ADVERTISEMENT

ಆಳ ಅಗಲ: ಅಂಕೆಗೆ ಸಿಗದ ಹಣದುಬ್ಬರ..!

ದೇಶದ ಹಣದುಬ್ಬರಕ್ಕೂ ಜನರ ಬದುಕಿಗೂ ನೇರ ಸಂಬಂಧವಿದೆ. ಹಣದುಬ್ಬರ ಏರಿದಂತೆ ದಿನಬಳಕೆಯ ವಸ್ತುಗಳು ಮತ್ತು ಸೇವೆಗಳ ಬೆಲೆ ಹೆಚ್ಚಿ ಜನರ ಜೇಬಿಗೆ ಕತ್ತರಿ ಬೀಳುತ್ತದೆ.

ಕೆ.ಎಚ್.ಓಬಳೇಶ್
Published 11 ಡಿಸೆಂಬರ್ 2024, 23:37 IST
Last Updated 11 ಡಿಸೆಂಬರ್ 2024, 23:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದೇಶದ ಹಣದುಬ್ಬರಕ್ಕೂ ಜನರ ಬದುಕಿಗೂ ನೇರ ಸಂಬಂಧವಿದೆ. ಹಣದುಬ್ಬರ ಏರಿದಂತೆ ದಿನಬಳಕೆಯ ವಸ್ತುಗಳು ಮತ್ತು ಸೇವೆಗಳ ಬೆಲೆ ಹೆಚ್ಚಿ ಜನರ ಜೇಬಿಗೆ ಕತ್ತರಿ ಬೀಳುತ್ತದೆ. ಹಣದುಬ್ಬರ ಇಳಿಕೆಯಾದಂತೆ ಆರ್ಥಿಕ ಹೊರೆ ತಗ್ಗುತ್ತದೆ. ದೇಶದ ಹಣದುಬ್ಬರ ಪ್ರಸ್ತುತ ಏರು ಹಾದಿಯಲ್ಲಿದೆ. ಇದೇ ಸಮಯದಲ್ಲಿ ಸಂಜಯ್‌ ಮಲ್ಹೋತ್ರಾ ಅವರು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವ ಸವಾಲು ಅವರ ಮುಂದಿದೆ. ಈ ಹಣದುಬ್ಬರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ. ದೇಶದ ಅರ್ಥ ವ್ಯವಸ್ಥೆ ಮೇಲೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ..

––––

ADVERTISEMENT

ಕಿಸೆಯಲ್ಲಿ ಕಾಸು ಇಟ್ಟುಕೊಂಡು ಸಂತೆಗೆ ಹೋಗಿ ಬಂಡಿ ತುಂಬಾ ದಿನಸಿ ತರುತ್ತಿದ್ದ ಕಾಲವೊಂದಿತ್ತು. ಸದ್ಯ ಸಂತೆಯ ಚಿತ್ರಣ ಬದಲಾಗಿದೆ. ಈಗಿನದ್ದು ಚೀಲದಲ್ಲಿ ದುಡ್ಡು ತುಂಬಿಕೊಂಡು ಹೋಗಿ ಸಣ್ಣ ಪ್ಲಾಸ್ಟಿಕ್‌ ಕೈಚೀಲದಲ್ಲಿ ದಿನಸಿ ತರಬೇಕಾಗಿದೆ ಎಂಬುದು ವ್ಯಂಗ್ಯದ ಮಾತಾದರೂ ಪೂರ್ಣ ಅಸತ್ಯವೇನಲ್ಲ. ಸಂತೆ ಮಾತ್ರವಲ್ಲ, ನಗರ, ಪಟ್ಟಣಗಳಲ್ಲಿನ ದೊಡ್ಡ ಅಂಗಡಿಗಳು, ಮಾಲ್‌ಗಳಲ್ಲಿ ಖರೀದಿಸುತ್ತಿದ್ದರೂ ಜೇಬು/ಬ್ಯಾಂಕ್‌ ಖಾತೆಯಲ್ಲಿ ದೊಡ್ಡ ಮೊತ್ತದ ಹಣವಿರಬೇಕು.

ಕುಟುಂಬವೊಂದರ ವೆಚ್ಚವು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿದೆ. ಆಹಾರ, ಇಂಧನ, ಶಿಕ್ಷಣ ಮತ್ತಿತರ ವೆಚ್ಚಗಳು ಏರಿಕೆಯಾಗುತ್ತಿವೆ. ದಿನಕ್ಕೊಂದು ಹೊಸ ಸರಕು ಈ ಪಟ್ಟಿಗೆ ಸೇರ್ಪಡೆಯಾಗುತ್ತಿದೆ.

ಈ ವರ್ಷ ಬಿಡುಗಡೆಯಾಗಿರುವ ರಾಷ್ಟ್ರೀಯ ಲೆಕ್ಕಪತ್ರ ಸಾಂಖ್ಯಿಕ ವರದಿ ‌ಪ್ರಕಾರ, ದೇಶದ ಪ್ರತಿ ಕುಟುಂಬವು ಜೀವನ ನಿರ್ವಹಣೆಗೆ ಮಾಡುವ ಖರ್ಚಿನ ಮೊತ್ತವು 2020-21ರಿಂದ 2022-23ರ ನಡುವೆ ಶೇ 19ರಷ್ಟು ಹೆಚ್ಚಾಗಿದೆ. ಇದಕ್ಕೆ ಕಾರಣ ಹಣದುಬ್ಬರದ ಹೆಚ್ಚಳ. 

ಏನಿದು ಹಣದುಬ್ಬರ?

ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಹಣದುಬ್ಬರ ಎಂದರೆ ‘ಬೆಲೆ ಏರಿಕೆ’ ಎಂದರ್ಥ. ನಿರ್ದಿಷ್ಟ ಅವಧಿಯಲ್ಲಿ ಸರಕುಗಳು ಮತ್ತು ಸೇವೆಗಳ ಬೆಲೆ ಹೆಚ್ಚಳವು ಹಣದುಬ್ಬರ ಏರಿಕೆಗೆ ಕಾರಣವಾಗುತ್ತದೆ. ಈ ಸರಕು ಮತ್ತು ಸೇವೆಗಳು ಜೀವನಾವಶ್ಯಕ ವಸ್ತುಗಳು. ಹಣದುಬ್ಬರದಲ್ಲಾಗುವ ಹೆಚ್ಚಳವು ಜನರ ಖರೀದಿ ಸಾಮರ್ಥ್ಯಕ್ಕೆ ಕೊಡಲಿ ಪೆಟ್ಟು ನೀಡುತ್ತದೆ. ಹಣದುಬ್ಬರಗಳಲ್ಲಿ ಚಿಲ್ಲರೆ (retail) ಮತ್ತು ಸಗಟು ಹಣದುಬ್ಬರ (whole sale) ಎಂಬ ಎರಡು ವಿಧಗಳಿವೆ.

ಭಾರತವು ಜಾಗತಿಕ ಮಟ್ಟದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಸದ್ಯ ಏರಿಕೆಯ ಪಥದಲ್ಲಿರುವ ಹಣದುಬ್ಬರವು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಗೆ ಸವಾಲೊಡ್ಡಿದೆ. ಈಗ ದೇಶದಲ್ಲಿ ಈರುಳ್ಳಿ, ಅಕ್ಕಿ, ಹಾಲು, ಅಡುಗೆ ಎಣ್ಣೆ ಸೇರಿ ಜೀವನಾವಶ್ಯಕ ವಸ್ತುಗಳ ಬೆಲೆಯು ದಿನೇ ದಿನೇ ಏರಿಕೆಯಾಗುತ್ತಿದೆ. ಬೆಳ್ಳುಳ್ಳಿ ದರ ಕೆ.ಜಿಗೆ ₹500 ದಾಟಿರುವುದು ಇದಕ್ಕೆ ತಾಜಾ ನಿದರ್ಶನ. ಪೂರೈಕೆ ಕೊರತೆಯಾದ ತಕ್ಷಣವೇ ಚಿಲ್ಲರೆ ಮಾರಾಟ ದರವು ಗಗನಕ್ಕೇರುತ್ತದೆ. ಇದರಿಂದ ಗ್ರಾಹಕರ ಜೇಬಿಗೆ ಹೊರೆ; ಅವರ ಉಳಿತಾಯಕ್ಕೂ ಬರೆ.

ಹಣದುಬ್ಬರವು ಒಂದರ್ಥದಲ್ಲಿ ಉತ್ತರಮುಖಿ. ಯಾವುದೇ ಸರಕು ಮತ್ತು ಸೇವೆಯ ಬೆಲೆ ಏರಿಕೆಯಾದರೆ ತಕ್ಷಣಕ್ಕೆ ಇಳಿಕೆಯಾಗುವ ಸಾಧ್ಯತೆ ತೀರಾ ವಿರಳ. ಇದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಾಗೂ ಕೇಂದ್ರ ಸರ್ಕಾರದ ಪಾಲಿಗೆ ತಲೆನೋವು ಉಂಟುಮಾಡುತ್ತದೆ.

ಲೆಕ್ಕಾಚಾರ ಹೇಗೆ?

ಹಣದುಬ್ಬರ ಲೆಕ್ಕಾಚಾರ ಮಾಡಲು ಎರಡು ಮಾನದಂಡಗಳಿವೆ. ಒಂದು ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ-wholesale price index), ಮತ್ತೊಂದು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-consumer price index). ಬೆಲೆ ಏರಿಕೆ ಅಳೆಯಲು ಈ ಎರಡರ ನೆರವು ಪಡೆಯಲಾಗುತ್ತದೆ.

100 ಮೌಲ್ಯ ಹೊಂದಿರುವ ಈ ಸೂಚ್ಯಂಕಗಳಲ್ಲಿ ಹಲವು ಸರಕುಗಳಿಗೆ ಅವುಗಳ ಬಳಕೆ ಮತ್ತು ಬೇಡಿಕೆ ಆಧರಿಸಿ ನಿರ್ದಿಷ್ಟ ತೂಕ/ ಮೌಲ್ಯವು ನಿಗದಿಯಾಗಿರುತ್ತದೆ. ಬೆಲೆ ಸೂಚ್ಯಂಕಗಳಿಗೆ ನಿರ್ದಿಷ್ಟ ಆಧಾರ ವರ್ಷವೂ ಇರುತ್ತದೆ.

ಉದಾಹರಣೆಗೆ, ವರ್ಷದ ಹಿಂದೆ ಕೆ.ಜಿ ತೊಗರಿ ಬೇಳೆಗೆ ₹130 ದರ ಇತ್ತು ಎಂದಿಟ್ಟುಕೊಳ್ಳಿ. ಈ ವರ್ಷ ಬೆಲೆಯು ₹150ಕ್ಕೆ ಮುಟ್ಟಿದೆ ಎಂದರೆ ಎರಡು ವರ್ಷದ ನಡುವೆ ಹಣದುಬ್ಬರವು ಶೇ 20ರಷ್ಟು ಹೆಚ್ಚಾಗಿದೆ ಎಂದರ್ಥ. ರೂಪಾಯಿಯ ಮೌಲ್ಯವೂ ಇಳಿದಿದೆ ಎನ್ನುವುನ್ನೂ ಇದು ಸೂಚಿಸುತ್ತದೆ.

ಸರಕು ಮತ್ತು ಸೇವೆಗಳ ಬೆಲೆ ಏರಿಕೆಯನ್ನು ವರ್ಷದಿಂದ ವರ್ಷಕ್ಕೆ ಲೆಕ್ಕ ಹಾಕಲಾಗುತ್ತದೆ. ಅಂದರೆ, ಒಂದು ತಿಂಗಳ ಬೆಲೆಯನ್ನು ಹಿಂದಿನ ವರ್ಷದ ಅದೇ ತಿಂಗಳಿನಲ್ಲಿನ ಧಾರಣೆಗೆ ಹೋಲಿಸಿ ಅಳೆಯಲಾಗುತ್ತದೆ.  ಸಗಟು ಬೆಲೆ ಸೂಚ್ಯಂಕವು ಸಗಟು ಮಟ್ಟದ ಬೆಲೆಯಲ್ಲಿ ಆಗುವ ವ್ಯತ್ಯಾಸವನ್ನು ಲೆಕ್ಕ ಹಾಕಿದರೆ, ಗ್ರಾಹಕ ಬೆಲೆ ಸೂಚ್ಯಂಕವು ಚಿಲ್ಲರೆ ಮಟ್ಟದಲ್ಲಾಗುವ ಬೆಲೆ ವ್ಯತ್ಯಾಸವನ್ನು ಲೆಕ್ಕ ಹಾಕುತ್ತದೆ.

ಅಮೆರಿಕ, ಬ್ರಿಟನ್‌ ಸೇರಿ ಅಭಿವೃದ್ಧಿ ಹೊಂದಿದ ಬಹುತೇಕ ರಾಷ್ಟ್ರಗಳಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಬಳಸಿ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ. ಭಾರತದಲ್ಲಿ ಈ ಎರಡೂ ಮಾನಕಗಳು ಬಳಕೆಯಲ್ಲಿವೆ. 2013ರಲ್ಲಿ ಉರ್ಜಿತ್‌ ಪಟೇಲ್‌ ಸಮಿತಿಯು ಸಗಟು ಬೆಲೆ ಸೂಚ್ಯಂಕದ ಬದಲು ಗ್ರಾಹಕ ಬೆಲೆ ಸೂಚ್ಯಂಕ ಬಳಸಿ ಹಣದುಬ್ಬರ ಲೆಕ್ಕ ಹಾಕಲು ಶಿಫಾರಸು ಮಾಡಿತು. ಈ ಸೂಚ್ಯಂಕದಿಂದಷ್ಟೇ ಬೆಲೆ ಏರಿಕೆಯಿಂದ ಗ್ರಾಹಕರ ಮೇಲಾಗಿರುವ ಪರಿಣಾಮವನ್ನು ನಿಖರವಾಗಿ ಅರಿಯಲು ಸಾಧ್ಯ ಎಂದು ಹೇಳಿತು.

ಚಿಲ್ಲರೆ ಹಣದುಬ್ಬರ

ಹೆಸರೇ ಸೂಚಿಸುವಂತೆ ಇದು ಗ್ರಾಹಕರು ಬಳಸುವ ಸರಕು ಮತ್ತು ಸೇವೆಗಳನ್ನು ಆಧರಿಸಿದೆ. ಸರಕು ಮತ್ತು ಸೇವೆಗಳ ಬುಟ್ಟಿಯಲ್ಲಿ 299 ಆಹಾರ ಪದಾರ್ಥಗಳಿದ್ದು, ಅವುಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗಿದೆ. ಆಹಾರ ಮತ್ತು ಪಾನೀಯಗಳು ಶೇ 54.18, ಪಾನ್‌- ತಂಬಾಕು ಶೇ 3.26, ಬಟ್ಟೆ ಮತ್ತು ಪಾದರಕ್ಷೆ ಶೇ 7.36, ಇಂಧನ ಮತ್ತು ವಿದ್ಯುತ್‌ ಶೇ 7.94 ಹಾಗೂ ಇತರೆ ಪದಾರ್ಥಗಳು ಶೇ 27.76ರಷ್ಟು ಮೌಲ್ಯ ಹೊಂದಿವೆ. ಈ ಗುಂಪಿನಲ್ಲಿ ವಸತಿ ಇದ್ದರೂ ಇದರ ಮೌಲ್ಯ ನಿಗದಿಪಡಿಸಿಲ್ಲ. ಇವುಗಳ ಒಟ್ಟು ಮೌಲ್ಯ 100 ಇದ್ದರೆ, ಆಧಾರ ವರ್ಷ 2012 ಆಗಿದೆ.

ಮೊದಲಿಗೆ ಬುಟ್ಟಿಯಲ್ಲಿರುವ ಪ್ರತಿ ಪದಾರ್ಥದ ಸರಾಸರಿ ಮೌಲ್ಯವನ್ನು ಆಧಾರ ವರ್ಷದೊಂದಿಗೆ ಲೆಕ್ಕ ಹಾಕಲಾಗುತ್ತದೆ. ಬಳಿಕ ಪ್ರಸಕ್ತ ವರ್ಷದಲ್ಲಿ ಅವುಗಳ ಚಿಲ್ಲರೆ ಬೆಲೆಯಲ್ಲಿ (ಸರಕು ಮತ್ತು ಸೇವೆ) ಆಗಿರುವ ವ್ಯತ್ಯಾಸವನ್ನು ಒಟ್ಟು ಮೌಲ್ಯದೊಂದಿಗೆ ಗುಣಿಸಿ ಹಣದುಬ್ಬರವನ್ನು ಅಳೆಯಲಾಗುತ್ತದೆ.

ಮಾರುಕಟ್ಟೆಯಲ್ಲಿ ಸರಕುಗಳ ಬೆಲೆ ಇಳಿಕೆಯಾದರೂ ಚಿಲ್ಲರೆ ಬೆಲೆ ಕಡಿಮೆಯಾಗದಿದ್ದರೆ ಅದರಿಂದ ಗ್ರಾಹಕರಿಗೆ ಲಾಭ ಆಗುವುದಿಲ್ಲ. ಜಾಗತಿಕ ಮಟ್ಟದಲ್ಲಿ ಸಗಟು ಬೆಲೆ ನಿರ್ಧರಿತವಾಗುತ್ತದೆ. ಸಗಟು ಹಣದುಬ್ಬರದ ಇಳಿಕೆಗೆ ಜಾಗತಿಕ ಹಣದುಬ್ಬರವು ಕಾರಣವಾಗುತ್ತದೆ. ಇದು ಸರಕುಗಳಿಗೆ ಸೀಮಿತ. ಆದರೆ, ಜನಸಾಮಾನ್ಯರು ಸರಕು ಮತ್ತು ಸೇವೆ ಎರಡನ್ನೂ ಬಳಸುತ್ತಾರೆ. ಹಾಗಾಗಿ, ಚಿಲ್ಲರೆ ಹಣದುಬ್ಬರಕ್ಕೆ ಪ್ರಾಮುಖ್ಯ ಹೆಚ್ಚು. ಆರ್‌ಬಿಐ ಕೂಡ ತನ್ನ ಹಣಕಾಸು ನೀತಿಗಾಗಿ ಚಿಲ್ಲರೆ ಹಣದುಬ್ಬರವನ್ನೇ ಮಾನದಂಡವಾಗಿ ಬಳಸುತ್ತಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಒ), ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಚಿಲ್ಲರೆ ಹಣದುಬ್ಬರದ ವಿವರಗಳನ್ನು ಬಿಡುಗಡೆ ಮಾಡುತ್ತದೆ. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ ನಗರ ಪ್ರದೇಶದ 1,114 ಮಾರುಕಟ್ಟೆಗಳು ಮತ್ತು 1,181 ಹಳ್ಳಿಗಳಲ್ಲಿ ದತ್ತಾಂಶ ಸಂಗ್ರಹಿಸಲಾಗುತ್ತದೆ. ಸಚಿವಾಲಯದ ಅಧಿಕಾರಿಗಳು ಈ ಸ್ಥಳಗಳಿಗೆ ವಾರಕ್ಕೊಮ್ಮೆ ಖುದ್ದಾಗಿ ಭೇಟಿ ನೀಡಿ ಬೆಲೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಇದನ್ನು ಆಧರಿಸಿ ಚಿಲ್ಲರೆ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ.

ಸಗಟು ಹಣದುಬ್ಬರ

ಈ ಸೂಚ್ಯಂಕವು ಸಗಟು ಮಾರುಕಟ್ಟೆಯನ್ನು ಅವಲಂಬಿಸಿದೆ. ಈ ಬುಟ್ಟಿಯಲ್ಲಿ 697 ಸರಕುಗಳಿದ್ದು, ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರಾಥಮಿಕ ಸರಕು ಶೇ 22.62, ಇಂಧನ- ವಿದ್ಯುತ್‌ ಶೇ 13.15 ಮತ್ತು ಉತ್ಪಾದನಾ ಸರಕು ಶೇ 64.23ರಷ್ಟು ಮೌಲ್ಯ ಹೊಂದಿವೆ. ಇವುಗಳ ಒಟ್ಟು ಮೌಲ್ಯ 100 ಆಗಿದೆ. ಇದರ ಆಧಾರ ವರ್ಷ 2011-12. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇದನ್ನು ಬಿಡುಗಡೆ ಮಾಡುತ್ತದೆ. ಸರ್ಕಾರ, ಬ್ಯಾಂಕಿಂಗ್‌ ವಲಯ, ಕೈಗಾರಿಕೆ ಮತ್ತು ವಾಣಿಜ್ಯ ವಲಯವು ಸಗಟು ಧಾರಣೆ ಆಧರಿಸಿದ ಸೂಚ್ಯಂಕವನ್ನು ಹೆಚ್ಚು ಅವಲಂಬಿಸಿವೆ.

ಸಗಟು ಹಣದುಬ್ಬರದ ಅಳತೆಗೆ ನಿಗದಿಪಡಿಸಿರುವ ಆಧಾರ ವರ್ಷವು ದಶಕದಷ್ಟು ಹಳೆಯದು. ಚಿಲ್ಲರೆ ಹಣದುಬ್ಬರದ್ದೂ ಇದೇ ಕಥೆ. ಸಗಟು ಹಣದುಬ್ಬರದ ಆಧಾರ ವರ್ಷವನ್ನು 2017-18ಕ್ಕೆ ನಿಗದಿಪಡಿಸಬೇಕು, ಹೊಸದಾಗಿ 480 ಸರಕುಗಳನ್ನು ಈ ಬುಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ. 

ಹಣದುಬ್ಬರ ಎಷ್ಟಿರಬೇಕು?

ಇದು ಎಲ್ಲಾ ದೇಶಗಳಿಗೂ ಕಾಡುವ ಸವಾಲಿನ ಪ್ರಶ್ನೆ. ಆದರೆ, ಹಣದುಬ್ಬರ ಬೇಕೇ ಬೇಕು. ಕೇಂದ್ರ ಸರ್ಕಾರ ಕೂಡ ಇದಕ್ಕೆ ಕನಿಷ್ಠ ಶೇ 2 ಹಾಗೂ ಗರಿಷ್ಠ ಶೇ 6ರ ಮಿತಿ ನಿಗದಿಪಡಿಸಿದೆ. ಇದು ಹೆಚ್ಚಾದರೆ ದೇಶದ ಅಭಿವೃದ್ಧಿಗೆ ಮಾರಕ.

ಜಿಂಬಾಬ್ವೆ, ವೆನೆಜುವೆಲಾ, ಸುಡಾನ್‌ನಲ್ಲಿ ಹಣದುಬ್ಬರವು ಮೂರಂಕಿ ದಾಟಿದೆ.

ಹಣದುಬ್ಬರ ಪ್ರಮಾಣ ಶೇ 2ರಿಂದ ಶೇ 3ರಷ್ಟು ಇರಬೇಕು ಎಂಬುದು ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ಇಷ್ಟಿದ್ದರೆ ತಯಾರಿಕಾ ಚಟುವಟಿಕೆಗಳಿಗೆ ಹೆಚ್ಚು ಅನುಕೂಲ. ಹೆಚ್ಚಿನ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ಇದರಿಂದ ಈ ವಲಯಕ್ಕೂ ಉತ್ತೇಜನ ಸಿಗುತ್ತದೆ. ಇದು ಪರೋಕ್ಷವಾಗಿ ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆದರೆ, ಹಣದುಬ್ಬರವು ಮಿತಿ ಮೀರಿದರೆ ಹಣದ ಮೌಲ್ಯ ಕುಗ್ಗುತ್ತದೆ. ಸಂಬಳ, ಕೂಲಿ ಇತ್ಯಾದಿ ಸೀಮಿತ ಆದಾಯ ಹೊಂದಿರುವ ಗ್ರಾಹಕರ ಖರೀದಿ ಶಕ್ತಿ ಕ್ಷೀಣಿಸುತ್ತದೆ. ಮತ್ತೊಂದೆಡೆ ಉದ್ದಿಮೆದಾರರ ಜೇಬು ತುಂಬುತ್ತದೆ. ಇದರಿಂದ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಸೃಷ್ಟಿಯಾಗಿ, ಜನರ ಬದುಕು ದುಸ್ತರವಾಗುತ್ತದೆ.

ಇತಿಮಿತಿಯಲ್ಲಿದ್ದರೆ ಚೆನ್ನ

ಹಣದುಬ್ಬರವನ್ನು ಮಾನವನ ದೇಹದಲ್ಲಿರುವ ಸಕ್ಕರೆ ಮತ್ತು ಕೊಬ್ಬಿಗೆ ಹೋಲಿಸಬಹುದು. ಸದೃಢ ಆರೋಗ್ಯಕ್ಕೆ ಈ ಎರಡೂ ಇರಬೇಕು. ದೈಹಿಕ ಆರೋಗ್ಯಕ್ಕೆ ಕೊಬ್ಬು ತೀರಾ ಅಗತ್ಯ. ಆದರೆ, ಅತಿಯಾದರೆ ಆರೋಗ್ಯಕ್ಕೆ ಹಾನಿಕರ. ಸೀಮಿತ ಮಟ್ಟದಲ್ಲಿದ್ದರೆ ಚೆನ್ನ. ಅದೇ ರೀತಿ ಆರ್ಥಿಕತೆ ಬೆಳವಣಿಗೆಗೆ ಹಣದುಬ್ಬರವನ್ನು ಸೀಮಿತ ಮಟ್ಟದಲ್ಲಿಯೇ ಕಾಯ್ದುಕೊಳ್ಳಬೇಕು.

ಸರಕುಗಳ ಬೆಲೆ ವರ್ಷದಿಂದ ವರ್ಷಕ್ಕೇ ಏರಿಕೆಯಾಗುವುದು ಸಾಮಾನ್ಯ. ಇದಕ್ಕೆ ವ್ಯತಿರಿಕ್ತವಾಗಿ ವರ್ಷದಿಂದ ವರ್ಷಕ್ಕೆ ಇಳಿಕೆಯಾದರೆ ಹಣದಿಳಿತ ಪರಿಸ್ಥಿತಿ ಎನ್ನುತ್ತೇವೆ. ಇದು ಆರ್ಥಿಕ ವೃದ್ಧಿಗೆ ವ್ಯತಿರಿಕ್ತ ಸ್ಥಿತಿ.

ಬೆಲೆ ಏರಿಕೆ ಮತ್ತು ಇಳಿಕೆಯನ್ನು ದೇಹದಲ್ಲಿನ ಸಕ್ಕರೆ ಅಂಶಕ್ಕೆ ಅನ್ವಯಿಸಬಹುದು. ಸಕ್ಕರೆ ಅಂಶವು ಕನಿಷ್ಠ ಮಟ್ಟಕ್ಕೆ ಇಳಿದರೆ ಅಪಾಯ. ಹೆಚ್ಚಾದರೆ ಜೀವಕ್ಕೆ ಸಂಚಕಾರ. ಒಂದು ಹಂತದಲ್ಲಿ ನಿಯಂತ್ರಣದಲ್ಲಿ ಇಡಬೇಕು. ಸರಕು ಮತ್ತು ಸೇವೆಗಳ ಬೆಲೆ ಏರಿಕೆಯಾಗದಂತೆ ತಡೆಯಲು ಆರ್‌ಬಿಐ ಬಳಸುವ ಅಸ್ತ್ರವೇ ರೆಪೊ ದರ. ಇದು ಒಂದರ್ಥದಲ್ಲಿ ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಿಸಲು ಬಳಸುವ ಇನ್ಸುಲಿನ್‌ ಇದ್ದಂತೆ ಎಂದರೆ ಅತಿಶಯೋಕ್ತಿಯಲ್ಲ.

ಆಧಾರ: ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.