ದೇಶದ ಅತ್ಯಂತ ಶ್ರೀಮಂತ 10 ಶಾಸಕರ ಪೈಕಿ ಕರ್ನಾಟಕದ ನಾಲ್ವರು ಇದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ. ಕನಕಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿರಿವಂತ ಶಾಸಕರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಮೌಲ್ಯ ₹1,413 ಕೋಟಿ. ₹1,267 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಗೌರಿಬಿದನೂರಿನ ಕಾಂಗ್ರೆಸ್ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಿಂದ ಗೆದ್ದಿರುವ ಪ್ರಿಯಕೃಷ್ಣ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಚಿವ ಭೈರತಿ ಸುರೇಶ್ ದೇಶದಲ್ಲೇ 10ನೇ ಶ್ರೀಮಂತ ಶಾಸಕ. ₹3,383 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಮಹಾರಾಷ್ಟ್ರದ ಘಾಟ್‌ಕೋಪರ್ ಕ್ಷೇತ್ರದ ಪರಾಗ್ ಶಾ (ಬಿಜೆಪಿ) ಅವರು ರಾಷ್ಟ್ರದ ಅತೀ ಶ್ರೀಮಂತ ಶಾಸಕ.
ದೇಶದ 28 ರಾಜ್ಯ, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದಿರುವ ಶಾಸಕರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಎಡಿಆರ್ ವರದಿಯನ್ನು ಸಿದ್ಧಪಡಿಸಿದೆ. ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಪ್ರಮಾಣಪತ್ರಗಳಲ್ಲಿನ ಇತರ ಮಾಹಿತಿಗಳನ್ನು ವಿಶ್ಲೇಷಿಸಲಾಗಿದೆ.
ಒಟ್ಟು 4,123 ವಿಧಾನಸಭಾ ಕ್ಷೇತ್ರಗಳ ಪೈಕಿ 4,092 ಕ್ಷೇತ್ರದ ಶಾಸಕರನ್ನು ವಿಶ್ಲೇಷಣೆ ಮಾಡಲಾಗಿದೆ. 24 ಶಾಸಕರು ಸಲ್ಲಿಸಿರುವ ಪ್ರಮಾಣಪತ್ರಗಳು ಮಸುಕಾಗಿದ್ದು, ಅವನ್ನು ಕೈಬಿಡಲಾಗಿದೆ. ಉಳಿದಂತೆ 7 ಸ್ಥಾನಗಳು ಖಾಲಿ ಇವೆ ಎಂದು ಎಡಿಆರ್ ವರದಿಯಲ್ಲಿ ಉಲ್ಲೇಖಿಸಿದೆ.
4,092 ಶಾಸಕರ ಒಟ್ಟು ಆಸ್ತಿ ಮೌಲ್ಯವು ₹73,348 ಕೋಟಿ. ಇದು ನಾಗಾಲ್ಯಾಂಡ್ (₹23,086 ಕೋಟಿ), ತ್ರಿಪುರಾ (₹26,892 ಕೋಟಿ) ಮತ್ತು ಮೇಘಾಲಯ ರಾಜ್ಯಗಳ ಬಜೆಟ್ ಗಾತ್ರಕ್ಕಿಂತ ಹೆಚ್ಚು (₹72,000) ಹೆಚ್ಚಾಗಿದೆ.
ಕರ್ನಾಟಕ ಶಾಸಕರ ಒಟ್ಟು ಆಸ್ತಿ ಮೌಲ್ಯ ₹14,179 ಕೋಟಿ. ಕರ್ನಾಟಕದಲ್ಲಿ 31 ಶತಕೋಟ್ಯಧಿಪತಿ ಶಾಸಕರಿದ್ದಾರೆ. ದೇಶದ 100 ಶ್ರೀಮಂತ ಶಾಸಕರಲ್ಲಿ 26 ಮಂದಿ ರಾಜ್ಯದರು.
ಪರಾಗ್‌ಸಿಂಗ್ (ಬಿಜೆಪಿ, ಮಹಾರಾಷ್ಟ್ರದ ಘಾಟ್‌ಕೋಪರ್);₹3,383
ಡಿ.ಕೆ.ಶಿವಕುಮಾರ್ (ಕಾಂಗ್ರೆಸ್, ಕನಕಪುರ);₹1,413
ಕೆ.ಎಚ್.ಪುಟ್ಟಸ್ವಾಮಿಗೌಡ (ಕಾಂಗ್ರೆಸ್, ಗೌರಿಬಿದನೂರು);₹1,267
ಪ್ರಿಯಾಕೃಷ್ಣ(ಕಾಂಗ್ರೆಸ್, ಗೋವಿಂದರಾಜನಗರ);₹1,156
ಚಂದ್ರಬಾಬು ನಾಯ್ಡು (ಟಿಡಿಪಿ, ಆಂಧ್ರಪ್ರದೇಶದ ಕುಪ್ಪಂ);₹931
ನಾರಾಯಣ ಪೊಂಗುರು (ಟಿಡಿಪಿ, ಆಂಧ್ರಪ್ರದೇಶದ ನೆಲ್ಲೂರು ಸಿಟಿ);₹824
ವೈ.ಎಸ್.ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ, ಆಂಧ್ರಪ್ರದೇಶದ ಪುಲಿವೆಂದುಲ);₹757
ಪ್ರಶಾಂತಿ ರೆಡ್ಡಿ ವೆಮಿರೆಡ್ಡಿ (ಟಿಡಿಪಿ, ಆಂಧ್ರಪ್ರದೇಶದ ಕೊವೂರು);₹716
ಜಯಂತಿಭಾಯಿ ಸೋಮಭಾಯಿ ಪಟೇಲ್ (ಬಿಜೆಪಿ, ಗುಜರಾತ್‌ನ ಮನಸಾ);₹661
ಸುರೇಶ್ ಬಿ.ಎಸ್ (ಭೈರತಿ ಸುರೇಶ್) (ಕಾಂಗ್ರೆಸ್, ಹೆಬ್ಬಾಳ);₹648
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.