ADVERTISEMENT

ಆಳ–ಅಗಲ | ತೂಕ ಇಳಿಸುವ ಪ್ರಯಾಸ

ಕ್ರೀಡೆಯಲ್ಲಿ ತೂಕ ಕಾಯ್ದುಕೊಳ್ಳುವುದೇ ಕ್ರೀಡಾಪಟುಗಳಿಗೆ ಸವಾಲು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 23:31 IST
Last Updated 7 ಆಗಸ್ಟ್ 2024, 23:31 IST
   
ಪ್ಯಾರಿಸ್‌ ಒಲಿಂಪಿಕ್ಸ್‌ನ 50 ಕೆಜಿ ವಿಭಾಗದ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಪದಕವನ್ನು ಖಾತ್ರಿ ಪಡಿಸಿದ್ದ ಭಾರತದ ಕುಸ್ತಿಪಟು ವಿನೇಶ್‌ ಫೋಗಟ್‌ ‌ಅವರು ಅನರ್ಹಗೊಂಡಿರುವುದು ಇಡೀ ದೇಶಕ್ಕೆ ಆಘಾತ ಉಂಟು ಮಾಡಿದೆ. ತೂಕಕ್ಕೆ ಸಂಬಂಧಿಸಿದ ನಿಯಮ ಅವರ ಅನರ್ಹತೆಗೆ ಕಾರಣವಾಗಿದೆ. ಟ್ರೋಫಿ, ಪದಕ ತಂದು ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುಗಳು ದೇಹದ ತೂಕ ಕಾಯ್ದುಕೊಳ್ಳಲು ಪಡುವ ಕಷ್ಟ ಅಷ್ಟಿಷ್ಟಲ್ಲ...

ಕ್ರೀಡಾಪಟುಗಳ ಸಾಧನೆಯನ್ನು ಅವರು ಸಾಧಿಸುವ ಗೆಲುವುಗಳು, ಪಡೆಯುವ ಟ್ರೋಫಿಗಳು, ಪದಕಗಳಿಂದ ಎಲ್ಲರೂ ಅಳೆಯುತ್ತಾರೆ. ಆ ಸಾಧನೆಯ ಹಿಂದೆ ಕಠಿಣ ಪರಿಶ್ರಮ ಇರುತ್ತದೆ. ಅದಕ್ಕಾಗಿ ದೇಹವನ್ನು ಇನ್ನಿಲ್ಲದಂತೆ ದಂಡಿಸಿರುತ್ತಾರೆ. ಕ್ರೀಡೆ ದೈಹಿಕ ಸಾಮರ್ಥ್ಯವನ್ನು ಬಯಸುತ್ತದೆ. ತೂಕವೂ ಬಹಳ ಮುಖ್ಯ. ಅದರಲ್ಲೂ ವಿವಿಧ ತೂಕದ ವಿಭಾಗಗಳಲ್ಲಿ ನಡೆಯುವ ಕುಸ್ತಿ, ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌, ಪವರ್‌ಲಿಫ್ಟಿಂಗ್‌, ಜೂಡೊ ಕ್ರೀಡೆಗಳಲ್ಲಿ ಕ್ರೀಡಾಳುಗಳ ತೂಕವೇ ಪ್ರಧಾನ. ಒಂದಿನಿತು ವ್ಯತ್ಯಾಸವಾದರೂ, ಕ್ರೀಡಾಳುಗಳು ಬಹುದೊಡ್ಡ ಅವಕಾಶದಿಂದ ವಂಚಿತರಾಗುತ್ತಾರೆ. ಅದಕ್ಕೆ ವಿನೇಶ್‌ ಫೋಗಟ್‌ ಅವರೇ ತಾಜಾ ಉದಾಹರಣೆ.

ಸ್ಪರ್ಧೆಗಳ ಸಂದರ್ಭದಲ್ಲಿ ತೂಕ ಕಾಯ್ದುಕೊಳ್ಳಲು ಕ್ರೀಡಾಪಟುಗಳು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಆಟ ಬೇಡುವಂತೆ ತೂಕ ಇಳಿಸುವುದು, ಗಳಿಸುವುದು ಕ್ರೀಡಾಳುಗಳ ಮುಂದಿರುವ ದೊಡ್ಡ ಸವಾಲು. ವೈದ್ಯರು, ತರಬೇತುದಾರರು, ಪೌಷ್ಟಿಕ ಆಹಾರ ತಜ್ಞರ ತಂಡ‌ದ ಮೇಲ್ವಿಚಾರಣೆಯಲ್ಲಿ ತಮ್ಮ ದೇಹದ ತೂಕವನ್ನು ನಿಗದಿತ ಮಟ್ಟಕ್ಕೆ ತರುತ್ತಾರೆ.

‘ತೂಕ ಕಾಯ್ದುಕೊಳ್ಳುವುದಕ್ಕಾಗಿ ಎರಡು ದಿನಗಳ ಕಾಲ ನಾನು ಆಹಾರ ಮತ್ತು ನೀರು ಸೇವಿಸಿರಲಿಲ್ಲ. ಇದರಿಂದಾಗಿ ಶಕ್ತಿಯನ್ನು ಕಳೆದುಕೊಂಡಿದ್ದೆ’ ಎಂದು ಭಾರತದ ಬಾಕ್ಸರ್‌ ನಿಖತ್‌ ಝರೀನ್‌, ಈ ಒಲಿಂಪಿಕ್ಸ್‌ನಲ್ಲಿ ಸೋತ ಬಳಿಕ ಹೇಳಿದ್ದರು. 

ADVERTISEMENT

‘ತೂಕ ಕಡಿಮೆ ಮಾಡಿಕೊಳ್ಳುವ ಪ್ರಯಾಸಕರವಾದ ಪ್ರಕ್ರಿಯೆಯಲ್ಲಿ ತೊಡಗುವ ಕ್ರೀಡಾಪಟುಗಳು ಪದಕಕ್ಕೆ ಅರ್ಹರು’ ಎಂದು ಹಿಂದೊಮ್ಮೆ ಕುಸ್ತಿಪಟು ಸಾಕ್ಷಿ ಮಲ್ಲಿಕ್‌ ತಮಾಷೆಯಾಗಿ ಹೇಳಿದ್ದರು.   

ಈ ಎರಡು ಹೇಳಿಕೆಗಳೇ, ಕ್ರೀಡೆಯಲ್ಲಿ ತೂಕ ಎಷ್ಟು ಮುಖ್ಯ. ಅದನ್ನು ಕಾಪಾಡಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ವಿವರಿಸುತ್ತವೆ. 

ತೂಕ ಇಳಿಸುವ ಪ್ರಕ್ರಿಯೆ ಹೇಗೆ?
ಕ್ರೀಡಾಕೂಟಕ್ಕೂ ಮುನ್ನ ಕ್ರೀಡಾಪಟುಗಳು ನಿಗದಿತ ಅವಧಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ತಮ್ಮ ತೂಕವನ್ನು ಇಳಿಸಿಕೊಳ್ಳುತ್ತಾರೆ. ತಮ್ಮ ದೇಹವನ್ನು ಚೆನ್ನಾಗಿ ಅರಿತಿರುವ ಕ್ರೀಡಾಳುಗಳು ಕ್ರೀಡಾಕೂಟ ಆರಂಭಕ್ಕೂ 10ರಿಂದ 20 ದಿನಗಳ ಮೊದಲು ತೂಕ ಇಳಿಸಿಕೊಳ್ಳಲು ಆರಂಭಿಸುತ್ತಾರೆ. ಉದಾಹರಣೆಗೆ 57 ಕೆ ಜಿ ತೂಕದ ಒಬ್ಬ ಕ್ರೀಡಾಪಟು 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಾದರೆ ಸ್ಪರ್ಧೆಯ ಸಂದರ್ಭದಲ್ಲಿ ಆತನ ತೂಕ 53 ಕೆ ಜಿ ಒಳಗಡೆ ಇರಬೇಕು.  ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯನ್‌ ಗೇಮ್ಸ್‌ನಂತಹ ಪ್ರಮುಖ ಕ್ರೀಡಾಕೂಟಗಳ ಸಂದರ್ಭದಲ್ಲಿ ಪಂದ್ಯಕ್ಕೂ ಮೊದಲು ಹಲವು ಕ್ರೀಡಾಪಟುಗಳು ಆಹಾರವನ್ನೇ ತೆಗೆದುಕೊಳ್ಳುವುದಿಲ್ಲ.  ಪಂದ್ಯದ ದಿನ ಬೆಳಿಗ್ಗೆ ತೂಕ ಪರೀಕ್ಷೆ ಇರುವುದರಿಂದ, ಹಿಂದಿನ ದಿನ ರಾತ್ರಿ ಪೂರ್ತಿ ಕಾರ್ಡಿಯೊ, ಸ್ಕಿಪ್ಪಿಂಗ್‌, ಓಟ, ಹಬೆ ಸ್ನಾನ ಸೇರಿದಂತೆ, ದೇಹದಲ್ಲಿನ ನೀರಿನ ಅಂಶವನ್ನು ಗರಿಷ್ಠಪ್ರಮಾಣದಲ್ಲಿ ಹೊರಹಾಕಲು ವಿವಿಧ ರೀತಿಯ ವ್ಯಾಯಾಮದಲ್ಲಿ ತೊಡಗುತ್ತಾರೆ. ಕೆಲವು ಸ್ಪರ್ಧಿಗಳು ನೀರು, ಆಹಾರ ಸೇವಿಸುವುದಿಲ್ಲ. ತೂಕ ಪರೀಕ್ಷೆಯ ನಂತರ ಪಂದ್ಯ ಇರುವುದರಿಂದ ಶಕ್ತಿಗಾಗಿ ಕಾರ್ಬೊಹೈಡ್ರೇಟ್, ಪ್ರೋಟಿನ್‌ಯುಕ್ತ ಆಹಾರ (ಬಹುಪಾಲು ದ್ರವ ಆಹಾರ) ಸೇವಿಸುತ್ತಾರೆ. ಆರಂಭಿಕ ಸುತ್ತುಗಳಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿದರೆ, ಫೈನಲ್‌ ಪಂದ್ಯದ ದಿನ ಬೆಳಿಗ್ಗೆ ನಡೆಯುವ ತೂಕ ಪರೀಕ್ಷೆಗೆ ಮತ್ತೆ ತಮ್ಮ ದೇಹವನ್ನು ಸಜ್ಜುಗೊಳಿಸಬೇಕಾಗುತ್ತದೆ. 

ಯುಡಬ್ಲ್ಯುಡಬ್ಲ್ಯು ಆರ್ಟಿಕಲ್‌ ನಿಯಮ –11 ಹೇಳುವುದೇನು?

  •  ಕುಸ್ತಿ ಪಂದ್ಯದ ದಿನ ಬೆಳಿಗ್ಗೆ ಕುಸ್ತಿಪಟುಗಳ ತೂಕ ಪರೀಕ್ಷೆ ಮಾಡಲಾಗುತ್ತದೆ. ತೂಕ ಮಾಡುವ ಪ್ರಕ್ರಿಯೆ 30 ನಿಮಿಷಗಳ ಕಾಲ ನಡೆಯುತ್ತದೆ.

  • ಎರಡನೇ ದಿನ ಬೆಳಿಗ್ಗೆ ಫೈನಲ್‌ ಮತ್ತು ರೆಪೆಷಾಜ್‌ನಲ್ಲಿ ಹೋರಾಡುವ ಕುಸ್ತಿಪಟುಗಳ ತೂಕವನ್ನು ಅಳೆಯಲಾಗುತ್ತದೆ. ಇದು 15 ನಿಮಿಷಗಳ ಕಾಲ ನಡೆಯುತ್ತದೆ.

  • ಪರೀಕ್ಷೆ ವೇಳೆಯಲ್ಲಿ ಕುಸ್ತಿಪಟುಗಳು ಪರಿಪೂರ್ಣ ದೈಹಿಕ ಸಾಮರ್ಥ್ಯ ಹೊಂದಿರಬೇಕು. ಉಗುರುಗಳನ್ನು ಅತ್ಯಂತ ಚಿಕ್ಕದಾಗಿ ಕತ್ತರಿಸಿರಬೇಕು.

  • ಒಂದು ವೇಳೆ ಸ್ಪರ್ಧಿಯು ಮೊದಲ ಮತ್ತು ಎರಡನೇ ತೂಕ ಪರೀಕ್ಷೆಯಲ್ಲಿ ಪಾಲ್ಗೊಳ್ಳದಿದ್ದರೆ ಅಥವಾ ಅದರಲ್ಲಿ ವಿಫಲವಾದರೆ ಸ್ಪರ್ಧೆಯಿಂದ ಅನರ್ಹಗೊಳ್ಳುತ್ತಾರೆ ಮತ್ತು ಪಟ್ಟಿಯಲ್ಲಿ ರ‍್ಯಾಂಕ್‌ ರಹಿತವಾಗಿ ಕೊನೆಯ ಸ್ಥಾನ ನೀಡಲಾಗುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ‘ಕುತಂತ್ರ’ದ ಚರ್ಚೆ
ವಿನೇಶ್ ಫೋಗಟ್ ಅವರು ತೂಕ ಹೆಚ್ಚಳದ ಕಾರಣಕ್ಕೆ ಒಲಿಂಪಿಕ್ಸ್‌ನಿಂದ ಹೊರಬಿದ್ದ ಕ್ಷಣದಿಂದಲೇ ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿ ಪೋಸ್ಟ್‌ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಡೆದ ಘಟನೆಯ ಬಗ್ಗೆ ಮತ್ತು ವಿನೇಶ್ ಬಗ್ಗೆ ಫೇಸ್‌ಬುಕ್, ‘ಎಕ್ಸ್‌’ ಮುಂತಾದ ವೇದಿಕೆಗಳಲ್ಲಿ ಪರ ಮತ್ತು ವಿರೋಧದ ಚರ್ಚೆ ಬಿರುಸುಗೊಂಡಿತ್ತು. ಬಹುತೇಕರು ವಿನೇಶ್ ಪರ ಸಹಾನುಭೂತಿ ವ್ಯಕ್ತಪಡಿಸಿ, ಅವರನ್ನು ಹೊಗಳಿದ್ದಾರೆ. ಕೇವಲ 100 ಗ್ರಾಂ ತೂಕ ಹೆಚ್ಚಳ ಎಂಬುದು ‘ಒಂದು ಕುತಂತ್ರ’ ಎಂದು ಬಹಳ ಮಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಜತೆಗೆ ‘ಪನೌತಿ’ ಎನ್ನುವ ಹ್ಯಾಷ್‌ ಟ್ಯಾಗ್‌ ಬಳಸಿ ವಿನೇಶ್ ಈ ಹಿಂದೆ ಮೋದಿ ಸರ್ಕಾರದ ವಿರುದ್ಧ ನಡೆಸಿದ್ದ ಹೋರಾಟವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಕೆಲವರು ಈ ಬಗ್ಗೆ ‘ಕರ್ಮ’ ಎಂದು ಪೋಸ್ಟ್ ಮಾಡಿದ್ದು, ‘ಅವರು ಮಾಡಿದ ಕರ್ಮದ ಫಲ’ ಎಂದು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಇದು ‘ಕ್ರೂರ ಅಂತ್ಯ’ ಎಂದು ಕರೆದರೆ, ಕೆಲವರು ‘ನಾವು ನಿಮ್ಮೊಂದಿಗಿದ್ದೇವೆ’ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಬಾಯ್ಕಾಟ್ ಪ್ಯಾರಿಸ್ ಒಲಿಂಪಿಕ್ಸ್‌’ ಎನ್ನುವ ಹ್ಯಾಷ್ ಟ್ಯಾಗ್‌ ಬಳಸಿ ಕ್ರೀಡಾಕೂಟ ಬಹಿಷ್ಕರಿಸಲು ಕರೆ ನೀಡಿ ಪೋಸ್ಟ್ ಮಾಡುತ್ತಿದ್ದಾರೆ. ಕೆಲವರು ತಮ್ಮ ಪೋಸ್ಟ್‌ಗಳಲ್ಲಿ ವಿನೇಶ್ ಜತೆ ಪ್ರಧಾನಿ ಮೋದಿ ಚಿತ್ರಗಳನ್ನು ಹಂಚಿಕೊಂಡರೆ, ಮತ್ತೆ ಕೆಲವರು ರಾಹುಲ್ ಗಾಂಧಿ ಚಿತ್ರದೊಂದಿಗೆ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಈ ವಿಷಯವೇ ಬುಧವಾರ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿತ್ತು.
ಅನರ್ಹತೆ ಸಾಮಾನ್ಯ ಕುಸ್ತಿಯ ರೀತಿಯಲ್ಲಿಯೇ ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌, ಪವರ್‌ಲಿಫ್ಟಿಂಗ್‌, ಜೂಡೊ ಕ್ರೀಡೆಗಳಲ್ಲಿ ತೂಕದ ನಿಯಮ ಜಾರಿಯಲ್ಲಿದೆ. ಪಂದ್ಯಕ್ಕೂ ಮುನ್ನ ಕ್ರೀಡಾಪಟುಗಳ ತೂಕವು ಅವರು ಸ್ಪರ್ಧಿಸುವ ನಿಗದಿತ ತೂಕ ವಿಭಾಗಕ್ಕೆ ತಕ್ಕಂತೆ ಇರಬೇಕು. ಇಲ್ಲದಿದ್ದರೆ ಅನರ್ಹಗೊಳ್ಳುತ್ತಾರೆ. ಕ್ರೀಡಾಕೂಟಗಳಲ್ಲಿ ತೂಕದ ಕಾರಣಕ್ಕೆ ಸ್ಪರ್ಧಿಗಳು ಅನರ್ಹಗೊಳ್ಳುವ ಪ್ರಕರಣ ನಡೆಯುತ್ತಿರುತ್ತದೆ.

ಒಲಿಂಪಿಕ್ಸ್‌ನ ಕೆಲವು ಉದಾಹರಣೆಗಳು ಇಂತಿವೆ...

ವಿನೇಶ್‌ ಫೋಗಟ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಈಗ ಅನರ್ಹರಾದ ವಿನೇಶ್‌ ಫೋಗಟ್‌ ಅವರೇ 2016ರ ರಿಯೊ ಒಲಿಂಪಿಕ್ಸ್‌ಗೂ ಮೊದಲು ನಡೆದ ಏಷ್ಯನ್‌ ಕ್ವಾಲಿಫೈರ್ಸ್‌ನಲ್ಲಿ 48 ಕೆಜಿ ವಿಭಾಗದಲ್ಲಿ ತೂಕ ಜಾಸ್ತಿ ಇದ್ದ ಕಾರಣಕ್ಕೆ ಅನರ್ಹಗೊಂಡಿದ್ದರು.

ಇಮಾನ್ಯುಲಾ ಲುಝಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮಂಗಳವಾರ ನಡೆದ ಕುಸ್ತಿಯಲ್ಲಿ ಇಟಲಿಯ ಸ್ಪರ್ಧಿಯಾಗಿದ್ದ, 24 ವರ್ಷದ ಇಮಾನ್ಯುಲಾ ಲುಝಿ ಅವರು 50 ಕೆಜಿ ವಿಭಾಗ ಫ್ರೀಸ್ಟೈಲ್‌ನಲ್ಲಿ ನಿಗದಿಗಿಂತ ಹೆಚ್ಚು ತೂಕ ಇದ್ದ ಕಾರಣಕ್ಕೆ ಪ್ರಾಥಮಿಕ ಬೌಟ್‌ನಿಂದ ಅನರ್ಹಗೊಂಡಿದ್ದರು.

ಮೆಸ್ಸೌದ್ ರಿಡೌನ್ ಡ್ರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಜುಲೈ 29ರಂದು ಜೂಡೊ ಪಂದ್ಯದಲ್ಲಿ ಅಲ್ಜೀರಿಯಾದ ಮೆಸ್ಸೌದ್‌ ರಿಡೌನ್‌ ಡ್ರಿಸ್‌ ಅವರು ಇಸ್ರೇಲ್‌ನ ತೊಹುರ್‌ ಬಬ್ಟುಲ್‌ ಅವರನ್ನು ಎದುರಿಸಬೇಕಿತ್ತು. ತೂಕ ಪರೀಕ್ಷೆಯಲ್ಲಿ 400 ಗ್ರಾಂ ತೂಕ ಹೆಚ್ಚಿದ್ದರಿಂದ ಅವರು ಸ್ಪರ್ಧೆಯಿಂದ ಹೊರ ಬಿದ್ದಿದ್ದರು.

ಜೆಡೆನ್ ಕಾಕ್ಸ್‌: 2016ರ ರಿಯೊ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ಅಮೆರಿಕದ ಜೆಡೆನ್‌ ಕಾಕ್ಸ್‌ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನ ಅಮೆರಿಕದಲ್ಲಿ ನಡೆದ ಕುಸ್ತಿ ಟ್ರಯಲ್ಸ್‌ನಲ್ಲಿ ತೂಕ ಜಾಸ್ತಿ ಇದ್ದ ಕಾರಣಕ್ಕೆ 97 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಂಡಿದ್ದರು.

ಪ್ರತಿ ಗ್ರಾಂ ಕೂಡ ಮುಖ್ಯ: ವಿನೇಶ್ ಫೋಗಟ್ ಅವರ ಅನರ್ಹತೆಯ ಘಟನೆ ತುಂಬಾ ಆಘಾತ ತಂದಿದೆ. ಒಲಿಂಪಿಕ್ಸ್‌ನಂತಹ ಅತ್ಯುನ್ನತ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶಗಳೇ ನಮ್ಮ ದೇಶಕ್ಕೆ ಸಿಕ್ಕಿದ್ದು ಕಡಿಮೆ. ಅಂತಹದರಲ್ಲಿ ಕುಸ್ತಿಯಲ್ಲಿ ಚಿನ್ನ ಗೆಲ್ಲುವ ಶತಮಾನದ ಕನಸು ಕೈಗೂಡುವ ಅವಕಾಶ ಇದಾಗಿತ್ತು. ಈ ರೀತಿ ಕೈತಪ್ಪಿದ್ದು ದುರದೃಷ್ಟಕರ. ಅಂತರರಾಷ್ಟ್ರೀಯ ಒಲಿಂಪಿಕ್ಸ್ ಕೌನ್ಸಿಲ್ ನಿಯಮಗಳು ಯಾವಾಗಲೂ ಕಟ್ಟುನಿಟ್ಟು. ಈ ಹಿಂದೆ ಕೆಲವು ಪ್ರಕರಣಗಳಲ್ಲಿ 20 ಗ್ರಾಂ ತೂಕ ಹೆಚ್ಚಾದಾಗಲೂ ಕುಸ್ತಿಪಟುಗಳು ಅನರ್ಹಗೊಂಡಿದ್ದಾರೆ. ಇಲ್ಲಿ ಯಾರು ಏನೇ ಮಾತನಾಡಲಿ, ಚರ್ಚಿಸಲಿ. ವಿಜ್ಞಾನವೇ ಅಂತಿಮ. ಅನುಭವಿ ಕುಸ್ತಿಪಟುವಾಗಿರುವ ವಿನೇಶ್ ಅವರಿಗೆ ನುರಿತ ಕೋಚ್, ಪರಿಣತ ನೆರವು ಸಿಬ್ಬಂದಿ ಇದ್ದಾರೆ. ಅವರೆಲ್ಲರೂ ಇದಕ್ಕೆ ಬಾಧ್ಯಸ್ಥರು. ಮೊದಲ ದಿನ ಮೂರು ಬೌಟ್‌ಗಳ ನಂತರ ಅವರು ಯಾವ ರೀತಿಯ ಆಹಾರ ತೆಗೆದುಕೊಂಡರು ಎಂಬುದು ಮುಖ್ಯವಾಗುತ್ತದೆ. ರಿಕವರಿ ಟೈಮ್‌ನಲ್ಲಿ ತೂಕ ಹೆಚ್ಚಾಗಿದ್ದರೆ ಇಳಿಸಲು ವೈಜ್ಞಾನಿಕ ಪದ್ಧತಿಗಳಿವೆ. ಇಲ್ಲಿ ಯಾವ ರೀತಿಯ ಕ್ರಮ ಅನುಸರಿಸಿದ್ದಾರೆ ಎಂದು ಗೊತ್ತಿಲ್ಲ. ಚಿನ್ನದ ಪದಕಕ್ಕಾಗಿ ನಡೆಯುವ ಪಂದ್ಯ ಎಂದರೆ ಸಾಮಾನ್ಯವೇ? ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ. ಅದಕ್ಕಾಗಿಯೇ ಕ್ರೀಡಾಪಟುಗಳು ತಮ್ಮ ಸ್ಪರ್ಧೆಗೂ ಮುನ್ನ ಆಹಾರ, ಪಾನೀಯಗಳ ಕುರಿತು ಸಂಪೂರ್ಣ ತಿಳಿದುಕೊಂಡಿರಬೇಕು. ತೂಕದ ವಿಭಾಗದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಸ್ಪರ್ಧೆಗೂ ಕನಿಷ್ಠ 10 ದಿನ ಮುನ್ನವೇ ತೂಕ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಿರಬೇಕು. ಏಕೆಂದರೆ ದೇಹತೂಕ ಆಧಾರಿತ ಕ್ರೀಡೆಗಳಲ್ಲಿ ಒಂದೊಂದು ಗ್ರಾಂ ಕೂಡ ಮುಖ್ಯ.
ಡಾ. ಕಿರಣ ಕುಲಕರ್ಣಿ, ಕ್ರೀಡಾ ವೈದ್ಯ, ಎಎಫ್‌ಸಿ ಡೋಪಿಂಗ್ ಅಧಿಕಾರಿ‌
ತೂಕಕ್ಕಿಲ್ಲ ರಿಯಾಯಿತಿ
ಆಹ್ವಾನಿತ ಕುಸ್ತಿಗಳಲ್ಲಿ ವಿವಿಧ ತೂಕ ವಿಭಾಗಗಳಲ್ಲಿ ಸ್ಪರ್ಧಿಸುವ ಕುಸ್ತಿಪಟುಗಳು ಹೊಂದಿರಬೇಕಾದ ತೂಕದ ನಿಯಮದಲ್ಲಿ ಯುಡಬ್ಲ್ಯುಡಬ್ಲ್ಯುಯು ಸಡಿಲಿಕೆ ಮಾಡುತ್ತದೆ. 2 ಕೆಜಿಯಷ್ಟು ರಿಯಾಯಿತಿ ನೀಡುತ್ತದೆ. ಆದರೆ ಒಲಿಂಪಿಕ್ಸ್‌, ವಿಶ್ವ ಚಾಂಪಿಯನ್‌ಶಿಪ್‌, ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಇದಕ್ಕೆ ಅವಕಾಶ ಇಲ್ಲ.

ಆಧಾರ: ಪಿಟಿಐ, ಯುಡಬ್ಲ್ಯುಡಬ್ಲ್ಯು ನಿಯಮಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.