ADVERTISEMENT

ವಿದೇಶ ವಿದ್ಯಮಾನ: ಗಾಜಾದಲ್ಲಿ ಮಕ್ಕಳ ಬಾಲ್ಯ ಭೀಕರ! ಗುಟುಕು ನೀರಿಗೂ ಹಾಹಾಕಾರ

ಆಹಾರ, ಗುಟುಕು ನೀರಿಗಾಗಿ ಹಾಹಾಕಾರ; ಯುದ್ಧದ ಭೀಕರತೆ, ‌ಹಿಂಸಾಚಾರ, ಸಾವು–ನೋವಿನಿಂದ ತತ್ತರ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 0:21 IST
Last Updated 20 ಆಗಸ್ಟ್ 2025, 0:21 IST
<div class="paragraphs"><p>ಹಸಿವು ತಡೆಯಲಾಗುತ್ತಿಲ್ಲ ಊಟ ಕೊಡಿ... ಗಾಜಾ ಪಟ್ಟಿಯ ನಿರಾಶ್ರಿತರ ಶಿಬಿರವೊಂದರಲ್ಲಿ ಆಹಾರಕ್ಕಾಗಿ ಮಕ್ಕಳು ಪಾತ್ರೆಗಳನ್ನು ಒಡ್ಡಿದ‌ ಕ್ಷಣ </p></div>

ಹಸಿವು ತಡೆಯಲಾಗುತ್ತಿಲ್ಲ ಊಟ ಕೊಡಿ... ಗಾಜಾ ಪಟ್ಟಿಯ ನಿರಾಶ್ರಿತರ ಶಿಬಿರವೊಂದರಲ್ಲಿ ಆಹಾರಕ್ಕಾಗಿ ಮಕ್ಕಳು ಪಾತ್ರೆಗಳನ್ನು ಒಡ್ಡಿದ‌ ಕ್ಷಣ

   

ಸುಮಾರು ಎರಡು ವರ್ಷದಿಂದ ನಡೆಯುತ್ತಿರುವ ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದಿಂದ ಗಾಜಾ ಪಟ್ಟಿಯ ಲಕ್ಷಾಂತರ ಮಕ್ಕಳ ಬದುಕು ಜರ್ಜರಿತವಾಗಿದೆ; ಸ್ವಲ್ಪ ಆಹಾರ, ಗುಟುಕು ನೀರಿಗಾಗಿ ಹಾಹಾಕಾರ ನಡೆಯುತ್ತಿದೆ. ಅನೇಕ ಮಕ್ಕಳಿಗೆ ಅವರ ಪೋಷಕರೇ ಉಳಿದಿಲ್ಲ. ಕಣ್ಣ ಮುಂದೆ ಪ್ರೀತಿಪಾತ್ರರ ಸಾವು, ಹಿಂಸಾಚಾರ, ಬಾಂಬ್, ಕ್ಷಿಪಣಿಗಳ ನಿರಂತರ ದಾಳಿ, ಯಾವ ಕ್ಷಣ ಏನಾಗುವುದೋ ಎನ್ನುವ ಭಯ, ಶಿಬಿರದಿಂದ ಶಿಬಿರಕ್ಕೆ ಅಲೆಯುವ ಬದುಕು; ಭೂಮಿಯ ಮೇಲೆ ಮನುಷ್ಯನಿಗೆ ಎದುರಾಗಬಹುದಾದ ಸಕಲ ಸವಾಲುಗಳನ್ನೂ, ಸಂಕಷ್ಟಗಳನ್ನೂ ಬಾಲ್ಯದಲ್ಲೇ ಅನುಭವಿಸುತ್ತಿರುವ, ಯುದ್ಧದ ಆತ್ಯಂತಿಕ ಪರಿಣಾಮಗಳಿಗೆ ಒಳಗಾಗಿರುವ ಗಾಜಾ ‍ಪಟ್ಟಿಯ ಮಕ್ಕಳ ದುರ್ಭರ ಪರಿಸ್ಥಿತಿಯನ್ನು ವಿವರಿಸಲು ಪದಗಳೇ ಲಭ್ಯವಿಲ್ಲ..

–––––––––––––––––  

ADVERTISEMENT

‘ನಿನಗೆ ಕ್ರೆಯಾನ್‌ಗಳು ಬೇಕೋ, ಬ್ರೆಡ್ ಬೇಕೋ ಎಂದು ಕೇಳಿದರೆ, ನನ್ನ ಆಯ್ಕೆ ಬ್ರೆಡ್’

– ಇದು ಗಾಜಾ ಪಟ್ಟಿಯ 12 ವರ್ಷದ ರಹ್ಮಾ ಅಬು ಅಬೆದ್‌ಳ ಮಾತು. ಆಟ ಎಂದರೆ ಊಟ, ನಿದ್ದೆ ಎಲ್ಲವನ್ನೂ ಮರೆಯುವ ಮಕ್ಕಳ ನಡುವೆ ರಹ್ಮಾಳ ಉತ್ತರ ವಿಚಿತ್ರ ಅನ್ನಿಸಬಹುದು. ಆದರೆ, ರಹ್ಮಾಳ ಮಾತಿನಲ್ಲಿ ಗಾಜಾ ಪಟ್ಟಿಯ ಮಕ್ಕಳ ಭೀಕರ ಚಿತ್ರಣವಿದೆ. 

ಇಸ್ರೇಲ್–ಪ್ಯಾಲೆಸ್ಟೀನ್ ನಡುವಿನ ಸಂಘರ್ಷದಲ್ಲಿ ದಕ್ಷಿಣ ಗಾಜಾದಲ್ಲಿದ್ದ ರಹ್ಮಾಳ ಮನೆ ನೆಲಕಚ್ಚಿದೆ. ತನ್ನ ಐವರು ಒಡಹುಟ್ಟಿದವರು ಮತ್ತು ಪೋಷಕರೊಂದಿಗೆ ಆಕೆ ಮೀನುಗಾರಿಕಾ ಉಪಕರಣಗಳ ಶೆಡ್‌ನಲ್ಲಿ ವಾಸವಾಗಿದ್ದಾಳೆ. ರಹ್ಮಾ ಅವರಂತೆಯೇ ಅನೇಕ ನಿರಾಶ್ರಿತ ಕುಟುಂಬಗಳೂ ಅಲ್ಲಿ ಆಶ್ರಯ ಪಡೆದಿವೆ. ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುವ ರಹ್ಮಾ, ದಿನದ ಬಹುಸಮಯವನ್ನು ಹತ್ತಿರದ ಸಮುದ್ರತೀರದಲ್ಲಿ ಕಳೆಯುತ್ತಾಳೆ. ಒಳ್ಳೆಯ ಬಟ್ಟೆ, ಒಳ್ಳೆಯ ಊಟ ಎಂದರೆ ಹೇಗಿರುತ್ತವೆ ಎನ್ನುವುದರ ನೆನಪೂ ಆಕೆಗೆ ಉಳಿದಿಲ್ಲ. ಮಾಂಸ ತಿನ್ನುವುದು ಅವಳಿಗೀಗ ಒಂದು ಕನಸು.

ಇದು ರಹ್ಮಾ ಒಬ್ಬಳ ಸ್ಥಿತಿ ಅಲ್ಲ; ಗಾಜಾ ಪಟ್ಟಿಯಲ್ಲಿರುವ 11 ಲಕ್ಷ ಮಕ್ಕಳ ದಾರುಣ ಪರಿಸ್ಥಿತಿ. 22 ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷದಿಂದ ಗಾಜಾದಲ್ಲಿ ಬಾಲ್ಯ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಇಲ್ಲಿನ ಬಹುತೇಕ ಮಕ್ಕಳು ಎರಡು ವರ್ಷದಿಂದ ಶಾಲೆಯ ಮುಖವನ್ನೇ ಕಂಡಿಲ್ಲ. ಈ ಭಾಗದ ಶೇ 90ರಷ್ಟು ಶಾಲೆಗಳು ನೆಲಕ್ಕುರುಳಿದ್ದರೆ, ಅಳಿದುಳಿದ ಶಾಲೆಗಳು ನಿರಾಶ್ರಿತ ಶಿಬಿರಗಳಾಗಿ ಮಾರ್ಪಟ್ಟಿವೆ.

ಮಕ್ಕಳಿಗೆ ಹೊಟ್ಟೆತುಂಬ ಊಟ, ಮೈಮುಚ್ಚುವಷ್ಟು ಬಟ್ಟೆ, ದಾಹ ತೀರುವಷ್ಟು ಕುಡಿಯುವ ನೀರು ಕೂಡ ದುರ್ಲಭವಾಗಿವೆ; ಹಸಿವು, ಪದೇ ಪದೇ ಆಶ್ರಯ ಶಿಬಿರಗಳ ಬದಲಾವಣೆ, ಬಾಂಬ್, ಕ್ಷಿಪಣಿ ದಾಳಿಗಳಿಂದ ಅವರು ತೀವ್ರ ದೈಹಿಕ ಮತ್ತು ಮಾನಸಿಕ ಕ್ಷೋಭೆಗೆ ಒಳಗಾಗಿದ್ದು, ಅವರಿಗೆ ತಕ್ಷಣ ವೈದ್ಯಕೀಯ ನೆರವು ಬೇಕಾಗಿದೆ. ಯುದ್ಧದ ಭೀಕರತೆ, ‌ಹಿಂಸಾಚಾರ, ಪ್ರೀತಿಪಾತ್ರರ ಸಾವು, ಭಯ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಇಲ್ಲಿನ ಮಕ್ಕಳು ಜೀವಚ್ಛವಗಳಾಗಿದ್ದಾರೆ.  

ಮಹಿಳೆಯರು, ಅದರಲ್ಲೂ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಗಾಜಾ ಪಟ್ಟಿಯಲ್ಲಿ ನಿರ್ಮಾಣವಾಗಿರುವ ಮಾನವೀಯ ಬಿಕ್ಕಟ್ಟಿನ ಮೊದಲ ಬಲಿಪಶುಗಳಾಗಿದ್ದಾರೆ. ಈಗಾಗಲೇ ಸಾವಿರಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಅದಕ್ಕಿಂತ ಹೆಚ್ಚು ಮಂದಿ ಗಾಯಾಳುಗಳಾಗಿ ಸರಿಯಾದ ಚಿಕಿತ್ಸೆಯೂ ಸಿಗದೇ ನರಳುತ್ತಿದ್ದಾರೆ. ಯುದ್ಧದಿಂದ ನೇರವಾಗಿ ಸತ್ತವರಂತೆಯೇ ಊಟ ಸಿಗದೇ ಸತ್ತವರು, ಕಾಯಿಲೆಗಳಿಂದ ಸತ್ತ ಮಕ್ಕಳ ಸಂಖ್ಯೆಯೂ ಗಣನೀಯವಾಗಿದೆ. ಏರುತ್ತಿರುವ ಉಷ್ಣಾಂಶ ಕೂಡ ಅವರಿಗೆ ಶಾ‍ಪವಾಗಿ ಪರಿಣಮಿಸಿದೆ. ಸುಮಾರು 17 ಸಾವಿರ ಮಕ್ಕಳು ತಮ್ಮ ಪೋಷಕರಿಂದ ದೂರವಾಗಿದ್ದಾರೆ. ಇಸ್ರೇಲ್ 11 ತಿಂಗಳು ಆಹಾರ ಪದಾರ್ಥಗಳ ಸಾಗಣೆಯನ್ನು ನಿರ್ಬಂಧಿಸಿದ್ದರಿಂದ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತೀವ್ರ ಅಪೌಷ್ಟಿಕತೆಯ ಅಪಾಯ ಎದುರಿಸುತ್ತಿದ್ದಾರೆ.

ಆಹಾರ ಪದಾರ್ಥಗಳ ಲಭ್ಯತೆಯೇ ದೊಡ್ಡ ಸಮಸ್ಯೆಯಾಗಿದೆ. ಬೇಕರಿಗಳನ್ನು ಮುಚ್ಚಲಾಗಿದೆ. ಆಹಾರ ಧಾನ್ಯಗಳ ಬೆಲೆ ಶೇ 700ರಷ್ಟು ಹೆಚ್ಚಾಗಿದ್ದು, ಹಸಿವಿನ ವಿರಾಟ್ ಸ್ವರೂಪವು ಇಲ್ಲಿ ಕಂಡುಬರುತ್ತಿದೆ. ದಿನಕ್ಕೆ ಒಂದು ಹೊತ್ತು ಕೂಡ ಊಟ ಸಿಗದವರ ಸಂಖ್ಯೆ ದೊಡ್ಡದಿದೆ. ಹಸಿವು ತಾಳಲಾಗದೇ ಮಕ್ಕಳು ಆಕ್ರಂದನ ಮಾಡುವುದು, ‍ಪೋಷಕರು ತಮ್ಮ ಮಕ್ಕಳಿಗಾಗಿ ಹಿಡಿ ಅನ್ನ ನೀಡುವಂತೆ ಅಧಿಕಾರಿಗಳನ್ನು ಬೇಡಿಕೊಳ್ಳುವುದು ಇಲ್ಲಿ ಸಾಮಾನ್ಯ ದೃಶ್ಯಗಳಾಗಿವೆ. 

ಕೆಲವು ಸ್ವಯಂ ಸೇವಾ ಸಂಸ್ಥೆಗಳು, ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳು ಇಲ್ಲಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟನ್ನು ಶಮನ ಮಾಡಲು ಒಂದಿಷ್ಟು ಪ್ರಯತ್ನ ನಡೆಸುತ್ತಿವೆ. ಅದಕ್ಕಾಗಿ ಹಲವು ದೇಶಗಳು ಧನಸಹಾಯ ಮಾಡುತ್ತಿವೆ. ಆದರೆ, ಇಲ್ಲಿನ ಪರಿಸ್ಥಿತಿಯ ತೀವ್ರತೆಗೆ ತಕ್ಕಂತೆ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ರಕ್ಷಣಾ ಕಾರ್ಯದಲ್ಲಿ, ಆರೋಗ್ಯ ಸೇವೆಗಳಲ್ಲಿ ತೊಡಗಿರುವ ಸಿಬ್ಬಂದಿಯೂ ಹಸಿದ ಹೊಟ್ಟೆಯಲ್ಲಿಯೇ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಆಹಾರ ಪದಾರ್ಥ, ಪರಿಹಾರ ಸಾಮಗ್ರಿಯನ್ನು ಹೊತ್ತ ಟ್ರಕ್‌ಗಳು ಆಗಮಿಸುತ್ತಿದ್ದಂತೆಯೇ ಜನ ಅವುಗಳನ್ನು ಮುತ್ತಿಕೊಳ್ಳುವ, ನಿರಾಶ್ರಿತರಿಗೆ ಪೂರೈಸಲಾಗುವ ಆಹಾರಕ್ಕಾಗಿ ಪೈಪೋಟಿ ನಡೆಸುವ ಚಿತ್ರಗಳು, ವಿಡಿಯೊಗಳು ಅಲ್ಲಿನ ಪರಿಸ್ಥಿತಿಯ ತೀವ್ರತೆಯನ್ನು ಹೇಳುತ್ತಿವೆ.

ಆಹಾರಕ್ಕಾಗಿ, ಜೀವ ಉಳಿಸುವಂಥ ಮಾನವೀಯ ನೆರವಿಗಾಗಿ ಆಸೆಯಿಂದ ಎದುರುನೋಡುತ್ತಿರುವ, ಎಲುಬಿನ ಹಂದರವಾಗಿರುವ ಮಕ್ಕಳ ದೈನ್ಯ, ನೋವು ತುಂಬಿದ ಕಣ್ಣುಗಳು ಗಾಜಾ ಪಟ್ಟಿಯ ಪರಿಸ್ಥಿತಿಗೆ, ಮನುಷ್ಯ ನಿರ್ಮಿತ ಬಿಕ್ಕಟ್ಟಿನ ತೀವ್ರತೆಗೆ, ದೇಶ–ದೇಶಗಳ ನಡುವಿನ ಯುದ್ಧ, ಅಸಹನೆ, ಆಕ್ರಮಣಗಳಿಂದ ಉಂಟಾಗುವ ಪರಿಣಾಮಗಳಿಗೆ ಸಂಕೇತದಂತಿವೆ.  

ನೆರವು ತಡೆಯುತ್ತಿರುವ ಇಸ್ರೇಲ್‌

ಗಾಜಾ ಪಟ್ಟಿಯ ಶೇ 86ರಷ್ಟು ಭೂಭಾಗದ ಮೇಲೆ ನಿಯಂತ್ರಣ ಹೊಂದಿರುವ ಇಸ್ರೇಲ್‌, ಹಸಿವಿನಿಂದ ಬಳಲುತ್ತಿರುವ ನಿರಾಶ್ರಿತ ಪ್ಯಾಲೆಸ್ಟೀನಿಯನ್ನರಿಗೆ ಆಹಾರ ವಸ್ತುಗಳು ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಪೂರೈಸುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘಟಕ ಆರೋಪಿಸಿದೆ. ಕಳೆದ ಕೆಲವು ವಾರಗಳಿಂದ ಗಾಜಾ ಪಟ್ಟಿಗೆ ಸ್ವಲ್ಪ ಪ್ರಮಾಣದಲ್ಲಿ ನೆರವು ತಲುಪುವುದಕ್ಕೆ ಮಾತ್ರ ಇಸ್ರೇಲ್‌ ಅವಕಾಶ ನೀಡಿದೆ. ಆದರೆ, ಅಲ್ಲಿ ಹೆಚ್ಚುತ್ತಿರುವ ಹಸಿವನ್ನು ತಡೆಯಲು ಇದು ಸಾಕಾಗುತ್ತಿಲ್ಲ ಎಂದು ಅದು ಹೇಳಿದೆ. ಯುದ್ಧ ಆರಂಭವಾದ, 2023ರ ಅಕ್ಟೋಬರ್‌ 7ಕ್ಕೂ ಮೊದಲು ಪ್ರತಿ ದಿನ 500 ಟ್ರಕ್‌ಗಳು ಗಾಜಾವನ್ನು ಪ್ರವೇಶಿಸುತ್ತಿದ್ದವು. ಅಂದರೆ ಪ್ರತಿ ತಿಂಗಳು 15 ಸಾವಿರದಷ್ಟು ಟ್ರಕ್‌ಗಳು ನೆರವಿನ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದವು. ಯುದ್ಧದ ನಂತರ ಇದಕ್ಕೆ ಇಸ್ರೇಲ್‌ ತಡೆಯೊಡ್ಡಿತ್ತು. ಕಡಿಮೆ ಸಂಖ್ಯೆಯ ಟ್ರಕ್‌ಗಳಿಗಷ್ಟೇ ಅವಕಾಶ ನೀಡುತ್ತಿತ್ತು. 

ಈಗ ಅಂತರರಾಷ್ಟ್ರೀಯ ಒತ್ತಡದ ಬಳಿಕ ಆಹಾರ ಸಾಮಗ್ರಿಗಳನ್ನು ಹೊತ್ತ ಟ್ರಕ್‌ಗಳಿಗೆ ಗಾಜಾದತ್ತ ತೆರಳಲು ಮತ್ತು ವಿಮಾನ, ಹೆಲಿಕಾಪ್ಟರ್‌ಗಳ ಮೂಲಕ ಅಗತ್ಯ ವಸ್ತುಗಳನ್ನು ನಿರಾಶ್ರಿತ ಶಿಬಿರಗಳ ವ್ಯಾಪ್ತಿಯಲ್ಲಿ ಹಾಕಲು ಇಸ್ರೇಲ್‌ ಅವಕಾಶ ನೀಡಿದೆ ಎಂದು ವರದಿಯಾಗಿದೆ. 

ಚಿಕಿತ್ಸೆಗಾಗಿ ಬ್ರಿಟನ್‌ಗೆ

ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾಗಿರುವ ಮತ್ತು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 30ರಿಂದ 50 ಮಕ್ಕಳನ್ನು ಮುಂದಿನ ವಾರಗಳಲ್ಲಿ ಗಾಜಾದಿಂದ ಬ್ರಿಟನ್‌ಗೆ ಕರೆದುಕೊಂಡು ಬಂದು ಸರ್ಕಾರ ಚಿಕಿತ್ಸೆ ನೀಡಲಿದೆ ಎಂದು ಬಿಬಿಸಿ ವರದಿ ಮಾಡಿದೆ. 

ಹಮಾಸ್‌ ನೇತೃತ್ವದ ಆರೋಗ್ಯ ಸಚಿವಾಲಯದ ವೈದ್ಯರು ಆಯ್ಕೆ ಮಾಡಿದ ಮಕ್ಕಳನ್ನು ಕರೆದುಕೊಂಡು ಬಂದು ಚಿಕಿತ್ಸೆ ನೀಡಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ಪ್ರಯಾಣದ ಸಮನ್ವಯವನ್ನು ವಿಶ್ವ ಆರೋಗ್ಯ ಸಂಸ್ಥೆ ಮಾಡಲಿದೆ. 

ಅಮೆರಿಕದ ಮೌನಕ್ಕೆ ಅತೃಪ್ತಿ

ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಉಕ್ರೇನ್‌ ಸೈನಿಕರು ಹಾಗೂ ಜನರು ಸಾಯುತ್ತಿರುವುದರ ಬಗ್ಗೆ ಮಾತನಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮೌನ ತಾಳಿದ್ದಾರೆ. ಬದಲಿಗೆ, ಅಮೆರಿಕ ಸರ್ಕಾರ ಇಸ್ರೇಲ್‌ ಅನ್ನು ಬೆಂಬಲಿಸುತ್ತಿರುವುದು ಪ್ಯಾಲೆಸ್ಟೀನ್‌ನ ಬೆಂಬಲಕ್ಕೆ ನಿಂತಿರುವ ರಾಷ್ಟ್ರಗಳು ಹಾಗೂ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

–––––

ಆಧಾರ: ಇಂಟರ್‌ನ್ಯಾಷನಲ್ ರೆಸ್ಕ್ಯೂಕಮಿಟಿ, ಬಿಬಿಸಿ, ರಾಯಿಟರ್ಸ್‌, ವಿಶ್ವಸಂಸ್ಥೆಯ ವರದಿಗಳು, ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.