ಲಡಾಖ್‌ನ ಪುಗಾ ಕಣಿವೆಯಲ್ಲಿ ಭೂಶಾಖದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರದ ಕಾಮಗಾರಿ ನಡೆಯುತ್ತಿದೆ
ಚಿತ್ರ: ಒಎನ್‌ಜಿಸಿ ಎಕ್ಸ್ ಖಾತೆ
ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನೆಡಲು ಭಾರತ ಸಜ್ಜಾಗುತ್ತಿದೆ. ದೇಶದ ಮೊದಲ ವಾಣಿಜ್ಯ ಉದ್ದೇಶದ ಭೂಶಾಖ ವಿದ್ಯುತ್ ಸ್ಥಾವರದ ಆರಂಭ ಸನ್ನಿಹಿತವಾಗಿದೆ. ಬಿಸಿನೀರ ಬುಗ್ಗೆಗಳಿಗೆ ಹೆಸರುವಾಸಿಯಾಗಿರುವ ಲಡಾಖ್‌ನ ಪುಗಾ ಕಣಿವೆಯಲ್ಲಿ ಭೂಶಾಖ ವಿದ್ಯುತ್ ಸ್ಥಾವರಕ್ಕಾಗಿ ಕೊಳವೆ ಬಾವಿ ಕೊರೆಯುವ ಪ್ರಕ್ರಿಯೆ ಕೊನೆ ಹಂತ ತಲುಪಿದೆ. ಭೂಶಾಖವನ್ನು ಬಳಸಿಕೊಂಡು ವರ್ಷದ ಎಲ್ಲ ದಿನಗಳಲ್ಲೂ ಪರಿಸರಸ್ನೇಹಿಯಾದ ವಿದ್ಯುತ್ ಉತ್ಪಾದಿಸುವ ದಿನ ದೂರವಿಲ್ಲ ಎಂದು ಈ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಒಎನ್‌ಜಿಸಿ ಹೇಳಿದೆ
ಭೂಮಿಯ ಆಳದಲ್ಲಿರುವ ಶಾಖವನ್ನು (ಜಿಯೊಥರ್ಮಲ್) ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ರಾಷ್ಟ್ರಗಳ ಸಾಲಿಗೆ ಭಾರತ ಶೀಘ್ರದಲ್ಲಿ ಸೇರ್ಪಡೆಯಾಗಲಿದೆ. ದೇಶದ ತುತ್ತ ತುದಿ, ಸಮುದ್ರ ಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿರುವ ಲಡಾಖ್‌ನ ಪುಗಾ ಕಣಿವೆಯಲ್ಲಿ ದೇಶದ ಮೊದಲ ಭೂಶಾಖ ವಿದ್ಯುತ್ ಸ್ಥಾವರ ಆರಂಭಗೊಳ್ಳಲು ಇನ್ನು ಹೆಚ್ಚು ಸಮಯ ಬೇಡ. ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿಯು (ತೈಲ ಮತ್ತು ನೈಸರ್ಗಿಕ ಅನಿಲ ನಿಗಮ) ಪುಗಾ ಕಣಿವೆಯಲ್ಲಿ ಭೂಮಿಯ ಅಡಿಯಲ್ಲಿರುವ ಬಿಸಿ ನೀರನ್ನು ಮೇಲಕ್ಕೆತ್ತುವುದಕ್ಕಾಗಿ ಕೊರೆಯುತ್ತಿರುವ ಕೊಳವೆ ಬಾವಿಯೊಂದರ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ.
ಮೂಲಸೌಕರ್ಯಗಳಿಲ್ಲದ, ಸಂಪರ್ಕವೂ ದುಸ್ತರವಾಗಿರುವ ಕಡಿದಾದ ಹಿಮಾಲಯದ ಭೂಪ್ರದೇಶದಲ್ಲಿ ಸ್ವದೇಶಿ ತಾಂತ್ರಿಕತೆಯನ್ನು ಬಳಸಿಕೊಂಡು ವಿದ್ಯುತ್ ಸ್ಥಾವರವನ್ನು ನಿರ್ಮಿಸಲಾಗುತ್ತಿದ್ದು, ಇದು ದೇಶದ ಮೊದಲ ಭೂಶಾಖ ವಿದ್ಯುತ್ ಸ್ಥಾವರವಾಗಲಿದೆ ಎಂದು ಒಎನ್‌ಜಿಸಿ ಕೆಲವು ದಿನಗಳ ಹಿಂದೆ ‘ಎಕ್ಸ್’ ಮತ್ತು ‘ಫೇಸ್‌ಬುಕ್’ನಲ್ಲಿ ಹೇಳಿದೆ. ಇಂಗಾಲ ಮುಕ್ತ ಗುರಿಯನ್ನು ಸಾಧಿಸುವ ಉದ್ದೇಶದಿಂದ ಪರಿಸರಸ್ನೇಹಿ ವಿದ್ಯುತ್ ಅನ್ನು ನಿರಂತರವಾಗಿ ಪೂರೈಸುವ ಸಾಮರ್ಥ್ಯ ಹೊಂದುವ ದಿಸೆಯಲ್ಲಿ ಭಾರತ ಹಾಕುತ್ತಿರುವ ಶ್ರಮವನ್ನು ಈ ಮೈಲಿಗಲ್ಲು ಪ್ರತಿಬಿಂಬಿಸುತ್ತದೆ ಎಂದು ಅದು ಹೇಳಿದೆ.
ಒಎನ್‌ಜಿಸಿಯ ಎನರ್ಜಿ ಸೆಂಟರ್ (ಒಇಸಿ), ಲಡಾಖ್‌ನ ಕೇಂದ್ರಾಡಳಿತ ಪ್ರದೇಶದ ಆಡಳಿತ ಮತ್ತು ಲೇಹ್‌ನ ಲಡಾಖ್ ಸ್ವಾಯತ್ತ ಪರ್ವತ ಅಭಿವೃದ್ಧಿ ಮಂಡಳಿಯ (ಎಲ್‌ಎಎಚ್‌ಡಿಸಿ) ಸಹಕಾರದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಭೂಶಾಖದಿಂದ ವಿದ್ಯುತ್ ಉತ್ಪಾದನೆಯಲ್ಲಿ ಪರಿಣತಿ ಹೊಂದಿರುವ ಐಸ್‌ಲ್ಯಾಂಡ್‌ನ ಜಿಯೊಸರ್ವೆ ಇಲಾಖೆಯು ಸ್ಥಾವರ ನಿರ್ಮಾಣಕ್ಕೆ ನೆರವಾಗುತ್ತಿದೆ.
2021ರ ಫೆಬ್ರುವರಿಯಲ್ಲಿ ಪುಗಾ ಕಣಿವೆಯಲ್ಲಿ ಸ್ಥಾವರ ನಿರ್ಮಾಣ ಸಂಬಂಧ ತಿಳಿವಳಿಕೆ ಪತ್ರಕ್ಕೆ (ಎಂಒಯು) ಸಹಿಹಾಕಲಾಗಿತ್ತು. ಯೋಜನೆ ಆರಂಭಗೊಂಡ ಒಂದು ವರ್ಷದಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಕೊಳವೆ ಬಾವಿ ಕೊರೆಯುವ ಯಂತ್ರೋಪಕರಣಗಳು ಹೆಚ್ಚು ಆಧುನಿಕವಾಗಿರದೇ ಇದ್ದುದು ಒಂದು ಕಾರಣವಾಗಿದ್ದರೆ, ಕೊಳವೆ ಬಾವಿ ಕೊರೆಯುತ್ತಿರುವ ಸಂದರ್ಭದಲ್ಲಿ ಭೂಮಿಯ ಆಳದಿಂದ ಬಂದ ವಿವಿಧ ಖನಿಜಯುಕ್ತ ಬಿಸಿ ದ್ರವ ಕಣಿವೆಯಲ್ಲಿ ಹರಿಯುತ್ತಿದ್ದ ನೀರನ್ನು ಸೇರಿತ್ತು. ಇದರಿಂದ ಜಲಮಾಲಿನ್ಯ ಉಂಟಾಗುವ ಆತಂಕವನ್ನು ಸ್ಥಳೀಯ ಪರಿಸರವಾದಿಗಳು ವ್ಯಕ್ತಪಡಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದರು. ಎರಡು ವರ್ಷಗಳ ಬಳಿಕ, 2024ರಲ್ಲಿ ಒಎನ್‌ಜಿಸಿ ಮತ್ತೆ ಕೊಳವೆಬಾವಿ ಕೊರೆಯುವ ಕೆಲಸವನ್ನು ಆರಂಭಿಸಿತ್ತು.
ಭೂ ಮೇಲ್ಮೈನಿಂದ ಕೆಳಗಡೆ ಶಿಲಾಪದರದ ಅಡಿಯಲ್ಲಿ 200 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಬಿಸಿಯಾಗಿರುವ ನೀರಿನ (ದ್ರವ ಎಂದೂ ಕರೆಯಲಾಗುತ್ತದೆ) ದೊಡ್ಡ ಸಂಗ್ರಹವೇ ಇದೆ. ಆ ಕಾದ ನೀರು/ದ್ರವವನ್ನು ಮೇಲಕ್ಕೆತ್ತಿ ಅದರಿಂದ ವಿದ್ಯುತ್ ಉತ್ಪಾದಿಸುವುದು ಯೋಜನೆಯ ಉದ್ದೇಶ. ನೈಸರ್ಗಿಕವಾದ ಬಿಸಿನೀರ ಚಿಲುಮೆಗಳು ಕಂಡು ಬರುವ ಪುಗಾ ಕಣಿವೆಯಲ್ಲಿ ಮೊದಲ ಹಂತದಲ್ಲಿ 1,000 ಮೀಟರ್ ಆಳದ ಎರಡು ಕೊಳವೆ ಬಾವಿಗಳನ್ನು ಕೊರೆದು ಒಂದು ಮೆಗಾ ವಾಟ್‌ನಷ್ಟು ವಿದ್ಯುತ್ ಅನ್ನು ಪ್ರಾಯೋಗಿಕವಾಗಿ ಉತ್ಪಾದಿಸುವ ಯೋಜನೆ ಒಎನ್‌ಜಿಸಿಯದ್ದು. ಎರಡನೇ ಹಂತದಲ್ಲಿ ಕೊಳವೆ ಬಾವಿಯನ್ನು ಇನ್ನಷ್ಟು ಆಳದವರೆಗೆ ಕೊರೆಯಲಾಗುತ್ತದೆ. ಮೂರನೇ ಹಂತದಲ್ಲಿ ವಾಣಿಜ್ಯ ಉದ್ದೇಶದ ಸ್ಥಾವರವನ್ನು ನಿರ್ಮಿಸಿ, 240 ಮೆಗಾ ವಾಟ್‌ನಷ್ಟು ಪರಿಸರಸ್ನೇಹಿ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.
ಭೂಮಿಯ ಆಳದಿಂದ ಬಿಸಿನೀರು ಅಥವಾ ಖನಿಜಯುಕ್ತ ದ್ರವವನ್ನು ಮೇಲಕ್ಕೆತ್ತಿ ವಿದ್ಯುತ್ ಉತ್ಪಾದನೆಯನ್ನು ಅತ್ಯಂತ ವೈಜ್ಞಾನಿಕವಾಗಿ ನಡೆಸದೇ ಇದ್ದರೆ ಪರಿಸರಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸುತ್ತಾರೆ ಪರಿಸರವಾದಿಗಳು. ಲಡಾಖ್‌ನ ಪುಗಾ ಕಣಿವೆಯಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲು ಇದು ಕೂಡ ಒಂದು ಕಾರಣ. ಪುಗಾ ಕಣಿವೆಯು ಸೂಕ್ಷ್ಮ ಪರಿಸರವನ್ನು ಹೊಂದಿದ್ದು, ಸ್ಥಳೀಯ ಪಕ್ಷಿಗಳಲ್ಲದೆ, ವಲಸೆ ಬರುವ ಪಕ್ಷಿಗಳೂ ಇಲ್ಲಿ ಕಾಣಸಿಗುತ್ತವೆ. ಕೊಳವೆ ಬಾವಿ ಕೊರೆಯುವಾಗ ಭೂಮಿಯ ಆಳದ ಖನಿಜಯುಕ್ತ ದ್ರವವು ಕಣಿವೆಯ ನೀರಿನೊಂದಿಗೆ ಸೇರಿತ್ತು. ಇದು ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಗಿತ್ತು.
ಭೂಶಾಖ ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನ ಹೊಸದೇನಲ್ಲ. ಇದಕ್ಕೆ ಒಂದೂಕಾಲು ಶತಮಾನದ ಇತಿಹಾಸವಿದೆ. 1904ರಲ್ಲಿ ಇಟಲಿಯ ಲಾರ್ಡೆರೆಲ್ಲೊ ಎಂಬಲ್ಲಿ ಮೊದಲ ಬಾರಿಗೆ ಭೂಶಾಖ ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿತ್ತು. ಪ್ರಸ್ತುತ ಜಗತ್ತಿನ 30 ರಾಷ್ಟ್ರಗಳಲ್ಲಿ ಭೂಶಾಖದಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಥಿಂಕ್‌ಜಿಯೊಎನರ್ಜಿ.ಕಾಂ ವರದಿಯ ಪ್ರಕಾರ, 2024ರ ಡಿಸೆಂಬರ್ ಅಂತ್ಯಕ್ಕೆ ಭೂಶಾಖದಿಂದ 16,876 ಮೆಗಾ ವಾಟ್‌ನಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಜಗತ್ತು ಹೊಂದಿತ್ತು. ಅಮೆರಿಕವು ಜಗತ್ತಿನಲ್ಲೇ ಭೂಶಾಖದಿಂದ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಷ್ಟ್ರ. 2024ರ ಡಿಸೆಂಬರ್ ವೇಳೆಗೆ ಅದು ಭೂಶಾಖದಿಂದ 3,937 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು ಎಂದು ಥಿಂಕ್‌ಜಿಯೊಎನರ್ಜಿ.ಕಾಂ ತನ್ನ ವರದಿಯಲ್ಲಿ ತಿಳಿಸಿದೆ. ಅಮೆರಿಕದ ಇಂಧನ ಇಲಾಖೆ ಪ್ರಕಾರ, ದೇಶದಲ್ಲಿ ಭೂಶಾಖದಿಂದ ಸದ್ಯ ನಾಲ್ಕು ಗಿಗಾ ವಾಟ್‌ನಷ್ಟು ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಪುಗಾ ಕಣಿವೆ ಯೋಜನೆಯಲ್ಲಿ ಭಾರತಕ್ಕೆ ನೆರವಾಗುತ್ತಿರುವ ಐಸ್‌ಲ್ಯಾಂಡ್ ತನ್ನ ಅಗತ್ಯಕ್ಕೆ ಬೇಕಾದ ಒಟ್ಟು ವಿದ್ಯುತ್‌ನಲ್ಲಿ ಶೇ 25ರಷ್ಟನ್ನು ಭೂಶಾಖದಿಂದಲೇ ಉತ್ಪಾದಿಸುತ್ತಿದೆ.
ಭೂಶಾಖದಿಂದ ಹೆಚ್ಚು ವಿದ್ಯುತ್ ಉತ್ಪಾದಿಸುವ ದೇಶಗಳು
ಮೊದಲೇ ಹೇಳಿದಂತೆ, ಭೂಮಿಯ ಒಳಗಡೆ ಸಂಗ್ರಹವಾಗಿರುವ ಬಿಸಿ ನೀರು ಅಥವಾ ಬಿಸಿ ದ್ರವವನ್ನು ಬಳಸಿ ವಿದ್ಯುತ್ ತಯಾರಿಸಲಾಗುತ್ತದೆ. ಬಿಸಿ ನೀರು ಅಥವಾ ದ್ರವವನ್ನು ಕೊಳವೆ ಬಾವಿ ಮೂಲಕ ಮೇಲಕ್ಕೆ ಎತ್ತಿ, ಅದನ್ನು ತಂಪಾಗಿಸಿದಾಗ ಹಬೆ ಉಂಟಾಗುತ್ತದೆ. ಅದನ್ನು ಟರ್ಬೈನ್‌ಗೆ ಹಾಯಿಸಲಾಗುತ್ತದೆ. ಟರ್ಬೈನ್ ತಿರುಗುವಿಕೆಯಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಆ ಹಬೆಯನ್ನು ಮತ್ತೆ ತಂಪಾಗಿಸಿದಾಗ ಅದು ದ್ರವ ರೂಪಕ್ಕೆ ಪರಿವರ್ತನೆಯಾಗುತ್ತದೆ. ಅದನ್ನು ಮತ್ತೆ ಭೂಮಿಗೆ ಮರುಪೂರಣ ಮಾಡಲಾಗುತ್ತದೆ. ಭೂಶಾಖದಿಂದ ವಿದ್ಯುತ್ ಉತ್ಪಾದನೆ ಮಾಡುವ ಮೂರು ವಿಧಾನಗಳು ಚಾಲ್ತಿಯಲ್ಲಿವೆ.
ವಿದ್ಯುತ್ ಉಪಾದನೆ ಹೇಗೆ?
ಭೂಮಿಯ ಒಳಗಿರುವ ಕಾದ ದ್ರವವನ್ನು ಮೇಲಕ್ಕೆ ತರುವಾಗ ಅದು ಬಹುತೇಕ ಹಬೆಯಾಗಿ ಪರಿವರ್ತನೆಯಾಗುತ್ತದೆ. ಈ ವಿಧಾನದಲ್ಲಿ ಅದನ್ನೇ ನೇರವಾಗಿ ಟರ್ಬೈನ್‌ಗೆ ಹಾಯಿಸಲಾಗುತ್ತದೆ. ಜನರೇಟರ್ ಚಾಲೂ ಆಗಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದು ಅತ್ಯಂತ ಹಳೆಯ ತಂತ್ರಜ್ಞಾನ. ಇಟಲಿಯಲ್ಲಿ ಮೊದಲ ಬಾರಿಗೆ ಇದನ್ನೇ ಅಳವಡಿಸಿಕೊಳ್ಳಲಾಗಿತ್ತು. ಈಗಲೂ ಇದು ಬಳಕೆಯಲ್ಲಿದ್ದು, ಕ್ಯಾಲಿಫೋರ್ನಿಯಾದ ನೈಸರ್ಗಿಕ ಬಿಸಿ ನೀರ ಚಿಲುಮೆಗಳಲ್ಲಿ ಇದೇ ವಿಧಾನದಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ
ಈಗಿನ ಭೂಶಾಖ ವಿದ್ಯುತ್ ಸ್ಥಾವರಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದರಲ್ಲಿ 182 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಬಿಸಿಯಾಗಿರುವ ನೀರನ್ನು ಭೂಮಿಯ ಆಳದಿಂದ ಮೇಲಕ್ಕೆತ್ತಿ (ಅತ್ಯಂತ ಹೆಚ್ಚು ಒತ್ತಡದ ವಾತಾವರಣದಲ್ಲಿ ಇದು ಮೇಲಕ್ಕೆ ಬರುತ್ತದೆ), ಭೂಮಿಯ ಮೇಲ್ಮೈನಲ್ಲಿ ಸ್ಥಾಪಿಸಲಾಗಿರುವ ಕಡಿಮೆ ಒತ್ತಡ ವಿರುವ ಟ್ಯಾಂಕ್‌ಗೆ ಹರಿಸಲಾಗುತ್ತದೆ. ಒತ್ತಡದಲ್ಲಾಗುವ ಬದಲಾವಣೆಯಿಂದಾಗಿ ದ್ರವವು ತಕ್ಷಣ ಆವಿಯಾಗಿ ಪರಿವರ್ತನೆಯಾಗುತ್ತದೆ. ಈ ಆವಿಯನ್ನು ಟರ್ಬೈನ್‌ಗೆ ಹಾಯಿಸಲಾಗುತ್ತದೆ. ಒಂದು ವೇಳೆ ಟ್ಯಾಂಕ್‌ನಲ್ಲಿ ಬಿಸಿ ನೀರು/ದ್ರವ ಉಳಿದರೆ ಮತ್ತೊಂದು ಟ್ಯಾಂಕ್‌ಗೆ ಅದನ್ನು ಹರಿಸಿ ಮತ್ತೆ ಅದು ಹಬೆಯಾಗಿ ಪರಿವರ್ತನೆಯಾಗುವಂತೆ ಮಾಡಲಾಗುತ್ತದೆ
ಭೂಶಾಖ ಸಂಪನ್ಮೂಲಗಳ (ನೀರು/ದ್ರವ) ಉಷ್ಣತೆ ಕಡಿಮೆ ಇದ್ದ ಸಂದರ್ಭದಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈ ವಿಧಾನ ಅಳವಡಿಸಿಕೊಳ್ಳುವ ಸ್ಥಾವರವು ಮೊದಲೆರಡು ತಂತ್ರಜ್ಞಾನ ಹೊಂದಿರುವ ಸ್ಥಾವರಗಳಿಗಿಂತ ಭಿನ್ನವಾಗಿರುತ್ತದೆ. ಈ ವಿಧಾನದಲ್ಲಿ ಭೂಮಿಯ ಆಳದಿಂದ ಮೇಲಕ್ಕೆತ್ತಲಾದ ನೀರು ಅಥವಾ ದ್ರವ ನೇರವಾಗಿ ಟರ್ಬೈನ್‌ನ ಸಂಪರ್ಕಕ್ಕೆ ಬರುವುದಿಲ್ಲ. ಕಡಿಮೆ ಉಷ್ಣತೆ ಹೊಂದಿರುವ (180 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣತೆಯ) ನೀರು/ದ್ರವವನ್ನು ಮೇಲಕ್ಕೆ ತಂದು, ನೀರಿಗಿಂತ ಕಡಿಮೆ ಕುದಿಯುವ ಬಿಂದು (boiling point) ಹೊಂದಿರುವ ಮತ್ತೊಂದು (ಎರಡನೇ) ದ್ರವದೊಂದಿಗೆ ಬೆರೆಯುವಂತೆ ಮಾಡಲಾಗುತ್ತದೆ. ಈ ಬೆರೆಯುವ ಪ್ರಕ್ರಿಯೆಯು ಹಬೆಯನ್ನು ಸೃಷ್ಟಿಸುತ್ತದೆ. ಆ ಹಬೆಯನ್ನು ಟರ್ಬೈನ್‌ಗೆ ಹಾಯಿಸಲಾಗುತ್ತದೆ
ಭೂಶಾಖದಿಂದ ಭಾರಿ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಭಾರತಕ್ಕೆ ಇದೆ. ಈ ಬಗ್ಗೆ ಜಿಯಾಲಜಿಕಲ್ ಸರ್ವೇ ಇಂಡಿಯಾವು ದೇಶದಾದ್ಯಂತ ಇರುವ 381 ಸ್ಥಳಗಳ ಅಧ್ಯಯನ ನಡೆಸಿದ್ದು, 2022ರಲ್ಲಿ ‘ಜಿಯೊಥರ್ಮಲ್ ಅಟ್ಲಾಸ್ ಆಫ್ ಇಂಡಿಯಾ’ ಎಂಬ ವರದಿ ಪ್ರಕಟಿಸಿದೆ. ಅದರ ಪ್ರಕಾರ, ಭಾರತಕ್ಕೆ 10,600 ಮೆಗಾ ವಾಟ್‌ನಷ್ಟು ಭೂಶಾಖ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಇದೆ.
ಛತ್ತೀಸಗಡದ ತಾತಾಪಾನಿ, ಗೋದಾವರಿ, ಹಿಮಾಚಲ ಪ್ರದೇಶದ ಮನಿಕರಣ್, ಪಶ್ಚಿಮ ಬಂಗಾಳದ ಬಕ್ರೇಶ್ವರ, ಗುಜರಾತ್‌ನ ಟುವಾ, ಮಹಾರಾಷ್ಟ್ರದ ಉನಾಯಿ ಮತ್ತು ಜಲಗಾಂವ್, ಹಾಗೂ ಬಿಹಾರದ ರಾಜ್‌ಗೀರ್ ಮತ್ತು ಮುಂಗೇರ್‌ಗಳಲ್ಲಿ ಭೂಶಾಖ ವಿದ್ಯುತ್ ಸ್ಥಾವರ ನಿರ್ಮಿಸಬಹುದು ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.