
ರನ್ಯಾ ದರ್ಶನ್
* ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ್ದ ಆರೋಪದ ಅಡಿ ನಟಿ ರನ್ಯಾ ರಾವ್ ಅವರನ್ನು ಕೇಂದ್ರದ ರೆವೆನ್ಯೂ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ಮಾರ್ಚ್ 4ರಂದು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಅವರು ನೆಲಸಿದ್ದ ಫ್ಲ್ಯಾಟ್ ಮೇಲೆ ತನಿಖಾ ತಂಡವು ದಾಳಿ ನಡೆಸಿ ₹17.29 ಕೋಟಿಯ ಆಭರಣ, ನಗದು ಜಪ್ತಿ ಮಾಡಿಕೊಂಡಿತ್ತು. ಮಲತಂದೆ, ಡಿಜಿಪಿ ಕೆ.ರಾಮಚಂದ್ರ ರಾವ್ ಅವರ ಹೆಸರು ಬಳಸಿಕೊಂಡು ರನ್ಯಾ ಅವರು ವಿಮಾನ ನಿಲ್ದಾಣದಿಂದ ಹೊರಕ್ಕೆ ಬರುತ್ತಿದ್ದರು. ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರವು ಕಡ್ಡಾಯ ರಜೆಯ ಮೇಲೆ ಕಳುಹಿಸಿ, ತನಿಖೆಗೂ ಆದೇಶಿಸಿತ್ತು. ರನ್ಯಾ ವಿರುದ್ಧ ‘ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ’ (ಕಾಫಿಪೋಸಾ) ಅಡಿ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೊ (ಸಿಇಐಬಿ) ಬಂಧನದ ಆದೇಶ ಹೊರಡಿಸಿತ್ತು. ಜಾಮೀನು ಸಿಕ್ಕಿದರೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.
* ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಓಂ ಪ್ರಕಾಶ್ (68) ಅವರನ್ನು ಎಚ್‌ಎಸ್‌ಆರ್ ಲೇಔಟ್‌ನ ನಿವಾಸದಲ್ಲಿ ಏಪ್ರಿಲ್ 20ರಂದು ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣವು ರಾಜ್ಯದಲ್ಲಿ ತಲ್ಲಣ ಮೂಡಿಸಿತ್ತು. ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ, ಪುತ್ರಿ ಕೃತಿಕಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪಲ್ಲವಿ ಅವರನ್ನು ಪೊಲೀಸರು ಬಂಧಿಸಿದ್ದರು. ಆಸ್ತಿ ವಿವಾದವೇ ಕೊಲೆಗೆ ಪ್ರಮುಖ ಕಾರಣ ಆಗಿದೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿತ್ತು.
* 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದ ಖುಷಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವವನ್ನು ಮೇ 4ರಂದು ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧ ಮೆಟ್ಟಿಲು ಬಳಿ ಆಯೋಜನೆ ಮಾಡಲಾಗಿತ್ತು. ಸಾಗರೋಪಾದಿಯಲ್ಲಿ ಆರ್‌ಸಿಬಿ ಅಭಿಮಾನಿಗಳು ಹರಿದು ಬಂದಿದ್ದರು. ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ದುರಂತ ಸಾವು ಕಂಡಿದ್ದರು. ಘಟನೆ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಜೂನ್ 6ರಂದು ಆರ್‌ಸಿಬಿಯ ಮಾರುಕಟ್ಟೆ ವಿಭಾಗದ ಮುಖಸ್ಥ ನಿಖಿಲ್ ಸೋಸಲೆ, ಡಿಎನ್‌ಎ ಮ್ಯಾನೇಜ್‌ಮೆಂಟ್ (ಇವೆಂಟ್ ಮ್ಯಾನೇಜ್‌ಮೆಂಟ್) ಸಿಬ್ಬಂದಿ ಸುನಿಲ್ ಮ್ಯಾಥ್ಯೂ, ಕಿರಣ್, ಸುಮಂತ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
* ಜುಲೈ 15ರಂದು ರೌಡಿಶೀಟರ್ ಬಿಕ್ಲು ಶಿವು ಅವರ ಕೊಲೆ ನಡೆದಿತ್ತು. ಶಿವು ತಾಯಿ ನೀಡಿದ ದೂರು ಆಧರಿಸಿ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬಂಧನದ ಭೀತಿಯಲ್ಲಿದ್ದ ಶಾಸಕರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.
* ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಆದೇಶವನ್ನು ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ನಟ ದರ್ಶನ್, ಅವರ ಗೆಳತಿ ಪವಿತ್ರಾಗೌಡ ಸೇರಿ ಏಳು ಆರೋಪಿಗಳು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವಂತೆ ಆಯಿತು. 2024ರ ಜೂನ್ 7ರಂದು ರೇಣುಕಸ್ವಾಮಿ ಕೊಲೆ ನಡೆದಿತ್ತು. ಬೆಂಗಳೂರಿನ 57ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
* ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ನ.19ರಂದು ಅಡ್ಡಗಟ್ಟಿದ್ದ ಆರೋಪಿಗಳು, ₹7.11 ಕೋಟಿ ದರೋಡೆ ನಡೆಸಿದ್ದರು. ದರೋಡೆ ಪ್ರಕರಣದ ಸೂತ್ರಧಾರನೇ ಗೋವಿಂದಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಅಣ್ಣಪ್ಪನಾಯ್ಕ ಎಂಬುದು ತನಿಖೆಯಿಂದ ಬಯಲಾಗಿತ್ತು. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಕಾರ್ಯಾಚರಣೆ ನಡೆಸಿ ಅಣ್ಣಪ್ಪ ನಾಯ್ಕ ಸೇರಿ 10 ಮಂದಿಯನ್ನು ಬಂಧಿಸಲಾಗಿತ್ತು.
* ರಾಜ್ಯದಲ್ಲಿ ಡ್ರಗ್ಸ್ ಹಾವಳಿಗೆ 2025ರಲ್ಲೂ ಕಡಿವಾಣ ಬೀಳಲಿಲ್ಲ. ‘ಡ್ರಗ್ಸ್ ಮುಕ್ತ ಸಮಾಜ ನಿರ್ಮಿಸುತ್ತೇವೆ’ ಎಂಬ ಘೋಷಣೆ ಸಾಕಾರಗೊಂಡಿಲ್ಲ. ಡ್ರಗ್ಸ್ ಪೆಡ್ಲರ್‌ಗಳು, ಖರೀದಿದಾರರು, ಗ್ರಾಹಕರ ವಿರುದ್ಧ ಈ ವರ್ಷ 5,930 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿಯೇ ₹162.87 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ.ವರ್ಷಾಂತ್ಯದಲ್ಲಿ ಮಹಾರಾಷ್ಟ್ರದ ಮಾದಕವಸ್ತು ನಿಗ್ರಹ ಕಾರ್ಯಪಡೆ, ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ₹55.88 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದೆ.
ಜನಪ್ರತಿನಿಧಿಗಳಿಗೆ ತನಿಖೆಗೆ ಬಿಸಿ
ಸತೀಶ್ ಸೈಲ್: ಬೇಲೆಕೇರಿ ಅದಿರು ಕಳ್ಳಸಾಗಣೆ ಪ್ರಕರಣದಲ್ಲಿ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ವಿರುದ್ಧ ಆರೋಪ ಸಾಬೀತಾಗಿತ್ತು. ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೈಲ್ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಕ್ಕೆ ಹೈಕೋರ್ಟ್‌ನಿಂದ ತಡೆ ತಂದರೂ ಇ.ಡಿಯು ಪ್ರಕರಣ ದಾಖಲಿಸಿ ಬಂಧಿಸಿತು. ₹40 ಕೋಟಿಗೂ ಹೆಚ್ಚು ಮೊತ್ತದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತು.
ಬಿ.ನಾಗೇಂದ್ರ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಗಳಿಂದ ₹89 ಕೋಟಿ ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ (ಬಳ್ಳಾರಿ ಗ್ರಾಮಾಂತರ ಕ್ಷೇತ್ರ) ಬಿ.ನಾಗೇಂದ್ರ ಅವರನ್ನು ಇ.ಡಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಒಂದೆಡೆ ಸಿಐಡಿ, ಇನ್ನೊಂದೆಡೆ ಸಿಬಿಐ ಮತ್ತು ಇ.ಡಿ ತನಿಖೆ ನಡೆಸುತ್ತಿವೆ. ನಾಗೇಂದ್ರ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಈಚೆಗಷ್ಟೇ ₹12 ಕೋಟಿ ಮೊತ್ತದ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿತು.
ಕೆ.ಸಿ.ವೀರೇಂದ್ರ: ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ನಡೆಸಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ (ಚಳ್ಳಕೆರೆ) ಕೆ.ಸಿ.ವೀರೇಂದ್ರ ಅವರನ್ನು ಇ.ಡಿ. ಬಂಧಿಸಿತ್ತು. ದಾಳಿಯ ವೇಳೆ ಕೆ.ಜಿ.ಗಟ್ಟಲೆ ಚಿನ್ನದ ಗಟ್ಟಿಗಳು, ₹60 ಕೋಟಿಗೂ ಹೆಚ್ಚು ನಗದು, ಲಕ್ಷಾಂತರ ರೂಪಾಯಿ ಮೌಲ್ಯದ ಕೈಗಡಿಯಾರಗಳು, ₹10 ಕೋಟಿಗೂ ಹೆಚ್ಚು ಮೌಲ್ಯದ ಕಾರುಗಳನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿತು.
ವಿನಯ್ ಕುಲಕರ್ಣಿ: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ ಮತ್ತು ಐಶ್ವರ್ಯ ಗೌಡ ಚಿನ್ನ ವಂಚನೆ ಪ್ರಕರಣದಲ್ಲಿ ಪೊಲೀಸ್, ಲೋಕಾಯುಕ್ತ ಮತ್ತು ಇ.ಡಿ ವಿಚಾರಣೆಯನ್ನು ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಎದುರಿಸುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಅವರಿಗೆ ನೀಡಿದ್ದ ಜಾಮೀನನ್ನು ಇದೇ ಜೂನ್ 6ರಂದು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಆ ನಂತರ ಜೂನ್ 15ರಂದು ನ್ಯಾಯಾಲಯಕ್ಕೆ ಅವರು ಶರಣಾಗಿದ್ದರು. ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ಜಿ.ಜನಾರ್ದನ ರೆಡ್ಡಿ: ಗಂಗಾವತಿ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಜನಾರ್ದನ ರೆಡ್ಡಿ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ವಿಶೇಷ ನ್ಯಾಯಾಲಯವು ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರಿಂದ ಅವರ ಶಾಸಕ ಸ್ಥಾನ ರದ್ದಾಗಿತ್ತು. ತೆಲಂಗಾಣ ಹೈಕೋರ್ಟ್‌ನಲ್ಲಿ ಶಿಕ್ಷೆ ಜಾರಿಗೆ ತಡೆ ತಂದಿದ್ದರಿಂದ, ಶಾಸಕ ಸ್ಥಾನ ಮರುಸ್ಥಾಪನೆಯಾಯಿತು.
ಮುನಿರತ್ನ: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ, ಕೊಲೆ ಬೆದರಿಕೆ, ಅತ್ಯಾಚಾರ ಆರೋಪದ ಸಂಬಂಧ ವಿವಿಧ ಪ್ರಕರಣಗಳು ದಾಖಲಾಗಿವೆ. ಹಲವು ದಿನ ಪೊಲೀಸ್ ಮತ್ತು ನ್ಯಾಯಾಂಗ ಬಂಧನಲ್ಲಿದ್ದರು. ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.
ಮುಡಾ: ಸಿದ್ದರಾಮಯ್ಯಗೆ ಕ್ಲೀನ್‌ಚಿಟ್
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸ್ವಾಧೀನಕ್ಕೆ ಪಡೆದುಕೊಂಡಿದ್ದ ಭೂಮಿಗೆ ಪರಿಹಾರದ ನಿವೇಶನಗಳನ್ನು ಅಕ್ರಮವಾಗಿ ನೀಡಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಎಂದು ಲೋಕಾಯುಕ್ತ ಪೊಲೀಸರು ಕ್ಲೀನ್‌ಚಿಟ್ ನೀಡಿದರು. ಇದೇ ಪ್ರಕರಣದಲ್ಲಿ, ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್‌ಕುಮಾರ್ ಅವರ ವಿರುದ್ಧ ತನಿಖೆ ನಡೆಯುತ್ತಿದೆ. ಇ.ಡಿ ಸಹ ತನಿಖೆ ಮುಂದುವರಿಸಿದ್ದು, ಈವರೆಗೆ ₹400 ಕೋಟಿಗೂ ಹೆಚ್ಚು ಮೌಲ್ಯದ ನಿವೇಶನ, ಕಟ್ಟಡಗಳು ಮತ್ತು ಕಾರುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಎರಡನೇ ವಿಮಾನ ನಿಲ್ದಾಣ ಗರಿಗೆದರಿದ ಕನಸು
ಬೆಂಗಳೂರು ಆಸುಪಾಸು ಎರಡನೇ ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣದ ಆರಂಭಿಕ ಪ್ರಯತ್ನವು 2025ರಲ್ಲಿ ಚುರುಕು ಪಡೆಯಿತು.
ಸಾಕಷ್ಟು ಕಸರತ್ತಿನ ನಂತರ ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲದ ಬಳಿ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡವು ಸ್ಥಳ ಪರಿಶೀಲನೆ ನಡೆಸಿ, ಪ್ರಾಥಮಿಕ ವರದಿ ನೀಡಿದೆ.ನೂತನ ವಿಮಾನ ನಿಲ್ದಾಣಕ್ಕೆ ಸ್ಥಳದ ಅನುಕೂಲ, ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಪರಿಣತ ಸಲಹಾ ಸಂಸ್ಥೆಯ ಆಯ್ಕೆಗಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಟೆಂಡರ್ ಆಹ್ವಾನಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಹಾಗೂ ಕೇಂದ್ರ ಸರ್ಕಾರ ಮಾಡಿಕೊಂಡ ಒಪ್ಪಂದದ ಪ್ರಕಾರ, ಕೆಂಪೇಗೌಡ ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯಲ್ಲಿ 2033ರವರೆಗೆ ಯಾವುದೇ ಹೊಸ ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ. ಆದರೆ, ಭೂಸ್ವಾಧೀನ ಪ್ರಕ್ರಿಯೆ, ಅನುಮತಿ, ವಿಮಾನ ನಿಲ್ದಾಣ ಕಾಮಗಾರಿಗೆ ದೀರ್ಘ ಸಮಯ ಬೇಕಾಗುತ್ತದೆ. ಈಗಲೇ ಆರಂಭವಾಗಿರುವ ಪ್ರಕ್ರಿಯೆ ಅಂದುಕೊಂಡಂತೆ ನಡೆದರೆ 2033ರ ವೇಳೆಗೆ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸಬಹುದು ಎನ್ನುವುದು ರಾಜ್ಯ ಸರ್ಕಾರದ ಆಲೋಚನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.