ನಕ್ಸಲ್ ಮುಖಂಡ ನಂಬಾಲ ಕೇಶವರಾವ್ ಅಲಿಯಾಸ್ ಬಸವರಾಜು ಅವರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿರುವುದನ್ನು ಐತಿಹಾಸಿಕ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ. ‘ನಕ್ಸಲ್ ಮುಕ್ತ ಭಾರತ’ದ ತಮ್ಮ ಗುರಿಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ. 2026ರ ಮಾರ್ಚ್ ಒಳಗೆ ‘ಎಡಪಂಥೀಯ ತೀವ್ರಗಾಮಿ’ಗಳನ್ನು ನಿರ್ಮೂಲನೆ ಮಾಡಬೇಕು ಎನ್ನುವುದು ಕೇಂದ್ರದ ಸಂಕಲ್ಪ. ಈ ದಿಸೆಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದೆ ಎನ್ನಲಾಗುತ್ತಿದೆ. ಒಂದೆಡೆ ಭದ್ರತಾ ಪಡೆಗಳ ತೀವ್ರ ಕ್ರಮ, ಅಭಿವೃದ್ಧಿ ಕಾರ್ಯಕ್ರಮಗಳು; ಮತ್ತೊಂದೆಡೆ ಹಿರಿಯ ನಾಯಕರ ಕೊರತೆ, ಕ್ಷೀಣಿಸುತ್ತಿರುವ ಜನಬೆಂಬಲದಿಂದ ನಕ್ಸಲ್ ಚಳವಳಿಯ ಬಲ ತೀವ್ರವಾಗಿ ಕುಗ್ಗಿದ್ದು, ಅದರ ಅಂತ್ಯ ಸಮೀಪಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸಿಪಿಐ (ಮಾವೋವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿ ಬಸವರಾಜು ಹಾಗೂ ಇತರ 26 ನಕ್ಸಲರ ಎನ್‌ಕೌಂಟರ್ ನಂತರ ಭದ್ರತಾ ಪಡೆಗಳು ಮತ್ತಷ್ಟು ಚುರುಕಾಗಿವೆ. ನಕ್ಸಲರನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರವು 2026ರ ಮಾರ್ಚ್ 31ರ ಗಡುವು ನಿಗದಿಪಡಿಸಿದ್ದು, ಗಡುವು ಮುಟ್ಟುವ ವಿಶ್ವಾಸದೊಂದಿಗೆ ಹೊಸ ಕಾರ್ಯತಂತ್ರ ರೂಪಿಸುತ್ತಿವೆ. ಈ ಕಾರ್ಯಕ್ಕಾಗಿ 1.5 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರು ವಿವಿಧ ರಾಜ್ಯಗಳ ನಕ್ಸಲ್‌ಪೀಡಿತ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
1967ರಲ್ಲಿ ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಎಂಬಲ್ಲಿ, ಮಾವೋವಾದಿ ಚಿಂತನೆಯ ಪ್ರಭಾವದಿಂದ ಕೆಲವು ಕಮ್ಯುನಿಸ್ಟ್ ಮುಖಂಡರು ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಹೋರಾಟ ಮುಂದೆ ನಕ್ಸಲ್ ಹೋರಾಟ ಎಂದೇ ಖ್ಯಾತಿ ಪಡೆಯಿತು. ಶೋಷಕರನ್ನು ಎದುರಿಸಲು ಶಸ್ತ್ರಸಜ್ಜಿತ ಹೋರಾಟ ಅನಿವಾರ್ಯ ಎನ್ನುವುದು ಈ ಗುಂಪಿನ ನಂಬಿಕೆಯಾಗಿತ್ತು. ಪಶ್ಚಿಮ ಬಂಗಾಳದ ಜತೆಗೆ, ಅವಿಭಜಿತ ಆಂಧ್ರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸಗಢ, ಬಿಹಾರ ಮುಂತಾದ ರಾಜ್ಯಗಳಿಗೆ ಚಳವಳಿ ಹರಡಿತು. ನಕ್ಸಲೀಯರ ಪ್ರಭಾವ ಇರುವ ಪ್ರದೇಶಗಳನ್ನು ಸರ್ಕಾರವು ‘ಕೆಂಪು ಕಾರಿಡಾರ್’ ಎಂದೇ ಗುರುತಿಸತೊಡಗಿತು. ನಕ್ಸಲೀಯರನ್ನು ‘ಎಡಪಂಥೀಯ ತೀವ್ರಗಾಮಿ’ಗಳು (ಎಲ್‌ಡಬ್ಲ್ಯುಇ) ಎಂದು ಕರೆದು, ಅವರನ್ನು ಪೊಲೀಸರು, ಭದ್ರತಾ ಪಡೆಗಳ ಮೂಲಕ ದಮನ ಮಾಡಲು ಆರಂಭಿಸಿತು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಕ್ಸಲರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿತು. ಅದಕ್ಕಾಗಿ ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ ಮುಂತಾದ ಪಡೆಗಳನ್ನು ಬಳಸತೊಡಗಿತು.
ಹೀಗೆ ಕೇಂದ್ರ ಸಶಸ್ತ್ರ ಪಡೆಗಳ ನೆರವು, ರಾಜ್ಯ ಪೊಲೀಸ್ ವ್ಯವಸ್ಥೆಯ ಆಧುನೀಕರಣ, ರಸ್ತೆ ನಿರ್ಮಾಣ, ಟೆಲಿಕಮ್ಯುನಿಕೇಷನ್ ವ್ಯವಸ್ಥೆ ಬಲಪಡಿಸುವ ಮೂಲಕ ನಕ್ಸಲರ ಸಂಖ್ಯೆ ಮತ್ತು ಪ್ರಭಾವ ತಗ್ಗುವಂತೆ ನೋಡಿಕೊಳ್ಳಲಾಗಿದೆ; ನಕ್ಸಲ್ ಮುಕ್ತ ಭಾರತ ಅಭಿಯಾನ ಆರಂಭಿಸಿ, ಅದರ ಮೂಲಕ ರೆಡ್ ಕಾರಿಡಾರ್ ಅನ್ನು ಅಭಿವೃದ್ಧಿಯ ಕಾರಿಡಾರ್ ಆಗಿ ರೂಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಪ್ರತಿಪಾದಿಸಿದ್ದು, ಈ ಸಂಬಂಧದ ಅಂಕಿಅಂಶ ಬಿಡುಗಡೆ ಮಾಡಿದೆ.
ನಕ್ಸಲಿಸಂ ಎನ್ನುವುದನ್ನು ಒಂದು ಹೋರಾಟ, ಚಳವಳಿ ಎಂದೇ ಬಹುಕಾಲದವರೆಗೆ ಜನರೂ, ಸರ್ಕಾರಗಳೂ ನಂಬಿದ್ದವು. ನಕ್ಸಲರ ಆಶಯಗಳು ಸಮರ್ಥನೀಯವಾದರೂ ಅವರು ತಮ್ಮ ಗುರಿ ಸಾಧನೆಗೆ ಹಿಂಸಾಮಾರ್ಗ ಅನುಸರಿಸುವುದು ಸರಿಯಲ್ಲ ಎನ್ನುವುದು ಹೆಚ್ಚಿನವರ ಅಭಿಪ್ರಾಯವಾಗಿತ್ತು. ಹೀಗಾಗಿ ನಕ್ಸಲರನ್ನು ನಿರ್ಮೂಲನೆ ಮಾಡಲೇಬೇಕು ಎನ್ನುವ ಉದ್ದೇಶವನ್ನು ಸರ್ಕಾರಗಳು ಹೊಂದಿರಲಿಲ್ಲ; ಅವರನ್ನು ಮುಖ್ಯವಾಹಿನಿಗೆ ಕರೆದುಕೊಂಡು ಬರಬೇಕು ಎನ್ನುವ ಆಶಯದೊಂದಿಗೆ ಅವರೊಂದಿಗೆ ಮಾತುಕತೆ ನಡೆಸಿದ ನಿದರ್ಶನಗಳೂ ಹೇರಳವಾಗಿವೆ. ಆದರೆ, ನಕ್ಸಲರು ಹಿಂಸಾಚಾರಕ್ಕೆ ಇಳಿದಾಗ, ಪೊಲೀಸ್ ಅಧಿಕಾರಿಗಳು ಮತ್ತಿತರರ ಹತ್ಯೆ ಮಾಡಿದಾಗ ಕಾಲದಿಂದ ಕಾಲಕ್ಕೆ ಅದಕ್ಕೆ ತಕ್ಕ ಪ್ರತ್ಯುತ್ತರವನ್ನೂ ನೀಡಲಾಗುತ್ತಿತ್ತು.
ಕೊಡಗಿನಲ್ಲಿ ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ಕಾರ್ಯಾಚರಣೆ
ಆದರೆ, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಕ್ಸಲರನ್ನು ನಿರ್ಮೂಲನೆ ಮಾಡಬೇಕೆಂದು ಪಣ ತೊಟ್ಟಿತು. ನಕ್ಸಲರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎನ್ನುವ ನಿಲುವು ತಳೆಯಲಾಯಿತು. ಶರಣಾದ ನಕ್ಸಲರ ಪುನರ್ವಸತಿಗೆ ನೀಡುತ್ತಿದ್ದ ಹಣ ಕಡಿತಗೊಳಿಸಲಾಯಿತು. ಎಲ್ಲಕ್ಕಿಂತ ಹೆಚ್ಚಾಗಿ, ಭದ್ರತಾ ಪಡೆಗಳನ್ನು ಬಳಸಿ, ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಯಿತು.
ಕೇಂದ್ರ ಸರ್ಕಾರವು ಇತ್ತೀಚೆಗೆ ನಕ್ಸಲರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ ಕಾರಣ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್ ಮುಖಂಡ ಕೆ.ಚಂದ್ರಶೇಖರ ರಾವ್ ಅವರು ನಕ್ಸಲರ ವಿರುದ್ಧದ ‘ಆಪರೇಷನ್ ಕಗಾರ್’ ಅನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದರು. ನಕ್ಸಲರಲ್ಲಿ ಹೆಚ್ಚಿನವರು ಬಡವರು, ಶೋಷಿತರು, ಆದಿವಾಸಿಗಳು ಮತ್ತು ಗುಡ್ಡಗಾಡು ಜನ ಇದ್ದು, ಎನ್‌ಕೌಂಟರ್‌ಗಳ ಹೆಸರಲ್ಲಿ ಕೇಂದ್ರವು ಅವರನ್ನು ಕೊಲ್ಲುತ್ತಿದೆ ಎಂದು ಆರೋಪಿಸಿದ್ದರು. ಅವರನ್ನು ಕರೆದು ಮಾತುಕತೆ ನಡೆಸಬೇಕು ಎಂದಿದ್ದರು. ಹಲವು ಸಂಘಟನೆಗಳು ಕೂಡ ಇದೇ ಮನವಿಯನ್ನು ಕೇಂದ್ರದ ಮುಂದಿಟ್ಟಿವೆ.
ನಕ್ಸಲ್ ಚಳವಳಿಯ ಬಹುತೇಕ ನಾಯಕರು ಒಂದೋ ವಯಸ್ಸಿನ ಕಾರಣಕ್ಕೆ ನಿವೃತ್ತರಾಗಿದ್ದಾರೆ ಇಲ್ಲವೇ ಪೊಲೀಸರಿಂದ ಹತರಾಗಿದ್ದಾರೆ. ಉಳಿದ ನಾಯಕರು ಮತ್ತು ಕೇಡರ್‌ಗಳಿಗೆ ತಮ್ಮ ಜೀವಗಳನ್ನು ರಕ್ಷಣೆ ಮಾಡಿಕೊಳ್ಳುವುದೇ ಸವಾಲಾಗಿದೆ. ಜತೆಗೆ, ಅವರಿಗೆ ಜನಬೆಂಬಲ ಸಿಗುವುದೂ ಕ್ಲಿಷ್ಟಕರ ಎನ್ನಲಾಗುತ್ತಿದೆ. ತೆಲಂಗಾಣ–ಛತ್ತೀಸಗಢ ಗಡಿಯಲ್ಲಿರುವ ಕರ್‍ರೆಗುಟ್ಟ ಬೆಟ್ಟದಂಥ ಅವರ ನೂರಾರು ಅಡಗುದಾಣಗಳು ಪೊಲೀಸರ ಕೈವಶವಾಗಿವೆ. ಅನೇಕರು ಶಸ್ತಾಸ್ತ್ರ ತೊರೆದು ಶರಣಾಗುವ ಮೂಲಕ ಮುಖ್ಯವಾಹಿನಿಗೆ ಬಂದಿದ್ದಾರೆ. ಹೀಗಾಗಿ 60 ವರ್ಷಗಳ ನಕ್ಸಲ್ ಚಳವಳಿಯ ಅಂತ್ಯ ಸನ್ನಿಹಿತವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ತೆಲುಗರ ಪ್ರಾಬಲ್ಯ
ಅವಿಭಜಿತ ಆಂಧ್ರಪ್ರದೇಶವು ಹಿಂದೊಮ್ಮೆ ನಕ್ಸಲ್ ಚಳವಳಿಯ ಮುಖ್ಯ ನೆಲೆಯಾಗಿತ್ತು. ಆಂಧ್ರದ ಅನೇಕ ಹಳ್ಳಿಗಳಲ್ಲಿ ಅವರ ಬೆಂಬಲಿಗರಿದ್ದರು. ಆಂಧ್ರ ಮೂಲದ ನಕ್ಸಲ್ ನಾಯಕರು ಸಿಪಿಎಂ (ಮಾವೋವಾದಿ) ಪಕ್ಷದ ಅತ್ಯುನ್ನತ ಸ್ಥಾನಗಳಿಗೆ ಏರಿದ್ದರು.
2021ರ ಗುಪ್ತಚರ ವರದಿಯೊಂದರ ಪ್ರಕಾರ, 21 ಮಂದಿ ಸದಸ್ಯ ಬಲದ ಪಕ್ಷದ ಕೇಂದ್ರ ಸಮಿತಿಯಲ್ಲಿ 10 ಮಂದಿ ತೆಲಂಗಾಣದವರಿದ್ದರೆ, ಇಬ್ಬರು ಆಂಧ್ರದವರಿದ್ದರು. ಅವರ ಪೈಕಿ ಅನೇಕರು ಸ್ನಾತಕೋತ್ತರ ಪದವೀಧರರು, ಎಂಜಿನಿಯರ್‌ಗಳು, ಶಿಕ್ಷಕರು ಇದ್ದರು. ಅವರಲ್ಲಿ, ಚೆರುಕೂರಿ ರಾಜಕುಮಾರ್ ಅಲಿಯಾಸ್ ಆಜಾದ್, ಮಲ್ಲೋಜುಲ ಕೋಟೇಶ್ವರ ರಾವ್ ಅಲಿಯಾಸ್ ಕಿಶನ್‌ಜಿ, ನಂಬಾಲ ಕೇಶವರಾವ್ ಅಲಿಯಾಸ್ ಬಸವರಾಜ್, ಅಕ್ಕಿರಾಜು ಹರಗೋಪಾಲ್ ಅಲಿಯಾಸ್ ಆರ್‌ಕೆ, ಮಲ್ಲಾ ರಾಜಿರೆಡ್ಡಿ ಅಲಿಯಾಸ್ ಸತ್ತೆನ್ನ, ಕೋಬಾಡ್ ಗಾಂಧಿ ಅಲಿಯಾಸ್ ಸಲೀಂ ಪ್ರಮುಖರಾಗಿದ್ದಾರೆ. ದಶಕಗಳ ಕಾಲ ದೇಶದ ನಕ್ಸಲ್ ಚಳವಳಿಯ ನಾಯಕತ್ವ ವಹಿಸಿದ್ದ ಮುಪ್ಪಾಲ ಲಕ್ಷ್ಮಣರಾವ್ ಅಲಿಯಾಸ್ ಗಣಪತಿ ಕೂಡ ತೆಲಂಗಾಣದವರೇ.
ಕರೀಂನಗರದಲ್ಲಿ ಶಿಕ್ಷಕರಾಗಿದ್ದ ಗಣಪತಿ ನಂತರ ನಕ್ಸಲರಾಗಿ ಬದಲಾಗಿದ್ದರು. ವಯೋಸಹಜ ಕಾಯಿಲೆಗಳಿಂದ ಅವರು 2018ರಲ್ಲಿ ನೇಪಥ್ಯಕ್ಕೆ ಸರಿದರು ಎನ್ನಲಾಗಿದ್ದು, ಅವರ ಸ್ಥಾನವನ್ನು ಎರಡು ದಿನಗಳ ಹಿಂದೆ ಎನ್‌ಕೌಂಟರ್ ಆದ ಬಸವರಾಜು ತುಂಬಿದ್ದರು ಎನ್ನಲಾಗಿದೆ.
ಕೇಂದ್ರದ ವಿವಿಧ ಯೋಜನೆಗಳು
ಭದ್ರತಾ ವೆಚ್ಚ ಯೋಜನೆ (ಎಸ್‌ಆರ್‌ಇ): 2014–15ರಿಂದ 2024–25ರವರೆಗೆ ₹3260 ಕೋಟಿ ಬಿಡುಗಡೆ
ಎಲ್‌ಡಬ್ಲ್ಯುಇ ಜಿಲ್ಲೆಗಳಿಗೆ ಕೇಂದ್ರದ ವಿಶೇಷ ನೆರವು ಯೋಜನೆ (ಎಸ್‌ಸಿಎ): 2017ರಿಂದ ₹3563 ಕೋಟಿ ಬಿಡುಗಡೆ
ವಿಶೇಷ ಮೂಲಸೌಕರ್ಯ ಯೋಜನೆ (ಎಸ್‌ಐಎಸ್): ₹1741 ಕೋಟಿ ಬಿಡುಗಡೆ
ಎಲ್‌ಡಬ್ಲ್ಯುಇ ನಿರ್ವಹಣೆಗಾಗಿ ಕೇಂದ್ರೀಯ ಸಂಸ್ಥೆಗಳಿಗೆ ನೆರವು ಯೋಜನೆ: 2014–15ರಿಂದ 2024–25ರವರೆಗೆ ₹1120 ಕೋಟಿ ಬಿಡುಗಡೆ
ನಾಗರಿಕ ಕ್ರಿಯಾ ಯೋಜನೆ (ಸಿಎಪಿ): 196 ಕೋಟಿ
ಎಲ್‌ಡಬ್ಲ್ಯುಇ ಜಿಲ್ಲೆಗಳಲ್ಲಿ 17,589 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದ್ದು, ಈ ಪೈಕಿ 14, 618 ಕಿ.ಮೀ ಪೂರ್ಣ
ಮೊಬೈಲ್ ಸಂಪರ್ಕ ಯೋಜನೆಯ ಭಾಗವಾಗಿ 10,505 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಯೋಜನೆ; 7,768 ಟವರ್ ಸ್ಥಾಪನೆ ಪೂರ್ಣ
30 ಜಿಲ್ಲೆಗಳಲ್ಲಿ 1007 ಬ್ಯಾಂಕ್ ಶಾಖೆಗಳನ್ನು ಆರಂಭಿಸಲಾಗಿದ್ದು, 937 ಎಟಿಎಂ, 5,731 ಪೋಸ್ಟ್ ಆಫೀಸ್‌ಗಳನ್ನು ತೆರೆಯಲಾಗಿದೆ
48 ಐಟಿಐ, 61 ಕೌಶಾಲಾಭಿವೃದ್ಧಿ ಕೇಂದ್ರಗಳ ಸ್ಥಾಪನೆ
ತೀವ್ರ ಪ್ರಭಾವ ಇರುವ ಜಿಲ್ಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ₹30 ಕೋಟಿ ವಿಶೇಷ ಪ್ಯಾಕೇಜ್
ನಕ್ಸಲ್ ಆತಂಕದ ಜಿಲ್ಲೆಗಳಿಗೆ ₹10 ಕೋಟಿ ವಿಶೇಷ ಪ್ಯಾಕೇಜ್
ಅಂಕಿ ಅಂಶ
197: ಕಳೆದ ನಾಲ್ಕು ತಿಂಗಳಲ್ಲಿ ಪೊಲೀಸರಿಂದ ಹತರಾದ ನಕ್ಸಲರು
8,000: ಕಳೆದ 10 ವರ್ಷದಲ್ಲಿ ಎನ್‌ಕೌಂಟರ್‌ಗಳಲ್ಲಿ ಸತ್ತ ನಕ್ಸಲರ ಸಂಖ್ಯೆ
928: 2024ರಲ್ಲಿ ಶರಣಾದ ನಕ್ಸಲರ ಸಂಖ್ಯೆ
718: 2025ರ ನಾಲ್ಕು ತಿಂಗಳಲ್ಲಿ ಶರಣಾದ ನಕ್ಸಲರ ಸಂಖ್ಯೆ
ಆಧಾರ: ಪಿಟಿಐ, ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ, ಸಂಸತ್ ಟಿವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.