ಮಾರಿಯಾ ಕೊರಿನಾ ಮಚಾದೊ
ಟ್ರಂಪ್ ಅವರ ಪ್ರಬಲ ‘ಸ್ಪರ್ಧೆ’ಯನ್ನೂ ಮೀರಿ ಮಾರಿಯಾ ಕೊರಿನಾ ಮಚಾದೊ ಅವರು ಪ್ರಶಸ್ತಿಗೆ ಆಯ್ಕೆಯಾದರು. ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ನೊಬೆಲ್ ಶಾಂತಿ ಪ್ರಶಸ್ತಿಯ 143 ಪುರಸ್ಕೃತರ ಪೈಕಿ ಮಾರಿಯಾ 20ನೇ ಮಹಿಳೆ.
ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯ ಬಗ್ಗೆ ಜನ ಉತ್ಕಂಠಿತರಾಗಿದ್ದರು. ‘ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ’ ಎನ್ನುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶಾಂತಿ ಪ್ರಶಸ್ತಿ ತನಗೇ ಸಲ್ಲಬೇಕು ಎಂದು ನೇರವಾಗಿಯೇ ಪ್ರತಿಪಾದಿಸಿದ್ದರು. ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೊಡರ್ ರೂಸ್‌ವೆಲ್ಟ್, ವುಡ್ರೋ ವಿಲ್ಸನ್, ಜಿಮ್ಮಿ ಕಾರ್ಟರ್, ಬರಾಕ್ ಒಬಾಮ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದ ಇತಿಹಾಸ ಅವರ ಕಣ್ಣಮುಂದಿತ್ತು. ಟ್ರಂಪ್ ಅವರ ಹೆಸರು ಘೋಷಣೆಯೊಂದೇ ಬಾಕಿ ಎನ್ನುವಷ್ಟು ತೀವ್ರವಾಗಿತ್ತು ಅವರ ಮತ್ತು ಬೆಂಬಲಿಗರ ವಕಾಲತ್ತು.
ನಾರ್ವೆಯ ನೊಬೆಲ್ ಸಮಿತಿಯು ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಿಸಿದಾಗ ಅಚ್ಚರಿ ಕಾದಿತ್ತು. ಟ್ರಂಪ್ ಅವರ ಪ್ರಬಲ ‘ಸ್ಪರ್ಧೆ’ಯನ್ನೂ ಮೀರಿ ಮಾರಿಯಾ ಕೊರಿನಾ ಮಚಾದೊ ಅವರು ಪ್ರಶಸ್ತಿಗೆ ಆಯ್ಕೆಯಾದರು. ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ನೊಬೆಲ್ ಶಾಂತಿ ಪ್ರಶಸ್ತಿಯ 143 ಪುರಸ್ಕೃತರ ಪೈಕಿ ಮಾರಿಯಾ 20ನೇ ಮಹಿಳೆ. ವಿಶ್ವದ ‘ದೊಡ್ಡಣ್ಣ’ನ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಜಗತ್ತನ್ನೇ ತನ್ನ ಅಂಕೆಗೆ ತಕ್ಕಂತೆ ಕುಣಿಸಲು ಹೊರಟಿರುವ, ಅಧಿಕಾರ, ಪೌರುಷದ ಪ್ರತೀಕದಂತಿರುವ ಟ್ರಂಪ್ ಅವರ ಬದಲಿಗೆ ಮಹಿಳೆಯೊಬ್ಬರಿಗೆ ಪ್ರಶಸ್ತಿ ದಕ್ಕಿದ್ದನ್ನು ಅನೇಕರು ಸ್ವಾಗತಿಸಿದರು.
ಮಾರಿಯಾ ಕೊರಿನಾ ಮಚಾದೊ, ವೆನೆಜುವೆಲಾದ ವಿರೋಧ ಪಕ್ಷವಾದ ‘ವೆಂಟೆ ವೆನೆಜುವೆಲಾ’ ನಾಯಕಿ; ಉಕ್ಕಿನ ಮಹಿಳೆ ಎಂದೇ ಅಲ್ಲಿ ಪ್ರಸಿದ್ಧರಾಗಿರುವವರು. ಸರ್ವಾಧಿಕಾರದ ಕಬಂಧ ಬಾಹುಗಳ ಹಿಡಿತ ಬಿಗಿಯಾಗುತ್ತಿರುವ ಕಾಲದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಹೋರಾಡುತ್ತಿರುವುರಿಂದ ಮಾರಿಯಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್ ಸಮಿತಿ ಹೇಳಿದೆ.
ಕರಾಕಸ್‌ನ ಪ್ರತಿಷ್ಠಿತ ಕೈಗಾರಿಕೋದ್ಯಮಿಯ ಕುಟುಂಬದಲ್ಲಿ ಹಿರಿಯ ಮಗಳಾಗಿ ಜನಿಸಿದ (1967) ಮಾರಿಯಾ, ಮೊದಲು ಕರಾಕಸ್‌ನ ಕ್ಯಾಥೋಲಿಕ್ ಗರ್ಲ್ಸ್ ಸ್ಕೂಲ್ ಮತ್ತು ನಂತರ ಮೆಸಾಚುಸೆಟ್ಸ್‌ನ ವೆಲ್ಲೆಸ್ಲಿ ಬೋರ್ಡಿಂಗ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು. ಎಂಜಿನಿಯರಿಂಗ್ ಮತ್ತು ಹಣಕಾಸು ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದು, ಅಲ್ಪಕಾಲ ತಮ್ಮ ಕುಟುಂಬದ ಉಕ್ಕಿನ ಉದ್ಯಮದಲ್ಲಿ ಕೆಲಸ ಮಾಡಿದರು.
ಅದು ವೆನೆಜುವೆಲಾ ತೀವ್ರವಾದ ಪಲ್ಲಟಗಳಿಗೆ ಸಾಕ್ಷಿಯಾಗುತ್ತಿದ್ದ ಕಾಲ. ಎಡಪಂಥೀಯರಾಗಿದ್ದ ಹುಗೋ ಚಾವೇಸ್, 1998ರಲ್ಲಿ ಅಧಿಕಾರಕ್ಕೇರಿದ ನಂತರ ಸಮಾಜವಾದದ ಪ್ರಯೋಗಗಳಿಗೆ ದೇಶವನ್ನು ಒಡ್ಡಿ, ಮಹತ್ವದ ಬದಲಾವಣೆಗಳಿಗೆ ನಾಂದಿ ಹಾಡಿದ್ದರು. ಅದರಿಂದ ಸಮಸ್ಯೆಗಳು ಬಹುಮಟ್ಟಿಗೆ ಪರಿಹಾರವಾದವಲ್ಲದೇ, ದೇಶವು ಆರ್ಥಿಕವಾಗಿಯೂ ಬೆಳವಣಿಗೆ ಕಂಡಿತು. ಜತೆಯಲ್ಲೇ, ಚಾವೇಸ್ ಸರ್ವಾಧಿಕಾರಿ ಧೋರಣೆಯನ್ನು ರೂಢಿಸಿಕೊಂಡರು.
2002ರಲ್ಲಿ ‘ಸುಮಾಟೆ’ ಎನ್ನುವ ಸರ್ಕಾರೇತರ ಸಂಸ್ಥೆಯನ್ನು ಆರಂಭಿಸುವ ಮೂಲಕ ಮಾರಿಯಾ ಸಾರ್ವಜನಿಕ ಜೀವನ ಪ್ರವೇಶಿಸಿದರು. ಅಧ್ಯಕ್ಷ ಹುಗೋ ಚಾವೇಸ್ ನೇತೃತ್ವದ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದರು. ಚುನಾವಣಾ ವ್ಯವಸ್ಥೆಯ ಸುಧಾರಣೆ ಮಾಡುವ ದಿಸೆಯಲ್ಲಿ ಸಂಸ್ಥೆ ಕಾರ್ಯನಿರ್ವಹಿಸತೊಡಗಿತು. ಇದೇ ಅವಧಿಯಲ್ಲಿ ಅವರು ಚಾವೇಸ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಪ್ರಯತ್ನ ನಡೆಸಿದರಾದರೂ, ಅದು ಕೈಗೂಡಲಿಲ್ಲ.
ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಅಧ್ಯಕ್ಷ ಹುಗೋ ಚಾವೇಸ್, 2010ರಲ್ಲಿ ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡಿದರು. ಪರಿಣಾಮವಾಗಿ, ಮಾರಿಯಾ ಕುಟುಂಬದ ಒಡೆತನದಲ್ಲಿದ್ದ ದೇಶದಲ್ಲಿಯೇ ಅತಿ ಹೆಚ್ಚು ಉಕ್ಕು ಉತ್ಪಾದನೆ ಮಾಡುತ್ತಿದ್ದ ಸಿವೆನ್ಸಾ ಕಂಪನಿ ಭಾಗಶಃ ಸರ್ಕಾರದ ಪಾಲಾಯಿತು. ‘ರಾಷ್ಟ್ರೀಕರಣ ಎಂದರೆ, ಒಂದು ರೀತಿಯ ದರೋಡೆ’ ಎಂದೇ ಭಾವಿಸಿದ್ದ ಮಾರಿಯಾ, ಅದನ್ನು ನ್ಯಾಷನಲ್ ಅಸೆಂಬ್ಲಿಯಲ್ಲಿ ಚಾವೇಸ್ ಅವರಿಗೇ ಹೇಳಿದ್ದರು.
‘ಸುಮಾಟೆ’ಯು ಅಧ್ಯಕ್ಷರ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿತು. ಚಾವೇಸ್ ಬೆಂಬಲಿಗರಿಂದ ಮಾರಿಯಾ ಕುಟುಂಬಸ್ಥರು ಜೀವಬೆದರಿಕೆಗಳನ್ನೂ ಎದುರಿಸಬೇಕಾಯಿತು. ವಕೀಲರೊಬ್ಬರನ್ನು ಮದುವೆಯಾಗಿ ಮೂರು ಮಕ್ಕಳ ತಾಯಿಯಾಗಿದ್ದ ಮಾರಿಯಾ, ಬೆದರಿಕೆಯ ಕಾರಣಕ್ಕೆ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿದರು. 2010ರಲ್ಲಿ ದೇಶದಲ್ಲಿಯೇ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ನ್ಯಾಷನಲ್ ಅಸೆಂಬ್ಲಿಗೆ ಆರಿಸಿ ಬಂದರು.
ಚಾವೇಸ್ ಕ್ಯಾನ್ಸರ್‌ಗೆ ಒಳಗಾಗಿ ಸಾವಿಗೀಡಾದ ನಂತರ ಉತ್ತರಾಧಿಕಾರಿಯಾಗಿ ದೇಶದ ಅಧ್ಯಕ್ಷ ಸ್ಥಾನಕ್ಕೇರಿದವರು ನಿಕೋಲಸ್ ಮಡುರೊ. ಸರ್ವಾಧಿಕಾರದ ಪಟ್ಟುಗಳನ್ನು ಮತ್ತಷ್ಟು ಬಿಗಿಗೊಳಿಸಿದ ಮಡುರೊ, ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಮಾರಿಯಾ ಅವರೂ ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಸರ್ವಪ್ರಯತ್ನ ಮಾಡಿದರೂ, ಅಂದಿನಿಂದಲೂ ಮಡುರೊ ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಮಡುರೊ ಮೂರು ಬಾರಿ ಚುನಾವಣೆಯನ್ನು (2013, 20118 ಮತ್ತು 2024) ಎದುರಿಸಿದ್ದು, ಪ್ರತಿ ಚುನಾವಣೆಯನ್ನೂ ಅಕ್ರಮವಾಗಿಯೇ ಗೆಲ್ಲುತ್ತಿದ್ದಾರೆ ಎಂದು ಮಾರಿಯಾ ದೇಶದ ಒಳಗೆ ಮತ್ತು ಹೊರಗೆ ಅದರ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದಾರೆ.
ವಿವಿಧ ಗುಂಪುಗಳಲ್ಲಿ ಹಂಚಿಹೋಗಿದ್ದ ವೆನೆಜುವೆಲಾದ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿ, ಅದರಲ್ಲಿ ಒಂದಿಷ್ಟು ಯಶಸ್ಸನ್ನೂ ಕಂಡರು. ದೇಶದಲ್ಲಿ ಸರ್ವಾಧಿಕಾರ ಅಂತ್ಯಗೊಳಿಸಿ, ಪ್ರಜಾಪ್ರಭುತ್ವ ತರುವುದು ತಮ್ಮ ಧ್ಯೇಯ ಎಂದು ಪ್ರತಿಪಾದಿಸಿದ ಅವರು, 2023ರಲ್ಲಿ ಪಕ್ಷದ ಪದಾಧಿಕಾರಿಗಳ ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 2024ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದು ಅವರ ಗುರಿಯಾಗಿತ್ತು. ಆದರೆ, ಹಣಕಾಸು ಅವ್ಯವಹಾರ, ಅಮೆರಿಕವನ್ನು ಬೆಂಬಲಿಸಿದ್ದು ಸೇರಿದಂತೆ ಹಲವು ಆರೋಪಗಳ ಮೇರೆಗೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿತು. ಮಾರಿಯಾ ಅವರ ಪರವಾಗಿ ಎಡ್ಮಂಡೋ ಗೋನ್ಸಾಲ್ವೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದರೂ, ಮಡುರೋ ವಿರುದ್ಧ ಸೋತರು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಮಾರಿಯಾ ಮತ್ತೆ ಕೂಗೆಬ್ಬಿಸಿದರು.
ಮಡುರೊ ಸರ್ಕಾರ ಮತ್ತು ಮಾರಿಯಾ ನಡುವಿನ ಸಂಘರ್ಷ ತೀವ್ರವಾಗಿದೆ. ಎಡ್ಮಂಡೋ ದೇಶ ತೊರೆದಿದ್ದಾರೆ. ಅವರ ಬೆಂಬಲಿಗರ ಪೈಕಿ ಬಹುತೇಕರು ಜೈಲು ಸೇರಿದ್ದಾರೆ. ವೆನೆಜುವೆಲಾದಲ್ಲಿ ಮಾರಿಯಾ ಒಬ್ಬಂಟಿ ಹೋರಾಟ ಮುಂದುವರಿಸಿದ್ದಾರೆ. ಇಂಥ ಬಿಕ್ಕಟ್ಟಿನ ವೇಳೆಯಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದೆ. ಆದರೆ, ತಮಗೆ ಸಿಕ್ಕ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅರ್ಪಿಸುವ ಮೂಲಕವೂ ಅವರು ಪ್ರಶಸ್ತಿಯ ಗೌರವವನ್ನು ಕುಗ್ಗಿಸಿದ್ದಾರೆ ಎಂದು ಭಾವಿಸುವವರ ಸಂಖ್ಯೆ ದೊಡ್ಡದಾಗಿಯೇ ಇದೆ.
ಡೊನಾಲ್ಡ್ ಟ್ರಂಪ್‌ಗೆ ಪ್ರಶಸ್ತಿ ಅರ್ಪಿಸಿದ್ದು ಏಕೆ?
ಮಾರಿಯಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಂದಿರುವುದರ ಬಗ್ಗೆ ಕೆಲವು ವಲಯಗಳಲ್ಲಿ ಅಸಮಾಧಾನ, ವಿರೋಧ ವ್ಯಕ್ತವಾಗಿದೆ.
ಒಪೆಕ್ ರಾಷ್ಟ್ರಗಳಲ್ಲಿ ಒಂದಾಗಿರುವ, ಅನಿಲ ಮತ್ತು ಕಚ್ಚಾ ತೈಲಕ್ಕೆ ಹೆಸರಾಗಿರುವ ವೆನೆಜುವೆಲಾ ಮೇಲೆ ಅಮೆರಿಕ ಮೊದಲಿನಿಂದಲೂ ಕಣ್ಣಿಟ್ಟಿದೆ. ಆದರೆ, ಚಾವೇಸ್ ಅಧ್ಯಕ್ಷರಾಗಿದ್ದಾಗ ಅಮೆರಿಕ ವಿರೋಧಿ ನಿಲುವು ತಳೆದರು. ಹಾಲಿ ಅಧ್ಯಕ್ಷ ಮಡುರೊ ಕೂಡ ಅದನ್ನೇ ಮುಂದುವರಿಸುತ್ತಿದ್ದಾರೆ. ಅಮೆರಿಕವು ಹಿಂದಿನಿಂದಲೂ ವೆನೆಜುವೆಲಾ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸುತ್ತಲೇ ಬಂದಿದ್ದು, ಟ್ರಂಪ್ ಕಾಲದಲ್ಲೂ ಅದು ಮುಂದುವರಿದಿದೆ. ಆದಾಗ್ಯೂ, ಮಾರಿಯಾ ಅವರು ಬಹಿರಂಗವಾಗಿಯೇ ಟ್ರಂಪ್ ಅವರನ್ನು ಬೆಂಬಲಿಸುತ್ತಿದ್ದಾರೆ. ಟ್ರಂಪ್ ಅವರ ತೀವ್ರ ‘ಸ್ಪರ್ಧೆ’ ಎದುರಿಸಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪಾತ್ರರಾದ ಮಾರಿಯಾ, ಪ್ರಶಸ್ತಿಯನ್ನು ವೆನೆಜುವೆಲಾದ ಹೋರಾಟಗಾರರ ಜತೆಗೆ ಟ್ರಂಪ್ ಅವರಿಗೂ ಅರ್ಪಿಸಿದ್ದು ಉಲ್ಲೇಖಾರ್ಹ.
ಕಳೆದ ಕೆಲವು ವಾರಗಳಲ್ಲಿ ವೆನೆಜುವೆಲಾದ ಕರಾವಳಿ ಮೂಲಕ ಸಾಗುತ್ತಿದ್ದ ಹಡಗುಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ವೆನೆಜುವೆಲಾದ ಕನಿಷ್ಠ 27 ಮಂದಿ ಸಾವಿಗೀಡಾಗಿದ್ದರು. ಅದರ ವಿರುದ್ಧ ವೆನೆಜುವೆಲಾ ದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅವರು ಮಾದಕ ದ್ರವ್ಯ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಅಮೆರಿಕ ತನ್ನ ಕಾರ್ಯಾಚರಣೆ ಸಮರ್ಥಿಸಿಕೊಂಡಿದೆ. ಮಾರಿಯಾ ಕೂಡ ಅಮೆರಿಕದ ವಾದವನ್ನೇ ಮುಂದುವರಿಸಿ, ಟ್ರಂಪ್ ಅವರ ಕಾರ್ಯಾಚರಣೆಯನ್ನು ಬೆಂಬಲಿಸಿ ಟೀಕೆಗಳಿಗೆ ಗುರಿಯಾಗಿದ್ದಾರೆ. ವೆನೆಜುವೆಲಾ ಮೇಲೆ ಅಮೆರಿಕ ನಿರ್ಬಂಧ ಹೇರಿದ್ದನ್ನು ಅವರು ಸ್ವಾಗತಿಸಿದ್ದರು. ದೇಶದಲ್ಲಿ ಆರ್ಥಿಕತೆ ಕುಸಿದು, ಜನ ತೀವ್ರ ಬಡತನ ಅನುಭವಿಸುತ್ತಿದ್ದರೂ ಮಾರಿಯಾ ಅಮೆರಿಕ ಪರ ನಿಲುವು ಮುಂದುವರಿಸಿದ್ದಾರೆ ಎನ್ನುವ ಅಸಮಾಧಾನ ಜನರಲ್ಲಿದೆ.
ಟ್ರಂಪ್ ಅವರ ಬೆಂಬಲದಿಂದ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಮಾರಿಯಾ ಅವರ ಗುರಿ ಎನ್ನಲಾಗುತ್ತಿದೆ. ಸೇನಾ ದಾಳಿ, ಹಿಂಸೆಯ ಮೂಲಕವಾದರೂ ಸರಿ, ವೆನೆಜುವೆಲಾದ ಸರ್ಕಾರವನ್ನು ಬದಲಿಸಬೇಕು ಎನ್ನುವುದು ಅವರ ಪ್ರತಿಪಾದನೆಯಾಗಿದ್ದು, ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿರುವುದು ಸರಿ ಅಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಷನ್ಸ್ (ಸಿಎಐಆರ್) ನೊಬೆಲ್ ಸಮಿತಿಯು ಪ್ರಶಸ್ತಿಯನ್ನು ಪುನರ್ ಪರಿಶೀಲನೆ ಮಾಡಬೇಕು ಎಂದೂ ಒತ್ತಾಯಿಸಿದೆ.
ಉದಾರವಾದಿ ಆರ್ಥಿಕ ನೀತಿಗಳ ಪ್ರತಿಪಾದಕಿಯಾದ ಮಾರಿಯಾ ಅವರು, ದೇಶದ ಅನಿಲ ಮತ್ತು ತೈಲ ಉತ್ಪಾದನೆಯನ್ನು ಖಾಸಗೀಕರಣಗೊಳಿಸುವ ಇರಾದೆಯನ್ನೂ ಹೊಂದಿದ್ದಾರೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.