ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ
(ಪಿಟಿಐ ಚಿತ್ರ)
ಬೆಂಗಳೂರು: ದೆಹಲಿಯ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ (ಫೆ 15) ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುತ್ತಿದ್ದ ಯಾತ್ರಿಕರು ಮೃತಪಟ್ಟಿದ್ದಾರೆ.
ಇದರೊಂದಿಗೆ ಇಡೀ ದೇಶವೇ ಮಗದೊಂದು ಕಾಲ್ತುಳಿತ ದುರ್ಘಟನೆಗೆ ಸಾಕ್ಷಿಯಾಯಿತು. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರ್ಘಟನೆಗಳ ಪಟ್ಟಿ ಇಲ್ಲಿದೆ. ಈ ಪೈಕಿ ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚಿನ ದುರ್ಘಟನೆಗಳು ಸಂಭವಿಸಿವೆ.
2025 (ಜನವರಿ 29): 30 ಸಾವು
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ 'ಮೌನಿ ಅಮಾವಾಸ್ಯೆ' ಅಂಗವಾಗಿ ಸಂಗಮದಲ್ಲಿ ಪುಣ್ಯಸ್ನಾನಕ್ಕಾಗಿ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರು ಸೇರಿ ಕನಿಷ್ಠ 30 ಮಂದಿ ಮೃತಪಟ್ಟು, 60 ಮಂದಿ ಗಾಯಗೊಂಡಿದ್ದರು.
2024 (ಜುಲೈ 2): 121 ಸಾವು
ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ಆಯೋಜನೆ ಆಗಿದ್ದ ಸತ್ಸಂಗ (ಪ್ರಾರ್ಥನಾ ಸಭೆ) ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯರು, ಮಕ್ಕಳು ಸೇರಿ 121 ಮಂದಿ ಪ್ರಾಣ ಕಳೆದುಕೊಂಡರು.
2023 (ಮಾರ್ಚ್ 31): 36 ಸಾವು
ಇಂದೋರ್‌ನ ಬಲೇಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ದುರಂತದಲ್ಲಿ 36 ಮಂದಿ ಸಾವಿಗೀಡಾದರು. ರಾಮನವಮಿ ಆಚರಣೆ ವೇಳೆ ದೇವಸ್ಥಾನದಲ್ಲಿ ಜನದಟ್ಟಣೆ ಉಂಟಾಗಿತ್ತು. ಬಾವಿಯಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರ ದಂಡು ಜಮಾಯಿಸಿತ್ತು.
2022 (ಜನವರಿ 1): 12 ಸಾವು
ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಹೊಸ ವರ್ಷದ ದಿನ ನಡೆದ ಕಾಲ್ತುಳಿತದಲ್ಲಿ 12 ಯಾತ್ರಾರ್ಥಿಗಳು ಮೃತಪಟ್ಟರು. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದರು.
2017 (ಸೆಪ್ಟೆಂಬರ್ 29): 23 ಸಾವು
ಮುಂಬೈಯ ಎಲ್ಫಿನ್‌ಸ್ಟನ್ ರೋಡ್ ಮತ್ತು ಪರೇಲ್ ರೈಲು ನಿಲ್ದಾಣಗಳ ಮಧ್ಯೆ ಸಂಪರ್ಕ ಕಲ್ಪಿಸುವ ಪಾದಚಾರಿ ಸೇತುವೆಯ ಮೇಲೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 23 ಮಂದಿ ಮೃತಪಟ್ಟು, 36 ಮಂದಿ ಗಾಯಗೊಂಡಿದ್ದರು.
2015 (ಜುಲೈ 14): 27 ಸಾವು
ಆಂಧ್ರಪ್ರದೇಶದ ರಾಜಮಂಡ್ರಿಯ ಗೋದಾವರಿ ನದಿ ತೀರದ ಪುಷ್ಕರ್ ಘಾಟ್‌ನಲ್ಲಿ 'ಪುಷ್ಕರಂ' ಉತ್ಸವದ (ದಕ್ಷಿಣ ಭಾರತದ ಕುಂಭಮೇಳ) ಅಂಗವಾಗ ಪುಣ್ಯ ಸ್ನಾನಕ್ಕಾಗಿ ಜನರು ಸಾಲಾಗಿ ನಿಂತಿದ್ದಾಗ ಉಂಟಾದ ನೂಕುನುಗ್ಗಲಿನಲ್ಲಿ 27 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ 20 ಮಂದಿ ಗಾಯಗೊಂಡರು.
2014 (ಅಕ್ಟೋಬರ್ 3): 32 ಸಾವು
ಪಾಟ್ನ ಗಾಂಧಿ ಮೈದಾನದಲ್ಲಿ ದಸರಾ ಆಚರಣೆಯ ಬೆನ್ನಲ್ಲೇ ನಡೆದ ಕಾಲ್ತುಳಿತದಲ್ಲಿ 32 ಮಂದಿ ಮೃತಪಟ್ಟು, 26 ಮಂದಿ ಗಾಯಗೊಂಡಿದ್ದರು.
2013 (ಅಕ್ಟೋಬರ್ 13): 115 ಸಾವು
ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ರತನ್‌ಗಢದಲ್ಲಿ ನವರಾತ್ರಿ ಉತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 115 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸೇತುವೆ ಕುಸಿಯುತ್ತಿದೆ ಎಂಬ ಗಾಳಿ ಸುದ್ದಿ ಹರಡಿರುವುದು ಅಪಘಾತಕ್ಕೆ ಕಾರಣವಾಗಿತ್ತು.
2012 (ನವೆಂಬರ್ 19): 20 ಸಾವು
ಪಾಟ್ನದ ಗಂಗಾ ನದಿಯ ತಟದಲ್ಲಿರುವ ಅದಾಲತ್ ಘಾಟ್‌ನಲ್ಲಿ ಛತ್ ಪೂಜೆಯ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ತಾತ್ಕಾಲಿಕ ಸೇತುವೆ ಕುಸಿದು 20 ಮಂದಿ ಮೃತಪಟ್ಟಿದ್ದರು.
2011 (ನವೆಂಬರ್ 8): 20 ಸಾವು
ಹರಿದ್ವಾರದ ಗಂಗಾ ನದಿಯ ತಟದಲ್ಲಿರುವ ಹರ್ ಕೀ ಪೌರಿ ಫಾಟ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 20 ಮಂದಿ ಮೃತಪಟ್ಟಿದ್ದರು.
2011 (ಜನವರಿ 14): 104 ಸಾವು
ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ ಮಕರಜ್ಯೋತಿ ದರ್ಶನ ಪಡೆದು ಹಿಂತಿರುಗುತ್ತಿದ್ದ ಅಯ್ಯಪ್ಪ ಭಕ್ತರಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 104 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
2010 (ಮಾರ್ಚ್ 4): 63 ಸಾವು
ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಕೃಪಾಲು ಮಹಾರಾಜರ ರಾಮ ಜಾನಕಿ ದೇಗುಲದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ 63 ಮಂದಿ ಮೃತಪಟ್ಟಿದ್ದರು. ಸ್ವಯಂಘೋಷಿತ ದೇವಮಾನವನಿಂದ ಉಚಿತವಾಗಿ ಬಟ್ಟೆ ಆಹಾರ ಪಡೆಯಲು ನೂಕುನುಗ್ಗಲು ಉಂಟಾಗಿದ್ದರಿಂದ ಅವಘಡ ಸಂಭವಿಸಿತ್ತು.
2008 (ಸೆಪ್ಟೆಂಬರ್ 2008): 250 ಸಾವು
ರಾಜಸ್ಥಾನದ ಜೋಧ್‌ಪುರ ನಗರದ ಚಾಮುಂಡಾ ದೇವಿ ದೇಗುಲದಲ್ಲಿ ಬಾಂಬ್ ಸ್ಫೋಟವಾಗುತ್ತಿದೆ ಎಂಬ ವದಂತಿ ಹರಡಿದ ಬೆನ್ನಲ್ಲೇ ಉಂಟಾದ ಕಾಲ್ತುಳಿತದಲ್ಲಿ ಸುಮಾರು 250 ಭಕ್ತರು ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
2008 (ಆಗಸ್ಟ್ 3): 162 ಸಾವು
ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ನೈನಾ ದೇವಿ ದೇಗುಲದಲ್ಲಿ ಬಂಡೆಗಳ ಕುಸಿತದ ವದಂತಿಯಿಂದಾಗಿ ಉಂಟಾದ ಕಾಲ್ತುಳಿತದಲ್ಲಿ 162 ಮಂದಿ ಮೃತಪಟ್ಟು, 47 ಮಂದಿ ಗಾಯಗೊಂಡಿದ್ದರು.
2005 (ಜನವರಿ 25): 340ಕ್ಕೂ ಹೆಚ್ಚು ಸಾವು
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಂಧಾರದೇವಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 340ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿದ್ದರು.
2003 (ಆಗಸ್ಟ್ 27): 39 ಸಾವು
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕುಂಭಮೇಳದ ಪವಿತ್ರ ಸ್ನಾನದ ವೇಳೆ ಕಾಲ್ತುಳಿತದಲ್ಲಿ 39 ಜನರು ಮೃತಪಟ್ಟು, 140 ಮಂದಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.