ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (ಎಂಒಎಸ್) ‘ಭಾರತದಲ್ಲಿ ಪೋಷಕಾಂಶಗಳ ಸೇವನೆ’ ಎನ್ನುವ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ದೇಶದ ಜನರ ಬದಲಾದ ಆಹಾರ ಕ್ರಮದ ಬಗ್ಗೆ ಬೆಳಕು ಚೆಲ್ಲಲಾಗಿದೆ. ದಶಕದ ಹಿಂದಿನ ಅವಧಿಗೆ ಹೋಲಿಸಿದರೆ, ಭಾರತೀಯರು ಇಂದು ಹೆಚ್ಚು ಪ್ರೊಟೀನ್ ತಿನ್ನುತ್ತಿದ್ದಾರೆ. ಆದರೆ, ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಕೊಬ್ಬಿನ ಅಂಶವುಳ್ಳ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಒಟ್ಟಾರೆಯಾಗಿ ಆಹಾರ ಬಳಕೆಯ ಪ್ರಮಾಣದಲ್ಲಿ ಅಲ್ಪ ಪ್ರಗತಿಯಾಗಿದ್ದರೂ ವಿವಿಧ ಪ್ರದೇಶ ಮತ್ತು ಆದಾಯದ ಗುಂಪುಗಳಲ್ಲಿ ವ್ಯತ್ಯಾಸ ಇರುವುದೂ ಕಂಡುಬಂದಿದೆ. ಇದು ಆಹಾರ ಭದ್ರತೆಯ ಕಾರ್ಯಕ್ರಮಗಳ ಮುಂದುವರಿಕೆಯ ಅಗತ್ಯವನ್ನು ಒತ್ತಿಹೇಳುತ್ತಿದೆ
‘ಭಾರತದಲ್ಲಿ ಪೋಷಕಾಂಶಗಳ ಸೇವನೆ’ ಎನ್ನುವ ವರದಿಯು ದೇಶದ ವಿವಿಧ ರಾಜ್ಯ, ವಲಯ ಮತ್ತು ವರ್ಗಗಳ ಜನರ ಪ್ರತಿದಿನದ ತಲಾವಾರು ಮತ್ತು ಘಟಕವಾರು ಆಹಾರ ಪದಾರ್ಥಗಳ ಬಳಕೆಯನ್ನು ಆಧರಿಸಿ ಅವರು ತಿನ್ನುವ ಕ್ಯಾಲೊರಿ, ಕೊಬ್ಬಿನ ಅಂಶ ಮತ್ತು ಪ್ರೊಟೀನ್ ಪ್ರಮಾಣವನ್ನು ಲೆಕ್ಕ ಹಾಕಲಾಗಿದೆ. ವರದಿಯಲ್ಲಿ 2022ರ ಆಗಸ್ಟ್‌ನಿಂದ 2023ರ ಜುಲೈವರೆಗೆ ಮತ್ತು 2023ರ ಆಗಸ್ಟ್‌ನಿಂದ 2024ರ ಜುಲೈವರೆಗೆ ನಡೆಸಿದ ಕುಟುಂಬ ಬಳಕೆ ವೆಚ್ಚ ಸಮೀಕ್ಷೆಗಳ ದತ್ತಾಂಶವನ್ನು (ಎಚ್‌ಸಿಇಎಸ್) ಬಳಸಿಕೊಳ್ಳಲಾಗಿದೆ. ಈ ಎರಡು ಅವಧಿಗಳ ನಡುವೆ ಕ್ಯಾಲೊರಿ, ಕೊಬ್ಬಿನ ಅಂಶ, ಪ್ರೊಟೀನ್ ಸೇವನೆಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಇಲ್ಲ. ಆದರೆ, ದಶಕಕ್ಕೂ ಹಿಂದಿನ ಅವಧಿಗೆ (2009–10 ಮತ್ತು 2011–12) ಹೋಲಿಸಿದರೆ, ಪ್ರೊಟೀನ್‌ಗಳ ಸೇವನೆಯಲ್ಲಿ ಅಲ್ಪ ಹೆಚ್ಚಳ ಆಗಿದ್ದರೆ, ಕೊಬ್ಬಿನ ಅಂಶವುಳ್ಳ ಪದಾರ್ಥಗಳ ಸೇವನೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ 2022–23ರಲ್ಲಿ ಪ್ರತಿದಿನದ ಸರಾಸರಿ ತಲಾವಾರು ಕ್ಯಾಲೊರಿ ಬಳಕೆಯು 2,233 ಕ್ಯಾಲೊರಿ ಇದ್ದರೆ, 2023–24ರಲ್ಲಿ ಅದರಲ್ಲಿ ಅಲ್ಪ ಮಟ್ಟದ (2,212 ಕ್ಯಾಲೊರಿ) ಇಳಿಕೆ ಕಂಡುಬಂದಿದೆ. ಈ ಪ್ರಮಾಣವು ಇದೇ ಅವಧಿಯಲ್ಲಿ ನಗರ ಭಾಗದಲ್ಲಿ 2,250 ಕ್ಯಾಲೊರಿಯಿಂದ 2,240 ಕ್ಯಾಲೊರಿಗೆ ಇಳಿದಿದೆ. ಅಂದರೆ, ಗ್ರಾಮೀಣ ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದರೆ, ನಗರ ಪ್ರದೇಶದಲ್ಲಿ ಹೆಚ್ಚಳವಾಗಿದೆ. ಕುಟುಂಬದ ವೆಚ್ಚ ಮತ್ತು ಕ್ಯಾಲೊರಿ ಸೇವನೆ ಪ್ರಮಾಣದ ನಡುವೆ ನೇರ ಸಂಬಂಧವಿದೆ. ಕುಟುಂಬದ ತಿಂಗಳ ತಲಾವಾರು ಬಳಕೆ ವೆಚ್ಚ ಹೆಚ್ಚಾಗಿದ್ದರೆ, ಆ ಕುಟುಂಬದ ಕ್ಯಾಲೊರಿ ಸೇವನೆ ಪ್ರಮಾಣವೂ ಅಧಿಕವಾಗಿರುತ್ತದೆ.
2009–10ಕ್ಕೆ ಹೋಲಿಸಿದರೆ, ಅನೇಕ ರಾಜ್ಯಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಪ್ರೊಟೀನ್ ಸೇವನೆ ಹೆಚ್ಚಳವಾಗಿದೆ. 2009–10ರಿಂದ 2022–23ರ ನಡುವೆ ದೇಶದ ಗ್ರಾಮೀಣ ಭಾಗದಲ್ಲಿ ವ್ಯಕ್ತಿಯೊಬ್ಬರು ದಿನವೊಂದರಲ್ಲಿ ಸೇವಿಸುವ ಸರಾಸರಿ ಪ್ರೊಟೀನ್ ಪ್ರಮಾಣ 2.5 ಗ್ರಾಂ ಜಾಸ್ತಿಯಾಗಿದೆ. ನಗರ ಪ್ರದೇಶದಲ್ಲಿ 4.6 ಗ್ರಾಂ ಜಾಸ್ತಿಯಾಗಿದೆ.
ಹಾಗೆಯೇ, ಮೊಟ್ಟೆ, ಮಾಂಸ, ಮೀನು ಸೇವನೆಯ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ. ನಗರ ಪ್ರದೇಶಗಳ ಜನರು ಪ್ರೊಟೀನ್‌ಗಳ ಮುಖ್ಯ ಮೂಲಗಳಾದ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆಯಲ್ಲಿಯೂ ಗ್ರಾಮೀಣ ಪ್ರದೇಶದವರಿಗಿಂತ ಮುಂದಿದ್ದಾರೆ. ಧಾನ್ಯಗಳ ಬಳಕೆ ಗ್ರಾಮೀಣ ಭಾಗದಲ್ಲಿ ಏರಿಕೆ ಕಂಡಿದ್ದರೆ, ನಗರ ಪ್ರದೇಶದಲ್ಲಿ ಕಡಿಮೆಯಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳು ಮತ್ತು ವಿವಿಧ ಆದಾಯ ಗುಂಪುಗಳ ನಡುವಿನ ಪೋಷಕಾಂಶಗಳ ಬಳಕೆಯಲ್ಲಿನ ನಿರಂತರ ಅಸಮಾನತೆಗೆ ವರದಿಯು ಕನ್ನಡಿ ಹಿಡಿದಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಕನಿಷ್ಠ ಆದಾಯ ಹೊಂದಿರುವ ಶೇ 5ರಷ್ಟು ಮಂದಿ ಪ್ರತಿದಿನ ಕ್ರಮವಾಗಿ 1,696 ಕ್ಯಾಲೊರಿ ಮತ್ತು 1,688 ಕ್ಯಾಲೊರಿ ಸೇವನೆ ಮಾಡುತ್ತಿದ್ದಾರೆ. ಇದು ಆಹಾರ ತಜ್ಞರು ನಿಗದಿಪಡಿಸಿರುವ ಪ್ರತಿದಿನದ ಅಗತ್ಯ ಕ್ಯಾಲೊರಿ ಪ್ರಮಾಣಕ್ಕಿಂತ (2,000–3,000 ಕ್ಯಾಲೊರಿ) ಕಡಿಮೆ. ನಗರ ಪ್ರದೇಶದ, ಆದಾಯದಲ್ಲಿ ಅಗ್ರಸ್ಥಾನದಲ್ಲಿರುವ ಶೇ 1ರಷ್ಟು ಮಂದಿ ಪ್ರತಿದಿನ ಸರಾಸರಿ 3,092 ಕ್ಯಾಲೊರಿ ಸೇವನೆ ಮಾಡುತ್ತಿದ್ದಾರೆ.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲೂ ಒಟ್ಟಾರೆ ದೇಶದಲ್ಲಿ ಕಂಡು ಬರುವ ಚಿತ್ರಣವೇ ಇದೆ. ಕರ್ನಾಟಕದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರೊಟೀನ್ ಮತ್ತು ಕೊಬ್ಬಿನ ಅಂಶದ ಸೇವನೆ ಹೆಚ್ಚಾಗಿದೆ. 2009–10ರಿಂದ 2023–24ರ ನಡುವೆ ಗ್ರಾಮೀಣ ಭಾಗದಲ್ಲಿ ಪ್ರತಿ ವ್ಯಕ್ತಿ ದಿನದಲ್ಲಿ ಸೇವಿಸುವ ಸರಾಸರಿ ಪ್ರೊಟೀನ್ ಪ್ರಮಾಣ 8 ಗ್ರಾಂ ಹೆಚ್ಚಾಗಿದೆ. ನಗರ ಪ್ರದೇಶದಲ್ಲಿ 8.3 ಗ್ರಾಂ ಜಾಸ್ತಿಯಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಕಂಡು ಬಂದಂತೆ ರಾಜ್ಯದಲ್ಲೂ ಕೊಬ್ಬಿನ ಅಂಶ ಸೇವನೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 14 ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿ ವ್ಯಕ್ತಿಯೊಬ್ಬರು ಒಂದು ದಿನದಲ್ಲಿ ಸೇವಿಸುವ ಸರಾಸರಿ ಕೊಬ್ಬಿನ ಅಂಶ 19.2 ಗ್ರಾಂ ಹೆಚ್ಚಾಗಿದೆ. ನಗರ ಪ್ರದೇಶದಲ್ಲಿ 19.9 ಗ್ರಾಂ ಏರಿಕೆ ಕಂಡಿದೆ.
ಪ್ರೊಟೀನ್ ಮೂಲದಲ್ಲಿ ಕೊಂಚ ವ್ಯತ್ಯಾಸವಾಗಿದೆ. ಧಾನ್ಯಗಳ ಜೊತೆ, ಇತರ ಆಹಾರ ವಸ್ತುಗಳು, ಮೊಟ್ಟೆ, ಮೀನು, ಮಾಂಸ, ಹಾಲು ಮತ್ತು ಅದರ ಉತ್ಪನ್ನಗಳನ್ನು ಜನರು ಸೇವಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಈಗಲೂ ಧಾನ್ಯವೇ ಪ್ರೊಟೀನ್‌ನ ಪ್ರಧಾನ ಮೂಲ. ಪ್ರತಿ ದಿನ ವ್ಯಕ್ತಿಯೊಬ್ಬರು ಸೇವಿಸುವ ಸರಾಸರಿ ಪ್ರೊಟೀನ್‌ನಲ್ಲಿ ಶೇ 38ರಷ್ಟು ಪ್ರೊಟೀನ್ ಮೂಲ ಧಾನ್ಯಗಳೇ ಆಗಿವೆ. ನಗರದಲ್ಲಿ ಈ ಪ್ರಮಾಣ ಶೇ 33ರಷ್ಟಿದೆ.
ಪ್ರೊಟೀನ್‌ಗೆ ಹೋಲಿಸಿದರೆ ದೇಶದ ಜನರ ಕೊಬ್ಬಿನ ಅಂಶದ ಸೇವನೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. 14 ವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ವ್ಯಕ್ತಿಯೊಬ್ಬ ಪ್ರತಿ ದಿನ ಸೇವಿಸುವ ಸರಾಸರಿ ಕೊಬ್ಬಿನ ಅಂಶದ ಪ್ರಮಾಣ 17.3 ಗ್ರಾಂ ಜಾಸ್ತಿಯಾಗಿದ್ದರೆ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ 16.8ರಷ್ಟು ಏರಿಕೆ ಕಂಡಿದೆ.
ಕೆಲವು ಕೊಬ್ಬಿನ ಅಂಶಗಳು ಆರೋಗ್ಯಕ್ಕೆ ಪೂರಕವಾಗಿದ್ದರೂ ಇನ್ನೂ ಕೆಲವು ಆರೋಗ್ಯವನ್ನು ಹಾಳು ಮಾಡಬಲ್ಲದು ಎಂಬುದು ವೈದ್ಯರ ಹೇಳಿಕೆ. ಕೊಬ್ಬಿನ ಪ್ರಮಾಣ ದೇಹದಲ್ಲಿ ಹೆಚ್ಚಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅದು ಸ್ಥೂಲಕಾಯ, ರಕ್ತದೊತ್ತಡ, ಮಧುಮೇಹ ಮುಂತಾದ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ, ಕೊಬ್ಬಿನ ಅಂಶದ ಸೇವನೆಯನ್ನು ಕಡಿಮೆ ಮಾಡಬೇಕು ಎಂಬುದು ಅವರ ಸಲಹೆ.
ಜನರ ಆಹಾರಕ್ರಮದಲ್ಲಿ ಬದಲಾವಣೆಗಳಾಗಿರುವುದನ್ನು ವರದಿ ಉಲ್ಲೇಖಿಸಿದೆ. ಧಾನ್ಯಗಳು ಪ್ರೊಟೀನ್‌ನ ಪ್ರಾಥಮಿಕ ಮೂಲವಾಗಿಯೇ ಮುಂದುವರಿದಿದ್ದು, ಗ್ರಾಮೀಣ ಪ್ರದೇಶದಲ್ಲಿ ಅದರ ಪಾಲು ಶೇ 46 ಆಗಿದ್ದರೆ, ನಗರ ಪ್ರದೇಶದಲ್ಲಿಶೇ 39ರಷ್ಟು ಆಗಿದೆ. ಆದರೂ, ಒಟ್ಟಾರೆಯಾಗಿ ಜನ ಧಾನ್ಯಗಳ ಬಳಕೆಯನ್ನು ಕಡಿಮೆ ಮಾಡಿದ್ದು, ಗ್ರಾಮೀಣ ಭಾಗದಲ್ಲಿಶೇ 14ರಷ್ಟು ಇಳಿಕೆಯಾಗಿದ್ದರೆ, ನಗರ ಪ್ರದೇಶದಲ್ಲಿ ಶೇ 12ರಷ್ಟು ಇಳಿಕೆಯಾಗಿದೆ; ಮೊಟ್ಟೆ, ಮಾಂಸ, ಮೀನು, ಹಾಲು ಮತ್ತಿತರ ಆಹಾರ ಪದಾರ್ಥಗಳು ಧಾನ್ಯಗಳ ಕೊರತೆಯನ್ನು ತುಂಬಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.