ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) 7ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕದಲ್ಲಿ ಮಾಡಿರುವ ಪರಿಷ್ಕರಣೆ ವಿವಾದಕ್ಕೆ ಗುರಿಯಾಗಿದೆ. ದೆಹಲಿ ಸುಲ್ತಾನರು, ಮೊಘಲರಿಗೆ ಸಂಬಂಧಿಸಿದ ವಿವರಗಳನ್ನು ಕೈಬಿಡಲಾಗಿದೆ. ಆ ಜಾಗದಲ್ಲಿ ಮಗದ, ಮೌರ್ಯರಂಥ ಭಾರತದ ಪ್ರಾಚೀನ ರಾಜಮನೆತನಗಳ ಕುರಿತ ಪಾಠವನ್ನು ಸೇರಿಸಲಾಗಿದೆ. ಕುಂಭಮೇಳ, ಜ್ಯೋತಿರ್ಲಿಂಗಗಳ ಮಾಹಿತಿಗಳನ್ನು ಸೇರಿಸಲಾಗಿದೆ. ಹಿಂದೆಯೂ ಪಠ್ಯ ಪರಿಷ್ಕರಣೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಬಿಜೆಪಿ ಸರ್ಕಾರವು ಶಿಕ್ಷಣವನ್ನು ‘ಕೇಸರೀಕರಣ’ ಮಾಡುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈಗಿನ ಪಠ್ಯ ಪರಿಷ್ಕರಣೆ ಕೂಡ ಅದೇ ಹಾದಿಯಲ್ಲಿ ಸಾಗಿದೆ
ದೇಶದ ಶೈಕ್ಷಣಿಕ ವ್ಯವಸ್ಥೆಗೆ ಅಗತ್ಯವಾದ ಪಠ್ಯಗಳನ್ನು ರೂಪಿಸುವುದು, ಸಂಶೋಧನೆಗಳನ್ನು ಕೈಗೊಳ್ಳುವುದು ಎನ್‌ಸಿಇಆರ್‌ಟಿಯ ಮುಖ್ಯ ಕೆಲಸ. ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಜಾರಿಯಾದ ನಂತರ ಅದಕ್ಕೆ ತಕ್ಕಂತೆ ಶಿಕ್ಷಣ ಚೌಕಟ್ಟು ರೂಪಿಸಲಾಗಿತ್ತು. ಅದರ ಶಿಫಾರಸು, ಸಲಹೆಗಳಿಗನುಗುಣವಾಗಿ ಪಠ್ಯಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಕಳೆದ ವರ್ಷ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 3 ಮತ್ತು 6ನೇ ತರಗತಿಯ ಪಠ್ಯಪುಸ್ತಕಗಳನ್ನು ಎನ್‌ಸಿಇಆರ್‌ಟಿ ಬದಲಾಯಿಸಿತ್ತು. ಈ ವರ್ಷ 4 ಮತ್ತು 7ನೇ ತರಗತಿಯ ಪಠ್ಯಪುಸ್ತಕಗಳನ್ನು ಬದಲಾಯಿಸುವ ಪ್ರಕ್ರಿಯೆ ಆರಂಭಿಸಿದೆ. ಈಗಾಗಲೇ 7ನೇ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಮೊದಲ ಭಾಗ ಬಿಡುಗಡೆಯಾಗಿದ್ದು, ಎರಡನೇ ಭಾಗ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಸಮಾಜ ವಿಜ್ಞಾನದ ಮೊದಲ ಭಾಗದಲ್ಲಿ ದೆಹಲಿ ಸುಲ್ತಾನರು, ಮೊಘಲರಿಗೆ ಸಂಬಂಧಿಸಿದ ಬಗೆಗಿನ ಅಧ್ಯಾಯಗಳನ್ನು ಕೈಬಿಟ್ಟು, ಕುಂಭಮೇಳ, ಜ್ಯೋತಿರ್ಲಿಂಗ, ಬೇಟಿ ಬಚಾವೊ, ಬೇಟಿ ಪಢಾವೊ ಮುಂತಾದ ಹೊಸ ಅಧ್ಯಾಯ/ಮಾಹಿತಿ ಸೇರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈ ಹಿಂದೆಯೂ ಹಲವು ಬಾರಿ ಪಠ್ಯಪುಸ್ತಕ ಬದಲಾವಣೆ ಮಾಡಿದ್ದು, ಕೇಸರೀಕರಣದ ಆರೋಪಗಳಿಗೆ ಗುರಿಯಾಗಿದೆ.
2017ರಲ್ಲಿ ‘ಭಾರತೀಯ ರಾಜಕಾರಣದಲ್ಲಿ ಇತ್ತೀಚಿನ ಬೆಳವಣಿಗೆಗಳು’ ಎನ್ನುವ (12ನೇ ತರಗತಿಯ ರಾಜ್ಯಶಾಸ್ತ್ರ) ಪುಸ್ತಕದಲ್ಲಿ ‘ಗುಜರಾತ್‌ನ ಮುಸ್ಲಿಂ ವಿರೋಧಿ ಗಲಭೆಗಳು’ ಎನ್ನುವುದನ್ನು ‘ಗುಜರಾತ್ ಗಲಭೆಗಳು’ ಎಂದು ಬದಲಿಸಲಾಗಿತ್ತು. ಇನ್ನೊಂದು ಪಠ್ಯದಲ್ಲಿ, ಮೊಘಲರ ಬಗೆಗಿನ ಅಧ್ಯಾಯವನ್ನು ಸಂಕ್ಷಿಪ್ತಗೊಳಿಸಲಾಗಿತ್ತು. ಹಿಂದೂ ರಾಷ್ಟ್ರೀಯವಾದಿಗಳು ಮಹಾತ್ಮ ಗಾಂಧಿ ಅವರನ್ನು ವಿರೋಧಿಸುತ್ತಿದ್ದರು ಎನ್ನುವ ಅಂಶವನ್ನೂ ತೆಗೆದುಹಾಕಲಾಗಿತ್ತು. ಜತೆಗೆ, ಬಿಜೆಪಿಯ ಗುಪ್ತ ಕಾರ್ಯಸೂಚಿಯಂತೆ ಹಿಂದೂ ರಾಷ್ಟ್ರೀಯವಾದಿ ಸಾವರ್ಕರ್ ಅವರ ಬಗ್ಗೆ ಪಾಠ ಅಳವಡಿಸಲಾಗಿದೆ, ಗಾಂಧಿ ಹಂತಕ ನಾಥೂರಾಮ ಗೋಡ್ಸೆ ಬಗ್ಗೆ ‘ಮೃದು’ ಧೋರಣೆ ತಳೆಯಲಾಗಿದೆ ಎನ್ನುವ ಟೀಕೆಗಳು ವ್ಯಕ್ತವಾಗಿದ್ದವು. ಪಠ್ಯಕ್ರಮ ಬದಲಾವಣೆಯ ಹಿಂದೆ ಬಿಜೆಪಿ ಸರ್ಕಾರದ ಕೈವಾಡ ಇದ್ದು, ಶಾಲಾ ಪಠ್ಯಗಳ ಮೂಲಕ ಹಿಂದುತ್ವವನ್ನು ಹೇರುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು.
7ನೇ ತರಗತಿಯ ಹಳೆ ಪಠ್ಯಪುಸ್ತಕದಲ್ಲಿರುವ ಪಾಠಗಳ ವಿವರ
2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಲವು ಬಾರಿ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ಮೊದಲ ಬಾರಿಗೆ 2017ರಲ್ಲಿ 182 ಪಠ್ಯಪುಸ್ತಕಗಳಲ್ಲಿ 1,334 ಬದಲಾವಣೆ, ತಿದ್ದುಪಡಿ, ದತ್ತಾಂಶ ಪರಿಷ್ಕರಣೆ ಮಾಡಲಾಯಿತು. ಎರಡನೇ ಬಾರಿಗೆ 2019ರಲ್ಲಿ, ಮತ್ತೆ 2021, 2023, 2024ರಲ್ಲಿಯೂ ಪರಿಷ್ಕರಣೆ ಮಾಡಲಾಗಿದೆ.
‘ತರ್ಕಬದ್ಧವಾಗಿ ಇತಿಹಾಸವನ್ನು ಮರುರೂಪಿಸುವ ಸಲುವಾಗಿ ಬದಲಾವಣೆ ಮಾಡಲಾಗಿದೆ’ ಎಂದು ಎನ್‌ಸಿಇಆರ್‌ಟಿ ಪ್ರತಿಪಾದಿಸಿತ್ತು. ಆದರೆ, ಕೆಲವು ವಿಷಯಗಳಲ್ಲಿ ಮಾಡಲಾದ ಬದಲಾವಣೆಗಳು ಅತಾರ್ಕಿಕ, ಅವೈಜ್ಞಾನಿಕವಾಗಿವೆ ಎಂದು ಟೀಕಿಸಲಾಗಿತ್ತು.
‘ಯುರೋಪ್‌ಗಿಂತ ಹಲವು ಶತಮಾನಗಳ ಮೊದಲು ಭಾರತ ತನ್ನದೇ ಆದ ಅವಿಭಾಜ್ಯ ರೇಖಾಂಶವನ್ನು ಹೊಂದಿತ್ತು. ಅದನ್ನು ಮಧ್ಯರೇಖೆ ಎಂದು ಕರೆಯಲಾಗುತ್ತಿತ್ತು. ಅದು ಉಜ್ಜಯಿನಿ ನಗರದ ಮೂಲಕ ಹಾದುಹೋಗುತ್ತಿತ್ತು. ಉಜ್ಜಯಿನಿ ನಗರವು ಹಲವು ಶತಮಾನಗಳಿಂದಲೂ ಖಗೋಳ ವಿಜ್ಞಾನದ ಪ್ರಸಿದ್ಧ ಕ್ಷೇತ್ರವಾಗಿದೆ’ ಎಂದು 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಸೇರಿಸಿದ್ದರ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದ್ದವು.
ಏಳನೇ ತರಗತಿ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಕುಂಭಮೇಳದ ಬಗ್ಗೆ ವಿವರಿಸಲಾಗಿದೆ
ಶೈಕ್ಷಣಿಕ ಕ್ಷೇತ್ರದ ತಜ್ಞರು, ವಿಷಯ ಪರಿಣತರಿಂದಲೂ ಬದಲಾದ ಪಠ್ಯಗಳ ಬಗ್ಗೆ ಆಕ್ಷೇಪ, ವಿರೋಧ ವ್ಯಕ್ತವಾಗಿತ್ತು. ಪಠ್ಯಪುಸ್ತಕ ಸಮಿತಿಯಿಂದ ತಮ್ಮ ಹೆಸರನ್ನು ಕೈಬಿಡುವಂತೆ ದೇಶದ ವಿವಿಧ ವಿಶ್ವವಿದ್ಯಾಲಯಗಳ 33 ಪ್ರಾಧ್ಯಾಪಕರು, ಶಿಕ್ಷಣ ತಜ್ಞರು ಪತ್ರ ಬರೆದಿದ್ದರು. ಈಗ ಎನ್‌ಸಿಇಆರ್‌ಟಿ ಮತ್ತೆ ಪಠ್ಯಪುಸ್ತಕ ಬದಲಾವಣೆ ಮಾಡಿದ್ದು, ಬಿಜೆಪಿ ಸರ್ಕಾರವು ಮತ್ತೆ ಕೇಸರೀಕರಣ ಪ್ರಕ್ರಿಯೆಯನ್ನು ಮುಂದುವರಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಯೋಧ್ಯೆ ವಿವಾದ, ಬಾಬರಿ ಮಸೀದಿ ನೆಲಸಮ, ಹಿಂದುತ್ವದ ರಾಜಕಾರಣದ ಬಗೆಗಿನ ಮಾಹಿತಿ ತಿದ್ದುಪಡಿ ಮಾಡಲಾಗಿತ್ತು
‘ಹರಪ್ಪ ನಾಗರಿಕತೆಯನ್ನು ‘ಸಿಂಧು ಸರಸ್ವತಿ’ ನಾಗರಿಕತೆ ಎಂದೂ ಕರೆಯಲಾಗಿದೆ’ ಎಂದು ಉಲ್ಲೇಖಿಸಲಾಗಿತ್ತು
‘ಗಾಂಧಿ ಹತ್ಯೆಯ ನಂತರ ಆರ್‌ಎಸ್‌ಎಸ್ ಅನ್ನು ನಿಷೇಧಿಸಲಾಗಿತ್ತು’ ಎನ್ನುವ ಮಾಹಿತಿಯನ್ನು ಕೈಬಿಡಲಾಗಿತ್ತು
ನಾಥೂರಾಮ್ ಗೋಡ್ಸೆ ಕುರಿತ ಉಲ್ಲೇಖದಲ್ಲಿ ‘ಬ್ರಾಹ್ಮಣ’ ಎನ್ನುವ ಮಾಹಿತಿ ಕೈಬಿಡಲಾಗಿತ್ತು. ಗೋಡ್ಸೆ ಹಿಂದೂ ತೀವ್ರಗಾಮಿ ಪತ್ರಿಕೆಯ ಸಂಪಾದಕ ಎನ್ನುವ ಅಂಶವನ್ನು ತೆಗೆಯಲಾಗಿತ್ತು
ಹಿಂದಿನ ಪಠ್ಯಪುಸ್ತಕಗಳಲ್ಲಿದ್ದ ಜಾತಿ ವ್ಯವಸ್ಥೆ, ಪುರೋಹಿತರು, ಶೂದ್ರರು, ಅಸ್ಪಶೃತೆ ಕುರಿತ ಅಂಶಗಳನ್ನು ಕೈಬಿಡಲಾಗಿತ್ತು
ಪರಿಷ್ಕರಣೆ ಮತ್ತು ವಿವಾದ
ಕೇಂದ್ರ ಸರ್ಕಾರ 1961ರಲ್ಲಿ ಎನ್‌ಸಿಇಆರ್‌ಟಿಯನ್ನು ಸ್ಥಾಪಿಸಿತ್ತು. ಆಡಳಿತದಲ್ಲಿರುವ ಪಕ್ಷಗಳು ಎನ್‌ಸಿಇಆರ್‌ಟಿ ಮೂಲಕ ಶಿಕ್ಷಣದಲ್ಲಿ ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಜಾರಿಗೊಳಿಸಲು ಯತ್ನಿಸುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಎನ್‌ಸಿಇಆರ್‌ಟಿ ಪಠ್ಯಪರಿಷ್ಕರಣೆ ಮಾಡಿದ ಬಹುತೇಕ ಸಂದರ್ಭಗಳಲ್ಲಿ ವಿವಾದ ಉಂಟಾಗಿದೆ. 1977–79ರ ಅವಧಿಯಲ್ಲಿ ಜನತಾ ಸರ್ಕಾರ ಇದ್ದಾಗ, 2002–04ರಲ್ಲಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ, ನಂತರ ಅಧಿಕಾರಕ್ಕೆ ಬಂದ ಯುಪಿಎ ಅವಧಿಯಲ್ಲೂ ಪಠ್ಯಪರಿಷ್ಕರಣೆ ಪ್ರಕ್ರಿಯೆ ವಿವಾದ ಹುಟ್ಟುಹಾಕಿದ್ದವು.
ಸಿಬಿಎಸ್‌ಇ ಪಠ್ಯಕ್ರಮದ ಏಳನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕದ ಮುಖಪುಟ
2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಬಾರಿ ಪರಿಷ್ಕರಣೆ ನಡೆದಿದೆ. 12, 11, 10, 8ನೇ 7ನೇ ತರಗತಿ ಸೇರಿದಂತೆ ಹಲವು ತರಗತಿಗಳ ಪಠ್ಯಪುಸ್ತಕಗಳನ್ನು ಪರಿಷ್ಕರಣೆಗೆ ಒಳಪಡಿಸಿದೆ. ಪ್ರತಿ ಬಾರಿ ಪಠ್ಯ ತಿದ್ದುಪಡಿ ಮಾಡುವಾಗಲೂ ವಿವಾದ ಉಂಟಾಗಿದೆ. ವಿರೋಧ ಪಕ್ಷಗಳ ಮುಖಂಡರು ಹಾಗೂ ಶಿಕ್ಷಣ, ಇತಿಹಾಸ ತಜ್ಞರು ಬಿಜೆಪಿಯು ದೇಶದ ಇತಿಹಾಸವನ್ನು ತಿರುಚಿ ಶಿಕ್ಷಣವನ್ನು ‘ಕೇಸರೀಕರಣ’ ಮಾಡುತ್ತಿದೆ ಎಂದು ಆರೋಪಿಸುತ್ತಲೇ ಬಂದಿದ್ದಾರೆ. ಆದರೆ, ಬಿಜೆಪಿ ಮತ್ತು ಎನ್‌ಸಿಇಆರ್‌ಟಿಯು ಪರಿಷ್ಕರಣೆಯನ್ನು ಸಮರ್ಥಿಸುತ್ತಾ ಬಂದಿವೆ.
1977-79ರ ಅವಧಿಯಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಸರ್ಕಾರ ಇದ್ದಾಗ ಜನಸಂಘವು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ‘ಮಧ್ಯಕಾಲೀನ ಭಾರತ’ ಮತ್ತು ‘ಆಧುನಿಕ ಭಾರತ’ ಎಂಬ ಎರಡು ಪುಸ್ತಕಗಳನ್ನು ವಾಪಸ್ ಪಡೆಯುವಂತೆ ಪ್ರಧಾನಿಯವರಿಗೆ ಮನವಿಯನ್ನೂ ಮಾಡಿತ್ತು. ಸಿಬಿಎಸ್‌ಇ ಪಠ್ಯದಲ್ಲಿ ಸೇರ್ಪಡೆಗೊಳಿಸಲಾಗಿದ್ದ ಆರ್.ಎಸ್.ಶರ್ಮಾ ಅವರ ‘ಪ್ರಾಚೀನ ಭಾರತ’ ಪುಸ್ತಕಕ್ಕೂ ಜನಸಂಘ ತಕರಾರು ತೆಗೆದಿತ್ತು. ಪುಸ್ತಕದಲ್ಲಿ ಭಾರತ ವಿರೋಧಿ ಅಂಶಗಳಿವೆ ಎಂದು ಪ್ರತಿಪಾದಿಸಿತ್ತು. ಅದರಲ್ಲಿ ಉಲ್ಲೇಖಿಸಲಾಗಿದ್ದ ‘ಮುಘಲ್ ಆಡಳಿತ’ ಮತ್ತು ‘ಭಾರತದಲ್ಲಿ ಇಸ್ಲಾಂ’ ಎಂಬ ವಿಷಯಗಳ ಬಗ್ಗೆ ಆರ್‌ಎಸ್‌ಎಸ್ ಆಕ್ಷೇಪ ಎತ್ತಿತ್ತು. 1978ರಲ್ಲಿ ಸಿಬಿಎಸ್‌ಇ ಪಠ್ಯದಿಂದ ‘ಪ್ರಾಚೀನ ಭಾರತ’ ಪಠ್ಯವನ್ನು ಸರ್ಕಾರ ತೆಗೆದು ಹಾಕಿತ್ತು
2022ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಡಿಯಲ್ಲಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಲು ಮುಂದಾಗಿತ್ತು. ಭಾರತೀಯ ಇತಿಹಾಸ, ಪರಂಪರೆಗೆ ಸಂಬಂಧಿಸಿದ ವಿವರಗಳನ್ನು ತಿದ್ದುಪಡಿ ಮಾಡಿ ಶಿಕ್ಷಣವನ್ನು ಕೇಸರೀಕರಣಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪವನ್ನು ಪ್ರಗತಿಪರ ಶಿಕ್ಷಣ ತಜ್ಞರು, ವಿರೋಧ ಪಕ್ಷಗಳ ಮುಖಂಡರು ಮಾಡಿದ್ದರು. 2004ರಲ್ಲಿ ಎನ್‌ಡಿಎ ಸರ್ಕಾರ ಸೋತು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಠ್ಯಪುಸ್ತಕಗಳನ್ನು ಪರಿಷ್ಕರಣೆಗೆ ಒಳಪಡಿಸುವ ಘೋಷಣೆ ಮಾಡಿತ್ತು. ಮರುವರ್ಷ ಹೊಸ ಪಠ್ಯಪುಸ್ತಕಗಳನ್ನು ಪ್ರಕಟಿಸಿದ್ದ ಎನ್‌ಸಿಇಆರ್‌ಟಿ 2002ಕ್ಕೂ ಮೊದಲಿದ್ದ ಅಂಶಗಳನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಿತ್ತು
2006ರಲ್ಲಿ 12ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ ಸಿಖ್ ಧರ್ಮಗುರು ಗುರು ಗೋವಿಂದ್ ಸಿಂಗ್ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಸಲಾಗಿದೆ ಎಂದು ಸಿಖ್ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ನಂತರ ಎನ್‌ಸಿಇಆರ್‌ಟಿಯು ಆ ನಿರ್ದಿಷ್ಟ ಪ್ಯಾರಾವನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿತ್ತು
2012ರಲ್ಲಿ ದಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾವು 11ನೇ ತರಗತಿಯ ಪಠ್ಯಪುಸ್ತಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ವ್ಯಂಗ್ಯಚಿತ್ರವೊಂದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸಂಸತ್ತಿನಲ್ಲೂ ಭಾರಿ ಚರ್ಚೆ ಹುಟ್ಟುಹಾಕಿತ್ತು. ಅಂತಿಮವಾಗಿ ಶಿಕ್ಷಣ ಸಚಿವರಾಗಿದ್ದ ಕಪಿಲ್ ಸಿಬಲ್ ಅವರು ಕ್ಷಮೆ ಯಾಚಿಸಿ, ಪಠ್ಯಪುಸ್ತಕದಿಂದ ಆ ವ್ಯಂಗ್ಯಚಿತ್ರವನ್ನು ತೆಗೆಯುವ ಘೋಷಣೆ ಮಾಡಿದ್ದರು. ಆಗ ಎನ್‌ಸಿಆರ್‌ಟಿಯ ಮುಖ್ಯ ಸಲಹೆಗಾರರಾಗಿದ್ದ ಯೋಗೇಂದ್ರ ಯಾದವ್ ಮತ್ತು ಸುಹಾಸ್ ಪಲ್ಶೀಕರ್ ಅವರು ರಾಜೀನಾಮೆಯನ್ನೂ ನೀಡಿದ್ದರು
7ನೇ ತರಗತಿಯ ಹೊಸ ಪಠ್ಯಪುಸ್ತಕದಲ್ಲಿರುವ ಪಾಠಗಳ ವಿವರ
ಪಠ್ಯಪುಸ್ತಕ ವಿವಾದ ದೇಶದ ಮಟ್ಟಕ್ಕೆ ಸೀಮಿತವಾಗಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ 2022–23ರಲ್ಲಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ್ದು ವಿವಾದಕ್ಕೆ ಒಳಗಾಗಿತ್ತು. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಶೀಲನಾ ಸಮಿತಿಯು ಪಠ್ಯಪುಸ್ತಕಗಳಲ್ಲಿ ನಾರಾಯಣ ಗುರು, ಬಸವಣ್ಣ, ಪೆರಿಯಾರ್ ಅವರಂತಹ ಸಮಾಜ ಸುಧಾರಕರ ಕುರಿತಾಗಿ ಇದ್ದ ವಿವರಗಳನ್ನು ತೆಗೆದುಹಾಕಿತ್ತು. ಆಕ್ಷೇಪ ಬಂದ ನಂತರ ಅವುಗಳನ್ನು ಮತ್ತೆ ಸೇರ್ಪಡೆಗೊಳಿಸಲಾಗಿತ್ತು. ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು, ಕನಕದಾಸರು ಸೇರಿದಂತೆ ಹಲವು ಮಹನೀಯರ ಕುರಿತ ವಿವರಗಳಿಗೆ ಕತ್ತರಿ ಹಾಕಲಾಗಿತ್ತು. ಕನ್ನಡ ಭಾಷಾ ಪುಸ್ತಕಗಳಿಂದ ಮುಸ್ಲಿಂ, ದಲಿತ ಲೇಖಕರ ಪಾಠಗಳನ್ನು ತೆಗೆಯಲಾಗಿತ್ತು. 10ನೇ ತರಗತಿ ಪಠ್ಯದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರ ಭಾಷಣ ಸೇರಿಸಲಾಗಿತ್ತು. 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, 2022ಕ್ಕೂ ಮೊದಲಿದ್ದ ಪಠ್ಯಕ್ರಮದ ಆಧಾರದಲ್ಲಿ ಬೋಧನೆ ಮಾಡಬೇಕು ಎಂದು ಆದೇಶಿಸಿತ್ತು.
ಎನ್‌ಸಿಇಆರ್‌ಟಿಯು ಇಂಗ್ಲಿಷ್ ಪಠ್ಯಪುಸ್ತಕಗಳಿಗೆ ಹಿಂದಿ ಹೆಸರನ್ನು ಇಟ್ಟಿದ್ದು ಕೂಡ ವಿವಾದಕ್ಕೀಡಾಗಿದೆ. ಇಂಗ್ಲಿಷ್ ಮಾಧ್ಯಮದ ಪಠ್ಯಪುಸ್ತಕಗಳಿಗೆ ‘ಸಂತೂರ್’ ‘ಮೃದಂಗಂ’ ಎಂದು ಹೆಸರಿಟ್ಟದ್ದನ್ನು ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಆಕ್ಷೇಪಿಸಿವೆ.
ಆಧಾರ: ಪಿಟಿಐ, ಎನ್‌ಸಿಇಆರ್‌ಟಿ ವೆಬ್‌ಸೈಟ್, ಕಮ್ಯುನಲೈಸೇಷನ್ ಆಫ್ ಎಜುಕೇಷನ್: ದಿ ಹಿಸ್ಟರಿ ಟೆಕ್ಸ್ಟ್‌ಬುಕ್ ಕಾಂಟ್ರವರ್ಸಿ ಆ್ಯನ್ ಓವರ್‌ವೀವ್, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.