ADVERTISEMENT

ಆಳ–ಅಗಲ | ಭಾರತ–ಅಮೆರಿಕ ಸುಂಕ ಇಳಿಕೆ ಒಪ್ಪಂದ: ಹಲವು ಅನುಕೂಲ; ‌ಹೆಚ್ಚಿದ ಕುತೂಹಲ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 20:49 IST
Last Updated 3 ಫೆಬ್ರುವರಿ 2026, 20:49 IST
   
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲಿನ ಸುಂಕವನ್ನು ಶೇ 50ರಿಂದ ಶೇ 18ಕ್ಕೆ ಇಳಿಸುವ ಘೋಷಣೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಸುಂಕ ಇಳಿಕೆಯ ಕ್ರಮವನ್ನು ಸ್ವಾಗತಿಸಿ, ದೇಶದ 140 ಕೋಟಿ ಜನರ ಪರವಾಗಿ ಟ್ರಂಪ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕೆಲವು ಉದ್ಯಮ ಸಂಸ್ಥೆಗಳೂ ಇದನ್ನು ಸ್ವಾಗತಿಸಿವೆ. ಆದರೆ, ಈ ಬೆಳವಣಿಗೆಯ ಹಿಂದೆಯೇ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಮೋದಿ-ಟ್ರಂಪ್ ಮಾತುಕತೆಯಲ್ಲಿ ಯಾವ ಸರಕು/ವ್ಯಾಪಾರ ನಿಮಯಗಳ ಬಗ್ಗೆ ಸಮ್ಮತಿ ಮೂಡಿದೆ ಎನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಭಾರತದ ಮೇಲೆ ಹೇರಿದ್ದ ಶೇ 50ರ ಸುಂಕವನ್ನು ಶೇ 18ಕ್ಕೆ ಇಳಿಸಿರುವ ಅಮೆರಿಕದ ಕ್ರಮವು ದೇಶದ ಹಲವು ವಲಯಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಭಾರತವು ರಿಯಾಯಿತಿ ದರದಲ್ಲಿ ರಷ್ಯಾದಿಂದ ಇಂಧನ ಖರೀದಿಸುತ್ತಿದೆ ಎಂಬ ನೆಪವೊಡ್ಡಿ ಭಾರತದ ಮೇಲೆ ಕಳೆದ ಆಗಸ್ಟ್‌ನಲ್ಲಿ ದಿಢೀರ್ ಸುಂಕ ಹೆಚ್ಚಳ ಮಾಡಿದ್ದ ಟ್ರಂಪ್ ಅವರು, ಈಗ ಅಷ್ಟೇ ದಿಢೀರ್ ಆಗಿ ಸುಂಕ ಇಳಿಕೆ ಮಾಡಿದ್ದಾರೆ. ಮೋದಿ ಅವರೊಂದಿಗೆ ತಾವು ಮಾತನಾಡಿದ್ದು, ತಮ್ಮ ಮಾತಿಗೆ ಭಾರತ ಸಮ್ಮತಿಸಿದೆ ಎಂದು ಟ್ರಂಪ್ ಅವರು ಸುಂಕ ಇಳಿಕೆಗೆ ಕಾರಣ ನೀಡಿದ್ದಾರೆ. ಮೋದಿ ಅವರು ಟ್ರಂಪ್ ಕ್ರಮವನ್ನು ಸ್ವಾಗತಿಸಿದ್ದಾರೆ.

ಸುಂಕದ ಪ್ರಮಾಣ ಹೆಚ್ಚಿಸಿದ್ದರಿಂದ ಭಾರತವು ಅಮೆರಿಕಕ್ಕೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿದ್ದ ದೇಶವಾಗಿತ್ತು. ಒಟ್ಟಾರೆ ಹೆಚ್ಚುತ್ತಿದ್ದ ವ್ಯಾಪಾರದ ಅಂತರ, ಕುಸಿಯುತ್ತಿದ್ದ ರೂಪಾಯಿ ಮೌಲ್ಯ, ವಿದೇಶಗಳಿಗೆ ಹರಿಯುತ್ತಿದ್ದ ಹೂಡಿಕೆಯಂಥ ಸಮಸ್ಯೆಗಳಿಗೆ ಸುಂಕದ ವಿಚಾರದಲ್ಲಿನ ಅನಿಶ್ಚಿತ ಸ್ಥಿತಿಯೂ ಒಂದು ಕಾರಣವಾಗಿತ್ತು. ಜವಳಿ, ಸಾಗರ ಆಹಾರೋತ್ಪನ್ನಗಳು ಮತ್ತು ಆಭರಣಗಳಂಥ ಕೆಲವು ಉದ್ಯೋಗ ಸೃಷ್ಟಿಸುವ ಪ್ರಮುಖ ವಲಯಗಳಲ್ಲಿ ರಫ್ತು ಕುಸಿದಿತ್ತು. ಏಷ್ಯಾದ ಸಹಸ್ಪರ್ಧಿಗಳಾದ ಬಾಂಗ್ಲಾದೇಶ (ಶೇ 20), ವಿಯೆಟ್ನಾಂ (ಶೇ 20), ಪಾಕಿಸ್ತಾನ (ಶೇ 19) ಮತ್ತು ಚೀನಾ (ಶೇ 34) ದೇಶಗಳ ಮೇಲಿನ ಸುಂಕಕ್ಕಿಂತಲೂ ಭಾರತ ಅಧಿಕ ಸುಂಕ ತೆರುತ್ತಿತ್ತು. ಈ ದಿಸೆಯಲ್ಲಿ ಸುಂಕ ಇಳಿಕೆಯಿಂದ ಭಾರತವು ಕೊಂಚ ಮಟ್ಟಿಗಾದರೂ ಸಮಾಧಾನ ಪಟ್ಟುಕೊಳ್ಳುವಂತಾಗಿದೆ.  

ಚೀನಾಕ್ಕೆ ಪರ್ಯಾಯವಾಗಿ ತನ್ನ ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸುವ ಭಾರತದ ಆಶಯಕ್ಕೂ ಇದರಿಂದ ಸಹಾಯವಾಗಲಿದೆ. ಜತೆಗೆ ಉತ್ಪಾದನಾ ವಲಯಕ್ಕೆ ಸುಂಕ ಇಳಿಕೆಯು ಹೆಚ್ಚಿನ ಮಟ್ಟದಲ್ಲಿ ನೆರವಾಗುವ ನಿರೀಕ್ಷೆ ಇದೆ. ಈ ಬಗ್ಗೆ ಜವಳಿ ಉದ್ಯಮಿಗಳು ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಮಾರುಕಟ್ಟೆಯು ಭಾರತದ ಜವಳಿ ರಫ್ತಿಗೆ ಏಕೈಕ ದೊಡ್ಡ ಮಾರುಕಟ್ಟೆಯಾಗಿದ್ದು, ಅಲ್ಲಿನ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಇದು ನಮಗೆ ನೆರವಾಗಲಿದೆ’ ಎಂದು ಭಾರತದ ಜವಳಿ ಉದ್ದಿಮೆಗಳ ಒಕ್ಕೂಟವು ಹೇಳಿದೆ.

ADVERTISEMENT

ಆದರೆ, ಮೋದಿ ಅವರು ಸುಂಕ ಇಳಿಕೆಯನ್ನು ಸ್ವಾಗತಿಸಿದ್ದಾರೆಯೇ ವಿನಾ ಟ್ರಂಪ್ ಅವರು ಪ್ರತಿಪಾದಿಸಿದ ಉಳಿದ ಅಂಶಗಳ ಬಗ್ಗೆ ಭಾರತದ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಅವರು ಸುದ್ದಿಗೋಷ್ಠಿಯಲ್ಲಿ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತದ ಹಿತಾಸಕ್ತಿಯನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆಯೇ ವಿನಾ, ಒಪ್ಪಂದದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಎಚ್ಚರಿಕೆ ಅಗತ್ಯ: ಜಾಗತಿಕ ಚಿಂತಕರ ಚಾವಡಿಯಾದ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ಭಾರತಕ್ಕೆ ಎಚ್ಚರಿಕೆ ನೀಡಿದೆ. ‘ಎರಡೂ ದೇಶಗಳು ಜಂಟಿ ಹೇಳಿಕೆ ನೀಡುವವರೆಗೆ, ಮಾತುಕತೆಯ ಕುರಿತ ಲಿಖಿತ ಪ್ರಕಟಣೆ ಹೊರಬೀಳುವವರೆಗೆ, ಇದನ್ನು ರಾಜಕೀಯ ಸೂಚನೆ ಎಂದು ಭಾವಿಸಬೇಕಿದೆಯೇ ವಿನಾ ವ್ಯಾಪಾರ ಒಪ್ಪಂದ ಎಂದಲ್ಲ. ಭಾರತಕ್ಕೆ ಈಗ ಅಗತ್ಯವಾಗಿರುವುದು ಸಂಭ್ರಮಾಚಾರಣೆ ಅಲ್ಲ, ಎಚ್ಚರಿಕೆ’ ಎಂದು ಅದು ಹೇಳಿದೆ.

ಇದರ ನಡುವೆಯೇ ಅಮೆರಿಕದ ಕೃಷಿ ಕಾರ್ಯದರ್ಶಿ ಬ್ರೂಕ್ ರಾಲಿನ್ಸ್ ಅವರು, ಮಾತುಕತೆಯ ಕುದುರಿರುವುದರಿಂದ ಅಮೆರಿಕವು ಹೆಚ್ಚು ಕೃಷಿ ಉತ್ಪನ್ನಗಳನ್ನು ಭಾರತದ ಬೃಹತ್ ಮಾರುಕಟ್ಟೆಗೆ ರಫ್ತು ಮಾಡಲಿದ್ದು, ಗ್ರಾಮೀಣ ಅಮೆರಿಕಕ್ಕೆ ಹಣದ ಹೊಳೆಯನ್ನೇ ಹರಿಸಲಿದೆ ಎಂದಿದ್ದಾರೆ. ಅಮೆರಿಕವು ಭಾರತದೊಂದಿಗೆ ಹೊಂದಿರುವ 130 ಕೋಟಿ ಡಾಲರ್‌ನಷ್ಟು ಕೃಷಿ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ಇದರಿಂದ ಸಹಾಯವಾಗುತ್ತದೆ ಎಂದೂ ಹೇಳಿದ್ದಾರೆ.

ಸಿಗಲಿದೆಯೇ ಉತ್ತರ?

ಸಹಜವಾಗಿಯೇ ಅಮೆರಿಕದ ಕೆಲವು ಪ್ರತಿಪಾದನೆಗಳು ಭಾರತದಲ್ಲಿ ಕಳವಳ ಉಂಟುಮಾಡಿವೆ. ಅಮೆರಿಕದ ಕೃಷಿ ಮತ್ತು ಹೈನು ಉತ್ಪನ್ನಗಳಿಗೆ ಭಾರತದಲ್ಲಿ ಸುಂಕ ಕಡಿಮೆ ಮಾಡಬೇಕು ಎನ್ನುವುದು ಅಮೆರಿಕದ ಪ್ರಮುಖ ಬೇಡಿಕೆಯಾಗಿದ್ದು, ಇದೇ ಕಾರಣಕ್ಕೆ ವ್ಯಾಪಾರ ಒಪ್ಪಂದ ಅಂತಿಮಗೊಂಡಿರಲಿಲ್ಲ.

ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರು ಕೃಷಿ ಮತ್ತು ಹೈನು ಉತ್ಪನ್ನಗಳು ಒಪ್ಪಂದದಿಂದ ಹೊರಗಿವೆ ಎಂದು ಹೇಳಿದ್ದಾರೆ. ಆದರೂ ಕೆಲವು ಮುಖ್ಯ ಪ್ರಶ್ನೆಗಳು ಉಳಿದಿದ್ದು, ಕುತೂಹಲ ಹೆಚ್ಚಿದೆ.  

  • ಅಮೆರಿಕದ ಉತ್ಪನ್ನಗಳಿಗೆ ಸುಂಕ ಇಳಿಸುವುಕ್ಕೆ ಭಾರತವು ಸಮ್ಮತಿಸಿದೆಯೇ? 

  • ರಷ್ಯಾದಿಂದ ರಿಯಾಯಿತಿ ದರದಲ್ಲಿ ಇಂಧನ ಖರೀದಿಸುವುದನ್ನು ನಿಲ್ಲಿಸಲು ಭಾರತ ಸಮ್ಮತಿ ಸೂಚಿಸಿದೆಯೇ?

  • ಅಮೆರಿಕದ ಬೆದರಿಕೆಗೆ ಮಣಿದು ಭಾರತವು ರಷ್ಯಾ ಬದಲಿಗೆ ವೆನೆಜುವೆಲಾದಿಂದ ಇಂಧನ ಖರೀದಿ ಹೆಚ್ಚಿಸಲಿದೆಯೇ?

  • ಟ್ರಂಪ್ ಅವರು ಹೇಳಿದಂತೆ ಭಾರತವು ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇನ್ನೂ ಅನೇಕ ಸರಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕದಿಂದ ಖರೀದಿಸಲು ಒಪ್ಪಿಕೊಂಡಿದೆಯೇ?

ಸುಂಕದಿಂದ ಒಪ್ಪಂದದವರೆಗೆ

  • ಏಪ್ರಿಲ್‌ 2, 2025: ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಪ್ರತಿ ಸುಂಕವನ್ನು ಘೋಷಿಸಿದ ಡೊನಾಲ್ಡ್‌ ಟ್ರಂಪ್‌. ಆ ದಿನವನ್ನು ಅವರು ‘ವಿಮೋಚನಾ ದಿನ’ ಎಂದು ಉಲ್ಲೇಖಿಸಿ ಮಾತು. ಅಮೆರಿಕ ಆಮದು ಮಾಡಿಕೊಳ್ಳುವ ಭಾರತದ ಉತ್ಪನ್ನಗಳ ಮೇಲೆ ಶೇ 26ರಷ್ಟು ಸುಂಕ ನಿಗದಿ. ಇದರಲ್ಲಿ ಶೇ 10 ಮೂಲ ಸುಂಕವಾದರೆ ಶೇ 16ರಷ್ಟು ಪ್ರತಿಸುಂಕ

  • ಏಪ್ರಿಲ್‌ 10, 2025: 90 ದಿನಗಳಿಗೆ ಪ್ರತಿ ಸುಂಕ ಜಾರಿಯನ್ನು ಅಮಾನತಿನಲ್ಲಿಟ್ಟ ಟ್ರಂಪ್‌. ಆದರೆ, ಅಮೆರಿಕ ಆಮದು ಮಾಡಿಕೊಳ್ಳುವ ಎಲ್ಲ ಉತ್ಪನ್ನಗಳ ಮೇಲೆ ಕನಿಷ್ಠ ಶೇ 10ರಷ್ಟು ಸುಂಕ ಮುಂದುವರಿಕೆ

  • ಜುಲೈ 31, 2025: ಭಾರತದ ಸರಕುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್‌ ಹೇಳಿಕೆ. ಆಗಸ್ಟ್‌ 7ರಿಂದ ಇದು ಜಾರಿಯ ದಿನ ನಿಗದಿ.  ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದರೆ ಹೆಚ್ಚುವರಿ ಸುಂಕ ವಿಧಿಸುವ ಎಚ್ಚರಿಕೆ

  • ಆಗಸ್ಟ್‌ 6, 2025: ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸದೇ ಇದ್ದುದರಿಂದ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ಘೋಷಿಸಿದ ಟ್ರಂಪ್‌, ಆಗಸ್ಟ್‌ 27ರಿಂದ ಇದು ಜಾರಿಗೆ 

  • ಫೆ.2, 2026: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಂಪ್‌ ಕರೆ. ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ. ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ಟ್ರಂಪ್‌ ಒಪ್ಪಂದ ಆಗಿರುವ ಬಗ್ಗೆ ಮತ್ತು ಸುಂಕವನ್ನು ಶೇ 18ಕ್ಕೆ ಇಳಿಸುವ ಘೋಷಣೆ

ಟ್ರಂಪ್‌ ಪೋಸ್ಟ್‌ನಲ್ಲಿ ಹೇಳಿದ್ದೇನು?

ಇವತ್ತು ಬೆಳಿಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದೆ. ಅವರು ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು ಮತ್ತು ಅವರ ದೇಶದಲ್ಲಿ ಶಕ್ತಿಶಾಲಿ ಮತ್ತು ಎಲ್ಲರಿಂದಲೂ ಗೌರವ ಪಡೆಯುತ್ತಿರುವ ನಾಯಕ. ವ್ಯಾಪಾರ, ರಷ್ಯಾ–ಉಕ್ರೇನ್‌ ಯುದ್ಧಕ್ಕೆ ಅಂತ್ಯ ಹಾಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ನಾವು ಮಾತನಾಡಿದೆವು. ರಷ್ಯಾದಿಂದ ತೈಲ ಖರೀದಿಸುವುದನ್ನು ಸ್ಥಗಿತಗೊಳಿಸಿ, ಅಮೆರಿಕದಿಂದ ಹೆಚ್ಚು ಮತ್ತು ವೆನೆಜುವೆಲಾದಿಂದಲೂ ಖರೀದಿಸಲು ಅವರು ಒಪ್ಪಿದ್ದಾರೆ. ಪ್ರತಿ ವಾರವೂ ಸಾವಿರಾರು ಜನರು ಸಾಯುತ್ತಿರುವ ಉಕ್ರೇನ್‌ ಯುದ್ಧವನ್ನು ನಿಲ್ಲಿಸಲು ಇದು ನೆರವಾಗಲಿದೆ.

ಗೆಳೆತನ ಮತ್ತು ಪ್ರಧಾನಿ ಮೋದಿ ಅವರ ಮೇಲಿನ ಗೌರವದ ಕಾರಣಕ್ಕೆ, ಅವರ ಮನವಿಯ ಮೇರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದ ಜಾರಿಗೆ ತರಲು ನಾವು ಒಪ್ಪಿಕೊಂಡಿದ್ದೇವೆ. ಅದರ ಪ್ರಕಾರ, ಅಮೆರಿಕವು ಪ್ರತಿಸುಂಕವನ್ನು ಶೇ 25ರಿಂದ ಶೇ 18ಕ್ಕೆ ಇಳಿಸಲಿದೆ. ಅದೇ ರೀತಿ ಅವರು ಕೂಡ, ಅವರ ಸುಂಕವನ್ನು ಕಡಿತಗೊಳಿಸಲಿದ್ದಾರೆ. ಮತ್ತು ಸುಂಕಯೇತರ ಅಡೆತಡೆಗಳನ್ನು ಸಂಪೂರ್ಣವಾಗಿ ನಿವಾರಿಸಲಿದ್ದಾರೆ. ಅಮೆರಿಕದ ಉತ್ಪನ್ನಗಳನ್ನು ಖರೀದಿಸಲು ಅವರು ಬದ್ಧತೆ ತೋರಿದ್ದಾರೆ. 50 ಸಾವಿರ ಕೋಟಿ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಸೇರಿದಂತೆ ಇತರ ಉತ್ಪನ್ನಗಳನ್ನು ಅವರು ಖರೀದಿಸಲಿದ್ದಾರೆ. ಭಾರತೊಂದಿಗಿನ ನಮ್ಮ ಅದ್ಭುತ ಸಂಬಂಧ ಇನ್ನಷ್ಟು ಸದೃಢವಾಗಿ ಮುಂದುವರಿಯಲಿದೆ. ಕೆಲವರಿಗೆ ಹೇಳಲು, ಮಾಡಲು ಸಾಧ್ಯವಾಗದ ವಿಷಯವನ್ನು  ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಇಬ್ಬರು ಸೇರಿ ಮಾಡಿದ್ದೇವೆ. 

ಮೋದಿ ಪೋಸ್ಟ್‌ನಲ್ಲಿ ಏನಿತ್ತು?

ಇವತ್ತು ನನ್ನ ಸ್ನೇಹಿತ ಅಧ್ಯಕ್ಷ ಟ್ರಂಪ್‌ ಅವರೊಂದಿಗಿನ ಮಾತುಕತೆ ಚೇತೋಹಾರಿಯಾಗಿತ್ತು. ಭಾರತದಲ್ಲಿ ತಯಾರಾದ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ 18ಕ್ಕೆ ಇಳಿಸಿರುವುದರಿಂದ ಸಂತಸವಾಗಿದೆ. ಈ ಅದ್ಭುತವಾದ ಘೋಷಣೆಗಾಗಿ ಭಾರತದ 140 ಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್‌ ಅವರಿಗೆ ದೊಡ್ಡ ಧನ್ಯವಾದಗಳು. ಜಗತ್ತಿನ ಎರಡು ದೊಡ್ಡ ಆರ್ಥಿಕ ಶಕ್ತಿಗಳು ಮತ್ತು ದೊಡ್ಡ ಪ್ರಜಾಪ್ರಭುತ್ವಗಳು ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಅದು ನಮ್ಮ ಜನರಿಗೆ ಲಾಭ ತರುತ್ತದೆ ಮತ್ತು ಪರಸ್ಪರ ಅನುಕೂಲಕಾರಿಯಾದಂತಹ ಸಹಕಾರಕ್ಕೆ ವಿಪುಲ ಅವಕಾಶಗಳನ್ನು ತೆರೆಯುತ್ತದೆ

ಜಾಗತಿಕ ಶಾಂತಿ, ಸ್ಥಿರತೆ ಮತ್ತು ಏಳಿಗೆಯಲ್ಲಿ ಅಧ್ಯಕ್ಷ ಟ್ರಂಪ್‌ ಅವರ ನಾಯಕತ್ವ ನಿರ್ಣಾಯಕವಾಗಿದೆ. ಶಾಂತಿ ಸ್ಥಾಪಿಸುವ ಅವರ ಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸಲಿದೆ. ನಮ್ಮ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಕ್ಕಾಗಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.