ADVERTISEMENT

ಆಳ-ಅಗಲ| ಅಮೆರಿಕದ ನೆರವು ಸ್ಥಗಿತ; ಏಡ್ಸ್‌ ನಿಯಂತ್ರಣಕ್ಕೆ ಹೊಡೆತ

ಭಾರತದಲ್ಲಿ ಮೂಲಸೌಕರ್ಯ, ಮಾನವ ಸಂಪನ್ಮೂಲದ ಕೊರತೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:30 IST
Last Updated 18 ಜುಲೈ 2025, 0:30 IST
<div class="paragraphs"><p>ಏಡ್ಸ್</p></div>

ಏಡ್ಸ್

   

(ಪ್ರಾತಿನಿಧಿಕ ಚಿತ್ರ)

ಏಡ್ಸ್ ನಿಯಂತ್ರಣಕ್ಕಾಗಿ ಭಾರತವೂ ಸೇರಿದಂತೆ 50ಕ್ಕೂ ಹೆಚ್ಚು ಬಡ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಅಮೆರಿಕವು ನೀಡುತ್ತಿದ್ದ ನೆರವು ಸ್ಥಗಿತಗೊಂಡಿದೆ. ಇದರಿಂದ ಭಾರತದಲ್ಲಿ ಎಚ್‌ಐವಿ ಸೋಂಕು ಹರಡುವುದನ್ನು ತಡೆಯಲು ಮತ್ತು ಏಡ್ಸ್ ಪೀಡಿತರಿಗೆ ಚಿಕಿತ್ಸೆ ಒದಗಿಸಲು ಅಡ್ಡಿ ಉಂಟಾಗಿದೆ. ಅನೇಕ ಚಿಕಿತ್ಸಾ ಕೇಂದ್ರಗಳು ಬಾಗಿಲು ಮುಚ್ಚಿವೆ. ಸೋಂಕಿತರೊಂದಿಗೆ ಮತ್ತು ಸೋಂಕಿನ ಅಪಾಯ ಇರುವ ಜನವರ್ಗಗಳೊಂದಿಗೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಕಾಳಜಿ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಸೋಂಕಿತರು, ವಿಶೇಷವಾಗಿ ಮಕ್ಕಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅಮೆರಿಕದ ಕ್ರಮದಿಂದ ದೇಶದಲ್ಲಿ ಏಡ್ಸ್ ನಿಯಂತ್ರಣದ ಮೇಲೆ ಹಲವು ಪರಿಣಾಮಗಳು ಉಂಟಾಗಿವೆ

ಎಚ್‌ಐವಿ ಚಿಕಿತ್ಸೆಗಾಗಿ ನೀಡಲಾಗುತ್ತಿದ್ದ ‘ಅಮೆರಿಕದ ಅಧ್ಯಕ್ಷರ ಏಡ್ಸ್‌ ತುರ್ತು ನೆರವಿನ ಯೋಜನೆ’ಯ (ಪಿಇಪಿಎಫ್‌ಎಆರ್) ಅನುದಾನವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ 2029ರ ವೇಳೆಗೆ ಜಗತ್ತಿನಾದ್ಯಂತ 40 ಲಕ್ಷ ಏಡ್ಸ್ ಸಂಬಂಧಿ ಸಾವುಗಳು ಹೆಚ್ಚುವರಿಯಾಗಿ ಸಂಭವಿಸಲಿದ್ದು, 60 ಲಕ್ಷ ಮಂದಿಗೆ ಎಚ್‌ಐವಿ ಸೋಂಕು ಹೆಚ್ಚುವರಿಯಾಗಿ ಹರಡಲಿದೆ ಎಂದು ವಿಶ್ವಸಂಸ್ಥೆಯ ವರದಿ (ಯುಎನ್‌ಏಡ್ಸ್‌) ತಿಳಿಸಿದೆ.

ADVERTISEMENT

ಅಮೆರಿಕವು ಪಿಇಪಿಎಫ್‌ಎಆರ್ ಮೂಲಕ ಜಗತ್ತಿನ ಅನೇಕ ದೇಶಗಳಿಗೆ ಎಚ್‌ಐವಿ ಸೋಂಕು ನಿಯಂತ್ರಣ ಮತ್ತು ಏಡ್ಸ್ ಕಾಯಿಲೆಯ ಚಿಕಿತ್ಸೆಗಾಗಿ ನೆರವು ಒದಗಿಸುತ್ತಿತ್ತು (ಪಿಇಪಿಎಫ್‌ಎಆರ್‌ನ ನೇತೃತ್ವವನ್ನು ಅಮೆರಿಕದ ವಿದೇಶಾಂಗ ಇಲಾಖೆ ವಹಿಸಿಕೊಂಡಿದ್ದರೂ,  ಯುಎಸ್‌ಏಡ್‌, ಆರೋಗ್ಯ ಇಲಾಖೆ ಇದರ ಅನುಷ್ಠಾನ ಜವಾಬ್ದಾರಿ ಹೊಂದಿವೆ). ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಮಂದಿಯ ಆರೋಗ್ಯ ಮತ್ತು ಪ್ರಾಣ ರಕ್ಷಣೆಯ ದೃಷ್ಟಿಯಿಂದ ಅಮೆರಿಕದ ನೆರವು ನಿರ್ಣಾಯಕವಾಗಿತ್ತು. 2003ರಲ್ಲಿ ಪಿಇಪಿಎಫ್‌ಎಆರ್ ಅನ್ನು ಅನುಷ್ಠಾನಕ್ಕೆ ತರಲಾಗಿತ್ತು. ಅಂದಿನಿಂದ 2023ರವರೆಗೆ ಈ ಉದ್ದೇಶಕ್ಕೆ ಅಮೆರಿಕ ಸರ್ಕಾರ 10,000 ಕೋಟಿ ಡಾಲರ್‌ (₹8.60 ಲಕ್ಷ ಕೋಟಿ) ವೆಚ್ಚ ಮಾಡಿದೆ. ಇದರಿಂದಾಗಿ 2.5 ಕೋಟಿ ಜನರ ಪ್ರಾಣ ಉಳಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಕಳೆದ ವರ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರಕ್ಕೆ ಏರಿದ ನಂತರ, ಪಿಇಪಿಎಫ್‌ಎಆರ್ ಅಡಿಯಲ್ಲಿ ನೀಡುತ್ತಿದ್ದ ನೆರವನ್ನು ದಿಢೀರ್‌  ಸ್ಥಗಿತಗೊಳಿಸಲಾಗಿದೆ. ಯುಎಸ್‌ ಏಡ್‌ ಅನ್ನೂ ಕಡಿತಗೊಳಿಸಲಾಗಿದೆ. ಅದು ಜಾಗತಿಕ ಮಟ್ಟದಲ್ಲಿ ಕಳವಳ ಮೂಡಿಸಿದೆ. ಇದರಿಂದ ಎಚ್‌ಐವಿ ವಿರುದ್ಧದ ಹೋರಾಟಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಭಾರತದ ಮೇಲೂ ಇದು ಹಲವು ಪರಿಣಾಮಗಳನ್ನು ಬೀರುತ್ತಿದೆ. 

ಭಾರತದಲ್ಲಿ 2000ನೇ ಇಸವಿಯಲ್ಲಿ ಎಚ್‌ಐವಿ ಸೋಂಕು ಗರಿಷ್ಠ ಮಟ್ಟಕ್ಕೆ ಏರಿತ್ತು. ನಂತರ ಸರ್ಕಾರಗಳ ನಿರಂತರ ಪ್ರಯತ್ನದಿಂದ ಅದರ ಪ್ರಮಾಣ ಕಡಿಮೆಯಾಗಿತ್ತು. ಕಳೆದ ಎರಡು ದಶಕಗಳಿಂದಲೂ ಎಚ್‌ಐವಿ ಸೋಂಕಿತರ ಸಂಖ್ಯೆ ಕಡಿಮೆಯೇ ಇದೆ. 2000ದಲ್ಲಿ ಶೇ 0.55 ಇದ್ದ ಸೋಂಕಿತರ ಪ್ರಮಾಣವು, 2010ರ ವೇಳೆಗೆ ಶೇ 0.32ಗೆ ಇಳಿದಿತ್ತು. 2021ರಲ್ಲಿ ಈ ಪ್ರಮಾಣವು ಶೇ 0.21 ಇದ್ದರೆ, 2023ರಲ್ಲಿ ಶೇ 0.2ಕ್ಕೆ ಇಳಿದಿದೆ. 

ಈಡೇರುವುದೇ ಭಾರತದ ಗುರಿ?:

ಆಫ್ರಿಕಾ ಖಂಡದಲ್ಲಿ ಎಚ್‌ಐವಿ ಸೋಂಕು ಭಾರಿ ಪ್ರಮಾಣದಲ್ಲಿ ಹರಡಿದ್ದು, ಆ ದೇಶಗಳು ಅದರ ನಿಯಂತ್ರಣಕ್ಕಾಗಿ ವಿದೇಶಿ ಧನಸಹಾಯವನ್ನೇ ಅವಲಂಬಿಸಿವೆ. ಆದರೆ, ಭಾರತದಲ್ಲಿ ಏಡ್ಸ್‌ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವೇ ಹೆಚ್ಚಿನ ಅನುದಾನ ಒದಗಿಸುತ್ತಿದೆ. ವಿದೇಶಿ ಧನಸಹಾಯದ ಮೇಲೆ ಹೆಚ್ಚು ಅವಲಂಬಿಸಿಲ್ಲ. ಆದರೂ ಯುಎಸ್‌ಏಡ್‌ ಮತ್ತು ಪಿಇಪಿಎಫ್‌ಎಆರ್ ನೆರವಿನಿಂದ ದೇಶದಲ್ಲಿ ಗಮನಾರ್ಹ ಕೆಲಸಗಳು ನಡೆಯುತ್ತಿದ್ದವು. 2030ರ ಹೊತ್ತಿಗೆ ದೇಶವನ್ನು ಏಡ್ಸ್‌ಮುಕ್ತ ರಾಷ್ಟ್ರವಾಗಿಸುವುದು ಕೇಂದ್ರದ ಯೋಜನೆಯಾಗಿತ್ತು.

ಭಾರತದಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದ್ದರೂ ಜಾಗತಿಕ ಮಟ್ಟದಲ್ಲಿ ಹೆಚ್ಚು ಸೋಂಕಿತರಿರುವ ಮೂರನೇ ದೊಡ್ಡ ರಾಷ್ಟ್ರವಾಗಿದೆ. ದೇಶದ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಎಚ್‌ಐವಿ ನಿಯಂತ್ರಣಕ್ಕಾಗಿ ಮೂಲಸೌಕರ್ಯ ಕಲ್ಪಿಸಲು ಮತ್ತು ಮಾನವ ಸಂಪನ್ಮೂಲ ಒದಗಿಸಲು ಅಮೆರಿಕ ನೆರವು ಒದಗಿಸುತ್ತಿತ್ತು. ಸೋಂಕಿನ ಅಪಾಯ ಇರುವ ಜನವರ್ಗಗಳಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಚಿಕಿತ್ಸೆ ನೀಡಲು ಆ ನೆರವು ನಿರ್ಣಾಯಕವಾಗಿತ್ತು. 

ಅಮೆರಿಕದ ನೆರವು ಬಹುತೇಕ ಸ್ಥಗಿತಗೊಂಡಿರುವುದರಿಂದ ದೇಶದಲ್ಲಿ ಏಡ್ಸ್ ನಿರ್ಮೂಲನೆಗಾಗಿ ಕೆಲಸ ಮಾಡುತ್ತಿದ್ದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್‌ಎಸಿಒ) ಮತ್ತು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಗಳು (ಎಸ್‌ಎಸಿಎಸ್‌) ಸಂಪನ್ಮೂಲದ ಕೊರತೆಯನ್ನು ಎದುರಿಸುವಂತಾಗಿದೆ. 

ಮಾನವ ಸಂಪನ್ಮೂಲದ ಕೊರತೆ:

ಧನಸಹಾಯ ನಿಲ್ಲಿಸುವುದಾಗಿ ಅಮೆರಿಕದಿಂದ ಜನವರಿಯಲ್ಲಿ ಸಂದೇಶ ಬಂದ ನಂತರ ದೇಶದಲ್ಲಿ ಏಡ್ಸ್ ನಿಯಂತ್ರಣದ ವಿವಿಧ ಯೋಜನೆಗಳಲ್ಲಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ 500ಕ್ಕೂ ಹೆಚ್ಚು ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಲಕ್ಷಾಂತರ ಸೋಂಕಿತರ ಜತೆ ಸಂವಹನ ನಡೆಸುತ್ತಿದ್ದವರನ್ನು ದಿಢೀರ್‌ ಮನೆಗೆ ಕಳುಹಿಸಲಾಗಿದೆ. ಇದರಿಂದ ಸೋಂಕಿತರನ್ನು ಆಸ್ಪತ್ರೆಗಳಿಗೆ ಕರೆತರುವುದು, ಔಷಧ ಪೂರೈಸುವುದು, ಜಾಗೃತಿ ಮೂಡಿಸುವಂಥ ಕೆಲಸಗಳಲ್ಲಿ ಹಿನ್ನಡೆ ಉಂಟಾಗಿದೆ. ವಿಶೇಷವಾಗಿ, ಸೋಂಕಿನ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚು ತೊಂದರೆ ಉಂಟಾಗಿದೆ. ಸೋಂಕಿತರ ಪರೀಕ್ಷೆ, ಮಕ್ಕಳ ಆರೈಕೆ, ತಳಮಟ್ಟದ ದತ್ತಾಂಶ ಸಂಗ್ರಹವೂ ಸೇರಿದಂತೆ ಇವರ ಕಾರ್ಯವು ಮಹತ್ವದ್ದಾಗಿತ್ತು.        

ಲಿಂಗತ್ವ ಅಲ್ಪಸಂಖ್ಯಾತರು. ಮಾದಕ ವ್ಯಸನಿಗಳು, ಅನಾಥ ಮಕ್ಕಳು, ಲೈಂಗಿಕ ಕಾರ್ಯಕರ್ತರು ಸೋಂಕಿನ ಅಪಾಯ ಹೆಚ್ಚು ಇರುವ ಜನವರ್ಗಗಳಾಗಿವೆ. ಅವರನ್ನು ಎಚ್‌ಐವಿ, ಲೈಂಗಿಕ ಸಂ‍ಪರ್ಕದಿಂದ ಬರುವ ಸೋಂಕುಗಳ ಪರೀಕ್ಷೆಗೆ ಒಳಪಡಿಸುವುದು, ಚಿಕಿತ್ಸೆ ಕೊಡಿಸುವುದು ಏಡ್ಸ್ ನಿಯಂತ್ರಣದಲ್ಲಿ ಬಹುಮುಖ್ಯ ಹಂತವಾಗಿದೆ. ಪ್ರಸ್ತುತ ಈ ಕೆಲಸಕ್ಕೆ ಅಡ್ಡಿಯುಂಟಾಗಿದೆ ಎಂದು ವರದಿಗಳು ತಿಳಿಸಿವೆ.  ಕೇಂದ್ರವು ಅನುದಾನಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. 

ಆಫ್ರಿಕಾ ರಾಷ್ಟ್ರಗಳ ಮೇಲೆ ಪರಿಣಾಮ

ಪಿಇಪಿಎಫ್‌ಎಆರ್‌ ನೆರವನ್ನು ದಿಢೀರ್‌ ಸ್ಥಗಿತಗೊಳಿಸಿರುವುದು ಆಫ್ರಿಕಾ ಖಂಡದ ಹಲವು ರಾಷ್ಟ್ರಗಳಲ್ಲಿ ಎಚ್‌ಐವಿ ಸೋಂಕಿತರ ಚಿಕಿತ್ಸೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಜಗತ್ತಿನಲ್ಲಿರುವ ಒಟ್ಟು ಎಚ್‌ಐವಿ ಸೋಂಕಿತರಲ್ಲಿ ಶೇ 60ರಷ್ಟು ಮಂದಿ ಈ ರಾಷ್ಟ್ರಗಳಲ್ಲಿದ್ದಾರೆ. ಆ್ಯಂಟಿರೆಟ್ರೊವೈರಲ್‌ (ಎಆರ್‌ವಿ) ಚಿಕಿತ್ಸೆ ಹಾಗೂ ಇನ್ನಿತರ ಔಷಧಗಳ ಕಾರಣದಿಂದ ಈ ರಾಷ್ಟ್ರಗಳಲ್ಲಿ ಎಚ್‌ಐವಿ ಸೋಂಕಿತರ ಜೀವಿತಾವಧಿ 62.3 ವರ್ಷಗಳಿಗೆ ಏರಿದೆ (2010ರಲ್ಲಿ ಇದು 56.5 ವರ್ಷಗಳಷ್ಟಿತ್ತು) ಎಂದು ವರದಿ ಹೇಳಿದೆ. ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಎಚ್‌ಐವಿ ಚಿಕಿತ್ಸೆಗೆ ಪಿಇಪಿಎಫ್‌ಎಆರ್‌ ಮಹತ್ವದ ಕೊಡುಗೆ ನೀಡುತ್ತಿತ್ತು. ಉದಾಹರಣೆಗೆ, 2022ರಲ್ಲಿ ದಕ್ಷಿಣ ಆಫ್ರಿಕಾವು ಎಚ್‌ಐವಿ ನಿಯಂತ್ರಣಕ್ಕೆ ಮೀಸಲಿರಿಸಿದ್ದ 256 ಕೋಟಿ ಡಾಲರ್‌ (₹22 ಸಾವಿರ ಕೋಟಿ) ಬಜೆಟ್‌ನಲ್ಲಿ ಪಿಇಪಿಎಫ್‌ಆರ್‌ನ ಕೊಡುಗೆ ಶೇ 18ರಷ್ಟು ಅಂದರೆ, 46 ಕೋಟಿ ಡಾಲರ್‌ನಷ್ಟಿತ್ತು (₹3,957ಕೋಟಿ).

ಕರ್ನಾಟಕಕ್ಕೆ ಮೂರನೇ ಸ್ಥಾನ

ದೇಶದಲ್ಲಿ ಅತಿ ಹೆಚ್ಚು ಎಚ್‌ಐವಿ ಸೋಂಕಿತರು ಇರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆಯ (ನ್ಯಾಕೊ) ಪ್ರಕಾರ, 2023ರಲ್ಲಿ ಕರ್ನಾಟಕದಲ್ಲಿ 2.80 ಲಕ್ಷ ಸೋಂಕಿತರಿದ್ದರು. 3.90 ಲಕ್ಷ ಸೋಂಕಿತರನ್ನು ಹೊಂದಿದ್ದ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದೆ. ಅಲ್ಲಿ 3.20 ಲಕ್ಷದಷ್ಟು ಮಂದಿ ಎಚ್‌ಐವಿ ಸೋಂಕಿತರಿದ್ದರು. ಉತ್ತರ ಪ್ರದೇಶ (1.97 ಲಕ್ಷ), ತಮಿಳುನಾಡು (1.69 ಲಕ್ಷ), ತೆಲಂಗಾಣ (1.58 ಲಕ್ಷ), ಬಿಹಾರ (1.56 ಲಕ್ಷ) ರಾಜ್ಯಗಳು ನಂತರದ ಸ್ಥಾನದಲ್ಲಿವೆ. 

ಕರ್ನಾಟಕದಲ್ಲಿ ವಯಸ್ಕರಲ್ಲಿ (19ರಿಂದ 49 ವರ್ಷ ವಯಸ್ಸಿನವರೆಗೆ) ಸೋಂಕಿನ ಪ್ರಮಾಣ ಶೇ 0.42ರಷ್ಟಿದೆ. 2023ರಲ್ಲಿ 3,180 ಮಂದಿ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿತ್ತು. 2010ರ ಅಂಕಿ ಅಂಶಗಳಿಗೆ ಹೋಲಿಸಿದರೆ ಪ್ರತಿ ವರ್ಷ ಸೋಂಕಿನ  ಪ್ರಮಾಣದಲ್ಲಿ ಶೇ 70ರಷ್ಟು ಇಳಿಕೆಯಾಗಿದೆ. 2023ರಲ್ಲಿ 5,599 ಮಂದಿ ಸೋಂಕಿನ ಕಾರಣಕ್ಕೆ ಮೃತಪಟ್ಟಿದ್ದು, 13 ವರ್ಷಗಳಲ್ಲಿ ಈ ಪ್ರಮಾಣ ಶೇ 81.68ರಷ್ಟು ಕುಸಿದಿದೆ. 

ಆಧಾರ:ಯುಎನ್‌ಏಡ್ಸ್‌ ವರದಿ, ಫಾರಿನ್‌ಅಸಿಸ್ಟೆನ್ಸ್‌, ಯುಎಸ್‌ಏಡ್‌ ವೆಬ್‌ಸೈಟ್‌, ವಿಶ್ವಬ್ಯಾಂಕ್‌, ನ್ಯಾಕೊ ವರದಿ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.