ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು 2023ರಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದ ರಾಜ್ಯ ಸರ್ಕಾರವು, ಈ ಸಂಬಂಧ ಮತ್ತೊಮ್ಮೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ಚಿಂತನೆ ನಡೆಸುತ್ತಿದೆ. ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಕುರುಬರು ಗೊಂಡ ಬುಡಕಟ್ಟಿನೊಂದಿಗೆ ಹೊಂದಿರುವ ಸಾಮ್ಯತೆಯನ್ನು ಗುರುತಿಸುವ, ಅದರ ಆಧಾರದಲ್ಲಿ ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬಗ್ಗೆಯೂ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಯಾವುದೇ ಜಾತಿಯನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಇಲ್ಲವೇ ಪಟ್ಟಿಯಿಂದ ತೆಗೆಯಲು ದೀರ್ಘ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ; ರಾಷ್ಟ್ರಪತಿಯವರ 1950ರ ಸಾಂವಿಧಾನಿಕ ಆದೇಶವನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವು ನಿರ್ಣಾಯಕವಾಗಿರುತ್ತದೆ
ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಸಮುದಾಯಗಳ ಸಾಮಾಜಿಕ ನೆಲೆ ಏನು?
ಸಂವಿಧಾನದ 342ನೇ ವಿಧಿಯ ಅನ್ವಯ ಪರಿಶಿಷ್ಟ ಪಂಗಡವನ್ನು ರೂಪಿಸಲಾಗಿದ್ದು, ಪ್ರಸ್ತುತ ರಾಜ್ಯದ ಈ ಪಟ್ಟಿಯಲ್ಲಿ 50 ಜಾತಿಗಳು ಸ್ಥಾನ ಪಡೆದಿವೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಪರಿಶಿಷ್ಟ ಜಾತಿಗಳಂತೆಯೇ (ಎಸ್‌ಸಿ) ಪರಿಶಿಷ್ಟ ಪಂಗಡಗಳೂ (ಎಸ್‌ಟಿ) ಸಾಮಾಜಿಕವಾಗಿ, ಆರ್ಥಿಕವಾಗಿ ಸವಲತ್ತುಗಳಿಂದ ವಂಚಿತವಾಗಿದ್ದು, ಆ ಸಮುದಾಯಗಳನ್ನು ಸಶಕ್ತಗೊಳಿಸುವ ದಿಸೆಯಲ್ಲಿ ಹಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಎಸ್‌ಸಿಗಳಂತೆ ಎಸ್‌ಟಿ ಸಮುದಾಯಗಳಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಿರುವುದು ಅದರಲ್ಲಿ ಪ್ರಮುಖವಾದುದು.
ಸಂವಿಧಾನ ಏನು ಹೇಳುತ್ತದೆ?
ಸಂವಿಧಾನದ 342ನೇ ವಿಧಿಯು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಅಲ್ಲಿನ ರಾಜ್ಯಪಾಲರ ಸಲಹೆ ಪಡೆದು ನಿರ್ದಿಷ್ಟ ಸಮುದಾಯ ಅಥವಾ ಜಾತಿಯನ್ನು ಪರಿಶಿಷ್ಟ ಪಂಗಡ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ರಾಷ್ಟ್ರಪತಿಯವರಿಗೆ ನೀಡುತ್ತದೆ.
ಸಂವಿಧಾನದ 366ನೇ ವಿಧಿಯ 25ನೇ ಕಲಂ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಯಾರು ಎಂಬುದನ್ನು ವಿವರಿಸುವಾಗ, ಸಂವಿಧಾನದ 342ನೇ ವಿಧಿಯನ್ನೇ ಉಲ್ಲೇಖಿಸುತ್ತದೆ. ಎಸ್‌ಟಿ ಎಂದು ಗುರುತಿಸಲಾದ ಎಲ್ಲ ಸಮುದಾಯಗಳನ್ನು 1950ರ ರಾಷ್ಟ್ರಪತಿಯವರ (ಪರಿಶಿಷ್ಟ ಪಂಗಡಗಳು) ಆದೇಶದಲ್ಲಿ ಪಟ್ಟಿ ಮಾಡಲಾಗಿದೆ. ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದವು ಎಂದು ಸಂವಿಧಾನದ ಪ್ರಕಾರವೇ ಪರಿಗಣಿಸಲಾಗುತ್ತದೆ.
ಸಂಸತ್ತು, ಹೊಸ ಕಾನೂನು ರೂಪಿಸುವುದರ ಮೂಲಕ ಪರಿಶಿಷ್ಟ ವರ್ಗಗಳ ವ್ಯಾಪ್ತಿಗೆ ಹೊಸ ಜಾತಿಯನ್ನು ಸೇರಿಸಬಹುದು ಇಲ್ಲವೇ, ಜಾತಿ ಹೆಸರನ್ನು ತೆಗೆದು ಹಾಕಬಹುದು.
ಎಸ್‌ಟಿ ಪಟ್ಟಿ ಸೇರ್ಪಡೆಗೆ ಮಾನದಂಡವೇನು?
ದೇಶದಲ್ಲಿ 1931ರಲ್ಲಿ ನಡೆದಿದ್ದ ಕೊನೆಯ ಜಾತಿಗಣತಿಯಲ್ಲಿ ‘ಆದಿವಾಸಿ ಬುಡಕಟ್ಟು’ (ಪ್ರಿಮಿಟಿವ್ ಟ್ರೈಬ್ಸ್) ಸಮುದಾಯಗಳನ್ನು ಪಟ್ಟಿ ಮಾಡಲಾಗಿತ್ತು. ನಂತರ 1935ರ ಭಾರತ ಸರ್ಕಾರ ಕಾಯ್ದೆಯಲ್ಲಿ ‘ಹಿಂದುಳಿದ ಬುಡಕಟ್ಟು’ ಸಮುದಾಯಗಳ ಪಟ್ಟಿಯನ್ನು ರೂಪಿಸಿ, ಎಸ್‌ಟಿ ಜಾತಿಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು. ದೇಶದ ಸಂವಿಧಾನವು ನಿರ್ದಿಷ್ಟ ಸಮುದಾಯವನ್ನು ಎಸ್‌ಟಿ ಎಂದು ಗುರುತಿಸುವ ಮಾನದಂಡವನ್ನು ವ್ಯಾಖ್ಯಾನಿಸದೇ ಇರುವುದರಿಂದ 1950ರ ರಾಷ್ಟ್ರಪತಿಯವರ ಸಾಂವಿಧಾನಿಕ ಆದೇಶವನ್ನೇ ಪರಿಗಣಿಸಲಾಗುತ್ತದೆ.
1950ರ ಆದೇಶದಲ್ಲಿ ಪರಿಶಿಷ್ಟ ಪಂಗಡಗಳ ಅಡಿಯಲ್ಲಿ ಬರುವ ಜಾತಿಗಳನ್ನು ಪಟ್ಟಿ ಮಾಡುವಾಗ ಸಮುದಾಯಗಳ ಆದಿಮ ಸ್ವರೂಪ ಮತ್ತು ತೀರಾ ಹಿಂದುಳಿದಿರುವಿಕೆ– ಈ ಎರಡು ಅಂಶಗಳನ್ನು ಪ್ರಮುಖವಾಗಿ ಪರಿಗಣಿಸಲಾಗಿತ್ತು. ಪರಿಶಿಷ್ಟ ಜಾತಿಗಳಂತೆ ಪರಿಶಿಷ್ಟ ವರ್ಗಗಳ ಅಡಿಯಲ್ಲಿ ಬರುವ ಸಮುದಾಯಗಳು ಧರ್ಮ ಆಧಾರಿತವಲ್ಲ.
ಪರಿಶಿಷ್ಟ ಪಂಗಡದ ಪಟ್ಟಿ ಸೇರ್ಪಡೆಯ ಮಾನದಂಡ ಬದಲಾಗಿರುವ ಇತಿಹಾಸವಿದೆಯೇ?
1950 ಮತ್ತು 1960ರ ದಶಕಗಳಲ್ಲಿ ಭಾಷೆಗಳ ಆಧಾರದಲ್ಲಿ ಪ್ರತ್ಯೇಕ ರಾಜ್ಯಗಳನ್ನು ರೂಪುಗೊಳಿಸಲಾಯಿತು. ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಹಲವು ರೀತಿಯ ವ್ಯತ್ಯಾಸಗಳು, ಸಮಸ್ಯೆಗಳು ಕಾಣಿಸಿಕೊಂಡವು. ಉದಾಹರಣೆಗೆ, ಬ್ರಿಟಿಷರ ಕಾಲದಲ್ಲಿ ಅಪರಾಧ ಬುಡಕಟ್ಟು ಎಂದು ಪರಿಗಣಿತವಾಗಿದ್ದ ಪಾರ್ಧಿ ಸಮುದಾಯವನ್ನು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಎಸ್‌ಟಿ ಪಟ್ಟಿಗೆ ಸೇರಿಸಲಾಗಿತ್ತು. ಆದರೆ, ಅದೇ ಸಮುದಾಯವನ್ನು ರಾಜಸ್ಥಾನದಲ್ಲಿ ಎಸ್‌ಸಿ ಪಟ್ಟಿಗೆ ಸೇರಿಸಲಾಗಿತ್ತು. ಈ ದಿಸೆಯಲ್ಲಿ ಕೇಂದ್ರ ಸರ್ಕಾರವು 1965ರಲ್ಲಿ ಆಗ ಕಾನೂನು ಕಾರ್ಯದರ್ಶಿಯಾಗಿದ್ದ ಪಿ.ಬಿ.ಲೋಕೂರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ, ಪರಿಶಿಷ್ಟ ಪಂಗಡ ಎನ್ನುವುದನ್ನು ಸೂಕ್ತವಾಗಿ ವ್ಯಾಖ್ಯಾನಿಸಲು, ಎಸ್‌ಟಿ ಪಟ್ಟಿಯಲ್ಲಿ ಜಾತಿಗಳನ್ನು ಸೇರಿಸಲು ಮಾನದಂಡಗಳನ್ನು ನಿಗದಿಪಡಿಸುವಂತೆ ಸೂಚಿಸಿತು.
ಎಸ್‌ಟಿ ಪಟ್ಟಿಯಲ್ಲಿ ಬದಲಾವಣೆ ಮಾಡಲು ಯಾವ ಪ್ರಕ್ರಿಯೆಯನ್ನು ಅನುಸರಿಸಬೇಕು?
ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ರಾಷ್ಟ್ರಪತಿಯವರ 1950ರ ಆದೇಶವನ್ನು ಬದಲಾಯಿಸಿ, ನಿರ್ದಿಷ್ಟ ಜಾತಿಯನ್ನು ಪಟ್ಟಿಗೆ ಸೇರಿಸುವಂತೆ ಅಥವಾ ನಿರ್ದಿಷ್ಟ ಜಾತಿಯನ್ನು ಪಟ್ಟಿಯಿಂದ ಕೈಬಿಡುವಂತೆ ಪ್ರಸ್ತಾವವನ್ನು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ನಂತರ, ಆ ಪ್ರಸ್ತಾವವನ್ನು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಮತ್ತು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಕ್ಕೆ (ಆರ್‌ಜಿಐ) ಕಳುಹಿಸಿ, ಅವರ ಅಭಿಪ್ರಾಯ ಮತ್ತು ಸಲಹೆ ಕೇಳಲಾಗುತ್ತದೆ. ಆರ್‌ಜಿಐನವರು ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳ, ತಜ್ಞರ ಅಭಿಪ್ರಾಯ ಪಡೆಯುತ್ತಾರೆ; ಪ್ರಸ್ತಾವವು ಲೋಕೂರ್ ಸಮಿತಿ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿದೆಯೇ ಎನ್ನುವುದನ್ನು ಪರಿಶೀಲಿಸುತ್ತಾರೆ.
ಎಸ್‌ಟಿ ಪಟ್ಟಿ ಬದಲಾವಣೆ ಮಾಡುವ ದಿಸೆಯಲ್ಲಿ ಲೋಕಸಭೆಯಲ್ಲಿ ಯಾವ ಪ್ರಕ್ರಿಯೆ ನಡೆಯುತ್ತದೆ?
ಆರ್‌ಜಿಐ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಸಲಹೆಗಳ ಆಧಾರದಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಬದಲಾಯಿಸುವ ದಿಸೆಯಲ್ಲಿ ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸುತ್ತದೆ. ಆ ಮಸೂದೆಯು ವಿಶೇಷ ಬಹುಮತದೊಂದಿಗೆ ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕಾರವಾಗಬೇಕು; ಮೂರನೇ ಎರಡರಷ್ಟು ಸದಸ್ಯರು ಸದನದಲ್ಲಿ ಹಾಜರಿರಬೇಕು ಮತ್ತು ಮತ ಚಲಾಯಿಸಬೇಕು. ಆ ಸಂಖ್ಯೆಯು ಸಂಸತ್‌ನ ಒಟ್ಟು ಬಲದಲ್ಲಿ ಶೇ 50ಕ್ಕಿಂತ ಹೆಚ್ಚಿರಬೇಕು.
ಲೋಕೂರ್ ಸಮಿತಿಯ ವರದಿಯಲ್ಲೇನಿತ್ತು?
ಪರಿಶಿಷ್ಟ ಪಂಗಡಗಳ ವ್ಯಾಪ್ತಿಗೆ ಬರುವ ಸಮುದಾಯಗಳ ಪಟ್ಟಿಯನ್ನು ಪರಿಷ್ಕರಿಸುವುದಕ್ಕಾಗಿ ಸಮಿತಿಯು ಆದಿವಾಸಿಗಳ ಗುಣಲಕ್ಷಣಗಳನ್ನು ಹೊಂದಿರುವುದು, ವಿಭಿನ್ನ ಸಂಸ್ಕೃತಿ, ಭೌಗೋಳಿಕವಾಗಿ ಪ್ರತ್ಯೇಕವಾಗಿ ವಾಸ ಇರುವುದು, ಇತರ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಬೆರೆಯಲು ಸಂಕೋಚ ಪಡುವುದು ಮತ್ತು ತೀರಾ ಹಿಂದುಳಿದಿರುವಿಕೆಗಳನ್ನು ಪ್ರಮುಖ ಮಾನದಂಡಗಳನ್ನಾಗಿ ಪರಿಗಣಿಸಿತ್ತು.
ಯಾವುದೇ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರು ಮುಖ್ಯವಾಹಿನಿ ಜನರೊಂದಿಗೆ ಬೆರೆತಿದ್ದರೆ, ಅಂತಹವರು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಲು ಅರ್ಹರಲ್ಲ ಎಂದೂ ಸಮಿತಿ ಪ್ರತಿಪಾದಿಸಿತ್ತು.
‘ಕೆಲವು ರಾಜ್ಯಗಳಲ್ಲಿ ಒಂದೇ ಹೆಸರಿನ ಎರಡು ಭಿನ್ನ ಸಮುದಾಯಗಳಿವೆ. ಆದರೆ, ಅವುಗಳಲ್ಲಿ ಒಂದು ಸಮುದಾಯ ಮಾತ್ರ ಎಸ್‌ಟಿ ಪಟ್ಟಿಗೆ ಸೇರಲು ಅರ್ಹವಾಗಿರುವುದು ಕಂಡು ಬಂದಿದೆ. ಬುಡಕಟ್ಟು ಸಮುದಾಯಗಳಿಗೆ ಸೇರಿದ ಜನರು ರಾಜ್ಯವೊಂದರ ನಿರ್ದಿಷ್ಟ ಪ್ರದೇಶಗಳಲ್ಲಿ ನೆಲಸಿರುವ ಮತ್ತು ಅದೇ ಸಮುದಾಯದ ಮತ್ತೂ ಕೆಲವರು ರಾಜ್ಯದ ಉಳಿದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೆಲವು ಉದಾಹರಣೆಗಳು ಕಂಡುಬಂದಿವೆ. ಇವರಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಅಗತ್ಯವಿದೆ. ಉಳಿದ ಕಡೆಗಳಲ್ಲಿ ನೆಲಸಿರುವವರು ಈ ಪಟ್ಟಿಗೆ ಸೇರುವ ಅರ್ಹತೆ ಪಡೆದಿಲ್ಲ’ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿತ್ತು.
ಆದರೆ, ನಂತರದ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಪಟ್ಟಿಗೆ ಜಾತಿಗಳನ್ನು ಸೇರ್ಪಡೆಯಾಗಲು ಅಥವಾ ಪಟ್ಟಿಯಿಂದ ತೆಗೆದು ಹಾಕಲು ಇರಬೇಕಾದ ವಿಧಾನಗಳನ್ನು ಬದಲಾಯಿಸಿತು.
ಕುರುಬ ಸಮುದಾಯದ ಬೇಡಿಕೆ
ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎನ್ನುವ ಒತ್ತಾಯ ಹಿಂದಿನಿಂದಲೂ ಕೇಳಿಬರುತ್ತಿದೆ. ಪ್ರಸ್ತುತ ಕುರುಬ ಸಮುದಾಯವು ಹಿಂದುಳಿದ ‘ಎ’ ಪಟ್ಟಿಯಲ್ಲಿದ್ದು, ಅದೇ ಪಟ್ಟಿಯಲ್ಲಿರುವ ಇತರೆ 102 ಜಾತಿಗಳೊಂದಿಗೆ ಶೇ 15ರ ಮೀಸಲಾತಿಯನ್ನು ಹಂಚಿಕೊಳ್ಳುತ್ತಿದೆ. ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ 2023ರಲ್ಲೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈ ಸಂಬಂಧ ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆ ನಡೆಸಿದ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನೂ ಲಗತ್ತಿಸಲಾಗಿತ್ತು. ಆದರೆ, ಪ್ರಸ್ತಾವವನ್ನು ಕೇಂದ್ರವು ವಾಪಸ್ ಕಳುಹಿಸಿತ್ತು.
ಕುರುಬರು, ಭಾರತದ ಮೂಲನಿವಾಸಿಗಳಾಗಿದ್ದು, ಸಮುದಾಯವನ್ನು 1868 ಮತ್ತು 1901ರ ಜನಗಣತಿಯ ಸಂದರ್ಭದಲ್ಲಿ ಪರಿಶಿಷ್ಟ ಪಂಗಡ ಎಂದೇ ಗುರುತಿಸಲಾಗಿತ್ತು. ಸ್ವಾತಂತ್ರ್ಯಾನಂತರ ಪಟ್ಟಿಯಿಂದ ಕೈಬಿಡಲಾಗಿತ್ತು. ದೇವರಾಜ ಅರಸರು ಕಾಡು ಕುರುಬ ಮತ್ತು ಜೇನು ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸಿದರು. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕುರುಬರನ್ನು ಎಸ್‌ಟಿ ಎಂದು ಪರಿಗಣಿಸಲಾಗುತ್ತಿದೆ ಎನ್ನುವುದು ಸಮುದಾಯದ ಮುಖಂಡರ ವಾದ. ಆದರೆ, ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದಕ್ಕೆ ವಾಲ್ಮೀಕಿ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು, ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ.
ಸಂಸತ್ ಭವನ
ಅತ್ಯಲ್ಪ ಯಶಸ್ಸು
ಕರ್ನಾಟಕದಲ್ಲಿ ಹಲವು ಜಾತಿಗಳನ್ನು ಅವುಗಳ ಸ್ಥಿತಿಗತಿ ಆಧರಿಸಿ ಎಸ್‌ಟಿ ಪಟ್ಟಿಗೆ ಸೇರಿಸುವ ಸಂಬಂಧ ಹಿಂದಿನಿಂದಲೂ ಪ್ರಸ್ತಾವಗಳನ್ನು ಕಳುಹಿಸುವುದು ನಡೆದೇ ಇದೆ. ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆನ್ನುವ ಬೇಡಿಕೆ ಬಹಳ ಕಾಲದಿಂದಲೂ ಇದೆ. ಈ ಸಂಬಂಧ ರಾಜ್ಯದಿಂದ ಹಿಂದೆಯೇ ಶಿಫಾರಸು ಮಾಡಲಾಗಿತ್ತು. ಇದೇ ರೀತಿ ಗಂಗಾಮತ ಮತ್ತು ಅದರ ಉಪಜಾತಿಗಾಳದ ಕೋಲಿ, ಕಬ್ಬಲಿಗ, ಬೆಸ್ತ, ಬಾರಿಕ, ಅಂಬಿಗ ಇವುಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎನ್ನುವ ಒತ್ತಾಯ ಇದೆ. ಬಹಳ ಹಿಂದಿನಿಂದಲೂ ಈ ಬೇಡಿಕೆ ಇದ್ದು, ಮೂರು ಬಾರಿ ಶಿಫಾರಸು ಮಾಡಲಾಗಿತ್ತು. ಮೂರು ಬಾರಿಯೂ ಪ್ರಸ್ತಾವವನ್ನು ವಾಪಸ್ ಕಳುಹಿಸಲಾಗಿದೆ. ರಾಜ್ಯದ ಇಂಥ ಪ್ರಯತ್ನಗಳ ಪೈಕಿ ಯಶ ಕಂಡಿರುವುದು ಕೆಲವು ಮಾತ್ರ. ರಾಜ್ಯ ಸರ್ಕಾರದ ಶಿಫಾರಸು ಆಧರಿಸಿ ಮೇದಾರ, ತಳವಾರರನ್ನು ಎಸ್‌ಟಿ ಪಟ್ಟಿಗೆ ಸೇರಿಸಲಾಗಿದೆ. ಇದೇ ರೀತಿ ಕೆಲವು ಜಿಲ್ಲೆಗಳಲ್ಲಿರುವ ಸಿದ್ಧಿ ಸಮುದಾಯವನ್ನೂ ಎಸ್‌ಟಿ ಪಟ್ಟಿಗೆ ಸೇರಿಸಲಾಗಿದೆ. ಆದರೆ, ರಾಜ್ಯದ ಪ್ರಯತ್ನಗಳಿಗೆ ಸಿಕ್ಕಿರುವ ಯಶಸ್ಸು ಅತ್ಯಲ್ಪ.
2025ರ ಸೆಪ್ಟೆಂಬರ್ 16ರಂದು ಕರೆದಿದ್ದ ಸಭೆಯಲ್ಲಿ ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ವಿಚಾರದ ಜತೆಗೆ ಗಂಗಾಮತಸ್ಥರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಪ್ರಸ್ತಾವದ ಬಗ್ಗೆಯೂ ಚರ್ಚಿಸಬೇಕಾಗಿತ್ತು. ಆದರೆ, ನಂತರ ಆ ಸಭೆ ಮುಂದೂಡಲಾಯಿತು.
ಆಧಾರ: ಲೋಕೂರ್ ಸಮಿತಿಯ ವರದಿ, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.