ADVERTISEMENT

ಆಳ–ಅಗಲ: ಎಪ್‌ಸ್ಟೈನ್ ಫೈಲ್ಸ್‌; ಬಗೆದಷ್ಟೂ ಆಳ

ಲೈಂಗಿಕ ಅಪರಾಧಿಯ ಸಂಪರ್ಕದಲ್ಲಿ ಜಗತ್ತಿನ ಖ್ಯಾತನಾಮರು, ಪ್ರಭಾವಿಗಳು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 18:50 IST
Last Updated 4 ಫೆಬ್ರುವರಿ 2026, 18:50 IST
<div class="paragraphs"><p>ಜೆಫ್ರಿ ಎಪ್‌ಸ್ಟೈನ್‌</p></div>

ಜೆಫ್ರಿ ಎಪ್‌ಸ್ಟೈನ್‌

   
ಅಮೆರಿಕದ ಜೆಫ್ರಿ ಎಪ್‌ಸ್ಟೈನ್ ಎಂಬ ಲೈಂಗಿಕ ಅಪರಾಧಿಯ ಕಥೆ ಜಾಗತಿಕ ಮಟ್ಟದಲ್ಲಿ ತಲ್ಲಣ ಉಂಟುಮಾಡಿದೆ. ಡೊನಾಲ್ಡ್ ಟ್ರಂಪ್, ನರೇಂದ್ರ ಮೋದಿ, ಬಿಲ್ ಕ್ಲಿಂಟನ್ ಅವರಂಥ ಪ್ರಭಾವಿ ರಾಜಕಾರಣಿಗಳು, ಎಲಾನ್ ಮಸ್ಕ್, ಬಿಲ್ ಗೇಟ್ಸ್, ಅನಿಲ್ ಅಂಬಾನಿ ಅವರಂಥ ಉದ್ಯಮಿಗಳು, ಬ್ರಿಟಿಷ್ ರಾಜಮನೆತನದ ಆಂಡ್ರ್ಯೂ ಮ್ಯಾನ್‌ಹಟನ್–ವಿಂಡ್ಸರ್, ಅಮೆರಿಕದ ಆತ್ಮಸಾಕ್ಷಿಯಂತಿದ್ದ ಭಾಷಾಶಾಸ್ತ್ರಜ್ಞ ನೋಮ್ ಚಾಮ್‌ಸ್ಕಿ ಅವರ ಹೆಸರುಗಳು ಎಪ್‌ಸ್ಟೈನ್‌ ಫೈಲ್ಸ್‌ನಲ್ಲಿವೆ. ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಈ ದಾಖಲೆಗಳಲ್ಲಿ ಹೆಸರು ಪ್ರಸ್ತಾಪ ಆಗಿರುವವರೆಲ್ಲರೂ ತಪ್ಪು ಮಾಡಿದವರು ಎಂದು ಹೇಳಲಾಗದು. ಆದರೆ, ಹಲವರ ಹೆಸರುಗಳಿಗೆ ಕಳಂಕ ಅಂಟಿದೆ. ಕೆಲವರ ವಿರುದ್ಧದ ಆರೋಪಗಳು ಸುಳ್ಳು ಎನ್ನುವ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಬಗೆದಷ್ಟೂ ಆಳ, ಮೊಗೆದಷ್ಟೂ ಕೆಸರು. ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ನ ಸಂಪರ್ಕದಲ್ಲಿ ಇದ್ದಂಥವರ ಪಟ್ಟಿ ಬೆಳೆಯುತ್ತಲೇ ಇದೆ. ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ 30 ಲಕ್ಷ ಪುಟಗಳ ದಾಖಲೆಗಳು, 1.8 ಲಕ್ಷ ಚಿತ್ರಗಳು ಮತ್ತು ಎರಡು ಸಾವಿರ ವಿಡಿಯೊಗಳು ಜಗತ್ತಿನ ಹಲವು ದೇಶಗಳ, ಹಲವು ಕ್ಷೇತ್ರಗಳ ಪ್ರಭಾವಿಗಳ ಹೆಸರುಗಳನ್ನು ಒಳಗೊಂಡಿವೆ. ಒಬ್ಬೊಬ್ಬರ ಹೆಸರು ಹೊರಗೆ ಬಂದಾಗಲೂ ಸಂಚಲನ ಉಂಟಾಗುತ್ತಿದೆ. ಅದಕ್ಕೆ ಕಾರಣ ಜೆಫ್ರಿ ಎಪ್‌ಸ್ಟೈನ್‌ನ ಹೀನ ಚಾರಿತ್ರ್ಯ ಮತ್ತು ಅವನು ಎಸಗಿದ ಅಪರಾಧಗಳ ಸ್ವರೂಪ.

ನ್ಯೂಯಾರ್ಕ್‌ನಲ್ಲಿ ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಎಪ್‌ಸ್ಟೈನ್, ಪದವಿ ಶಿಕ್ಷಣ ಪೂರೈಸದಿದ್ದರೂ ಮ್ಯಾನ್‌ಹಟನ್‌ನ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಗಣಿತ ಮತ್ತು ಭೌತಶಾಸ್ತ್ರ ಕಲಿಸುವ ಶಿಕ್ಷಕನಾಗಿದ್ದ. ಶ್ರೀಮಂತರ ಮಕ್ಕಳ ಶಾಲೆ ಅದು. ಅಲ್ಲಿನ ಪರಿಚಯಗಳಿಂದ ಹಣಕಾಸು ಸಂಸ್ಥೆಯೊಂದರಲ್ಲಿ ಪಾಲುದಾರನಾಗಿ ಸೇರಿದ. ಅಲ್ಪ ಅವಧಿಯಲ್ಲೇ ಅಪಾರ ಹಣ ಗಳಿಸಿದ. ತನ್ನ ಬೆಳವಣಿಗೆಯ ಹಂತದಲ್ಲಿ ಅವನು ಕಾನೂನು ಮತ್ತು ನೈತಿಕತೆಯ‌ ಎಲ್ಲೆಗಳನ್ನು ಧಿಕ್ಕರಿಸುತ್ತಲೇ ಸಾಗಿದ. ಶ್ರೀಮಂತನಾದ ನಂತರ ಫ್ಲಾರಿಡಾದ ಪಾಮ್ ಬೀಚ್‌ನಲ್ಲಿ, ಮೆಕ್ಸಿಕೊ, ನ್ಯೂಯಾರ್ಕ್‌ಗಳಲ್ಲಿ ಬಂಗಲೆಗಳನ್ನು ಖರೀದಿಸಿದ. ಅವುಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರಿಗೆ ಅದ್ದೂರಿ ಪಾರ್ಟಿಗಳನ್ನು (ಔತಣಕೂಟ) ಸಂಘಟಿಸುವುದಕ್ಕೆ ಆರಂಭಿಸಿ, ಅದರ ಮೂಲಕ ಪ್ರಭಾವಿಗಳ ಸಂಪರ್ಕ ಗಳಿಸಿದ. ದಿನಕಳೆದಂತೆ ಆತನ ಪಾರ್ಟಿಗಳು ಜನಪ್ರಿಯವಾದವು. ದೇಶವಿದೇಶಗಳ ಖ್ಯಾತನಾಮರೂ ಅವನ ಸಂಪರ್ಕಕ್ಕೆ ಬಂದರು. ‘ನನಗೆ ಎಪ್‌ಸ್ಟೈನ್ 15 ವರ್ಷಗಳಿಂದ ಗೊತ್ತು. ಭಯಂಕರ ಆಸಾಮಿ. ಆತನ ಜತೆಗಿರುವುದು ಖುಷಿ ನೀಡುತ್ತದೆ. ನನ್ನಂತೆಯೇ ಆತನೂ ಸುಂದರ ಯುವತಿಯರನ್ನು ಇಷ್ಟಪಡುತ್ತಾನೆ’ ಎಂದು ಡೊನಾಲ್ಡ್ ಟ್ರಂಪ್ 2002ರಲ್ಲಿ ಹೇಳಿದ್ದರು. 

ADVERTISEMENT

ಆದರೆ, ಎಪ್‌ಸ್ಟೈನ್‌ನ ನಿಜವಾದ ಮುಖ ಹೊರಬರಲು ಹೆಚ್ಚು ಕಾಲ ಬೇಕಾಗಲಿಲ್ಲ. ಅವನು ತನ್ನ ಕಾಮತೃಷಗೆ ಅನೇಕ ಬಾಲಕಿಯರನ್ನು ಬಳಸಿಕೊಂಡಿದ್ದರ ಬಗ್ಗೆ ವರದಿಗಳು ಬಂದವು. ಅದಕ್ಕಿಂತಲೂ ಮುಖ್ಯವಾಗಿ ಅನೇಕ ಬಾಲಕಿಯರನ್ನು, ಮಹಿಳೆಯರನ್ನು ಕಳ್ಳಸಾಗಣೆ ಮಾಡಿ, ಅವರನ್ನು ಲೈಂಗಿಕ ಕಾರ್ಯಕರ್ತೆಯರನ್ನಾಗಿ ಬಳಸಿದ್ದಾನೆ, ಅವರ ಮೂಲಕ ವೇಶ್ಯಾವಾಟಿಕೆ ಮಾಡಿದ್ದಾನೆ ಎನ್ನುವ ಆಘಾತಕಾರಿ ವಿಚಾರಗಳು ಹೊರಬಂದವು. 

2005ರಲ್ಲಿ ಲೈಂಗಿಕ ಅಪರಾಧಗಳಿಗಾಗಿ ಎಪ್‌ಸ್ಟೈನ್ ಮೊದಲ ಬಾರಿಗೆ ಬಂಧನಕ್ಕೊಳಗಾದ. 2008ರಲ್ಲಿ ಅವನ ವಿರುದ್ಧದ ಆರೋಪಗಳು ಸಾಬೀತಾಗುತ್ತವೆ. ಆದರೂ ಜೈಲು ಶಿಕ್ಷೆಯಿಂದ ಬಚಾವಾದ. ಆದರೆ, ಬಾಲಕಿಯರ ಕಳ್ಳಸಾಗಣೆ ಮತ್ತು ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ 2019ರಲ್ಲಿ ಜೈಲು ಸೇರಿ, ವಿಚಾರಣೆಗೆ ಮುನ್ನವೇ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡ. ಅವನ ಐಫೋನ್‌, ಹಾರ್ಡ್‌ಡಿಸ್ಕ್ ಮತ್ತು ಇ–ಮೇಲ್‌ನಲ್ಲಿದ್ದ ಬೃಹತ್ ಪ್ರಮಾಣದ (300 ಗಿಗಾಬೈಟ್‌ಗೂ ಹೆಚ್ಚು) ದಾಖಲೆಗಳು ಎಪ್‌ಸ್ಟೈನ್ ಫೈಲ್ಸ್ ಎಂದು ಹೆಸರು ಪಡೆದವು. ಅವುಗಳನ್ನು ಬಹಿರಂಗಪಡಿಸಬೇಕು ಎನ್ನುವ ಕೂಗು ಕೇಳಿಬಂತು. 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿಯೂ ಪ್ರಸ್ತಾಪವಾಯಿತು. ಈ ಫೈಲ್ಸ್ ಅನ್ನು ಬಹಿರಂಗ‍ಪಡಿಸುವುದಕ್ಕಾಗಿಯೇ ‘ಎಪ್‌ಸ್ಟೈನ್ ಫೈಲ್ಸ್‌ ಪಾರದರ್ಶಕ ಕಾಯ್ದೆ’ (2025ರ ನವೆಂಬರ್) ರೂಪಿಸಲಾಯಿತು. ಆನಂತರ ಹಂತಹಂತವಾಗಿ ಫೈಲ್ಸ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇನ್ನೂ ಅನೇಕ ದಾಖಲೆಗಳು ಬಿಡುಗಡೆಯಾಗದೇ ಉಳಿದಿವೆ ಎನ್ನಲಾಗುತ್ತಿದೆ. ಬಿಡುಗಡೆಯಾಗಿರುವ ದಾಖಲೆಗಳು ಅಮೆರಿಕದ ನ್ಯಾಯಾಂಗ ಇಲಾಖೆ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. 

ಈ ದಾಖಲೆಗಳಲ್ಲಿ ಅನೇಕರ ಹೆಸರು ಉಲ್ಲೇಖವಾಗಿದ್ದು, ಅವರೆಲ್ಲರೂ ತಪ್ಪಿತಸ್ಥರು ಎನ್ನಲಾಗುವುದಿಲ್ಲ. ಹಲವರ ಹೆಸರು ಅಲ್ಲಿ ಹೇಗೆ ಮತ್ತು ಏಕೆ ಪ್ರಸ್ತಾಪವಾಗಿದೆ ಎನ್ನುವುದೂ ಗೊತ್ತಿಲ್ಲ. ಕೆಲವರು ಎಪ್‌ಸ್ಟೈನ್ ಜತೆಗಿನ ನಂಟನ್ನು ನಿರಾಕರಿಸಿದ್ದು, ತಾವು ಏನೂ ತಪ್ಪು ಮಾಡಿಲ್ಲ ಎಂದಿದ್ದಾರೆ. ಹಲವರು ಎಪ್‌ಸ್ಟೈನ್ ಜತೆಗೆ ಇರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಹೆಸರುಗಳ ಜತೆಗೆ ಜಾಗತಿಕ ರಾಜಕೀಯ, ವ್ಯವಹಾರಗಳ ಬಗ್ಗೆಯೂ ಚರ್ಚೆಗಳು ನಡೆದಿರುವುದನ್ನು ದಾಖಲೆಗಳು ಹೇಳುತ್ತಿವೆ. ಹಲವು ಕಾರಣಗಳಿಗೆ ಹೆಸರುಗಳು ಪ್ರಸ್ತಾಪ ವಾಗಿರುವ ಸಾಧ್ಯತೆ ಇದೆ. ಆದರೆ, ಎ‍ಪ್‌ಸ್ಟೈನ್ ಫೈಲ್ಸ್‌ನಿಂದ ಅನೇಕರ ಹೆಸರಿಗೆ ಕಳಂಕ ಅಂಟಿರುವುದಂತೂ ಸತ್ಯ.    

ಎಪ್‌ಸ್ಟೈನ್‌ ಫೈಲ್ಸ್‌ನಲ್ಲಿ ಮಹಿಳೆಯೊಂದಿಗೆ ಒಳಉಡುಪಿನಲ್ಲಿರುವ ಚಿತ್ರ ಬಹಿರಂಗ ಗೊಂಡಿದ್ದರಿಂದ ಇಂಗ್ಲೆಂಡ್‌ನ ಹೌಸ್ ಆಫ್ ಲಾರ್ಡ್ಸ್ (ಮೇಲ್ಮನೆ) ಸದಸ್ಯ ಸ್ಥಾನಕ್ಕೆ ಪೀಟರ್ ಮ್ಯಾಂಡೆಲ್‌ಸನ್ ರಾಜೀನಾಮೆ ನೀಡಿದರೆ, ಮಹಿಳೆಯೊಂದಿಗೆ ಅನುಚಿತ ಸ್ಥಿತಿಯಲ್ಲಿರುವ ಚಿತ್ರ ಹೊರಗೆ ಬಂದಿದ್ದರಿಂದ ಬ್ರಿಟನ್‌ನ ಬಕಿಂಗ್‌ಹ್ಯಾಮ್ ಅರಮನೆಯಿಂದ ಆ್ಯಂಡ್ರೂ ಮೌಂಟ್‌ಬ್ಯಾಟನ್ ವಿಂಡ್ಸರ್ ಅವರನ್ನು ಹೊರಹಾಕಲಾಗಿದೆ. ಎಪ್‌ಸ್ಟೈನ್‌ನೊಂದಿಗೆ ಮಹಿಳೆಯರ ಬಗ್ಗೆ ಚಾಟ್ ಮಾಡಿದ್ದಕ್ಕೆ ಸ್ಲೊವಾಕಿಯಾದ ವಿದೇಶಾಂಗ ಸಚಿವ ಮೀರೊಸ್ಲಾವ್ ಲಾಜಾಕ್ ಪದವಿ ತೊರೆದಿದ್ದಾರೆ.

ಫೈಲ್ಸ್‌ನಲ್ಲಿ ಯಾರ್‍ಯಾರು?
ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ನಾರ್ವೆಯ ನೊಬೆಲ್ ಸಮಿತಿ ಮಾಜಿ ಅಧ್ಯಕ್ಷ ತೂರಬ್‌ಯರ್ನ್ ಯಾಕ್‌ಲ್ಹಂಡ್, ಉದ್ಯಮಿ ಸ್ಟೀವ್ ಟಿಶ್, ಮೈಕೆಲ್ ಜಾಕ್ಸನ್, ಗೂಗಲ್‌ ಸಹ ಸಂಸ್ಥಾಪಕ ಸರ್ಗೆ ಬ್ರಿನ್, ಪತ್ರಕರ್ತ ಕೇಟಿ ಕೊರಿಕ್, ನಿರ್ದೇಶಕರಾದ ವೂಡಿ ಅಲೆನ್, ಮೀರಾ ನಾಯರ್, ಅನುರಾಗ್ ಕಶ್ಯಪ್, ಟ್ರಂಪ್ ಆಪ್ತ ಸ್ಟೀವ್ ಬ್ಯಾನನ್, ಲೇಖಕ ದೀಪಕ್ ಚೋಪ್ರಾ ಹೀಗೆ ದೇಶವಿದೇಶಗಳ ಖ್ಯಾತನಾಮರಿದ್ದಾರೆ. 

ಮೋದಿ, ಅನಿಲ್‌ ಅಂಬಾನಿ, ಹರ್ದೀಪ್‌ ಸಿಂಗ್‌ ಪುರಿ ಹೆಸರು

ಅಮೆರಿಕ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಮತ್ತು ಉದ್ಯಮಿ ಅನಿಲ್‌ ಅಂಬಾನಿ ಅವರ ಹೆಸರುಗಳೂ ಪ್ರಸ್ತಾಪವಾಗಿವೆ.

ಹರ್ದೀಪ್‌ ಸಿಂಗ್‌ ಪುರಿ ಮತ್ತು ಅನಿಲ್‌ ಅಂಬಾನಿ ಅವರು ಎಪ್‌ಸ್ಟೈನ್‌ನೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದರು ಎಂಬುದನ್ನು ದಾಖಲೆಗಳು ಹೇಳುತ್ತವೆ. ಸಿಂಗ್‌ ಅವರು ಎಪ್‌ಸ್ಟೈನ್‌ಗೆ ಇಮೇಲ್‌ ಮಾಡಿರುವುದು, ಅವನ ಮನೆಗೆ ಭೇಟಿ ನೀಡಿರುವುದು, ಅನಿಲ್‌ ಅಂಬಾನಿ ಅವರು ಸಂದೇಶ ಕಳುಹಿಸಿರುವುದು, ಅಮೆರಿಕದಲ್ಲಿ ಭೇಟಿ ಮಾಡಿದ ವಿವರಗಳೂ ದಾಖಲೆಯಲ್ಲಿವೆ. ಅನಿಲ್‌ ಅಂಬಾನಿ ಮತ್ತು ಎಪ್‌ಸ್ಟೈನ್‌ ನಡುವೆ ನಡೆದಿದ್ದ ಸಂಭಾಷಣೆಯಲ್ಲಿ ಪ್ರಧಾನಿ ಮೋದಿ ಅವರ ಹೆಸರು ಪ್ರಸ್ತಾಪವಾಗುತ್ತದೆ. 

ಮೋದಿ ಪರ ಅನಿಲ್ ಅಂಬಾನಿ ಮಾತು

ರಿಲಯನ್ಸ್‌ ಸಮೂಹದ ಅಧ್ಯಕ್ಷ ಅನಿಲ್‌ ಅಂಬಾನಿ ಅವರು ಎಪ್‌ಸ್ಟೈನ್‌ನೊಂದಿಗೆ 2017ರಿಂದ 2019ರವರೆಗೂ ಸಂಪರ್ಕದಲ್ಲಿದ್ದರು ಎಂಬುದನ್ನು ದಾಖಲೆಗಳು ಹೇಳುತ್ತವೆ. ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಸೇರಿದಂತೆ ಹಲವು ವಿಚಾರಗಳ ನಡುವೆ ಇಬ್ಬರೂ ಇಮೇಲ್‌, ಮೊಬೈಲ್‌ ಸಂದೇಶಗಳ (ಐಮೆಸೇಜಸ್‌) ಮೂಲಕ ಮಾತುಕತೆ ನಡೆಸಿದ್ದರೆ, 2019ರ ಲೋಕಸಭಾ ಚುನಾವಣೆ ನಡೆಯುತ್ತಿದ್ದ ಸಮಯದಲ್ಲಿ ಇಬ್ಬರೂ ಭೇಟಿಯಾದ್ದಾರೆ. 

2017ರ ಮಾರ್ಚ್‌ 16ರಂದು ಅಂಬಾನಿ ಅವರು ಎಪ್‌ಸ್ಟೈನ್‌ಗೆ, ‘ಡೊನಾಲ್ಡ್‌ ಟ್ರಂಪ್‌ ಆಪ್ತ, ಶ್ವೇತಭವನದ ಹಿರಿಯ ಅಧಿಕಾರಿಯಾಗಿದ್ದ ಸ್ಟೀವ್‌ ಬಾನನ್‌ ಸೇರಿದಂತೆ ಟ್ರಂಪ್‌ ವಲಯದಲ್ಲಿರುವ ಪ್ರಮುಖ ನಾಯಕರನ್ನು ಸಂಪರ್ಕಿಸಲು ‘ನಾಯಕತ್ವ’ವು ಸಹಾಯ ಕೇಳುತ್ತಿದೆ’ ಎಂದು ಅಂಬಾನಿ ಐಮೆಸೇಜ್‌ ಕಳುಹಿಸಿದ್ದರು. ಟ್ರಂಪ್‌ ಅವರು ಮೊದಲ ಬಾರಿಗೆ ಅಧ್ಯಕ್ಷರಾಗಿ ಎರಡು ತಿಂಗಳ ಬಳಿಕ ಈ ಮಾತುಕತೆ ನಡೆದಿತ್ತು. 

ಎರಡು ವಾರದ ನಂತರ, ಮಾರ್ಚ್‌ 29ರಂದು ಮತ್ತೆ ಎಪ್‌ಸ್ಟೈನ್‌ಗೆ ಸಂದೇಶ ಕಳುಹಿಸಿದ್ದ ಅಂಬಾನಿ, ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಯ ದಿನಾಂಕ ಮತ್ತು ಸ್ಥಳಗಳ ಬಗ್ಗೆ ವಿಚಾರಿಸಿದ್ದರು. 

ಜುಲೈ 5, 6ರಂದು ಮೋದಿ ಅವರ ಇಸ್ರೇಲ್‌ ಭೇಟಿಯನ್ನು ಪ್ರಸ್ತಾಪಿಸಿದ್ದ ಅವರು, 7 ಮತ್ತು 8 ರಂದು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಮತ್ತು ಅಲ್ಲಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿ ಮಾಡಲಿದ್ದಾರೆ ಎಂದೂ ಹೇಳುತ್ತಾರೆ. ವಾಷಿಂಗ್ಟನ್‌ನಲ್ಲಿ ಮತ್ತೊಂದು ಪ್ರತ್ಯೇಕ ಭೇಟಿ ಆಯೋಜನೆಯಾಗುತ್ತಿರುವ ಬಗ್ಗೆಯೂ ಕೇಳಿದ್ದರು. 

ಜುಲೈ 6, 7ರಂದು ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಈ ಭೇಟಿ ಬಳಿಕ ಎಪ್‌ಸ್ಟೈನ್‌ ಜೇಬರ್‌ ವೈ ಎಂಬ ವ್ಯಕ್ತಿಗೆ ಮೇಲ್‌ ಮಾಡಿ, ‘ಭಾರತದ ಪ್ರಧಾನಿ ಮೋದಿ ಸಲಹೆ ಪಡೆದರು. ಅಮೆರಿಕ ಅಧ್ಯಕ್ಷರ ಲಾಭಕ್ಕಾಗಿ ಇಸ್ರೇಲ್‌ನಲ್ಲಿ ಕುಣಿದರು, ಹಾಡಿದರು. ಅವರಿಬ್ಬರೂ ಕೆಲವು ವಾರಗಳ ಹಿಂದೆ ಭೇಟಿಯಾಗಿದ್ದರು. ಅದು ಕೆಲಸ ಮಾಡಿತು’ ಎಂದು ಹೇಳಿದ್ದ.

ಮೋದಿ–ಟ್ರಂಪ್‌ ವಾಷಿಂಗ್ಟನ್‌ನಲ್ಲಿ ಜೂನ್‌ 26ರಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. 

ನಿರಾಕರಿಸಿದ ಕೇಂದ್ರ: ಮೋದಿ ಅವರ ಕುರಿತಾಗಿ ಎಪ್‌ಸ್ಟೈನ್‌ ದಾಖಲೆಗಳಲ್ಲಿರುವ ಅಂಶಗಳಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯು 2017ರ ಜುಲೈನಲ್ಲಿ ಪ್ರಧಾನಿ ಅವರು ಇಸ್ರೇಲ್‌ ಅವರಿಗೆ ಭೇಟಿ ನೀಡಿದ್ದು ಬಿಟ್ಟರೆ, ಉಳಿದೆಲ್ಲವೂ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. 

ಫಲಿತಾಂಶದ ದಿನವೇ ಭೇಟಿ

ಎಪ್‌ಸ್ಟೈನ್‌ ದಾಖಲೆಗಳಿಗೆ  ಸಂಬಂಧಿಸಿದಂತೆ ಚರ್ಚೆಯಾಗುತ್ತಿರುವ ಮತ್ತೊಂದು ವಿಚಾರ –2019ರ ಲೋಕಸಭಾ ಚುನಾವಣೆ ಮತ್ತು ಫಲಿತಾಂಶದ ಹೊತ್ತಿನಲ್ಲಿ ಅನಿಲ್‌ ಅಂಬಾನಿ ಮತ್ತು ಎಪ್‌ಸ್ಟೈನ್‌ ನಡೆದ ಸಂಭಾಷಣೆಗಳು ಹಾಗೂ ಭೇಟಿ. 

ಚುನಾವಣೆಯಲ್ಲಿ ಗೆದ್ದ ಬಳಿಕ, ಮೋದಿ ಮತ್ತು ಟ್ರಂಪ್‌ ಆಪ್ತ, ಶ್ವೇತಭವನದ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಸ್ಟೀವ್‌ ಬ್ಯಾನನ್‌ ನಡುವೆ ಭೇಟಿ ನಿಗದಿಪಡಿಸಿಕೊಡುವುದಾಗಿ ಎಪ್‌ಸ್ಟೈನ್‌ ಹೇಳಿದ್ದ. ಮೇ 19ರಂದು ಬ್ಯಾನನ್‌ಗೆ ಐಮೆಸೇಜ್‌ ಕಳುಹಿಸಿದ್ದ ಆತ ‘ನನ್ನನ್ನು ಕಾಣಲು ಮೋದಿ ಅವರು ಯಾರನ್ನೋ ಶುಕ್ರವಾರ (ಮೇ 23) ಕಳುಹಿಸುತ್ತಾರೆ’ ಎಂದಿದ್ದ. ಆದರೆ, ವ್ಯಕ್ತಿಯ ಹೆಸರು ಅಲ್ಲಿ ಉಲ್ಲೇಖಿಸಿರಲಿಲ್ಲ. ಮೇ 23ರ ಗುರುವಾರ, ನ್ಯೂಯಾರ್ಕ್‌ನಲ್ಲಿ ಅನಿಲ್‌ ಅಂಬಾನಿ ಅವರು ಎಪ್‌ಸ್ಟೈನ್‌ನನ್ನು ಭೇಟಿಯಾಗಿದ್ದರು. ಅಂಬಾನಿ ಭೇಟಿ ಬಳಿಕ ಬ್ಯಾನನ್‌ಗೆ ಇಮೇಲ್‌ ಮಾಡಿದ್ದ ಎಪ್‌ಸ್ಟೈನ್‌, ‘ಮೋದಿ ಭೇಟಿ ನಿಜಕ್ಕೂ ಆಸಕ್ತಿಕರವಾಗಿದೆ. ಅವರು ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ಯಾರೊಬ್ಬರೂ ಅವರೊಂದಿಗೆ ಮಾತನಾಡುವುದಿಲ್ಲ ಎಂದು ‘ಅವರ ವ್ಯಕ್ತಿ’ ಹೇಳಿದ್ದಾರೆ. ಅವರ ಮುಖ್ಯ ಶತ್ರು ಚೀನಾ. ಮತ್ತು ಆ ಪ್ರದೇಶದಲ್ಲಿರುವ ಅದರ ಮುಖವಾಡ ಪಾಕಿಸ್ತಾನ. 2022ರಲ್ಲಿ ಅವರು ಜಿ20ಯ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ನಿಮ್ಮ ದೃಷ್ಟಿಕೋನಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ’ ಎಂದು ಹೇಳಿದ್ದ. 

ನಂತರ ಅಂಬಾನಿಗೂ ಸಂದೇಶ ಕಳುಹಿಸಿದ್ದ ಆತ, ‘ಮೋದಿ ಅವರು ಸ್ಟೀವ್‌ ಬಾನನ್‌ ಅವರನ್ನು ಭೇಟಿ ಮಾಡಿ ಮಾಡಿದರೆ ಖುಷಿ ಪಡಬಹುದು. ನೀವೆಲ್ಲರೂ ಚೀನಾದ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ’ ಎಂದು ಹೇಳಿದ್ದ. ಇದಕ್ಕೆ ಅನಿಲ್‌ ಅಂಬಾನಿ ‘ಖಂಡಿತ’ ಎಂದು ಪ್ರತಿಕ್ರಿಯಿಸಿದ್ದರು. ಬಳಿಕ ಬ್ಯಾನನ್‌ಗೆ ಸಂದೇಶ ಕಳಿಸಿದ್ದ ಎಪ್‌ಸ್ಟೈನ್‌ ‘ಮೋದಿ ಅವರು ನಮ್ಮ ಜೊತೆಗೆ ಇದ್ದಾರೆ’ ಎಂದು ಹೇಳಿದ್ದ.

ಅನಿಲ್‌ ಅಂಬಾನಿ ಮೌನ
ಈ ದಾಖಲೆಗಳಲ್ಲಿ ತಮ್ಮ ಹೆಸರು ಕೇಳಿಬಂದಿರುವ ಬಗ್ಗೆ ಅನಿಲ್‌ ಅಂಬಾನಿ ಅವರು ಈವರೆಗೂ ಎಲ್ಲೂ ಪ್ರತಿಕ್ರಿಯಿಸಿಲ್ಲ. ಪ್ರಧಾನಿ ಮೋದಿ ಅಥವಾ ಕೇಂದ್ರ ಸರ್ಕಾರದ ಪರವಾಗಿ ಮಾತುಕತೆ ನಡೆಸಲು ಅನಿಲ್‌ ಅಂಬಾನಿ ಅವರಿಗೆ ಕೇಂದ್ರ ಸರ್ಕಾರ ಸೂಚಿಸಿತ್ತೇ ಎಂಬುದೂ ದೃಢಪಟ್ಟಿಲ್ಲ.

3 ಬಾರಿ ಭೇಟಿ ಮಾಡಿದ್ದ ಪುರಿ

ಹಾಲಿ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹಾಗೂ ಎಪ್‌ಸ್ಟೈನ್‌ ನಡುವೆ 2014ರಿಂದ ಇಮೇಲ್ ವಿನಿಮಯ ಆಗಿರುವುದನ್ನು ದಾಖಲೆಗಳು ಉಲ್ಲೇಖಿಸಿವೆ. ಎಪ್‌ಸ್ಟೈನ್‌, ಪುರಿ ಅವರಿಗೆ ಮೇಲ್ ಮಾಡಿ ಲಿಂಕ್ಡ್‌ಇನ್‌ ತಾಣದ ಸಹ ಸಂಸ್ಥಾಪಕ ರೀಡ್‌ ಹಾಫ್‌ಮನ್‌ ಅವರ ಭಾರತ ಭೇಟಿಗೆ  ವ್ಯವಸ್ಥೆ ಮಾಡುವ ಬಗ್ಗೆ ಮಾತನಾಡಿದ್ದ. 

ನಂತರ ಪುರಿ ಅವರು ಭಾರತದಲ್ಲಿ ಇರುವ ಹೂಡಿಕೆ ಅವಕಾಶಗಳ ಬಗ್ಗೆ ಮತ್ತು ಮೋದಿ ಸರ್ಕಾರದ ಆರ್ಥಿಕ ಯೋಜನೆಗಳ ಬಗ್ಗೆಯೂ ವಿವರಿಸಿದ್ದರು. ಪುರಿ ಅವರು 2015 ಫೆ.4, 2016ರ ಜನವರಿ 6 ಮತ್ತು 2017ರ ಮೇ 19ರಂದು ಮ್ಯಾನ್‌ಹಟನ್‌ನಲ್ಲಿರುವ ಎಪ್‌ಸ್ಟೈನ್‌ನ ಮನೆಯಲ್ಲೇ ಆತನನ್ನು ಭೇಟಿ ಮಾಡಿದ್ದರು. 

ದಾಖಲೆಗಳಲ್ಲಿ ತಮ್ಮ ಹೆಸರು ಇರುವ ಬಗ್ಗೆ ಪ್ರತಿಕ್ರಿಯಿಸಿರುವ ಪುರಿ, ನಮ್ಮ ಭೇಟಿ ಹಾಗೂ ಎಪ್‌ಸ್ಟೈನ್‌ನೊಂದಿಗಿನ ಮಾತುಕತೆ ಉದ್ಯಮಕ್ಕೆ ಸಂಬಂಧಿಸಿದ್ದಾಗಿತ್ತು ಎಂದು ಹೇಳಿದ್ದಾರೆ.

ಆಧಾರ: ಸಿಎನ್‌ಎನ್‌, ಬಿಬಿಸಿ, ಮಾಧ್ಯಮ ವರದಿಗಳು, ಅಮೆರಿಕದ ನ್ಯಾಯಾಂಗ ಇಲಾಖೆಯ ದಾಖಲೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.