‘ಅಮೆರಿಕ ಮೊದಲು’ ಎನ್ನುವ ಆಶಯದೊಂದಿಗೆ ವೀಸಾ, ಪೌರತ್ವ, ಉದ್ಯೋಗ ಇತ್ಯಾದಿ ರಂಗಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ತ ಈಗ ಔಷಧ ರಂಗದತ್ತ ಹರಿದಿದೆ. ಅಮೆರಿಕದಲ್ಲಿ ಔಷಧಗಳ ಬೆಲೆಗಳು ಅತಿ ಹೆಚ್ಚಾಗಿದ್ದು, ಅವುಗಳನ್ನು ಕಡಿಮೆ ಮಾಡಬೇಕು ಎನ್ನುವುದು ಟ್ರಂಪ್ ಅವರ ನಿಲುವು. ಈ ದಿಸೆಯಲ್ಲಿ ಅವರು ‘ಅತ್ಯಂತ ನೆಚ್ಚಿನ ರಾಷ್ಟ್ರ’ ನೀತಿಯನ್ನು ಜಾರಿಗೊಳಿಸಲು ಹೊರಟಿದ್ದಾರೆ. ಒಂದು ಕಂಪನಿ ತನ್ನ ಉತ್ಪನ್ನವನ್ನು ಯಾವ ದೇಶದಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆಯೋ, ಅದೇ ಬೆಲೆಗೆ ಅಮೆರಿಕಕ್ಕೂ ಮಾರಬೇಕು ಎನ್ನುವ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ಟ್ರಂಪ್ ಅವರ ಈ ನೀತಿಯು ಭಾರತದಲ್ಲಿ ಔಷಧ ಉದ್ಯಮದ ಮೇಲೆ ಎಂತಹ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ
ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನಂತರ ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದ ಹಿತಾಸಕ್ತಿಯೇ ಅಂತಿಮ ಎನ್ನುವುದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಈ ದಿಸೆಯಲ್ಲಿ ಅವರು ಇತ್ತೀಚೆಗೆ ಹೊಸ ನೀತಿಯೊಂದನ್ನು ಜಾರಿಗೊಳಿಸಿದ್ದಾರೆ. ಅಮೆರಿಕದಲ್ಲಿ ವೈದ್ಯರ ಸಲಹೆಯ ಮೇರೆಗೆ ಖರೀದಿಸಲಾಗುವ ಔಷಧಗಳ ಬೆಲೆ ಹೆಚ್ಚಾಗಿದ್ದು, ಅವನ್ನು ತಕ್ಷಣದಿಂದಲೇ ಇಳಿಸಬೇಕು ಎಂದು ಕಂಪನಿಗಳಿಗೆ ಸೂಚಿಸುವ ಕಾರ್ಯಾದೇಶಕ್ಕೆ ಅವರು ಸಹಿ ಹಾಕಿದ್ದಾರೆ. ‘ಅಮೆರಿಕದ ಮಟ್ಟಿಗೆ ಇದು ಅತ್ಯಂತ ಪರಿಣಾಮಕಾರಿ ಹಾಗೂ ಚಾರಿತ್ರಿಕವಾದ ನಿರ್ಧಾರ’ ಎಂದು ಅವರು ಪ್ರತಿಪಾದಿಸಿದ್ದಾರೆ. ಇದರ ದೂರಗಾಮಿ ಪರಿಣಾಮಗಳಿಂದ ಭಾರತದಲ್ಲಿ ಔಷಧಗಳ ಬೆಲೆ ಹೆಚ್ಚಳವಾಗಬಹುದೆಂದು ಕೆಲವರು ಹೇಳುತ್ತಿದ್ದಾರೆ. ಜತೆಗೆ, ಇದು ಜೆನರಿಕ್ ಔಷಧ ಉದ್ಯಮದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆಯೂ ವಿಶ್ಲೇಷಣೆಗಳು ನಡೆಯುತ್ತಿವೆ.
ಅಮೆರಿಕದಲ್ಲಿ ವಿವಿಧ ಕಾರಣಗಳಿಂದ ಔಷಧಗಳ ಬೆಲೆ ಹೆಚ್ಚಾಗಿದೆ. ಬೃಹತ್ ಖಾಸಗಿ ವಿಮಾ ಉದ್ಯಮ, ಉದ್ಯೋಗಿ ಸಬ್ಸಿಡಿಗಳು, ಬಡವರು ಮತ್ತು ಹಿರಿಯರಿಗಾಗಿ ಸರ್ಕಾರ ನೀಡುವ ಮೆಡಿಕೇರ್ ಮತ್ತು ಮೆಡಿಕ್ಏಡ್ ವಿಮಾ ಸೌಲಭ್ಯದಿಂದಾಗಿ ಅಮೆರಿಕದ ಆರೋಗ್ಯ ವ್ಯವಸ್ಥೆ ಅತ್ಯಂತ ಸಂಕೀರ್ಣವಾಗಿದೆ. 2021ರಲ್ಲಿ ಅಮೆರಿಕ ಲೆಕ್ಕಪರಿಶೋಧನಾ ಕಚೇರಿಯು ಅಮೆರಿಕದಲ್ಲಿನ ಔಷಧಗಳ ಬೆಲೆಗಳನ್ನು ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್‌ನಲ್ಲಿನ ಬೆಲೆಗಳೊಂದಿಗೆ ಹೋಲಿಕೆ ಮಾಡಿದಾಗ, ಅಲ್ಲಿ ಬೆಲೆಗಳು ಎರಡರಿಂದ ನಾಲ್ಕು ಪಟ್ಟು ಹೆಚ್ಚಾಗಿರುವುದು ಕಂಡುಬಂದಿತ್ತು. ಈ ವಿಚಾರ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿತ್ತು. ಇನ್ಸುಲಿನ್‌ನಂಥ ಜೀವರಕ್ಷಕ ಔಷಧಗಳ ಬೆಲೆಯನ್ನು ಕಡಿಮೆ ಮಾಡಲು ಟ್ರಂಪ್ ಅವರ ಮೊದಲ ಅವಧಿಯಲ್ಲಿ ಮತ್ತು ಜೋ ಬೈಡನ್ ಅವಧಿಯಲ್ಲಿ ಪ್ರಯತ್ನ ಮಾಡಿದರೂ ಫಲ ಸಿಕ್ಕಿರಲಿಲ್ಲ. ಈಗ ಟ್ರಂಪ್ ಕಾರ್ಯಾದೇಶವನ್ನೇ ಹೊರಡಿಸಿದ್ದಾರೆ. ಔಷಧಗಳ ಉದ್ಯಮದ್ದು ದೊಡ್ಡ ಲಾಬಿ ಎಂದಿರುವ ಟ್ರಂಪ್, ಬೆಲೆ ಕಡಿತಗೊಳಿಸಲು ಕಂಪನಿಗಳಿಗೆ 30 ದಿನಗಳ ಗಡುವು ನೀಡಿದ್ದಾರೆ.
ಔಷಧಗಳ ಮಾರಾಟ ಬೆಲೆಯನ್ನು ಅಕಾರಣವಾಗಿ ಇಲ್ಲವೇ ತಾರತಮ್ಯದಿಂದ ಹೆಚ್ಚು ಮಾಡಲಾಗಿದೆಯೇ ಎನ್ನುವುದನ್ನು ಪರಿಶೀಲಿಸಲು ಅಮೆರಿಕದ ಅಧಿಕಾರಿಗಳಿಗೆ ಕಾರ್ಯಾದೇಶದಲ್ಲಿ ಆದೇಶಿಸಲಾಗಿದೆ. ವಿಮಾ ಕಂಪನಿಗಳು ಮತ್ತು ಮಧ್ಯವರ್ತಿಗಳನ್ನು ಬಿಟ್ಟು ನೇರವಾಗಿ ಗ್ರಾಹಕರಿಗೆ ಔಷಧ ಮಾರುವಂತಾಗಬೇಕು ಎಂದೂ ಸೂಚಿಸಲಾಗಿದೆ. ಹಾಗೆಯೇ ಅಮೆರಿಕವನ್ನು ‘ಅತ್ಯಂತ ನೆಚ್ಚಿನ ರಾಷ್ಟ್ರ’ (ಮೋಸ್ಟ್ ಫೇವರ್ಡ್ ನೇಷನ್–ಎಂಎಫ್‌ಎನ್) ಎಂದು ಪರಿಗಣಿಸಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ. ಅಂದರೆ, ಒಂದು ಕಂಪನಿ ತನ್ನ ಉತ್ಪನ್ನವನ್ನು ಯಾವ ದೇಶದಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆಯೋ, ಅದೇ ಬೆಲೆಗೆ ಅಮೆರಿಕಕ್ಕೂ ಮಾರಬೇಕು. ಈ ಎಲ್ಲ ಕ್ರಮಗಳಿಂದ ಅಮೆರಿಕದಲ್ಲಿ ಔಷಧಗಳ ಬೆಲೆಗಳು ಶೇ 30ರಿಂದ ಶೇ 80ರವರೆಗೆ ಕಡಿಮೆ ಆಗುತ್ತವೆ ಎಂದು ಟ್ರಂಪ್ ಹೇಳಿದ್ದಾರೆ.
ಭಾರತದ ಮೇಲೆ ಏನು ಪರಿಣಾಮ?: ಅಮೆರಿಕದಲ್ಲಿ ವೈದ್ಯರ ಸಲಹೆಯ ಮೇರೆಗೆ ಮಾರಾಟವಾಗುವ ಔಷಧಗಳಲ್ಲಿ ಶೇ 90ರಷ್ಟು ಜೆನರಿಕ್ ಔಷಧಗಳು. ಆದರೂ ಮಾರುಕಟ್ಟೆ ಮೌಲ್ಯದಲ್ಲಿ ಅವುಗಳ ಪಾಲು ಶೇ 13 ಮಾತ್ರ. ಭಾರತದ ಜೆನರಿಕ್ ಔಷಧಗಳು ಅಮೆರಿಕದಲ್ಲಿ ಕಡಿಮೆ ಲಾಭಾಂಶದೊಂದಿಗೆ ಮಾರಾಟವಾಗುತ್ತಿರುವುದರಿಂದ ಟ್ರಂಪ್ ಅವರ ಕಾರ್ಯಾದೇಶದಿಂದ ಭಾರತದ ಮೇಲೆ ಹೆಚ್ಚಿನ ಪರಿಣಾಮವೇನೂ ಆಗುವುದಿಲ್ಲ ಎಂದು ಭಾರತೀಯ ಔಷಧ ಒಕ್ಕೂಟ (ಐಪಿಎ) ಅಭಿಪ್ರಾಯಪಟ್ಟಿದೆ.
ಐಪಿಎ 23 ಪ್ರಮುಖ ಔಷಧ ತಯಾರಕರನ್ನು ಒಳಗೊಂಡಿದ್ದು, ಅವರಲ್ಲಿ ಹೆಚ್ಚಿನವರು ಅಮೆರಿಕದ ರಫ್ತುದಾರರಾಗಿದ್ದಾರೆ. ಭಾರತದಲ್ಲಿ 60 ವಿವಿಧ ವಿಭಾಗಗಳಲ್ಲಿ 60 ಸಾವಿರ ಜೆನರಿಕ್ ಔಷಧ ಬ್ರ್ಯಾಂಡ್‌ಗಳು ತಯಾರಾಗುತ್ತಿದ್ದು, ಜಗತ್ತಿನ ಶೇ 20ರಷ್ಟು ಜೆನರಿಕ್ ಔಷಧಗಳು ದೇಶದಿಂದ ಪೂರೈಕೆಯಾಗುತ್ತಿವೆ. ಅವು ಜಪಾನ್, ಆಸ್ಟ್ರೇಲಿಯಾ, ಪಶ್ಚಿಮ ಯುರೋಪ್, ಅಮೆರಿಕ ಸೇರಿದಂತೆ ಜಗತ್ತಿನ 200 ದೇಶಗಳಿಗೆ ರಫ್ತಾಗುತ್ತಿವೆ. ಅಮೆರಿಕದಿಂದ ಹೊರಗೆ, ಅಲ್ಲಿನ ಆಹಾರ ಮತ್ತು ಔಷಧ ಆಡಳಿತದಿಂದ (ಯುಎಸ್‌ಎಫ್‌ಡಿಎ) ನೋಂದಾಯಿತವಾಗಿರುವ ಅತಿ ಹೆಚ್ಚು ಔಷಧ ತಯಾರಿಕಾ ಘಟಕಗಳು (ಶೇ 12.5) ಇರುವುದು ಭಾರತದಲ್ಲಿಯೇ.
ಔಷಧಗಳ ಬೆಲೆ ಇಳಿಕೆಯಿಂದ ಅಮೆರಿಕದ ಗ್ರಾಹಕರಿಗೆ ಲಾಭವಾಗಬಹುದಾದರೂ ಇದರಿಂದ ಜಾಗತಿಕ ಮಟ್ಟದಲ್ಲಿ ಔಷಧ ಸಂಬಂಧ ಹಕ್ಕುಸ್ವಾಮ್ಯ ನೀತಿ, ಜೆನರಿಕ್ ಔಷಧ ಉದ್ಯಮದ ಮೇಲೆ ಪರಿಣಾಮವಾಗಲಿದೆ. ಅಮೆರಿಕದಲ್ಲಿ ಆಗುವ ನಷ್ಟವನ್ನು ಸರಿದೂಗಿಸಿಕೊಳ್ಳಲು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯ ವೆಚ್ಚಗಳನ್ನು ಭರಿಸಲು ಭಾರತದ ಕಂಪನಿಗಳು ತಮ್ಮ ಔಷಧಗಳ ಬೆಲೆಯನ್ನು ಈಗ ಕಡಿಮೆ ಬೆಲೆಗೆ ಮಾರುತ್ತಿರುವ ದೇಶಗಳಲ್ಲಿಯೂ ಏರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತದ ಔಷಧ ಉದ್ಯಮದ ಮೇಲೆ ಅಮೆರಿಕವೂ ಸೇರಿದಂತೆ ವಿಶ್ವದ ದೊಡ್ಡ ಕಂಪನಿಗಳ ಪ್ರಭಾವ/ಒತ್ತಡ ಹೆಚ್ಚಬಹುದು ಎನ್ನಲಾಗಿದೆ.
ಉದ್ಯಮ ಏನು ಹೇಳುತ್ತದೆ?
ಟ್ರಂಪ್ ಕಾರ್ಯಾದೇಶಕ್ಕೆ ಸಹಿ ಹಾಕುತ್ತಿದ್ದಂತೆಯೇ ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಔಷಧ ಕಂಪನಿಗಳ ಷೇರು ಬೆಲೆಗಳು ಕುಸಿದವು. ಅಮೆರಿಕದ ಷೇರುಪೇಟೆಯಲ್ಲಿ ಆರಂಭದಲ್ಲಿ ಕುಸಿತ ಕಂಡಿದ್ದ ಷೇರುಗಳ ಮೌಲ್ಯ ನಂತರ ಚೇತರಿಸಿತು.
ಅಮೆರಿಕದಲ್ಲಿ ಔಷಧ ತಯಾರಿಕೆ, ಮಾರಾಟ ಸೇರಿದಂತೆ ಈ ವಲಯದಲ್ಲಿ ತೊಡಗಿಕೊಂಡಿರುವ ಉದ್ದಿಮೆಗಳು ಟ್ರಂಪ್ ಆದೇಶವನ್ನು ವಿರೋಧಿಸಿವೆ. ಆದೇಶದಿಂದಾಗಿ ದುಬಾರಿ ಔಷಧಗಳ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆಯಾಗದು. ಆದರೆ, ಔಷಧಗಳ ಪೂರೈಕೆ ಮತ್ತು ಸಂಶೋಧನೆಗೆ ನೀಡಲಾಗುವ ಹಣಕಾಸಿನ ನೆರವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಹೇಳಿವೆ.
ಈ ಪ್ರಸ್ತಾವವು ಅಮೆರಿಕದ ಸಣ್ಣ ಮತ್ತು ಮಧ್ಯಮ ಗಾತ್ರದ ಬಯೊಟೆಕ್ ಕಂಪನಿಗಳನ್ನು ಮುಚ್ಚುವ ಸ್ಥಿತಿಗೆ ತರಲಿದೆ ಎಂಬ ಕಳವಳವನ್ನು ಕೆಲವು ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ.
ಭಾರತದಂತಹ ರಾಷ್ಟ್ರಗಳ ಮೇಲೆ ಒತ್ತಡ
ಅಮೆರಿಕದ ಈ ಕ್ರಮವು ಜಾಗತಿಕ ಮಟ್ಟದಲ್ಲಿ ಔಷಧಗಳ ಬೆಲೆ ಹೊಂದಾಣಿಕೆ ಮಾಡುವುದಕ್ಕೆ ಕಾರಣವಾಗಬಹುದು. ಹೀಗಾದ ಪಕ್ಷದಲ್ಲಿ ಭಾರತ ಸೇರಿದಂತೆ ಔಷಧಗಳ ಬೆಲೆ ಕಡಿಮೆ ಇರುವ ರಾಷ್ಟ್ರಗಳ ಮೇಲೆ ಬೆಲೆಯನ್ನು ಹೆಚ್ಚಿಸುವಂತೆ ಜಾಗತಿಕ ಮಟ್ಟದ ಕಂಪನಿಗಳು ಒತ್ತಡ ಹಾಕಬಹುದು ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ಅಭಿಪ್ರಾಯ ಪಟ್ಟಿದೆ.
‘ಟ್ರಂಪ್ ಅವರ ಅತ್ಯಂತ ನೆಚ್ಚಿನ ರಾಷ್ಟ್ರ (ಎಂಎಫ್‌ಎನ್) ಬೆಲೆ ನಿಗದಿ ನೀತಿಯು ಎಚ್ಚರಿಕೆಯ ಗಂಟೆಯಾಗಿದೆ. ಇದರಿಂದಾಗಿ ಪಶ್ಚಿಮದ ರಾಷ್ಟ್ರಗಳ ಔಷಧ ಕಂಪನಿಗಳು ಬೆಲೆ ನಿಗದಿಗೆ ಸಂಬಂಧಿಸಿದ ಕಠಿಣ ನಿಯಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾದಾಗ, ಭಾರತದಂತಹ ಮಾರುಕಟ್ಟೆಯಲ್ಲಿ ಔಷಧಗಳ ಬೆಲೆ ಹೆಚ್ಚಿಸುವುದಕ್ಕೆ ಈ ಕಂಪನಿಗಳು ಎಲ್ಲ ರೀತಿಯಲ್ಲೂ ಶ್ರಮ ಹಾಕಲಿವೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾತ್ಸವ ಹೇಳಿದ್ದಾರೆ.
ಔಷಧಗಳ ಬೆಲೆ ನಿಗದಿಯು ಕಾನೂನಿನ ವಿಷಯ ಮಾತ್ರವಾಗಿರದೆ, ವ್ಯಾಪಾರದ ಮಾತುಕತೆಯ ವಿಚಾರವಾಗಿ ಬದಲಾಗಿದೆ. ಇದರಿಂದಾಗಿ ಭಾರತದ ಹಕ್ಕುಸ್ವಾಮ್ಯ ನೀತಿಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದ್ದು, ಔಷಧ ಬೆಲೆಗಳು ಹೆಚ್ಚಾಗಲಿವೆ ಎಂದು ಹೇಳಲಾಗುತ್ತಿದೆ.
ಭಾರತದಿಂದ ಔಷಧ ರಫ್ತು
ಭಾರತದಿಂದ ಔಷಧ ಆಮದು
ಆಧಾರ: ಪಿಟಿಐ, ಬಿಬಿಸಿ, ಫಾರ್ಮಸ್ಯೂಟಿಕಲ್ಸ್ ಎಕ್ಸ್‌ಪೋರ್ಟ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.