ADVERTISEMENT

ವಿದೇಶ ವಿದ್ಯಮಾನ | ಸರ್ವಾಧಿಕಾರಿ ನಾಡಿನಲ್ಲಿ ಉತ್ತರಾಧಿಕಾರಿ ಕುತೂಹಲ

ಕಿಮ್ ಜಾಂಗ್ ಉನ್ ಮಗಳು ಮತ್ತು ತಂಗಿ ನಡುವೆ ಶುರುವಾಗುವುದೇ ಸ್ಪರ್ಧೆ?

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 23:30 IST
Last Updated 17 ಫೆಬ್ರುವರಿ 2026, 23:30 IST
ಕಿಮ್‌ ಯೋ ಜಾಂಗ್‌
ಕಿಮ್‌ ಯೋ ಜಾಂಗ್‌   

ಉತ್ತರ ಕೊರಿಯಾದಲ್ಲಿ ಇದೇ ತಿಂಗಳ ಅಂತ್ಯಕ್ಕೆ ಆಡಳಿತ ಪ‍ಕ್ಷದ (ವರ್ಕರ್ಸ್‌ ಪಾರ್ಟಿ) ಬೃಹತ್ ಸಮಾವೇಶ ನಡೆಯಲಿದೆ. ಐದು ವರ್ಷಗಳಿಗೊಮ್ಮೆ ನಡೆಯುವ ಸಮಾವೇಶದ ಬಗ್ಗೆ ಆ ದೇಶದ ಒಳಗೆ ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಕುತೂಹಲ ಮೂಡಿದೆ. ದೇಶವನ್ನು ಆಳುತ್ತಿರುವ ಕಿಮ್ ಜಾಂಗ್ ಉನ್ ಅವರ ಮುಂದಿನ ಆದ್ಯತೆಗಳು, ಸೇನೆ, ವಿದೇಶಾಂಗ ನೀತಿ, ಆರ್ಥಿಕತೆ, ಪ್ರಮುಖ ಅಧಿಕಾರಿಗಳ ಬದಲಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಅಂದು ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ. ಅದಕ್ಕಿಂತ ಹೆಚ್ಚಿಗೆ ಅಂದು ಕಿಮ್ ಜಾಂಗ್ ಉನ್ ಅವರ ಉತ್ತರಾಧಿಕಾರಿ ಯಾರು ಎನ್ನುವ ಬಗ್ಗೆಯೂ ಘೋಷಣೆ ಹೊರಬೀಳಬಹುದು ಎನ್ನುವ ಕಾರಣಕ್ಕೆ ಅದರ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ.

ಇದುವರೆಗೆ ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೋ ಜಾಂಗ್ ಉತ್ತರಾಧಿಕಾರಿ ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಇದೀಗ ಅವರ ಮಗಳು ಕಿಮ್ ಜು ಆಯ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಇದರಿಂದ ಮುಂದೆ ಸರ್ವಾಧಿಕಾರಿಯ ನಾಡಿನಲ್ಲಿ ಪಟ್ಟಕ್ಕಾಗಿ ಪೈಪೋಟಿ, ಸ್ಪರ್ಧೆ, ಸಂಘರ್ಷ ಉಂಟಾಗಲಿದೆ ಎನ್ನುವ ವಿಶ್ಲೇಷಣೆ ಇದೆ.

ಉತ್ತರ ಕೊರಿಯಾ ಉತ್ತರಾಧಿಕಾರಿ ವಿಚಾರವನ್ನು ಮುನ್ನೆಲೆಗೆ ತಂದಿದ್ದು ದಕ್ಷಿಣ ಕೊರಿಯಾ. ಸರ್ವಾಧಿಕಾರಿಯಾದ ಕಿಮ್ ಜಾಂಗ್ ಉನ್ ಅವರು ಉತ್ತರಾಧಿಕಾರಿಯಾಗಿ ತಮ್ಮ ಹದಿಹರೆಯದ ಮಗಳಾದ ಕಿಮ್ ಜು ಆಯ್ ಅನ್ನು ನೇಮಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ರಾಷ್ಟ್ರೀಯ ಗುಪ್ತಚರ ಸಂಸ್ಥೆಯ (ಎನ್‌ಐಎಸ್‌) ಮಾಹಿತಿ ಆಧರಿಸಿ ದಕ್ಷಿಣ ಕೊರಿಯಾ ಹೇಳಿದೆ. 

ADVERTISEMENT

ಕಿಮ್‌ಗೆ ಮೂವರು ಮಕ್ಕಳಿದ್ದು, ಅವರಲ್ಲಿ ಕಿಮ್ ಜು ಆಯ್ ಮಧ್ಯದವಳು (ಉಳಿದಿಬ್ಬರು ಗಂಡು ಮಕ್ಕಳು) ಎನ್ನಲಾಗಿದೆ. ಆದರೆ, ವಾಸ್ತವವಾಗಿ ಕಿಮ್ ಜಾಂಗ್ ಉನ್‌ಗೆ ಎಷ್ಟು ಮಕ್ಕಳು ಎನ್ನುವುದರ ಬಗ್ಗೆಯಾಗಲಿ, ಈಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವ ಮಗಳ ಹೆಸರೇನು ಎನ್ನುವುದರ ಬಗ್ಗೆಯಾಗಲಿ ಅಧಿಕೃತ ಮಾಹಿತಿ ಇಲ್ಲ. ಅವಳ ಹೆಸರು ಕಿಮ್ ಜು ಆಯ್ ಇರಬಹುದು ಎನ್ನುವುದು ಒಂದು ಮೂಲದ ಮಾಹಿತಿ ಅಷ್ಟೇ. ಕಿಮ್‌ ಜಾಂಗ್ ಉನ್‌ಗೆ ಒಬ್ಬಳು ಮಗಳಿದ್ದಾಳೆ ಎನ್ನುವುದು ಬಹಿರಂಗಗೊಂಡಿದ್ದು 2013ರಲ್ಲಿ. ಉತ್ತರ ಕೊರಿಯಾ ರಾಜಧಾನಿ ಪ್ಯೊಗ್ಯಾಂಗ್‌ಗೆ ಭೇಟಿ ನೀಡಿದ್ದ ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ಡೆನ್ನಿಸ್ ರೋಡ್‌ಮನ್, ಕಿಮ್‌ ಜಾಂಗ್ ಉನ್‌ಗೆ ಒಬ್ಬ ಮಗಳಿದ್ದಾಳೆ ಎನ್ನುವುದನ್ನು ಬಹಿರಂಗಪಡಿಸಿದ್ದರು. 2022ರ ನಂತರ ಸೇನಾ ಕಾರ್ಯಕ್ರಮಗಳಲ್ಲಿ ಅಪ್ಪನ ಜತೆ ಕಾಣಿಸಿಕೊಂಡಿದ್ದಳು. ಕಳೆದ ವರ್ಷ ಸೇನಾ ಪರೇಡ್‌ನಲ್ಲಿ ಭಾಗವಹಿಸಲು ಚೀನಾಕ್ಕೆ ಭೇಟಿ ನೀಡಿದ್ದ ಅವಳು ಅಲ್ಲಿ ರಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳ ಮುಖಂಡರನ್ನು ಭೇಟಿ ಮಾಡಿದ್ದು ಸುದ್ದಿಯಾಗಿತ್ತು. ಈ ವರ್ಷದ ಜನವರಿ 1ರಂದು ಮುತ್ತಾತ, ತಾತ ಅವರ ಸಮಾಧಿ ಇರುವ ಸ್ಥಳಕ್ಕೆ ಅಪ್ಪನೊಂದಿಗೆ ಭೇಟಿ ನೀಡಿದ್ದ ಬಾಲಕಿ, ಈಗ ಅಪ್ಪನೊಂದಿಗೆ ಸಾರ್ವಜನಿಕವಾಗಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದಾಳೆ. ಸುಮಾರು 13 ವರ್ಷದ ಅವಳು ಆಡಳಿತದಲ್ಲಿ, ನೀತಿ ನಿರೂಪಣೆಯಲ್ಲಿ ಸಲಹೆ ನೀಡುತ್ತಿದ್ದು, ಅಪ್ಪನ ನಂತರ ಅಧಿಕಾರ ಹಿಡಿಯುತ್ತಾಳೆ ಎನ್ನಲಾಗುತ್ತಿದೆ.

ಕಿಮ್ ಜಾಂಗ್ ಉನ್, ಉತ್ತರ ಕೊರಿಯಾದ ವರ್ಕರ್ಸ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ, ಸೇನಾ ಪಡೆಗಳ ಸುಪ್ರೀಂ ಕಮಾಂಡರ್ ಮತ್ತು ದೇಶದ ಸರ್ವೋಚ್ಚ ನಾಯಕ. ರಕ್ತಸಿಕ್ತ ಹಾದಿಯಲ್ಲಿ 15 ವರ್ಷದ ಹಿಂದೆ ಗದ್ದುಗೆ ಹಿಡಿದ ಕಿಮ್ ಜಾಂಗ್ ಉನ್‌ ಅವರ ವಯಸ್ಸು ಈಗ 40ರ ಆಸುಪಾಸು ಇರಬಹುದು ಎನ್ನಲಾಗಿದೆ. ತನ್ನ ತಂದೆಯ ಸಾವಿನ ನಂತರ ಕಿಮ್ ಜಾಂಗ್ ಉನ್ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗ ಅವರ ವಯಸ್ಸು 26. ಯಾರನ್ನೂ ನಂಬದ, ಎಲ್ಲ ಕೆಲಸಗಳನ್ನೂ ನಿಗೂಢವಾಗಿ ಮಾಡುವ ಕಿಮ್ ಜಾಂಗ್ ಉನ್, ತನ್ನ ಹದಿಹರೆಯದ ಮಗಳನ್ನು ಉತ್ತರಾಧಿಕಾರಿಯನ್ನಾಗಿ ಈಗಲೇ ಏಕೆ ಸಜ್ಜು ಮಾಡುತ್ತಿದ್ದಾರೆ ಎನ್ನುವ ಬಗ್ಗೆಯೂ ಹಲವು ರೀತಿಯ ವಿಶ್ಲೇಷಣೆಗಳಿವೆ.  

ಆದರೆ, ತನ್ನ ಮಗಳನ್ನು ಉತ್ತರಾಧಿಕಾರಿ ಯನ್ನಾಗಿ ಮಾಡುವುದು ಕಿಮ್ ಜಾಂಗ್ ಉನ್‌ಗೆ ಸುಲಭವೇನಲ್ಲ. ಕಿಮ್ ಜಾಂಗ್ ಉನ್ ಅವರ ತಂಗಿ ಕಿಮ್ ಯೋ ಜಂಗ್ ಉತ್ತರ ಕೊರಿಯಾದಲ್ಲಿ ಎರಡನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ ಎನ್ನಲಾಗಿದೆ. ಅಣ್ಣನ ನಂತರ ತಾನೇ ಅಧಿಕಾರ ಹಿಡಿಯಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿರುವ ಅವರು, ಹಿಂಸಾಚಾರದ ಮೂಲಕವಾದರೂ ಗದ್ದುಗೆ ಹಿಡಿಯಲು ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ಇಬ್ಬರಲ್ಲಿ ಯಾರು ದೇಶದ ಮುಖ್ಯಸ್ಥರಾದರೂ, ಅವರು ಉತ್ತರ ಕೊರಿಯಾದ ಮೊದಲ ಮಹಿಳಾ ಮುಖ್ಯಸ್ಥೆಯಾಗಲಿದ್ದಾರೆ. ಕಮ್ಯುನಿಸ್ಟ್ ಆಡಳಿತದ ರಾಷ್ಟ್ರಗಳಲ್ಲಿಯೂ ಅದೊಂದು ದಾಖಲೆಯಾಗಲಿದೆ. ಆದರೆ, ಸರ್ವಾಧಿಕಾರದ ರಾಷ್ಟ್ರಗಳಲ್ಲಿ ಇದು ಹೀಗೆಯೇ ನಡೆಯುತ್ತದೆ ಎಂದು ಯಾವುದರ ಬಗ್ಗೆಯೂ ಹೇಳಲಾಗದು.

ಅಣ್ಣನ ಹಾದಿಯಲ್ಲಿ ತಂಗಿ

38 ವರ್ಷದ ಕಿಮ್‌ ಯೋ ಜಾಂಗ್‌, ಉತ್ತರ ಕೊರಿಯಾದ ಆಡಳಿತದಲ್ಲಿ ಅಣ್ಣ ಕಿಮ್‌ ಜಾಂಗ್‌ ಉನ್‌ ನಂತರ, ಎರಡನೇ ಪ್ರಭಾವಿ ನಾಯಕಿ. ಅಲ್ಲಿನ ರಾಜಕೀಯ, ಸೇನೆ ಮತ್ತು ಅಧಿಕಾರಿಶಾಹಿಯಲ್ಲಿ ಬಿಗಿ ಹಿಡಿತವನ್ನು ಹೊಂದಿದ್ದಾರೆ. ಅಪಾಯಕಾರಿ ಆಡಳಿತಗಾರ್ತಿ ಎಂಬ ಕುಖ್ಯಾತಿಯೂ ಜಾಗತಿಕವಾಗಿ ಇದೆ. ದಕ್ಷಿಣ ಕೊರಿಯಾ, ಅಮೆರಿಕ ಸೇರಿದಂತೆ ಉತ್ತರ ಕೊರಿಯಾದ ಆಡಳಿತ, ನಿಲುವನ್ನು ವಿರೋಧಿಸುತ್ತಿರುವ ರಾಷ್ಟ್ರಗಳ ಮುಖಂಡರನ್ನು ನಿರ್ಭಿಡೆಯಿಂದ ಟೀಕಿಸುತ್ತಾ ಬಂದಿರುವ ಕಿಮ್‌ ಯೋ ಅವರನ್ನು ಅಮೆರಿಕದ ಖಜಾನೆ ಇಲಾಖೆ 2017ರ ಜನವರಿಯಲ್ಲಿ ಕಪ್ಪು ಪಟ್ಟಿಗೆ ಸೇರಿಸಿತ್ತು. 

ಸದ್ಯ ಈಕೆ ಅಣ್ಣನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2011ರಲ್ಲಿ ತಂದೆ ಕಿಮ್‌ ಜಾಂಗ್‌ ಇಲ್‌ ನಿಧನರಾದಾಗ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಕಿಮ್‌ ಯೋ ಜಾಂಗ್‌, ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು 2014ರಲ್ಲಿ. ಆ ವರ್ಷ ಕಿಮ್‌ ಜಾಂಗ್‌ ಉನ್‌ ಅವರು ಅನಾರೋಗ್ಯಕ್ಕೆ ಒಳಗಾಗಿದ್ದ ವೇಳೆ ದೇಶದ ಆಡಳಿತ ನಿರ್ವಹಿಸಿದವರೂ ಇವರೇ. 2017ರಲ್ಲಿ ಇವರನ್ನು ವರ್ಕರ್ಸ್‌ ಪಾರ್ಟಿಯ ಮುಖ್ಯ ಹುದ್ದೆಗೆ ಕಿಮ್‌ ಜಾಂಗ್‌ ನೇಮಕ ಮಾಡಿದ್ದರು. ಆ ಬಳಿಕ ದೇಶದ ಆಡಳಿತದಲ್ಲಿ ಕಿಮ್‌ ಯೋ ಇನ್ನಷ್ಟು ಪ್ರಭಾವಿಯಾಗಿದ್ದಾರೆ. 

ದೇಶದ ರಾಜಕೀಯ, ಸೇನಾ ವಲಯದಲ್ಲಿ ಇವರಿಗೆ ಅಪಾರ ಬೆಂಬಲಿಗರಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಣ್ಣ ಇರುವಾಗಲೇ ಆಡಳಿತದ ಮೇಲೆ ಹಿಡಿತ ಹೊಂದಿರುವ ಕಿಮ್‌ ಯೋ ಜಾಂಗ್‌ ಅವರು,ದೇಶದ ಚುಕ್ಕಾಣಿ ಹಿಡಿಯುವ ಯಾವುದೇ ಅವಕಾಶವನ್ನು ಕೈಚೆಲ್ಲಲಾರರು ಎಂಬುದು ರಾಜತಾಂತ್ರಿಕ ತಜ್ಞರ ಅಭಿಪ್ರಾಯ. 

ಅಧಿಕಾರ ಹಸ್ತಾಂತರ ಸುಲಭವಲ್ಲ

ಉತ್ತರ ಕೊರಿಯಾದಲ್ಲಿ ಉತ್ತರಾಧಿಕಾರಿ ನೇಮಕ, ಅಧಿಕಾರ ಹಸ್ತಾಂತರ ಅಷ್ಟು ಸುಲಭವಾಗಿ ನಡೆಯದು. 2011ರಲ್ಲಿ ತಂದೆ ಮೃತಪಟ್ಟ ನಂತರ ಕಿಮ್‌ ಜಾಂಗ್‌ ಉನ್‌ ಅಧಿಕಾರ ಚುಕ್ಕಾಣಿ ಹಿಡಿಯುವಾಗಲೂ ಅವರ ಕುಟುಂಬದಲ್ಲಿ ನಾಟಕೀಯ ಬೆಳವಣಿಗೆಗಳು ನಡೆದಿದ್ದವು. 

ಅಧಿಕಾರಕ್ಕೆ ಏರಿದ ಎರಡು ವರ್ಷಗಳ ನಂತರ ತಮ್ಮ ಚಿಕ್ಕಪ್ಪ ಜಾಂಗ್‌ ಸಾಂಗ್‌ ಥೇಯಿಕ್‌ ಅವರನ್ನು ಪಕ್ಷ ವಿರೋಧಿ, ಪಕ್ಷ ವಿಭಜನೆ ಯತ್ನ, ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಿದ್ದರು. 2013ರ ಡಿಸೆಂಬರ್‌ 12ರಂದು ಅವರಿಗೆ ಮರಣದಂಡನೆಯನ್ನೂ ವಿಧಿಸಲಾಗಿತ್ತು. 

2017ರ ಫೆಬ್ರುವರಿಯಲ್ಲಿ ಕಿಮ್‌ ಜಾಂಗ್‌ ಉನ್‌ ಅವರ ಮಲಸಹೋದರ ಕಿಮ್‌ ಜಾಂಗ್‌ ನಾಮ್‌ ಅವರನ್ನು ಕ್ವಾಲಾಲಂಪುರದ ವಿಮಾನ ನಿಲ್ದಾಣದಲ್ಲಿ ಹತ್ಯೆ ಮಾಡಲಾಗಿತ್ತು. ಇಬ್ಬರು ಅಪರಿಚಿತರು ಅವರ ಮುಖಕ್ಕೆ ರಾಸಾಯನಿಕವನ್ನು ಎರಚಿದ್ದರು. ಈ ಹತ್ಯೆಯ ಹಿಂದೆ ಕಿಮ್‌ ಜಾಂಗ್‌ ಅವರ ಕೈವಾಡ ಇದೆ ಎಂದೂ ಹೇಳಲಾಗಿತ್ತು. 

ಕಿಮ್‌ ಜಾಂಗ್‌ ಉನ್‌ ಇರುವವರೆಗೆ ಅಧಿಕಾರ ಹಸ್ತಾಂತರದ ಪ್ರಮೇಯ ಬರಲಾರದು. ಅವರ ನಿಧನದ ನಂತರ ಅಧಿಕಾರ ಯಾರು ಹಿಡಿಯಬೇಕು ಎಂಬ ಬಗ್ಗೆ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು ಎಂದೂ ಹೇಳಲಾಗುತ್ತಿದೆ. ಸದ್ಯ ಜಗತ್ತಿಗೆ ಕಿಮ್‌ ಜಾಂಗ್‌ ಅವರ ಮಗಳ ಬಗ್ಗೆ ಮಾತ್ರ ಗೊತ್ತಿದೆ. ಅವರಿಗೆ ಇನ್ನಿಬ್ಬರು ಮಕ್ಕಳು ಇದ್ದಾರೆ ಎಂದು ಹೇಳಲಾಗುತ್ತಿರುವುದರಿಂದ ಕೊನೆ ಕ್ಷಣದಲ್ಲಿ ಅಥವಾ ಸಂದರ್ಭ ಬಂದರೆ ಉಳಿದ ಮಕ್ಕಳಲ್ಲಿ ಒಬ್ಬರನ್ನು ಉತ್ತರಾಧಿಕಾರಿ ಎಂದು ಅವರು ಘೋಷಿಸಬಹುದು ಎನ್ನುವ ವಾದವೂ ಇದೆ.

ಏಕಿಷ್ಟು ಕುತೂಹಲ?

ಅಣ್ವಸ್ತ್ರಗಳನ್ನು ಹೊಂದಿ, ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಸಡ್ಡು ಹೊಡೆಯಲು ಬಯಸಿರುವ ಕಿಮ್ ಜಾಂಗ್ ಉನ್ ಉತ್ತರಾಧಿಕಾರದ ವಿಚಾರ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಅಥವಾ ರಾಜಕೀಯ ವಿದ್ಯಮಾನಗಳು ಮುಕ್ತವಾಗಿ ನಡೆಯುವ ವ್ಯವಸ್ಥೆಯಲ್ಲಿ ಉತ್ತರಾಧಿಕಾರಿ ಆಯ್ಕೆ ಎನ್ನುವುದು ನಿಗೂಢ ವಿಚಾರವೇನಲ್ಲ. ಆದರೆ, ಉತ್ತರ ಕೊರಿಯಾದಂಥ ಮಾಹಿತಿ ನಿರ್ಬಂಧಿತ ವ್ಯವಸ್ಥೆಯಲ್ಲಿ, ದೇಶದ ಸಕಲ ಆಗುಹೋಗುಗಳನ್ನೂ ಒಬ್ಬ ವ್ಯಕ್ತಿ ಏಕಪಕ್ಷೀಯವಾಗಿ ನಿರ್ಧರಿಸುವಲ್ಲಿ, ಸರ್ವಾಧಿಕಾರಿಯ ಬದುಕಿನ ಸಣ್ಣಪುಟ್ಟ ವಿವರಗಳೂ ರಹಸ್ಯವಾಗಿರುವ ದೇಶದಲ್ಲಿ ಉತ್ತರಾಧಿಕಾರಿ ಆಯ್ಕೆ ಎನ್ನುವುದು ಭಾರಿ ಮಹತ್ವದ, ಕುತೂಹಲದ ವಿಚಾರವಾಗಿರುವುದು ಸಹಜವೇ ಆಗಿದೆ. 

ಮಗಳು ಕಿಮ್ ಜು ಆಯ್ ಜೊತೆಗೆ ಕಿಮ್ ಜಾಂಗ್ ಉನ್
..

ಆಧಾರ: ಎಎಫ್‌ಪಿ ,ರಾಯಿಟರ್ಸ್, ಸಿಎನ್‌ಎನ್‌, ದಿ ಗಾರ್ಡಿಯನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.