
hampi university
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಬ್ಬರ ಹೆಚ್ಚಾದಂತೆ, ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳು ಕಳೆಗುಂದುತ್ತಿವೆ. ಸರ್ಕಾರವು ಜಿಲ್ಲೆಗೊಂದು, ವಿಷಯಕ್ಕೊಂದು ವಿ.ವಿ.ಯನ್ನು ಸ್ಥಾಪಿಸುತ್ತಿದೆ. ಆದರೆ, ಅವುಗಳ ಸಮರ್ಪಕ ಕಾರ್ಯನಿರ್ವಹಣೆಗೆ ಅಗತ್ಯವಾದ ಕನಿಷ್ಠ ಮೂಲಸೌಕರ್ಯ, ಅನುದಾನ ಒದಗಿಸುತ್ತಿಲ್ಲ, ಭೋದಕರ ನೇಮಕಾತಿ ಮಾಡುತ್ತಿಲ್ಲ ಎನ್ನುವ ಅಸಮಾಧಾನ ವ್ಯಾಪಕವಾಗಿದೆ. ಇದು ಕೋಟ್ಯಂತರ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿರುವ ಸರ್ಕಾರಿ ಸ್ವಾಮ್ಯದ ವಿ.ವಿ.ಗಳ ಶೈಕ್ಷಣಿಕ, ಮೂಲಸೌಕರ್ಯಗಳ ಸ್ಥಿತಿಗತಿಯ ವರದಿ ಇಲ್ಲಿದೆ
ಮೈಸೂರು ವಿ.ವಿ
ಬೆಂಗಳೂರು, ಶಿವಮೊಗ್ಗ, ಮಂಗಳೂರಿನವರೆಗೂ ಕಾರ್ಯವ್ಯಾಪ್ತಿ ಇದ್ದ, ಶತಮಾನ ದಾಟಿರುವ ಮೈಸೂರು ವಿಶ್ವವಿದ್ಯಾಲಯವೀಗ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳು ಮೈಸೂರು ವಿಶ್ವವಿದ್ಯಾಲಯದಿಂದ ಬೇರ್ಪಟ್ಟಿವೆ.
ಸರ್ಕಾರದಿಂದ ಬರುತ್ತಿರುವ ಹಣ ಪಿಂಚಣಿಗೆ ಸಾಕಾಗುತ್ತಿಲ್ಲ. ಜಿಲ್ಲೆಗೊಂದು ವಿಶ್ವವಿದ್ಯಾಲಯವಾದ್ದರಿಂದ ಸಂಪನ್ಮೂಲದ ಹರಿವೂ ಕಡಿಮೆಯಾಗಿದೆ. ಖಾಲಿ ಇರುವ ಹುದ್ದೆಗಳ ನೇಮಕಾತಿಯು ದಶಕದಿಂದಲೂ ನನೆಗುದಿಗೆ ಬಿದ್ದಿದೆ. ವಿವಿಯಲ್ಲಿ 494 ಅತಿಥಿ ಸಹಾಯಕ ಪ್ರಾಧ್ಯಾಪಕರಿದ್ದಾರೆ.
ವಿಶ್ವವಿದ್ಯಾಲಯದ ಆಂತರಿಕ ಆದಾಯವು ₹295.59 ಕೋಟಿ ಆಗಿದ್ದರೆ, ವೆಚ್ಚ ₹403.31 ಕೋಟಿ ಆಗಿದೆ. 2025–26ನೇ ಸಾಲಿನ ಅಂದಾಜು ₹107.72 ಕೋಟಿ ಕೊರತೆ ಬಜೆಟ್ ಅನ್ನು ವಿಶ್ವವಿದ್ಯಾಲಯ ಅನುಮೋದಿಸಿದೆ. ತಿಂಗಳಿಗೆ ₹ 9 ಕೋಟಿ ಅನುದಾನ ಪಿಂಚಣಿಗೆ ಬೇಕಾಗುತ್ತಿದ್ದು, ₹ 4.5 ಕೋಟಿ ಕೊರತೆ ಆಗುತ್ತಿದೆ.
ಮಂಗಳೂರು ವಿ.ವಿ
ಕಾಯಂ ಸಿಬ್ಬಂದಿ ಕೊರತೆ, ಸರ್ಕಾರದಿಂದ ಬರುವ ಅನುದಾನದಲ್ಲಿ ಕಡಿತ, ವಿ.ವಿ ಅಡಿಯಲ್ಲಿರುವ ಕಾಲೇಜುಗಳ ಸಂಖ್ಯೆ ಇಳಿಕೆ ಇನ್ನಿತರ ಕಾರಣಗಳಿಂದಾಗಿ ಮಂಗಳೂರು ವಿಶ್ವವಿದ್ಯಾಲಯವು ಹಣಕಾಸು ಹೊಂದಾಣಿಕೆಗೆ ಹೆಣಗಾಡುತ್ತಿದೆ. 2023–24ನೇ ಸಾಲಿನಲ್ಲಿ ಅಭಿವೃದ್ಧಿ ಅನುದಾನ ದೊರೆತಿಲ್ಲ, 2024–25ನೇ ಸಾಲಿನಲ್ಲಿ ₹1 ಕೋಟಿ ಬಂದಿದೆ. ವಿ.ವಿಯ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಶಕ್ತಿ ಕುಂಠಿತವಾಗಿದೆ. ಹಲವಾರು ಕಾಲೇಜುಗಳು ಸ್ವಾಯತ್ತಗೊಂಡರೆ, ಕೆಲವು ಡೀಮ್ಡ್ ವಿವಿಗಳಾಗಿ ರೂಪುಗೊಂಡಿವೆ. ಕಾಲೇಜು ಸಂಯೋಜನೆ ಶುಲ್ಕ, ವಿದ್ಯಾರ್ಥಿಗಳ ತರಗತಿ ಶುಲ್ಕದಿಂದ ಸಂಗ್ರಹವಾಗುವ ಮೊತ್ತದಿಂದ ವಿ.ವಿಯ ಎಲ್ಲ ಆರ್ಥಿಕ ವೆಚ್ಚ ಭರಿಸಬೇಕಾಗಿದೆ.
ವಿವಿಯಲ್ಲಿ 28 ವಿಭಾಗಗಳು ಇದ್ದು, 42 ವಿವಿಧ ಕೋರ್ಸ್‌ಗಳು, ಎರಡು ಡಿಪ್ಲೊಮಾ ಕೋರ್ಸ್‌ಗಳು ಇವೆ. ಇಂಗ್ಲಿಷ್, ಭೌತ ವಿಜ್ಞಾನ, ಎಂಎಸ್‌ಡಬ್ಲ್ಯು, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಅರ್ಥಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಜೀವ ವಿಜ್ಞಾನ ಕೋರ್ಸ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಬಯೊಕೆಮೆಸ್ಟ್ರಿ, ಎಲೆಕ್ಟ್ರಾನಿಕ್ಸ್, ಪರಿಸರ ವಿಜ್ಞಾನ, ಕಡಲ ವಿಜ್ಞಾನ, ಮಟೀರಿಯಲ್ ಸೈನ್ಸ್, ಸಂಖ್ಯಾಶಾಸ್ತ್ರ, ಜಿಯೊ ಇನ್ಫೊಮೆಟಿಕ್ಸ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಕೋರ್ಸ್‌ಗಳು ವಿದ್ಯಾರ್ಥಿಗಳ ಕೊರತೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.
ಕರ್ನಾಟಕ ರಾಜ್ಯ ಮುಕ್ತ ವಿ.ವಿ
* ಕೆಎಸ್‌ಒಯು ಕೋರ್ಸ್‌ಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ಯುಜಿಸಿ 2013ನೇ ಸಾಲಿನಿಂದ ರದ್ದುಪಡಿಸಿತ್ತು. 2017ರ ಡಿಸೆಂಬರ್‌ನಲ್ಲಿ ತಾಂತ್ರಿಕೇತರ ಕೋರ್ಸ್‌ಗಳಿಗೆ ಮಾನ್ಯತೆ ನೀಡುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಹೈಕೋರ್ಟ್ ನಿರ್ದೇಶಿಸಿತ್ತು.
* ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 64 ಕೋರ್ಸ್‌ಗಳಿಗೆ ಪ್ರವೇಶಾತಿ ಆಗಿದೆ
* ರಾಜ್ಯದ ವಿವಿಧ ಭಾಗದಲ್ಲಿ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ
* ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಅನುದಾನ ದೊರೆಯುತ್ತಿಲ್ಲ
* 50 ಪೂರ್ಣಾವಧಿ ಅಧ್ಯಾಪಕರು, 22 ಅತಿಥಿ ಉಪನ್ಯಾಸಕರಿದ್ದಾರೆ. ಬೋಧಕೇತರ ಸಿಬ್ಬಂದಿ 109
* ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಅಧ್ಯಯನ ಕೇಂದ್ರಗಳಲ್ಲಿ 700 ಶೈಕ್ಷಣಿಕ ಸಮಾಲೋಚಕರಿದ್ದಾರೆ
ಬೆಂಗಳೂರು: ದೀಪದ ಕೆಳಗೇ ಕತ್ತಲು
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯಗಳ ಕೊರತೆ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿದ್ದು, ಯಾವುದೇ ವಿಭಾಗವನ್ನು ಮುಚ್ಚಿಲ್ಲ. ಆದರೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಇದೆ. ಬೆಂಗಳೂರು ವಿವಿಯಲ್ಲಿ 250 ಅತಿಥಿ ಉಪನ್ಯಾಸಕರಿದ್ದಾರೆ. ಬೆಂಗಳೂರು ನಗರ ವಿವಿಯಲ್ಲಿ 217 ಅತಿಥಿ ಉಪನ್ಯಾಸಕರಿದ್ದಾರೆ.
ಬೆಂಗಳೂರು ಉತ್ತರ ವಿ.ವಿ
ಬೆಂಗಳೂರು ಉತ್ತರ ವಿ.ವಿಯಲ್ಲಿ ಕಾಯಂ ಬೋಧಕರ ಕೊರತೆ ಕಾಡುತ್ತಿದೆ. ಐದು ವರ್ಷಗಳ ಹಿಂದೆಯಷ್ಟೆ ಕೋಲಾರದಲ್ಲಿ ಆರಂಭವಾದ ವಿ.ವಿಯು, ಕೋಲಾರ, ಚಿಕ್ಕಬಳ್ಳಾಪುರ, ಹೊಸಕೋಟೆ, ಕೆ.ಆರ್.ಪುರಂ ವ್ಯಾಪ್ತಿ ಒಳಗೊಂಡಿದೆ. ಚಿಕ್ಕಬಳ್ಳಾಪುರದ ಅಮರಾವತಿಯಲ್ಲಿ ನೂತನ ಕ್ಯಾಂಪಸ್ ನಿರ್ಮಿಸಲಾಗುತ್ತಿದೆ.
ವಿ.ವಿ.ಯಲ್ಲಿ 66 ಅನುಮೋದಿತ ಹುದ್ದೆಗಳಿವೆ. ಇಬ್ಬರು ಕಾಯಂ ಸಹ ಪ್ರಾಧ್ಯಾಪಕರು, ಇಬ್ಬರು ಕಾಯಂ ಪ್ರಾಧ್ಯಾಪಕರು ಇದ್ದಾರೆ. ಸಹಾಯಕ ಪ್ರಾಧ್ಯಾಪಕರು ಇಲ್ಲ. 62 ಹುದ್ದೆಗಳು ಖಾಲಿ ಇವೆ. 41 ಅತಿಥಿ ಉಪನ್ಯಾಸಕರಿದ್ದಾರೆ.
ಪತ್ರಿಕೋದ್ಯಮ, ಇಂಗ್ಲಿಷ್ ವಿಷಯ ಹೊರತುಪಡಿಸಿ ಉಳಿದ ವಿಭಾಗಗಳಿಗೆ ಉತ್ತಮ ಬೇಡಿಕೆ ಇದೆ. ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕೆ ಪತ್ರಿಕೋದ್ಯಮ ವಿಭಾಗ ಮುಚ್ಚಿದ್ದಾರೆ. 89 ಮಂದಿ ಪಿಎಚ್‌ಡಿ ಮಾಡುತ್ತಿದ್ದಾರೆ. ಸರ್ಕಾರದಿಂದ ವಿ.ವಿಗೆ ಕಾಯಂ ಬೋಧಕರ ವೇತನಕ್ಕೆ ಮಾತ್ರ ವಾರ್ಷಿಕ ಧನಸಹಾಯ ಸಿಗುತ್ತಿದೆ.
ಮಹಾರಾಣಿ ಕ್ಲಸ್ಟರ್ ವಿ.ವಿ
ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಮಹಾರಾಣಿ ಕ್ಲಸ್ಟರ್ ವಿ.ವಿಯಲ್ಲಿ 272 ಬೋಧಕ ಹುದ್ದೆಗಳಿದ್ದು 142 ಮಂದಿ ಕಾಯಂ ಬೋಧಕರಿದ್ದಾರೆ. 130 ಹುದ್ದೆಗಳು ಖಾಲಿ ಇದ್ದು, ಆ ಸ್ಥಾನಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ವರ್ಷದಿಂದ ಕಾಯಂ ಕುಲಪತಿ ಕೂಡ ಇಲ್ಲ.
ಮಹಾರಾಣಿ ಕಾಲೇಜು ಕ್ಲಸ್ಟರ್ ವಿಶ್ವವಿದ್ಯಾಲಯವಾಗಿದ್ದರೂ, ಇಲ್ಲಿರುವ ಸಿಬ್ಬಂದಿ ಈಗಲೂ ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲೇ ಇದ್ದಾರೆ. ವಿವಿ ಸಿಬ್ಬಂದಿಯಾಗಿ ಇಲ್ಲಿಯೇ ಉಳಿಯುವ ಅಥವಾ ಹೊರಗೆ ಹೋಗುವ ಬಗ್ಗೆ ತಮ್ಮ ನಿಲುವು ತಿಳಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿತ್ತು. 142 ಮಂದಿ ಪೈಕಿ 94 ಮಂದಿ ವಿಶ್ವವಿದ್ಯಾಲಯದಲ್ಲೇ ಉಳಿಯುವುದಾಗಿ ಲಿಖಿತವಾಗಿ ತಿಳಿಸಿದ್ದಾರೆ. ಹೊರಗೆ ಹೋಗುವ, ಇಲ್ಲೇ ಉಳಿಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಎಷ್ಟು ಮಂದಿ ಇರಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಇಲ್ಲಿ 23 ವಿಭಾಗಗಳಲ್ಲಿ 900ಕ್ಕೂ ಅಧಿಕ ವಿದ್ಯಾರ್ಥಿನಿಯರಿದ್ದು, ಮೆಗಾ ಹಾಸ್ಟೆಲ್ ಸೌಲಭ್ಯ ಇದೆ.
ನೃಪತುಂಗ ವಿ.ವಿ
ಸರ್ಕಾರಿ ವಿಜ್ಞಾನ ಕಾಲೇಜನ್ನು 2021ರಲ್ಲಿ ನೃಪತುಂಗ ವಿ.ವಿಯಾಗಿ ಪರಿವರ್ತಿಸಲಾಗಿದೆ. ಇಲ್ಲಿ ಒಟ್ಟು 100 ಬೋಧಕ ಹುದ್ದೆಗಳಿದ್ದು, ಪ್ರಸ್ತುತ 58 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 48 ಹುದ್ದೆಗಳು ಖಾಲಿ ಇವೆ. ಒಟ್ಟು 70 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ರೂಸಾದಡಿ ವಿಶ್ವವಿದ್ಯಾಲಯಕ್ಕೆ ₹55 ಕೋಟಿ ಅನುದಾನ ದೊರೆತಿದ್ದು, ಇದರಲ್ಲಿ ₹52.08 ಕೋಟಿ ಖರ್ಚು ಮಾಡಿ ಹೊಸ ಕಟ್ಟಡ ಕಟ್ಟಲಾಗಿದೆ. ಆದರೆ, ಇದುವರೆಗೂ ವಿಶ್ವವಿದ್ಯಾಲಯಕ್ಕೆ ಕಾಯಂ ಆಗಿ ಹುದ್ದೆಗಳು ಮಂಜೂರಾಗಿಲ್ಲ. ಹಿಂದೆ ಕಾಲೇಜಿನಲ್ಲಿ ಇದ್ದ ಸಿಬ್ಬಂದಿಯೇ ಇದ್ದಾರೆ. ಅವರಲ್ಲಿ ಇಲ್ಲೇ ಉಳಿಯುವವರು ಎಷ್ಟು, ಹೊರಗೆ ಹೋಗುವವರು ಎಷ್ಟು ಎಂಬುದು ಇನ್ನೂ ನಿರ್ಧಾರವಾಗಿಲ್ಲ.
‘ಇಲ್ಲ’ಗಳ ಕನ್ನಡ ವಿ.ವಿ
ವಿಜಯನಗರ ಜಿಲ್ಲೆಯ ಕಮಲಾಪುರ ಬಳಿ ಇರುವ ಹಂಪಿ ಕನ್ನಡ ವಿ.ವಿಯಲ್ಲಿ 700 ಮಂದಿ ವಿದ್ಯಾರ್ಥಿಗಳು ವಿವಿಧ ಸಂಶೋಧನೆ, ಪಿಎಚ್.ಡಿ, ಯುಜಿ, ಪಿಜಿ ಅಧ್ಯಯನಗಳಲ್ಲಿ ತೊಡಗಿದ್ದಾರೆ. 23 ಅತಿಥಿ ಉಪನ್ಯಾಸಕರಿದ್ದಾರೆ. ಕನ್ನಡ ವಿಷಯಕ್ಕೆ ಬೇಡಿಕೆ ಇದೆ. ಎಂಎ ಪಿಎಚ್.ಡಿಯಲ್ಲಿ ಇದ್ದ ಐದೂ ವಿಷಯಗಳಿಗೆ (ಕನ್ನಡ, ಸಮಾಜ ವಿಜ್ಞಾನ, ಮಹಿಳಾ ಅಧ್ಯಯನ, ಜಾನಪದ, ಇತಿಹಾಸ ಪುರಾತತ್ವ) ಬಹಳ ಬೇಡಿಕೆ ಇತ್ತು. ಆದರೆ ಆಡಳಿತಾತ್ಮಕ ಕಾರಣಗಳಿಂದಾಗಿ ನಾಲ್ಕು ವರ್ಷಗಳಿಂದ ರದ್ದುಗೊಂಡಿವೆ. ಎಂ.ಎ ಪಿಎಚ್.ಡಿ ಇಂಟಗ್ರೇಟೆಡ್ ಕೋರ್ಸ್‌ಗೂ ಬೇಡಿಕೆ ಇತ್ತು. ಅದನ್ನೂ ಸಕಾರಣ ಇಲ್ಲದೆ ರದ್ದುಪಡಿಸಲಾಗಿದೆ.
ವಿವಿಯಲ್ಲಿ ಬೋಧನೆ ಶೇ 30ರಷ್ಟು ಇದ್ದರೆ, ಸಂಶೋಧನೆ ಶೇ 70ರಷ್ಟು ಇರುತ್ತದೆ. ವಿ.ವಿಯಲ್ಲಿ ಹಿಂದಿನಂತೆ ಗುಣಮಟ್ಟದ ಸಂಶೋಧನೆ ಈಗ ನಡೆಯುತ್ತಿಲ್ಲ ಎಂಬುದು ವಿವಿ ಕುರಿತ ಬಹುದೊಡ್ಡ ದೂರು.
ಇಲ್ಲಿನ ಪ್ರಾಧ್ಯಾಪಕರೂ ವರ್ಷವಿಡೀ ಸಂಶೋಧನೆಗಳಲ್ಲಿ ತೊಡಗಿರಬೇಕು ಎಂಬ ನಿಯಮ ಇದೆ. ಆದರೆ ಹಾಲಿ ಇರುವ 38 ಪ್ರಾಧ್ಯಾಪಕರ ಪೈಕಿ ಅರ್ಧದಷ್ಟು ಮಂದಿ ವೈಯಕ್ತಿಕ ಮತ್ತು ಸಾಂಸ್ಕೃತಿಕ ಸಂಶೋಧನಾ ಯೋಜನೆಗಳನ್ನೇ ಮಾಡಿಲ್ಲ.
ವಿಶ್ವವಿದ್ಯಾಲಯಕ್ಕೆ ಕುಪ್ಪಳ್ಳಿ, ಕೂಡಲಸಂಗಮ, ದೇವದುರ್ಗ ಮತ್ತು ಚಾಮರಾಜನಗರಗಳಲ್ಲಿ ವಿಸ್ತರಣಾ ಕೇಂದ್ರಗಳಿವೆ. ಚಾಮರಾಜನಗರದ ಕೇಂದ್ರವನ್ನು ಮುಚ್ಚಲಾಗಿದೆ. ಇಲ್ಲಿ 12 ಅಧ್ಯಯನ ಪೀಠಗಳು, 13 ದತ್ತಿನಿಧಿಗಳು ಇವೆ. 4 ಸಂಶೋಧನಾ ಅಧ್ಯಯನ ಕೇಂದ್ರಗಳಿದ್ದು, ಬಹುತೇಕವು ನಿಷ್ಕ್ರಿಯವಾಗಿವೆ. ದೂರಶಿಕ್ಷಣ ಕೇಂದ್ರ ಮುಚ್ಚಿಹೋಗಿದೆ. ಪ್ರಾಧ್ಯಾಪಕರ ಕೊರತೆ ಕಾರಣಕ್ಕೆ ಭಾಷಾಂತರ, ನಾಟಕ, ಜನಪದ ವಿಭಾಗಗಳು ಬಹುತೇಕ ನಿಷ್ಕ್ರಿಯವಾಗಿವೆ. ಸಂಶೋಧನಾ ಸಹಾಯಕರ ಹುದ್ದೆಗೆ ನೇಮಕಾತಿಯೇ ಆಗುತ್ತಿಲ್ಲ.
ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಸುಮಾರು 48 ಮಂದಿ ಹೊರಗುತ್ತಿಗೆ ನೌಕರರಿಗೆ ಒಂದು ವರ್ಷದ ವೇತನ ಬಾಕಿ ಇದೆ. ತಾತ್ಕಾಲಿಕ ಸಿಬ್ಬಂದಿಯ ಈ ಹಿಂದಿನ ಒಂದು ವರ್ಷದ ವೇತನ ಬಾಕಿ ಪಾವತಿಯಾಗಿಲ್ಲ.
ಮಹಿಳಾ ವಿ.ವಿ
‘ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ’ ಆಗಿರುವ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಬೋಧಕ, ಬೋಧಕೇತರ ಸಿಬ್ಬಂದಿ ಕೊರತೆ, ಹಣಕಾಸು ಕೊರತೆ ಎದುರಿಸುತ್ತಿದೆ. 32 ವಿಭಾಗಗಳಿಗೆ ಸಂಬಂಧಿಸಿದಂತೆ 103 ಬೋಧಕ ಸಿಬ್ಬಂದಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 57 ಹುದ್ದೆಗಳು ಮಾತ್ರ ಭರ್ತಿ ಇದ್ದು, 46 ಹುದ್ದೆಗಳು ಖಾಲಿ ಇವೆ. 83 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕೊರತೆ ಇದ್ದರೂ ಯಾವುದೇ ವಿಭಾಗವನ್ನು ಮುಚ್ಚಿಲ್ಲ. ಆದರೆ, ಬಹಳಷ್ಟು ವಿಭಾಗಗಳಲ್ಲಿ ಅರ್ಧದಷ್ಟು ಸೀಟುಗಳೂ ಭರ್ತಿಯಾಗುತ್ತಿಲ್ಲ. ವಿಶ್ವವಿದ್ಯಾಲಯದ ಆವರಣದಲ್ಲಿ ಸೌಕರ್ಯಗಳ ಕೊರತೆ ಇದೆ. ಹಣಕಾಸಿನ ಕೊರತೆ ಅನುಭವಿಸುತ್ತಿದೆ.
ಗುಲಬರ್ಗಾ ವಿ.ವಿ
ನಾಲ್ಕು ದಶಕಗಳ ಹಿಂದೆ ಸ್ಥಾಪನೆಯಾಗಿರುವ ಗುಲಬರ್ಗಾ ವಿ.ವಿ.ಯಲ್ಲಿ ಬೋಧಕ ಸಿಬ್ಬಂದಿಯ ನೇಮಕ ಎರಡು ದಶಕಗಳಿಂದ ಆಗದೇ ಇರುವುದರಿಂದ ಶೈಕ್ಷಣಿಕ ಪ್ರಗತಿಗೆ ಭಾರಿ ಹಿನ್ನಡೆಯಾಗಿದೆ. ವಿ.ವಿ.ಯಲ್ಲಿ ಸದ್ಯಕ್ಕೆ 26 ಮಂಜೂರಾದ ಪ್ರಾಧ್ಯಾಪಕ ಹುದ್ದೆಗಳ ಪೈಕಿ ಇಬ್ಬರು ಮಾತ್ರ ಇದ್ದಾರೆ. 56 ಸಹ ಪ್ರಾಧ್ಯಾಪಕರ ಬದಲು ಐವರು ಮಾತ್ರ ಇದ್ದಾರೆ. 124 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಪೈಕಿ 99 ಖಾಲಿ ಉಳಿದಿವೆ. ಹೀಗಾಗಿ, ನಾಲ್ಕೈದು ವಿಭಾಗಗಳಿಗೆ ಇರುವ ಪ್ರಾಧ್ಯಾಪಕರನ್ನೇ ವಿಭಾಗ ಮುಖ್ಯಸ್ಥರನ್ನಾಗಿ ಮಾಡುವ ಅನಿವಾರ್ಯತೆ ಎದುರಾಗಿದೆ.
ರಾಣಿ ಚನ್ನಮ್ಮ ವಿ.ವಿ
ಬೆಳಗಾವಿ ಸಮೀಪದ ಭೂತರಾಮನಹಟ್ಟಿಯಲ್ಲಿ ಹಳೆ ಕಟ್ಟಡದಲ್ಲೇ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮುಂದುವರಿದಿದೆ. ಹಿರೇಬಾಗೇವಾಡಿ ಬಳಿ ಹೊಸ ಕಟ್ಟಡ ನಿರ್ಮಾಣವಾಗಿದ್ದು, ಕೆಲವೇ ದಿನಗಳಲ್ಲಿ ಸ್ಥಳಾಂತರವಾಗಲಿದೆ. ಬೇಸಿಗೆ ಹಾಗೂ ಬರಗಾಲದ ಸಂದರ್ಭದಲ್ಲಿ ನೀರಿನ ಅಭಾವ ತಲೆದೋರುತ್ತಿದೆ. ವಿ.ವಿ ಮುಖ್ಯ ಕ್ಯಾಂಪಸ್‌ನಲ್ಲಿ 70 ಬೋಧಕ ಹಾಗೂ 120 ಬೋಧಕೇತರ ಸಿಬ್ಬಂದಿ ನೇಮಕವಾಗಿದೆ. 30 ಅತಿಥಿ ಬೋಧಕರು ಹಾಗೂ 100 ಅತಿಥಿ ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ವಿ.ವಿ ಸಂಯೋಜಿತ ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಕೂಡ 2,600 ವಿದ್ಯಾರ್ಥಿಗಳು ಇದ್ದಾರೆ. ಐವರು ಮಾತ್ರ ಕಾಯಂ ಬೋಧಕರಿದ್ದು, 65 ಅತಿಥಿ ಉಪನ್ಯಾಸಕರ ಮೇಲೆ ನಡೆಸಲಾಗುತ್ತಿದೆ.
ಕಾನೂನು ವಿ.ವಿ
ಹುಬ್ಬಳ್ಳಿಯ ನವನಗರದಲ್ಲಿ 2009ರಲ್ಲಿ ಆರಂಭಗೊಂಡಿರುವ ಕರ್ನಾಟಕ ಕಾನೂನು ವಿವಿಯು 53 ಎಕರೆ ಪ್ರದೇಶದಲ್ಲಿ ಹರಡಿದೆ. ಇಲ್ಲಿನ ಕಾನೂನು ಶಾಲೆ ಒಟ್ಟು 52 ಅಧ್ಯಾಪಕರನ್ನು ಒಳಗೊಂಡಿದ್ದು, ಇದರಲ್ಲಿ 11 ಮಂದಿ ಕಾಯಂ ಇದ್ದಾರೆ. ಉಳಿದ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ವಿವಿ ವ್ಯಾಪ್ತಿಯಲ್ಲಿ 167 ಕಾನೂನು ಕಾಲೇಜುಗಳಿವೆ.
ಕರ್ನಾಟಕ ವಿ.ವಿ
75 ವರ್ಷಗಳ ಇತಿಹಾಸವಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಹಣಕಾಸಿನ ಕೊರತೆಯಿಂದ ಸೊರಗಿದೆ. ಒಟ್ಟು ಮಂಜೂರು ಬೋಧಕ ಹುದ್ದೆಗಳು 554. ಪ್ರಸ್ತುತ ಕಾಯಂ ಬೋಧಕರು 196 ಮಂದಿ ಇದ್ದಾರೆ. 358 ಹುದ್ದೆಗಳು ಖಾಲಿ ಇವೆ. ಹಿಂದಿ, ಸಂಸ್ಕೃತ ಮೊದಲಾದ ವಿಭಾಗಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿವೆ. ಎಂಬಿಎ, ವಾಣಿಜ್ಯ, ಗಣಿತ, ರಸಾಯನವಿಜ್ಞಾನ, ಅರ್ಥಶಾಸ್ತ್ರ ಮುಂತಾದ ವಿಷಯಗಳಿಗೆ ಬೇಡಿಕೆ ಇದೆ. ದಾಖಲಾತಿ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಹಣಕಾಸಿನ ಕೊರತೆ ವಿವಿಯನ್ನು ತೀವ್ರವಾಗಿ ಬಾಧಿಸುತ್ತಿದೆ. ಪಿಂಚಣಿ ನೀಡಲೂ ವಿವಿ ಆಡಳಿತಕ್ಕೆ ಕಷ್ಟವಾಗುತ್ತಿದೆ.
ಕೃಷಿ ವಿ.ವಿ
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬೋಧಕರ ಕೊರತೆ ಇದೆ. ಶೇ 60ರಷ್ಟು ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲಾಗಿದೆ. ವಿಶ್ವವಿದ್ಯಾಲಯಕ್ಕೆ ವಾರ್ಷಿಕ ₹ 300 ಕೋಟಿ ಅನುದಾನ ಅಗತ್ಯ ಇದೆ. ಸರ್ಕಾರ ₹ 250 ಕೋಟಿ ನೀಡಿದೆ.
ಗ್ರಾಮೀಣಾಭಿವೃದ್ಧಿ ವಿ.ವಿ
ಗದಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿವಿಯಲ್ಲಿ ಕಾಯಂ ಪ್ರಾಧ್ಯಾಪಕರು ಇಲ್ಲದ ಕಾರಣ ಪಿಎಚ್‌ಡಿ ಸೇರಿದಂತೆ ಸಂಶೋಧನಾ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. 2017-18ನೇ ಶೈಕ್ಷಣಿಕ ಸಾಲಿನಿಂದ ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ ಕಾರ್ಯಗಳನ್ನು ಪ್ರಾರಂಭಿಸಿದೆ. ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುತ್ತಿದೆ. ಪ್ರಾರಂಭದಿಂದಲೂ ಎಲ್ಲ ಸರ್ಕಾರಗಳು ವಿಶ್ವವಿದ್ಯಾಲಯದ ಭೌತಿಕ ಅಭಿವೃದ್ಧಿಗೆ ಬೇಕಿರುವ ಅನುದಾನವನ್ನು ನೀಡುತ್ತಲೇ ಬಂದಿವೆ. ಆದರೆ, ಈವರೆಗೆ ಕಾಯಂ ಸಿಬ್ಬಂದಿ ನೇಮಕಾತಿಗೆ ಕ್ರಮವಹಿಸಿಲ್ಲ. ಇದರಿಂದಾಗಿ ಇಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪಿಎಚ್‌ಡಿ ಮಾಡಲು ರಾಜ್ಯದ ಇತರೆ ವಿಶ್ವವಿದ್ಯಾಲಯಗಳನ್ನು ಅವಲಂಬಿಸುವಂತಾಗಿದೆ.
ಶ್ರೀಕೃಷ್ಣದೇವರಾಯ ವಿ.ವಿ
ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹಲವು ಯೋಜನೆಗಳಿಗೆ ಪ್ರತ್ಯೇಕವಾಗಿ ಅನುದಾನ ಬಿಡುಗಡೆಯಾಗುತ್ತಿರುವ ಕಾರಣ ವಿವಿ ಆರ್ಥಿಕ ಪರಿಸ್ಥಿತಿ ಬೇರೆಲ್ಲ ವಿವಿಗಳಿಗಿಂತ ಉತ್ತಮವಾಗಿದೆ. ಪತ್ರಿಕೋದ್ಯಮ ಮತ್ತು ಕೆಲ ವಿಭಾಗಗಳಿಗೆ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಕೊರತೆ ಇದೆ. ಮಂಜೂರಾದ 151 ಬೋಧಕ ಹುದ್ದೆಗಳಲ್ಲಿ, 55 ಹುದ್ದೆಗಳು ಖಾಲಿ ಇವೆ.
ಜಾನಪದ ವಿ.ವಿ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೋಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದಲ್ಲಿ ಸದ್ಯ 8 ಮಂದಿ ಕಾಯಂ ಪ್ರಾಧ್ಯಾಪಕರಿದ್ದಾರೆ. 14 ಅತಿಥಿ ಪ್ರಾಧ್ಯಾಪಕರಿದ್ದಾರೆ. ಬೋಧನಾ ಸಾಮಗ್ರಿಗಳ ಕೊರತೆ, ಅನುದಾನ ಕೊರತೆ ಇದೆ. ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ತಡವಾಗುತ್ತಿದೆ. ಬೋಧನಾ ತರಗತಿಗಳ ಕೊಠಡಿಗಳ ಕೊರತೆಯಿದೆ. ಹಿಂದುಳಿದ ವರ್ಗಗಳ ಹಾಸ್ಟೆಲ್ ಮಂಜೂರಾದರೂ ಆರಂಭವಾಗಿಲ್ಲ.
ಸಂಗೀತ ವಿ.ವಿ
2008ರಲ್ಲಿ ಮೈಸೂರಿನಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ 15 ಹುದ್ದೆಗಳು ಮಂಜೂರಾಗಿದ್ದು, ಎಲ್ಲವೂ ಖಾಲಿ ಇವೆ. ಕುಲಪತಿ, ಕುಲಸಚಿವ, ಪರೀಕ್ಷಾಂಗ ಕುಲಸಚಿವರನ್ನು ಹೊರತುಪಡಿಸಿ ಉಳಿದೆಲ್ಲ ಬೋಧಕ ಹುದ್ದೆಗಳಲ್ಲಿ ಅತಿಥಿ ಪ್ರಾಧ್ಯಾಪಕರೇ ಇದ್ದಾರೆ. 16 ವರ್ಷಗಳ ನಂತರ ಸ್ವಂತ ಕಟ್ಟಡವನ್ನು ಹೊಂದುತ್ತಿದೆ. ಮೈಸೂರು ತಾಲ್ಲೂಕಿನ ನಾಡನಹಳ್ಳಿಯಲ್ಲಿ 5.5 ಎಕರೆ ನಿವೇಶನದಲ್ಲಿ ‘ಕುಟೀರ’ಗಳನ್ನು ನಿರ್ಮಿಸಲಾಗಿದ್ದು, ಅಲ್ಲಿಯೇ ತರಗತಿಗಳು ನಡೆಯುತ್ತಿವೆ.
ಕುವೆಂಪು ವಿ.ವಿ
ಕುವೆಂಪು ವಿಶ್ವವಿದ್ಯಾಲಯದಲ್ಲಿ ನಿವೃತ್ತಿ ಆಗಿರುವ 40 ಮಂದಿಗೆ ಪಿಂಚಣಿ ಸವಲತ್ತು ಕೊಡಲೂ ಹಣವಿಲ್ಲ. ಆದರೂ ಮೈಸೂರು, ಮಂಗಳೂರು, ಧಾರವಾಡ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಕುವೆಂಪು ವಿಶ್ವವಿದ್ಯಾಲಯದ ಸ್ಥಿತಿ ಚೆನ್ನಾಗಿದೆ.
ಹೊಸ ವಿವಿಗಳ ಸ್ಥಿತಿ ಶೋಚನೀಯ
ಹಳೆಯ ವಿಶ್ವವಿದ್ಯಾಲಯಗಳ ಪರಿಸ್ಥಿತಿ ಒಂದು ರೀತಿಯದ್ದಾದರೆ, ಜಿಲ್ಲೆಗಳಲ್ಲಿ ಸ್ಥಾಪನೆಯಾದ ಹೊಸ ಜಿಲ್ಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಕುಲಪತಿ, ರಿಜಿಸ್ಟ್ರಾರ್ ಮುಂತಾದ ಉನ್ನತ ಹುದ್ದೆಗಳಿಗೆ ಕಾಯಂ ನೇಮಕಾತಿಯಾಗಿದ್ದು ಬಿಟ್ಟರೆ, ಬೋಧಕ ಹುದ್ದೆಗಳೆನ್ನೆಲ್ಲ ಅತಿಥಿ ಉಪನ್ಯಾಸಕರೇ ನಿರ್ವಹಿಸುತ್ತಿದ್ದಾರೆ. ಮೂಲಸೌಕರ್ಯ ಅನುದಾನ ಕೊರತೆಯು ಇವುಗಳನ್ನು ತೀವ್ರವಾಗಿ ಬಾಧಿಸುತ್ತಿದ್ದು, ವಿವಿಯ ಸಮಸ್ಯೆಗಳು ವಿದ್ಯಾರ್ಥಿಗಳನ್ನು ಮೇಲೆ ಪ್ರಭಾವ ಬೀರುತ್ತಿವೆ.
* ಮೂರು ವರ್ಷಗಳ ಹಿಂದೆ ಆರಂಭವಾದ ಕೊಪ್ಪಳ ವಿಶ್ವವಿದ್ಯಾಲಯ ಮೂಲ ಸೌಕರ್ಯಗಳು, ಕಾಯಂ ಬೋಧಕರ ಕೊರತೆಯಿಂದ ಬಳಲುತ್ತಿದ್ದು ದೈನಂದಿನ ಚಟುವಟಿಕೆಗೆ ಅನುದಾನವಿಲ್ಲದೇ ಹೆಣಗಾಡುವಂತಾಗಿದೆ. ವಿ.ವಿ. ಅಧೀನದ ಪದವಿ ಕಾಲೇಜುಗಳು, ವಿಶ್ವವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿರುವ ವಿವಿಧ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕಟ್ಟುವ ಶುಲ್ಕವೇ ವಿ.ವಿ.ಗೆ ದೊಡ್ಡ ಆಧಾರವಾಗಿದೆ. 24 ಬೋಧನಾ ಸಿಬ್ಬಂದಿಯ ಹುದ್ದೆಗಳನ್ನು ಮಂಜೂರು ಮಾಡಿದ್ದರೂ ಯಾರನ್ನೂ ನೇಮಕ ಮಾಡಿಕೊಳ್ಳದ ಕಾರಣ ಅತಿಥಿ ಉಪನ್ಯಾಸಕರ ಮೇಲೆ ವಿ.ವಿ. ಚಟುವಟಿಕೆ ಅವಲಂಬಿತವಾಗಿದೆ.
* ರಾಯಚೂರಿನ ಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಕುಲಪತಿ, ಕುಲಸಚಿವ ಹಾಗೂ ಮೌಲ್ಯಮಾಪನ ಕುಲಸಚಿವ, ಮೂವರು ಸಹ ಪ್ರಾಧ್ಯಾಪಕರು ಸೇರಿ ಆರು ಮಂದಿ ಮಾತ್ರ ಕಾಯಂ. ಉಳಿದವರೆಲ್ಲರೂ ಅತಿಥಿ ಉಪನ್ಯಾಸಕರೇ ಇದ್ದಾರೆ. ಸಿಬ್ಬಂದಿಗಳನ್ನು ಸಹ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. 20 ವಿಭಾಗಗಳಿಗೆ 60 ಉಪನ್ಯಾಸಕರು ಬೇಕು. ಆದರೆ, ನಾಲ್ಕು ಉಪನ್ಯಾಸಕರು ಮಾತ್ರ ಕಾಯಂ. ಉಳಿದ 25 ಅತಿಥಿ ಉಪನ್ಯಾಸಕರು ಹಾಗೂ ಹೊರ ಗುತ್ತಿಗೆ ಆಧಾರ ಮೇಲೆ 163 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಕ್ಯಾಂಪಸ್‌ನಲ್ಲೇ ತರಗತಿಗಳ ಕೊರತೆ ಇದೆ. ವಿಶ್ವವಿದ್ಯಾಲಯಕ್ಕೆ ವಾರ್ಷಿಕ ₹ 100 ಕೋಟಿ ಅನುದಾನದ ಅಗತ್ಯವಿದೆ
* ಬೀದರ್ ವಿಶ್ವವಿದ್ಯಾಲಯದಲ್ಲಿ 29 ಬೋಧಕ ಹುದ್ದೆಗಳು, 109 ಬೋಧಕೇತರ ಹುದ್ದೆಗಳಿವೆ. ಕಾಯಂ ಪ್ರಾಧ್ಯಾಪಕರು ಯಾರೂ ಇಲ್ಲ. ಕಳೆದ ವರ್ಷ 64 ಜನ ಅತಿಥಿ ಉಪನ್ಯಾಸಕರಿದ್ದರು. ಈಗ ಹೊಸ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. 15 ಸ್ನಾತಕೋತ್ತರ ಕೋರ್ಸ್‌ಗಳು ನಡೆಯುತ್ತಿವೆ. ವಿ.ವಿಯಲ್ಲಿ ಮೂಲಸೌಕರ್ಯಗಳ ಕೊರತೆ ಇದೆ.
* ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ವಿಶ್ವವಿದ್ಯಾಲಯ ನಿರ್ಮಾಣಕ್ಕೆ 100 ಎಕರೆ ಜಾಗ ಬೇಕಿದೆ. ಎರಡು ವರ್ಷಗಳಿಂದ ಜಾಗ ದೊರೆತಿಲ್ಲ. ಈ ಹಿಂದೆ ನಿರ್ಮಿಸಲಾಗಿದ್ದ ಮಿನಿ ವಿಧಾನಸೌಧದಲ್ಲಿಯೇ ವಿಶ್ವವಿದ್ಯಾಲಯ ನಡೆಸಲಾಗುತ್ತಿದೆ. ಪ್ರಾಧ್ಯಾಪಕರ 12 ಹುದ್ದೆಗಳಿದ್ದು, ಒಬ್ಬರು ಪ್ರಾಧ್ಯಾಪಕರು, ಇಬ್ಬರು ಸಹಾಯಕ ಪ್ರಾಧ್ಯಾಪಕರು ಕೆಲಸ ನಿರ್ವಹಿಸುತ್ತಿದ್ದಾರೆ. 18 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ವಸತಿ ನಿಲಯಗಳಿಲ್ಲದಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗಿದೆ. ಸರ್ಕಾರದಿಂದ ವಿವಿಗೆ ಯಾವುದೇ ಧನಸಹಾಯ ಇಲ್ಲ. ಹಣಕಾಸಿನ ಕೊರತೆಯಿಂದ ವಿವಿ ಬೆಳವಣಿಗೆ ಕುಂಠಿತಗೊಂಡಿದೆ.
* ಹಾವೇರಿ ವಿಶ್ವವಿದ್ಯಾಲಯ ನಿರ್ಮಾಣಕ್ಕೆ 40 ಎಕರೆ ಮೀಸಲಿಡಲಾಗಿದೆ. ಆದರೆ, ಧಾರವಾಡ ವಿಶ್ವವಿದ್ಯಾಲಯದಿಂದ ಕಾನೂನುಬದ್ಧವಾಗಿ ಇದುವರೆಗೂ ಜಾಗ ಹಸ್ತಾಂತರವಾಗಿಲ್ಲ. ಇದು ಅಭಿವೃದ್ಧಿ ಕೆಲಸಗಳಿಗೆ ಹಿನ್ನೆಡೆ ಉಂಟು ಮಾಡಿದೆ. ಸದ್ಯ ಸುಮಾರು 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಯಂ ಒಬ್ಬರೇ ಪ್ರಾಧ್ಯಾಪಕರಿದ್ದಾರೆ. ಸುಮಾರು 20 ಅತಿಥಿ ಪ್ರಾಧ್ಯಾಪಕರಿದ್ದು, ಅವರಿಂದಲೇ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವ ಸೌಕರ್ಯಗಳ ಕೊರತೆ ಹೆಚ್ಚಿದೆ
* ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ 700 ವಿದ್ಯಾರ್ಥಿಗಳಿದ್ದಾರೆ. ಕಾಯಂ ಬೋಧಕ ಸಿಬ್ಬಂದಿ ಇಲ್ಲಿಲ್ಲ. ಅತಿಥಿ ಪ್ರಾಧ್ಯಾಪಕರು, ಉಪನ್ಯಾಸಕರೇ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ. ಮೂಲಸೌಕರ್ಯಗಳ ಕೊರತೆ ಇದೆ. ಆಡಳಿತಾತ್ಮಕ ಕಟ್ಟಡ ವಿಸ್ತರಣೆ ಆಗಬೇಕಿದೆ. ಹೊಸ ಕೋರ್ಸ್‌ಗಳಿಗೆ ಹೊಸ ಕೊಠಡಿಗಳ ನಿರ್ಮಾಣವಾಗಬೇಕಿದೆ. ಸರ್ಕಾರದಿಂದ ಬರಬೇಕಾದ ವಾರ್ಷಿಕ ₹ 2 ಕೋಟಿ ಆವರ್ತ ನಿಧಿ ಇದುವರೆಗೂ ಬಂದಿಲ್ಲ, ಒಟ್ಟು 6 ಕೋಟಿ ಆವರ್ತ ನಿಧಿ ಬರಬೇಕಿದೆ
* ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಹಾಸನದ ವಿಶ್ವವಿದ್ಯಾಲಯವೂ ಬೋಧಕರ, ಹಣಕಾಸಿನ ಕೊರತೆ ಎದುರಿಸುತ್ತಿದೆ. ಕಾಯಂ ಬೋಧಕರು 13 ಮಂದಿದ್ದರೆ, ಅತಿಥಿ ಉಪನ್ಯಾಸಕರು 32 ಜನರಿದ್ದಾರೆ. ಆರಂಭದ ವರ್ಷ ಸರ್ಕಾರದಿಂದ ₹2 ಕೋಟಿ ಅನುದಾನ ನೀಡಲಾಗಿತ್ತು. ನಂತರ ಹಣಕಾಸಿನ ನೆರವು ಸಿಕ್ಕಿಲ್ಲ. ಸ್ವಂತ ಜಾಗವಿದ್ದರೂ ಕಟ್ಟಡ ವಿಸ್ತರಣೆಯಾಗಬೇಕಿದೆ. ಸುಸಜ್ಜಿತ ಸಭಾಂಗಣ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳು ಬೇಕಿದೆ
* ಮಂಡ್ಯ ವಿವಿಯಲ್ಲೂ ಕಾಯಂ ಬೋಧಕರು ಇಲ್ಲ. ವಿವಿಗೆ ಸಂಯೋಜಿತ ಶುಲ್ಕ, ಪ್ರವೇಶಾತಿ, ಪರೀಕ್ಷಾ ಶುಲ್ಕ, ಇತರೆ ಆದಾಯ ಸೇರಿ ಕಳೆದ 3 ವರ್ಷಗಳಿಂದ ₹7.85 ಕೋಟಿ ಸಂಗ್ರಹವಾಗಿದೆ. ವೇತನ ವೆಚ್ಚ, ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಸಂಭಾವನೆ ವೆಚ್ಚ, ಅಭಿವೃದ್ಧಿ ಮತ್ತು ನಿರ್ವಹಣೆ ವೆಚ್ಚ ಸೇರಿ ಒಟ್ಟು ₹8 ಕೋಟಿ ಖರ್ಚಾಗಿದೆ. ವಿಶ್ವವಿದ್ಯಾಲಯವು ಹಣಕಾಸಿನ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ
* ಕೊಡಗು ವಿಶ್ವವಿದ್ಯಾಲಯದಲ್ಲೂ ಕಾಯಂ ಸಿಬ್ಬಂದಿ ಇಲ್ಲ. ಸ್ವಂತ ಜಾಗವಿದ್ದರೂ ಕಟ್ಟಡ ವಿಸ್ತರಣೆಯಾಗಬೇಕಿದೆ. ಸುಸಜ್ಜಿತ ಸಭಾಂಗಣ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳು ಬೇಕಿದೆ
ಸ್ವಂತ ಅನುದಾನದಲ್ಲಿ ಬೆಳೆದ ವಿಟಿಯು
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಸ್ಥಾಪನೆಯಾಗಿ 26 ವರ್ಷ ಕಳೆದರೂ ಸರ್ಕಾರದಿಂದ ಒಂದು ರೂಪಾಯಿ ಅನುದಾನವೂ ಬಂದಿಲ್ಲ. ಇದರಿಂದ ಸಂಶೋಧನೆ, ಕೌಶಲ ಅಭಿವೃದ್ಧಿ ಹಾಗೂ ಅನ್ವೇಷಣಾ ಪ್ರಕ್ರಿಯೆಗಳಿಗೆ ಹಿನ್ನಡೆಯಾಗಿದೆ. ಆದರೆ, ವಿ.ವಿಯೇ ತನ್ನ ಆದಾಯ ಮೂಲ ಸೃಷ್ಟಿಸಿಕೊಂಡಿದ್ದರಿಂದ ಶೈಕ್ಷಣಿಕ ಗುಣಮಟ್ಟ ಸುಸ್ಥಿತಿಯಲ್ಲಿದೆ.
ವಿಶ್ವವಿದ್ಯಾಲಯಕ್ಕೆ ವೇತನ ಅನುದಾನ ನೀಡಬೇಕು ಎಂದು ಕೋರಿ ಕಳೆದ 25 ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಬರಲಾಗಿದೆ. ಯಾವ ಸರ್ಕಾರವೂ ಕಿವಿಗೊಟ್ಟಿಲ್ಲ. ರಾಜ್ಯದ ಏಕಮಾತ್ರ ಸರ್ಕಾರಿ ತಾಂತ್ರಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಪಡೆದಿದ್ದು, 3 ಲಕ್ಷದಷ್ಟು ವಿದ್ಯಾರ್ಥಿಗಳನ್ನು ಹೊಂದಿದೆ. ಎಂಜಿನಿಯರಿಂಗ್ ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಂದ ಬರುವ ನೋಂದಣಿ ಶುಲ್ಕ ಮಾತ್ರ ಇದಕ್ಕೆ ಜೀವ ಸೆಲೆಯಾಗಿದೆ.
ಬೆಳಗಾವಿಯಲ್ಲಿರುವ ಜ್ಞಾನ ಸಂಗಮ ಮುಖ್ಯ ಕ್ಯಾಂಪಸ್ ಸೇರಿದಂತೆ ಬೆಳಗಾವಿ, ದಾವಣಗೆರೆ, ಮೈಸೂರು, ಕಲಬುರ್ಗಿಯಲ್ಲಿರುವ ಸ್ನಾತಕೋತ್ತರ ಕೇಂದ್ರಗಳು, ದಾವಣಗೆರೆ (ಯುಬಿಡಿಟಿ) ಹಾಗೂ ಚಿಂತಾಮಣಿಯ ಘಟಕ ಕಾಲೇಜುಗಳು, ದಾಂಡೇಲಿ ಹಾಗೂ ತಳಕಲ್‌ನಲ್ಲಿರುವ ಕೌಶಲ ಅಭಿವೃದ್ಧಿ ಕೇಂದ್ರಗಳನ್ನೂ ಇದು ಹೊಂದಿದೆ.
ಪ್ರತಿ ವರ್ಷ ₹200 ಕೋಟಿಯಷ್ಟು ನೋಂದಣಿ ಶುಲ್ಕ ಸಂಗ್ರಹವಾಗುತ್ತದೆ. ಆದರೆ, ₹198 ಕೋಟಿ ಸಿಬ್ಬಂದಿ ಸಂಬಳಕ್ಕೆ ಬೇಕು. ಉಳಿದ ಅಷ್ಟಿಷ್ಟು ಹಣದಲ್ಲೇ ವರ್ಷಪೂರ್ತಿ ಚಟುವಟಿಕೆಗಳನ್ನು ಮಾಡಬೇಕಾದ ಇಕ್ಕಟ್ಟಿಗೆ ವಿ.ವಿ ಸಿಕ್ಕಿಕೊಂಡಿದೆ.
ಈ ವಿಶ್ವವಿದ್ಯಾಲಯದಲ್ಲಿ ಶೇ 30ರಷ್ಟು ಬೋಧಕರು ಬೇಕಾಗಿದ್ದಾರೆ. ‘ಅತಿಥಿ’ಗಳನ್ನು ಬಳಸಿಕೊಂಡು ಕಲಿಕೆ ಮುಂದುವರಿಸಲಾಗಿದೆ ಎಂಬುದು ವಿ.ವಿ ಮೂಲಗಳ ಮಾಹಿತಿ.
ಸಚಿವರ ಅಸಹಾಯಕತೆ
ವಿಶ್ವವಿದ್ಯಾಲಯಗಳು ಹಣಕಾಸು ಕೊರತೆಯ ಬಗ್ಗೆ ಸ್ವತಃ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ತುಮಕೂರು ತಾಲ್ಲೂಕಿನ ಬಿದರೆಕಟ್ಟೆ ಬಳಿ ಶುಕ್ರವಾರ ತುಮಕೂರು ವಿ.ವಿಯ ನೂತನ ಕ್ಯಾಂಪಸ್, ವಿವಿಧ ಕಟ್ಟಡಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಲವು ವಿ.ವಿಗಳಲ್ಲಿ ಪಿಂಚಣಿಗೂ ಹಣ ಇಲ್ಲವಾಗಿದ್ದು, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಹಳೆಯ ವಿ.ವಿಗಳ ಪರಿಸ್ಥಿತಿ ನೋಡಿದರೆ ದುಃಖವಾಗುತ್ತದೆ’ ಎಂದರು.
‘ಪ್ರತಿ ಜಿಲ್ಲೆಗೊಂದು ವಿ.ವಿ ಆರಂಭಿಸಬೇಕು ಎಂಬ ಆಸೆ ಎಲ್ಲರಿಗೂ ಇದೆ. ಸ್ಥಾಪನೆ ಮಾಡಿದಷ್ಟು ಸುಲಭವಾಗಿ ವಿ.ವಿಯನ್ನು ಉನ್ನತ ಶಿಕ್ಷಣ ಕೇಂದ್ರವಾಗಿ, ಜ್ಞಾನದ ಸಂಸ್ಥೆಯಾಗಿ ಬೆಳೆಸಲು ಸಾಧ್ಯವಾಗುತ್ತಿಲ್ಲ ಎಲ್ಲವನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ಸರ್ಕಾರದಿಂದ ಆಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.