ADVERTISEMENT

ಆಳ ಅಗಲ| ಕಲಿಕಾ ಸಾಮರ್ಥ್ಯ: ಕರ್ನಾಟಕದ ಮಕ್ಕಳು ಹಿಂದೆ

ಸೂರ್ಯನಾರಾಯಣ ವಿ.
ಬಿ.ವಿ. ಶ್ರೀನಾಥ್
Published 10 ಜುಲೈ 2025, 0:29 IST
Last Updated 10 ಜುಲೈ 2025, 0:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
‘ಪರಖ್‌’ (PARAKH) ರಾಷ್ಟ್ರೀಯ ಸಮೀಕ್ಷೆ 2024 ವರದಿಯ ಭಾಗವಾಗಿ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರದ ಶಾಲೆಗಳು, ರಾಜ್ಯ ಸರ್ಕಾರದ ಶಾಲೆಗಳು, ಖಾಸಗಿ ಹಾಗೂ ಅನುದಾನಿತ ಶಾಲೆಗಳ 3, 6 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ವಿಷಯವಾರು ಕಲಿಕಾ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಗಿದೆ. ಸಮೀಕ್ಷೆಯಲ್ಲಿ ಕರ್ನಾಟಕದ ಮಕ್ಕಳ ಕಲಿಕಾ ಸಾಮರ್ಥ್ಯದ ಸರಾಸರಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದು, ಕಲಿಕೆಯಲ್ಲಿ ಮಕ್ಕಳು  ಹಿಂದುಳಿದಿದ್ದಾರೆ. ರಾಜ್ಯದ ಜಿಲ್ಲೆಗಳು ವಿವಿಧ ವಿಷಯಗಳ ಕಲಿಕೆಯಲ್ಲಿ ಯಾವ ಯಾವ ಸ್ಥಾನದಲ್ಲಿವೆ ಎನ್ನುವುದನ್ನೂ ವರದಿ ಒಳಗೊಂಡಿದೆ

ಕಾರ್ಯಕ್ಷಮತೆಯ ಮೌಲ್ಯಮಾಪನ, ಸಮಗ್ರ ಅಭಿವೃದ್ಧಿಗಾಗಿ ಜ್ಞಾನದ ಪರಾಮರ್ಶೆ ಮತ್ತು ವಿಶ್ಲೇಷಣೆ ಎಂಬುದು ‘ಪರಖ್‌’ನ ವಿಸ್ತೃತ ರೂಪ. ಈ ದೃಷ್ಟಿಯಿಂದ ವಿವಿಧ ರಾಜ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮತ್ತು ಅವುಗಳ ಭವಿಷ್ಯದ ಸವಾಲುಗಳ ಬಗ್ಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಅಧ್ಯಯನ ಮಾಡಿದೆ. ಇದರ ಭಾಗವಾಗಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಖಾಸಗಿ ಹಾಗೂ ಅನುದಾನಿತ ಶಾಲೆಗಳ ಪ್ರಾಥಮಿಕ (3ನೇ ತರಗತಿ), ಹಿರಿಯ ಪ್ರಾಥಮಿಕ (6 ನೇ ತರಗತಿ) ಮತ್ತು ಪ್ರೌಢ ಶಾಲಾ (9ನೇ ತರಗತಿ) ಹಂತದ ವಿದ್ಯಾರ್ಥಿಗಳ ವಿಷಯವಾರು ಕಲಿಕಾ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಗಿದೆ. ಈ ಸಮೀಕ್ಷೆಯ ಅಂಕಿ ಅಂಶಗಳು ವಿವಿಧ ರಾಜ್ಯಗಳ ಶೈಕ್ಷಣಿಕ ಸ್ಥಿತಿಗತಿಗಳ ಚಿತ್ರಣ ನೀಡುತ್ತವೆ. ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಕೇರಳ ಸೇರಿದಂತೆ ಕೆಲವು ರಾಜ್ಯಗಳ ಮಕ್ಕಳ ಕಲಿಕಾ ಸಾಮರ್ಥ್ಯವು ರಾಷ್ಟ್ರೀಯ ಸರಾಸರಿಗಿಂತ ಉನ್ನತ ಮಟ್ಟದಲ್ಲಿದ್ದರೆ, ಕರ್ನಾಟಕದ ಮಕ್ಕಳು ರಾಷ್ಟ್ರೀಯ ಸರಾಸರಿಗಿಂತ ಹಿಂದುಳಿದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಆರಂಭಿಕ ಹಂತದಲ್ಲಿ ಅಂದರೆ, ಮೂರನೇ ತರಗತಿಯಲ್ಲಿ, ಕರ್ನಾಟಕವು ಭಾಷಾ ವಿಷಯದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಶೇ 4ರಷ್ಟು, ಗಣಿತದಲ್ಲಿ ಶೇ 3ರಷ್ಟು ಹಿಂದುಳಿದಿದೆ. ಭಾಷೆಯಲ್ಲಿ ದಿನನಿತ್ಯದ ವ್ಯವಹಾರ, ಒಡನಾಟ, ಹೊಸ ಪದಗಳ ಅರ್ಥ ಊಹಿಸುವುದು ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ರಾಷ್ಟ್ರೀಯ ಮಟ್ಟದ ಸರಾಸರಿ ಶೇ 67ರಷ್ಟಿದ್ದರೆ, ರಾಜ್ಯದ್ದು ಶೇ 64ರಷ್ಟಿದೆ.

ಗಣಿತದ ವಿಷಯಕ್ಕೆ ಬಂದರೆ, ಒಂದಕ್ಕಿಂತ ಹೆಚ್ಚು ವಸ್ತುಗಳಿದ್ದಾಗ, ಅವುಗಳನ್ನು ಗುಂಪು, ಉಪಗುಂಪುಗಳಾಗಿ ವರ್ಗೀಕರಿಸುವ ಸಾಮರ್ಥ್ಯದಲ್ಲಿ ರಾಷ್ಟ್ರೀಯ ಸರಾಸರಿ ಶೇ 68ರಷ್ಟಿದ್ದರೆ, ಕರ್ನಾಟಕದ ಸರಾಸರಿ ಶೇ 55 ಆಗಿದೆ. 99ರವರೆಗಿನ ಅಂಕಿಗಳನ್ನು ಏರಿಕೆ ಮತ್ತು ಇಳಿಕೆ ಕ್ರಮದಲ್ಲಿ ಜೋಡಿಸುವ ಸಾಮರ್ಥ್ಯ ರಾಷ್ಟ್ರೀಯ ಮಟ್ಟದಲ್ಲಿ ಶೇ 55ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ 52ರಷ್ಟಿದೆ. ₹100ವರೆಗಿನ ಹಣದಿಂದ ಸರಳ ವ್ಯವಹಾರ ಮಾಡುವ ಕೌಶಲ ರಾಷ್ಟ್ರ ಮಟ್ಟದಲ್ಲಿ ಶೇ 50ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ 47ರಷ್ಟಿದೆ. 

ADVERTISEMENT

ಆರನೇ ತರಗತಿಯ ಭಾಷೆ, ಗಣಿತ ಮತ್ತು ಪ್ರಾಪಂಚಿಕ ಜ್ಞಾನ ವಿಷಯಗಳ ಪೈಕಿ ಭಾಷೆ, ಮತ್ತು ಪ್ರಾಪಂಚಿಕ ಜ್ಞಾನದಲ್ಲಿ ಕರ್ನಾಟಕವು ರಾಷ್ಟ್ರೀಯ ಸರಾಸರಿಗಿಂತ ಶೇ 2ರಷ್ಟು ಕಡಿಮೆ ಇದ್ದರೆ, ಗಣಿತದಲ್ಲಿ ಶೇ 1ರಷ್ಟು ಹಿಂದುಳಿದಿದೆ. ಭಾಷೆ ಮತ್ತು ಗಣಿತದ ಕಲಿಕೆಯಲ್ಲಿ ಬಾಲಕರು ರಾಷ್ಟ್ರೀಯ ಸರಾಸರಿಗಿಂತ ಶೇ 3ರಷ್ಟು ಹಿಂದುಳಿದಿದ್ದರೆ, ಬಾಲಕಿಯರು ರಾಷ್ಟ್ರೀಯ ಸರಾಸರಿಗೆ ಸಮನಾಗಿದ್ದಾರೆ. ಪ್ರಾಪಂಚಿಕ ಜ್ಞಾನದಲ್ಲಿ ಬಾಲಕರು ರಾಷ್ಟ್ರೀಯ ಸರಾಸರಿಗಿಂತ ಶೇ 4ರಷ್ಟು, ಬಾಲಕಿಯರು ಶೇ 2ರಷ್ಟು ಹಿಂದುಳಿದಿದ್ದಾರೆ.

9ನೇ ತರಗತಿಯ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲೂ ಕರ್ನಾಟಕದ ಮಕ್ಕಳು ಹಿಂದುಳಿದಿದ್ದಾರೆ. ಭಾಷಾ ಕಲಿಕೆ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಲ್ಲಿ ರಾಜ್ಯದ ಸರಾಸರಿ ರಾಷ್ಟ್ರೀಯ ಸರಾಸರಿಗಿಂತ ಶೇ 3ರಷ್ಟು ಹಾಗೂ ಗಣಿತದಲ್ಲಿ ಶೇ 4ರಷ್ಟು ಕಡಿಮೆ ಇದೆ. 

ಪ್ರದೇಶ, ಸಮುದಾಯವಾರು ವ್ಯತ್ಯಾಸ

ವರದಿಯ ಪ್ರಕಾರ, 3, 6 ಮತ್ತು 9ನೇ ತರಗತಿಗಳ ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ಲಿಂಗವಾರು ವ್ಯತ್ಯಾಸ ಅಷ್ಟೇ ಅಲ್ಲ, ಪ್ರದೇಶವಾರು ಮತ್ತು ಸಮುದಾಯವಾರು ವ್ಯತ್ಯಾಸಗಳೂ ಇವೆ. ನಿದರ್ಶನಕ್ಕೆ ಆರನೇ ತರಗತಿಯ ಭಾಷೆ, ಗಣಿತ ಮತ್ತು ಪ್ರಾಪಂಚಿಕ ಜ್ಞಾನದ ಕಲಿಕೆಯಲ್ಲಿ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶದ ಮಕ್ಕಳಿಗಿಂತ ನಗರ ಪ್ರದೇಶಗಳ ಮಕ್ಕಳು ಹೆಚ್ಚು ಹಿಂದುಳಿದಿದ್ದಾರೆ. ಹಾಗೆಯೇ, ಒಟ್ಟಾರೆ ಸಾಮರ್ಥ್ಯದಲ್ಲಿ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗಿಂತ ಖಾಸಗಿ ಶಾಲೆಗಳು ಮಕ್ಕಳು ಮುಂದಿದ್ದಾರೆ. ಕೇಂದ್ರ ಸರ್ಕಾರದ ಶಾಲೆಗಳ ಮಕ್ಕಳ ಕಲಿಕಾ ಸಾಮರ್ಥ್ಯವು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಾಗಿದೆ. ಇನ್ನು ವಿವಿಧ ಸಮುದಾಯಗಳ ನಡುವಿನ ಕಲಿಕಾ ಸಾಮರ್ಥ್ಯದಲ್ಲಿರುವ ವ್ಯತ್ಯಾಸದ ಬಗ್ಗೆಯೂ ವರದಿ ಗಮನ ಸೆಳೆಯುತ್ತದೆ. ಕಲಿಕೆಯಲ್ಲಿ ರಾಷ್ಟ್ರೀಯ ಸರಾಸರಿಗಿಂತ ಎಸ್‌ಸಿ, ಎಸ್‌ಟಿ, ಒಬಿಸಿ ಮಕ್ಕಳು ಹಿಂದುಳಿದಿದ್ದರೆ, ಪ್ರಬಲ ಜಾತಿಗಳ ಮಕ್ಕಳು ಮುಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಜಿಲ್ಲಾವಾರು ವಿಂಗಡಣೆ

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಆಧರಿಸಿ, ಜಿಲ್ಲೆಗಳನ್ನು ಅತ್ಯುತ್ತಮ (ಉದಿತ್‌), ಉತ್ತಮ (ಉದಯ್‌), ಪ್ರಗತಿಶೀಲ (ಉನ್ನತಿ) ಮತ್ತು ಪ್ರವರ್ಧಮಾನ ಜಿಲ್ಲೆಗಳು ಎಂದು ವಿಂಗಡಿಸಲಾಗಿದೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಅನುಸಾರವಾಗಿ ರಾಜ್ಯದ ಒಂದೊಂದು ಜಿಲ್ಲೆ ಒಂದೊಂದು ಗುಂಪಿನಲ್ಲಿದೆ. 

ಪ್ರದೇಶ, ಸಮುದಾಯವಾರು ವ್ಯತ್ಯಾಸ

ವರದಿಯ ಪ್ರಕಾರ, 3, 6 ಮತ್ತು 9ನೇ ತರಗತಿಗಳ ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ಲಿಂಗವಾರು ವ್ಯತ್ಯಾಸ ಅಷ್ಟೇ ಅಲ್ಲ, ಪ್ರದೇಶವಾರು ಮತ್ತು ಸಮುದಾಯವಾರು ವ್ಯತ್ಯಾಸಗಳೂ ಇವೆ. ನಿದರ್ಶನಕ್ಕೆ ಆರನೇ ತರಗತಿಯ ಭಾಷೆ, ಗಣಿತ ಮತ್ತು ಪ್ರಾಪಂಚಿಕ ಜ್ಞಾನದ ಕಲಿಕೆಯಲ್ಲಿ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶದ ಮಕ್ಕಳಿಗಿಂತ ನಗರ ಪ್ರದೇಶಗಳ ಮಕ್ಕಳು ಹೆಚ್ಚು ಹಿಂದುಳಿದಿದ್ದಾರೆ. ಹಾಗೆಯೇ, ಒಟ್ಟಾರೆ ಸಾಮರ್ಥ್ಯದಲ್ಲಿ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗಿಂತ ಖಾಸಗಿ ಶಾಲೆಗಳು ಮಕ್ಕಳು ಮುಂದಿದ್ದಾರೆ. ಕೇಂದ್ರ ಸರ್ಕಾರದ ಶಾಲೆಗಳ ಮಕ್ಕಳ ಕಲಿಕಾ ಸಾಮರ್ಥ್ಯವು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಾಗಿದೆ. ಇನ್ನು ವಿವಿಧ ಸಮುದಾಯಗಳ ನಡುವಿನ ಕಲಿಕಾ ಸಾಮರ್ಥ್ಯದಲ್ಲಿರುವ ವ್ಯತ್ಯಾಸದ ಬಗ್ಗೆಯೂ ವರದಿ ಗಮನ ಸೆಳೆಯುತ್ತದೆ. ಕಲಿಕೆಯಲ್ಲಿ ರಾಷ್ಟ್ರೀಯ ಸರಾಸರಿಗಿಂತ ಎಸ್‌ಸಿ, ಎಸ್‌ಟಿ, ಒಬಿಸಿ ಮಕ್ಕಳು ಹಿಂದುಳಿದಿದ್ದರೆ, ಪ್ರಬಲ ಜಾತಿಗಳ ಮಕ್ಕಳು ಮುಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಶಿಫಾರಸುಗಳು

  • ವಿದ್ಯಾರ್ಥಿಗಳ ಕೌಶಲ ಹೆಚ್ಚಳಕ್ಕೆ ನಿರ್ದಿಷ್ಟ ಕಾರ್ಯಕ್ರಮಗಳ ಮೂಲಕ ನೆರವು

  • ನವೀನ ಮೌಲ್ಯಮಾಪನ ತಂತ್ರಗಳು, ಕಾರ್ಯಯೋಜನೆಗಳ ಮೂಲಕ ಪರಿಣಾಮಕಾರಿ ಕಲಿಕೆಗೆ ಒತ್ತು

  • ಚಟುವಟಿಕೆ ಆಧಾರಿತ, ಗುಂಪು ಆಧಾರಿತ.. ಹೀಗೆ ವಿಭಿನ್ನ ಕಲಿಕಾ
    ತಂತ್ರಗಳ ಅಳವಡಿಕೆ

  • ಕೌಶಲ ಆಧಾರಿತ ಶಿಕ್ಷಣ, ವೃತ್ತಿಶಿಕ್ಷಣಕ್ಕೆ ಒತ್ತು 

  • ದೃಶ್ಯ, ಶ್ರವಣ, ಪುಸ್ತಕ ಹೀಗೆ ಭಿನ್ನ ಕಲಿಕಾ ಪರಿಕರಗಳ ಬಳಕೆ

  • ಕಲೆ, ಸಂಸ್ಕೃತಿ, ಕ್ರೀಡೆ, ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೂಲಕ ಕಲಿಕೆ

  • ಶೌಚಾಲಯ, ಕುಡಿಯುವ ನೀರು, ಫ್ಯಾನ್, ಪ್ರಯೋಗಾಲಯ ಮುಂತಾದ ಸೌಕರ್ಯಗಳನ್ನು ಒದಗಿಸುವುದು

  • ಸಮುದಾಯದ ಸಹಭಾಗಿತ್ವ (ಸ್ವಯಂಸೇವಾ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳ ನೆರವು)

  • ಶಾಲೆ ತೊರೆದ ಮಕ್ಕಳು, ಅಂಗವಿಕಲರನ್ನು ಒಳಗೊಳ್ಳುವಂಥ ವಾತಾವರಣ ಸೃಷ್ಟಿಸುವುದು 

ರಾಷ್ಟ್ರದ ಚಿತ್ರಣವೂ ಭಿನ್ನವಿಲ್ಲ

ವರದಿಯಲ್ಲಿನ ರಾಷ್ಟ್ರಮಟ್ಟದ ಅಂಕಿ ಅಂಶಗಳು ಕೂಡ ಬಹುಪಾಲು ರಾಜ್ಯದ ಸ್ಥಿತಿಯನ್ನೇ ಬಿಂಬಿಸುತ್ತಿವೆ. ಹಿರಿಯ ಪ್ರಾಥಮಿಕ, ಪ್ರೌಢಶಾಲಾ ಹಂತದ ಮಕ್ಕಳಿಗೆ ಗಣಿತ, ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆಯಾಗಿವೆ. ಉದಾಹರಣೆಗೆ 6ನೇ ತರಗತಿಯ ಶೇ 53ರಷ್ಟು ಮಕ್ಕಳಿಗೆ ಮಾತ್ರ 10ರವರೆಗೆ ಮಗ್ಗಿ ಬರುತ್ತದೆ. 3ನೇ ತರಗತಿಯ ಶೇ 55 ಮಕ್ಕಳು ಮಾತ್ರ 1ರಿಂದ 99ರವರೆಗಿನ ಅಂಕಿಗಳನ್ನು ಏರಿಕೆ ಮತ್ತು ಇಳಿಕೆ ಕ್ರಮದಲ್ಲಿ ಜೋಡಿಸಬಲ್ಲರು. ಎರಡು ಅಂಕಿಗಳ ಸಂಖ್ಯೆಯನ್ನು ಕೂಡಿಸಲು ಮತ್ತು ಕಳೆಯಲು ಬರುವ ಮಕ್ಕಳ ಪ್ರಮಾಣ ಶೇ 58ರಷ್ಟು.

3ನೇ ತರಗತಿ ವಿಭಾಗದಲ್ಲಿ ಕೇಂದ್ರ ಸರ್ಕಾರದ ಶಾಲೆಗಳ ಮಕ್ಕಳು ಗಣಿತ ವಿಷಯದಲ್ಲಿ ಅತ್ಯಂತ ಕಳಪೆ ಸಾಧನೆ ತೋರಿದ್ದಾರೆ. 6ನೇ ತರಗತಿ ವಿಭಾಗದಲ್ಲಿ ಅನುದಾನಿತ ಮತ್ತು ರಾಜ್ಯ ಸರ್ಕಾರಿ ಶಾಲೆಗಳ ಮಕ್ಕಳು ಗಣಿತ ವಿಷಯದಲ್ಲಿ ತುಂಬಾ ದುರ್ಬಲರಾಗಿದ್ದಾರೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದಲ್ಲಿ ಗಮನಾರ್ಹ ಅಂತರ ಇರುವುದನ್ನೂ ಸಮೀಕ್ಷೆ ವರದಿ ತೋರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.