ADVERTISEMENT

ತುರ್ತು ಪರಿಸ್ಥಿತಿ: ಸಂವಿಧಾನ ಏನು ಹೇಳುತ್ತದೆ?

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 0:04 IST
Last Updated 25 ಜೂನ್ 2025, 0:04 IST
   

ದೇಶದ ರಕ್ಷಣೆ, ಸಮಗ್ರತೆಯನ್ನು ರಕ್ಷಿಸುವ ಸಲುವಾಗಿ ಭಾರತೀಯ ಸಂವಿಧಾನವು ತುರ್ತು ಪರಿಸ್ಥಿತಿ ಘೋಷಿಸುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡುತ್ತದೆ. ಸಂವಿಧಾನದ 352ನೇ ವಿಧಿಯು ರಾಷ್ಟ್ರೀಯ ತುರ್ತು ಪರಿಸ್ಥಿತಿಯ ನಿಬಂಧನೆಯನ್ನು ಒಳಗೊಂಡಿದ್ದರೆ, 356ನೇ ವಿಧಿಯು ಸಾಂವಿಧಾನಿಕ ಅಥವಾ ರಾಜ್ಯ ತುರ್ತು ಪರಿಸ್ಥಿತಿ, 360ನೇ ವಿಧಿಯು ಆರ್ಥಿಕ ತುರ್ತು ಪರಿಸ್ಥಿತಿಯ ನಿಬಂಧನೆ ಒಳಗೊಂಡಿದೆ. 

ಇಡೀ ದೇಶದಲ್ಲಿ ಅಥವಾ ದೇಶದ ಯಾವುದೇ ಒಂದು ಭಾಗದಲ್ಲಿ ಯುದ್ಧ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ದಂಗೆಗಳು ಉಂಟಾದಾಗ 352ನೇ ವಿಧಿಯ ಪ್ರಕಾರ ರಾಷ್ಟ್ರಪತಿಯು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದಾಗಿದೆ. ಈ ಮೂರು ಸಂದರ್ಭಗಳಲ್ಲಿ ದೇಶದ ಭದ್ರತೆಗೆ ಅಪಾಯ ಸಂಭವಿಸಬಹುದು ಎಂದು ಭಾವಿಸಿದರೆ, ಯುದ್ಧ, ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ದಂಗೆಗಳು ಸಂಭವಿಸುವುದಕ್ಕಿಂತ ಮುಂಚೆಯೇ ರಾಷ್ಟ್ರಪತಿಯು ತುರ್ತು ಪರಿಸ್ಥಿತಿ ಘೋಷಿಸಬಹುದು. ತುರ್ತುಪರಿಸ್ಥಿತಿಯನ್ನು ರದ್ದುಪಡಿಸುವ ಘೋಷಣೆ ಹೊರಡಿಸುವ ಅಧಿಕಾರವೂ ರಾಷ್ಟ್ರಪತಿಯವರದ್ದೇ ಆಗಿದೆ. ಆದರೆ, ಪ್ರಧಾನಿಯನ್ನು ಒಳಗೊಂಡ ಕೇಂದ್ರ ಸಚಿವ ಸಂಪುಟವು ಈ ಬಗ್ಗೆ ನಿರ್ಧಾರ ತಳೆದು, ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸಿದರೆ ಮಾತ್ರವೇ ರಾಷ್ಟ್ರಪತಿಯು ತುರ್ತು ಪರಿಸ್ಥಿತಿಗೆ ಸಂಬಂಧಪಟ್ಟ ಘೋಷಣೆ ಮಾಡಬಹುದಾಗಿದೆ. ಆಗ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿಡಲಾಗುತ್ತದೆ. ದೇಶದಲ್ಲಿ ಇದುವರೆಗೆ ಮೂರು ಬಾರಿ (1962ರ ಭಾರತ–ಚೀನಾ ಯುದ್ಧದ ಸಂದರ್ಭದಲ್ಲಿ ಮತ್ತು 1971ರ ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಮತ್ತು 1975ರಲ್ಲಿ) ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಾಗಿದೆ.

356ನೇ ವಿಧಿಯ ಪ್ರಕಾರ, ಯಾವುದೇ ರಾಜ್ಯ ಸರ್ಕಾರ ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ ಆಡಳಿತ ನಡೆಸಲು ವಿಫಲವಾಗಿದೆ ಎಂದು ರಾಜ್ಯಪಾಲರು ವರದಿ ಸಲ್ಲಿಸಿದರೆ, ಅದರ ಆಧಾರದ ಮೇಲೆ ರಾಷ್ಟ್ರಪತಿಯು ರಾಜ್ಯ ಸರ್ಕಾರವನ್ನು ವಜಾಗೊಳಿಸಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ತುರ್ತು ಪರಿಸ್ಥಿತಿ ಘೋಷಣೆ ಮಾಡಬಹುದು. ದೇಶದ ಅನೇಕ ರಾಜ್ಯಗಳಲ್ಲಿ ಅನೇಕ ಬಾರಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ.

ADVERTISEMENT

360ನೇ ವಿಧಿಯ ಅನ್ವಯ ರಾಷ್ಟ್ರಪತಿಯು ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿಯನ್ನೂ ಘೋಷಿಸಬಹುದಾಗಿದೆ. ರಾಷ್ಟ್ರಪತಿಯು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನೌಕರರಿಗೆ (ನ್ಯಾಯಮೂರ್ತಿಗಳೂ ಸೇರಿದಂತೆ) ಸಂಬಳ ಮತ್ತು ಭತ್ಯೆಗಳನ್ನು ಕಡಿತಗೊಳಿಸುವಂತೆ ನಿರ್ದೇಶನ ನೀಡುತ್ತಾರೆ. ದೇಶವು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದರೆ, ಇದನ್ನು ಜಾರಿ ಮಾಡಬಹುದು. ದೇಶದಲ್ಲಿ ಇದುವರೆಗೆ ಒಮ್ಮೆಯೂ ಆರ್ಥಿಕ ತುರ್ತುಪರಿಸ್ಥಿತಿ ಜಾರಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.