ವಿಜ್ಞಾನಿಗಳಿಗಷ್ಟೇ ಮೀಸಲು ಎಂದು ಪರಿಗಣಿಸಲಾಗಿದ್ದ ಬಾಹ್ಯಾಕಾಶ ಯಾತ್ರೆಯು, ಒಂದೆರಡು ಕೋಟಿ ರೂಪಾಯಿ ಖರ್ಚು ಮಾಡಿದರೆ ಸಾರ್ವಜನಿಕರಿಗೂ ಎಟಕುವಂತಾಗಿದೆ. ವಿಜ್ಞಾನಿಗಳಲ್ಲದವರೂ ಆಗಸಕ್ಕೆ ಜಿಗಿಯಬಹುದು ಎಂಬ ಕನಸು ‘ಬಾಹ್ಯಾಕಾಶ ಪ್ರವಾಸೋದ್ಯಮ’ದಿಂದ ವಾಸ್ತವ ರೂಪ ತಳೆದಿದೆ. ಖಾಸಗಿ ಕಂಪನಿಗಳು ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ‘ಬಾಹ್ಯಾಕಾಶ ಪ್ರವಾಸೋದ್ಯಮ’ವು ಉದ್ದಿಮೆಯ ಸ್ವರೂಪ ಪಡೆದಿದೆ
ಭೂಮಿಯ ವಾತಾವರಣವನ್ನು ದಾಟಿ, ದಿಗಂತದಲ್ಲಿ ಪ್ರಯಾಣಿಸುವ ಕಲ್ಪನೆ ಯುಗಗಳಿಂದಲೂ ಮಾನವನನ್ನು ಆಕರ್ಷಿಸುತ್ತಲೇ ಇದೆ. ಮನುಷ್ಯನ ಸಾಹಸ ಗುಣಕ್ಕೆ ತಂತ್ರಜ್ಞಾನ ಬಲ ನೀಡಿದ್ದರಿಂದ ಅಂತರಿಕ್ಷಕ್ಕೆ ಗಗನಯಾತ್ರಿಗಳು ಹೋಗಿ ಬರುವುದು ಸಾಧ್ಯವಾಗಿದೆ. ವಿಜ್ಞಾನಿಗಳಲ್ಲದವರಿಗೂ ಈ ಅವಕಾಶ ಈಗ ಲಭ್ಯವಾಗುತ್ತಿದೆ. ಇದನ್ನು ಸಾಧ್ಯವಾಗಿಸಿದ್ದು, ‘ಬಾಹ್ಯಾಕಾಶ ಪ್ರವಾಸೋದ್ಯಮ’. ಭೂಮಿಯಿಂದ 100 ಕಿಲೋಮೀಟರ್ ಎತ್ತರದಲ್ಲಿ (ಕಕ್ಷೆ) ಹಾಗೂ ಅದಕ್ಕಿಂತ ಕೆಳಗಿನ ಎತ್ತರದ (ಉಪಕಕ್ಷೆ) ನೀಲಾಗಸದಲ್ಲಿ ಕೆಲವೇ ನಿಮಿಷ ಇದ್ದು, ಭೂಮಿಯ ಚೆಲುವನ್ನು ಕಣ್ತುಂಬಿಕೊಳ್ಳುವುದು ಹಾಗೂ ತೂಕರಹಿತ ದೇಹ ಸ್ಥಿತಿಯನ್ನು ಅನುಭವಿಸುವುದು ಈಗ ಸುಲಭವಾಗಿದೆ.
ಖಾಸಗಿ ಕಂಪನಿಗಳು ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಇದು ಉದ್ದಿಮೆಯಾಗಿ ಬೆಳೆಯುತ್ತಿದೆ. ‘ಬಾಹ್ಯಾಕಾಶ ಪ್ರವಾಸೋದ್ಯಮ’ ಸಾಕಾರಕ್ಕೆ ಅಂತರಿಕ್ಷ ಸಂಸ್ಥೆಗಳ ನಡುವೆ ಪೈಪೋಟಿಯೇ ಏರ್ಪಟ್ಟಿದ್ದು, ಅವು ಹೊಸ ತಂತ್ರಜ್ಞಾನ, ಯಥೇಚ್ಚ ಹಣ ಹಾಗೂ ಮಾನವ ಶ್ರಮವನ್ನು ಹೂಡಿಕೆ ಮಾಡುತ್ತಿವೆ.
ಎರಡು ದಶಕಗಳ ಯತ್ನ: 2001ರಲ್ಲಿ ಅಮೆರಿಕದ ಉದ್ಯಮಿ ಹಾಗೂ ಎಂಜಿನಿಯರ್ ಡೆನಿಸ್ ಟುಟೊ ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ವೃತ್ತಿಪರ ಗಗನಯಾತ್ರಿ ಅಲ್ಲದ ಮೊದಲ ವ್ಯಕ್ತಿ. ಏಳು ದಿನ ಅಲ್ಲಿದ್ದು ಇತಿಹಾಸ ನಿರ್ಮಿಸಿದ್ದರು. ಇದಾದ ಎರಡು ದಶಕಗಳ ನಂತರ ಬಾಹ್ಯಾಕಾಶ ಪ್ರವಾಸೋದ್ಯಮ ಮಹತ್ವದ ಹಂತವನ್ನು ತಲುಪಿದೆ. ಎಲ್ಲ ಆರು ಮಂದಿ ಮಹಿಳೆಯರೇ ಇದ್ದ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಅಮೆರಿಕದ ‘ಬ್ಲೂ ಒರಿಜಿನ್’ ಖಾಸಗಿ ಸಂಸ್ಥೆಯು ಈಚೆಗಷ್ಟೇ ದೊಡ್ಡ ಸದ್ದು ಮಾಡಿತ್ತು. ಬ್ಲೂ ಒರಿಜಿನ್: 2000ನೇ ಇಸ್ವಿಯಲ್ಲಿ ಅಂತರಿಕ್ಷ ಕ್ಷೇತ್ರವನ್ನು ಪ್ರವೇಶಿಸಿದ್ದ ಉದ್ಯಮಿ ಜೆಫ್ ಬಿಜೋಸ್, 2015ರಲ್ಲಿ ಮಾನವರಹಿತ ರಾಕೆಟ್ ಉಡ್ಡಯನ ಪರೀಕ್ಷೆ ನಡೆಸಿದ್ದರು. ಇದಾದ 20 ವರ್ಷ ಅದರ ಸುದ್ದಿಯೇ ಇರಲಿಲ್ಲ. 2021ರ ಜುಲೈನಲ್ಲಿ ಸ್ವತಃ ಬಿಜೋಸ್ ತಮ್ಮ ಸಂಸ್ಥೆ ಅಭಿವೃದ್ಧಿಪಡಿಸಿದ ‘ನ್ಯೂ ಶೆಫರ್ಡ್’ ರಾಕೆಟ್ ಮೂಲಕ ಆಗಸಕ್ಕೆ ಸ್ವತಃ ಜಿಗಿದು ಇತಿಹಾಸ ಬರೆದರು. ಭೂಮಿಯಿಂದ ಮೇಲಕ್ಕೆ 100 ಕಿ.ಮೀ. ದೂರದಲ್ಲಿ ಗುರುತಿಸಿರುವ ‘ಕಾರ್ಮನ್ ಲೈನ್’ ಪ್ರವೇಶಿಸಿದ ಮೊದಲ ಕೋಟ್ಯಧೀಶ ಎಂಬುದಾಗಿ ಕರೆಯಿಸಿಕೊಂಡರು. ಅಲ್ಲಿಂದ ಈವರೆಗೆ ‘ಬ್ಲೂ ಒರಿಜಿನ್’ ಸಂಸ್ಥೆಯು 11 ಅಂತರಿಕ್ಷ ಯಾನಗಳನ್ನು ಪೂರೈಸಿದ್ದು, 58 ನಾಗರಿಕರನ್ನು ಬಾಹ್ಯಾಕಾಶದಲ್ಲಿ ಸುತ್ತಾಡಿಸಿದೆ.
ಅಂತರಿಕ್ಷ ಯಾನದ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಬಿಜೋಸ್ ಅವರು ಅಭಿವೃದ್ಧಿಪಡಿಸಿರುವ ಮರುಬಳಕೆಯ ರಾಕೆಟ್ ತಂತ್ರಜ್ಞಾನವು ಈ ಉದ್ಯಮದಲ್ಲಿ ಹೊಸ ದಿಕ್ಕು ತೋರಿದ್ದು, ಇದರ ಬಳಕೆಯಲ್ಲಿ ಅವರು ಸದ್ಯ ಮುಂಚೂಣಿಯಲ್ಲಿದ್ದಾರೆ. ಎರಡು ಹಂತಗಳಲ್ಲಿ ರಾಕೆಟ್‌ನ ವಿನ್ಯಾಸವಿದೆ. ಯಾತ್ರಿಗಳು ಇರುವ ಕ್ಯಾಪ್ಸೂಲ್ ಮೇಲ್ಭಾಗದಲ್ಲಿ, ಅವರನ್ನು ಹತ್ತೊಯ್ಯುವ ರಾಕೆಟ್ ಕೆಳಭಾಗದಲ್ಲಿ ಇರುತ್ತದೆ. ನಿಗದಿತ ಕಕ್ಷೆಯನ್ನು ತಲುಪಿದ ಬಳಿಕ ಕ್ಯಾಪ್ಸೂಲ್ ರಾಕೆಟ್‌ನಿಂದ ಬೇರ್ಪಡುತ್ತದೆ. ಭೂಮಿಯ ಮೇಲ್ಮೈನಲ್ಲಿ, ಉಡ್ಡಯನ ಮಾಡಿದ ಜಾಗದ ಸಮೀಪದಲ್ಲೇ ರಾಕೆಟ್ ಬಂದು ಲ್ಯಾಂಡ್ ಆಗುತ್ತದೆ. ಕ್ಯಾಪ್ಸೂಲ್ ಸ್ವಲ್ಪ ಹೊತ್ತಿನ ಬಳಿಕ ಭೂಮಿಯತ್ತ ವಾಪಸ್ ಆಗುತ್ತದೆ. ಭೂ ಮೇಲ್ಮೈಯನ್ನು ಸಮೀಪಿಸುವ ಹೊತ್ತಿಗೆ, ಕ್ಯಾಪ್ಸೂಲ್‌ಗೆ ಅಳವಡಿಸಿರುವ ಪ್ಯಾರಾಚೂಟ್ ತೆರೆದುಕೊಂಡು, ಯಾತ್ರಿಕರು ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಾರೆ.
ವರ್ಜಿನ್ ಗೆಲಾಕ್ಟಿಕ್: 2004ರಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಿದ ಬ್ರಿಟನ್‌ನ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರು ಸಂಶೋಧನೆ, ಅಭಿವೃದ್ಧಿಯ ನಂತರ 2021ರಲ್ಲಿ ಮೊದಲ ಬಾರಿಗೆ ಜನರನ್ನು ಹೊತ್ತ ನೌಕೆಯ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರು. ಅವರು ಬಾಹ್ಯಾಕಾಶವನ್ನು ಸುತ್ತುಹಾಕಲು ಆಯ್ದುಕೊಂಡ ವಿಧಾನ ಮಾತ್ರ ವಿನೂತನವಾಗಿದೆ.
ರಾಕೆಟ್ ಬದಲಾಗಿ ಮೂರು ವಿಮಾನಗಳ ರಚನೆಯನ್ನು ಅವರು ಪರಿಚಯಿಸಿದರು. ಒಂದಕ್ಕೊಂದು ಬೆಸೆದಂತೆ ಕಾಣುವ ಮೂರೂ ವಿಮಾನಗಳು ಆಗಸಕ್ಕೆ ನೆಗೆಯುವಾಗ ಒಟ್ಟಿಗೆ ಇರುತ್ತವೆ. ಆಕಾಶದಲ್ಲಿ ಗೊತ್ತುಪಡಿಸಿದ ಎತ್ತರವನ್ನು ತಲುಪಿದ ಬಳಿಕ, ಮಧ್ಯಭಾಗದ ವಿಮಾನವು ಬೇರ್ಪಡುತ್ತದೆ. ಮಧ್ಯದ ವಿಮಾನದಲ್ಲಿರುವ ಪೈಲಟ್‌ಗಳು, ಅದು ಬೇರ್ಪಟ್ಟ ಕೂಡಲೇ ರಾಕೆಟ್ ರೀತಿಯಲ್ಲಿ ಮೇಲ್ಮುಖವಾಗಿ ಕಾರ್ಮನ್ ಲೈನ್‌ನತ್ತ ವಿಮಾನವನ್ನು ಚಲಾಯಿಸುತ್ತಾರೆ. ವಿಮಾನದ ಎರಡೂ ಭಾಗಗಳು ಸ್ವತಂತ್ರವಾಗಿ ಬಂದು ಲ್ಯಾಂಡ್ ಆಗುತ್ತವೆ. ಸಂಸ್ಥೆಯ ವಿಎಸ್‌ಎಸ್ ಯೂನಿಟಿ ಅಂತರಿಕ್ಷ ವಿಮಾನವು 65 ಜನರಿಗೆ ಬಾಹ್ಯಾಕಾಶದ ದರ್ಶನ ಮಾಡಿಸಿದೆ.
ಸ್ಪೇಸ್‌ಎಕ್ಸ್: ಉದ್ಯಮಿ ಇಲಾನ್ ಮಸ್ಕ್ ಒಡೆತನದ ‘ಸ್ಪೇಸ್‌ಎಕ್ಸ್’ ಖಾಸಗಿ ಬಾಹ್ಯಾಕಾಶ ಸಂಸ್ಥೆಯು ಸಂಸ್ಥೆಯು ತನ್ನ ಪ್ರತಿಸ್ಪರ್ಧಿಗಳಿಗಿಂತ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಗಗನಯಾತ್ರಿಗಳನ್ನು ಕಳುಹಿಸಿ ಈಗಾಗಲೇ ಸೈ ಎನಿಸಿಕೊಂಡಿರುವ ಸಂಸ್ಥೆಯು, ಕಕ್ಷೆಗೆ (ಆರ್ಬಿಟಲ್ ಟ್ರಿಪ್) ಜನರನ್ನು ಪ್ರವಾಸಕ್ಕೆ ಕರೆದೊಯ್ಯುವ ಹಾಗೂ ಐಎಸ್‌ಎಸ್‌ಗೆ ‘ಟ್ರಿಪ್’ ಕಳುಹಿಸುವ ಮಹತ್ವಾಕಾಂಕ್ಷಿ ಗುರಿಗಳನ್ನು ಇಟ್ಟುಕೊಂಡಿದೆ. ಸಂಪೂರ್ಣ ಕಕ್ಷೆಯ ಯೋಜನೆ (ಫುಲ್ ಆರ್ಬಿಟಲ್ ಮಿಷನ್) ಹಾಗೂ ಅದಕ್ಕಿಂತ ಎತ್ತರದ ಕಕ್ಷೆಯಲ್ಲಿ ದೀರ್ಘಕಾಲ ಜನರು ಉಳಿಯಲು ಬೇಕಾಗುವ ರೀತಿಯಲ್ಲಿ ತನ್ನ ರಾಕೆಟ್‌ಗಳನ್ನು ಸಜ್ಜುಗೊಳಿಸುತ್ತಿದೆ.
ಸ್ಪೇಸ್ ಪರ್ಸ್‌ಪೆಕ್ಟಿವ್ ಮತ್ತು ಡೀಪ್ ಬ್ಲೂ: ಸ್ಪೇಸ್ ಪರ್ಸ್‌ಪೆಕ್ಟಿವ್ ಸಂಸ್ಥೆಯದ್ದು ಮತ್ತೊಂದು ವಿನೂತನ ವಿನ್ಯಾಸದ ಬಾಹ್ಯಾಕಾಶ ಪ್ರಯಾಣ. ಎತ್ತರದ ಬಲೂನ್ ಹಾಗೂ ಒತ್ತಡದ ಕ್ಯಾಪ್ಸೂಲ್‌ಗಳನ್ನು ಬಳಸಿ ಜನರನ್ನು ಆಗಸದತ್ತ ಕರೆದೊಯ್ಯುವುದು ಈ ಸಂಸ್ಥೆಯ ಉದ್ದೇಶ. ನಿಧಾನ ಹಾಗೂ ಸುಲಭವಾದ ಈ ವಿಧಾನವು ಉಳಿದೆಲ್ಲಕ್ಕಿಂತ ಉತ್ತಮವಾಗಿ ಭೂಮಿಯ ವಿಹಂಗಮ ನೋಟವನ್ನು ಸವಿಯಲು ಅವಕಾಶ ನೀಡುತ್ತದೆ. ಈ ವರ್ಷವೇ ಯೋಜನೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಚೀನಾದ ಡೀಪ್ ಬ್ಲೂ ಏರೊಸ್ಪೇಸ್ ನವೋದ್ಯಮವು 2027ರ ವೇಳೆಗೆ ನೆಬ್ಯುಲಾ–1 ವಿಟಿವಿಎಲ್ ರಾಕೆಟ್ ಮತ್ತು ಕ್ಯಾಪ್ಸೂಲ್ ಮೂಲಕ ಜನರಿಗೆ ಉಪಕಕ್ಷೆಯ ಪ್ರವಾಸದ ಅನುಭವ ನೀಡಲು ಸಜ್ಜಾಗುತ್ತಿದೆ. ಬಾಹ್ಯಾಕಾಶ ಪ್ರವಾಸವು ಉದ್ಯಮದ ರೂಪ ಪಡೆದಿದ್ದು, 2030ರ ವೇಳೆಗೆ ವಾರ್ಷಿಕವಾಗಿ ₹25 ಸಾವಿರ ಕೋಟಿ ಆದಾಯ ತಂದುಕೊಡಲಿದೆ ಎಂದು ‘ಮೋರ್ಗನ್ ಸ್ಟ್ಯಾನ್ಲಿ’ ವರದಿ ಅಂದಾಜಿಸಿದೆ. ಇದು 2040ರ ಹೊತ್ತಿಗೆ 1 ಟ್ರಿಲಿಯನ್ ಡಾಲರ್‌ಗೆ ಏರಲಿದೆ ಎಂದೂ ತಿಳಿಸಿದೆ.
⇒ಆಧಾರ: ಸ್ಪೇಸ್ ಎಕ್ಸ್, ಬ್ಲೂ ಒರಿಜಿನ್, ವರ್ಜಿನ್ ಗೆಲಾಕ್ಟಿಕ್,
⇒ಎಎಫ್‌ಪಿ, ರಾಯಿಟರ್ಸ್
1.ಉಪಕಕ್ಷೆ (ಸಬ್ ಆರ್ಬಿಟ್) ಭೂಮಿಯಿಂದ 100 ಕಿಲೋಮೀಟರ್ ಎತ್ತರದಲ್ಲಿರುವ ಕಾರ್ಮನ್ ಲೈನ್‌ನಲ್ಲಿ ಪ್ರಯಾಣಿಕರಿಗೆ ಸುಮಾರು 10 ನಿಮಿಷ ಸೂಕ್ಷ್ಮ ಗುರುತ್ವಬಲದ, ಅಂದರೆ ದೇಹ ತೇಲಾಡುವ ಅನುಭವ ಸಿಗುತ್ತದೆ. ಇಲ್ಲಿ ಭೂಮಿಯ ಗೋಳಾಕಾರದ ದರ್ಶನವಾಗುತ್ತದೆ.
2.ಕಕ್ಷೆ: ಕಾರ್ಮನ್ ಲೈನ್‌ಗಿಂತ ಮೇಲಕ್ಕಿರುವ ಪ್ರದೇಶ. ಇದು ದೀರ್ಘಕಾಲದ ಉಳಿದುಕೊಳ್ಳುವಿಕೆ, ಐಎಸ್‌ಎಸ್ ಹಾಗೂ ಇತರೆ ಬಾಹ್ಯಾಕಾಶ ನಿಲ್ದಾಣಗಳಿಗೆ ಪ್ರವೇಶಿಸುವ ಹಾಗೂ ಅಲ್ಲಿಂದ ವಾಪಸಾಗುವ ಪ್ರಕ್ರಿಯೆ ನಡೆಯುವ ವಲಯವಾಗಿದೆ. ಲೂನಾರ್ ಟೂರಿಸಂ ಎಂಬ ಖಾಸಗಿ ಬಾಹ್ಯಾಕಾಶ ಯೋಜನೆ ಅಭಿವೃದ್ಧಿಯ ಹಂತದಲ್ಲಿದೆ. ಸ್ಪೇಸ್ ಎಕ್ಸ್ ಸಂಸ್ಥೆಯ ‘ಡಿಯರ್ ಮೂನ್’ ಹಾಗೂ ಬ್ಲೂ ಒರಿಜಿನ್ ಸಂಸ್ಥೆಯ ‘ಬ್ಲೂ ಮೂನ್’ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುವ ನಿರೀಕ್ಷೆಯಿದೆ.
ಬಹುತೇಕ ಯಾವ ಕಂಪನಿಯೂ ಟಿಕೆಟ್ ದರ ಬಹಿರಂಗಪಡಿಸಿಲ್ಲ. ತಮ್ಮನ್ನು ನೇರವಾಗಿ ಸಂಪರ್ಕಿಸುವಂತೆ ಸೂಚಿಸಿವೆ. ಉಪಕಕ್ಷೆಗೆ ತೆರಳುವ ಪ್ರಯಾಣಿಕರ ಟಿಕೆಟ್ ದರ ಅಂದಾಜು ₹2.10 ಕೋಟಿಯಿಂದ ₹3.80 ಕೋಟಿವರೆಗೂ ಇದೆ ಎಂದು ವರದಿಗಳು ಹೇಳಿವೆ.
ಸ್ಪೇಸ್ ಪರ್ಸ್‌ಪೆಕ್ಟಿವ್ ಯೋಜನೆಯಲ್ಲಿ ಒಂದು ಟಿಕೆಟ್‌ಗೆ ಅಂದಾಜು ₹1 ಕೋಟಿ ದರ ನಿಗದಿಯಾಗುವ ಸಾಧ್ಯತೆಯಿದೆ. ಡೀಪ್ ಬ್ಲೂ ಸಂಸ್ಥೆಯು ₹1.75 ಕೋಟಿ ದರದ ಟಿಕೆಟ್ ನಿಗದಿಪಡಿಸಿದೆ. ಈಗಾಗಲೇ ಎರಡು ಟಿಕೆಟ್‌ಗಳು ಮಾರಾಟವಾಗಿವೆ ಎನ್ನಲಾಗಿದೆ.
ಆದರೆ ಕಾರ್ಮನ್ ಲೈನ್ ದಾಟಿ, 400 ಕಿಲೋಮೀಟರ್ ದೂರದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ವೆಚ್ಚ ಅತ್ಯಂತ ದುಬಾರಿ. ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ರೀತಿಯ ಕ್ಯಾಪ್ಸೂಲ್‌ಗಳಲ್ಲಿ ತೆರಳುವ ಪ್ರತಿಯೊಬ್ಬರೂ ಸರಿಸುಮಾರು ₹450 ಕೋಟಿ ತೆರಬೇಕಿದೆ.
ದುಬಾರಿ ಪ್ರಯಾಣ ವೆಚ್ಚವನ್ನು ತಗ್ಗಿಸಲು ಮರುಬಳಕೆಯ ರಾಕೆಟ್ ಹಾಗೂ ವಿಮಾನಗಳನ್ನು ಬಳಸಲಾಗುತ್ತಿದ್ದರೂ ದರ ಮಾತ್ರ ಇಳಿಕೆಯಾಗಿಲ್ಲ
ನಾಸಾದಂತಹ ಸಂಸ್ಥೆಗಳು ಕೈಗೊಳ್ಳುವ ಅಂತರಿಕ್ಷ ಯೋಜನೆಗಳ ಹೊರತಾಗಿ, ಖಾಸಗಿ ಕಂಪನಿಗಳು ಪ್ರವಾಸಕ್ಕೆಂದು ಜನರನ್ನು ಕರೆದೊಯ್ಯುವ ಕಾರ್ಯಕ್ರಮಗಳಿಂದ ಸಂಶೋಧನೆ ಹಾಗೂ ವಿಜ್ಞಾನಕ್ಕೆ ಅಂತಹ ಲಾಭವಿಲ್ಲ
ಬಾಹ್ಯಾಕಾಶದಲ್ಲಿ ನೌಕೆಗಳು ಹೊರಸೂಸುವ ಅನಿಲಗಳು ಹಾಗೂ ಕಣಗಳು ದೀರ್ಘಕಾಲ ಅಲ್ಲಿಯೇ ಉಳಿಯಲಿದ್ದು, ಪರಿಸರದ ದೃಷ್ಟಿಯಿಂದ ಕಳವಳಕಾರಿ
ವರ್ಜಿನ್ ಗೆಲಾಕ್ಟಿಕ್‌ನಲ್ಲಿ ಪ್ರತಿ ಪ್ರಯಾಣಿಕನ ಪ್ರತಿ ಮೈಲು ಪ್ರಯಾಣದ ಹಾದಿಯಲ್ಲಿ 12 ಕೆ.ಜಿ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗತ್ತದೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯ ವಿಮಾನ ಪ್ರಯಾಣದಲ್ಲಿ ಈ ಪ್ರಮಾಣ 0.2 ಕೆ.ಜಿ. ಮಾತ್ರ
ಕಾರ್ಬನ್ ಡೈಆಕ್ಸೈಡ್ ಬದಲಿಗೆ ವಾಟರ್ ವೇಪರ್ ಹೊರಸೂಸುವುದಾಗಿ ಬ್ಲೂ ಒರಿಜಿನ್ ಹೇಳಿದ್ದರೂ ಅದೂ ಸಹ ಹಸಿರುಮನೆ ಅನಿಲ ಎಂದು ತಜ್ಞರು ಎಚ್ಚರಿಸಿದ್ದಾರೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸದ್ಯ ಗಗನಯಾನದತ್ತ ದೃಷ್ಟಿ ನೆಟ್ಟಿದೆ. ಇದಕ್ಕಾಗಿ ಆ್ಯಕ್ಸಿಯಂ–4 ಎಂಬ ಅಂತರಿಕ್ಷ ಅಭಿಯಾನದ ಭಾಗವಾಗಿ, ಶುಭಾಂಶು ಶುಕ್ಲಾ ಅವರನ್ನು ಈಚೆಗಷ್ಟೇ ಐಎಸ್‌ಎಸ್‌ಗೆ ಕಳುಹಿಸಿತ್ತು.
ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳೂ ಬಾಹ್ಯಾಕಾಶ ಪ್ರವಾಸೋದ್ಯಮದತ್ತ ದೃಷ್ಟಿ ನೆಟ್ಟಿವೆ. ‘ಅಗ್ನಿಕುಲ್’, ‘ಸ್ಕೈರೂಟ್’ ಹಾಗೂ ಇತರೆ ಕೆಲವು ಸಂಸ್ಥೆಗಳು ವಿವಿಧ ಉಡ್ಡಯನ ಸಾಮರ್ಥ್ಯದ ವಾಹನಗಳ ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ತೊಡಗಿವೆ. ಅವುಗಳಲ್ಲಿ ಕೆಲವು ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.