ADVERTISEMENT

ಆಳ–ಅಗಲ | ಟ್ರಂಪ್ ಬಳಗದಲ್ಲಿ ಭಾರತೀಯರು: ಶ್ವೇತಭವನದಲ್ಲಿ ಭಾರತ ಮೂಲದವರ ಆಡಳಿತ

ಶ್ವೇತಭವನದಲ್ಲಿ ಭಾರತ ಮೂಲದವರ ಆಡಳಿತ; ಹಲವು ಮಹತ್ವದ ಹುದ್ದೆಗಳಿಗೆ ನೇಮಕ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 23:53 IST
Last Updated 19 ಜನವರಿ 2025, 23:53 IST
<div class="paragraphs"><p>ಟ್ರಂಪ್ </p></div>

ಟ್ರಂಪ್

   

ಡೊನಾಲ್ಡ್ ಟ್ರಂಪ್ ಅವರು ಎರಡನೆಯ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಟ್ರಂಪ್ ಅವರು ಈ ಬಾರಿ ತಮ್ಮ ಸರ್ಕಾರದಲ್ಲಿ ಭಾರತ ಮೂಲದ ಅಮೆರಿಕ ಪ್ರಜೆಗಳ ಪೈಕಿ ಹಲವರಿಗೆ ಮಹತ್ವದ ಹುದ್ದೆಗಳನ್ನು ನೀಡಿದ್ದಾರೆ. ಎಫ್‌ಬಿಐ ನಿರ್ದೇಶಕ, ಸರ್ಕಾರದ ಕಾರ್ಯದಕ್ಷತಾ ಇಲಾಖೆಯಂಥ ಉನ್ನತ ಸ್ಥಾನಗಳನ್ನು ಭಾರತ ಮೂಲದವರು ಪಡೆದುಕೊಂಡಿದ್ದಾರೆ. ಇದರ ಜತೆಗೆ, ಭಾರತ ಮೂಲದ ಆರು ಮಂದಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿ ಭಾರತ ಮೂಲದ ಅಮೆರಿಕ ಪ್ರಜೆಗಳ ಪ್ರಭಾವ ಹೆಚ್ಚುತ್ತಿರುವುದನ್ನು ಇದು ತೋರಿಸುತ್ತಿದೆ

ವಿವೇಕ್ ರಾಮಸ್ವಾಮಿ

ವಿವೇಕ್ ರಾಮಸ್ವಾಮಿ 

ADVERTISEMENT

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತಕ್ಕೆ ಸೇರ್ಪಡೆಯಾದ ಭಾರತ ಮೂಲದ ಅಮೆರಿಕನ್ ವಿವೇಕ್ ರಾಮಸ್ವಾಮಿ. ಟೆಸ್ಲಾ ಮಾಲೀಕ, ಉದ್ಯಮಿ ಎಲಾನ್ ಮಸ್ಕ್ ಅವರ ಜತೆಗೆ ಉದ್ಯಮಿ ವಿವೇಕ್ ರಾಮಸ್ವಾಮಿ ಅವರನ್ನೂ ಟ್ರಂಪ್ ಅವರು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ.

ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ವಿವೇಕ್ ರಾಮಸ್ವಾಮಿ ಮತ್ತು ಎಲಾನ್ ಮಸ್ಕ್ ಅವರ ಜವಾಬ್ದಾರಿಯಾಗಿದೆ.

ಕೇರಳದ ಪಾಲಕ್ಕಾಡ್‌ನಿಂದ ಅಮೆರಿಕಕ್ಕೆ ವಲಸೆ ಹೋದ ತಮಿಳು ಮನೆಮಾತಿನ ದಂಪತಿಯ ಮಗನಾಗಿ 1985ರಲ್ಲಿ ಸಿನ್ಸಿನಾಟಿಯಲ್ಲಿ ಜನಿಸಿದ ವಿವೇಕ್ ರಾಮಸ್ವಾಮಿ, ಅಮೆರಿಕದಲ್ಲಿ ಬಯೊಟೆಕ್ ಉದ್ಯಮಿಯಾಗಿದ್ದಾರೆ. ವಿಶೇಷ ಎಂದರೆ, ರಿಪಬ್ಲಿಕನ್ ಪಕ್ಷದಲ್ಲಿ ಪ್ರಾಥಮಿಕ ಹಂತದ ಚುನಾವಣೆಗೂ ಮೊದಲು ವಿವೇಕ್ ರಾಮಸ್ವಾಮಿ ಅವರೂ ಅಧ್ಯಕ್ಷೀಯ ಪಟ್ಟದ ಆಕಾಂಕ್ಷಿಯಾಗಿ ಅಮೆರಿಕದ ವಿವಿಧ ರಾಜ್ಯಗಳಲ್ಲಿ ಕಾರ್ಯಕರ್ತರ ಹಲವು ಸಭೆಗಳನ್ನು ನಡೆಸಿದ್ದರು. ಆದರೆ, ನಂತರ ಡೊನಾಲ್ಡ್ ಟ್ರಂಪ್ ಹೆಚ್ಚು ಜನಪ್ರಿಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರಿಂದ ಅವರನ್ನು ಅನುಮೋದಿಸಿ ಕಣದಿಂದ ಹಿಂದೆ ಸರಿದಿದ್ದರು. 

ಅಮೆರಿಕದ ಉಪಾಧ್ಯಕ್ಷರಾಗಿ ಜೆ.ಡಿ.ವ್ಯಾನ್ಸ್ ಆಯ್ಕೆಯಾಗಿರುವುದರಿಂದ ತೆರವಾಗಿರುವ ಒಹಿಯೋ ಗವರ್ನರ್ ಹುದ್ದೆಗೆ ವಿವೇಕ್ ರಾಮಸ್ವಾಮಿ ಅವರು ಸ್ಪರ್ಧಿಸುವ ಸಾಧ್ಯತೆಗಳೂ ಇವೆ. ಜೆ.ಡಿ.ವ್ಯಾನ್ಸ್ ಅವರ ಪತ್ನಿ ಉಷಾ ವ್ಯಾನ್ಸ್ ಅವರು ಆಂಧ್ರಪ್ರದೇಶ ಮೂಲದವರು.

ಶ್ರೀರಾಮ್ ಕೃಷ್ಣನ್

ಶ್ರೀರಾಮ್ ಕೃಷ್ಣನ್

ಭಾರತ ಮೂಲದ ಅಮೆರಿಕನ್ ವೆಂಚರ್ ಕ್ಯಾಪಿಟಲಿಸ್ಟ್ ಶ್ರೀರಾಮ್ ಕೃಷ್ಣನ್ ಅವರನ್ನು ಶ್ವೇತಭವನದ ಕೃತಕ ಬುದ್ಧಿಮತ್ತೆ ಕುರಿತ ನೀತಿಗಳ ಹಿರಿಯ ಸಲಹೆಗಾರರಾಗಿ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ. 

ಕೃಷ್ಣನ್‌ ಮೈಕ್ರೊಸಾಫ್ಟ್‌, ಟ್ವಿಟರ್, ಯಾಹೂ, ಫೇಸ್‌ಬುಕ್‌, ಸ್ನ್ಯಾಪ್‌ ಸಂಸ್ಥೆಗಳ ತಯಾರಿಕಾ ತಂಡದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಟ್ರಂಪ್ ಸರ್ಕಾರದ ನೀತಿ ನಿರೂಪಣೆಗೆ ಮಾರ್ಗದರ್ಶನ ನೀಡಲಿದ್ದಾರೆ. 

ಶ್ರೀರಾಮ್ ಅವರು ತಮಿಳುನಾಡು ಮೂಲದವರು. ಚೆನ್ನೈನಲ್ಲಿ ಹುಟ್ಟಿದ ಇವರು, ಕಾಂಚೀಪುರಂನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. 2005ರಲ್ಲಿ ತಮ್ಮ 21ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ಹೋದರು. ಶ್ರೀರಾಮ್ ಅವರ ಅನುಭವ ಮತ್ತು ತಿಳಿವಳಿಕೆಯನ್ನು ಗುರುತಿಸಿ ಟ್ರಂಪ್ ಅವರು ಈ ಜವಾಬ್ದಾರಿ ವಹಿಸಿದ್ದಾರೆ ಎನ್ನಲಾಗಿದೆ. 

ಅಮೆರಿಕದ ಕೆಲವು ವಲಯಗಳಲ್ಲಿ ಶ್ರೀರಾಮ್ ಕೃಷ್ಣನ್ ಅವರ ನೇಮಕಕ್ಕೆ ವಿರೋಧ ವ್ಯಕ್ತವಾಗಿದೆ. ಅವರು ಟ್ರಂಪ್ ಸರ್ಕಾರದ ವಲಸೆ ನೀತಿಯ ಮೇಲೆ ಪ್ರಭಾವ ಬೀರಬಹುದು ಎನ್ನುವುದು ಅವರ ವಾದವಾಗಿದೆ.

ಕಾಶ್ ಪಟೇಲ್

ಕಾಶ್ ಪಟೇಲ್

ಗುಜರಾತ್ ಮೂಲದ ದಂಪತಿಯ ಮಗನಾದ ಕಾಶ್‌ ಪಟೇಲ್ ಅವರನ್ನು ಅಮೆರಿಕ ಗುಪ್ತಚರ ಸಂಸ್ಥೆ (ಎಫ್‌ಬಿಐ) ನಿರ್ದೇಶಕರನ್ನಾಗಿ ಡೊನಾಲ್ಡ್‌ ಟ್ರಂಪ್‌ ನೇಮಕ ಮಾಡಿದ್ದಾರೆ. ವಕೀಲರಾದ ಅವರು ಅಂತರರಾಷ್ಟ್ರೀಯ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು, ನ್ಯಾಯಾಂಗ ಇಲಾಖೆ ಸೇರಿದ್ದರು.

ರಾಷ್ಟ್ರೀಯ ಭದ್ರತಾ ಸಂಸ್ಥೆಯಲ್ಲಿ ಭಯೋತ್ಪಾದನಾ ಕೃತ್ಯಗಳ ವಿರುದ್ಧದ ಕಾರ್ಯಾಚರಣೆಗಳಲ್ಲಿ ಪಟೇಲ್ ಮುಖ್ಯ ಪಾತ್ರ ವಹಿಸಿದ್ದರು. ರಕ್ಷಣಾ ಇಲಾಖೆಯಲ್ಲಿಯೂ ರಕ್ಷಣಾ ಕಾರ್ಯದರ್ಶಿಗೆ ಸಿಬ್ಬಂದಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಪಟೇಲ್‌ ಅವರು ರಷ್ಯಾದ ವಂಚನೆಯನ್ನು ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಟ್ರಂಪ್‌ ಬಣ್ಣಿಸಿದ್ದರು.

ತಮ್ಮ ವಿರುದ್ಧ ನಡೆಯುವ ಒಳಸಂಚನ್ನು ಪತ್ತೆಹಚ್ಚಿ, ಅದರಿಂದ ಸರ್ಕಾರವನ್ನು ಪಾರು ಮಾಡುವ ಸಲುವಾಗಿಯೇ ಕಾಶ್ ಪಟೇಲ್ ಅವರನ್ನು ಎಫ್‌ಬಿಐ ನಿರ್ದೇಶಕರಾಗಿ ಟ್ರಂಪ್ ಅವರು ನೇಮಕ ಮಾಡಿದ್ದಾರೆ ಎನ್ನಲಾಗಿದೆ. ಪಟೇಲ್ ಅವರು ಎಫ್‌ಬಿಐನಲ್ಲಿ ಸುಧಾರಣೆ ತರಬೇಕು ಎನ್ನುವ ಇರಾದೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

‌ಹರ್ಮೀತ್ ಧಿಲ್ಲೋನ್

ಹರ್ಮೀತ್ ಧಿಲ್ಲೋನ್

ಅಮೆರಿಕದ ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್‌ ಆಗಿ ಭಾರತ ಮೂಲದ ಹರ್ಮಿತ್‌ ಕೆ. ಧಿಲ್ಲೋನ್‌ ಅವರನ್ನು ಟ್ರಂಪ್ ಅವರು ನೇಮಿಸಿದ್ದಾರೆ.

ಚಂಡೀಗಢದ ಸಿಖ್ ಸಮುದಾಯದಲ್ಲಿ ಜನಿಸಿದ ಧಿಲ್ಲೋನ್‌ ಅವರು ಬಾಲ್ಯದಲ್ಲೇ ಹೆತ್ತವರ ಜೊತೆ ಅಮೆರಿಕಕ್ಕೆ ಹೋಗಿದ್ದರು. ಕ್ಯಾಲಿಫೋರ್ನಿಯಾದ ಈ ವಕೀಲೆ, ಅಮೆರಿಕದ ನಾಲ್ಕನೇ ಸರ್ಕೀಟ್‌ ನ್ಯಾಯಾಲಯದಲ್ಲಿ ನ್ಯಾಯಿಕ ಅಧಿಕಾರಿಯಾಗಿ ಕೆಲಸ ಮಾಡಿದ ನಂತರ ತಮ್ಮದೇ ಕಾನೂನು ಸಂಸ್ಥೆಯನ್ನು ಸ್ಥಾಪಿಸಿದ್ದರು.

2016ರಲ್ಲಿ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ವೇದಿಕೆ ಏರಿದ ಮೊದಲ ಭಾರತೀಯ ಅಮೆರಿಕನ್ ಎಂದು ಹೆಸರಾಗಿದ್ದರು. 2024ರ ರಿಪಬ್ಲಿಕನ್ ಸಮಾವೇಶದಲ್ಲಿ ಸಿಖ್ ಪ್ರಾರ್ಥನೆ ಓದುವ ಮೂಲಕ ಗಮನ ಸೆಳೆದಿದ್ದರು. 2023ರಲ್ಲಿ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಲು ಯತ್ನಿಸಿ ಸೋತಿದ್ದರು. ದೊಡ್ಡ ತಂತ್ರಜ್ಞಾನ ಸಂಸ್ಥೆಗಳ ವಿರುದ್ಧ, ಕಾರ್ಪೊರೇಟ್ ನೀತಿ ನಿಯಮಗಳ ವಿರುದ್ಧ ವಕೀಲರಾಗಿ ಹಲವು ಮೊಕದ್ದಮೆಗಳನ್ನು ನಡೆಸಿದರು. 

ಟ್ರಂಪ್ ಅವರ ಕಟ್ಟಾ ಬೆಂಬಲಿಗರಾದ ಧಿಲ್ಲೋನ್, ಪಕ್ಷದೊಳಗಿನ ಮತ್ತು ಪಕ್ಷದ ಹೊರಗಿನ ಟ್ರಂಪ್ ವಿರೋಧಿಗಳ ಮೇಲೆ ವಾಗ್ದಾಳಿ ಮಾಡುವುದಕ್ಕೆ ಹೆಸರಾದವರು. 

ಜೈ ಭಟ್ಟಾಚಾರ್ಯ

ಡಾ.ಜೈ ಭಟ್ಟಾಚಾರ್ಯ

ಅಮೆರಿಕದ ಆರೋಗ್ಯ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ ಅತ್ಯುನ್ನತ ಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಹೆಲ್ತ್‌ನ (ಎನ್‌ಐಎಚ್‌) ನೂತನ ನಿರ್ದೇಶಕರನ್ನಾಗಿ ಭಾರತ ಮೂಲದ ವಿಜ್ಞಾನಿ ಜೈ ಭಟ್ಟಾಚಾರ್ಯ ಅವರನ್ನು ನೇಮಕ ಮಾಡಲಾಗಿದೆ. 

ಜೈವಿಕ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಅತಿ ಹೆಚ್ಚು ಧನಸಹಾಯ ಮಾಡುವ ಸಂಸ್ಥೆ ಎಂದೇ ಹೆಸರಾಗಿದೆ. ಈ ಸಂಸ್ಥೆಯ ನೆರವಿನೊಂದಿಗೆ ಕೈಗೊಳ್ಳಲಾದ ಸಂಶೋಧನೆಗಳಿಗೆ 100ಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿಗಳು ಲಭಿಸಿವೆ. 2010ರಿಂದ 2019ರವರೆಗೆ ಅಮೆರಿಕದಲ್ಲಿ ಅನುಮೋದನೆ ಪಡೆದ ಔಷಧಗಳ ಪೈಕಿ ಶೇ 99ರಷ್ಟು ಈ ಸಂಸ್ಥೆಯ ನೆರವಿನಿಂದಲೇ ತಯಾರಾದಂಥವು ಎನ್ನುವುದು ಒಂದು ದಾಖಲೆಯಾಗಿದೆ.

ಕೋಲ್ಕತ್ತಾದಲ್ಲಿ ಜನಿಸಿದ ಜೈ ಭಟ್ಟಾಚಾರ್ಯ ಅವರು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದಿದ್ದಾರೆ. ಅವರು ಕೋವಿಡ್–19 ಸಂದರ್ಭದಲ್ಲಿ ನೀಡಿದ್ದ ಹೇಳಿಕೆ ವಿವಾದಕ್ಕೆ ಗುರಿಯಾಗಿತ್ತು. ಕೊರೊನಾ ಅನ್ನು ಆರೋಗ್ಯವಂತರ ನಡುವೆ ಹರಡಲು ಬಿಡಬೇಕು ಮತ್ತು ಲಾಕ್‌ಡೌನ್ ಹೇರಬಾರದು ಎಂದು ಅವರು ಪ್ರತಿಪಾದಿಸಿದ್ದರು. ಭಾರತದಲ್ಲಿ ಬಹುತೇಕರು ಸಹಜ ರೋಗನಿರೋಧಕತೆ ಹೊಂದಿದ್ದು, ಕೊರೊನಾದಿಂದ ಅಪಾಯವಿಲ್ಲ ಎಂದು ಹೇಳಿದ್ದರು. ಭಾರತದಲ್ಲಿ ಕೋವಿಡ್ ಸಂಬಂಧಿ ಸಾವುಗಳು ಭಾರಿ ಪ್ರಮಾಣದಲ್ಲಿ ವರದಿಯಾದ ನಂತರ ಟೀಕೆಗೂ ಗುರಿಯಾಗಿದ್ದರು.      

ಅಮೆರಿಕದ ಸಂಸತ್‌ನಲ್ಲಿ ‘ಸಮೋಸಾ ಗುಂಪು’

ಕಳೆದ ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ನಡೆದ ಚುನಾವಣೆಯಲ್ಲಿ ಭಾರತ ಮೂಲದ ಒಂಬತ್ತು ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಆರು ಮಂದಿ ಗೆಲುವು ಸಾಧಿಸಿದ್ದಾರೆ. ಅಮೆರಿಕದ ಕಾಂಗ್ರೆಸ್‌ನಲ್ಲಿರುವ ‘ಸಮೋಸಾ ಗುಂಪಿ’ನಲ್ಲಿ (ಭಾರತ ಮೂಲದ ಸದಸ್ಯರನ್ನು ಒಟ್ಟಾಗಿ ಅಮೆರಿಕದಲ್ಲಿ ಸಮೋಸಾ ಗುಂಪು ಎಂದು ಕರೆಯಲಾಗುತ್ತದೆ) ಈ ಹಿಂದೆ ಐವರು ಇದ್ದರು. ಆ ಸಂಖ್ಯೆ ಈ ಬಾರಿ ಆರಕ್ಕೆ ಏರಿದೆ.  

ಸುಹಾಸ್‌ ಸುಬ್ರಹ್ಮಣ್ಯಂ: ಅಮೆರಿಕದ ಕಾಂಗ್ರೆಸ್‌ಗೆ ಆಯ್ಕೆಯಾದ ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಸುಹಾಸ್‌ ಸುಬ್ರಹ್ಮಣ್ಯಂ ಅವರದ್ದು. ಇವರು ವರ್ಜೀನಿಯಾದ 10ನೇ ಕಾಂಗ್ರೆಸ್‌ ಜಿಲ್ಲೆಯ ಪ್ರತಿನಿಧಿಯಾಗಿ ಡೆಮಾಕ್ರಟಿಕ್‌ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಸುಬ್ರಹ್ಮಣ್ಯಂ ಅವರ ತಾಯಿ ಬೆಂಗಳೂರಿನವರು. ಅಮೆರಿಕದಲ್ಲಿ ಶಿಕ್ಷಣ ಪಡೆಯುವುದಕ್ಕಾಗಿ 1979ರಲ್ಲಿ ಅಲ್ಲಿಗೆ ವಲಸೆ ಹೋಗಿದ್ದರು. ಸುಹಾಸ್‌ ಅವರು ನಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.

ಆ್ಯಮಿ ಬೆರಾ: 2013ರಿಂದ ಅಮೆರಿಕ ಕಾಂಗ್ರೆಸ್‌ನ ಸದಸ್ಯರಾಗಿರುವ ಆ್ಯಮಿ ಬೆರಾ ಅವರು ದೀರ್ಘಾವಧಿಗೆ ಅಮೆರಿಕ ಕಾಂಗ್ರೆಸ್‌ ಪ್ರತಿನಿಧಿಸುತ್ತಿರುವ ಭಾರತ ಮೂಲದ ಅಮೆರಿಕ ಪ್ರಜೆ. ಲಾಸ್‌ ಏಂಜಲೀಸ್‌ನಲ್ಲಿ ಜನಿಸಿರುವ ಬೆರಾ ಅವರು ವೈದ್ಯ ಮತ್ತು ವೈದ್ಯಕೀಯ ಶಿಕ್ಷಣ ಭೋಧಕರಾಗಿದ್ದವರು. ಡೆಮಾಕ್ರಟಿಕ್‌ ಪಕ್ಷದವರಾದ ಇವರು ಕ್ಯಾಲಿಫೋರ್ನಿಯಾದ 6ನೇ ಕಾಂಗ್ರೆಸ್‌ ಜಿಲ್ಲೆಯಿಂದ ಏಳನೇ ಬಾರಿ ಆಯ್ಕೆಯಾಗಿದ್ದಾರೆ. ಆ್ಯಮಿ ಬೆರಾ ಅವರ ಕುಟುಂಬದ ಮೂಲ ಗುಜರಾತ್‌.

ರಾಜಾ ಕೃಷ್ಣಮೂರ್ತಿ

ರಾಜಾ ಕೃಷ್ಣಮೂರ್ತಿ: ಇವರು ಇಲಿನಾಯ್‌ ಕ್ಷೇತ್ರದಿಂದ ಡೆಮಾಕ್ರಟಿಕ್‌ ಅಭ್ಯರ್ಥಿಯಾಗಿ ಅಮೆರಿಕದ ಜನಪ್ರತಿನಿಧಿ ಸಭೆಗೆ ಪುನರಾಯ್ಕೆಯಾಗಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಸಂಸತ್‌ ಸದಸ್ಯರಾಗಿದ್ದ ಇವರು ಈಗ ಸಂಸತ್‌ ಪ್ರವೇಶಿಸುತ್ತಿರುವುದು ಐದನೇ ಬಾರಿ. ನವದೆಹಲಿಯಲ್ಲಿ ಜನಿಸಿದ್ದ ಇವರು, ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ವಕೀಲರಾಗಿರುನ ಕೃಷ್ಣಮೂರ್ತಿ ಅವರು ಗುಪ್ತಚರ ವಿಷಯಗಳಿಗೆ ಸಂಬಂಧಿಸಿದ ಜನಪ್ರತಿನಿಧಿ ಸಭೆಯ ಶಾಶ್ವತ ಸಮಿತಿಯ ಸದಸ್ಯರೂ ಆಗಿದ್ದಾರೆ.

ರೋ ಖನ್ನಾ: ಕ್ಯಾಲಿಫೋರ್ನಿಯಾದ ಹದಿನೇಳನೇ ಕಾಂಗ್ರೆಸ್‌ ಡಿಸ್ಟ್ರಿಕ್ಟ್ ಪ್ರತಿನಿಧಿಯಾಗಿ ಡೆಮಾಕ್ರಟಿಕ್‌ ಪಕ್ಷದಿಂದ ಚುನಾಯಿತರಾಗಿದ್ದಾರೆ. ಸಿಲಿಕಾನ್ ವ್ಯಾಲಿಯ ಹೃದಯ ಭಾಗವಾದ ಹದಿನೇಳನೇ ಕಾಂಗ್ರೆಸ್‌ ಜಿಲ್ಲೆ 1990ರಿಂದಲೂ ಡೆಮಾಕ್ರಟಿಕ್ ಪಕ್ಷದ ಭದ್ರಕೋಟೆಯಾಗಿದೆ. 2016ರಲ್ಲಿ ರೋ ಖನ್ನಾ ಅವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. 1976ರಲ್ಲಿ ಪಂಜಾಬ್ ಮೂಲದ ಕುಟುಂಬದಲ್ಲಿ ಫಿಲಡೆಲ್ಫಿಯಾದಲ್ಲಿ ರೋ ಖನ್ನಾ ಜನಿಸಿದರು. ಇವರು ಅರ್ಥಶಾಸ್ತ್ರ ಮತ್ತು ಕಾನೂನು ಪದವೀಧರರಾಗಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿದ್ದರು. 

ಶ್ರೀ ಥಾಣೇದಾರ್: ಇವರು ಬೆಳಗಾವಿ ಮೂಲದವರು. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ನಂತರ 1979ರಲ್ಲಿ ಅಮೆರಿಕಕ್ಕೆ ವಲಸೆ ಹೋದರು. ಅಮೆರಿಕದ ಅಕ್ರಾನ್ ವಿಶ್ವವಿದ್ಯಾಲಯದಲ್ಲಿ 1982ರಲ್ಲಿ ಪಿಎಚ್‌.ಡಿ ಪದವಿ ಗಳಿಸಿದರು. 1988ರಿಂದ ಅಮೆರಿಕದ ಪ್ರಜೆಯಾಗಿದ್ದಾರೆ.    ಶ್ರೀ ಥಾಣೇದಾರ್ ಅವರು ಅಮೆರಿಕದಲ್ಲಿ ಔಷಧ ಸಂಶೋಧಕರಾಗಿ, ಉದ್ಯಮಿಯಾಗಿ ಯಶಸ್ಸು ಗಳಿಸಿದ್ದಾರೆ. ಇವರು ಮಿಷಿಗನ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. 

ಪ್ರಮೀಳಾ ಜಯಪಾಲ್: ಇವರು ಅಮೆರಿಕ ಸಂಸತ್ ಅನ್ನು ಪ್ರತಿನಿಧಿಸಿದ ದಕ್ಷಿಣ ಏಷ್ಯಾ ಮೂಲದ ಮೊದಲ ಮಹಿಳೆ ಎನಿಸಿದ್ದಾರೆ. ಇವರು ವಾಷಿಂಗ್ಟನ್ 7ನೇ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಸತತ 5ನೇ ಬಾರಿಗೆ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಭಾರತದಲ್ಲಿ ಜನಿಸಿ, ತಮ್ಮ 16ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ಬಂದರು. ನಂತರ ನಾರ್ತ್‌ವೆಸ್ಟ್ರನ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಗಳಿಸಿದರು. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅವರ ವಲಸೆ ನೀತಿಯ ವಿರುದ್ಧ ಹೋರಾಡಿದವರಲ್ಲಿ ಪ್ರಮೀಳಾ ಜಯಪಾಲ್ ಮುಖ್ಯರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.