ADVERTISEMENT

ವಾರದ ವಿಶೇಷ | ರಾಜ್ಯ ಶಿಕ್ಷಣ ನೀತಿ ಹೇಳುವುದೇನು?

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 23:35 IST
Last Updated 21 ನವೆಂಬರ್ 2025, 23:35 IST
ಎಐ ಚಿತ್ರ
ಎಐ ಚಿತ್ರ   

ಕೇಂದ್ರದ ಎನ್‌ಡಿಎ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ–2020) ಬದಲಿಗೆ ರಾಜ್ಯಕ್ಕೆ ಪ್ರತ್ಯೇಕವಾದ ಶಿಕ್ಷಣ ನೀತಿಯನ್ನು (ಎಸ್‌ಇಪಿ) ರೂಪಿಸುವುದಾಗಿ ಕಾಂಗ್ರೆಸ್‌ ಪಕ್ಷವು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿತ್ತು. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವು ಎಸ್‌ಇಪಿ ರೂಪಿಸಲು ಶಿಕ್ಷಣ ತಜ್ಞ ಪ್ರೊ.ಸುಖ್‌ದೇವ್ ಥೋರಟ್ ನೇತೃತ್ವದಲ್ಲಿ 2023ರ ಅಕ್ಟೋಬರ್‌ 11ರಂದು ಆಯೋಗವನ್ನು ರಚಿಸಿತ್ತು. ಆಯೋಗವು 2024ರ ಮೇನಲ್ಲಿ ಮಧ್ಯಂತರ ವರದಿ ಸಲ್ಲಿಸಿತ್ತು. ಈ ವರ್ಷದ ಆಗಸ್ಟ್‌ 9ರಂದು ಆಯೋಗವು ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ. 

ಉನ್ನತ ಶಿಕ್ಷಣ ಇಲಾಖೆಯು ಮಧ್ಯಂತರ ವರದಿಯಲ್ಲಿ ಮಾಡಲಾಗಿದ್ದ ಕೆಲವು ಶಿಫಾರಸುಗಳನ್ನು 2024–25ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತಂದಿದೆ. ನಾಲ್ಕು ವರ್ಷದ ಪದವಿ ಕೋರ್ಸ್‌ಗಳನ್ನು ರದ್ದು ಮಾಡಿ ಮೊದಲಿನಂತೆ ಮೂರು ವರ್ಷಗಳ ಕೋರ್ಸ್‌ ಪದ್ಧತಿಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ. 

ಈಗ, ಆಯೋಗದ ಅಂತಿಮ ವರದಿ ಬಂದು ಮೂರು ತಿಂಗಳಾದರೂ ಸರ್ಕಾರವು ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮುಂದಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದರ ನಡುವೆಯೇ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ಆಯೋಗದ ವರದಿಯನ್ನು ಸಚಿವ ಸಂಪುಟದ ಮುಂದೆ ಸಲ್ಲಿಸಲು ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ.  

ADVERTISEMENT

ಆಯೋಗವು ಮಾಡಿರುವ ಶಿಫಾರಸುಗಳನ್ನೊಳಗೊಂಡ ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ಕನ್ನಡವನ್ನು ಶಿಕ್ಷಣದ ಮಾಧ್ಯಮವನ್ನಾಗಿ ಮಾಡುವುದು, ಖಾಸಗಿ ಶಾಲೆಗಳಿಗೆ ಅಂಕುಶ ಹಾಕುವುದು, ಶಿಕ್ಷಣದ ಖಾಸಗೀಕರಣ ತಡೆಯುವುದು, ಸಂವಿಧಾನದ ಮೌಲ್ಯಗಳನ್ನು ಪಠ್ಯದಲ್ಲಿ ಅಳವಡಿಸುವುದು, ಪಠ್ಯಪುಸ್ತಕಗಳಿಗಾಗಿ ಎನ್‌ಸಿಇಆರ್‌ಟಿ ಅವಲಂಬನೆ ಕಡಿಮೆ ಮಾಡುವುದು, ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣ ಮೀಸಲಿಡುವುದು ಸೇರಿದಂತೆ ಆಯೋಗವು ಹಲವು ಸಲಹೆಗಳನ್ನು ನೀಡಿದೆ.

ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾಡಿರುವ ಪ್ರಮುಖ ಶಿಫಾರಸುಗಳು ಇಲ್ಲಿವೆ.

ಶಾಲಾ ಶಿಕ್ಷಣ

  • 2+8+4 ಪದ್ಧತಿ ಅನುಸರಿಸುವುದು; 2 ವರ್ಷ ಪೂರ್ವಪ್ರಾಥಮಿಕ, 8 ವರ್ಷ ಪ್ರಾಥಮಿಕ ಮತ್ತು ನಾಲ್ಕು ವರ್ಷ ಪ್ರೌಢಶಿಕ್ಷಣ (9, 10, 11, 12)

  • ಶಿಕ್ಷಣ ಎಲ್ಲರಿಗೂ ಸಮಾನವಾಗಿ ಲಭ್ಯವಾಗುವ ದಿಸೆಯಲ್ಲಿ ಸಣ್ಣ ಶಾಲೆಗಳನ್ನು ಮುಚ್ಚದೇ ಉಳಿಸಿಕೊಳ್ಳಬೇಕು

  • ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ವಯಸ್ಸು ನಿಗದಿಪಡಿಸುವುದು (ಮೂರು ತಿಂಗಳು ಹೆಚ್ಚು ಕಡಿಮೆ ಇದ್ದರೂ ಪರಿಗಣಿಸುವುದು)

  • ವಲಸೆ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ನಿರ್ಮಿಸುವುದು

  • ರಾಜ್ಯದಲ್ಲಿ ಪ್ರೌಢಶಿಕ್ಷಣವನ್ನು (9–12) ಸಾರ್ವತ್ರೀಕರಣಗೊಳಿಸುವುದು

  • ವಿವಿಧ ಇಲಾಖೆಗಳ ಅಡಿಯಲ್ಲಿನ ಶಾಲೆಗಳ ನಡುವೆ ಸಮನ್ವಯ ಸಾಧಿಸುವುದು

  • ಪೂರ್ವಪ್ರಾಥಮಿಕ ಶಿಕ್ಷಣದ (ಇಸಿಸಿಇ) ಸಮಗ್ರ ಉಸ್ತುವಾರಿಗಾಗಿ ಒಂದು ಸಮಿತಿ ರಚಿಸುವುದು

  • ಪ್ರತ್ಯೇಕ ವ್ಯವಸ್ಥೆ ರೂಪಿಸುವ ಮೂಲಕ ಪೂರ್ವಪ್ರಾಥಮಿಕ ಹಂತದಲ್ಲಿ ಖಾಸಗಿ ಶಾಲೆಗಳನ್ನು ನಿಯಂತ್ರಿಸುವುದು

  • ಐದು ವರ್ಷದಲ್ಲಿ ನಿಯಮಕ್ಕೆ ತಕ್ಕಂತೆ ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್‌ಟಿಇ) ಸಂಪೂರ್ಣವಾಗಿ ಜಾರಿ ಮಾಡುವುದು

  • ಆರ್‌ಟಿಇ ಅನ್ನು ಹಂತ ಹಂತವಾಗಿ 4–18 ವಯಸ್ಸಿನವರೆಗೆ ವಿಸ್ತರಿಸುವುದು

  • ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕೇಂದ್ರೀಯ ವಿದ್ಯಾಲಯಗಳ ಮಟ್ಟಕ್ಕೆ ಬೆಳೆಸುವುದು

  • ಅತಿಥಿ ಶಿಕ್ಷಕರ ಮೇಲಿನ ಅವಲಂಬನೆಯಿಂದ ಮುಕ್ತವಾಗುವುದು; ಕಾಲಕ್ಕೆ ತಕ್ಕಂತೆ ನೇಮಕಾತಿ ಮಾಡಿಕೊಳ್ಳುವುದು

  • ಮುಕ್ತ ತಂತ್ರಾಂಶದ ಡಿಜಿಟಲ್ ಸಾಧನಗಳ ಬಳಕೆಯನ್ನು ಉತ್ತೇಜಿಸುವುದು; ನಿರ್ದಿಷ್ಟ ಕಂಪನಿಯ ತಂತ್ರಾಂಶ ಆಧಾರಿತ ಸಾಧನಗಳ ಬಳಕೆ ನಿಷೇಧಿಸುವುದು

  • ಶೈಕ್ಷಣಿಕ ರಂಗದ ಪರಿಣತರನ್ನು ಒಳಗೊಳ್ಳುವ ಮೂಲಕ ಪರೀಕ್ಷಾ ಮಂಡಳಿಯನ್ನು ಪುನರ್‌ರಚಿಸುವುದು

  • ಕಲಿಕೆಯ ಅವಧಿಯಲ್ಲಿ ಮತ್ತು ನಿರ್ದಿಷ್ಟ ಕಾಲಾವಧಿಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನ ಮಾಡುವುದು

  • ಅತಿಥಿ ಶಿಕ್ಷಕರ ಗುತ್ತಿಗೆ ರದ್ದುಪಡಿಸುವುದು, ಎಲ್ಲ ಖಾಲಿ ಹುದ್ದೆಗಳಿಗೆ ಸಮರ್ಥರನ್ನು ನೇಮಕ ಮಾಡುವುದು

  • ಖಾಸಗಿ ಶಾಲೆಗಳಲ್ಲಿ ಕೆಲಸದ ವಾತಾವರಣವನ್ನು ಉತ್ತಮಪಡಿಸುವುದು

  • ಆಡಳಿತವನ್ನು ಸರಳೀಕರಣಗೊಳಿಸುವುದು ಮತ್ತು ಅಧಿಕಾರಿಶಾಹಿಯ ಹಂತಗಳನ್ನು ಕಡಿತಗೊಳಿಸುವುದು

  • ಶೈಕ್ಷಣಿಕ ಪ್ರಗತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ಬಲ ತುಂಬುವುದು

  • ಸಮಾನಾಂತರ ಸಂಸ್ಥೆಗಳನ್ನು ವಿಲೀನಗೊಳಿಸಿ, ಸಮಗ್ರ ಆಯುಕ್ತ ವ್ಯವಸ್ಥೆ (ಇಂಟಿಗ್ರೇಟೆಡ್ ಕಮಿಷನರೇಟ್) ರೂಪಿಸುವುದು

  • ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯನ್ನು (ಡಿಎಸ್‌ಇಆರ್‌ಟಿ) ಸಂಶೋಧನೆ ಮತ್ತು ಅಭಿವೃದ್ಧಿಯ (ಆರ್ ಆ್ಯಂಡ್ ಡಿ) ದೃಷ್ಟಿಯಿಂದ ಸ್ವಾಯತ್ತ ಸಂಸ್ಥೆಯನ್ನಾಗಿ (ಎಸ್‌ಸಿಇಆರ್‌ಟಿ) ಪರಿವರ್ತಿಸುವುದು

  • ಜೀವನಪೂರ್ತಿ ಕಲಿಕೆಗಾಗಿ ನಿರ್ದೇಶನಾಲಯವನ್ನು ಪುನಶ್ಚೇತನಗೊಳಿಸುವುದು

  • ಹಿಂದುಳಿದ, ಅಂಚಿನ ಸಮುದಾಯಗಳ ಸಬಲೀಕರಣಕ್ಕಾಗಿ ವಯಸ್ಕರ ಶಿಕ್ಷಣದತ್ತ ಲಕ್ಷ್ಯ ಹರಿಸುವುದು 

  • ಸಾಂವಿಧಾನಿಕ ಮತ್ತು ವೈಜ್ಞಾನಿಕ ಮೌಲ್ಯಗಳ ‍ಪ್ರಚಾರಕ್ಕಾಗಿ ಸಾರ್ವಜನಿಕ ಗ್ರಂಥಾಲಯಗಳಲ್ಲಿನ ವಿಷಯಗಳನ್ನು ದೃಶ್ಯ ಮಾಧ್ಯಮದಲ್ಲಿ ಪ್ರದರ್ಶಿಸುವುದು 

  • ‘ಸಾಂವಿಧಾನಿಕ ಮೌಲ್ಯ ಶಿಕ್ಷಣ’ವನ್ನು ಸಾಂಸ್ಥೀಕರಣಗೊಳಿಸಿ, ಕಡ್ಡಾಯಗೊಳಿಸುವುದು

  • ಸಂವಿಧಾನದ ಪ್ರಸ್ತಾವನೆಯಲ್ಲಿರುವ ಮೌಲ್ಯಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು ಮತ್ತು ರಾಜ್ಯ ನಿರ್ದೇಶಿತ ತತ್ವಗಳನ್ನು ಪಠ್ಯದಲ್ಲಿ ಅಳವಡಿಸುವುದು

  • ಜಾಗೃತಿ ಮೂಡಿಸುವ ಮೂಲಕ ಮತ್ತು ಸಮಾನ ಅವಕಾಶಗಳ ಘಟಕ ಸ್ಥಾಪಿಸುವ ಮೂಲಕ ಶಾಲೆಗಳನ್ನು ತಾರತಮ್ಯಮುಕ್ತ ಅಥವಾ ಶೂನ್ಯ ತಾರತಮ್ಯದ ತಾಣಗಳನ್ನಾಗಿಸುವುದು

  • ಕರ್ನಾಟಕ ರಾಜ್ಯ ಮುಕ್ತ ಕಲಿಕಾ ವ್ಯವಸ್ಥೆ (ಕೆಎಸ್‌ಒಎಸ್‌) ಸ್ಥಾಪಿಸುವುದು

  • ಕನ್ನಡ ಕೇಂದ್ರಿತ ಪಠ್ಯ ಮತ್ತು ಡಿಜಿಟಲ್ ಕಂಟೆಂಟ್ ರೂಪಿಸುವುದು

  • ಪ್ರಾದೇಶಿಕ ಕೇಂದ್ರಗಳು ಮತ್ತು ಪೂರಕ ಸೇವೆಗಳ ಮೂಲಕ ಲಭ್ಯತೆಯನ್ನು ಉತ್ತಮಪಡಿಸುವುದು

ಉನ್ನತ ಶಿಕ್ಷಣ

  • ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ 3+2 ವರ್ಷಗಳ (ಮೂರು ವರ್ಷ ಪದವಿ ಮತ್ತು 2 ವರ್ಷಗಳ ಸ್ನಾತಕೋತ್ತರ ಕೋರ್ಸ್‌) ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಪಿಎಚ್‌ಡಿ ಅವಧಿಯನ್ನು ಯುಜಿಸಿ ಮಾರ್ಗಸೂಚಿಯಲ್ಲಿರುವಂತೆ ನಿಗದಿ ಮಾಡಬೇಕು. ಶಿಕ್ಷಣ ಸಂಸ್ಥೆಗಳು ವಿಶ್ವ ವಿದ್ಯಾಲಯಗಳ ಸಂಯೋಜನೆಗೆ ಒಳಪಡುವ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕು

  • ಉತ್ತಮ ಸಾಧನೆ ಮಾಡುವ ಕಾಲೇಜುಗಳನ್ನು ‘ರಾಜ್ಯದ ಉತ್ಕೃಷ್ಟ ಶಿಕ್ಷಣ ಸಂಸ್ಥೆ’ ಎಂದು ಗುರುತಿಸಿ ಅವುಗಳಿಗೆ ಪದವಿಗಳನ್ನು ನೀಡುವ ಅಧಿಕಾರ ಸೇರಿದಂತೆ ಶೈಕ್ಷಣಿಕ, ಆಡಳಿತಾತ್ಮಕ ಸ್ವಾಯತ್ತೆ ನೀಡಬೇಕು

  • ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಹೆಚ್ಚಿಸಲು ಸ್ನಾತಕೋತ್ತರ ಪದವಿ ಮಟ್ಟದಲ್ಲಿ ವಿಶೇಷ ಪ್ರೋತ್ಸಾಹಧನ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಪಿಎಚ್‌ಡಿ ದಾಖಲಾತಿಗೆ ಉತ್ತೇಜನ ನೀಡಲು ಜೂನಿಯರ್‌ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪರಿಚಯಿಸಬೇಕು. ಪ್ರವೇಶಾತಿ ಕಡಿಮೆಯಾಗುತ್ತಿರುವ ವಿಜ್ಞಾನ ವಿಷಯಗಳಿಗೆ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುವುದಕ್ಕಾಗಿ ಹಣಕಾಸಿನ ಪ್ರೋತ್ಸಾಹ ವ್ಯವಸ್ಥೆಯನ್ನು ರೂಪಿಸಬೇಕು

  • ಸಂವಿಧಾನದ 15(5) ಕಲಂ ಅನುಸಾರ ಖಾಸಗಿ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಲು ಪ್ರಸ್ತಾಪಿಸಲಾದ ನಿಯಮಗಳನ್ನು ಜಾರಿಗೊಳಿಸಬೇಕು

  • ಕೇರಳದಂತಹ ರಾಜ್ಯಗಳ ಮಾದರಿಯಲ್ಲಿ ರಾಜ್ಯದಲ್ಲೂ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ಪ್ರಮಾಣವನ್ನು ಈಗಿರುವುದಕ್ಕಿಂತ ಮೂರನೇ ಒಂದರಷ್ಟು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಕಡಿಮೆ ಪ್ರವೇಶಾತಿ ಇರುವ ಪ್ರದೇಶಗಳಿಗೆ ಗಮನ ನೀಡುವುದರಿಂದ ಹಾಗೂ ಎಸ್‌ಸಿ, ಎಸ್‌ಟಿ, ಮುಸ್ಲಿಮರು ಮತ್ತು ಮಹಿಳೆಯರು ಸೇರಿದಂತೆ ಕಡಿಮೆ ಆದಾಯದವರು ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಸಮುದಾಯಗಳ ಜನರಿಗೆ ಶಿಕ್ಷಣ ಲಭ್ಯವಾಗುವಂತೆ ಮಾಡುವುದರಿಂದ ಇದನ್ನು ಸಾಧಿಸಬಹುದು

  • ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಪ್ರದೇಶಗಳಲ್ಲಿ ಪ್ರವೇಶಾತಿಯನ್ನು ಹೆಚ್ಚಿಸಬೇಕು. ಎಸ್‌ಸಿ, ಎಸ್‌ಟಿ, ಮುಸ್ಲಿಮರು, ಮಹಿಳೆಯರು ಸೇರಿದಂತೆ ಕಡಿಮೆ ಆದಾಯ ಮತ್ತು ಸಾಮಾಜಿಕವಾಗಿ ದುರ್ಬಲರಾಗಿರುವ ಸಮುದಾಯಗಳಿಂದ ಹೆಚ್ಚಿನ ಜನರು ಹಾಗೂ ಗ್ರಾಮೀಣ ಭಾಗದವರು ಉನ್ನತ ಶಿಕ್ಷಣ ಪಡೆಯುವಂತೆ ಪ್ರೇರೇಪಿಸಬೇಕು. ಕುಶಲಕರ್ಮಿಗಳು, ಸಣ್ಣ ರೈತರು ಮತ್ತು ಕಾರ್ಮಿಕರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವಿದ್ಯಾರ್ಥಿ ವೇತನ, ಶುಲ್ಕ ರಿಯಾಯಿತಿ ಮತ್ತು ಹಾಸ್ಟೆಲ್‌ ಸೌಲಭ್ಯಗಳಂತಹ ಬೆಂಬಲ ನೀಡಬೇಕು. ಹೆಣ್ಣುಮಕ್ಕಳು, ವಿವಾಹಿತ ಮಹಿಳೆಯರಿಗೆ ಪ್ರೋತ್ಸಾಹಧನೀಡಬೇಕು 

  • ಐದು ವರ್ಷಗಳ ಒಳಗಾಗಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಇದಕ್ಕಾಗಿ ನಿಯಮಿತ ಮತ್ತು ನಿಗದಿತ ನೇಮಕಾತಿ ಪ್ರಕ್ರಿಯೆ ಅನುಸರಿಸಬೇಕು. ಅಪರೂಪದ ಸನ್ನಿವೇಶಗಳನ್ನು ಬಿಟ್ಟು, ಉಳಿದ ಸಂದರ್ಭಗಳಲ್ಲಿ ಅತಿಥಿ ಬೋಧಕರನ್ನು ನೇಮಕ ಮಾಡಬಾರದು. ಕಾಲೇಜುಗಳಲ್ಲಿ ಸ್ಥಿರ ನಾಯಕತ್ವ ಖಾತರಿ ಪಡಿಸಲು ಪ್ರಾಂಶುಪಾಲರ ಹುದ್ದೆಗೆ ಶಾಶ್ವತ ನೇಮಕಾತಿ ಮಾಡಬೇಕು

  • ನಾಲ್ಕು ವಿಭಾಗೀಯ ಕೇಂದ್ರ ಸ್ಥಾನಗಳಲ್ಲಿ ಶಿಕ್ಷಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಇವುಗಳು ಸ್ವತಂತ್ರವಾಗಿರಬೇಕು ಅಥವಾ ಉನ್ನತ ಶಿಕ್ಷಣ ಅಕಾಡೆಮಿಯ ಅಡಿಯಲ್ಲಿ ಕಾರ್ಯಾಚರಿಸಬೇಕು. ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಸುಧಾರಿಸುವುದಕ್ಕಾಗಿ ‘ಕರ್ನಾಟಕ ರಾಜ್ಯ ಗುಣಮಟ್ಟ ಮೌಲ್ಯಮಾಪನ ಮಂಡಳಿ’ ಸ್ಥಾಪಿಸಬೇಕು

  • ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರುವ ಬೋಧಕರು ಸಂಶೋಧನೆ ನಡೆಸುವುದಕ್ಕೆ ಉತ್ತೇಜನ ಮತ್ತು ಅವರು ಮಾಡುವ ಸಂಶೋಧನೆಗಳಿಗೆ ಬೆಂಬಲ ನೀಡುವುದಕ್ಕಾಗಿ ‘ರಾಜ್ಯ ಸಂಶೋಧನಾ ಪ್ರತಿಷ್ಠಾನ’ ಸ್ಥಾಪಿಸಬೇಕು

  • ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಭೌತಿಕ ಮತ್ತು ಡಿಜಿಟಲ್‌ ಶಿಕ್ಷಣ ಮೂಲಸೌಕರ್ಯಗಳನ್ನು ಸುಧಾರಿಸಬೇಕು

  • ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗಾಗಿ ಹಂತ ಆಧಾರಿತ ಅಭಿವೃದ್ಧಿ ಮತ್ತು ಹೆಚ್ಚು ರಚನಾತ್ಮಕವಾದ ಕೋರ್ಸ್‌ಗಳ ಸಂಯೋಜನೆಯನ್ನು ಒಳಗೊಂಡ ಸುಧಾರಿತ ಪಠ್ಯಕ್ರಮ ಚೌಕಟ್ಟನ್ನು ರೂಪಿಸಬೇಕು

  • ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಸಾಮಾಜಿಕ ನ್ಯಾಯ ಮತ್ತು ನಾಗರಿಕ ಜವಾಬ್ದಾರಿಗಳನ್ನು ತುಂಬಲು ‘ಸಾಂವಿಧಾನಿಕ ಮೌಲ್ಯ ಶಿಕ್ಷಣ’ವನ್ನು ಒಂದು ಕಡ್ಡಾಯ ವಿಷಯವನ್ನಾಗಿ ಸಾಂಸ್ಥೀಕರಿಸಬೇಕು. ಎಲ್ಲ ಪಠ್ಯಗಳಲ್ಲಿ ಸಂವಿಧಾನ ಪೀಠಿಕೆಯಲ್ಲಿನ ಮೂಲ ಅಂಶಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಮತ್ತು  ರಾಜ್ಯ ನಿರ್ದೇಶಕ ತತ್ವಗಳ ಆಶಯಗಳನ್ನು ಸೇರ್ಪಡೆಗೊಳಿಸಬೇಕು

  • ಉನ್ನತ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳು ತಾರತಮ್ಯ ಮುಕ್ತ ವಾತಾವರಣ ಹೊಂದಿರಬೇಕು

  • ಮುಕ್ತ ಕಲಿಕೆ ಮತ್ತು ಆನ್‌ಲೈನ್‌ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಇಂಟರ್‌ನೆಟ್‌ ಸೌಲಭ್ಯ ಇಲ್ಲದ ಬಡ ವಿದ್ಯಾರ್ಥಿಗಳೂ ಆನ್‌ಲೈನ್‌ ಮೂಲಕ ಕಲಿಯಲು ಬೇಕಾದ ವ್ಯವಸ್ಥೆ ಕಲ್ಪಿಸಬೇಕು

  • ತನ್ನದೇ ಆದ ಶಿಕ್ಷಣ ನೀತಿಗಳನ್ನು ರೂಪಿಸಲು ತನಗಿರುವ ಸಾಂವಿಧಾನಿಕ ಸ್ವಾಯತ್ತೆಯನ್ನು ಗೌರವಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯವು ಮನವರಿಕೆ ಮಾಡಿಕೊಡಬೇಕು. ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸದಂತೆ ಸ್ಪಷ್ಟವಾಗಿ ತಿಳಿಸಬೇಕು

  • ಉನ್ನತ ಶಿಕ್ಷಣದಲ್ಲಿರುವ ಖಾಸಗಿ ವಲಯದ ನಿಯಂತ್ರಣಕ್ಕಾಗಿ ಶಿಕ್ಷಣ ಇಲಾಖೆಯಲ್ಲಿಯೇ ಪ್ರತ್ಯೇಕವಾದ ವ್ಯವಸ್ಥೆ ಇರಬೇಕು

  • ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದಕ್ಕಾಗಿ 10 ವರ್ಷಗಳ ಸಮಗ್ರ ಯೋಜನೆಯೊಂದನ್ನು ರೂಪಿಸಬೇಕು. ಸದ್ಯ ಉನ್ನತ ಶಿಕ್ಷಣಕ್ಕೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 0.23ರಷ್ಟು ಅನುದಾನ ನೀಡಲಾಗುತ್ತಿದ್ದು, ಅದನ್ನು ಶೇ 1ಕ್ಕೆ ಹೆಚ್ಚಿಸಬೇಕು. ಇದನ್ನು 2025–26ನೇ ಸಾಲಿನಿಂದ ಆರಂಭಿಸಿ ಹಂತ ಹಂತವಾಗಿ ಏರಿಸಬೇಕು. 2027–28ರ ಹೊತ್ತಿಗೆ ಉನ್ನತ ಶಿಕ್ಷಣಕ್ಕೆ ₹16,691 ಕೋಟಿ ಹಂಚಿಕೆ ಮಾಡಬೇಕು. ಅನುದಾನದ ಕೊರತೆ ತಪ್ಪಿಸಲು ಹೆಚ್ಚುವರಿಯಾಗಿ ₹10 ಸಾವಿರ ಕೋಟಿ ಲಭ್ಯವಿರುವಂತೆ ನೋಡಿಕೊಳ್ಳಬೇಕು

  • ಅಗತ್ಯವಿರುವ ಸಂಪನ್ಮೂಲವನ್ನು ಕ್ರೋಡೀಕರಿಸುವುದಕ್ಕಾಗಿ ಪರೋಕ್ಷ ತೆರಿಗೆಯ ಮೇಲೆ ಶೇ 2ರಷ್ಟು ಉಪಕರ (ಸರ್‌ಚಾರ್ಜ್‌) ವಿಧಿಸಬಹುದು. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಗೆ ನೀಡಲಾಗುವ ಅನುದಾನದ ಅನುಪಾತವನ್ನು (ವೇತನ:ಅಭಿವೃದ್ಧಿ) ಈಗಿರುವ 90:10ರಿಂದ 75:25ಕ್ಕೆ ಬದಲಾಯಿಸಬೇಕು

  • ಅಗತ್ಯವಿರುವಾಗ ಅನುದಾನ ನೀಡುವ ವ್ಯವಸ್ಥೆಯ ಬದಲಿಗೆ ತತ್ವಾಧಾರಿತ ಹಣಕಾಸಿನ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಅನುದಾನವನ್ನು (1) ಬೋಧಕರ ಹುದ್ದೆಗಳ ಭರ್ತಿ (2) ಮೂಲಸೌಕರ್ಯಗಳ ಕೊರತೆ ನೀಗಿಸುವುದು (3) ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತರಿಪಡಿಸುವ ಉದ್ದೇಶಕ್ಕೆ ಬಳಸಲು ಅವಕಾಶ ನೀಡಬೇಕು

  • ಎಲ್ಲ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮತ್ತು ನೀತಿಯ ಅನುಷ್ಠಾನವನ್ನು ಸುಧಾರಿಸಲು ಉನ್ನತ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಂತರ ಇಲಾಖೆ ಸಮನ್ವಯ ಸಮಿತಿ ಸ್ಥಾಪಿಸಬೇಕು

ಎನ್‌ಸಿಇಆರ್‌ಟಿ ಅವಲಂಬನೆ ಬೇಡ 

ಶಾಲಾ ಶಿಕ್ಷಣಕ್ಕಾಗಿ ಸಮಗ್ರ ಪಠ್ಯಕ್ರಮ (ಸಿಸಿಎಸ್‌ಇ) ರೂಪಿಸುವಂತೆ ಆಯೋಗವು ಶಿಫಾರಸು ಮಾಡಿದೆ. ಮುಖ್ಯವಾಗಿ, ಪಠ್ಯಪುಸ್ತಕಗಳಿಗಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಮೇಲಿನ ಅವಲಂಬನೆಯಿಂದ ಹೊರಬರಬೇಕು. ಎಲ್ಲ ವಿಷಯಗಳಲ್ಲಿಯೂ (ಸಬ್ಜೆಕ್ಟ್) ಸ್ಥಳೀಯ ಪಠ್ಯವಸ್ತುಗಳನ್ನು ಅಳವಡಿಸಬೇಕು. ಐದನೇ ತರಗತಿಯವರೆಗೆ ಬುನಾದಿ ಶಿಕ್ಷಣಕ್ಕೆ ಒತ್ತು ನೀಡಬೇಕು. ಮೌಲ್ಯಗಳು, ಸುಸ್ಥಿರತೆ ಮತ್ತು ಸಮಗ್ರ ಅಭಿವೃದ್ಧಿಗೆ ಕಲಿಕೆಯಲ್ಲಿ ಆದ್ಯತೆ ನೀಡಬೇಕು ಎಂದು ಆಯೋಗ ಸಲಹೆ ನೀಡಿದೆ.

ಮಾತೃಭಾಷೆ ಶಿಕ್ಷಣ, ದ್ವಿಭಾಷಾ ನೀತಿ

ಐದನೇ ತರಗತಿವರೆಗೆ, ಸಾಧ್ಯವಾಗುವುದಾದರೆ 12ನೇ ತರಗತಿವರೆಗೆ, ಕನ್ನಡ/ಮಾತೃಭಾಷೆಯನ್ನು ಶಿಕ್ಷಣದ ಮಾಧ್ಯಮವನ್ನಾಗಿ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಜತೆಗೆ, ದ್ವಿಭಾಷಾ ನೀತಿಯನ್ನು (ಕನ್ನಡ/ಮಾತೃಭಾಷೆ ಮತ್ತು ಇಂಗ್ಲಿಷ್) ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ. ದ್ವಿಭಾಷಾ ಬೋಧನಾ ಪದ್ಧತಿಯನ್ನು ಅಳವಡಿಸಿಕೊಳ್ಳಲು ಶಿಕ್ಷಕರಿಗೆ ತರಬೇತಿ ನೀಡುವುದು ಮತ್ತು ಭಾಷಾ ಬೋಧನಾ ಕೇಂದ್ರ ಸ್ಥಾಪಿಸಬೇಕು ಎಂದೂ ಆಯೋಗ ಹೇಳಿದೆ.

ಖಾಸಗಿ ಶಾಲೆಗಳ ನಿಯಂತ್ರಣ

ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳು ಪಾರಮ್ಯ ಸಾಧಿಸಿದ್ದು, ಪೋಷಕರು ದುಬಾರಿ ಶುಲ್ಕ ತೆರಬೇಕಿದೆ. ಈ ದಿಸೆಯಲ್ಲಿ, ಶಾಲಾ ಶಿಕ್ಷಣವು ಮತ್ತಷ್ಟು ಖಾಸಗೀಕರಣವಾಗುವುದನ್ನು ತಪ್ಪಿಸಬೇಕು ಎಂದು ಆಯೋಗ ಸೂಚಿಸಿದೆ. ಶಾಲೆಗಳ ಶುಲ್ಕ ನಿಯಂತ್ರಿಸಬೇಕು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯುಎಸ್‌) ಪೋಷಕರ ಮಕ್ಕಳ ಪ್ರವೇಶವನ್ನು ಸುಗಮಗೊಳಿಸಬೇಕು ಎಂದಿದೆ. ಮುಖ್ಯವಾಗಿ, ಖಾಸಗಿ ಶಾಲೆಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಸಂಸ್ಥೆಯನ್ನು ರೂಪಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಅನುದಾನ, ಬಜೆಟ್‌ ಹಂಚಿಕೆ ಹೆಚ್ಚಿಸಿ

ರಾಜ್ಯ ಸರ್ಕಾರವು ಶಾಲಾ ಶಿಕ್ಷಣಕ್ಕೆ ನೀಡುವ ಅನುದಾನ ಮತ್ತು ಬಜೆಟ್‌ ಹಂಚಿಕೆಯನ್ನು ಹೆಚ್ಚಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

  • ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 3ರಷ್ಟು ಹಂಚಿಕೆ ಮಾಡಬೇಕು

  • ವಾರ್ಷಿಕ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮಾಡಲಾಗುತ್ತಿರುವ ಹಂಚಿಕೆಯನ್ನು ಶೇ 30ಕ್ಕೆ ಹೆಚ್ಚಿಸಬೇಕು. 2022–23ರಲ್ಲಿ ರಾಜ್ಯದ ಒಟ್ಟು ವೆಚ್ಚದಲ್ಲಿ ಶಿಕ್ಷಣಕ್ಕೆ ಮಾಡಲಾದ ವೆಚ್ಚ ಶೇ 14ರಷ್ಟಿತ್ತು. ದೇಶದ 12ಕ್ಕೂ ಹೆಚ್ಚು ರಾಜ್ಯಗಳು ಶಿಕ್ಷಣಕ್ಕೆ ಒಟ್ಟು ಬಜೆಟ್‌ನ ಶೇ 20ರಷ್ಟು ಹಣವನ್ನು ಮೀಸಲಿಡುತ್ತಿವೆ. ಕರ್ನಾಟಕವೂ ಹೆಚ್ಚು ಹಂಚಿಕೆ ಮಾಡಲು ಕ್ರಮವಹಿಸಬೇಕು. ವರ್ಷಕ್ಕೆ ಕನಿಷ್ಠ ಶೇ 5ರಷ್ಟು ಹೆಚ್ಚಿಸಬೇಕು. ಮುಂದಿನ 10ರಿಂದ 15 ವರ್ಷಗಳಿಗೆ ಇದಕ್ಕಾಗಿ ವರ್ಷವಾರು ಯೋಜನೆ ರೂಪಿಸಬೇಕು

  • ಪ್ರತಿ ವಿದ್ಯಾರ್ಥಿಯ ಮೇಲೆ ವಾರ್ಷಿಕವಾಗಿ ಮಾಡಲಾಗುತ್ತಿರುವ ವೆಚ್ಚವನ್ನು ಹೆಚ್ಚಿಸಬೇಕು. ವಾರ್ಷಿಕವಾಗಿ ಶೇ 5ರಿಂದ ಶೇ 10ರಷ್ಟು ಹೆಚ್ಚು ಖರ್ಚು ಮಾಡುವಂತೆ ನೋಡಿಕೊಳ್ಳಬೇಕು

  • ಸಮಾನತೆ, ಗುಣಮಟ್ಟ ಮತ್ತು ತರಬೇತಿಗಾಗಿ ಪ್ರತ್ಯೇಕ ಬಜೆಟ್‌ ಹಂಚಿಕೆ ಮಾಡಬೇಕು

  • ಆರ್‌ಟಿಐ ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಣ ಹಂಚಿಕೆ ನೀಡುವುದರ ಬದಲು ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಬಂಡವಾಳ ಹೂಡಲು ಆದ್ಯತೆ ನೀಡಬೇಕು

  • ಸರ್ಕಾರವು ತನ್ನ ಜವಾಬ್ದಾರಿ ನಿರ್ವಹಿಸುವುದರ ಜೊತೆಗೆ ಶಾಲಾ ಶಿಕ್ಷಣದ ಅಭಿವೃದ್ಧಿಗಾಗಿ ಕಾರ್ಪೊರೇಟ್‌ ಸಂಸ್ಥೆಗಳು, ದಾನಿಗಳು ಸೇರಿದಂತೆ ಸರ್ಕಾರೇತರ ಸಂಘ ಸಂಸ್ಥೆಗಳು, ವ್ಯಕ್ತಿಗಳಿಂದ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ಪ್ರಯತ್ನಿಸಬೇಕು

ಖಾಸಗೀಕರಣ ಬೇಡ

ಶಿಕ್ಷಣದ ಖಾಸಗೀಕರಣವನ್ನು ತಡೆಯಬೇಕು. ಸರ್ಕಾರಿ ಸಂಸ್ಥೆಗಳು ಮತ್ತು ಜನಹಿತ ಬಯಸುವ ಅನುದಾನಿತ ಸಂಸ್ಥೆಗಳನ್ನು ಬಲಪಡಿಸಲು ಹೆಚ್ಚು ಒತ್ತು ನೀಡಬೇಕು. ಅನುದಾನಿತ ಸಂಸ್ಥೆಗಳಿಗೆ ಪ್ರವೇಶ ಪಡೆದ ಕಡಿಮೆ ಆದಾಯದ ಕುಟುಂಬಗಳ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ, ವಿದ್ಯಾರ್ಥಿ ವೇತನ, ಹಾಸ್ಟೆಲ್‌ ವ್ಯವಸ್ಥೆಯಂತಹ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಯೋಗ ಹೇಳಿದೆ.

ದ್ವಿಭಾಷೆಗೆ ಪ್ರೋತ್ಸಾಹ

ಭಾಷಾ ಕೌಶಲ ವೃದ್ಧಿ ಮತ್ತು ಶಿಕ್ಷಣದ ಲಭ್ಯತೆಯನ್ನು ಹೆಚ್ಚಿಸುವುದಕ್ಕಾಗಿ 1ನೇ ತರಗತಿಯಿಂದ ಪದವಿ ಕೋರ್ಸ್‌ನ ಅಂತಿಮ ವರ್ಷದವರೆಗೆ ಇಂಗ್ಲಿಷ್‌ ಭಾಷೆ ಕಲಿಸಲು ರಚನಾತ್ಮಕ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಬೇಕು. ಇದರ ಜೊತೆಗೆ ದ್ವಿಭಾಷಾ ಕಲಿಕೆಯನ್ನು ಪ್ರೋತ್ಸಾಹಿಸಬೇಕು. ಭಾಷೆಯ ಬೋಧನೆ ಮತ್ತು ತರಬೇತಿಗಾಗಿ ಪ್ರತ್ಯೇಕ ಕೇಂದ್ರವೊಂದನ್ನು ಸ್ಥಾಪಿಸಲೇಬೇಕು. ಶೈಕ್ಷಣಿಕ ಜ್ಞಾನವನ್ನು ಹೆಚ್ಚು ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡಲು ದ್ವಿಭಾಷಾ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವುದರ ಜೊತೆಗೆ ಇಂಗ್ಲಿಷ್‌ ಭಾಷೆಯಲ್ಲಿ ಬರೆದಿರುವ ಪ್ರಮುಖ ಕಲಿಕಾ ಪರಿಕರಗಳು ಮತ್ತು ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಬೇಕು. ಕನ್ನಡದಲ್ಲಿ ಉತೃಷ್ಟ ಶೈಕ್ಷಣಿಕ ಸಂಪನ್ಮೂಲ ಸೃಷ್ಟಿಸುವುದಕ್ಕಾಗಿ ‘ಜ್ಞಾನ ಭಾಷಾಂತರ ಕೇಂದ್ರ’ ಸ್ಥಾಪಿಸಬೇಕು ಎಂದು ಆಯೋಗ ಹೇಳಿದೆ.

ರಾಜ್ಯ ಶಿಕ್ಷಣ ನೀತಿ ಆಯೋಗದ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಉಪ ಸಮಿತಿ ರಚಿಸಲಿದ್ದಾರೆ. ವರದಿಯನ್ನು ಸಮಿತಿ ಕೂಲಂಕಷವಾಗಿ ಪರಿಶೀಲಿಸಿ, ಶಿಫಾರಸು ಮಾಡಲಿದೆ. ನಂತರ 2026–27ನೇ ಸಾಲಿನಿಂದ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು
-ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ
ಎಸ್‌ಇಪಿ ಆಯೋಗದ ಮಧ್ಯಂತರ ವರದಿ ಶಿಫಾರಸಿನಂತೆ 2024–25ನೇ ಸಾಲಿನಿಂದಲೇ ಉನ್ನತ ಶಿಕ್ಷಣದಲ್ಲಿ ರಾಜ್ಯ ಶಿಕ್ಷಣ ನೀತಿ ಅಳವಡಿಸಿಕೊಂದ್ದೇವೆ. ನಾಲ್ಕು ವರ್ಷಗಳ ಪದವಿ, ಬಹು ಪ್ರವೇಶ ನಿರ್ಗಮನ, ಇತರೆ ವಿಭಾಗಗಳ ವಿಷಯ ಆಯ್ಕೆ ರದ್ದು ಮಾಡಿದ್ದೇವೆ. ಅಂತಿಮ ವರದಿ ಆಧರಿಸಿ, ಅಳವಡಿಸಿಕೊಳ್ಳಬೇಕಿರುವುದು ಕೆಲ ಅಂಶಗಳಷ್ಟೇ ಬಾಕಿ ಇವೆ. ಸಂಪುಟದ ಅನುಮೋದನೆ ಪಡೆದ ನಂತರ ಸಾರ್ವಜನಿಕ ಚರ್ಚೆಗೆ ಬಿಡಲಾಗುವುದು.
-ಡಾ.ಎಂ.ಸಿ.ಸುಧಾಕರ್‌, ಉನ್ನತ ಶಿಕ್ಷಣ ಸಚಿವ
ಪ್ರೊ.ಸುಖದೇವ್ ಥೋರಟ್ ನೇತೃತ್ವದ ಆಯೋಗ ಆಗಸ್ಟ್ 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದೆ. ಸಚಿವರಾದ ಮಧು ಬಂಗಾರಪ್ಪ ಸುಧಾಕರ್ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.