ADVERTISEMENT

ಆಳ–ಅಗಲ | ವಿಶ್ವವಿದ್ಯಾಲಯ ನೇಮಕಾತಿ: ರಾಜ್ಯ ಸರ್ಕಾರಗಳ ಅಧಿಕಾರ ಮೊಟಕು?

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 23:30 IST
Last Updated 8 ಜನವರಿ 2025, 23:30 IST
   
ವಿಶ್ವವಿದ್ಯಾಲಯಗಳು, ಕಾಲೇಜುಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಭಾರಿ ಬದಲಾವಣೆ ತರಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮುಂದಾಗಿದೆ. ಅಧ್ಯಾಪಕರು, ಗ್ರಂಥಪಾಲಕರು ಮುಂತಾದ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡುವ ಹೊಸ ಕರಡು ನಿಯಮಾವಳಿಯನ್ನು ರೂಪಿಸಿದೆ. ಮುಖ್ಯವಾಗಿ, ವಿವಿ ಕುಲಪತಿ ಆಯ್ಕೆಯ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸಿ, ರಾಜ್ಯಪಾಲರಿಗೆ ಹೆಚ್ಚು ಅಧಿಕಾರ ನೀಡುವ ಬಗ್ಗೆ ಪ್ರಸ್ತಾವ ಮಾಡಲಾಗಿದೆ. ಯುಜಿಸಿಯ ಕರಡು ನಿಯಮಾವಳಿಗೆ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಮತ್ತು ಶೈಕ್ಷಣಿಕ ವಲಯದಲ್ಲೂ ವಿರೋಧ ವ್ಯಕ್ತವಾಗಿದೆ      

ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಉನ್ನತ ಶಿಕ್ಷಣದಲ್ಲಿ ಭಾರಿ ಬದಲಾವಣೆಗಳನ್ನು ತರುವ ದಿಸೆಯಲ್ಲಿ ಹೊಸ ನಿಯಮಾವಳಿ ರೂಪಿಸಿ, ಕರಡು ಪ್ರಕಟಿಸಿದೆ. ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ  ಬೋಧಕರು, ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುವ ಮತ್ತು ಬಡ್ತಿ ನೀಡುವ ಸಂಬಂಧ ಜಾರಿಯಲ್ಲಿದ್ದ 2018ರ ನಿಯಮಗಳನ್ನು ರದ್ದು ಪಡಿಸಿ, ಯುಜಿಸಿ ಕಾಯ್ದೆ– 1956ರ ಅನ್ವಯ ಹೊಸ ನಿಯಮ ರೂಪಿಸಲು ಪ್ರಸ್ತಾವಿಸಲಾಗಿದೆ. 

ಯುಜಿಸಿ ಮಾನ್ಯತೆ ಇರುವ ಪ್ರತಿ ವಿಶ್ವವಿದ್ಯಾಲಯ, ಸಂಸ್ಥೆ/ಕಾಲೇಜು, ಸಂಯೋಜಿತ ಕಾಲೇಜು, ಡೀಮ್ಡ್ ವಿಶ್ವವಿದ್ಯಾಲಯಗಳಿಗೂ ಈ ನಿಯಮಾವಳಿ ಅನ್ವಯಿಸಲು ಉದ್ದೇಶಿಸಲಾಗಿದೆ. ಹೊಸ ನಿಯಮಾವಳಿ ಜಾರಿಗೆ ಬಂದರೆ ಎಂಜಿನಿಯರಿಂಗ್, ತಾಂತ್ರಿಕ ಶಿಕ್ಷಣ, ಆಡಳಿತ ನಿರ್ವಹಣೆಯ (ಬಿಬಿಎ, ಎಂಬಿಎ ಇತ್ಯಾದಿ) ವಿವಿ/ಕಾಲೇಜುಗಳಿಗೂ ಅನ್ವಯವಾಗಲಿದೆ.

ಕುಲಪತಿಗಳ ನೇಮಕಾತಿ ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ತರಲು ಯುಜಿಸಿ ಉದ್ದೇಶಿಸಿದೆ. ಬೋಧಕರ ನೇಮಕಾತಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಕರಡುವಿನಲ್ಲಿ ಸಡಿಲಗೊಳಿಸಲಾಗಿದ್ದರೆ, ಬಡ್ತಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಬಿಗಿಗೊಳಿಸಲಾಗಿದೆ. 30 ದಿನಗಳ ಒಳಗೆ (ಫೆ.5) ಕರಡು ನಿಯಮಾವಳಿ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಯುಜಿಸಿ ತಿಳಿಸಿದೆ. ಹೊಸ ನಿಯಮಗಳು ಜಾರಿಗೆ ಬಂದ ನಂತರ ಆರು ತಿಂಗಳ ಒಳಗಾಗಿ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಅವುಗಳಿಗೆ ತಕ್ಕಂತೆ ತಮ್ಮ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದೂ ಯುಜಿಸಿ ಹೇಳಿದೆ.  

ADVERTISEMENT

ರಾಜ್ಯಪಾಲರಿಗೆ ಹೆಚ್ಚು ಅಧಿಕಾರ

ಇದುವರೆಗಿನ ನಿಯಮದಂತೆ, ಯಾವುದೇ ವಿಶ್ವವಿದ್ಯಾಲಯದ ಕುಲಪತಿ ಆಗಬೇಕು ಎಂದರೆ, ಅವರು ಮೊದಲು ಬೋಧಕರಾಗಿರಬೇಕು. ಅದನ್ನು ಕರಡು ನಿಯಮಾವಳಿಯಲ್ಲಿ ಬದಲಿಸಲಾಗಿದೆ. ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿಯ ಜತೆಗೆ ಶೈಕ್ಷಣಿಕ ಕ್ಷೇತ್ರದ ಹೊರಗಿನ ಹಲವು ವಲಯಗಳ ಪರಿಣತರಿಗೂ ಕುಲಪತಿ ಆಗಲು ಅವಕಾಶ ಕಲ್ಪಿಸಲಾಗಿದೆ. 

ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 10 ವರ್ಷಗಳ ಬೋಧನಾ ಅನುಭವ ಇರುವವರು ಅಥವಾ ಸಂಶೋಧನೆ/ಶೈಕ್ಷಣಿಕ ಆಡಳಿತ ಸಂಸ್ಥೆಯಲ್ಲಿ ಅಥವಾ ಕೈಗಾರಿಕೆ, ಸಾರ್ವಜನಿಕ ಆಡಳಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಹಿರಿಯ ಶ್ರೇಣಿಯ ಸಿಬ್ಬಂದಿ ಕುಲಪತಿ ಹುದ್ದೆಗೆ ಅರ್ಹರು ಎಂದು ಕರಡು ನಿಯಮಾವಳಿ ಹೇಳುತ್ತದೆ. ಇವರ ಜತೆಗೆ ಶೋಧನಾ (ಆಯ್ಕೆ) ಸಮಿತಿಯು ಪ್ರತಿಭಾ ಶೋಧ ಅಥವಾ ನಾಮನಿರ್ದೇಶನದ ಮೂಲಕವೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು.

ಕರಡು ನಿಯಮಾವಳಿಯು ಕುಲಪತಿ ನೇಮಕಾತಿಯಲ್ಲಿ ರಾಜ್ಯ ಸರ್ಕಾರಕ್ಕಿಂತಲೂ ರಾಜ್ಯಪಾಲರಿಗೇ ಅಧಿಕಾರ ನೀಡುತ್ತದೆ. ಇದುವರೆಗೆ, ರಾಜ್ಯ ಸರ್ಕಾರಗಳು ಕುಲಪತಿ ಆಯ್ಕೆ
ಗಾಗಿ ಮೂವರಿಂದ ಐವರು ತಜ್ಞರನ್ನೊಳಗೊಂಡ ಶೋಧನಾ ಸಮಿತಿ ನೇಮಿಸುತ್ತಿತ್ತು. ಕರಡು ನಿಯಮಾವಳಿಯಲ್ಲಿ ಅದನ್ನು ಬದಲಿಸಲಾಗಿದ್ದು, ಮೂವರು ತಜ್ಞರ ಶೋಧನಾ ಸಮಿತಿ ನೇಮಿಸುವ ಅಧಿಕಾರವನ್ನು ಕುಲಾಧಿಪತಿಗೆ ನೀಡಲಾಗಿದೆ.

ರಾಜ್ಯಗಳ ಅಧೀನದಲ್ಲಿರುವ ವಿವಿಗಳಿಗೆ ಆಯಾ ರಾಜ್ಯಗಳ ರಾಜ್ಯಪಾಲರೇ ಕುಲಾಧಿಪತಿ ಆಗಿರುತ್ತಾರೆ. ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಉಂಟಾಗಿತ್ತು. ಈಗ ಯುಜಿಸಿಯ ಹೊಸ ನಿಯಮಾವಳಿಯು ರಾಜ್ಯಗಳ ಅಧಿಕಾರವನ್ನೇ ಮೊಟಕುಗೊಳಿಸುವಂತಿದೆ.

ಶೋಧನಾ ಸಮಿತಿಯನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಂದ ಕಸಿದು ರಾಜ್ಯಪಾಲರಿಗೆ ವಹಿಸುವ ಕರಡು ನಿಯಮಾವಳಿಗೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಿಂದ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂದಿದ್ದಾರೆ. ಕೇರಳ ಕೂಡ ಈ ಬಗ್ಗೆ ತಕರಾರು ಎತ್ತಿದೆ. ಸಿಪಿಎಂ, ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಕೂಡ ಆಕ್ಷೇಪಿಸಿದೆ.

ಕರ್ನಾಟಕದಲ್ಲಿಯೂ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಮಸೂದೆ ಇತ್ತೀಚೆಗಷ್ಟೇ ಅಂಗೀಕಾರಗೊಂಡಿದೆ. ಕುಲಾಧಿಪತಿ ಅಧಿಕಾರವನ್ನು ರಾಜ್ಯಪಾಲರಿಂದ ಹಿಂದಕ್ಕೆ ಪಡೆದು ಮುಖ್ಯಮಂತ್ರಿಗೆ ನೀಡುವ ‘ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ’ಯನ್ನು ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಕರ್ನಾಟಕ ವಿಧಾನಸಭೆ ಅಂಗೀಕರಿಸಿತ್ತು.   

ಯುಜಿಸಿಯ ಕರಡು ನಿಯಮಾವಳಿಯು ಕೇಂದ್ರ ಮತ್ತು ರಾಜ್ಯಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಹುಟ್ಟುಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಪಿಎಚ್‌.ಡಿ ವಿಷಯ ಪರಿಗಣನೆ
ಸಹಾಯಕ ಪ್ರಾಧ್ಯಾಪಕ ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಅಭ್ಯರ್ಥಿಗಳು ಪಿಎಚ್‌.ಡಿ ಅಥವಾ ಎನ್‌ಇಟಿ/ಎಸ್‌ಇಟಿಯಲ್ಲಿ ಆಯ್ಕೆ ಮಾಡಿಕೊಂಡ ವಿಷಯಗಳು ಅವರು ಪದವಿ ಅಥವಾ ಸ್ನಾತಕೋತ್ತರ ಪದವಿ ಕೋರ್ಸ್‌ನಲ್ಲಿ ಆಯ್ಕೆ ಮಾಡಿಕೊಂಡ ವಿಷಯಗಳಿಗಿಂತ ಭಿನ್ನವಾಗಿದ್ದರೆ ಪಿಎಚ್‌ಡಿ ಎನ್‌ಇಟಿ/ಎಸ್‌ಇಟಿಯಲ್ಲಿ ಆಯ್ಕೆ ಮಾಡಿದ ವಿಷಯಗಳನ್ನೇ ಪರಿಗಣಿಸಬೇಕು ಎಂದು ಕರಡು ನಿಯಮಾವಳಿ ಹೇಳಿದೆ. ಅಂದರೆ ಅಭ್ಯರ್ಥಿಯೊಬ್ಬರು ಪದವಿ ಸ್ನಾತಕೋತ್ತರ ಪದವಿಯಲ್ಲಿ ಆಯ್ಕೆ ಮಾಡಿಕೊಂಡ ವಿಷಯದ ಬದಲಾಗಿ ಪಿಎಚ್‌ಡಿ/ಎನ್‌ಇಟಿಯಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಂಡಿದ್ದಾರೋ ಆ ವಿಷಯವನ್ನು ಬೋಧಿಸಲು ಅರ್ಹರಾಗುತ್ತಾರೆ. 
ಎಂಜಿನಿಯರಿಂಗ್‌ ಪಿಜಿ ಅಭ್ಯರ್ಥಿಗಳೂ ಅರ್ಹರು
ಕರಡು ನಿಯಮಾವಳಿಯ ಪ್ರಕಾರ ಸ್ನಾತಕೋತ್ತರ ಪದವಿ ಪಡೆಯದಿದ್ದರೂ ಪಿಎಚ್‌.ಡಿ ಮಾಡಿರುವ ಪದವೀಧರ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರಾಗಿರುತ್ತಾರೆ. ಎಂಜಿನಿಯರಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರು.

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬೇಕಾದ ಶೈಕ್ಷಣಿಕ ಅರ್ಹತೆ:

1) ಪದವಿಯಲ್ಲಿ ಕನಿಷ್ಠ ಶೇ 75ರಷ್ಟು ಅಂಕಗಳು ಅಥವಾ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ 55ರಷ್ಟು ಅಂಕಗಳು ಮತ್ತು ಪಿಎಚ್‌ಡಿ ಪದವಿ ಪಡೆದಿರಬೇಕು 

ಅಥವಾ

2) ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ 55 ಅಂಕಗಳೊಂದಿಗೆ ಯುಜಿಸಿ, ಸಿಎಸ್‌ಐಆರ್‌, ಐಸಿಎಆರ್‌ನಂತಹ ಸಂಸ್ಥೆಗಳು ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅಥವಾ ಸ್ಲೆಟ್‌/ಎಸ್‌ಇಟಿಯಂತಹ ಪರೀಕ್ಷೆಗಳಲ್ಲಿ ಅರ್ಹತೆ ಪಡೆದಿರಬೇಕು

ಅಥವಾ

3) ಕನಿಷ್ಠ ಶೇ 55ರಷ್ಟು ಅಂಕಗಳೊಂದಿಗೆ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ (ಎಂ.ಇ, ಎಂ.ಟೆಕ್‌) ಮಾಡಿರಬೇಕು

ಸಂಶೋಧನಾ ವರದಿಗಳು, ಪೇಟೆಂಟ್‌ಗಳೂ ಬೇಕು

ಕರಡು ನಿಯಮದಲ್ಲಿ ಸಹ ಪ್ರಾಧ್ಯಾಪಕರ ನೇಮಕಾತಿ ಮತ್ತು ಬಡ್ತಿಗೆ ಹೊಸ ಷರತ್ತುಗಳನ್ನು ಹಾಕಲಾಗಿದೆ. ಹಿಂದೆ ಅಭ್ಯರ್ಥಿಗಳ ಸಂಶೋಧನಾ ವರದಿಗಳು ಪ್ರಕಟವಾಗುವುದು ಕಡ್ಡಾಯವಾಗಿರಲಿಲ್ಲ, ಬದಲಿಗೆ ಒಂದು ಆಯ್ಕೆಯಾಗಿತ್ತು. ಅಭ್ಯರ್ಥಿಗಳ ಪುಸ್ತಕಗಳು ಪ್ರಕಟವಾಗಬೇಕಿರಲಿಲ್ಲ.

ಕರಡು ನಿಯಮದಲ್ಲಿ, ಸಹ ಪ್ರಾಧ್ಯಾಪಕರ ನೇಮಕಾತಿ ಮತ್ತು ಬಡ್ತಿಗೆ ಶೈಕ್ಷಣಿಕ ಅರ್ಹತೆ, ಬೋಧನಾ ಅನುಭವದ ಜೊತೆಗೆ ನಿಯತಕಾಲಿಕಗಳಲ್ಲಿ ಸಂಶೋಧನಾ ವರದಿಗಳು ಪ್ರಕಟವಾಗುವುದು/ ಪುಸ್ತಕಗಳನ್ನು ಬರೆಯುವುದು/ ಪುಸ್ತಕಗಳಲ್ಲಿ ಲೇಖನಗಳು ಪ್ರಕಟಗೊಳ್ಳುವುದು/ ಪೇಟೆಂಟ್‌ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. 

ಅದರ ಪ್ರಕಾರ, ಸಹ ಪ್ರಾಧ್ಯಾಪಕರ ನೇಮಕಾತಿಗೆ ಅಭ್ಯರ್ಥಿಗಳು ವಿವಿ, ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕನಿಷ್ಠ 8 ವರ್ಷಗಳ ಬೋಧನೆ/ಸಂಶೋಧನಾ ಅನುಭವ ಪಡೆದಿರಬೇಕು. ಜೊತೆಗೆ ಆಯಾ ಕ್ಷೇತ್ರದ ಶೈಕ್ಷಣಿಕ ತಜ್ಞರು ನಿರ್ವಹಿಸುವ ನಿಯತಕಾಲಿಕಗಳಲ್ಲಿ ಕನಿಷ್ಠ 8 ಸಂಶೋಧನಾ ವರದಿಗಳು ಪ್ರಕಟವಾಗಿರಬೇಕು ಅಥವಾ ಪುಸ್ತಕಗಳಲ್ಲಿ 8 ಅಧ್ಯಾಯಗಳು ಪ್ರಕಟಗೊಂಡಿರಬೇಕು ಅಥವಾ  ಲೇಖಕನಾಗಿ ಒಂದು ಪುಸ್ತಕ ಪ್ರಕಟಗೊಂಡಿರಬೇಕು ಅಥವಾ ಎರಡು ಪುಸ್ತಕಗಳಿಗೆ ಸಹ ಲೇಖಕನಾಗಿ ಕೆಲಸ ಮಾಡಿರಬೇಕು ಅಥವಾ ಎಂಟು ಪೇಟೆಂಟ್‌ಗಳನ್ನು ಹೊಂದಿರಬೇಕು. ಸಂಶೋಧನಾ ವರದಿಗಳು, ಪುಸ್ತಕ ಅಧ್ಯಾಯಗಳು ಮತ್ತು ಪಡೆದಿರುವ ಪೇಟೆಂಟ್‌ಗಳು ಸೇರಿ ಒಟ್ಟು ಎಂಟು ಸಂಖ್ಯೆಯಲ್ಲಿದ್ದರೆ ಆ ಅಭ್ಯರ್ಥಿಯನ್ನು ಪರಿಗಣಿಸಬಹುದು ಎಂದು ಹೇಳಲಾಗಿದೆ.

ಪ್ರೊಫೆಸರ್ ಆಫ್ ಪ್ರಾಕ್ಟೀಸ್
ಉನ್ನತ ಶಿಕ್ಷಣ ಸಂಸ್ಥೆಗಳು ಕೈಗಾರಿಕೆ ಮತ್ತು ಇತರ ವಲಯಗಳ ತಜ್ಞರು/ವೃತ್ತಿಪರರನ್ನು ಬೋಧನೆ ಮತ್ತು ಸಂಶೋಧನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕರಡು ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಇವರ ನಿಯೋಜನೆಯು ಮಂಜೂರಾದ ಹುದ್ದೆಗಳಿಗೆ ಹೊರತಾಗಿರುತ್ತದೆ. ಒಂದು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಕಾಲದಲ್ಲಿ ಇವರ ಪ್ರಮಾಣವು ಶೇ 10ಕ್ಕಿಂತ ಹೆಚ್ಚಾಗಬಾರದು ಎಂದು ನಿಯಮ ಹೇಳುತ್ತದೆ. 

ನಿಯಮ ಉಲ್ಲಂಘನೆಗೆ ಏನು ಶಿಕ್ಷೆ?

ಒಂದು ಉನ್ನತ ಶಿಕ್ಷಣ ಸಂಸ್ಥೆಯು ನಿಯಮಾವಳಿ ಉಲ್ಲಂಘಿಸಿದೆ ಎಂದು ಕಂಡುಬಂದಲ್ಲಿ ಉಲ್ಲಂಘನೆಗಳ ಬಗ್ಗೆ ಪರಿಶೀಲಿಸಿ, ವರದಿ ನೀಡಲು ಯುಜಿಸಿ ಆಯೋಗವನ್ನು ನೇಮಿಸುತ್ತದೆ. ಸಂಸ್ಥೆಯು ಉಲ್ಲಂಘನೆ ಮಾಡಿರುವುದು ಸಾಬೀತಾದರೆ, ಯುಜಿಸಿಯು ಕೆಳಕಂಡ ಕ್ರಮಗಳನ್ನು ಜರುಗಿಸಬಹುದಾಗಿದೆ.

  • ಯುಜಿಸಿ ಯೋಜನೆಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿಕೆ

  • ಪದವಿ ನೀಡದಂತೆ ಸಂಸ್ಥೆಗೆ ನಿಷೇಧ ಹೇರಿಕೆ

  • ದೂರ ಶಿಕ್ಷಣ (ಒಡಿಎಲ್) ಮತ್ತು ಆನ್‌ಲೈನ್ ಶಿಕ್ಷಣಕ್ಕೆ ನಿರ್ಬಂಧ 

  • ಯುಜಿಸಿ ಕಾಯ್ದೆ 1956ರ ಸೆಕ್ಷನ್ 2 (ಎಫ್) ಮತ್ತು 12 ಬಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಿಂದ ಸಂಸ್ಥೆಯನ್ನು ತೆಗೆದುಹಾಕುವುದು 

ಈ ಮೇಲಿನ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕ್ರಮಗಳನ್ನು ಸಂಸ್ಥೆಯ ವಿರುದ್ಧ ಜರುಗಿಸಬಹುದು. ಜತೆಗೆ, ಆಯೋಗದ ತೀರ್ಮಾನದಂತೆ ನಿರ್ದಿಷ್ಟ ಪ್ರಕರಣದ ಆಧಾರದಲ್ಲಿ ಹೆಚ್ಚುವರಿ ಶಿಕ್ಷಾ ಕ್ರಮಗಳನ್ನು ಕೈಗೊಳ್ಳುವುದಕ್ಕೂ ಅವಕಾಶ ಇದೆ ಎಂದು ಕರಡು ನಿಯಮಾವಳಿಯಲ್ಲಿ ಹೇಳಲಾಗಿದೆ. 

ಕುಲಪತಿಗೆ ಅಧಿಕಾರ
ಕರಡು ನಿಯಮಾವಳಿಯು ವಿಶ್ವವಿದ್ಯಾಲಯಗಳ ಬೋಧನಾ ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದಂತೆಯೂ ಕುಲಪತಿಗೆ ಹೆಚ್ಚು ಅಧಿಕಾರ ನೀಡುತ್ತದೆ. ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಹಾಯಕ ಪ್ರಾಧ್ಯಾಪಕರು ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ನೇಮಕಾತಿ ಮಾಡುವ ಸಮಿತಿಗೆ ಕುಲಪತಿಯೇ ಅಧ್ಯಕ್ಷರಾಗಿರುತ್ತಾರೆ. ಅವರ ಜತೆಗೆ ಈ ಪ್ರಕ್ರಿಯೆ ನಡೆಸಲು ಪ್ರಾಧ್ಯಾಪಕರ ಶ್ರೇಣಿಗೆ ಕಡಿಮೆ ಇಲ್ಲದಂಥ ಅಧ್ಯಾಪಕರನ್ನು ಕುಲಪತಿ/ಕುಲಾಧಿಪತಿ ಆಯ್ಕೆ ಮಾಡುತ್ತಾರೆ. ಮೂವರು ಬಾಹ್ಯ ವಿಷಯ ಪರಿಣತರನ್ನೂ ಕುಲಪತಿಯೇ ನೇಮಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.