ADVERTISEMENT

ಆಳ–ಅಗಲ | ರಾಜಕೀಯ ಅಸ್ಥಿರತೆ: ಸಾಲದ ಸುಳಿಯಲ್ಲಿ ಫ್ರಾನ್ಸ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 22:30 IST
Last Updated 14 ಸೆಪ್ಟೆಂಬರ್ 2025, 22:30 IST
ಫ್ರಾನ್ಸ್‌ನ ನಾಂಟ್‌ನಲ್ಲಿ ಮ್ಯಾಕ್ರನ್ ಆಡಳಿತದ ವಿರುದ್ಧ ಜನರು ಪ್ರತಿಭಟನೆ ನಡೆಸಿದರು
ಫ್ರಾನ್ಸ್‌ನ ನಾಂಟ್‌ನಲ್ಲಿ ಮ್ಯಾಕ್ರನ್ ಆಡಳಿತದ ವಿರುದ್ಧ ಜನರು ಪ್ರತಿಭಟನೆ ನಡೆಸಿದರು   
ನೇಪಾಳದ ತರುವಾಯ ಫ್ರಾನ್ಸ್‌ನಲ್ಲೂ ರಾಜಕೀಯ ಸ್ಥಿತ್ಯಂತರ ನಡೆದಿದೆ. ಫ್ರಾನ್ಸ್‌ನ ಪ್ರಧಾನಿಯಾಗಿದ್ದ ಫ್ರಾಂಕೋಯಿಸ್ ಬೈರೂ ಅವರ ಅಧಿಕಾರಾವಧಿ ಒಂಬತ್ತು ತಿಂಗಳಿಗೇ ಕೊನೆಗೊಂಡಿದೆ. ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಅವರು ತಮ್ಮ ಆಪ್ತ ಸೆಬಾಸ್ಟಿಯನ್ ಲೆಕೋರ್ನು ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದಾರೆ. ಅವರು ಅಧ್ಯಕ್ಷರಾದ ಎರಡು ವರ್ಷಗಳಲ್ಲಿ ಐದನೇ ಪ್ರಧಾನಿ ಅಧಿಕಾರಕ್ಕೆ ಬಂದಿದ್ದು, ಯಾರೇ ಪ್ರಧಾನಿಯಾದರೂ ಆಡಳಿತ ಸುಸೂತ್ರ ಅಲ್ಲ ಎನ್ನುವಂತಾಗಿದೆ. ಜನ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ಕ್ಷಣದಲ್ಲಿ ಅವು ವಿಕೋಪಕ್ಕೆ ಹೋಗಬಹುದಾದ ಸಾಧ್ಯತೆ ಇದೆ. ಫ್ರಾನ್ಸ್, ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ

ಫ್ರಾನ್ಸ್‌ನಲ್ಲಿ ಜನ ಅಲ್ಲಿನ ಸರ್ಕಾರದ ವಿರುದ್ಧ ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ ನ್ಯಾಷನಲ್ ಅಸೆಂಬ್ಲಿಯಲ್ಲಿ (ಸಂಸತ್) ವಿಶ್ವಾಸಮತ ಕಳೆದುಕೊಂಡು ಪ್ರಧಾನಿ ರಾಜೀನಾಮೆ ನೀಡಿ, ಹೊಸ ಪ್ರಧಾನಿ ಗದ್ದುಗೆ ಏರಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಕೇಂದ್ರಬಿಂದುವಾಗಿರುವುದು, ಜನರ ಸಿಟ್ಟಿಗೆ ಗುರಿಯಾಗಿರುವುದು ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್. 

ಯುರೋಪ್‌ನ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಫ್ರಾನ್ಸ್‌, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸಾಲದ ಸುಳಿಗೆ ಸಿಲುಕಿದೆ. ಇದು ರಾಜಕೀಯ ಅಸ್ಥಿರತೆಗೂ ಕಾರಣವಾಗಿದೆ. ಉದ್ಯಮ ಪರ ನಿಲುವು ಹೊಂದಿರುವ ಮ್ಯಾಕ್ರನ್‌ ಅವರ ಆರ್ಥಿಕ ನೀತಿಗಳು ಜನರ ಕಣ್ಣು ಕೆಂಪಾಗಿಸಿವೆ. ‘ಬ್ಲಾಕ್‌ ಎವೆರಿಥಿಂಗ್‌’ ಧ್ಯೇಯವಾಕ್ಯದ ಅಡಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಫ್ರಾನ್ಸ್ ಅಧ್ಯಕ್ಷರಾಗಿ ಮ್ಯಾಕ್ರನ್ ಅವರಿಗೆ ಇದು ಎರಡನೇ ಅವಧಿ. ಎರಡು ದಶಕಗಳಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾದ (2022) ಮೊದಲಿಗರು ಎನ್ನುವ ಹಿರಿಮೆಗೆ ಅವರು ಪಾತ್ರರಾಗಿದ್ದವರು. ಅದೇ ಮೊದಲ ಬಾರಿಗೆ ಬಲಪಂಥೀಯರು ಸೆಂಟ್ರಿಸ್ಟ್ ಪಕ್ಷದ ಮುಖಂಡರಾಗಿದ್ದ ಮ್ಯಾಕ್ರನ್ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಮುಂದೆ ನಡೆದ ಸಂಸತ್ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ರಾಜಕೀಯ ಅಸ್ಥಿರತೆ ಸೃಷ್ಟಿಯಾಯಿತು. ಅಂಥ ವಾತಾವರಣದಲ್ಲಿ ಮತ್ತು ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಮ್ಯಾಕ್ರನ್ ಅವರು ಮಿಷೆಲ್ ಬರ್ನಿಯರ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಆದರೆ, ಮೂರೇ ತಿಂಗಳಲ್ಲಿ ಅವರು ರಾಜೀನಾಮೆ ನೀಡಬೇಕಾಗಿ ಬಂತು.

ADVERTISEMENT

ಅಲ್ಪ ಬಹುಮತದ ಸರ್ಕಾರದಲ್ಲಿ ಬಜೆಟ್‌ಗೆ ಮತ್ತು ಮಸೂದೆಗಳಿಗೆ ಸಂಸತ್ತಿನ ಅಂಗೀಕಾರ ಪಡೆಯುವುದೇ ಸವಾಲಿನ ಕೆಲಸವಾಗಿದೆ. ಇತ್ತೀಚೆಗೆ ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದ ಫ್ರಾಂಕೋಯಿಸ್ ಬೈರೂ ಅವರ ವಿಚಾರ ದಲ್ಲಿಯೂ ಇದೇ ಪುನರಾವರ್ತನೆಯಾಗಿದೆ. ಪ್ರಧಾನಿಯಾದ ಒಂಬತ್ತು ತಿಂಗಳಲ್ಲಿಯೇ ಅವರು ವಿಶ್ವಾಸ ಮತ ಸೋತಿದ್ದಾರೆ.

ಆರ್ಥಿಕತೆಯನ್ನು ಕಾಪಾಡಲು ಬೈರೂ ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದರು. ಜನಕಲ್ಯಾಣ ಕಾರ್ಯಕ್ರಮಗಳು, ಆರೋಗ್ಯ ಸೇವೆಗಳು, ಪಿಂಚಣಿ ಇತ್ಯಾದಿಗಳನ್ನು ಕಡಿತ ಮಾಡಿದರು. ಈ ಮೂಲಕ ಸುಮಾರು ₹4.55 ಲಕ್ಷ ಕೋಟಿಯನ್ನು ಉಳಿಸುವುದು ಅವರ ಗುರಿಯಾಗಿತ್ತು. ಆದರೆ, ಜನ ಇದರಿಂದ ಕೆರಳಿದರು. ಅಲ್ಪ ಬಹುಮತದ ಸರ್ಕಾರದ ಪ್ರಧಾನಿಯು ಜನರ ಸವಲತ್ತುಗಳನ್ನು ಕಡಿತ ಮಾಡಲು ಮುಂದಾಗಿದ್ದರ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಯಿತು. ಕಲ್ಯಾಣ ಕಾರ್ಯಕ್ರಮಗಳ ಅನುದಾನ ಕಡಿತ ಮಾಡುವುದಕ್ಕಿಂತಲೂ ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ವಿಧಿಸಿ ಎಂದು ಕೆಲವರು ಒತ್ತಾಯಿಸಿದರು. ಆದರೂ ಬೈರೂ ಅದಕ್ಕೆ ಕಿವಿಗೊಡಲಿಲ್ಲ. ಸಂಸತ್ತಿನಲ್ಲಿ ಅವರ ವಿರುದ್ಧ ಅವಿಶ್ವಾಸ ಮಂಡಿಸಲಾಯಿತು. ಬಹುಮತ ಸಾಬೀತುಮಾಡಲಾಗದೇ ಪ್ರಧಾನಿ ಪದವಿಗೆ ರಾಜೀನಾಮೆ ನೀಡಿದರು. ಎಡಪಂಥೀಯ ಸೋಷಿಯಲಿಸ್ಟರು ಮತ್ತು ಬಲಪಂಥೀಯ ರಿಪಬ್ಲಿಕನ್ನರು ಇಬ್ಬರು ಬೈರೂ ಅವರ ನಿರ್ಗಮನಕ್ಕೆ ಕಾರಣರಾದರು.

‌ಹಿಂದೊಮ್ಮೆ ಬಲಪಂಥೀಯ ರಿಪಬ್ಲಿಕನ್ ಪಕ್ಷದ ಜತೆಗೆ ಗುರುತಿಸಿಕೊಂಡಿದ್ದ, ನಂತರ ಮ್ಯಾಕ್ರನ್ ಅವರ ಸೆಂಟ್ರಿಸ್ಟ್ ಪಕ್ಷ ಸೇರಿ, ಅವರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಸೆಬಾಸ್ಟಿಯನ್ ಲೆಕೋರ್ನು ಫ್ರಾನ್ಸ್‌ನ ನೂತನ ಪ್ರಧಾನಿಯಾಗಿದ್ದಾರೆ. 2026ರಲ್ಲಿ ಬಜೆಟ್ ಮಂಡಿಸಬೇಕಿದ್ದು, ಅದಕ್ಕೆ ಬಹುಮತದ ಅಂಗೀಕಾರ ಪಡೆಯುವ ಸವಾಲು ಅವರ ಮುಂದಿದೆ. ಅವರ ವಿರುದ್ಧವೂ ಅವಿಶ್ವಾಸ ಮಂಡಿಸಿ, ಅವರನ್ನೂ ಕೆಳಗಿಳಿಸುವುದಾಗಿ ಎಡಪಂಥೀಯರ ಕೂಟವು ಈಗಾಗಲೇ ಹೇಳಿದೆ. ಆದರೆ, ಬಲಪಂಥೀಯರ ನ್ಯಾಷನಲ್ ರ್‍ಯಾಲಿ (ಆರ್‌ಎನ್‌) ಪಕ್ಷವು ಲೆಕೋರ್ನು ಅವರನ್ನು ಈ ಬಾರಿ ಬೆಂಬಲಿಸುವುದಾಗಿಯೂ ಬಜೆಟ್‌ಗಾಗಿ ಅವರೊಂದಿಗೆ ಕೆಲಸ ಮಾಡುವುದಾಗಿಯೂ ತಿಳಿಸಿದೆ. 

ಈ ಎಲ್ಲ ಬೆಳವಣಿಗೆಗಳ ನಡುವೆಯೇ, ದೇಶದಲ್ಲಿ ಮ್ಯಾಕ್ರನ್ ರಾಜೀನಾಮೆ ನೀಡಬೇಕು, ಅಧ್ಯಕ್ಷರ ಚುನಾವಣೆ ನಡೆಸಬೇಕು ಎಂದು ಎಡಪಂಥೀಯರ ಕೂಟವು ಒತ್ತಾಯಿಸುತ್ತಿದೆ. ಬಲಪಂಥೀಯರ ಆರ್‌ಎನ್ ಕೂಟವು ಸಂಸತ್ತನ್ನು ವಿಸರ್ಜಿಸಿ, ಚುನಾವಣೆ ನಡೆಸಬೇಕು ಎಂದು ಪಟ್ಟು ಹಿಡಿದಿದೆ. ಇನ್ನೊಂದೆಡೆ, 2027ರವರೆಗೆ ನಾನೇ ಅಧ್ಯಕ್ಷನಾಗಿರುವೆ ಎಂದು ಮ್ಯಾಕ್ರನ್ ಪುನರುಚ್ಚರಿಸುತ್ತಲೇ ಇದ್ದಾರೆ. ಸಂಸತ್ ಚುನಾವಣೆ ಮತ್ತು ಅಧ್ಯಕ್ಷರ ಚುನಾವಣೆ ಸದ್ಯಕ್ಕೆ ಅನುಮಾನ; ಒಂದು ವೇಳೆ ಈಗ ಸಂಸತ್ ಚುನಾವಣೆ ನಡೆದರೂ ಆಗಲೂ ಯಾವುದೇ ಪಕ್ಷಕ್ಕೆ ಬಹುಮತ ಬಾರದೇ ಇರುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. ಫ್ರಾನ್ಸ್‌ನ ಆರ್ಥಿಕ ಸಂಕಷ್ಟ ಮತ್ತು ರಾಜಕೀಯ ಅಸ್ಥಿರತೆ ಕನಿಷ್ಠ ಎಂದರೂ 2027ರವರೆಗೆ–ಮುಂದಿನ ಅಧ್ಯಕ್ಷೀಯ ಚುನಾವಣೆ ನಡೆಯುವವರೆಗೆ– ಹೀಗೆಯೆ ಮುಂದುವರಿಯಲಿದೆ ಎನ್ನಲಾಗುತ್ತಿದೆ.

ಆರ್ಥಿಕ ಸಂಕಷ್ಟಕ್ಕೆ ಕಾರಣಗಳು

ಫ್ರಾನ್ಸ್ ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿದೆ. ದೇಶದಲ್ಲಿ ದುಡಿಯುವ ಯುವಜನರು ಕಡಿಮೆ ಇದ್ದು, ಪಿಂಚಣಿ ಪಡೆಯುವ ಹಿರಿಯರು ಹೆಚ್ಚಾಗಿದ್ದಾರೆ. ಸರ್ಕಾರಕ್ಕೆ ತೆರಿಗೆ ಕಟ್ಟುವವರು ಕಡಿಮೆ ಇದ್ದು, ಹೆಚ್ಚು ಮಂದಿ ಪಿಂಚಣಿ ಪಡೆಯುತ್ತಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ನಂತರ ಸರ್ಕಾರದ ಖರ್ಚು ಹೆಚ್ಚಾಗಿದ್ದು, ಆದಾಯ ಕಡಿಮೆ ಇದೆ. ಹೀಗಾಗಿ ತನ್ನ ಅಗತ್ಯಗಳಿಗಾಗಿ ಸಾಲ ಮಾಡುತ್ತಾ ಬಂದಿದ್ದು, ಅದೀಗ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಸಾಲದ ಬಡ್ಡಿಯಾಗಿ ಬೃಹತ್ ಮೊತ್ತವನ್ನು ವಿನಿಯೋಗಿಸಲಾಗುತ್ತಿದ್ದು, ಅದು ದೇಶದ ಸೇನೆ ಮತ್ತು ಶಿಕ್ಷಣ ಕ್ಷೇತ್ರದ ಬಜೆಟ್ ಅನುದಾನಕ್ಕೆ ಸಮನಾಗಿದೆ.

ಇತಿಹಾಸ ಪುನರಾವರ್ತನೆ

1950ರ ದಶಕದಲ್ಲಿ ನಾಲ್ಕನೇ ರಿಪಬ್ಲಿಕನ್‌ ಸರ್ಕಾರದ ಆಡಳಿತದ ಅವಧಿಯಲ್ಲಿ ಫ್ರಾನ್ಸ್‌ನಲ್ಲಿ ಈಗಿನ ಪರಿಸ್ಥಿತಿಯೇ ನಿರ್ಮಾಣವಾಗಿತ್ತು. ಅಲ್ಜೀರಿಯಾ ಯುದ್ಧದ ಸಮಯದಲ್ಲಿ ಈ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಅಧಿಕಾರದಲ್ಲಿದ್ದವರ ನಡುವಣ ವೈಮನಸ್ಸು, ದಾರಿ ತಪ್ಪಿದ ಆಡಳಿತದ ಕಾರಣಕ್ಕೆ 1958ರ ಮೇ 13ರಂದು ಕ್ಷಿಪ್ರ ಕ್ರಾಂತಿ ನಡೆದು, ನಾಲ್ಕನೇ ರಿಪಬ್ಲಿಕನ್‌ ಸರ್ಕಾರ ಪತನಗೊಂಡಿತ್ತು. ನಂತರ ಚಾರ್ಲ್ಸ್‌ ಡಿ ಗೋಲ್‌ ನೇತೃತ್ವದಲ್ಲಿ ಐದನೇ ರಿಪಬ್ಲಿಕನ್‌ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ದೇಶದಲ್ಲಿ ರಾಜಕೀಯ ಸ್ಥಿರತೆ ತರಲು ಹೊಸ ಸರ್ಕಾರ ಕ್ರಮಗಳನ್ನು ಕೈಗೊಂಡಿತ್ತು. ಆ ನಂತರದ ಏಳು ದಶಕಗಳಲ್ಲಿ ಫ್ರಾನ್ಸ್‌ನಲ್ಲಿ ಈ ಮಟ್ಟಿನ ಆರ್ಥಿಕ, ರಾಜಕೀಯ ಬಿಕ್ಕಟ್ಟು ನಿರ್ಮಾಣವಾಗಿರಲಿಲ್ಲ. 

ಪ್ರಸ್ತುತ ಫ್ರಾನ್ಸ್‌ ರಾಜಕಾರಣವು ಮೂರು ಗುಂಪುಗಳಾಗಿ ಹೋಳಾಗಿದ್ದು, ಮೂರು ಬಣದವರು ‍ಪರಸ್ಪರ ಎದುರಾಳಿಗಳಾಗಿ ಬದಲಾಗಿದ್ದಾರೆ. ರಾಜಕೀಯ ನಾಯಕರ ನಡುವೆ ರಾಜಿ ಮಾಡಿಕೊಳ್ಳುವ ಧೋರಣೆ ಕಾಣುತ್ತಿಲ್ಲ. ಸದಾ ಬಿಕ್ಕಟ್ಟು ಇರುವಂತೆ ನೋಡಿಕೊಳ್ಳುವುದು ನಿಯಮವೇನೋ ಎಂಬಂತಾಗಿದೆ ಎಂದು ಹೇಳುತ್ತಾರೆ ರಾಜಕೀಯ ವಿಶ್ಲೇಷಕರು. 

‘1958ರಲ್ಲಿ ಗೋಲ್‌ ಮೂಲಕ ಪರ್ಯಾಯ ವ್ಯವಸ್ಥೆ ಇತ್ತು. ದೇಶವನ್ನು ಸ್ಥಿರತೆಯತ್ತ ಕೊಂಡೊಯ್ಯಲು ಯೋಜನೆಗಳಿದ್ದವು. ಈಗ ಅವರಿಲ್ಲ. ಬದಲಿಗೆ ಘರ್ಷಣೆಗೆ ಸಜ್ಜಾಗಿರುವ ಅಧ್ಯಕ್ಷ, ವಿಭಜನೆಗೊಂಡ ಸಂಸತ್ತು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ತಾನಿನ್ನೂ ಸಮರ್ಥನೆಂದು ಸಾಬೀತುಪಡಿಸಲು ಕಾಯುತ್ತಿರುವ ಗಣರಾಜ್ಯಗಳು ಮಾತ್ರ ಇವೆ’ ಎಂದು ಹೇಳುತ್ತಾರೆ ವಿಶ್ಲೇಷಕರು. 

ಕ್ರೆಡಿಟ್‌ ರೇಟಿಂಗ್ ಇಳಿಕೆ

ಫ್ರಾನ್ಸ್‌ನಲ್ಲಿ ಹೊಸ ಪ್ರಧಾನಿ ಅಧಿಕಾರ ಸ್ವೀಕರಿಸಿದ ಬೆನ್ನಿಗೇ, ಅಮೆರಿಕದ ರೇಟಿಂಗ್‌ ಏಜೆನ್ಸಿಯಾಗಿರುವ ‘ಫಿಚ್‌’ ದೇಶದ ಕ್ರೆಡಿಟ್‌ ರೇಟಿಂಗ್‌ ಅನ್ನು ಇಳಿಸಿದೆ. ಸಾಲವನ್ನು ಮರುಪಾವತಿ ಮಾಡುವ ಫ್ರಾನ್ಸ್‌ನ ಸಾಮರ್ಥ್ಯವನ್ನು ‘ಎಎ–’ನಿಂದ ‘ಎ+’ಗೆ ಕುಗ್ಗಿಸಿದೆ.

ಹದಗೆಡುತ್ತಿರುವ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ತಕ್ಷಣ ಕ್ರಮ ಕೈಗೊಳ್ಳದೇ ಇದ್ದರೆ 2027ರವರೆಗೂ ದೇಶದ ಸಾಲದ ಹೊರೆ ಹೆಚ್ಚಾಗುತ್ತಲೇ ಇರಲಿದೆ ಎಂದೂ ಅದು ಎಚ್ಚರಿಸಿದೆ.

ಅಧ್ಯಕ್ಷ ಮ್ಯಾಕ್ರನ್ ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳು, ಹಣಕಾಸಿನ ಕೆಟ್ಟ ನಿರ್ವಹಣೆಯೇ ಇದಕ್ಕೆ ಕಾರಣ ಎಂದು ವಿರೋಧ ಪಕ್ಷಗಳು ದೂರಿವೆ.

ಪ್ರಾನ್ಸ್‌ ಆರ್ಥಿಕತೆ ಅಂಕಿ ಅಂಶಗಳಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.