ADVERTISEMENT

ಆಳ-ಅಗಲ| ವ್ಹೀಲಿ : ಬೇಕಿದೆ ಕಠಿಣ ಶಿಕ್ಷೆ

ಬೆಂಗಳೂರಿನಲ್ಲಿ ಹೆಚ್ಚಿದ ದುಸ್ಸಾಹಸ; ಹಳ್ಳಿ–ಪಟ್ಟಣಕ್ಕೂ ಹಬ್ಬಿದ ಪಿಡುಗು

​ಪ್ರಜಾವಾಣಿ ವಾರ್ತೆ
Published 15 ಮೇ 2025, 0:30 IST
Last Updated 15 ಮೇ 2025, 0:30 IST
ವ್ಹೀಲಿ
ವ್ಹೀಲಿ   
ವ್ಹೀಲಿ ತಡೆಗಟ್ಟಲು ಕಠಿಣ ಕ್ರಮಕ್ಕೆ ಮುಂದಾಗಬೇಕು ಹಾಗೂ ಅಗತ್ಯ ಕಾನೂನು ತಿದ್ದುಪಡಿ ಮಾಡಬೇಕು ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ದ್ವಿಚಕ್ರ ವಾಹನದ ಮುಂದಿನ ಚಕ್ರವನ್ನು ಎತ್ತಿ ಓಡಿಸುವ (ವ್ಹೀಲಿ) ಪ್ರವೃತ್ತಿ ಈಚಿನ ವರ್ಷಗಳಲ್ಲಿ ಯುವಕರಲ್ಲಿ ಹೆಚ್ಚಾಗುತ್ತಿದೆ. ಅದು ಮೋಟಾರ್ ಬೈಕ್/ಸ್ಕೂಟರ್ ಚಾಲನೆ ಮಾಡುವವನೂ ಸೇರಿದಂತೆ ರಸ್ತೆಯ ಮೇಲೆ ಸಂಚರಿಸುವ ಇತರೆ ವಾಹನಗಳು ಹಾಗೂ ‍ಪಾದಚಾರಿಗಳಿಗೆ ಅಪಾಯಕಾರಿ. ಕೆಲವು ಯುವಕರು ಥ್ರಿಲ್‌ಗಾಗಿ, ಉನ್ಮಾದಕ್ಕಾಗಿ, ರೀಲ್ಸ್‌ಗಾಗಿ ವ್ಹೀಲಿ, ರೇಸ್ ಮುಂತಾಗಿ ದುಸ್ಸಾಹಸ ಮಾಡಲು ಹೋಗಿ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ; ಇತರರ ಜೀವವನ್ನೂ ಅಪಾಯಕ್ಕೆ ಒಡ್ಡುತ್ತಿದ್ದಾರೆ 

ಪ್ರಕರಣ 1: ಸ್ಥಳ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ವಿಜಯಪುರ. ದಿನಾಂಕ: 2024ರ ಡಿಸೆಂಬರ್ 27

ಜಿಟಿ ಜಿಟಿ ಮಳೆಯಲ್ಲಿ ಬೈಕ್‌ ವ್ಹೀಲಿ ಮಾಡುತ್ತಾ ಬೈಪಾಸ್ ರಸ್ತೆಯಲ್ಲಿ ಸಾಗುತ್ತಿದ್ದ ಇಬ್ಬರು ಯುವಕರು ಆಯತಪ್ಪಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದರು. ಕ್ಯಾಂಟರ್ ಚಾಲಕ ಅಪಘಾತ ತಪ್ಪಿಸಲು ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.

ಪ್ರಕರಣ 2: ಸ್ಥಳ:- ಬೆಂಗಳೂರು ಹೊರವಲಯದ ಹೊಸಕೋಟೆ. ದಿನಾಂಕ: 2023ರ ಆಗಸ್ಟ್ 15

ADVERTISEMENT

ಸ್ವಾತಂತ್ರ್ಯ ದಿನಾಚರಣೆಯ ದಿನ ರಜೆ ಇದ್ದುದರಿಂದ ಬೆಂಗಳೂರಿನಿಂದ ಕೋಲಾರಕ್ಕೆ 20ಕ್ಕೂ ಹೆಚ್ಚು ಯುವಕ, ಯುವತಿಯರು ಹತ್ತಾರು ದ್ವಿಚಕ್ರ ವಾಹನಗಳಲ್ಲಿ ವ್ಹೀಲಿ ಮಾಡುತ್ತಾ ಸಾಗುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಎರಡು ಬೈಕ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆದು, ಕೆಳಕ್ಕೆ ಬಿದ್ದ ಯುವತಿಯೊಬ್ಬರು ಅಸುನೀಗಿದ್ದರು.

ಇಂಥ ಪ್ರಕರಣಗಳು ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಲೇ ಇವೆ. ಸೂಪರ್ ಬೈಕ್‌ಗಳು, ದುಬಾರಿಯಾದ ಬೈಕ್‌ಗಳು, ಸ್ಕೂಟರ್‌ಗಳನ್ನು ಖರೀದಿಸಿ ಸಾರ್ವಜನಿಕ ರಸ್ತೆಗಳಲ್ಲಿ, ಟ್ರಾಫಿಕ್‌ ನಡುವೆಯೇ ವಿಪರೀತ ವೇಗವಾಗಿ ಚಲಾಯಿಸುವವರ, ವ್ಹೀಲಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದ ವರ್ತುಲ ರಸ್ತೆಗಳಲ್ಲಿ, ಹೊರವಲಯದ ರಸ್ತೆಗಳಲ್ಲಿ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಇವು ಹೆಚ್ಚು. ನಗರಗಳ ಹೃದಯಭಾಗದ ರಸ್ತೆಗಳಲ್ಲೂ ವ್ಹೀಲಿ ಮಾಡುವ ಪುಂಡರ ಸಂಖ್ಯೆಯೇನೂ ಕಡಿಮೆ ಇಲ್ಲ. ಇಕ್ಕಟ್ಟು ಗಲ್ಲಿಗಳ ಯುವಕರಿಂದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳವರೆಗೆ, ಮೆಕ್ಯಾನಿಕ್‌ನಿಂದ ಹಿಡಿದು ಐ.ಟಿ ಉದ್ಯೋಗಿವರೆಗೆ ವ್ಹೀಲಿ, ರೇಸ್ ಹುಚ್ಚು ಆವರಿಸಿದೆ. ಕೆಲವರು ಸಂಘಟಿತವಾಗಿ, ಬೆಟ್ಟಿಂಗ್ ಕಟ್ಟಿಕೊಂಡು ಜನನಿಬಿಡ ರಸ್ತೆಗಳಲ್ಲಿ ವ್ಹೀಲಿ, ರೇಸ್ ಮಾಡಿರುವುದೂ ಇದೆ. ಇತ್ತೀಚೆಗೆ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬೈಕ್‌ಗಳ ಮೇಲೆ ಬೆಂಗಳೂರಿನ ರಸ್ತೆಯಲ್ಲಿ ರೇಸ್ ಮಾಡಿದ ಯುವಕರ ತಂಡವೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಪೊಲೀಸರು ಅವರನ್ನು ಬಂಧಿಸಿ ರೌಡಿ ಪಟ್ಟಿಗೆ ಸೇರಿಸಿದ್ದರು.  ಡ್ರಗ್ಸ್‌ ಸೇವಿಸಿ ವ್ಹೀಲಿ ಮಾಡುವವರ ಸಂಖ್ಯೆಯೂ ಗಮನಾರ್ಹವಾಗಿದೆ ಎಂದು ಹೇಳುತ್ತಾರೆ ಪೊಲೀಸರು.

ವ್ಹೀಲಿ, ರೇಸಿಂಗ್‌ಗೆ ತಕ್ಕಂತೆ ಬೈಕ್, ಸ್ಕೂಟರ್‌ಗಳನ್ನು ಬದಲಾಯಿಸಿಕೊಡುವ ಮೆಕ್ಯಾನಿಕ್‌ಗಳೂ ಹುಟ್ಟಿಕೊಂಡಿದ್ದಾರೆ. ಸೈಲೆನ್ಸರ್‌ಗಳನ್ನು ತೆಗೆದುಹಾಕಿ ಅಥವಾ ಮಾರ್ಪಡಿಸಿ, ರಸ್ತೆಯಲ್ಲಿ ಓಡಾಡುವವರನ್ನು ದಿಗಿಲುಗೊಳಿಸುವಂತೆ ಭಾರಿ ಸದ್ದು ಮಾಡುತ್ತಾ ಬೈಕ್, ಸ್ಕೂಟರ್, ಕಾರು ಚಲಾಯಿಸುವ ಉನ್ಮಾದಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅಪಘಾತಗಳು ನಡೆದು ಸಾವುಗಳು ಸಂಭವಿಸುತ್ತಿರುವುದಷ್ಟೇ ಅಲ್ಲ, ಒಂದು ರೀತಿಯ ಅರಾಜಕತೆ ಉಂಟಾಗುತ್ತಿದ್ದು, ಸಾರ್ವಜನಿಕರಲ್ಲಿ ಭಯ ಮೂಡಿಸಲಾಗುತ್ತಿದೆ.

ಮೊದಲು ಬೆಂಗಳೂರಿನಂಥ ನಗರಗಳಿಗೆ ಸೀಮಿತವಾಗಿದ್ದ ಈ ಅಪಾಯಕಾರಿ ಪ್ರವೃತ್ತಿ ಈಗ ಹಳ್ಳಿ–ಪಟ್ಟಣ ಎನ್ನುವ ಭೇದವಿಲ್ಲದೇ ಸರ್ವವ್ಯಾಪಿಯಾಗಿದೆ.  ನಿದರ್ಶನಕ್ಕೆ ಕೋಲಾರ ಜಿಲ್ಲೆಯಲ್ಲಿ 2023ರಲ್ಲಿ 2 ಪ್ರಕರಣಗಳು ವರದಿಯಾಗಿದ್ದರೆ, 2024ರಲ್ಲಿ 27 ಪ್ರಕರಣಗಳು ದಾಖಲಾಗಿವೆ. ಆದರೆ, ಬೆಂಗಳೂರಿನಲ್ಲಿ ಈ ಸಂಖ್ಯೆ ಹೆಚ್ಚು. ಹೈದರಾಬಾದ್, ಚೆನ್ನೈ ನಗರಗಳಲ್ಲೂ ವ್ಹೀಲಿ ಪುಂಡಾಟಿಕೆ ಮಿತಿ ಮೀರಿದ್ದು, ಅಲ್ಲಿನ ಪೊಲೀಸರಿಗೆ ತಲೆನೋವಾಗಿದೆ. ಪೊಲೀಸರ ಗಮನಕ್ಕೆ ಬಂದು ವರದಿ ಆಗಿದ್ದಕ್ಕಿಂತಲೂ, ವರದಿಯಾಗದೇ ಉಳಿದ ಪ್ರಕರಣಗಳೇ ಹೆಚ್ಚು ಎನ್ನುವ ಮಾತುಗಳೂ ಇವೆ.

ದೇಶದ ಅನೇಕ ಖ್ಯಾತನಾಮರು, ಅವರ ಸಂಬಂಧಿಕರು ಹೀಗೆ ರೇಸಿಂಗ್, ವ್ಹೀಲಿ ಮಾಡಲು ಹೋಗಿ ಅಪಘಾತಗಳಿಗೆ ಕಾರಣವಾಗಿದ್ದಿದೆ; ಸಾವು ತಂದುಕೊಂಡಿದ್ದೂ ಇದೆ. ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮಗ ಅಯಾಜುದ್ದೀನ್ ಮತ್ತು ಅವರ ಸಂಬಂಧಿ ಅಜ್ಮಲ್, 2011ರಲ್ಲಿ ಹೈದರಾಬಾದ್‌ನ ರಿಂಗ್ ರಸ್ತೆಯಲ್ಲಿ ದುಬಾರಿ ಬೈಕ್‌ನಲ್ಲಿ 200 ಕಿ.ಮೀ. ವೇಗದಲ್ಲಿ ಬೈಕ್ ಚಲಾಯಿಸುವ ಥ್ರಿಲ್ ಅನುಭವಿಸಲು ಹೋಗಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. 

ವ್ಹೀಲಿ ಮಾಡುವ ಪುಂಡರ ವಿಡಿಯೊಗಳು ಆಗೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವರು ತಾವೇ ಚಿತ್ರೀಕರಿಸಿ, ಅವನ್ನು ಅಪ್‌ಲೋಡ್ ಮಾಡುವುದೂ ಇದೆ. ಆಗ ಅವುಗಳ ಬಗ್ಗೆ ಪೊಲೀಸರು ಗಮನಹರಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ಪೊಲೀಸರು ಸ್ವಯಂಪ್ರೇರಣೆಯಿಂದ ಇಂಥವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಿದ ಪ್ರಕರಣಗಳು ಕಡಿಮೆ ಎನ್ನುವ ಅಸಮಾಧಾನ ಜನರಲ್ಲಿದೆ. ಇಂಥ ಎಷ್ಟು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎನ್ನುವ ಅಂಕಿಅಂಶ ಲಭ್ಯವಿಲ್ಲವಾದರೂ ಅಪರಾಧಿಗಳಿಗೆ ಶಿಕ್ಷೆ ಆಗುವ ಪ್ರಮಾಣ ಕಡಿಮೆ ಇದೆ. ಅನೇಕ ಬಾರಿ ತಪ್ಪಿತಸ್ಥರು ಸಣ್ಣ ದಂಡ ತೆತ್ತು ಪಾರಾಗುವುದೂ ಇದೆ. ಇಂಥವರನ್ನು ಜನರೇ ಗದರಿಸಿ, ಎಚ್ಚರಿಕೆ ನೀಡಿ ಕಳುಹಿಸಿರುವ ಅನೇಕ ಪ್ರಕರಣಗಳಿವೆ. ಒಮ್ಮೆ, ಬೆಂಗಳೂರಿನ ನೆಲಮಂಗಲ ರಸ್ತೆಯಲ್ಲಿ ವ್ಹೀಲಿ ಮಾಡುತ್ತಾ ರಸ್ತೆಯಲ್ಲಿ ಓಡಾಡುವವರಿಗೆ ತೊಂದರೆ ಮಾಡುತ್ತಿದ್ದವನ ಬೈಕನ್ನು ಜನರೇ ಕಸಿದು ಫ್ಲೈಓವರ್ ಮೇಲಿನಿಂದ ಕೆಳಕ್ಕೆ ಎಸೆದಿದ್ದ ಘಟನೆಯೂ ನಡೆದಿತ್ತು.

ಸಾರ್ವಜನಿಕ ರಸ್ತೆಗಳನ್ನು ತಮ್ಮ ಸ್ವಂತದ ಆಸ್ತಿ, ಆಟದ ಮೈದಾನ ಎನ್ನುವಂತೆ ಭಾವಿಸಿ ವ್ಹೀಲಿ, ರೇಸ್ ಮಾಡುತ್ತಾ ಪಾದಚಾರಿಗಳಲ್ಲಿ ಭೀತಿ ಹುಟ್ಟಿಸಲಾಗುತ್ತಿದೆ. ಹೀಗೆ ಕಾನೂನು ಸುವ್ಯವಸ್ಥೆಗೆ ಸಂಚಕಾರ ತರುತ್ತಿರುವ ಪುಂಡರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ದಿಕ್ಕಿನಲ್ಲಿ ಸರ್ಕಾರ ಗಂಭೀರ, ದೃಢ ಹೆಜ್ಜೆ ಇಡಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಹೈಕೋರ್ಟ್ ಸೂಚನೆಯು ಜನರ ಧ್ವನಿಗೆ ಮತ್ತಷ್ಟು ಬಲ ನೀಡಿದೆ.

ರಾಜ್ಯದ ಎಲ್ಲೆಡೆ ಹಾವಳಿ

ಪೊಲೀಸ್‌ ಇಲಾಖೆಯ ಅಂಕಿ ಅಂಶಗಳನ್ನು ಗಮನಿಸಿದಾಗ ಬೆಂಗಳೂರಿನಲ್ಲೇ ವ್ಹೀಲಿ ಪ್ರಕರಣಗಳು ಹೆಚ್ಚು ದಾಖಲಾಗಿವೆ. ಅಂದ ಮಾತ್ರಕ್ಕೆ ಇದು ರಾಜಧಾನಿಗೆ ಸೀಮಿತವಾಗಿಲ್ಲ. ರಾಜ್ಯದಾದ್ಯಂತ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲೂ ಇದರ ಹಾವಳಿ ವ್ಯಾಪಕವಾಗಿದೆ. ಮೈಸೂರು, ಹುಬ್ಬಳ್ಳಿ ಧಾರವಾಡ, ಮಂಗಳೂರು ಸೇರಿದಂತೆ ಪ್ರಮುಖ ನಗರಗಳು, ನಗರಗಳ ಹೊರವಲಯಗಳು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯುವಕರು, ಬಾಲಕರು ಸ್ಕೂಟರ್‌, ಬೈಕ್‌ಗಳಲ್ಲಿ ವ್ಹೀಲಿ ನಡೆಸಿ ತಮ್ಮ ಜೀವಕ್ಕೆ ಸಂಚಕಾರ ತರುವುದಲ್ಲದೆ, ಸಾರ್ವಜನಿಕರ ಜೀವಕ್ಕೂ ಅಪಾಯ ಒಡ್ಡುತ್ತಿದ್ದಾರೆ. ಸ್ಟಂಟ್‌ಗಳು ಎಗ್ಗಿಲ್ಲದೆ ನಡೆಯುತ್ತಿದ್ದರೂ ಠಾಣೆಗಳಲ್ಲಿ ದಾಖಲಾಗುವುದು ಕೆಲವು ಪ್ರಕರಣಗಳು ಮಾತ್ರ. 

ಮೈಸೂರಿನಲ್ಲಿ 2023ರಲ್ಲಿ 23, 2024ರಲ್ಲಿ 32 ಪ್ರಕರಣಗಳು ದಾಖಲಾಗಿವೆ.
 ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ವ್ಹೀಲಿ ಮತ್ತು ಸ್ಟಂಟ್‌ ಮಾಡುವವರ ವಿರುದ್ಧ 2024 ಮತ್ತು 2025ಲ್ಲಿ 98 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ (ಎನ್ಎಚ್‌–275) ವ್ಹೀಲಿ ಹೆಚ್ಚು. ಮಂಡ್ಯದಲ್ಲೂ ಈ ಸಮಸ್ಯೆ ಇದೆ. ರಾಮನಗರ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿಗೆ ಹತ್ತಿರದಲ್ಲೇ ಇರುವ ತುಮಕೂರು ಜಿಲ್ಲೆಯಲ್ಲೂ ವರ್ಷದಿಂದ ವರ್ಷಕ್ಕೆ ವ್ಹೀಲಿ ಹೆಚ್ಚಾಗುತ್ತಿದೆ. 2022ರಲ್ಲಿ 6 ಪ್ರಕರಣಗಳಿದ್ದರೆ,  2023ರಲ್ಲಿ 17, 2024ರಲ್ಲಿ 18 ಪ್ರಕರಣಗಳು ದಾಖಲಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 19 ಪ್ರಕರಣಗಳು ವರದಿಯಾಗಿವೆ. ಕೊಪ್ಪಳದಲ್ಲಿ 2024ರಲ್ಲಿ ಐದು, 2025ರಲ್ಲಿ ಇದುವರೆಗೂ ಒಂದು ವ್ಹೀಲಿ ಪ್ರಕರಣ ದಾಖಲಾಗಿದೆ.

ಕಾನೂನು ಏನು ಹೇಳುತ್ತದೆ?

* ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್‌, 189 ರೇಸಿಂಗ್‌ ಮತ್ತು ಪೈಪೋಟಿಯಲ್ಲಿ ವೇಗದ ಚಾಲನೆಗೆ ಸಂಬಂಧಿಸಿದ್ದಾಗಿದೆ. ಈ ಸೆಕ್ಷನ್‌ ಪ್ರಕಾರ, ರಾಜ್ಯ ಸರ್ಕಾರದ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ವಾಹನಗಳ ರೇಸ್‌ನಲ್ಲಿ ಭಾಗವಹಿಸುವುದು  ಅಥವಾ ಪೈಪೋಟಿಯಲ್ಲಿ ವೇಗದ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧ. ಈ ತಪ್ಪಿಗೆ ಗರಿಷ್ಠ ಒಂದು ತಿಂಗಳವರೆಗೆ ಶಿಕ್ಷೆ ಅಥವಾ ₹500ರವರೆಗೆ ದಂಡ ಅಥವಾ ಶಿಕ್ಷೆ ಹಾಗೂ ದಂಡ ಎರಡನ್ನೂ ವಿಧಿಸುವುದಕ್ಕೆ ಅವಕಾಶ ಇದೆ

* ಇದೇ ಕಾಯ್ದೆಯ 184ನೇ ಸೆಕ್ಷನ್‌ ಪ್ರಕಾರ, ಸಾರ್ವಜನಿಕರಿಗೆ ಅಪಾಯ ಆಗುವ ರೀತಿಯಲ್ಲಿ ಮತ್ತು ವೇಗದಲ್ಲಿ ವಾಹನಗಳನ್ನು ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧ. ಯಾವುದೇ ವ್ಯಕ್ತಿ ಮೊದಲ ಬಾರಿಗೆ ಈ ತಪ್ಪು ಎಸಗಿದರೆ ಗರಿಷ್ಠ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ₹1000 ವರೆಗೆ ದಂಡ ವಿಧಿಸಬಹುದು. ಮತ್ತು ಎರಡನೇ ಬಾರಿ ಅಥವಾ ನಂತರವೂ ಈ ತಪ್ಪು ಎಸಗಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹2000ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು.  

* ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) 281ನೇ ಸೆಕ್ಷನ್‌ ಅಪಾಯಕಾರಿ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆಯ ಕುರಿತಾಗಿದ್ದು, ಪೊಲೀಸರು ಈ ಸೆಕ್ಷನ್‌ ಅಡಿಯಲ್ಲೂ ವ್ಹೀಲಿ ಪ್ರಕರಣ ದಾಖಲಿಸುತ್ತಾರೆ

ಪೋಷಕರ ವಿರುದ್ಧ ಕ್ರಮ

ವ್ಹೀಲಿ, ರೇಸಿಂಗ್‌, ಅತಿ ವೇಗದ ಚಾಲನೆಯಲ್ಲಿ ತೊಡಗುವವರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರೇ ಹೆಚ್ಚಿದ್ದಾರೆ. ಪೊಲೀಸರು ಇಂತಹ ಮಕ್ಕಳ ಪೋಷಕರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. 

ಉದಾಹರಣೆಗೆ, ಬಾಲಕರಿಗೆ ದ್ವಿಚಕ್ರ ವಾಹನ ನೀಡಿದ್ದ ಆರೋಪದ ಅಡಿ 2024ರಲ್ಲಿ 79 ಪೋಷಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. 246 ಚಾಲನಾ ಪರವಾನಗಿಗಳನ್ನು (ಡಿ.ಎಲ್‌) ಸಾರಿಗೆ ಪ್ರಾಧಿಕಾರವು ರದ್ದು ಪಡಿಸಿತ್ತು.

ಈ ವರ್ಷದ ಮೇ 13ರ ವರೆಗೆ ಬಾಲಕರಿಗೆ ದ್ವಿಚಕ್ರ ವಾಹನ ನೀಡಿದ್ದ ಆರೋಪದ ಅಡಿ 62 ಪೋಷಕರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು, 65 ಡಿ.ಎಲ್‌ಗಳನ್ನು ಅಮಾನತು ಪಡಿಸಿದ್ದಾರೆ. 357 ವಾಹನಗಳ ನೋಂದಣಿ ರದ್ದು ಪಡಿಸುವಂತೆ ಕೋರಿ ಸಾರಿಗೆ ಪ್ರಾಧಿಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.

ಬೆಂಗಳೂರಿನಲ್ಲಿ ಕಾರ್ಯಾಚರಣೆ

‘ಕಾರ್ಯಾಚರಣೆ ತೀವ್ರ’

ವ್ಹೀಲಿ ನಡೆಸುವವರ ವಿರುದ್ಧ ಬೆಂಗಳೂರಿನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ದ್ವಿಚಕ್ರ ವಾಹನಗಳನ್ನು ಮಾರ್ಪಾಡು ಮಾಡಿಕೊಂಡವರು ವ್ಹೀಲಿ ನಡೆಸುತ್ತಿರುವುದು ಕಂಡುಬಂದಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 281 ಹಾಗೂ ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ವ್ಹೀಲಿ ನಡೆಸುವವರನ್ನು ವಶಕ್ಕೆ ಪಡೆದು ಆಯಾ ವಿಭಾಗದ ಸಂಚಾರ ಡಿಸಿಪಿಗಳ ಎದುರು ಹಾಜರುಪಡಿಸಿ ₹1 ಲಕ್ಷ ಮೌಲ್ಯದ ಬಾಂಡ್ ಬರೆಸಿಕೊಳ್ಳಲಾಗುತ್ತಿದೆ. ಎರಡನೇ ಬಾರಿ ವ್ಹೀಲಿ ನಡೆಸಿದ್ದು ಕಂಡುಬಂದರೆ ಆ ಬಾಂಡ್‌ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಜತೆಗೆ ವಾಹನ ಚಾಲನಾ ಪರವಾನಗಿ ಅಮಾನತು ಹಾಗೂ ವಾಹನಗಳ ನೋಂದಣಿ ರದ್ದು ಮಾಡುವ ಕ್ರಮವನ್ನೂ ತೆಗೆದುಕೊಳ್ಳಲಾಗುತ್ತಿದೆ.
 – ಎಂ.ಎನ್‌.ಅನುಚೇತ್‌, ಜಂಟಿ ಪೊಲೀಸ್‌   ಕಮಿಷನರ್‌, ಸಂಚಾರ ವಿಭಾಗ, ಬೆಂಗಳೂರು

ಏನೇನು ಕ್ರಮ? 

* ಪ್ರಕರಣ ದಾಖಲು

* ವಾಹನಗಳ ಜಪ್ತಿ

* ಆರೋಪಿಗಳ ಬಂಧನ

* ವ್ಹೀಲಿ ಮಾಡಿದವರು 18ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಪೋಷಕರ ವಿರುದ್ಧ ಕ್ರಮ

* ಚಾಲನಾ ಪರವಾನಗಿ ಅಮಾನತು, ರದ್ದು

* ವಾಹನಗಳ ನೋಂದಣಿ ರದ್ದು

ಆಧಾರ: ಮೋಟಾರು ವಾಹನ ಕಾಯ್ದೆ–1988, ಮಾಧ್ಯಮ ವರದಿಗಳು 

ಪೂರಕ ಮಾಹಿತಿ: ಪ್ರಜಾವಾಣಿಯ ಬ್ಯೂರೊಗಳು

ವ್ಹೀಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.