ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಜೀವ ವಿಮೆಯ ಸೌಲಭ್ಯ ಕಲ್ಪಿಸುವುದಕ್ಕಾಗಿ ಜಾರಿಗೆ ತರಲಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿ ಆಧಾರಿತ ವಿಮಾ ಯೋಜನೆಯ (ಇಡಿಎಲ್‌ಐ) ನಿಯಮಗಳನ್ನು ಸರಳೀಕರಿಸಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಯೋಜನೆಗೆ ಸಂಬಂಧಿಸಿದ ಕೆಲವು ಷರತ್ತುಗಳನ್ನು ತೆಗೆದುಹಾಕಿರುವುದರಿಂದ ಕಡಿಮೆ ವೇತನ ಹೊಂದಿರುವ ಮತ್ತು ಪದೇ ಪದೇ ಕೆಲಸ ಬದಲಾಯಿಸುವ ಉದ್ಯೋಗಿಗಳಿಗೆ ನೆರವಾಗಲಿದೆ
ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರೆ ಆ ಕುಟುಂಬ ಎದುರಿಸಬೇಕಾಗುವ ಸವಾಲುಗಳು ಒಂದೆರಡಲ್ಲ. ಇಡೀ ಕುಟುಂಬ ಆರ್ಥಿಕ ಮುಗ್ಗಟ್ಟಿಗೆ ಸಿಲುಕುತ್ತದೆ. ಅವಲಂಬಿತರು ಬದುಕಿನ ಬಂಡಿ ಎಳೆಯಲು ಕಷ್ಟಪಡುತ್ತಾರೆ. ಜೀವನದ ಅಂಥ ಅನಿರೀಕ್ಷಿತ ಅವಘಡಗಳಿಂದ ರಕ್ಷಣೆ ನೀಡುವುದು ವಿಮಾ ಸೌಲಭ್ಯ. ದೇಶದಲ್ಲಿ ಖಾಸಗಿ ವಲಯದಲ್ಲಿ ದುಡಿಯುವವರ ಸಂಖ್ಯೆ ಹೆಚ್ಚಿದೆ. ಆದರೆ, ಇಂದಿನ ಧಾವಂತದ ಬದುಕಿನಲ್ಲಿ ವಿಮೆಗೆ ಆದ್ಯತೆ ನೀಡುವವರು ಕಡಿಮೆ. ಬಹುತೇಕರ ಆದ್ಯತೆಯ ಪಟ್ಟಿಯಲ್ಲಿ ವಿಮೆಯದ್ದು ಕೊನೆಯ ಸ್ಥಾನ.
ಸರ್ಕಾರಿ ನೌಕರರಿಗೆ ಹೋಲಿಸಿದರೆ ಖಾಸಗಿ ವಲಯದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಅತ್ಯಲ್ಪ. ಹಾಗಾಗಿಯೇ, ಖಾಸಗಿ ವಲಯದ ಸಂಬಳ ಪಡೆಯುವ ಉದ್ಯೋಗಿಗಳಿಗೆ ಜೀವ ವಿಮೆಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರವು 1976ರಲ್ಲಿ ಉದ್ಯೋಗಿಯ ಠೇವಣಿ ಆಧಾರಿತ ವಿಮಾ ಯೋಜನೆಯನ್ನು (ಇಡಿಎಲ್‌ಐ- ಎಂಪ್ಲಾಯೀಸ್ ಡೆಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್ ಸ್ಕೀಮ್) ಪರಿಚಯಿಸಿತು. ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಇಪಿಎಫ್ ಖಾತೆದಾರರಿಗೆ ಒದಗಿಸುವ ವಿಮಾ ರಕ್ಷಣೆ ಇದಾಗಿದೆ. ಸೇವಾವಧಿಯಲ್ಲಿ ವಿಮೆಗೆ ಒಳಪಟ್ಟ ವ್ಯಕ್ತಿಯು (ಉದ್ಯೋಗಿ) ಮೃತಪಟ್ಟ ಸಂದರ್ಭದಲ್ಲಿ, ಅವರ ಕುಟುಂಬಕ್ಕೆ ವಿಮಾ ಮೊತ್ತ ಸಿಗಲಿದೆ.
ಸರಳಗೊಂಡ ನಿಯಮಗಳು:
ಸದ್ಯ ಈ ವಿಮೆ ಪಡೆಯಲು ನಿಗದಿಪಡಿಸಿದ್ದ ಷರತ್ತುಗಳನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಡಿಲಗೊಳಿಸಿದೆ. ಇದು ಉದ್ಯೋಗಿಗಳ ಪಾಲಿಗೆ ವರದಾನವಾಗಿದೆ.
1. ಈ ಮೊದಲು ಉದ್ಯೋಗಿ ಮೃತಪಟ್ಟ ನಂತರ ಅವರ ಭವಿಷ್ಯ ನಿಧಿ (ಪಿ.ಎಫ್) ಖಾತೆಯಲ್ಲಿರುವ ಮೊತ್ತ ಆಧರಿಸಿ ಸಂತ್ರಸ್ತ ಕುಟುಂಬಕ್ಕೆ ಸಿಗಬೇಕಾದ ವಿಮಾ ಪರಿಹಾರವನ್ನು ಲೆಕ್ಕ ಹಾಕಲಾಗುತ್ತಿತ್ತು. ಪ್ರಸ್ತುತ ಆ ನಿಯಮವನ್ನು ತೆಗೆದುಹಾಕಲಾಗಿದೆ.
ಇನ್ನು ಮುಂದೆ ಇಪಿಎಫ್‌ಒ ಚಂದಾದಾರರಾದ ಯಾವುದೇ ಉದ್ಯೋಗಿ ಕೆಲಸದಲ್ಲಿ ಇರುವಾಗ ಮೃತಪಟ್ಟರೆ ಅವರ ಪಿ.ಎಫ್. ಖಾತೆಯಲ್ಲಿ ₹50 ಸಾವಿರಕ್ಕಿಂತ ಕಡಿಮೆ ಮೊತ್ತವಿದ್ದರೂ ಅವರ ಕುಟುಂಬಕ್ಕೆ ಕನಿಷ್ಠ ₹50 ಸಾವಿರ ಪರಿಹಾರ ಸಿಗಲಿದೆ. ದೇಶದಲ್ಲಿ ಪ್ರತಿವರ್ಷ 5 ಸಾವಿರಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ಈ ಹೊಸ ನಿಯಮ ಊರುಗೋಲಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
2. ಉದ್ಯೋಗಿಗಳು ವೈಯಕ್ತಿಕ ಹಾಗೂ ಇತರ ಕಾರಣಗಳಿಗೆ ಕಂಪನಿ ಬದಲಿಸುವುದು ಸಾಮಾನ್ಯ. ಈ ಹಿಂದೆ, ಉದ್ಯೋಗಿಯ 12 ತಿಂಗಳ ನಿರಂತರ ಕೆಲಸವನ್ನು ಲೆಕ್ಕ ಹಾಕಿ ವಿಮಾ ಪರಿಹಾರ ನೀಡಲಾಗುತ್ತಿತ್ತು. ಇದರಿಂದ ಒಂದು ಕಂಪನಿಯಿಂದ ಕೆಲಸ ಬಿಟ್ಟು, ಮತ್ತೊಂದು ಕಂಪನಿಗೆ ಸೇರಿಕೊಳ್ಳುವ ಉದ್ಯೋಗಿಗಳು ಮರಣ ಹೊಂದಿದರೆ ಅವರ ಕುಟುಂಬಗಳು ಇಡಿಎಲ್‌ಐ ಪ್ರಯೋಜನ ಪಡೆಯಲು ತೊಡಕಾಗುತ್ತಿತ್ತು. ಈಗ, ಈ ನಿಯಮವನ್ನೂ ಪರಿಷ್ಕರಿಸಲಾಗಿದೆ. ಉದ್ಯೋಗಿಯು ಒಂದು ಕಂಪನಿ ತೊರೆದು ಮತ್ತೊಂದು ಕಂಪನಿಗೆ ಸೇರಿಕೊಳ್ಳಲು 60 ದಿನಗಳಾದರೂ ಅದನ್ನು ಈಗ ಪರಿಗಣಿಸುವುದಿಲ್ಲ. ಹಳೆಯ ಮತ್ತು ಹೊಸ ಕೆಲಸದ ಅವಧಿಯನ್ನು ಒಟ್ಟಿಗೆ ಸೇರಿಸಿ, ‘ನಿರಂತರ ಕೆಲಸ’ ಎಂದು ಪರಿಗಣಿಸಲಾಗುತ್ತದೆ.
3. ಪಿ.ಎಫ್ ಖಾತೆಗೆ ಕೊನೆಯ ಕೊಡುಗೆ ನೀಡಿದ ಆರು ತಿಂಗಳ ಒಳಗಾಗಿ ಉದ್ಯೋಗಿ ಮೃತಪಟ್ಟು, ಅವರ ಹೆಸರು ಕಂಪನಿ/ಸಂಸ್ಥೆಯ ವೇತನದಾರರ ಪಟ್ಟಿಯಲ್ಲಿದ್ದರೆ ಇಡಿಎಲ್‌ಐ ಪ್ರಯೋಜನಕ್ಕೆ ಅರ್ಹ ಎಂದು ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
ನಿಯಮಗಳ ಸರಳೀಕರಣದಿಂದಾಗಿ ಆಗಾಗ್ಗೆ ಉದ್ಯೋಗ ಬದಲಾಯಿಸುವ, ಮಾಸಿಕ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳು ಎದುರಿಸುತ್ತಿದ್ದ ದೀರ್ಘಕಾಲೀನ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗಿದೆ.
ಸೌಲಭ್ಯಕ್ಕೆ ಯಾರು ಅರ್ಹ?
ನೌಕರರ ಭವಿಷ್ಯ ನಿಧಿ (ಇಪಿಎಫ್) ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1952ರ ಅಡಿ ನೋಂದಣಿಯಾದ ಎಲ್ಲಾ ಕಂಪನಿಗಳು/ ಸಂಸ್ಥೆಗಳು ಇಡಿಎಲ್‌ಐ ಯೋಜನೆಗೆ ಒಳಪಡುತ್ತವೆ. ಅಂತಹ ಸಂಸ್ಥೆಗಳು ಉದ್ಯೋಗಿಗಳಿಗೆ ಇಡಿಎಲ್‌ಐ ಸೌಲಭ್ಯ ಒದಗಿಸಬೇಕಿದೆ. ನೌಕರರ ಭವಿಷ್ಯ ನಿಧಿ ಮತ್ತು ನೌಕರರ ಪಿಂಚಣಿ ಯೋಜನೆ (ಇಪಿಎಸ್) ಸಂಯೋಜಿತ ಯೋಜನೆ ಇದಾಗಿದೆ. ಇಪಿಎಫ್ ಖಾತೆ ಹೊಂದಿರುವ ಯಾವುದೇ ಉದ್ಯೋಗಿ ಸ್ವಯಂಚಾಲಿತವಾಗಿ ಇಡಿಎಲ್‌ಐಗೆ ಅರ್ಹರಾಗುತ್ತಾರೆ. ಪ್ರತಿ ಉದ್ಯೋಗಿಯು ಅವರ ಹುದ್ದೆ ಅಥವಾ ಸಂಬಳ ಲೆಕ್ಕಿಸದೆ ವಿಮೆಗೆ ಒಳಪಡುತ್ತಾರೆ.
ಉದ್ಯೋಗಿಯು ಈ ವಿಮಾ ಸೌಲಭ್ಯ ಪಡೆಯಲು ವೈಯಕ್ತಿಕವಾಗಿ ಕಂತು ಪಾವತಿಸಬೇಕಿಲ್ಲ. ಕಂಪನಿಗಳೇ ಉದ್ಯೋಗಿಯ ಮೂಲ ವೇತನದ ಶೇ 0.5ರಷ್ಟು ಅಥವಾ ಪ್ರತಿ ತಿಂಗಳು ₹75 ಅನ್ನು ಇಡಿಎಲ್‌ಐಗೆ ಕೊಡುಗೆಯಾಗಿ ನೀಡುತ್ತವೆ.
ವಿಮಾ ಲೆಕ್ಕಾಚಾರ ಹೇಗೆ?
ಇಡಿಎಲ್‌ಐ ಅಡಿ ಪ್ರಯೋಜನ ಪಡೆಯಲು 12 ತಿಂಗಳುಗಳಲ್ಲಿ ಚಂದಾದಾರರ ಪಿ.ಎಫ್ ಖಾತೆಯಲ್ಲಿನ ಸರಾಸರಿ ಮೊತ್ತವನ್ನು ಪರಿಗಣಿಸಲಾಗುತ್ತದೆ. ಒಟ್ಟಾರೆ ವಿಮಾ ರಕ್ಷಣೆಯ ಲೆಕ್ಕಾಚಾರವು ಎರಡು ಹಂತದ ಪ್ರಕ್ರಿಯೆ. ಮೃತ ಉದ್ಯೋಗಿಯ 12 ತಿಂಗಳ ಸರಾಸರಿ ಮಾಸಿಕ ವೇತನವನ್ನು (ಮೂಲ ವೇತನ + ತುಟ್ಟಿಭತ್ಯೆ ) ಗರಿಷ್ಠ ₹15 ಸಾವಿರಕ್ಕೆ ಮಿತಿಗೊಳಿಸಿ, ಅದನ್ನು 35 ಪಟ್ಟು ಗುಣಿಸುವುದು ಒಂದು ಹಂತ; 12 ತಿಂಗಳಿನಲ್ಲಿ ಮೃತ ಉದ್ಯೋಗಿಯ ಭವಿಷ್ಯ ನಿಧಿ ಖಾತೆಯಲ್ಲಿರುವ ಸರಾಸರಿ ಮೊತ್ತದ ಶೇ 50ರಷ್ಟನ್ನು ಪರಿಗಣಿಸುವುದು ಎರಡನೇ ಹಂತ.
ಈ ಸೌಲಭ್ಯ ಪಡೆಯಲು ಗರಿಷ್ಠ ವೇತನ ಮಿತಿಯನ್ನು ₹15 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಮೂಲ ವೇತನವು ಇದಕ್ಕಿಂತಲೂ ಹೆಚ್ಚಿದ್ದರೂ ವಿಮಾ ಸೌಲಭ್ಯ ಪಡೆಯುವಾಗ ₹15 ಸಾವಿರವನ್ನಷ್ಟೇ ಪರಿಗಣಿಸಲಾಗುತ್ತದೆ.
ಉದಾಹರಣೆಗೆ, ಮಾಸಿಕ ಸಂಬಳ ₹25 ಸಾವಿರ ಇದ್ದು, ಪಿ.ಎಫ್. ಖಾತೆಯಲ್ಲಿ ₹6 ಲಕ್ಷ ಇದೆ ಎಂದಿಟ್ಟುಕೊಳ್ಳಿ. ಆಗ ಈ ವಿಧಾನದಲ್ಲಿ ಲೆಕ್ಕ ಹಾಕಿದಾಗ (₹25,000x35= ₹8.75 ಲಕ್ಷ ಮತ್ತು ₹6 ಲಕ್ಷದ ಶೇ 50 ಅಂದರೆ ₹3 ಲಕ್ಷ ) ವಿಮಾ ಮೊತ್ತವು ₹11.75 ಲಕ್ಷ ಆಗುತ್ತದೆ. ಆದರೆ, 2021ರಲ್ಲಿ ಇಡಿಎಲ್‌ಐ ಅಡಿ ಗರಿಷ್ಠ ವಿಮಾ ಮೊತ್ತವನ್ನು ₹7 ಲಕ್ಷಕ್ಕೆ ನಿಗದಿಪಡಿಸಲಾಗಿದೆ.
ಹಾಗಾಗಿ, ನಾಮಿನಿಗೆ ಇಷ್ಟು ಮೊತ್ತವಷ್ಟೇ ಸಿಗುತ್ತದೆ. ಪರಿಷ್ಕೃತ ನಿಯಮಗಳ ಪ್ರಕಾರ ಈ ಯೋಜನೆಯಡಿ ಕನಿಷ್ಠ ₹50 ಸಾವಿರ ಮತ್ತು ಗರಿಷ್ಠ ₹7 ಲಕ್ಷ ವಿಮೆ ಸೌಲಭ್ಯ ಉದ್ಯೋಗಿಯ ಕುಟುಂಬದವರಿಗೆ ಸಿಗಲಿದೆ.
ಪ್ರಯೋಜನ ಪಡೆಯುವುದು ಹೇಗೆ?
ವಿಮಾದಾರರು (ಉದ್ಯೋಗಿ) ಸೂಚಿಸಿದ ನಾಮಿನಿಗೆ ಯೋಜನೆಯಡಿ ಪರಿಹಾರ ಸಿಗಲಿದೆ. ಒಂದು ವೇಳೆ ನಾಮಿನಿ ಹೆಸರನ್ನು ನೋಂದಾಯಿಸದಿದ್ದರೆ, ಅವರ ಕುಟುಂಬದ ಸದಸ್ಯರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು. ಹಕ್ಕುದಾರರು ಭರ್ತಿ ಮಾಡಿದ ಇಡಿಎಲ್‌ಐ ಅರ್ಜಿಗೆ ಉದ್ಯೋಗದಾತ ಕಂಪನಿ/ ಸಂಸ್ಥೆ ಸಹಿ ಮಾಡಿ ದೃಢೀಕರಿಸಬೇಕು.
ಒಂದು ವೇಳೆ, ಉದ್ಯೋಗದಾತರು ಇಲ್ಲದಿದ್ದರೆ ಅಥವಾ ಉದ್ಯೋಗದಾತರ ಸಹಿ ಪಡೆಯಲು ಸಾಧ್ಯವಾಗದಿದ್ದರೂ ಪರ್ಯಾಯ ಕ್ರಮದ ಮೂಲಕ ವಿಮಾ ಸೌಲಭ್ಯದ ಹಾದಿಯನ್ನು ಸುಗಮಗೊಳಿಸಲಾಗಿದೆ.
ಬ್ಯಾಂಕ್ ವ್ಯವಸ್ಥಾಪಕರು (ಮೃತ ಉದ್ಯೋಗಿಯ ಖಾತೆ ಇರುವ ಬ್ಯಾಂಕ್), ಸ್ಥಳೀಯ ಸಂಸದ ಅಥವಾ ಶಾಸಕರು, ಗೆಜೆಟೆಡ್ ಅಧಿಕಾರಿ, ನ್ಯಾಯಾಧೀಶರು, ಸ್ಥಳೀಯ ನಗರ ಸಂಸ್ಥೆಯ ಸದಸ್ಯರು/ ಅಧ್ಯಕ್ಷರು, ಪೋಸ್ಟ್ ಮಾಸ್ಟರ್ ಅಥವಾ ಸಬ್-ಪೋಸ್ಟ್ ಮಾಸ್ಟರ್, ಇಪಿಎಫ್ ಅಥವಾ ಇಪಿಎಫ್‌ಒ ಕೇಂದ್ರೀಯ ಧರ್ಮದರ್ಶಿ ಮಂಡಳಿಯ (ಸಿಬಿಟಿ) ಪ್ರಾದೇಶಿಕ ಸಮಿತಿ ಸದಸ್ಯರಿಂದ ಕ್ಲೇಮು ಅರ್ಜಿ ದೃಢೀಕರಿಸಿ ಸೂಕ್ತ ದಾಖಲೆಗಳ ಸಮೇತ ಪ್ರಾದೇಶಿಕ ಇಪಿಎಫ್ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಸ್ವೀಕರಿಸಿದ ನಂತರ ಆಯುಕ್ತರು 30 ದಿನಗಳೊಗೆ ಇತ್ಯರ್ಥಪಡಿಸಬೇಕೆಂಬ ನಿಯಮವಿದೆ.
ಗಿಗ್ ಕಾರ್ಮಿಕರಿಗೆ ಸೌಲಭ್ಯ
ಗಿಗ್ ಕಾರ್ಮಿಕರು ಸಾಂಪ್ರದಾಯಿಕವಾದ ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಕೆಲಸದ ವ್ಯವಸ್ಥೆಯಿಂದ ದೂರ ಇರುತ್ತಾರೆ. ಈ ವಲಯದಲ್ಲಿ ದುಡಿಯುವವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕಾರ್ಯನಿರತವಾಗಿದೆ. ಇದರಿಂದ ದೇಶದ ಆರ್ಥಿಕತೆಗೆ ಮತ್ತಷ್ಟು ಬೆಂಬಲ ನೀಡಿದಂತಾಗುತ್ತದೆ ಎಂಬುದು ಸಚಿವಾಲಯದ ಲೆಕ್ಕಾಚಾರ. ಗಿಗ್ ಕಾರ್ಮಿಕರಿಗೆ ಇಡಿಎಲ್‌ಐ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಚೌಕಟ್ಟು ರೂಪಿಸುವುದಾಗಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.
ಈ ವಿಷಯದಲ್ಲಿ ಕರ್ನಾಟಕ ಸರ್ಕಾರವು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ‘ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಕಾಯ್ದೆ– 2025’ ರೂಪಿಸಿದೆ. ಈ ಕಾರ್ಮಿಕರು ಸರಕು ಸೇವೆ ವಿತರಣೆ ವೇಳೆ ಅವಘಡಕ್ಕೀಡಾಗಿ ಅಂಗವಿಕಲರಾದರೆ ಅಥವಾ ಮೃತಪಟ್ಟರೆ ಅವರ ಅವಲಂಬಿತರು ತೊಂದರೆಗೆ ಸಿಲುಕುತ್ತಾರೆ. ಇದಕ್ಕಾಗಿ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಕಾಯ್ದೆಯ ಉದ್ದೇಶ.
ಆನ್‌ಲೈನ್ ಪ್ಲಾಟ್‌ಫಾರ್ಮ್ ಆಧಾರಿತ ಸೇವೆಯ ಪ್ರತಿ ವಹಿವಾಟಿನ ಮೇಲೆ ಶೇ 1ರಿಂದ ಶೇ 2ರಷ್ಟು ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತದೆ. ಅವರಿಗೆ ಭವಿಷ್ಯ ನಿಧಿ, ಅಪಘಾತ ಸೌಲಭ್ಯ, ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಕ್ಕೆ ನೆರವು, ಅಂತ್ಯಸಂಸ್ಕಾರಕ್ಕೆ ಧನಸಹಾಯ ನೀಡಲು ಕಾಯ್ದೆ ಅವಕಾಶ ಕಲ್ಪಿಸಿದೆ.
2025–26ನೇ ಆರ್ಥಿಕ ವರ್ಷದಲ್ಲಿ ಗಿಗ್ ವಲಯದಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆ ದೇಶದಲ್ಲಿ ಒಂದು ಕೋಟಿ ದಾಟಲಿದ್ದು, 2029–30ರ ವೇಳೆಗೆ 2.35 ಕೋಟಿಗೆ ತಲುಪಲಿದೆ ಎಂದು ನೀತಿ ಆಯೋಗ ಅಂದಾಜಿಸಿದೆ. ಕರ್ನಾಟಕದಲ್ಲಿ 4 ಲಕ್ಷ ಗಿಗ್ ಕಾರ್ಮಿಕರಿದ್ದಾರೆ.
ಆಧಾರ:ಕಾರ್ಮಿಕ ಸಚಿವಾಲಯದ ಅಧಿಸೂಚನೆ, ಇಪಿಎಫ್‌ಒ ವಾರ್ಷಿಕ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.