ADVERTISEMENT

ಆಳ ಅಗಲ ಸಂಖ್ಯೆ– ಸುದ್ದಿ | ಉಸಿರು ಚೆಲ್ಲುತ್ತಲೇ ಇವೆ ವ್ಯಾಘ್ರಗಳು

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 0:38 IST
Last Updated 30 ಜೂನ್ 2025, 0:38 IST
   
ಜಗತ್ತಿನಲ್ಲೇ ಅತಿ ಹೆಚ್ಚು (3,682) ಹುಲಿಗಳನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದಲ್ಲಿ ಅವುಗಳ ಸಾವಿನ ಪ್ರಮಾಣವೂ ಗಣನೀಯವಾಗಿದೆ. ದೇಶದಲ್ಲೇ ಹೆಚ್ಚು ವ್ಯಾಘ್ರಗಳಿರುವ ಎರಡನೇ ರಾಜ್ಯ ಎಂಬ ಕೀರ್ತಿಗೆ ಭಾಜನರಾಗಿರುವ ಕರ್ನಾಟಕದಲ್ಲಿ ಹುಲಿಗಳ ಸಾವಿನ ಸಂಖ್ಯೆಯೂ ಹೆಚ್ಚು.  ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಂಕಿ ಅಂಶಗಳ ಪ್ರಕಾರ, ರಾಜ್ಯ ಮೂರನೇ ಸ್ಥಾನದಲ್ಲಿದೆ. ನಾಗರಹೊಳೆಯು ದೇಶದ ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ಹುಲಿ ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿಯೇ ಹೆಚ್ಚು ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶ, ವ್ಯಾಘ್ರಗಳ ಸಾವಿನಲ್ಲೂ ಮೊದಲನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. 

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಸೇರಿದಂತೆ ಒಂದೇ ದಿನ ಐದು ಹುಲಿಗಳು ಮೃತಪಟ್ಟಿರುವುದು ಅರಣ್ಯ ಇಲಾಖೆ, ‍ವನ್ಯಪ್ರಿಯರು ಬೆಚ್ಚಿಬೀಳುವಂತೆ ಮಾಡಿದೆ. ವಿಷಪ್ರಾಶನದಿಂದ ವ್ಯಾಘ್ರಗಳು ಸತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆರೋಪಿಗಳ ಬಂಧನವೂ ಆಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು (3,682) ಹುಲಿಗಳನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದಲ್ಲಿ ಅವುಗಳ ಸಾವಿನ ಪ್ರಮಾಣವೂ ಗಣನೀಯವಾಗಿದೆ. ದೇಶದಲ್ಲೇ ಹೆಚ್ಚು ವ್ಯಾಘ್ರಗಳಿರುವ ಎರಡನೇ ರಾಜ್ಯ ಎಂಬ ಕೀರ್ತಿಗೆ ಭಾಜನರಾಗಿರುವ ಕರ್ನಾಟಕದಲ್ಲಿ ಹುಲಿಗಳ ಸಾವಿನ ಸಂಖ್ಯೆಯೂ ಹೆಚ್ಚು.  ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಂಕಿ ಅಂಶಗಳ ಪ್ರಕಾರ, ರಾಜ್ಯ ಮೂರನೇ ಸ್ಥಾನದಲ್ಲಿದೆ. ನಾಗರಹೊಳೆಯು ದೇಶದ ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ಹುಲಿ ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿಯೇ ಹೆಚ್ಚು ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶ, ವ್ಯಾಘ್ರಗಳ ಸಾವಿನಲ್ಲೂ ಮೊದಲನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. 

ಒಂದೂವರೆ ದಶಕದಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ದುಪ್ಪಟ್ಟು ಆಗಿದೆ. ಸರ್ಕಾರದ ಪ್ರಕಾರ, ವಾರ್ಷಿಕವಾಗಿ ಹುಲಿಗಳ ಸಂಖ್ಯೆಯಲ್ಲಿ ಶೇ 6ರಷ್ಟು ಹೆಚ್ಚಳವಾಗುತ್ತಿದೆ. ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯ ಸಂರಕ್ಷಣೆಗೆ ‘ಹುಲಿ ಯೋಜನೆ’ ಇದ್ದಾಗ್ಯೂ, ಪ್ರತಿ ವರ್ಷ ಗಣನೀಯ ಪ್ರಮಾಣದಲ್ಲಿ ಹುಲಿಗಳು ಸಾಯುತ್ತಿವೆ. ರಾಜ್ಯಗಳು ಅಧಿಕೃತವಾಗಿ ವರದಿ ಮಾಡಿದ ಪ್ರಕರಣಗಳ ವಿವರಗಳು ಮಾತ್ರ ಎನ್‌ಟಿಸಿಎ ಬಳಿ ಇದ್ದು, ಬೆಳಕಿಗೆ ಬಾರದ ಪ್ರಕರಣಗಳು ಕೂಡ ಇರುವ ಸಾಧ್ಯತೆ ಇದೆ. 

ಪರಿಸರ ಸಮತೋಲನಕ್ಕೆ ಅಗತ್ಯ

ADVERTISEMENT

ಪರಿಸರ ವ್ಯವಸ್ಥೆಯನ್ನು ಕಾಪಾಡುವ ದಿಸೆಯಲ್ಲಿ ಹುಲಿಗಳ ಪಾತ್ರ ಬಹಳ ಮುಖ್ಯವಾದದ್ದು. ಹುಲಿ, ಕಾಡಿನ ಅತ್ಯಂತ ಪ್ರಮುಖ ಬೇಟೆಗಾರ ಪ್ರಾಣಿಯಾಗಿದ್ದು, ಆಹಾರ ಸರಪಳಿಯ ತುತ್ತ ತುದಿಯಲ್ಲಿದೆ. ಮಾಂಸಾಹಾರಿಯಾಗಿರುವ ಹುಲಿಯು ಕಾಡಿನ ಬಲಿಪ್ರಾಣಿಗಳನ್ನು ತಿಂದು ಪ್ರಕೃತಿಯ ಸಮತೋಲನ ಕಾಪಾಡುತ್ತದೆ. ಆಹಾರದ ಸರಪಳಿಯಲ್ಲಿ ಏರಿಳಿತ ಉಂಟಾದರೆ, ಅದು ಅಂತಿಮವಾಗಿ ಪರಿಸರ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ.

13 ವರ್ಷಗಳಲ್ಲಿ 1,519 ಹುಲಿಗಳು ಸಾವು

2012ರಿಂದ ಈ ವರ್ಷದ ಜೂನ್‌ 26ರವರೆಗೆ 1,519 ಹುಲಿಗಳು ದೇಶದಲ್ಲಿ ಅಸುನೀಗಿವೆ. ಈ ವರ್ಷ ಮೊದಲ ಆರೂವರೆ ತಿಂಗಳಲ್ಲೇ 103 ಹುಲಿಗಳು ಮೃತಪಟ್ಟಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 28 ಹುಲಿಗಳು ಅಸುನೀಗಿದರೆ, ಮಧ್ಯಪ್ರದೇಶದಲ್ಲಿ 26 ಸತ್ತಿವೆ. ಅಸ್ಸಾಂನಲ್ಲಿ 10 ಮತ್ತು ಕರ್ನಾಟಕದಲ್ಲಿ ಮಲೆಮಹದೇಶ್ವರ ವನ್ಯಧಾಮದಲ್ಲಿ ಮೃತಪಟ್ಟ ಐದು ಸೇರಿದಂತೆ ಎಂಟು ಹುಲಿಗಳು ಮೃತಪಟ್ಟಿವೆ. 

ವ್ಯಾಘ್ರಗಳ ಸಾವಿಗೆ ಕಾರಣಗಳು

ಹುಲಿಗಳ ಸಾವಿನ ಅಂಕಿ ಅಂಶಗಳನ್ನು ಗಮನಿಸಿದರೆ, ಸಹಜ ಸಾವಿನ ಜೊತೆಗೆ, ಅಸಹಜ (ಸರಹದ್ದಿಗಾಗಿ ಕಾದಾಟ, ವಿಷಪ್ರಾಶನ, ವಿದ್ಯುತ್‌ ಸ್ಪರ್ಶ), ಬೇಟೆ, ಮೂರ್ಛೆ/ಪಾರ್ಶ್ವವಾಯು/ಹೃದಯಾಘಾತ ಮುಂತಾದ ಕಾರಣಗಳಿಂದ ಮೃತಪಟ್ಟಿವೆ. ಆದರೆ, ಹಲವು ಪ್ರಕರಣಗಳಲ್ಲಿ ಹುಲಿಗಳ ಸಾವಿಗೆ ನಿಖರ ಕಾರಣ ಏನು ಎನ್ನುವುದು ಇನ್ನೂ ಗೊತ್ತಾಗಿಲ್ಲ. 2012ರಿಂದ 2024ರ ಸೆಪ್ಟೆಂಬರ್‌ರವರೆಗೆ ವರದಿಯಾದ ಹುಲಿ ಸಾವಿನ ಪ್ರಕರಣಗಳಲ್ಲಿ ಶೇ 71ರಷ್ಟು ಪ್ರಕರಣಗಳನ್ನು ತನಿಖೆ ನಡೆಸಿ ವಿಲೇವಾರಿ ಮಾಡಲಾಗಿದೆ. ಶೇ 29ರಷ್ಟು ಪ್ರಕರಣಗಳು ಇನ್ನೂ ಪರಿಶೀಲನೆಯಲ್ಲಿವೆ. ದೇಶದಲ್ಲಿ ಬೇಟೆಯನ್ನು ನಿಷೇಧಿಸಲಾಗಿದ್ದರೂ ಬೇಟೆಗಾರರ ಗುಂಡಿಗೆ ಮೃತಪಟ್ಟ ಹುಲಿಗಳ ಸಂಖ್ಯೆ ಗಣನೀಯವಾಗಿದೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಇದರಿಂದಾಗಿ ಇತರ ಪ್ರಾಣಿಗಳ ಜೊತೆಗೆ ಹುಲಿಗಳು ಕೂಡ ಬಲಿಯಾಗುತ್ತಿವೆ. ವಿಷಪ್ರಾಶನ, ವಿದ್ಯುತ್‌ ಸ್ಪರ್ಶ ಇನ್ನಿತರ ಪ್ರಕರಣಗಳು ಮಾನವ–ವನ್ಯಜೀವಿ ಸಂಘರ್ಷದ ಭಾಗ. 

ಮುಂಚೂಣಿ ಸಿಬ್ಬಂದಿ ಕೊರತೆ

ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಅರಣ್ಯ ರಕ್ಷಣೆಯಲ್ಲಿ ತೊಡಗುವ ಮುಂಚೂಣಿ ಸಿಬ್ಬಂದಿ ಕೊರತೆ ಇದೆ. ಈ ಕಾರಣಕ್ಕೆ ಅರಣ್ಯ ಇಲಾಖೆಗೆ ಬೇಟೆಗಾರರು, ಮಾನವ ವನ್ಯಜೀವಿ ಸಂಘರ್ಷದ ಮೇಲೆ ನಿಗಾ ಇಡಲು ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಸಿಬ್ಬಂದಿಗೆ ಇಲಾಖೆ ನಿಯಮಿತವಾಗಿ ವೇತನವನ್ನೂ ನೀಡುವುದಿಲ್ಲ. ಈ ಕಾರಣಕ್ಕೆ ಕರ್ತವ್ಯ ನಿರ್ವಹಿಸುವಾಗ ಸಿಬ್ಬಂದಿ ಉದಾಸೀನ ಧೋರಣೆ ತಾಳುತ್ತಾರೆ. ವೇತನ ಸಿಗದಿರುವ ಕಾರಣದಿಂದ ತಟಸ್ಥರಾಗಿರುವುದರ ಜೊತೆಗೆ, ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವ ಸಾಧ್ಯತೆಯೂ ಇರುತ್ತದೆ.

ಆಧಾರ: ಎನ್‌ಟಿಸಿಎ, ಪಿಐಬಿ, ಸಂಸತ್ತಿನಲ್ಲಿ ಸಚಿವರ ಉತ್ತರಗಳು, ಬಿಬಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.