶಗಳು ಅತ್ಯುತ್ತಮವಾಗಿದ್ದರೆ ದೇಶ, ಅಲ್ಲಿನ ಜನರ ಜೀವನ ಸಂತೃಪ್ತಿಯಿಂದ ಕೂಡಿರುತ್ತದೆ ಎಂದು ಹೇಳುತ್ತದೆ ಈ ವರ್ಷದ ಜಾಗತಿಕ ಸಂತೃಪ್ತಿ ವರದಿ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್, ಗಾಲಪ್ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲದ ಸಹಯೋಗದಲ್ಲಿ ಈ ವರದಿಯನ್ನು ಸಿದ್ಧಪಡಿಸಿದ್ದು, ಕಳೆದ ವಾರವಷ್ಟೇ ಬಿಡುಗಡೆ ಮಾಡಲಾಗಿದೆ. ವರದಿಯು ಜಗತ್ತಿನ 147 ರಾಷ್ಟ್ರಗಳ ಜನರ ಯೋಗಕ್ಷೇಮದ ಬಗ್ಗೆ ವರದಿ ಬೆಳಕು ಚೆಲ್ಲಿದೆ. ಪ್ರಮುಖ ಆರು ಸೇರಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ ಈ ರಾಷ್ಟ್ರಗಳ ಜನರ ಸಂತೃಪ್ತಿಯ ಬದುಕನ್ನು ವರದಿಯು ಅಳೆದಿದ್ದು, ಫಿನ್ಲೆಂಡ್ ಮೊದಲ ರ‍್ಯಾಂಕ್ ಪಡೆದಿದೆ. ಡೆನ್ಮಾರ್ಕ್ ಎರಡನೇ, ಐಸ್‌ಲ್ಯಾಂಡ್ ಮೂರನೇ ರ‍್ಯಾಂಕ್ ಪಡೆದಿದೆ.
ಭಾರತಕ್ಕೆ 118ನೇ ರ‍್ಯಾಂಕ್ ಸಿಕ್ಕಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ನೇಪಾಳ, ಭಾರತಕ್ಕಿಂತ ಮೇಲಿನ ರ‍್ಯಾಂಕ್ ಗಳಿಸಿವೆ. ಪಾಕಿಸ್ತಾನ 109ನೇ ಸ್ಥಾನದಲ್ಲಿದ್ದರೆ, ಚೀನಾ 68ನೇ ಮತ್ತು ನೇಪಾಳ 92ನೇ ರ‍್ಯಾಂಕ್ ಪಡೆದಿವೆ. ಯುದ್ಧಪೀಡಿತ ಉಕ್ರೇನ್, ಪ್ಯಾಲೆಸ್ಟೀನ್, ಹಿಂಸಾಚಾರ ಪೀಡಿತ ಪಶ್ಚಿಮ ಏಷ್ಯಾ ರಾಷ್ಟ್ರಗಳು, ತೀವ್ರ ಬಡತನ ಹೊಂದಿರುವ ಆಫ್ರಿಕಾ ಖಂಡದ ಹಲವು ರಾಷ್ಟ್ರಗಳು ಭಾರತಕ್ಕಿಂತಲೂ ಉತ್ತಮ ಸ್ಥಾನ ಗಳಿಸಿವೆ. ಅಫ್ಗಾನಿಸ್ತಾನ ಕೊನೆಯ (147) ಸ್ಥಾನದಲ್ಲಿದೆ.
ಸಂಪತ್ತು ತೃಪ್ತಿ ತರದು
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಗತ್ತಿನ ಬಹುತೇಕ ಸಿರಿವಂತ ರಾಷ್ಟ್ರಗಳು ಮೊದಲ ಹತ್ತು ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ವಿಶ್ವದ ‘ದೊಡ್ಡಣ್ಣ’ ಎಂದು ಗುರುತಿಸಿಕೊಳ್ಳುವ ಅಮೆರಿಕ 24ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (23), ಅದರ ಸ್ಥಾನ ಕುಸಿದಿದೆ. ಇದು ಅಮೆರಿಕದ ಈವರೆಗಿನ ಕನಿಷ್ಠ ರ‍್ಯಾಂಕಿಂಗ್. ಇಸ್ರೇಲ್ ಎಂಟನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 11, ಕೆನಡಾ 18, ಬ್ರಿಟನ್ 23, ಫ್ರಾನ್ಸ್ 33, ಜರ್ಮನಿ 22, ರಷ್ಯಾ 66ನೇ ರ‍್ಯಾಂಕ್ ಗಳಿಸಿವೆ.
ಕಾಳಜಿ, ಹಂಚಿಕೊಳ್ಳುವಿಕೆ
ಪ್ರತಿ ವರ್ಷದ ಜಾಗತಿಕ ಸಂತೃಪ್ತಿ ವರದಿಯು ಸಾಮಾಜಿಕ ಬೆಂಬಲ, ತಲಾವಾರು ಜಿಡಿಪಿ, ಆರೋಗ್ಯಯುತ ಜೀವನದ ನಿರೀಕ್ಷೆ, ಜೀವನದಲ್ಲಿ ಆಯ್ಕೆಯ ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರ ಗ್ರಹಿಕೆಗಳು ಎಂಬ ಆರು ಮಾನದಂಡಗಳನ್ನು ಆಧರಿಸಿರುತ್ತದೆ. ಇವುಗಳ ಆಧಾರದಲ್ಲಿ ಜನರ ಜೀವನದ ಮೌಲ್ಯಮಾಪನ ಮಾಡಿ ಒಟ್ಟು 10 ಅಂಕಗಳಲ್ಲಿ ಪ್ರತಿ ರಾಷ್ಟ್ರಕ್ಕೆ ಅಂಕಗಳನ್ನು ನೀಡಲಾಗುತ್ತದೆ.
ಈ ಬಾರಿಯ ವರದಿಯು ‘ಕಾಳಜಿ ತೋರುವುದು ಮತ್ತು ಹಂಚಿಕೊಳ್ಳುವುದು’ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಸಂತೃಪ್ತಿ ಬದುಕಿನ ಮೇಲೆ ಈ ಎರಡು ಅಂಶಗಳು ಬೀರುವ ಪ್ರಭಾವವನ್ನು ವಿಶ್ಲೇಷಿಸಿದೆ. ದಯಾಪರತೆ/ಹಿತಚಿಂತನೆಯನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರಗಳಿಗೆ ಮತ್ತೊಂದು ರ‍್ಯಾಂಕ್ ನೀಡಲಾಗಿದೆ. ಅಪರಿಚಿತರು ಸೇರಿದಂತೆ ಬೇರೆಯವರಿಗೆ ಸಹಾಯ ಮಾಡುವುದು, ದಾನ ನೀಡುವುದರಿಂದ ಜನರಿಗೆ ಸಂತೃಪ್ತಿ ಸಿಗುತ್ತದೆ. ಸಮಾಜದ ಜನರಲ್ಲಿ ದಯಾಪರತೆ ಜಾಸ್ತಿ ಇದ್ದರೆ, ಸಂತೃಪ್ತಿ ಕಡಿಮೆ ಇರುವವರಿಗೆ ಅನುಕೂಲವಾಗುತ್ತದೆ ಎಂದೂ ವರದಿ ಹೇಳಿದೆ.
ಹಿತಚಿಂತನೆ ಆಧಾರದಲ್ಲಿ ಸಂತೃಪ್ತಿ ರ‍್ಯಾಂಕಿಂಗ್ ನೀಡುವಾಗ ಕಳೆದು ಹೋದ ಪರ್ಸ್ ಅನ್ನು ವಾಪಸ್ ನೀಡುವುದನ್ನೂ ಒಂದು ಮಾನದಂಡವಾಗಿ ಪರಿಗಣಿಸಲಾಗಿದೆ. ತಾವು ಕಳೆದು ಕೊಂಡ ಪರ್ಸ್ ಅನ್ನು ಬೇರೆಯವರು ತಂದು ಕೊಡುವುದು ಜನರಲ್ಲಿ ಸಂತೃಪ್ತಿ ತರುತ್ತದೆ ಎಂದು ಅದು ವಿವರಿಸಿದೆ.
ಹಂಚಿ ತಿನ್ನುವುದರಲ್ಲೂ ಖುಷಿ
ಕುಟುಂಬದವರೆಲ್ಲರೂ ಜೊತೆಯಾಗಿ ಊಟ ಮಾಡುವುದು, ಬೇರೆಯವರೊಂದಿಗೆ ಆಹಾರವನ್ನು ಹಂಚಿಕೊಳ್ಳುವುದು ಕೂಡ ಖುಷಿಗೆ ಕಾರಣವಾಗುತ್ತದೆ. ಅಮೆರಿಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನರು ಏಕಾಂಗಿಯಾಗಿ ಊಟ ಮಾಡುವ ಪ್ರವೃತ್ತಿ ಹೆಚ್ಚುತ್ತಿದ್ದು, ರ‍್ಯಾಂಕಿಂಗ್‌ನಲ್ಲಿ ಕುಸಿತ ಕಾಣುವುದಕ್ಕೆ ಇದೂ ಒಂದು ಕಾರಣ ಎಂದು ವರದಿ ಬೆಟ್ಟು ಮಾಡಿದೆ. ಊಟ ಹಂಚಿಕೆ ಮಾನದಂಡದಲ್ಲಿ ಭಾರತವು 132ನೇ ರ‍್ಯಾಂಕ್ ಗಳಿಸಿದ್ದು, ವಾರದಲ್ಲಿ ಸರಾಸರಿ ನಾಲ್ಕು ಊಟವನ್ನು ಹಂಚಲಾಗುತ್ತದೆ ಎಂದು ಹೇಳಿದೆ. ವರದಿಯ ಪ್ರಕಾರ, ಗಂಡ– ಹೆಂಡತಿ ಮಕ್ಕಳು ಒಟ್ಟಾಗಿ ಒಂದೇ ಮನೆಯಲ್ಲಿ ವಾಸಿಸುವುದು, ಸಾಮಾಜಿಕ ಸಂಪರ್ಕ, ಜನರೊಂದಿಗೆ ಒಡನಾಟವೂ ಜನರ ಖುಷಿಯನ್ನು ಹೆಚ್ಚಿಸುತ್ತದೆ.
ಫಿನ್ಲೆಂಡ್ ಮೊದಲೇಕೆ?
ಯುರೋಪಿನ ಪುಟ್ಟ ರಾಷ್ಟ್ರ ಫಿನ್ಲೆಂಡ್ ಸತತ ಎಂಟು ವರ್ಷಗಳಿಂದ ಮೊದಲ ರ‍್ಯಾಂಕ್ ಗಳಿಸುತ್ತಿದೆ. ಫಿನ್ಲೆಂಡ್‌ನಲ್ಲಿ ಗುಣಮಟ್ಟದ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಬೆಂಬಲ ವ್ಯವಸ್ಥೆಗಳಿವೆ. ಸರ್ಕಾರಿ ಆಡಳಿತ ವ್ಯವಸ್ಥೆ ಸದೃಢವಾಗಿದ್ದು, ಜನರಿಗೆ ಅತ್ಯುತ್ತಮ ಸೇವೆಗಳು ಲಭ್ಯವಾಗುತ್ತಿವೆ. ಭ್ರಷ್ಟಾಚಾರ ಕಡಿಮೆ ಇದೆ. ಆರ್ಥಿಕ, ಸಾಮಾಜಿಕ ಅಸಮಾನತೆ ಕಡಿಮೆ ಇರುವುದರಿಂದ ಖಾಸಗಿ ದಾನ–ಧರ್ಮದ ಅವಶ್ಯಕತೆ ಇಲ್ಲ ಎಂದು ವರದಿ ಹೇಳಿದೆ.
ಕಡಿಮೆ ರ‍್ಯಾಂಕ್ ಬಂದಿದ್ದೇಕೆ?
ಭಾರತವು ಕಡಿಮೆ ರ‍್ಯಾಂಕ್ ಗಳಿಸಲು ಏನು ಕಾರಣ ಎಂಬ ಬಗ್ಗೆ ವರದಿಯಲ್ಲಿ ವಿವರಣೆ ಇಲ್ಲ. ಆದರೆ, ರಾಷ್ಟ್ರವಾರು ಅಂಕಗಳನ್ನು ಅವಲೋಕಿಸಿದಾಗ ದೇಶವು ಸಾಮಾಜಿಕ ಬೆಂಬಲ, ತಲಾವಾರು ಜಿಡಿಪಿ, ಔದಾರ್ಯ, ಭ್ರಷ್ಟಾಚಾರ ಗ್ರಹಿಕೆ ಮಾನದಂಡಗಳಲ್ಲಿ ಕಡಿಮೆ ರ‍್ಯಾಂಕಿಂಗ್ ಗಳಿಸಿದೆ. ಜೀವನದ ಆಯ್ಕೆ ಸ್ವಾತಂತ್ರ್ಯದ ಮಾನದಂಡದಲ್ಲಿ ಮಾತ್ರ ಉತ್ತಮ ರ‍್ಯಾಂಕಿಂಗ್ ಹೊಂದಿದೆ.
ದೇಶದಲ್ಲಿರುವ ಆರ್ಥಿಕ ಒತ್ತಡ, ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಜನರ ನಡುವಿನ ಆರ್ಥಿಕ ಅಸಮಾನತೆ, ಸಾಮಾಜಿಕ ಸ್ಥಿತಿಗತಿಗಳು ಕಡಿಮೆ ರ‍್ಯಾಂಕಿಂಗ್ ಬರಲು ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಆಧಾರ: ಜಾಗತಿಕ ಸಂತೃಪ್ತಿ ವರದಿ–2025
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.