ನಕ್ಷೆ: ಗೂಗಲ್ ಅರ್ಥ್
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ತಕ್ಷಣಕ್ಕೆ ನಿಂತಿದೆ. ಸಂಘರ್ಷದ ಬಗ್ಗೆ ಅಮೆರಿಕದ ‘ದಿ ನ್ಯೂಯಾರ್ಕ್ ಟೈಮ್ಸ್’ (ಎನ್‌ವೈಟಿ) ಪತ್ರಿಕೆಯು ವಿಶೇಷ ವರದಿ ಪ್ರಕಟಿಸಿದೆ. ದಾಳಿ, ಪ್ರತಿದಾಳಿಯಲ್ಲಿ ಯಾವ ದೇಶಕ್ಕೆ ಎಷ್ಟು ಹಾನಿಯಾಗಿದೆ ಎನ್ನುವುದನ್ನು ಉಪಗ್ರಹದಿಂದ ತೆಗೆಯಲಾದ ಚಿತ್ರಗಳೊಂದಿಗೆ ದಾಖಲಿಸಿದೆ. ಪತ್ರಿಕೆಯು ಎರಡೂ ದೇಶಗಳ ಪ್ರತಿಪಾದನೆಗಳನ್ನು ವಿಶ್ಲೇಷಿಸಿದ್ದು, ವಾಯುನೆಲೆಗಳ ಮೇಲಿನ ದಾಳಿಯ ವಿಚಾರದಲ್ಲಿ ಯಾವ ದೇಶ ಎಷ್ಟರ ಮಟ್ಟಿಗೆ ತನ್ನ ಗುರಿ ಮುಟ್ಟಿದೆ ಎನ್ನುವುದನ್ನೂ ವಿವರಿಸಿದೆ. ನಾಲ್ಕು ದಿನ ನಡೆದ ಸಂಘರ್ಷದಲ್ಲಿ ಭಾರತವು ಮೇಲುಗೈ ಸಾಧಿಸಿತ್ತು ಎಂದು ಅದು ಹೇಳಿದೆ
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತದ ರಕ್ಷಣಾ ಪಡೆಗಳು ನಡೆಸಿದ ‘ಆಪರೇಷನ್ ಸಿಂಧೂರ’ ಹಾಗೂ ಪಾಕಿಸ್ತಾನವು ಪ್ರತಿದಾಳಿಗೆ ನಡೆಸಿದ ಪ್ರಯತ್ನದಿಂದಾಗಿ ಸೇನಾ ಸಂಘರ್ಷ ತೀವ್ರ ಸ್ವರೂಪ ಪಡೆಯುವ ಸೂಚನೆಗಳಿದ್ದವು. ಎರಡೂ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳಾಗಿರುವುದರಿಂದ ಸಂಘರ್ಷವು ಯಾವ ಮಟ್ಟಕ್ಕಾದರೂ ಹೋಗಬಹುದು ಎನ್ನಲಾಗಿತ್ತು. ಆದರೆ, ನಾಲ್ಕು ದಿನಗಳ ನಂತರ ದಿಢೀರ್ ಕದನ ವಿರಾಮ ಏರ್ಪಟ್ಟಿತು. ಸಂಘರ್ಷದಿಂದಾಗಿ ಉಭಯ ದೇಶಗಳಲ್ಲಿ ಆಗಿರುವ ಹಾನಿಯ ಬಗ್ಗೆ ವಿಶ್ಲೇಷಿಸಲಾಗುತ್ತಿದೆ. ಪರಸ್ಪರರಿಗೆ ಭಾರಿ ಹಾನಿ ಉಂಟುಮಾಡಿದ್ದೇವೆ ಎಂದು ಎರಡೂ ದೇಶಗಳು ಪ್ರತಿಪಾದಿಸುತ್ತಿವೆ.
ಅಮೆರಿಕದ ಪ್ರಮುಖ ಪತ್ರಿಕೆ ‘ದಿ ನ್ಯೂಯಾರ್ಕ್ ಟೈಮ್ಸ್’ ಈ ವಾದಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದು, ಈ ಬಗ್ಗೆ ವಿಶೇಷ ಲೇಖನ ಪ್ರಕಟಿಸಿದೆ. ಉಪಗ್ರಹ ತೆಗೆದ ಹೆಚ್ಚು ರೆಸಲ್ಯೂಷನ್ ಇರುವ ಚಿತ್ರಗಳನ್ನು ತನ್ನ ವಿಶ್ಲೇಷಣೆಗೆ ಪೂರಕವಾಗಿ ಬಳಸಿಕೊಂಡಿದೆ. ಭಾರತ ನಡೆಸಿರುವ ದಾಳಿಯಲ್ಲಿ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳಿಗೆ ಹಾನಿಯಾಗಿದೆ ಎಂದು ಹೇಳಿದೆ. ಭಾರತದ ಎರಡು ಯುದ್ಧವಿಮಾನಗಳು ಪತನಗೊಂಡಿರುವ ಬಗ್ಗೆಯೂ ಪ್ರಸ್ತಾಪಿಸಿದೆ.
ಸಂಘರ್ಷಕ್ಕೆ ಎರಡೂ ರಾಷ್ಟ್ರಗಳು ಡ್ರೋನ್ ಮತ್ತು ಕ್ಷಿಪಣಿಗಳನ್ನು ಬಳಸಿದ್ದವು. ತಮ್ಮ ವಾಯುಸೇನೆ ಸಾಮರ್ಥ್ಯ ಪಣಕ್ಕಿಟ್ಟು, ವಿರೋಧಿ ರಾಷ್ಟ್ರದ ವಾಯುನೆಲೆಗಳನ್ನು ಗುರಿ ಮಾಡಿ ದಾಳಿ ನಡೆಸಿದ್ದವು. ಅತ್ಯಾಧುನಿಕ ತಾಂತ್ರಿಕತೆಯ ನೆರವಿನಿಂದ ವಾಯುನೆಲೆ ಮತ್ತು ಸೇನಾ ನೆಲೆಗಳನ್ನಷ್ಟೇ ಗುರಿಯಾಗಿಸಿ ದಾಳಿ ಮಾಡಿದ್ದವು. ವಿರೋಧಿ ರಾಷ್ಟ್ರದಲ್ಲಿ ಭಾರಿ ಹಾನಿ ಆಗಿದೆ ಎಂದೇ ಎರಡೂ ರಾಷ್ಟ್ರಗಳು ಪ್ರತಿಪಾದಿಸಿದ್ದವು. ಪತ್ರಿಕೆಯು, ಉಪಗ್ರಹದಿಂದ ತೆಗೆದ ಚಿತ್ರಗಳನ್ನು ಬಳಸಿ ಹಾನಿಯ ಪ್ರಮಾಣವನ್ನು ಅಂದಾಜಿಸಿದೆ. ಹಲವು ಕಡೆ ದಾಳಿಗಳು ನಡೆದಿರುವುದು ನಿಜವಾದರೂ ಹೇಳಿಕೊಳ್ಳುವಂಥ ಹಾನಿ ಸಂಭವಿಸಿಲ್ಲ ಎಂದು ವರದಿಯಲ್ಲಿ ಹೇಳಿದೆ.
ದಾಳಿಗಳಿಂದ ಎರಡೂ ಕಡೆ ಸಾವು ನೋವು ಸಂಭವಿಸಿರುವುದನ್ನು ವರದಿ ಖಚಿತ ಪಡಿಸಿದೆ. ಸಂಘರ್ಷದಲ್ಲಿ ತನ್ನ ಐವರು ಯೋಧರು ಮೃತಪಟ್ಟಿರುವುದಾಗಿ ಭಾರತ ಹೇಳಿದ್ದರೆ, ತನ್ನ 11 ಸೈನಿಕರು ಸಾವಿಗೀಡಾಗಿರುವುದಾಗಿ ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನದ ನೂರ್‌ಖಾನ್ ವಾಯುನೆಲೆಯ ಕಟ್ಟಡಕ್ಕೆ ಹಾನಿಯಾಗಿದೆ
ಭಾರತದಿಂದ ನಿಖರ ದಾಳಿ:
ಆರಂಭದ ಮಾತಿನ ಸಮರ, ಬೆದರಿಕೆ, ಎಚ್ಚರಿಕೆಗಳ ವಿನಿಮಯದ ನಂತರ ಭಾರತವು ಪಾಕಿಸ್ತಾನದ ಸೇನಾ ನೆಲೆಗಳು ಮತ್ತು ವಾಯುನೆಲೆಗಳ ಮೇಲೆ ನಿಖರ ದಾಳಿ ಮಾಡುವ ಮೂಲಕ ಮೇಲುಗೈ ಸಾಧಿಸಿತು ಎಂದು ವರದಿ ಹೇಳಿದೆ. ಅದರ ಪ್ರಕಾರ, ಭಾರತವು ಸಣ್ಣ ಪ್ರಮಾಣದಲ್ಲಿ ದಾಳಿ ನಡೆಸಿದರೂ ಅದು ನಿರ್ದಿಷ್ಟವಾಗಿತ್ತು ಮತ್ತು ನೇರವಾಗಿ ಗುರಿಯನ್ನು ಕೇಂದ್ರೀಕರಿಸಿತ್ತು. ಭಾರತದ ದಾಳಿಗಳಿಂದ ಪಾಕಿಸ್ತಾನದಲ್ಲಿ ಸಂಭವಿಸಿರುವ ಹಾನಿಯು ಉಪಗ್ರಹವು ತೆಗೆದ ಚಿತ್ರಗಳಿಂದ ದೃಢಪಟ್ಟಿದೆ. ದಾಳಿಗೆ ಮುಂಚೆ ಆ ಸ್ಥಳಗಳು ಹೇಗಿದ್ದವು, ದಾಳಿಯ ನಂತರ ಹೇಗಾಗಿವೆ ಎನ್ನುವುದನ್ನು ವರದಿಯಲ್ಲಿ ತೋರಿಸಲಾಗಿದೆ.
ಪಾಕಿಸ್ತಾನದ ಬಂದರು ನಗರಿ ಕರಾಚಿಯಿಂದ 100 ಮೈಲಿ ದೂರವಿರುವ ಭೋಲಾರಿ ವಾಯುನೆಲೆಯ ವಿಮಾನಗಳನ್ನು ನಿಲ್ಲಿಸುವ ಭಾರಿ ಕಟ್ಟಡವನ್ನು ನಿಖರ ದಾಳಿಯ ಮೂಲಕ ಹಾನಿಗೊಳಿಸಿದ್ದಾಗಿ ಭಾರತದ ರಕ್ಷಣಾ ಪಡೆಯ ಅಧಿಕಾರಿಗಳು ಹೇಳಿದ್ದರು. ವರದಿಯಲ್ಲಿರುವ ಉಪಗ್ರಹ ಆಧರಿತ ಚಿತ್ರಗಳು ಅದನ್ನು ಸಾಬೀತುಪಡಿಸುವಂತಿವೆ.
ಭಾರತವು ದಾಳಿ ಮಾಡಿದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಸ್ಥಳ ಎಂದರೆ, ನೂರ್ ಖಾನ್ ವಾಯುನೆಲೆ. ಇದು ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಹಾಗೂ ಪ್ರಧಾನಿಯವರ ಕಚೇರಿಗೆ 15 ಮೈಲಿ ದೂರದಲ್ಲಿದೆ. ಅದಕ್ಕಿಂತಲೂ ಮುಖ್ಯವಾಗಿ, ಪಾಕಿಸ್ತಾನವು ಅಣ್ವಸ್ತ್ರಗಳನ್ನು ಸಂಗ್ರಹಿಸಿಟ್ಟಿರುವ ಜಾಗದ ಸನಿಹದಲ್ಲಿದೆ.
ಪಾಕ್‌ನ ಪ್ರಮುಖ ವಾಯುನೆಲೆಗಳ ರನ್ ವೇಗಳನ್ನು ವಿಶೇಷವಾಗಿ ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಭಾರತದ ಸೇನೆ ಹೇಳಿತ್ತು. ಈ ಹೇಳಿಕೆಗೆ ವಾಯುನೆಲೆಗಳಲ್ಲಿ ಸಂಭವಿಸಿದ ಹಾನಿಯ ಚಿತ್ರಗಳು ಪೂರಕವಾಗಿವೆ ಎಂದು ಎನ್‌ವೈಟಿ ವರದಿ ಹೇಳಿದೆ. ಹೀಗಾಗಿಯೇ ಪಾಕಿಸ್ತಾನವು ರಹೀಂ ಯಾರ್ ಖಾನ್ ವಾಯುನೆಲೆಯ ರನ್ ವೇ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಮೇ 10ರಂದು ಪ್ರಕಟಿಸಿತ್ತು. ಇದೇ ರೀತಿ ಪಂಜಾಬ್ ಪ್ರಾಂತ್ಯದ ಸರ್ಗೋಧಾ ವಾಯುನೆಲೆಯಲ್ಲಿನ ರನ್‌ವೇಯ ಎರಡೂ ಪಾರ್ಶ್ವಗಳಿಗೆ ನಿಖರ ದಾಳಿಯ ಮೂಲಕ ಹಾನಿ ಮಾಡಲಾಗಿದೆ ಎಂದು ಭಾರತದ ಸೇನೆ ಹೇಳಿದೆ. ವಾಯುನೆಲೆಯ ರನ್‌ವೇ ಎರಡು ಕಡೆಗಳಲ್ಲಿ ಕುಳಿ ಬಿದ್ದಿರುವುದು ಉಪಗ್ರಹಗಳ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ವರದಿ ವಿವರಿಸಿದೆ.
ಭಾರತಕ್ಕೆ ಏನೇನು ಹಾನಿ?
ಪಾಕಿಸ್ತಾನ ನಡೆಸಿರುವ ದಾಳಿಯಲ್ಲಿ ಭಾರತದ ಸೇನಾ ನೆಲೆಗಳಿಗೆ ಹೆಚ್ಚಿನ ಹಾನಿಯಾಗದಿದ್ದರೂ, ಐವರು ಯೋಧರು ಹುತಾತ್ಮರಾಗಿರುವುದನ್ನು ಭಾರತ ಒಪ್ಪಿಕೊಂಡಿದೆ. ಭಾರತವು ಯುದ್ಧವಿಮಾನಗಳನ್ನು ಕಳೆದುಕೊಂಡಿರುವುದು ದೇಶಕ್ಕೆ ಆಗಿರುವ ದೊಡ್ಡ ನಷ್ಟದಂತೆ ತೋರುತ್ತಿದೆ. ಎಷ್ಟು ವಿಮಾನಗಳು ಪತನಗೊಂಡಿವೆ ಎಂಬುದನ್ನು ಭಾರತ ಸರ್ಕಾರ ಅಧಿಕೃತವಾಗಿ ತಿಳಿಸಿಲ್ಲ. ಆದರೆ, ಅಧಿಕಾರಿಗಳು ಮತ್ತು ರಾಜತಾಂತ್ರಿಕರು, ‘ಕನಿಷ್ಠ ಎರಡು ಯುದ್ಧವಿಮಾನಗಳನ್ನು ಕಳೆದುಕೊಂಡಿದ್ದೇವೆ’ ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ಹೆಚ್ಚು ವಿಮಾನಗಳನ್ನು ಕಳೆದುಕೊಂಡಿರುವ ಸಾಧ್ಯತೆಯೂ ಇದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.
ಭಾರತದ 24 ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಪಾಕಿಸ್ತಾನದ ಸೇನೆ ಹೇಳಿದೆ. ಆದರೆ, ಭಾರತದ ಅಧಿಕಾರಿಗಳು ನಾಲ್ಕು ವಾಯುನೆಲೆಗಳಿಗೆ ಕಡಿಮೆ ಪ್ರಮಾಣದಲ್ಲಿ ಹಾನಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನೂ ನೀಡಿದ್ದಾರೆ. ಪಾಕಿಸ್ತಾನ ಹೇಳಿದ ಸ್ಥಳಗಳ ಉಪಗ್ರಹಗಳ ಚಿತ್ರಗಳನ್ನು ಪರಿಶೀಲಿಸಿದಾಗ, ಅದರ ದಾಳಿಯಿಂದಾಗಿ ಆಗಿರುವ ಹಾನಿಯ ಯಾವ ಕುರುಹು ಕೂಡ ಸ್ಪಷ್ಟವಾಗಿ ಕಾಣಿಸುವುದಿಲ್ಲ.
ಪಾಕ್ ಸೇನೆಯು ಭಾರತದ ಉಧಂಪುರ ವಾಯುನೆಲೆಯನ್ನು ಸಂಪೂರ್ಣವಾಗಿ ‘ನಾಶ’ ಪಡಿಸಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಆ ವಾಯುನೆಲೆಯಲ್ಲಿ ಕರ್ತವ್ಯದಲ್ಲಿದ್ದ ಒಬ್ಬ ಯೋಧ ಮೃತಪಟ್ಟಿರುವುದನ್ನು ಅವರ ಕುಟುಂಬದವರು ದೃಢಪಡಿಸಿದ್ದಾರೆ. ಆದರೆ, ಮೇ 12ರಂದು ಉಪಗ್ರಹದ ಮೂಲಕ ಸೆರೆಹಿಡಿದಿರುವ ಉಧಂಪುರ ವಾಯುನೆಲೆಯ ಚಿತ್ರದಲ್ಲಿ ಹಾನಿಯಾಗಿರುವ ಯಾವ ಕುರುಹು ಕೂಡ ಇಲ್ಲ ಎಂದು
‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಹೇಳಿದೆ.
ಚಿತ್ರಗಳು: ಮ್ಯಾಕ್ಸರ್ ಟೆಕ್ನಾಲಜೀಸ್ ಮತ್ತು ಪ್ಲಾನೆಟ್ ಲ್ಯಾಬ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.