ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದರೂ, ಬಯಲು ಸೀಮೆ ಪ್ರದೇಶದ ಹಲವು ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿವೆ. ದಕ್ಷಿಣ ಮತ್ತು ಉತ್ತರ ಒಳನಾಡಿನ 21 ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಈ ಪೈಕಿ 12 ಜಿಲ್ಲೆಗಳಲ್ಲಿ ಕೊರತೆ ತೀವ್ರವಾಗಿದ್ದು, ಬರದ ಭೀತಿ ಎದುರಾಗಿದೆ. ಹಲವು ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯ ಚೆನ್ನಾಗಿ ನಡೆದಿದೆ. ಆದರೆ, ಚಿಗುರೊಡೆದ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿ ಒಣಗಲು ಆರಂಭಿಸಿವೆ. ಕೆಲವು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ. ಉತ್ತರ ಒಳನಾಡಿನ ಬಳ್ಳಾರಿ, ಕಲಬುರಗಿ, ಯಾದಗಿರಿ, ಮತ್ತು ಬೀದರ್‌ನಲ್ಲೂ ಇದೇ ಸ್ಥಿತಿ ಇದೆ. ಈ ಎಲ್ಲಾ ಜಿಲ್ಲೆಗಳಲ್ಲಿ ಶೇ 20ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದೆ. ಉಳಿದಂತೆ ಬೆಂಗಳೂರು ದಕ್ಷಿಣ, ಮಂಡ್ಯ (ದಕ್ಷಿಣ ಒಳನಾಡು), ಕೊಪ್ಪಳ, ರಾಯಚೂರು, ವಿಜಯಪುರ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮುಂಗಾರಿನ ಒಂದೂವರೆ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಲೆನಾಡು ಭಾಗದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆ ಕೊರತೆ ಉಂಟಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ, ಮುಂಗಾರು ಆರಂಭದ ಜೂನ್1ರಿಂದ ಜುಲೈ 19ರವರೆಗಿನ ಅವಧಿಯಲ್ಲಿ ರಾಜ್ಯದಲ್ಲೇ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ, ಶೇ 50ರಷ್ಟು ಕಡಿಮೆ ಮಳೆಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಶೇ 48ರಷ್ಟು ಕೊರತೆ ಉಂಟಾಗಿದೆ. ಬಳ್ಳಾರಿಯಲ್ಲಿ ಶೇ 41 ಮತ್ತು ಚಾಮರಾಜನಗರದಲ್ಲಿ ಶೇ 40ರಷ್ಟು ಮಳೆ ಕೊರತೆಯಾಗಿದೆ.
ಸದ್ಯಕ್ಕೆ ಯಾವ ಜಿಲ್ಲೆಯಲ್ಲೂ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಆದರೆ, ಇದೇ ಪರಿಸ್ಥಿತಿ ಮುಂದುವರಿದರೆ ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಕಾಡಬಹುದು ಎಂಬ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.
ನಿರೀಕ್ಷೆಯಂತೆ ಮಳೆಯಾಗದಿದ್ದರೂ, ಸದ್ಯದ ಮಟ್ಟಿಗೆ ಯಾವ ಸಮಸ್ಯೆಯೂ ಇಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ರೈತರು ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಹೇಳಿದ್ದಾರೆ.
ಬಿತ್ತಿದ ಬೆಳೆಗಿಲ್ಲ ನೀರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆ ಕೈಕೊಟ್ಟಿತ್ತು. ಹಾಗಾಗಿ, ಮುಂಗಾರು ಅವಧಿಯಲ್ಲಾದರೂ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ರೈತರಿದ್ದರು. ಮೇ ಕೊನೆಗೆ–ಜೂನ್ ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಹಲವು ಜಿಲ್ಲೆಗಳ ಮಳೆಯಾಶ್ರಿತ ರೈತರು ವಿವಿಧ ಬೆಳೆಗಳ ಬಿತ್ತನೆ ಮಾಡಿದ್ದರು. ಬಿತ್ತನೆಯ ನಂತರವೂ ಮಳೆಯಾಗಿದ್ದರಿಂದ ಬೀಜಗಳು ಮೊಳಕೆಯೊಡೆದಿವೆ. ಆದರೆ, ಪೈರುಗಳಿಗೆ ನೀರು ಅಗತ್ಯವಿರುವಾಗ ಮಳೆಯಾಗದಿರುವುದರಿಂದ ಬೆಳೆನಷ್ಟದ ಆತಂಕವನ್ನು ರೈತರು ಎದುರಿಸುವಂತಾಗಿದೆ.
ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ತೀವ್ರ ಮಳೆಕೊರತೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಮಳೆಯಾಗದಿರುವುದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿಲ್ಲ. ಭೂಮಿ ಹದ ಮಾಡಿ, ಬಿತ್ತನೆ ಬೀಜ, ರಸಗೊಬ್ಬರವನ್ನು ಸಂಗ್ರಹಿಸಿಕೊಟ್ಟುಕೊಂಡು ವರ್ಷಧಾರೆಗಾಗಿ ಕಾದಿದ್ದಾರೆ.
ಹೆಚ್ಚು ಮಳೆಯಾಗುವ ಕೊಡುಗು ಜಿಲ್ಲೆಯಲ್ಲೇ ಜುಲೈ ತಿಂಗಳಲ್ಲಿ ಮಳೆ ಕೊರತೆಯಾಗಿದೆ. ಜುಲೈನಲ್ಲಿ 18 ಸೆಂ.ಮೀ. ಮಳೆ ಆಗಬೇಕಿತ್ತು. ಆದರೆ, ಜುಲೈ 19ರವರೆಗೆ 14 ಸೆಂ.ಮೀ ಮಳೆಯಾಗಿದ್ದು, ಶೇ 22ರಷ್ಟು ಕೊರತೆ ಎದುರಾಗಿದೆ.
ಮಲೆನಾಡು/ಅರೆಮಲೆನಾಡು ವ್ಯಾಪ್ತಿಯ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಜೂನ್1ರಿಂದ ಜುಲೈ 19ರನಡುವೆ ಕ್ರಮವಾಗಿ ಶೇ 13 ಮತ್ತು ಶೇ 4ರಷ್ಟು ಕಡಿಮೆ ಮಳೆಯಾಗಿದೆ.
ದಕ್ಷಿಣ ಒಳನಾಡು ವ್ಯಾಪ್ತಿಯ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೂ ವರುಣನ ಸಿಂಚನವಾಗುತ್ತಿಲ್ಲ. ಬೀಸುವ ಗಾಳಿಗೆ ಮೋಡಗಳು ಚದುರುತ್ತಿದ್ದು, ಕೆಲವು ಭಾಗಗಳಲ್ಲಿ ಸಣ್ಣ ಹನಿಗಳು ಬಿದ್ದು, ಭೂಮಿಯ ಮೇಲ್ಮೈಯನ್ನು ಮಾತ್ರ ತುಸು ತೇವ ಮಾಡುತ್ತಿದೆ. ಇದರಿಂದ ಉಳುಮೆ, ಬಿತ್ತನೆ ಮಾಡಲಾಗುತ್ತಿಲ್ಲ.
ತುಮಕೂರು ಜಿಲ್ಲೆಯಲ್ಲಿ ಮುಂಗಾರು ಪೂರ್ವದ ಮಳೆಗೆ ಬಿತ್ತನೆ ಮಾಡಿದ್ದ ಹೆಸರು, ಉದ್ದು, ಅಲಸಂದೆ ಬೆಳೆ ಕೆಲವು ಕಡೆಗಳಲ್ಲಿ ಒಣಗಿದ್ದು, ಇಳುವರಿ ತೀವ್ರವಾಗಿ ಕುಸಿತ ಕಂಡಿದೆ. ಮಧುಗಿರಿ, ಚಿಕ್ಕನಾಯಕನಹಳ್ಳಿ, ಶಿರಾ ಭಾಗದಲ್ಲಿ ಜಾನುವಾರು ಮೇವಿಗೆ ಸಮಸ್ಯೆ ಆರಂಭವಾಗಿದೆ.
ಕೋಲಾರ ಜಿಲ್ಲೆಯಲ್ಲಿ ಶೇ 3.2ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ರಾಗಿ ಬಿತ್ತನೆ ಕೇವಲ 522 ಹೆಕ್ಟೇರ್‌ನಲ್ಲಿ (ಗುರಿ 54,136) ನಡೆದಿದೆ. ಆಗಸ್ಟ್ 15ರವರೆಗೆ ಬಿತ್ತನೆಗೆ ಅವಕಾಶವಿದ್ದು, ಮುಗಿಲತ್ತ ರೈತರ ಚಿತ್ತ ನೆಟ್ಟಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ 9.56ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಾದ್ಯಂತ ಜೂನ್ ತಿಂಗಳಲ್ಲಿ ಮಳೆಯ ಕೊರತೆ ತೀವ್ರವಾಗಿ ಬಾಧಿಸಿತ್ತು. ಈಗ ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಕೃಷಿ ಚಟುವಟಿಕೆ ಕೈಗೊಳ್ಳಬಹುದು ಎಂದು ರೈತರು ಹೇಳಿದ್ದಾರೆ.
ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಐದು ತಾಲ್ಲೂಕುಗಳ ಪೈಕಿ ನಾಲ್ಕೂ ತಾಲ್ಲೂಕುಗಳಲ್ಲಿ (ಹನೂರು ಶೇ 65.9, ಕೊಳ್ಳೇಗಾಲ ಶೇ 58.7, ಯಳಂದೂರು ಶೇ 58.7 ಹಾಗೂ ಚಾಮರಾಜನಗರ ಶೇ 36) ಮಳೆ ಕೊರತೆ ಕಾಣಿಸಿಕೊಂಡಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಾಗಿದ್ದರೆ, ಬಯಲುಸೀಮೆ, ಅರೆ ಮಲೆನಾಡು ಭಾಗದಲ್ಲಿ ಕಡಿಮೆ ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಶೇ 166ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ ಹಾಸನ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 20ರಷ್ಟು ಕಡಿಮೆ ಮಳೆಯಾಗಿದೆ.
ವಾರದಲ್ಲಿ ಮಳೆಯಾಗದಿದ್ದರೆ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು, ಹೊಸದುರ್ಗ ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳೆ ಶೇಂಗಾ ಬಿತ್ತನೆಗೆ ಅವಧಿ ಮೀರುತ್ತಿದ್ದು, ವಾರದೊಳಗೆ ಮಳೆ ಬಾರದಿದ್ದರೆ ರೈತರ ಬದುಕು ಅಸ್ತವ್ಯಸ್ತಗೊಳ್ಳಲಿದೆ.
ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲ್ಲೂಕಿಗೆ ಶೇಂಗಾ ಬೆಳೆಯೇ ಆಧಾರ. ರೈತರು ಮುಂಗಾರು ಪೂರ್ವ ಹಂತದ ವೇಳೆ ಶೇಂಗಾ ಬಿತ್ತನೆ ಮಾಡದೇ ಹೊಲವನ್ನು ಹಸನು ಮಾಡಿಕೊಂಡು ಮಳೆಗಾಗಿ ಕಾಯುತ್ತಾರೆ. ಜುಲೈ ಮೊದಲೆರಡು ವಾರಗಳಲ್ಲಿ ಶೇಂಗಾ ಬಿತ್ತನೆ ಮಾಡಿ ಮುಗಿಸುವುದು ವಾಡಿಕೆ. ಸದ್ಯ ಬಿತ್ತನೆ ಅವಧಿ ಮುಗಿಯುತ್ತಾ ಬಂದಿದೆ. ಸೋನೆ ಮಳೆಯ ಆಧಾರದಲ್ಲಿಈಗಾಗಲೇ ಶೇ 20ರಷ್ಟು ರೈತರು ಬಿತ್ತನೆ ಪೂರ್ಣಗೊಳಿಸಿದ್ದಾರೆ. ಹಲವೆಡೆ ಮೊಳಕೆಯೂ ಬಾರದೇ ರೈತರು ಆತಂಕ ಎದುರಿಸುತ್ತಿದ್ದಾರೆ. ಹೊಸದುರ್ಗ ತಾಲ್ಲೂಕಿನಲ್ಲಿ ಮೇ ತಿಂಗಳಲ್ಲಿ ಬಿತ್ತನೆಯಾದ ಸಾವೆ, ನವಣೆ, ಹೆಸರು ಕಾಯಿ ಕಟ್ಟುವ ಹಂತವಿದು. ಮಳೆ ಕೈಕೊಟ್ಟ ಕಾರಣ ಇಳುವರಿ ಕುಸಿತವಾಗಿ ರೈತರು ನಷ್ಟ ಹೊಂದುವ ಆತಂಕ ಎದುರಾಗಿದೆ.
ಉತ್ತರ ಒಳನಾಡು ವ್ಯಾಪ್ತಿಯ ಬಳ್ಳಾರಿ, ವಿಜಯನಗರ, ಬಾಗಲಕೋಟೆ, ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ವಾಡಿಕೆಯಂತೆ ಮಳೆ ಸುರಿದಿಲ್ಲ. ಇದರಿಂದಾಗಿ ಬಿತ್ತನೆಯಲ್ಲಿ ಕುಂಠಿತವಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಶೇ 30ರಷ್ಟು ಬಿತ್ತನೆಯಾಗಿದೆ. ಆಗಾಗ ಬೀಳುತ್ತಿರುವ ತುಂತುರು ಮಳೆಯಿಂದಾಗಿ ಬೆಳೆಗೆ ಹಾನಿಯಾಗುವುದು ತಪ್ಪಿದೆ. ಆದರೆ, ಪೈರು ಸಮೃದ್ಧವಾಗಿ ಬೆಳೆದಿಲ್ಲ.
ವಿಜಯನಗರ ಜಿಲ್ಲೆಯಲ್ಲಿ ಜುಲೈನ ಮೊದಲ ಎರಡು ವಾರದಲ್ಲಿ ಮಳೆ ಕಡಿಮೆಯಾಗಿದ್ದರೂ, ಈಗ ಮಳೆಯಾಗುತ್ತಿದೆ. ಹಾಗಾಗಿ, ಮಳೆ ಕೊರತೆ ಪ್ರಮಾಣ ಶೇ 20ಕ್ಕೆ ಇಳಿದಿದೆ. ಇದೇ ರೀತಿ ಮಳೆಯಾದರೆ ತೊಂದರೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಮಳೆಕೊರತೆ ಇದೆ. ಮಳೆಯ ನಿರೀಕ್ಷೆಯಲ್ಲಿ ಮುಂಗಾರು ಆರಂಭದ ನಂತರ ಬಹುತೇಕ ರೈತರು ಬಿತ್ತನೆ ಮಾಡಿದ್ದಾರೆ. ಆ ಬಳಿಕ ಮಳೆ ಕೊರತೆ ಉಂಟಾಗಿತ್ತು. ಎರಡು ದಿನಗಳಿಂದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಕೊಂಚ ನಿರಾಳರಾಗಿದ್ದಾರೆ.
ಹಾಗಿದ್ದರೂ ಬೀದರ್ ಜಿಲ್ಲೆಯಲ್ಲಿ ಮಳೆ ಕೊರತೆ ಪ್ರಮಾಣ ಶೇ 50ರಷ್ಟಿದೆ. 2022ರಲ್ಲಿ ಜಿಲ್ಲೆಯಲ್ಲಿ ತೀವ್ರ ಬರಪರಿಸ್ಥಿತಿ ಎದುರಾಗಿತ್ತು. ಮಳೆ ಕೊರತೆಯ ನಡುವೆಯೇ ಶೇ 90ಕ್ಕೂ ಹೆಚ್ಚು ಪ್ರಮಾಣದಲ್ಲಿ ಬಿತ್ತನೆಯಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಶೇ 35ರಷ್ಟು ಕಲಬುರಗಿ ಜಿಲ್ಲೆಯ ಪ್ರಮುಖ ಬೆಳೆಯಾದ ತೊಗರಿಯನ್ನು 4.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬರಗಾಲ ಬಂದಿತ್ತು. ತೊಗರಿಗೆ ನೆಟೆ ರೋಗ ಬಂದಿದ್ದರಿಂದ ರೈತರಿಗೆ ವಿಶೇಷ ಪರಿಹಾರ ನೀಡಲಾಗಿತ್ತು. ಅಫಜಲಪುರ, ಜೇವರ್ಗಿ, ಕಲಬುರಗಿ ತಾಲ್ಲೂಕಿನಲ್ಲಿ ಮೇ ತಿಂಗಳಲ್ಲಿ ಉತ್ತಮವಾಗಿ ಸುರಿದ ಮಳೆ ಜೂನ್, ಜುಲೈನಲ್ಲಿ ಕೈಕೊಟ್ಟಿದೆ. ಹೀಗಾಗಿ, ಮುಂಗಾರು ಮಳೆ ನಂಬಿ ಹತ್ತಿ, ತೊಗರಿ ಬೆಳೆದ ರೈತರು ನಿರಾಶರಾಗಿದ್ದಾರೆ.
ಯಾದಗಿರಿಯಲ್ಲಿ ಶೇ 25ರಷ್ಟು ಕಡಿಮೆ ಮಳೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈನಲ್ಲಿ ಶೇ 17ರಷ್ಟು ಮಳೆ ಕೊರತೆ ಆಗಿದೆ. ತೊಗರಿ ಮತ್ತು ಹತ್ತಿ ಬೆಳೆಗಳು ನೀರಿಲ್ಲದೆ ನಲುಗುತ್ತಿವೆ.
ರೈತರು ಹೇಳುವುದೇನು?
ಚದುರಿದಂತೆ ಸೋನೆ ಮಳೆಯಾಗುತ್ತಿರುವ ಕಾರಣ ಭೂಮಿ ನೆನೆಯುತ್ತಿಲ್ಲ. ಈ ಮಳೆಗೆ ಬಿತ್ತನೆ ಮಾಡಲೂ ಸಾಧ್ಯವಿಲ್ಲ. ಇನ್ನೊಂದು ವಾರದಲ್ಲಾದರೂ ಮಳೆ ಸುರಿದರೆ ಬಿತ್ತನೆ ಸಾಧ್ಯವಿದೆ. ಇಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕುತ್ತೇವೆ–ಡಿ.ಎಂ.ಚನ್ನಕೇಶವಮೂರ್ತಿ, ಈಶ್ವರಗೆರೆ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
ಜಿಲ್ಲೆಯಲ್ಲಿ ಮಳೆ ತಿಂಗಳಿಡೀ ಬಂದಿಲ್ಲ. ಆಗೊಮ್ಮೆ ಈಗೊಮ್ಮೆ ಬಂದಿದೆ. ಮಳೆ ಆಗಾಗ್ಗೆ ಸುರಿದರೆ ನೆಲ ಹದವಾಗುತ್ತದೆ. ಒಂದೆರಡು ದಿನ ಜೋರಾಗಿ ಬಂದು ಹೋದರೆ ಪ್ರಯೋಜನವಾಗದು. ಈಗಿನ ಪರಿಸ್ಥಿತಿ ನೋಡಿದರೆ ಈ ಸಲವೂ ಬರಗಾಲದ ಛಾಯೆ ಆವರಿಸುವಂತಿದೆ–ಆದೀಶ್, ಪಾಲಬೋವಿದೊಡ್ಡಿ, ಬೆಂಗಳೂರು ದಕ್ಷಿಣ ಜಿಲ್ಲೆ
ಉತ್ತಮ ಮಳೆ ನಿರೀಕ್ಷೆಯಲ್ಲಿ ಹತ್ತಿ, ತೊಗರಿ ಬಿತ್ತಿದ್ದೆವು. ಆದರೆ, ಬೆಳೆಯುವ ಹಂತದಲ್ಲಿ ಉತ್ತಮ ಮಳೆ ಆಗದೇ ಇದ್ದುದರಿಂದ ಬೆಳೆಗಳು ಒಣಗಿ ಹೋಗುತ್ತಿವೆ–ಸಂತೋಷ ಗಂಜಿ, ಮಾಶಾಳ ಗ್ರಾಮ, ಅಫಜಲಪುರ ತಾಲ್ಲೂಕು, ಕಲಬುರಗಿ ಜಿಲ್ಲೆ
ಅಧಿಕಾರಿಗಳು ಏನಂತಾರೆ?
ಜಿಲ್ಲೆಯಲ್ಲಿ ಜೂನ್‌ನಲ್ಲಿ ಮಳೆ ಕೊರತೆ ಉಂಟಾಗಿದೆ. ನಮ್ಮಲ್ಲಿ ಮುಂಗಾರು ಮಳೆ ಆಗುವುದೇ ಕೊನೆ ಹಂತದಲ್ಲಿ. ಹೀಗಾಗಿ, ಈ ತಿಂಗಳಾಂತ್ಯದಲ್ಲಿ ಮಳೆ ಬರುವ ಭರವಸೆ ಇದೆ. ಬಿತ್ತನೆಗೆ ಇನ್ನೂ ಅವಕಾಶ ಇದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗಿಲ್ಲ-ಎಂ.ಆರ್.ರವಿ, ಕೋಲಾರ ಜಿಲ್ಲಾಧಿಕಾರಿ
ವಾರದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಮಳೆ ಬಾರದಿದ್ದರೆ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ-ಟಿ.ವೆಂಕಟೇಶ್, ಚಿತ್ರದುರ್ಗ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಮಳೆ ಆಶಾದಾಯಕವಾಗಿದ್ದು, ಇನ್ನೂ ನಾಲ್ಕು ದಿನಗಳವರೆಗೆ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಹಾಗಾಗಿ, ರೈತರು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಜಾನುವಾರುಗಳಿಗೂ ಮೇವಿನ ಕೊರತೆ ಇಲ್ಲ-ಸಮದ್ ಪಟೇಲ್, ಕಲಬುರಗಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ
ಜಿಲ್ಲೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಜೂನ್, ಜುಲೈ ತಿಂಗಳಲ್ಲಿ ಮಳೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ರೈತರು ಆತಂಕ ಪಡಬೇಕಿಲ್ಲ-ದೇವಿಕಾ ಆರ್., ಬೀದರ್ ಜಂಟಿ ಕೃಷಿ ನಿರ್ದೇಶಕಿ
ದಕ್ಷಿಣ ಒಳನಾಡು ವ್ಯಾಪ್ತಿಯ ತುಮಕೂರು ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೂ ವರುಣನ ಸಿಂಚನವಾಗುತ್ತಿಲ್ಲ. ಬೀಸುವ ಗಾಳಿಗೆ ಮೋಡಗಳು ಚದುರುತ್ತಿದ್ದು ಕೆಲವು ಭಾಗಗಳಲ್ಲಿ ಸಣ್ಣ ಹನಿಗಳು ಬಿದ್ದು ಭೂಮಿಯ ಮೇಲ್ಮೈಯನ್ನು ಮಾತ್ರ ತುಸು ತೇವ ಮಾಡುತ್ತಿದೆ. ಇದರಿಂದ ಉಳುಮೆ ಬಿತ್ತನೆ ಮಾಡಲಾಗುತ್ತಿಲ್ಲ. ತುಮಕೂರು ಜಿಲ್ಲೆಯಲ್ಲಿ ಮುಂಗಾರು ಪೂರ್ವದ ಮಳೆಗೆ ಬಿತ್ತನೆ ಮಾಡಿದ್ದ ಹೆಸರು ಉದ್ದು ಅಲಸಂದೆ ಬೆಳೆ ಕೆಲವು ಕಡೆಗಳಲ್ಲಿ ಒಣಗಿದ್ದು ಇಳುವರಿ ತೀವ್ರವಾಗಿ ಕುಸಿತ ಕಂಡಿದೆ. ಮಧುಗಿರಿ ಚಿಕ್ಕನಾಯಕನಹಳ್ಳಿ ಶಿರಾ ಭಾಗದಲ್ಲಿ ಜಾನುವಾರು ಮೇವಿಗೆ ಸಮಸ್ಯೆ ಆರಂಭವಾಗಿದೆ.
ಕೋಲಾರ ಜಿಲ್ಲೆಯಲ್ಲಿ ಶೇ 3.2ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ರಾಗಿ ಬಿತ್ತನೆ ಕೇವಲ 522 ಹೆಕ್ಟೇರ್‌ನಲ್ಲಿ (ಗುರಿ 54136) ನಡೆದಿದೆ. ಆಗಸ್ಟ್ 15ರವರೆಗೆ ಬಿತ್ತನೆಗೆ ಅವಕಾಶವಿದ್ದು ಮುಗಿಲತ್ತ ರೈತರ ಚಿತ್ತ ನೆಟ್ಟಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ 9.56ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಾದ್ಯಂತ ಜೂನ್ ತಿಂಗಳಲ್ಲಿ ಮಳೆಯ ಕೊರತೆ ತೀವ್ರವಾಗಿ ಬಾಧಿಸಿತ್ತು. ಈಗ ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಕೃಷಿ ಚಟುವಟಿಕೆ ಕೈಗೊಳ್ಳಬಹುದು ಎಂದು ರೈತರು ಹೇಳಿದ್ದಾರೆ.
ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಐದು ತಾಲ್ಲೂಕುಗಳ ಪೈಕಿ ನಾಲ್ಕೂ ತಾಲ್ಲೂಕುಗಳಲ್ಲಿ (ಹನೂರು ಶೇ 65.9 ಕೊಳ್ಳೇಗಾಲ ಶೇ 58.7 ಯಳಂದೂರು ಶೇ 58.7 ಹಾಗೂ ಚಾಮರಾಜನಗರ ಶೇ 36) ಮಳೆ ಕೊರತೆ ಕಾಣಿಸಿಕೊಂಡಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಾಗಿದ್ದರೆ ಬಯಲುಸೀಮೆ ಅರೆ ಮಲೆನಾಡು ಭಾಗದಲ್ಲಿ ಕಡಿಮೆ ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಶೇ 166ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಅರಸೀಕೆರೆ ಚನ್ನರಾಯಪಟ್ಟಣ ಹಾಸನ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 20ರಷ್ಟು ಕಡಿಮೆ ಮಳೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೊಳಕಾಲ್ಮೂರು ಹಿರಿಯೂರು ಹೊಸದುರ್ಗ ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳೆ ಶೇಂಗಾ ಬಿತ್ತನೆಗೆ ಅವಧಿ ಮೀರುತ್ತಿದ್ದು ವಾರದೊಳಗೆ ಮಳೆ ಬಾರದಿದ್ದರೆ ರೈತರ ಬದುಕು ಅಸ್ತವ್ಯಸ್ತಗೊಳ್ಳಲಿದೆ.
ಉತ್ತರ ಒಳನಾಡು ವ್ಯಾಪ್ತಿಯ ಬಳ್ಳಾರಿ ವಿಜಯನಗರ ಬಾಗಲಕೋಟೆ ವಿಜಯಪುರ ಹಾವೇರಿ ಜಿಲ್ಲೆಗಳಲ್ಲಿ ವಾಡಿಕೆಯಂತೆ ಮಳೆ ಸುರಿದಿಲ್ಲ. ಇದರಿಂದಾಗಿ ಬಿತ್ತನೆಯಲ್ಲಿ ಕುಂಠಿತವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಆಗಾಗ ಬೀಳುತ್ತಿರುವ ತುಂತುರು ಮಳೆಯಿಂದಾಗಿ ಬೆಳೆಗೆ ಹಾನಿಯಾಗುವುದು ತಪ್ಪಿದೆ. ಆದರೆ ಪೈರು ಸಮೃದ್ಧವಾಗಿ ಬೆಳೆದಿಲ್ಲ.
ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಮಳೆಕೊರತೆ ಇದೆ. ಮಳೆಯ ನಿರೀಕ್ಷೆಯಲ್ಲಿ ಮುಂಗಾರು ಆರಂಭದ ನಂತರ ಬಹುತೇಕ ರೈತರು ಬಿತ್ತನೆ ಮಾಡಿದ್ದಾರೆ. ಆ ಬಳಿಕ ಮಳೆ ಕೊರತೆ ಉಂಟಾಗಿತ್ತು. ಎರಡು ದಿನಗಳಿಂದ ಕಲಬುರಗಿ ಬೀದರ್ ರಾಯಚೂರು ಕೊಪ್ಪಳ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಕೊಂಚ ನಿರಾಳರಾಗಿದ್ದಾರೆ.
ಹಾಗಿದ್ದರೂ ಬೀದರ್ ಜಿಲ್ಲೆಯಲ್ಲಿ ಮಳೆ ಕೊರತೆ ಪ್ರಮಾಣ ಶೇ 50ರಷ್ಟಿದೆ. 2022ರಲ್ಲಿ ಜಿಲ್ಲೆಯಲ್ಲಿ ತೀವ್ರ ಬರಪರಿಸ್ಥಿತಿ ಎದುರಾಗಿತ್ತು. ಮಳೆ ಕೊರತೆಯ ನಡುವೆಯೇ ಶೇ 90ಕ್ಕೂ ಹೆಚ್ಚು ಪ್ರಮಾಣದಲ್ಲಿ ಬಿತ್ತನೆಯಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ಜೇವರ್ಗಿ ಕಲಬುರಗಿ ತಾಲ್ಲೂಕಿನಲ್ಲಿ ಮೇ ತಿಂಗಳಲ್ಲಿ ಉತ್ತಮವಾಗಿ ಸುರಿದ ಮಳೆ ಜೂನ್ ಜುಲೈನಲ್ಲಿ ಕೈಕೊಟ್ಟಿದೆ. ಹೀಗಾಗಿ ಮುಂಗಾರು ಮಳೆ ನಂಬಿ ಹತ್ತಿ ತೊಗರಿ ಬೆಳೆದ ರೈತರು ನಿರಾಶರಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳು ನೀರಿಲ್ಲದೆ ನಲುಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.