ಪ್ರಾತಿನಿಧಿಕ ಚಿತ್ರ
ಭಾರತೀಯ ವಿಮಾನಯಾನ ಸೇವೆಗೆ ಹೊಸ ಸಮಸ್ಯೆಯೊಂದು ಎದುರಾಗಿದೆ. ವಿಮಾನಯಾನ ಸಂಸ್ಥೆಗಳಿಗೆ ಮತ್ತು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಕರೆಗಳು ತೀವ್ರವಾಗಿ ಹೆಚ್ಚಳವಾಗಿದ್ದವು. ಬಂದುವೆಲ್ಲ ಹುಸಿ ಕರೆಗಳೇ. ಆದರೆ, ಅವು ಹುಸಿ ಎಂದು ಪತ್ತೆಯಾಗುವ ವೇಳೆಗೆ ಬಹಳ ಸಮಯ, ಶ್ರಮ, ಹಣ ವೆಚ್ಚವಾಗಿತ್ತು. ಜತೆಗೆ ವಿಮಾನ ಟಿಕೆಟ್‌ಗಾಗಿ ದುಬಾರಿ ಬೆಲೆ ತೆರುವ ಪ್ರಯಾಣಿಕರೂ ತೊಂದರೆ, ಆತಂಕ ಎದುರಿಸುವಂತಾಯಿತು. ಒಂದು ವರದಿಯ ಪ್ರಕಾರ, ಒಂದು ಹುಸಿ ಕರೆಯಿಂದ ವಿಮಾನಯಾನ ಸಂಸ್ಥೆ ಮತ್ತು ಸರ್ಕಾರದ ಮೇಲೆ ಸುಮಾರು ₹3 ಕೋಟಿ ಹೊರೆ ಬೀಳುತ್ತದೆ.
ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬರುವುದು ಹೊಸದೇನಲ್ಲ. 2014ರಿಂದ 2017ರವರೆಗೆ ದೇಶದಲ್ಲಿ 120 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಅವುಗಳಲ್ಲಿ ಅರ್ಧದಷ್ಟು, ದೇಶದ ಎರಡು ಅತಿ ದೊಡ್ಡ ವಿಮಾನ ನಿಲ್ದಾಣಗಳಾದ ದೆಹಲಿ ಮತ್ತು ಮುಂಬೈನಲ್ಲಿ ದಾಖಲಾಗಿದ್ದವು. ಆದರೆ, ಇತ್ತೀಚೆಗೆ ಅದು ಸಮೂಹ ಸನ್ನಿಯ ರೀತಿಯಂತೆ ಆಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳಿಗೆ ಬರುತ್ತಿರುವ ಬಾಂಬ್ ಬೆದರಿಕೆ ಕರೆಗಳಲ್ಲಿ ಭಾರಿ ಹೆಚ್ಚಳವಾಗಿದೆ.
ಈ ವರ್ಷದ ಆರಂಭದಿಂದ ನವೆಂಬರ್ 14ರವರೆಗೆ 999 ಹುಸಿ ಬಾಂಬ್ ಬೆದರಿಕೆಯ ಕರೆಗಳು ಬಂದಿವೆ. ಅಕ್ಟೋಬರ್ ತಿಂಗಳ ಕೊನೆಯ ಎರಡು ವಾರಗಳಲ್ಲಿ 500 ಕರೆಗಳು ದಾಖಲಾಗಿವೆ. 2023ರಲ್ಲಿ ಬಂದಿದ್ದಕ್ಕಿಂತ 10 ಪಟ್ಟು ಹೆಚ್ಚಿನ ಕರೆಗಳು ಈ ವರ್ಷ ದಾಖಲಾಗಿವೆ.
ಸಾಮಾಜಿಕ ಜಾಲತಾಣಗಳು, ಇ–ಮೇಲ್, ಶೌಚಾಲಯಗಳಲ್ಲಿ ಬರೆಯುವ ಮೂಲಕ ಬಾಂಬ್ ಬೆದರಿಕೆಯನ್ನು ಒಡ್ಡಲಾಗುತ್ತಿದೆ. ಒಂದೇ ‘ಎಕ್ಸ್’ ಪೋಸ್ಟ್ ಮೂಲಕ ಹಲವು ವಿಮಾನಗಳಿಗೆ ಬೆದರಿಕೆ ಸಂದೇಶ ಒಡ್ಡಿರುವ ಘಟನೆಗಳೂ ನಡೆದಿವೆ. ಅಂಥ ಖಾತೆಗಳನ್ನು ನಿರ್ಬಂಧಿಸಿದರೆ, ಕಿಡಿಗೇಡಿಗಳು ಮತ್ತೊಂದು ಖಾತೆಯ ಮೂಲಕ ಬೆದರಿಕೆ ಸಂದೇಶ ರವಾನಿಸುತ್ತಿದ್ದಾರೆ.
ಮಾನಸಿಕ ಸಮಸ್ಯೆಗಳು, ತಕ್ಷಣ ಗಮನ ಸೆಳೆಯುವ ಪ್ರಯತ್ನ, ಕಿಡಿಗೇಡಿತನ, ವೈಯಕ್ತಿಕ ಸಮಸ್ಯೆಗಳು ಇವೇ ಮುಂತಾದ ಕಾರಣಗಳಿಂದ ಕೆಲವರು ಹುಸಿ ಬಾಂಬ್ ಬೆದರಿಕೆ ಕರೆ ಕಳಿಸುತ್ತಾರೆ ಎಂದು ವಿಶ್ಲೇಷಿಸಲಾಗಿದೆ. ಅಕ್ಟೋಬರ್ 17ರಂದು ಇದೇ ರೀತಿ ಎಕ್ಸ್‌ನಲ್ಲಿ ಹುಸಿ ಬಾಂಬ್ ಬೆದರಿಕೆ ಒಡ್ಡಿದ್ದ ಬಾಲಕನನ್ನು ವಶಕ್ಕೆ ಪಡೆಯಲಾಗಿತ್ತು.
ಬಾಂಬ್ ಬೆದರಿಕೆಗಳಿಂದ ವಿಮಾನಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಇದರಿಂದಾಗಿ ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹಲವು ವಿಮಾನಗಳನ್ನು ತುರ್ತಾಗಿ ಮತ್ತು ಮಾರ್ಗಮಧ್ಯದಲ್ಲಿಯೇ ಇಳಿಸಲಾಗಿದೆ. ಅಕ್ಟೋಬರ್ 20ರಂದು 24 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಅಕ್ಟೋಬರ್ 29ರಂದು ಒಂದೇ ದಿನ ನೂರಕ್ಕೂ ಹೆಚ್ಚು ಹುಸಿ ಕರೆಗಳು ಬಂದಿವೆ.
ಶೀಘ್ರ ಪ್ರಯಾಣದ ಉದ್ದೇಶದಿಂದ ಬಂದಿದ್ದ ಪ್ರಯಾಣಕರಿಗೆ ಬೆದರಿಕೆ ಕರೆಗಳಿಂದಾಗಿ ತೊಂದರೆಯಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ 50 ಅಂತರರಾಷ್ಟ್ರೀಯ ವಿಮಾನಗಳು ಸೇರಿದಂತೆ 136 ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. ಹಲವು ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ; ಕೆಲವು ವಿಮಾನಗಳ ಹಾರಾಟದ ಸಮಯ ಗಂಟೆಗಟ್ಟಲೇ ವಿಳಂಬವಾಗಿದೆ.
ಬೆದರಿಕೆ ಹುಸಿ ಕರೆಗಳು ವಿಮಾನಯಾನ ಕಂಪನಿಗಳು, ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳು, ಭದ್ರತಾ ಸಂಸ್ಥೆಗಳು, ವಿಮಾನಯಾನ ಸಚಿವಾಲಯಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನು ಉಂಟು ಮಾಡುತ್ತವೆ. ಪ್ರಯಾಣಿಕರು ಕೂಡ ನಿಗದಿತ ಸಮಯಕ್ಕೆ ಗಮ್ಯಸ್ಥಾನ ತಲುಪದೆ ತೊಂದರೆಗೆ ಒಳಗಾಗುತ್ತಾರೆ.
ಬೆದರಿಕೆ ಕರೆಯಿಂದಾಗಿ ವಿಮಾನ ಮಾರ್ಗ ಬದಲಾವಣೆ ಮಾಡಬೇಕಾಗಿ ಬಂದರೆ ಅಥವಾ ಸಮೀಪದ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದರೆ ವಿಮಾನಯಾನ ಸಂಸ್ಥೆಗೆ ಪ್ರತಿ ಗಂಟೆಗೆ ₹13 ಲಕ್ಷದಿಂದ ₹17 ಲಕ್ಷ ನಷ್ಟವಾಗುತ್ತದೆ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ 14ರಂದು ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್ 777 ವಿಮಾನಕ್ಕೆ ಹುಸಿ ಬಾಂಬ್ ಕರೆ ಬಂದಿದ್ದರಿಂದ ವಿಮಾನದ ಮಾರ್ಗವನ್ನು ಬದಲಿಸಬೇಕಾಯಿತದಲ್ಲದೇ, ಸುರಕ್ಷಿತವಾಗಿ ಭೂಸ್ಪರ್ಶ ಮಾಡುವುದಕ್ಕಾಗಿ ವಿಮಾನದಲ್ಲಿದ್ದ ಇಂಧನವನ್ನೂ ಆಗಸದಲ್ಲಿ ಚೆಲ್ಲಬೇಕಾಯಿತು. ಏರ್ ಇಂಡಿಯಾಗೆ ಕನಿಷ್ಠ ಎಂದರೂ ₹3 ಕೋಟಿಯಷ್ಟು ನಷ್ಟವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ವರ್ಷದಲ್ಲಿ ಈವರೆಗೆ ಬಂದ ಹುಸಿ ಕರೆಗಳಿಂದಾಗಿ ಎಷ್ಟು ನಷ್ಟವಾಗಿದೆ ಎಂಬುದರ ನಿಖರ ಮಾಹಿತಿ ಲಭ್ಯವಿಲ್ಲ. ಕೆಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ನೂರಾರು ಕೋಟಿ ನಷ್ಟವಾಗಿದೆ ಎಂದು ಹೇಳಿವೆ.
l ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ವಿಮಾನಯಾನ ಭದ್ರತೆಗೆ ಸಂಬಂಧಿಸಿದ ನಿಯಮಗಳನ್ನು ಆಧರಿಸಿ ವಿಮಾನಗಳು, ವಿಮಾನ ನಿಲ್ದಾಣಗಳ ಭದ್ರತೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ
l ಬಾಂಬ್ ಬೆದರಿಕೆ ಬಂದಾಗ ಪಾಲಿಸಲು ಪ್ರತ್ಯೇಕವಾದ ಶಿಷ್ಟಾಚಾರವಿದೆ. ಭಾರತದಲ್ಲಿ ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆಯು (ಬಿಸಿಎಎಸ್) ಬೆದರಿಕೆ ನಿರ್ವಹಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸಿದೆ
l ಪ್ರತಿ ವಿಮಾನ ನಿಲ್ದಾಣದಲ್ಲೂ ಬಾಂಬ್ ಬೆದರಿಕೆ ಪರಿಶೀಲನಾ ಸಮಿತಿ (ಬಿಟಿಎಸಿ) ಇರುತ್ತದೆ. ಬಾಂಬ್ ಬೆದರಿಕೆ ನಿರ್ವಹಣಾ ಯೋಜನೆ (ಬಿಟಿಸಿಪಿ) ಇರುತ್ತದೆ. ಅದರ ಪ್ರಕಾರವೇ ಭದ್ರತಾ ಕ್ರಮ ಕೈಗೊಳ್ಳಲಾಗುತ್ತದೆ. ಬೆದರಿಕೆ ಕರೆಯ ಸವಾಲನ್ನು ನಿಭಾಯಿಸಲಾಗುತ್ತದೆ
l ಬಾಂಬ್ ಬೆದರಿಕೆ ಪರಿಶೀಲನಾ ಸಮಿತಿ ಸಭೆ ಸೇರಿ, ಕರೆಯು ನಿರ್ದಿಷ್ಟ ಸ್ವರೂಪದ್ದೇ (ವಿಮಾನದ ಹೆಸರು/ಸಂಖ್ಯೆ, ಅದರ ಪ್ರಯಾಣದ ಹಾದಿ, ಅವಧಿ ಮುಂತಾದ ಸ್ಪಷ್ಟ ವಿವರಗಳನ್ನು ಹೊಂದಿರಬೇಕು) ಅಥವಾ ನಿರ್ದಿಷ್ಟ ಸ್ವರೂಪದ್ದು ಅಲ್ಲವೇ (ವಿಮಾನದ ಬಗ್ಗೆ ಸ್ಪಷ್ಟ ವಿವರಗಳು ಇರುವುದಿಲ್ಲ) ಅಥವಾ ವಿಮಾನದ ಒಳಗಿದ್ದವರಿಂದ ಬೆದರಿಕೆ ಬಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ
l ನಂತರ ಪೈಲಟ್‌ನ ಗಮನಕ್ಕೆ ತರುತ್ತಾರೆ. ಬೆದರಿಕೆ ಕರೆ ನಿರ್ದಿಷ್ಟವೇ ಅಥವಾ ಅಲ್ಲವೇ ಎಂಬುದರ ಮೇಲೆ ವಿಮಾನವನ್ನು ವಾಪಸ್ ಕರೆಸಿಕೊಳ್ಳಬೇಕೇ, ಮಾರ್ಗವನ್ನು ಬದಲಿಸಬೇಕೇ ಅಥವಾ ಹತ್ತಿರದ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಬೇಕೇ ಎಂಬುದನ್ನು ನಿರ್ಧರಿಸಲಾಗುತ್ತದೆ
l ವಿಮಾನವು ಭಾರತದ ವಾಯುಪ್ರದೇಶದ ಹೊರಗಡೆ ಹಾರಾಟ ನಡೆಸುತ್ತಿದ್ದಾಗ ಬೆದರಿಕೆ ಕರೆ ಬಂದರೆ ವಿಮಾನ ಸಂಚಾರ ನಿಯಂತ್ರಣ ಕೇಂದ್ರವನ್ನು ಸಂಪರ್ಕಿಸಲು ಪೈಲಟ್‌ಗಳಿಗೆ ಸೂಚಿಸಲಾಗುತ್ತದೆ
l ಬೆದರಿಕೆ ಕರೆ ಬಂದಿರುವುದನ್ನು ಬಹುತೇಕ ಸಂದರ್ಭಗಳಲ್ಲಿ ಪೈಲಟ್‌ಗಳು ಪ್ರಯಾಣಿಕರಿಗೆ ತಿಳಿಸುವುದಿಲ್ಲ. ತುರ್ತು ಪರಿಸ್ಥಿತಿ ಇದೆ ಎಂದಷ್ಟೇ ಮಾಹಿತಿ ನೀಡುತ್ತಾರೆ
l ಕೆಲವು ಸಂದರ್ಭದಲ್ಲಿ ಆಗಸದಲ್ಲಿ ಹಾರಾಡುತ್ತಿರುವ ವಿಮಾನದ ಭದ್ರತೆಗಾಗಿ ಯುದ್ಧವಿಮಾನಗಳನ್ನೂ ನಿಯೋಜಿಸಲಾಗುತ್ತದೆ
l ವಿಮಾನವನ್ನು ಸಮೀಪದ ವಿಮಾನ ನಿಲ್ದಾಣ ಅಥವಾ ಸೂಚಿತ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗುತ್ತದೆ
l ವಿಮಾನ ಇಳಿಯುವ ವೇಳೆಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ, ಆಂಬುಲೆನ್ಸ್, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಭದ್ರತಾ ಸಿಬ್ಬಂದಿ ಸನ್ನದ್ಧ ಸ್ಥಿತಿಯಲ್ಲಿ ಇರುತ್ತಾರೆ
l ತುರ್ತು ಭೂಸ್ಪರ್ಶ ಮಾಡಿದ ವಿಮಾನವನ್ನು ನಿಲ್ದಾಣದಿಂದ ಬಹುದೂರದಲ್ಲಿ, ಹೆಚ್ಚು ಸುರಕ್ಷಿತವಾದ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ. ಪ್ರಯಾಣಿಕರು ಮತ್ತು ಅವರ ಲಗೇಜುಗಳನ್ನು ತ್ವರಿತವಾಗಿ ಇಳಿಸಲಾಗುತ್ತದೆ
l ಪ್ರಯಾಣಿಕರನ್ನು ಇಳಿಸಿದ ನಂತರ ಮತ್ತೊಮ್ಮೆ ಎಲ್ಲರನ್ನೂ ಭದ್ರತಾ ಪರಿಶೀಲನೆಗೆ ಒಳಪಡಿಸಲಾಗುತ್ತದೆ
l ಭದ್ರತಾ ಸಿಬ್ಬಂದಿ ವಿಮಾನವನ್ನು ಕೂಲಕಂಷವಾಗಿ ಪರಿಶೀಲನೆಗೆ ಒಳಪಡಿಸಿ, ಬಂದಿರುವ ಬೆದರಿಕೆ ಕರೆ ಸುಳ್ಳೇ ಅಥವಾ ನಿಜವೇ ಎಂಬುದನ್ನು ದೃಢೀಕರಿಸುತ್ತಾರೆ
l ಕರೆಯು ಹುಸಿ ಎಂಬುದು ಖಚಿತವಾಗುವವರೆಗೆ ಭದ್ರತಾ ವ್ಯವಸ್ಥೆ ಚಾಲ್ತಿಯಲ್ಲಿರುತ್ತದೆ
2023ರ ಜನವರಿಯಿಂದ ಈ ವರ್ಷದ ಮೇ 14ರವರೆಗೆ 1,121 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಈ ಪೈಕಿ ದೆಹಲಿಗೆ ಗರಿಷ್ಠ 282 ಕರೆಗಳು ಬಂದಿದ್ದರೆ, ಮಹಾರಾಷ್ಟ್ರಕ್ಕೆ 244 ಕರೆಗಳು ಬಂದಿವೆ. ಕರ್ನಾಟಕ 99 ಬೆದರಿಕೆ ಕರೆಗಳನ್ನು ಸ್ವೀಕರಿಸಿದೆ. ಕೇರಳ (59), ತಮಿಳುನಾಡು (58) ನಂತರದ ಸ್ಥಾನಗಳಲ್ಲಿವೆ.
ದೇಶದಲ್ಲಿ 150ಕ್ಕೂ
ಹೆಚ್ಚು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 33 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಇವುಗಳ ಮೂಲಕ ಪ್ರತಿ ದಿನ 3,000ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುತ್ತಿದ್ದು, ಕಳೆದ ವರ್ಷ 15 ಕೋಟಿ ಮಂದಿ ಪ್ರಯಾಣಿಸಿದ್ದರು.
ಬೆದರಿಕೆ ಸಂದೇಶಗಳು ಮತ್ತು ಹುಸಿ ಬೆದರಿಕೆ ಸಂದೇಶಗಳನ್ನು ನಿಭಾಯಿಸಲು ನಾಗರಿಕ ವಿಮಾನಯಾನ ಸಚಿವಾಲಯವು ಇತ್ತೀಚೆಗೆ ತೀವ್ರ ಸಮಾಲೋಚನೆ ನಡೆಸುತ್ತಿದೆ. ವಿಮಾನ ಭದ್ರತಾ ನಿಯಮಗಳಿಗೆ ತಿದ್ದುಪಡಿ ತರುವುದು, ನಾಗರಿಕ ವಿಮಾನ ಸುರಕ್ಷತೆಗೆ ಭಂಗ ತರುವ ಕಾನೂನು ವಿರೋಧಿ ಚಟುವಟಿಕೆ ನಿಗ್ರಹ ಕಾಯ್ದೆ –1982ಕ್ಕೆ ತಿದ್ದುಪಡಿ ತರಲು ಚಿಂತಿಸಿದೆ. ಬೆದರಿಕೆ ಸಂದೇಶ ಕಳುಹಿಸುವವರನ್ನು ನೋ–ಫ್ಲೈ ಪಟ್ಟಿಗೆ ಸೇರಿಸಲು ಮತ್ತು ಸಂದೇಶ ಕಳುಹಿಸಿದವರನ್ನು ವಾರಂಟ್ ಇಲ್ಲದೇ ಬಂಧಿಸಲು ತಿದ್ದುಪಡಿಯಿಂದ ಸಾಧ್ಯವಾಗಲಿದೆ ಎನ್ನಲಾಗುತ್ತಿದೆ.
ಆಧಾರ: ಪಿಟಿಐ, ರಾಯಿಟರ್ಸ್, ಬಿಬಿಸಿ, ಸಂಸತ್‌ನಲ್ಲಿ ನಾಗರಿಕ ವಿಮಾನಯಾನ ಸಚಿವರ ಉತ್ತರಗಳು
ಜೋಧಪುರ ವಿಮಾನ ನಿಲ್ದಾಣದ ಬಳಿ ಭದ್ರತಾ ಸಿಬ್ಬಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.