ರಾಜ್ಯದಲ್ಲಿ ರೈತರಿಗೆ ರಸಗೊಬ್ಬರ ಕೊರತೆ, ನಕಲಿ ಬಿತ್ತನೆ ಬೀಜದ ಹಾವಳಿ!
ರಾಜ್ಯದಾದ್ಯಂತ ಮುಂಗಾರು ಮಳೆ ಬಿರುಸು ಪಡೆದಿರುವಂತೆಯೇ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೆಲವು ಕಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದರೆ, ಸಕಾಲದಲ್ಲಿ ರಸಗೊಬ್ಬರ, ಬಿತ್ತನೆ ಬೀಜಗಳು ಲಭ್ಯವಾಗದೇ ರೈತರು ಪರದಾಡುತ್ತಿದ್ದಾರೆ. ಡಿಎಪಿ ಕೊರತೆ ಅಂತೂ ರೈತರನ್ನು ಹೆಚ್ಚು ಬಾಧಿಸುತ್ತಿದೆ. ಈ ಬಾರಿ ಉತ್ತಮ ಮಳೆ ಬೀಳುತ್ತದೆ ಎಂಬ ಮುನ್ಸೂಚನೆಯಿಂದ ರೈತರು ಖುಷಿಯಾಗಿದ್ದರು. ಆದರೆ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಅಗತ್ಯ ಪ್ರಮಾಣದಲ್ಲಿ ಸಿಗದೇ ಅವರು ಮುಂಗಾರಿನ ಆರಂಭದಲ್ಲೇ ಸಂಕಷ್ಟಕ್ಕೀಡಾಗಿದ್ದಾರೆ. ಇದು ಪ್ರತಿವರ್ಷದ ಸಮಸ್ಯೆಯಾಗಿದ್ದು, ಸರ್ಕಾರ ಕೂಡಲೇ ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ..
***
ರಾಜ್ಯದಲ್ಲಿ ಮುಂಗಾರು ಚಟುವಟಿಕೆಗಳಿಗೆ ಅತ್ಯವಿರುವಷ್ಟು ರಸಗೊಬ್ಬರ ದಾಸ್ತಾನಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳನ್ನು ತೋರಿಸುತ್ತಿದೆ. ಆದರೆ, ರೈತರು ಅದಕ್ಕೆ ವ್ಯತಿರಿಕ್ತ ಕಥೆ ಹೇಳುತ್ತಿದ್ದು, ಬೀಜ ಮತ್ತು ರಸಗೊಬ್ಬರ ಸಕಾಲದಲ್ಲಿ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಹಾವೇರಿ, ಬೀದರ್, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಡಿಎಪಿ ರಸಗೊಬ್ಬರದ ಕೊರತೆ ಇದೆ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ. ‘ಕೃಷಿ ಇಲಾಖೆ ಅಧಿಕಾರಿಗಳು ಅಂಕಿ–ಅಂಶಗಳಲ್ಲಿ ಮಾತ್ರ ಡಿಎಪಿಯ ದಾಸ್ತಾನು ತೋರಿಸುತ್ತಾರೆ. ಪರ್ಯಾಯ ಗೊಬ್ಬರಗಳನ್ನು ಖರೀದಿಸಿದರೆ (ಲಿಂಕ್ ಮಾಡಿ) ಮಾತ್ರವೇ ಡಿಎಪಿ ಕೊಡುತ್ತೇವೆ ಎಂದು ನಿಬಂಧನೆ ಹಾಕುತ್ತಿದ್ದಾರೆ’ ಎಂಬುದು ಹಾವೇರಿ ರೈತರೊಬ್ಬರ ದೂರು.
‘ಬಿತ್ತನೆ ನಂತರ ಬೀಜಗಳು ಮೊಳಕೆಯೊಡೆಯಲು ಡಿಎಪಿ ಅಗತ್ಯವಾಗಿದೆ. ಒಂದು ಎಕರೆಗೆ ಒಂದೂವರೆ ಚೀಲದಷ್ಟು ಡಿಎಪಿ ಬೇಕು. ಬಿತ್ತನೆಯಾದ ಮೇಲೆ ಡಿಎಪಿ ಹಾಕದಿದ್ದರೆ, ಬೀಜ ಮೊಳೆಯುವುದಿಲ್ಲ. ಈಗ ಬಿತ್ತನೆ ಮುಗಿದಿದ್ದು ಡಿಎಪಿ ಗೊಬ್ಬರದ ಕೊರತೆಯಿಂದ ಸಮಸ್ಯೆಯಾಗಿದೆ’ ಎಂದು ರೈತರು ಹೇಳುತ್ತಿದ್ದಾರೆ.
ಡಿಎಪಿ ಕೊರತೆಯನ್ನು ಲಾಭವಾಗಿಸಿಕೊಂಡು, ಕೆಲವರು ಡಿಎಪಿ ಖರೀದಿಸಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದಾರೆ. ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ ಎಂದೂ ರೈತರು ಆರೋಪಿಸುತ್ತಾರೆ.
‘ಹಾವೇರಿ ತಾಲ್ಲೂಕಿನಲ್ಲಿ ಡಿಎಪಿ ಗೊಬ್ಬರಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಇದೆ. ಮೇ ತಿಂಗಳಲ್ಲಿ 4,800 ಟನ್ ಡಿಎಪಿಗೆ ಬೇಡಿಕೆ ಸಲ್ಲಿಸಲಾಗಿತ್ತು. 1,800 ಟನ್ ಡಿಎಪಿ ಪೂರೈಸಲಾಗಿದೆ. ಇದರಿಂದಾಗಿ ಡಿಎಪಿ ಕೊರತೆ ಉಂಟಾಗಿದ್ದು, ಪರ್ಯಾಯ ಗೊಬ್ಬರ ಬಳಸುವಂತೆ ರೈತರಿಗೆ ತಿಳಿಸುತ್ತಿದ್ದೇವೆ’ ಎಂದು ಕೃಷಿ ಇಲಾಖೆ ಅಧಿಕಾರಿ ಜೂನ್ 4ರಂದು ನಡೆದ ಕೆಡಿಪಿ ಸಭೆಗೆ ತಿಳಿಸಿದ್ದರು.
ನಕಲಿ ಡಿಎಪಿ ಮಾರಾಟ: ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲೂ ಡಿಎಪಿ ಕೊರತೆಯಿದ್ದು, ಇದರ ಲಾಭ ಪಡೆಯಲು ವಂಚಕರು ನಕಲಿ ಡಿಎಪಿ ತಯಾರಿಸಿ (ಮಣ್ಣಿಗೆ ಬಣ್ಣ ಬಳಿದು) ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ. ರೋಣ ತಾಲ್ಲೂಕಿನ ಮಾಡಲಗೇರಿಯಲ್ಲಿ 475 ಚೀಲ ಹಾಗೂ ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ 45 ಚೀಲ ನಕಲಿ ಡಿಎಪಿಯನ್ನು ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಬಾಗಲಕೋಟೆ ಸಿಮಿಕೇರಿ ಬಳಿ ಕೆಲ ದಿನಗಳ ಹಿಂದೆ ಡಿಎಪಿ ಹೆಸರಿನಲ್ಲಿ ಮಾರಲಾಗುತ್ತಿದ್ದ ₹6 ಲಕ್ಷ ಮೌಲ್ಯದ
250 ಚೀಲ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರ ರಾಜ್ಯದಿಂದ ಬಾಗಲಕೋಟೆಗೆ ತರಲಾಗಿತ್ತು ಎಂದು ಹೇಳಲಾಗಿದೆ.
ಅಧಿಕ ಬೆಲೆಗೆ ಮಾರಾಟ: ‘50 ಕೆ.ಜಿಯ ಒಂದು ಚೀಲ ಡಿಎಪಿಯನ್ನು ₹1,370 ದರಕ್ಕೆ ಮಾರಲು ಅವಕಾಶವಿದೆ. ಆದರೆ, ಹಲವು ಸೊಸೈಟಿ ಹಾಗೂ ಮಳಿಗೆಗಳಲ್ಲಿ ₹1,400 ವರೆಗೂ ಮಾರಾಟ ಮಾಡುತ್ತಿದ್ದಾರೆ’ ಎಂದೂ ಹಾವೇರಿಯ ಕೆಲವು ರೈತರು ಆರೋಪಿಸಿದ್ದಾರೆ.
ಡಿಎಪಿ ಉತ್ಪಾದನೆಯಲ್ಲೇ ‘ಕೊರತೆ’
ರಾಜ್ಯದಲ್ಲಿ ಡಿಎಪಿ ರಸಗೊಬ್ಬರದ ಕೊರತೆಯಿಲ್ಲ. ಈವರೆಗೆ 77,154 ಟನ್‌ನಷ್ಟು ಡಿಎಪಿ ದಾಸ್ತಾನಿದೆ ಎಂದು ರಾಜ್ಯ ಕೃಷಿ ಇಲಾಖೆ ಹೇಳಿದೆ.
ಭಾರತದಲ್ಲಿ ವಾರ್ಷಿಕ 100 ಲಕ್ಷ ಟನ್ ಡಿಎಪಿ ಅಗತ್ಯವಿದೆ. ಇದರಲ್ಲಿ 48 ಲಕ್ಷ ಟನ್ ಸ್ಥಳೀಯವಾಗಿ ಉತ್ಪಾದನೆಯಾದರೆ, ಉಳಿದಿದ್ದು ಆಮದಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಿಎಪಿ ತಯಾರಿಕೆಗೆ ಅಗತ್ಯವಾದ ಪಾಸ್ಫರಸ್‌ನ ಬೆಲೆ ಏರಿಕೆಯಾಗಿದೆ. ಜೊತೆಗೆ, ಸಾಗಾಟ ವೆಚ್ಚವೂ ಸೇರಿ, ಸ್ಥಳೀಯ ಕಂಪನಿಗಳಿಗೆ 50 ಕೆ.ಜಿಯ ಒಂದು ಚೀಲ ಡಿಎಪಿ ಉತ್ಪಾದಿಸಿ ಮಾರಾಟ ಮಾಡಿದಾಗ ₹500ವರೆಗೂ ನಷ್ಟವಾಗುತ್ತಿದೆ. ಈ ಕಾರಣಕ್ಕೆ ಕಂಪನಿಗಳೂ ಉತ್ಪಾದಿಸಲು ಹಿಂದೇಟು ಹಾಕುತ್ತಿವೆ ಎಂದು ಹೇಳುತ್ತಾರೆ ಅಧಿಕಾರಿಗಳು.
ಪರ್ಯಾಯ ರಸಗೊಬ್ಬರ ಬಳಸಿ: ‘ಡಿಎಪಿಯಲ್ಲಿ ಬೆಳೆಗಳಿಗೆ ಅಗತ್ಯವಾದ ಎನ್‌ಪಿಕೆ ಪೋಷಕಾಂಶಗಳು ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಇದರಲ್ಲಿ ಸಾರಜನಕ, ರಂಜಕವಷ್ಟೇ ಇರುತ್ತದೆ. ಹಾಗಾಗಿ, ಡಿಎಪಿಗೆ ಪರ್ಯಾಯವಾಗಿ, ಆಯಾ ಮಣ್ಣಿಗೆ, ಬೆಳೆಗಳಿಗೆ ಹೊಂದಿಕೊಳ್ಳುವ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಸಲು ರೈತರಿಗೆ ಶಿಫಾರಸು ಮಾಡಲಾಗುತ್ತಿದೆ. ಈ ಕುರಿತು ನಿರಂತರವಾಗಿ ಪ್ರಚಾರ ಕೈಗೊಳ್ಳಲಾಗುತ್ತಿದೆ. ಡಿಎಪಿಗೆ ಹೋಲಿಸಿದರೆ ಕಾಂಪ್ಲೆಕ್ಸ್ ರಸಗೊಬ್ಬರದ ದರ ತುಸು ಹೆಚ್ಚಾಗಿರುವ ಕಾರಣ, ರೈತರು ಅದನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ’ ಎಂಬುದು ಅಧಿಕಾರಿಗಳ ಹೇಳಿಕೆ.
ಕಳಪೆ ಬೀಜದ ಹಾವಳಿ
ಹಾವೇರಿ ಜಿಲ್ಲೆಯಲ್ಲಿ ಕಳಪೆ ಬೀಜದ ಹಾವಳಿ ಹೆಚ್ಚಿದೆ. ಬ್ಯಾಡಗಿಯಲ್ಲಿ ಮೆಣಸಿನಕಾಯಿಯ ಕಳಪೆ ಬೀಜಗಳನ್ನು ಮಾರಿದ್ದ ಆರೋಪದಡಿ ಮಾರಾಟಗಾರ ಮಂಜುನಾಥ ಬಿದರಿ ಎಂಬವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆರೋಪಿ ಮಂಜುನಾಥ ತಮ್ಮ ಮಳಿಗೆಯಲ್ಲಿ ಹೈದರಾಬಾದ್‌ನ ಧನಾ ಕ್ರಾಪ್ ಸೈನ್ಸ್ ಲಿಮಿಟೆಡ್ ಕಂಪನಿಯ ರಾಹಿಲ್ (ಡಿಸಿಎಚ್–30) ತಳಿಯ ಮೆಣಸಿನಕಾಯಿ ಬೀಜಗಳನ್ನು ಮಾರುತ್ತಿದ್ದರು. ಹಿರೇಹಳ್ಳಿ, ಚಿಕ್ಕಳ್ಳಿ ಹಾಗೂ ಬಡಮಲ್ಲಿ ಗ್ರಾಮದ ಹಲವು ರೈತರು 2024ರ ಡಿಸೆಂಬರ್–2025ರ ಜನವರಿಯಲ್ಲಿ ರಾಹಿಲ್ ಬೀಜ ಖರೀದಿಸಿ ನಾಟಿ ಮಾಡಿದ್ದರು. ಆದರೆ, ಮೆಣಸಿನಕಾಯಿ ಗಿಡಗಳಲ್ಲಿ ಕಾಯಿ ಬಂದಿರಲಿಲ್ಲ. ಬೆಳೆಯೂ ಕುಂಠಿತವಾಗಿತ್ತು. ನೊಂದ ರೈತರು, ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದರು. ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಮಳಿಗೆ ಮಾಲೀಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಅದೇ ಪ್ರಕರಣದ ತನಿಖೆ ಮುಂದುವರಿದಿದೆ.
ಹಾನಗಲ್ ಹಾಗೂ ಶಿಗ್ಗಾವಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲೂ ಇಂತಹ ದೂರುಗಳು ಬಂದಿವೆ. ಇವುಗಳ ಪರಿಶೀಲನೆ ನಡೆದಿದ್ದು, ಕೃಷಿ ತಜ್ಞರಿಂದ ವರದಿ ಬರುವುದು ಬಾಕಿಯಿದೆ. ರಾಣೆಬೆನ್ನೂರಿನಲ್ಲಿ ನಕಲಿ ಬೀಜ ಹಾಗೂ ಗೊಬ್ಬರ ಮಾರುತ್ತಿರುವ ಬಗ್ಗೆ ಶಾಸಕ ಪ್ರಕಾಶ ಕೋಳಿವಾಡ ಅವರೇ ಆರೋಪಿಸಿದ್ದಾರೆ. ಜೊತೆಗೆ, ಈ ಬಗ್ಗೆ ಪರಿಶೀಲನೆ ನಡೆಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
2000 ಎಕರೆಯಲ್ಲಿ ಚಿಗುರೊಡೆಯದ ಸೋಯಾಬೀನ್
ಬೆಳಗಾವಿ ಜಿಲ್ಲೆಯ ಹಲವು ಕಡೆಗಳಲ್ಲಿ ನಕಲಿ ಬೀಜದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ 2,000 ಎಕರೆಯಲ್ಲಿ ಬಿತ್ತನೆ ಮಾಡಿದ ಸೋಯಾಬೀನ್ ಬೀಜಗಳು ಮೊಳಕೆ ಒಡೆದಿಲ್ಲ. ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತುರಕರ ಶೀಗಿಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ವಿತರಿಸಿದ ಸೋಯಾಬೀನ್ ಬೀಜಗಳು ನಕಲಿ ಆಗಿದ್ದು, 1,500 ಎಕರೆ ಪ್ರದೇಶದಲ್ಲಿ ಮೊಳಕೆ ಒಡೆದಿಲ್ಲ. ಇದರಿಂದ 900ಕ್ಕೂ ಹೆಚ್ಷು ರೈತರು ಕಂಗಾಲಾಗಿದ್ದಾರೆ.
ಬೈಲಹೊಂಗಲ, ರಾಮದುರ್ಗ, ಬೆಳಗಾವಿ ತಾಲ್ಲೂಕಿನಲ್ಲೂ ಇಂಥ ಪ್ರಕರಣಗಳು ಇವೆ. ಬಿತ್ತಿದ 12 ದಿನಗಳವರೆಗೆ ಬೀಜಗಳು ಮೊಳಕೆ ಒಡೆಯಲಿಲ್ಲ. ಅಕ್ಕಪಕ್ಕದ ಗ್ರಾಮಗಳಲ್ಲೂ ಈ ಸಮಸ್ಯೆಯಿದೆ.
‘ನಾವೆಲ್ಲ ಹೋರಾಟ ಮಾಡಿದ ಬಳಿಕ ಕೃಷಿ ಅಧಿಕಾರಿಗಳು ಪರಿಶೀಲಿಸಿದರು’ ಎಂದು ಹಿರೇಬಾಗೇವಾಡಿ ರೈತರು ಆರೋಪಿಸಿದ್ದಾರೆ. ಅಲ್ಲದೇ, ರೈತರಿಗೆ ಇನ್ನೊಮ್ಮೆ ಬೇರೆ ತಳಿಯ ಬೀಜಗಳನ್ನು ವಿತರಿಸಿದ್ದಾರೆ. ಆದರೆ, ಗೊಬ್ಬರ ನೀಡುತ್ತಿಲ್ಲ. ಅಷ್ಟೇ ಅಲ್ಲ, ಈಗ ಉಂಟಾದ ಹಾನಿ ಹಾನಿಗೆ ಪರಿಹಾರವನ್ನೂ ನೀಡಿಲ್ಲ ಎಂಬುದು ರೈತರ ಗೋಳು.
ಗದಗ ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ ಮಾರಾಟ ಪ್ರಕರಣಗಳು ಪತ್ತೆಯಾಗಿದೆ. ‘ನಕಲಿ ಡಿಎಪಿಯಲ್ಲಿ ಸಾರಜನಕ ಶೇ 0, ರಂಜಕ ಶೇ .9 ಇರುವುದು ದೃಢಪಟ್ಟಿದ್ದು, ಇದು ಮಣ್ಣಲ್ಲದೇ ಮತ್ತೇನೂ ಅಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲ
ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಬಿತ್ತನೆ ಬೀಜ ಮಾತ್ರವೇ ಬೇಡಿಕೆಯಷ್ಟು ದಾಸ್ತಾನಿದೆ. ರಸಗೊಬ್ಬರ ಪ್ರಮಾಣ ಬೇಡಿಕೆಯ ಅರ್ಧದಷ್ಟು ಮಾತ್ರ ಸಂಗ್ರಹವಿದೆ. ಹಂಚಿಕೆಯೂ ವೇಗವಾಗಿ ನಡೆಯುತ್ತಿಲ್ಲ.
ಚಾಮರಾಜನಗರ ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ 46,901 ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, 6,665 ಟನ್ ಮಾತ್ರ ಪೂರೈಸಲಾಗಿದೆ. ಬಿತ್ತನೆ ಬೀಜವನ್ನು ರೈತರಿಗೆ ಅರ್ಧದಷ್ಟು ಮಾತ್ರ ಪೂರೈಕೆ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರ ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲ. ಹೀಗಾಗಿ, ಪರ್ಯಾಯವಾಗಿ ಇತರೆ ಗೊಬ್ಬರವನ್ನು ಬಳಸಲು ರೈತರಿಗೆ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೊಡಗಿನಲ್ಲಿ 1,709.76 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, ವಿತರಣೆ ಆಗಿರುವುದು 1.5 ಕ್ವಿಂಟಲ್ ಮಾತ್ರ. 88,667 ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ವಿತರಣೆ ಆಗಿರುವುದು 13,206 ಟನ್.
ಸಿಗುತ್ತಿಲ್ಲ ‘ಸಹ್ಯಾದ್ರಿ ಪಂಚಮುಖಿ: ದಕ್ಷಿಣ ಕನ್ನಡದಲ್ಲಿ ಎಂಒ4 ತಳಿಯ
ಭತ್ತಕ್ಕೆ ಬೇಡಿಕೆ ಇದ್ದು, ಬೇಡಿಕೆಯಷ್ಟು ಪೂರೈಕೆಯಾಗಿದೆ. ‘ಜಯ’, ‘ಜ್ಯೋತಿ’ ಹಾಗೂ ಈಚಿನ ವರ್ಷಗಳಲ್ಲಿ ಪರಿಚಯಿಸಿರುವ ‘ಸಹ್ಯಾದ್ರಿ ಪಂಚಮುಖಿ’ ಬೀಜಕ್ಕೂ ಬೇಡಿಕೆ ಇದ್ದು, ‘ಸಹ್ಯಾದ್ರಿ ಪಂಚಮುಖಿ’ ಪೂರೈಕೆಯಾಗಿಲ್ಲ.
ಯಾರು ಏನೆನ್ನುವರು?
‘‘ಹಾವೇರಿ, ಗದಗ, ಬಾಗಲಕೋಟೆ ಮತ್ತು ಬೀದರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಎಪಿ ರಸಗೊಬ್ಬರದ ಕೊರತೆ ಇದೆ ಎಂದು ರೈತರು ನಮ್ಮ ಸಂಘಟನೆಗೆ ತಿಳಿಸಿದ್ದಾರೆ. ಗೊಬ್ಬರ ದಾಸ್ತಾನಿದೆ ಎಂದು ಇಲಾಖೆಯವರು ಹೇಳುತ್ತಾರೆ. ಆದರೆ, ಜಿಲ್ಲೆ, ತಾಲ್ಲೂಕುಗಳಲ್ಲಿ ರೈತರಿಗೆ ಸಿಗುತ್ತಿಲ್ಲ. ಇದರಿಂದ ಕೃಷಿ ಕಾರ್ಯಕ್ಕೆ ತೊಂದರೆಯಾಗಿದೆ‘‘
ಬಡಗಲಪುರ ನಾಗೇಂದ್ರ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ
–––
‘‘ರೈತರ ಬೇಡಿಕೆಯಷ್ಟು ಡಿಎಪಿ ಗೊಬ್ಬರ ಪೂರೈಕೆ ಆಗುತ್ತಿಲ್ಲ. ಇದಕ್ಕಾಗಿ ನಿತ್ಯ ಕಾಯುವುದೇ ಕೆಲಸವಾಗಿದೆ. ಇದರ ಬದಲು ನ್ಯಾನೊ ಡಿಎಪಿ ಖರೀದಿಸಿ ಎಂದು ಅಂಗಡಿಯವರು ಮನವೊಲಿಸುತ್ತಿದ್ದಾರೆ. ಪ್ರತಿ ಸಲ ನಾವು ಯಾವುದನ್ನು ಖರೀದಿ ಮಾಡುತ್ತೇವೆಯೋ ಅದೇ ರಸಗೊಬ್ಬರ ಸಿಗಬೇಕು. ಲಿಂಕ್ ಗೊಬ್ಬರಗಳ ಗೊಡವೆ ನಮಗೆ ಬೇಡ. ತ್ವರಿತವಾಗಿ ಡಿಎಪಿ ಒದಗಿಸಬೇಕು‘‘
–ಪಂಪಣ್ಣ ನಾಯಕ, ಹುಲಿಹೈದರ, ಕೊಪ್ಪಳ ಜಿಲ್ಲೆ
–––
‘ಪೂರೈಕೆ ಕಡಿಮೆ, ಕೊರತೆಯಿಲ್ಲ’
‘‘ಕೇಂದ್ರ ಸರ್ಕಾರ ಪ್ರತಿ ವರ್ಷ ರಾಜ್ಯಕ್ಕೆ ಪೂರೈಸುವಷ್ಟು ಪ್ರಮಾಣದಲ್ಲಿ ಈ ವರ್ಷ ಡಿಎಪಿ ಪೂರೈಸಿಲ್ಲ. ಕೇಂದ್ರ ವು ಜಾಗತಿಕ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುವ ಪ್ರಮಾಣದಲ್ಲೂ ಕಡಿಮೆಯಾಗಿರುವುದರಿಂದ, ದೇಶದಾದ್ಯಂತ ಡಿಎಪಿ ಕೊರತೆಯಾಗಿದೆ. ಇದು ಗೊತ್ತಿದ್ದರಿಂದಲೇ ಪರ್ಯಾಯ ರಸಗೊಬ್ಬರಗಳನ್ನು ಬಳಸುವಂತೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಇದರ ನಡುವೆಯೂ ಪ್ರಸ್ತುತ ರಾಜ್ಯದಲ್ಲಿ ಡಿಎಪಿ ಸೇರಿದಂತೆ ಯಾವುದೇ ರಸಗೊಬ್ಬರಗಳ ಕೊರತೆಯಿಲ್ಲ‘‘
–ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ
ಪೂರಕ ಮಾಹಿತಿ: ಪ್ರಜಾವಾಣಿ ಎಲ್ಲ ಬ್ಯೂರೊಗಳಿಂದ
*******
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.