ADVERTISEMENT

ಆಳ–ಅಗಲ ‌| ಕೊರಗರ ವಂಶಜರು ಮೂಲದ್ರಾವಿಡರು

ಮಂಗಳೂರು ವಿ.ವಿ, ಯೆನೆಪೋಯ ಡೀಮ್ಡ್‌ ವಿ.ವಿಯಿಂದ ವಂಶಾವಳಿ ಅಧ್ಯಯನ

ಸಂಧ್ಯಾ ಹೆಗಡೆ
Published 19 ಫೆಬ್ರುವರಿ 2026, 23:30 IST
Last Updated 19 ಫೆಬ್ರುವರಿ 2026, 23:30 IST
ಬುಟ್ಟಿ ಹೆಣೆಯಲು ಬಿಳಲು ಸ್ವಚ್ಛ ಮಾಡುತ್ತಿದ್ದ ಕೊರಗ ಮಹಿಳೆಯರು  ಪ್ರಜಾವಾಣಿ ಚಿತ್ರ :ಫಕ್ರುದ್ದೀನ್ ಎಚ್.
ಬುಟ್ಟಿ ಹೆಣೆಯಲು ಬಿಳಲು ಸ್ವಚ್ಛ ಮಾಡುತ್ತಿದ್ದ ಕೊರಗ ಮಹಿಳೆಯರು  ಪ್ರಜಾವಾಣಿ ಚಿತ್ರ :ಫಕ್ರುದ್ದೀನ್ ಎಚ್.   

ಶತಮಾನಗಳಿಂದ ಬವಣೆ ಬೇಗುದಿಗಳಲ್ಲಿ ಬೆಂದು, ‘ಅಸ್ಪೃಶ್ಯತೆ’ಯ ಕೂಪದಲ್ಲಿ ನಲುಗಿ, ಅಸಹಾಯಕತೆಯನ್ನೇ ಹೊದ್ದುಕೊಂಡಿರುವ ಆದಿ ಬುಡಕಟ್ಟು ಸಮುದಾಯವೆಂದರೆ, ಅದು ಕೊರಗ ಸಮುದಾಯ. ದಕ್ಷಿಣ ಕನ್ನಡ, ಉಡುಪಿ, ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ಕೊರಗ ಕುಟುಂಬಗಳು ನೆಲಸಿವೆ. ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲೂ ಚದುರಿದಂತೆ ಕೆಲವು ಕುಟುಂಬಗಳು ಇವೆ. 

ತಲೆಮಾರುಗಳಿಂದ ಜೀವಂತವಾಗಿದ್ದ ಸಾಮಾಜಿಕ ಅನಿಷ್ಟಗಳಾದ ಅಜಲು (ಮೇಲ್ಜಾತಿಯವರ ಉಗುರು ಮತ್ತು ಕೂದಲು ಅನ್ನಕ್ಕೆ ಬೆರೆಸಿ ತಿನ್ನುವುದು, ಕಂಬಳ ಗದ್ದೆಯಲ್ಲಿ ಕೊರಗರನ್ನು ಓಡಿಸಿ, ಕೆರೆಯಲ್ಲಿ ಶತ್ರುಗಳು ಗಾಜಿನ ಚೂರು, ಮುಳ್ಳು ಮತ್ತಿತರ ಅಪಾಯದ ವಸ್ತು ಹಾಕಿದ್ದಾರೆಯೇ ಎಂದು ಪರೀಕ್ಷಿಸುವುದು... ಇಂತಹ ಹೀನ ಆಚರಣೆಗಳು) ಮತ್ತು ಅಸ್ಪೃಶ್ಯತೆಯಿಂದಾಗಿ ಸಮಾಜದಿಂದ ಪ್ರತ್ಯೇಕಿಸಲ್ಪಟ್ಟಿರುವ ಕೊರಗರು, ಅತ್ತ ಅಭಿವೃದ್ಧಿಯ ಪಥಕ್ಕೆ ತೆರೆದುಕೊಳ್ಳಲೂ ಆಗದೆ, ಇತ್ತ ಸಮುದಾಯದ ಆಚರಣೆಗಳಿಂದ ಕಳಚಿಕೊಳ್ಳಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. 

ಕೊರಗರು ಇಂದಿಗೂ ಈ ಎಲ್ಲ ತಲ್ಲಣ, ನೋವುಗಳನ್ನು ಅನುಭವಿಸುತ್ತಿದ್ದಾರೆ. ಇವರ ವಂಶಾವಳಿಯ (ಜಿನೋಮಿಕ್) ಅಧ್ಯಯನವು, ಸಮುದಾಯವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವ ಆಶಾಭಾವ ಮೂಡಿಸಿದೆ.

ADVERTISEMENT

ಮಂಗಳೂರು ವಿಶ್ವವಿದ್ಯಾಲಯದ ಪ್ರಾಣಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್. ಮುಸ್ತಾಕ್, ಮುಖ್ಯ ಸಂಶೋಧಕ ಜೈಸನ್ ಜೀವನ್ ಸಿಕ್ವೇರಾ ಹಾಗೂ ಯೆನೆಪೋಯ ಡೀಮ್ಡ್‌ ವಿಶ್ವವಿದ್ಯಾಲಯದ ಪ್ರೊ.ರಣಜಿತ್ ದಾಸ್ ಜಂಟಿಯಾಗಿ ನಡೆಸಿದ ಜಿನೋಮಿಕ್ ಅಧ್ಯಯನವು, ಕೊರಗರ ಪೂರ್ವಜರು ಪ್ರಾಚೀನ ‘ಪ್ರೊಟೊ ದ್ರಾವಿಡ’ ಸಂಸ್ಕೃತಿಯ ಪ್ರತಿನಿಧಿಗಳು ಎಂದು ಹೇಳಿದೆ.

ಈವರೆಗಿನ ಸಂಶೋಧನೆ ಪ್ರಕಾರ, ಭಾರತೀಯರಿಗೆ ಮೂರು ಪೂರ್ವಜ ಮೂಲಗಳಿವೆ ಎಂದು ನಂಬಲಾಗಿತ್ತು (ಆಸ್ಟ್ರೊ ಏಷಿಯಾಟಿಕ್ ಮತ್ತು ಟಿಬೆಟೊ ಬರ್ಮನ್ ಸೇರಿಸಿದರೆ ಐದು). ಅವುಗಳೆಂದರೆ ಅಂಡಮಾನ್‌ ದ್ವೀಪದಲ್ಲಿ ಬೇಟೆಯಾಡುವ ಜನಾಂಗಗಳಿಗೆ ಸೇರಿದ ಪ್ರಾಚೀನ ದಕ್ಷಿಣ ಭಾರತೀಯರು, ಸಿಂಧೂ ನಾಗರಿಕತೆಯ ಅಂಚಿನ ಜನರು ಹಾಗೂ ಇರಾನ್‌ ‍ಪರ್ವತ ಪ್ರದೇಶದ ಪ್ರಾಚೀನ ಕೃಷಿಕರು. ಆದರೆ, ಈ ಸಂಶೋಧಕರ ಅಧ್ಯಯನವು ಇವುಗಳ ಜೊತೆಗೆ ಭಾರತೀಯರಿಗೆ ನಾಲ್ಕನೆಯ ವಂಶವೃಕ್ಷವೊಂದಿದೆ, ಅದು ‘ಪ್ರೊಟೊ ದ್ರಾವಿಡಿಯನ್’ (ಮೂಲ ದ್ರಾವಿಡ ಸಂಸ್ಕೃತಿಗೆ ಸಂಬಂಧಿಸಿದ) ಎಂದು ಅಭಿಪ್ರಾಯಪಟ್ಟಿದೆ.

ಅಧ್ಯಯನದ ಕಲ್ಪನೆ ಮೊಳೆತಿದ್ದು ಹೇಗೆ?: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಕೊರಗರ ‘ಕೊರಗ’ ಮಾತೃಭಾಷೆಯಲ್ಲಿರುವ ಪದಗಳ ಉಚ್ಚಾರಣೆ, ಗುಣವಿಶೇಷಗಳು ಅಧ್ಯಯನಕ್ಕೆ ಮೂಲ ಪ್ರೇರಣೆ. 

ಮುಖ್ಯ ಸಂಶೋಧಕ ಜೈಸನ್ ಸಿಕ್ವೇರಾ ಹೇಳುವಂತೆ, ‘ದ್ರಾವಿಡ ಕುಟುಂಬಕ್ಕೆ ಸೇರಿದವೆಂದು ಸಾಬೀತಾಗಿರುವ ಪೂರ್ವ ಭಾರತದ ಒರಾಂವ್ (ಕುರುಖ್) ಭಾಷೆ, ಬಲೂಚಿಸ್ತಾನ, ಅಫ್ಗಾನಿಸ್ತಾನದ ದಕ್ಷಿಣ ಪ್ರಾಂತ್ಯದ ದ್ರಾವಿಡ ಜನಾಂಗದ ‘ಬ್ರಾಹುಯಿ’ ಭಾಷೆ ಹಾಗೂ ನಮ್ಮ ನೆಲದ ಕೊರಗರ ಭಾಷೆಗಳ ನಡುವೆ ಸಾಮ್ಯತೆ ಇರುವ ಕಾರಣ ಇವುಗಳ ತೌಲನಿಕ ಅಧ್ಯಯನ, ಭಾಷೆಗಳ ವೈಶಿಷ್ಟ್ಯ ಗುರುತಿಸುವುದು ಅಧ್ಯಯನದ ಪ್ರಮುಖ ಅಂಶವಾಗಿತ್ತು. ಈ ಭಾಷಾತ್ಮಕ ನಂಟು ಮೂಡಿಸಿದ ಕುತೂಹಲವು, ಆನುವಂಶಿಕ ಮೂಲದಲ್ಲೂ ಪ್ರತಿಫಲಿಸಬಹುದೆಂದು ದ್ವಿತೀಯ ಅಧ್ಯಯನವನ್ನು ವಂಶವಾಹಿ ಮೇಲೆ ನಡೆಸಿದಾಗ, ಅಚ್ಚರಿಯ ಫಲಿತಾಂಶ ದೊರೆತಿದೆ’. 

ಆನುವಂಶೀಯತೆ ಮತ್ತು ಭಾಷೆ ನಡುವಿನ ಹೋಲಿಕೆ ಕಂಡುಕೊಳ್ಳುವ ಉದ್ದೇಶದಿಂದ ಸಂಶೋಧನಾ ತಂಡವು ಡೆನ್ಮಾರ್ಕ್‌ನ ಭಾಷಾ ವಿಜ್ಞಾನಿ ಪ್ರೊ.ಜಾರ್ಜ್ ವ್ಯಾನ್ ಡ್ರಿಮ್ ಅವರ ನೆರವು ಪಡೆದಿದ್ದು, ಈ ವೇಳೆ ದೊರೆತ ಸುಳಿವುಗಳು, ಮಾಹಿತಿ ಬೆಂಬಲಿತ ವಿಶ್ಲೇಷಣೆಗಳು ಹೆಚ್ಚಿನ ಸಂಶೋಧನೆಗೆ ಇಂಬು ನೀಡಿದವು.

ಕೊರಗರ ಬಗ್ಗೆ ಅನೇಕರು ಅಧ್ಯಯನ ಮಾಡಿದ್ದಾರೆ. 2003ರಲ್ಲಿ ನಡೆದ ಅಧ್ಯಯನದಲ್ಲಿ ಕೊರಗರು ಸೇರಿದಂತೆ ಎಲ್ಲ ಬುಡುಕಟ್ಟು ಸಮುದಾಯಗಳು ಒಂದೇ ವಂಶಾವಳಿಗೆ ಸೇರಿರಬಹುದೆಂದು ವಿಶ್ಲೇಷಿಸಲಾಗಿತ್ತು. ವಿದೇಶಿ ಅಧ್ಯಯನಕಾರರಿಂದ ನಡೆದ ಈ ಅಧ್ಯಯನವು ಅಪರಿಪೂರ್ಣ ಎಂಬುದು ಇಂದಿನ ಸಂಶೋಧಕರ ವಾದ. 

ಮೊದಲ ಅಧ್ಯಯನದ ಸಾರವೇನು?: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷಿಕರ ನಡುವೆ ಇರುವ ಇವರು ‘ಕೊರಗ’ ಮಾತೃಭಾಷೆಯ ದೇಸಿತನ ಉಳಿಸಿಕೊಂಡವರು. ಸಂಶೋಧನೆ ಈ ವಿಷಯವನ್ನೇ ಕೇಂದ್ರೀಕರಿಸಿತ್ತು.

‘ಕೊರಗ, ಬ್ರಾಹುಯಿ ಹಾಗೂ ಒರಾಂವ್ (ಕುರುಖ್) ಭಾಷೆ ನಡುವೆ ಪ್ರಾಚೀನ ಬಂಧ ಇರುವುದು ಕಂಡುಬಂತು. ಇದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ, ಮೂರು ಜನಾಂಗಗಳು ಸುಮಾರು 4,400 ವರ್ಷಗಳ ಹಿಂದೆ ಒಂದೇ ಪೂರ್ವಜರನ್ನು ಹೊಂದಿರುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಹರಪ್ಪ ನಾಗರಿಕತೆಗೆ ಸಮೀಪದ ಕಾಲವಿದು. ನಂತರದ ಸಾಮಾಜಿಕ, ಭೌಗೋಳಿಕ, ಸಾಂಸ್ಕೃತಿಕ ಪಲ್ಲಟಗಳ ನಡುವೆ, ಈ ಸಮುದಾಯಗಳು ಹರಡಿ ಹಂಚಿಹೋಗಿರಬಹುದು’ ಎನ್ನುತ್ತಾರೆ ಜೈಸನ್ ಸಿಕ್ವೇರಾ. 

ಎರಡನೇ ಅಧ್ಯಯನದಲ್ಲಿ ಸಂಶೋಧಕರು ಮಾನವನಲ್ಲಿರುವ ಸಂಪೂರ್ಣ ನ್ಯೂಕ್ಲಿಯರ್ ಡಿಎನ್‌ಎ ಸಂಯೋಜನೆಯನ್ನು ವಿಶ್ಲೇಷಿಸಿದ್ದಾರೆ. ಈ ಸಂಶೋಧನೆಯ ಮುಖ್ಯ ಉದ್ದೇಶ ಕೊರಗರ ಮೂಲದ ನಿಖರ ಸ್ವರೂಪವನ್ನು ಪತ್ತೆ ಹಚ್ಚುವುದಾಗಿತ್ತು.

ಇರಾನ್‌ ವಂಶಜರ ನಂಟು: ಪ್ರತಿ ಮನುಷ್ಯನಲ್ಲೂ ಅವನ ಪೂರ್ವಜರ ಅಂಶ ಅಡಗಿರುತ್ತದೆ. ಪ್ರಾದೇಶಿಕವಾಗಿ ಈ ಅಂಶವು ವಿಭಿನ್ನವಾಗಿರುತ್ತದೆ. ಬಹುತೇಕ ಭಾರತೀಯ ಬುಡಕಟ್ಟು ಸಮುದಾಯಗಳಲ್ಲಿ ಇದು ‘M’ ಪ್ರಭೇದಕ್ಕೆ (ಹ್ಯಾಪ್ಲೊಗ್ರೂಪ್-ಒಂದೇ ಪೂರ್ವಜರನ್ನು ಹೊಂದಿರುವ ಆನುವಂಶಿಕ ಜನಾಂಗಗಳ ಗುಂಪು) ಸೇರಿರುತ್ತದೆ. ಆದರೆ, ಪಶ್ಚಿಮ ಪ್ರದೇಶಗಳಲ್ಲಿ N, R, U ಹೀಗೆ ಬೇರೆ ಪ್ರಭೇದಗಳು ಕಂಡು ಬರುತ್ತವೆ. ವಿಶೇಷವೇನೆಂದರೆ, ಕೊರಗರಲ್ಲಿ U1 ಮಾದರಿ ಪ್ರಮಾಣ ಅಧಿಕವಾಗಿರುವುದು ಕಂಡುಬಂದಿದೆ. ಭಾರತದಲ್ಲಿ U1 ಹ್ಯಾಪ್ಲೊಗ್ರೂಪ್ ಅತ್ಯಂತ ವಿರಳವಾಗಿವೆ ಎಂದು ವಿಶ್ಲೇಷಿಸಿರುವ ಸಂಶೋಧಕರು, ಇರಾನ್‌ನಲ್ಲಿ ಸುಮಾರು 4,000 ವರ್ಷಗಳ ಹಿಂದಿನ ನಾಗರಿಕತೆಯಲ್ಲಿ ಇದೇ ಹ್ಯಾಪ್ಲೊಗ್ರೂಪ್ ಇರುವುದನ್ನು ವೈಜ್ಞಾನಿಕ ಅಧ್ಯಯನಗಳ ಮೂಲಕ ಪತ್ತೆ ಮಾಡಿದ್ದಾರೆ.

ಅಸ್ಥಿಪಂಜರಗಳಿಂದ ಡಿಎನ್‌ಎ ಸಂಗ್ರಹಿಸಿ ಈ ಅಧ್ಯಯನ ಮಾಡಬೇಕಾಗುತ್ತದೆ. ಇರಾನ್‌ನ ಪೂರ್ವಜ ವಂಶಜರ ಹ್ಯಾಪ್ಲೊಗ್ರೂಪ್ (ಇಂದಿನ ಇರಾನಿ ಪ್ರಜೆಗಳಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಇಂದು ಅಲ್ಲಿ ಬೇರೆಯೇ ಜನಾಂಗದ ವಂಶಸ್ಥರು ಇದ್ದಾರೆ) ಮತ್ತು ಇಂದಿನ ಕೊರಗರ ಹ್ಯಾಪ್ಲೊಗ್ರೂಪ್ ಒಂದೇ ಆಗಿವೆ. ಕಾಲಚಕ್ರದಲ್ಲಿ ಈ ಪೂರ್ವಜ ತಲೆಮಾರಿನ ಕೊಂಡಿ ಕಳಚಿ, ಒಂದೊಂದು ಗುಂಪು ಒಂದೊಂದು ಪ್ರದೇಶಕ್ಕೆ ಸಂಚರಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.

ಕೊರಗರ ಆನುವಂಶೀಯತೆಯಲ್ಲಿ ಕಂಡುಬಂದ ಇರಾನ್‌ನ ನವಶಿಲಾಯುಗದ ಕುಲದ ವಂಶವಾಹಿಯು ಭಾರತೀಯ ಇತರ ಜನಾಂಗಗಳಲ್ಲಿ ಕಂಡು ಬರುವುದಕ್ಕಿಂತ ಪೂರ್ಣ ವಿಭಿನ್ನವಾಗಿದ್ದು, ಅದು ಪ್ರಾಚೀನ ಮೂಲದಿಂದ ಬಂದಿದ್ದಾಗಿದೆ. ಅಂದರೆ, ಕೊರಗರು ಭಾರತದ ಜನಾಂಗೀಯ ಇತಿಹಾಸದ ಹಳೆಯ ಕೊಂಡಿ ಎಂಬುದನ್ನು ಈ ಸಂಶೋಧನೆ ತೆರೆದಿಟ್ಟಿದೆ. ಅಲ್ಲದೆ, ಕೊರಗರ ಅಸ್ತಿತ್ವವಿಲ್ಲದೆ, ಭಾರತೀಯ ಆನುವಂಶೀಯತೆಯ ಪರಿಕಲ್ಪನೆ ಅಪೂರ್ಣವಾಗುತ್ತದೆ. ಹೀಗಾಗಿ, ಕೊರಗರು ಪ್ರಾಚೀನ ಪ್ರೊಟೊ ದ್ರಾವಿಡ ಪೂರ್ವಜರ ಇಂದಿನ ಪ್ರತಿನಿಧಿಗಳು ಎಂದು ಅಧ್ಯಯನವು ಬಲವಾಗಿ ಪ್ರತಿಪಾದಿಸಿದೆ.

‘ಇರಾನ್‌ನ ನವಶಿಲಾಯುಗದ ಕಾಲದ ಪೂರ್ವಜರು ಹಾಗೂ ಕೊರಗರ ಪೂರ್ವಜರು ಒಂದೇ ವಂಶಸ್ಥರಾಗಿರುವ, ಅವರೂ ಬೇಟೆಗಾರ ಕಸುಬಿನವರೇ ಆಗಿರುವ ಸಾಧ್ಯತೆಗಳು ಬಲವಾಗಿವೆ. ಕಾಲಕ್ರಮೇಣ ಆ ವಂಶವು ಕವಲಾಗಿ ಒಡೆದು, ಕೆಲವರು ಕೃಷಿಯೆಡೆಗೆ ವಾಲಿರಬಹುದು, ಕೆಲವರು ಮೂಲ ಕಸುಬನ್ನೇ ನೆಚ್ಚಿಕೊಂಡಿರಬಹುದು. ಇದಕ್ಕೆ ಸಾಕ್ಷಿಯೆಂಬಂತೆ ಕೊರಗರಲ್ಲಿ ಬಹುತೇಕರಿಗೆ ಇಂದಿಗೂ ಕಿರು ಅರಣ್ಯ ಉತ್ಪನ್ನ ಸಂಗ್ರಹ, ಬುಟ್ಟಿ ಹೆಣಿಗೆಯೇ ಜೀವನೋಪಾಯವಾಗಿದೆ’ ಎಂದು ವಿವರಿಸುತ್ತಾರೆ ಜೈಸನ್ ಸಿಕ್ವೇರಾ. 

ಈ ಸಂಶೋಧನೆಯು ಭಾರತದ ಪುರಾತನ ಜನಾಂಗೀಯ ಇತಿಹಾಸದ ಮೇಲೆ ಹೊಸ ನೋಟ ಬೀರಿದೆ. ಕೊರಗರು ಹಾಗೂ ಇರಾನ್‌ನ‌ ಸುಮಾರು 10 ಸಾವಿರ ವರ್ಷಗಳ ಹಿಂದಿನ ಸಮುದಾಯದ ಜನರೊಂದಿಗೆ ಆನುವಂಶಿಕ ಸಂಬಂಧ ಇರುವುದರಿಂದ ‘ಎಲಾಮೋ- ದ್ರಾವಿಡ ಸಿದ್ಧಾಂತಕ್ಕೆ’ ಬೆಂಬಲ ಸಿಕ್ಕಂತಾಗಿದೆ. ಈ ಸಿದ್ಧಾಂತದ ಪ್ರಕಾರ ಇರಾನ್‌ನ ಎಲಾಮೈಟ್ ಭಾಷೆ ಮತ್ತು ಭಾರತದ ದ್ರಾವಿಡ ಭಾಷೆಗಳು ಒಂದೇ ಮೂಲದಿಂದ ಬಂದಿವೆ. ಕೊರಗರು ಸಮಾಜದ ಅಂಚಿನಲ್ಲಿರುವವರಲ್ಲ, ಬದಲಾಗಿ ಭಾರತದ ಮೂಲ ಕಥೆಯ ಮುಖ್ಯ ಪಾತ್ರಧಾರಿಗಳು ಎಂಬುದು ಅವರು ಮಂಡಿಸುವ ವಾದ. 

ಆಗಬೇಕಿದೆ ಇನ್ನಷ್ಟು ಸಂಶೋಧನೆ

ಕೊರಗರು ಭೌಗೋಳಿಕ ನೆರೆಹೊರೆಯವರಿಂದ ಪ್ರತ್ಯೇಕಗೊಂಡಿರುವ ಸಮುದಾಯ ಆಗಿರಬಹುದು ಎಂಬುದನ್ನು ಅರ್ಥೈಸಿಕೊಳ್ಳುವಲ್ಲಿ ಕಾಲನಿರ್ಣಯವು ಪ್ರಮುಖ ಆಧಾರವಾಗಬಹುದು. Outgroup f3 ಸಂಖ್ಯಾಶಾಸ್ತ್ರ ವಿಶ್ಲೇಷಣೆಯು ಕೊರಗರು ದಕ್ಷಿಣ ಏಷ್ಯಾದ ಇತರ ಸಮುದಾಯಗಳೊಂದಿಗೆ ಹೆಚ್ಚು ಸಂಯೋಜನೆಗೊಳ್ಳದ ಕಾರಣ ಅವರ ಜೀನ್‌ಗಳು ಭಿನ್ನವಾಗಿವೆ ಎನ್ನುತ್ತದೆ. 750ರಿಂದ 1,020 ವರ್ಷಗಳ ಹಿಂದೆ ಕೊರಗ ಜನಾಂಗದ ಆನುವಂಶೀಯ ವಸ್ತುವಿನಲ್ಲಾದ ಬದಲಾವಣೆಯು, ‘ಜನಾಂಗ ನಿರ್ದಿಷ್ಟ ವ್ಯತ್ಯಯ’ ಎಂಬ ದೊಡ್ಡ ಆಘಾತಕ್ಕೆ ಸಿಲುಕಿರುವ ಸಾಧ್ಯತೆ ಇದೆ. 

ಪ್ರಾಚೀನ ಭಾರತದ ರಾಜರ ಆಳ್ವಿಕೆಯಲ್ಲಿ ತೀವ್ರವಾಗಿದ್ದ ಜಾತಿ ವ್ಯವಸ್ಥೆಯ ಕಟ್ಟುಪಾಡುಗಳು, ಕೊರಗರನ್ನು ನಾಗರಿಕ ಸಮಾಜದಿಂದ ಸಂಪೂರ್ಣ ಬೇರ್ಪಡಿಸಿದ ಕಾರಣ, ಈ ಸಮುದಾಯ ಅನೇಕ ದುಷ್ಪರಿಣಾಮಗಳನ್ನು ಅನುಭವಿಸುತ್ತಿದೆ. ಕೂಡುಕಟ್ಟು ಕುಟುಂಬ ಪದ್ಧತಿ ಹೊಂದಿರುವ ಕೊರಗರಲ್ಲಿ ಸೋದರ ಸಂಬಂಧಿಗಳ ನಡುವೆಯೇ ವಿವಾಹ ನಡೆಯುತ್ತದೆ. ಭೌಗೋಳಿಕವಾಗಿ ಅಥವಾ ಇತರ ಸಮುದಾಯಗಳ ಜೊತೆ ವಿವಾಹಗಳು ನಡೆಯುತ್ತಿಲ್ಲ. ಇದು ಜನಸಂಖ್ಯೆ ನಶಿಸಲು ಕಾರಣವಾಗಿರಬಹುದು. ವಂಶಾಭಿವೃದ್ಧಿ ಒತ್ತಡದಿಂದಾಗಿ ಅಂಧತ್ವ, ಕಾಕೆನ್ ಸಿಂಡ್ರೋಮ್, ಶ್ರವಣ ದೋಷ ಮೊದಲಾದ ವಂಶವಾಹಿಗೆ ಸಂಬಂಧಿಸಿದ ರೋಗಗಳು ಅವರನ್ನು ಹಿಂಡುತ್ತಿರಬಹುದು ಎಂದು ಅನೇಕ ಅಧ್ಯಯನಗಳು ವಿಶ್ಲೇಷಿಸಿದ್ದರೂ, ಈ ಬಗ್ಗೆ ಇನ್ನಷ್ಟು ವೈಜ್ಞಾನಿಕ ಅಧ್ಯಯನ ಆಗಬೇಕಾಗಿದೆ.

ಮನೋವೈಜ್ಞಾನಿಕ ಅಧ್ಯಯನ ಅಗತ್ಯ

‘ನೈಜ ದುರ್ಬಲ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಕೊರಗರು ಸಂಖ್ಯೆಯಲ್ಲಿ ಕ್ಷೀಣವಾದ ಸಮುದಾಯ. 40 ವರ್ಷಗಳ ಸಂಘಟಿತ ಶ್ರಮದಿಂದ ಕೆಲವರು ಶಿಕ್ಷಣ ಪಡೆದವರು ಇದ್ದರೂ, ಔದ್ಯೋಗಿಕ ಭದ್ರತೆ ಇಲ್ಲದೆ ಆತಂಕದಲ್ಲಿ ಪರಿತಪಿಸುವಂತಾಗಿದೆ. ಕಾಲದ ಸಮಸ್ಯೆಗಳಿಗೆ ಉತ್ತರ ಹುಡುಕುತ್ತ ಹೋರಾಟದಲ್ಲೇ ಜೀವನ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಕೊರಗ ಸಮುದಾಯಕ್ಕೆ ನೇರ ನೇಮಕಾತಿಯೊಂದಿಗೆ ಉದ್ಯೋಗ ಭದ್ರತೆ ಒದಗಿಸಬೇಕು, ಕೊರಗರ ಬಗ್ಗೆ ಸಾಮಾಜಿಕ, ಮನೋವೈಜ್ಞಾನಿಕ, ಜೈವಿಕ ಅಧ್ಯಯನಗಳು ಸ್ಥಳೀಯ ಸರ್ಕಾರಿ ವಿಶ್ವವಿದ್ಯಾಲಯಗಳಿಂದ ನಡೆಯಬೇಕು’ ಎನ್ನುತ್ತಾರೆ ಮಂಗಳೂರು ವಿವಿಯ ಪ್ರಾಧ್ಯಾಪಕಿ ಸಬಿತಾ ಕೊರಗ. 

ಪ್ರೊ. ಮುಸ್ತಾಕ್
ರಣಜಿತ್ ದಾಸ್
ಜೈಸನ್ ಸಿಕ್ವೇರಾ
ಸಬಿತಾ
 ಬುಟ್ಟಿ ಹೆಣಿಯುತ್ತಿರುವ ಕೊರಗ ಸಮುದಾಯದ ವ್ಯಕ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.