ಪ್ರಯಾಗರಾಜ್‌ನ ಸಂಗಮದಲ್ಲಿ ನದಿಗೆ ಹಾಕಲಾದ ತ್ಯಾಜ್ಯವನ್ನು ಸ್ವಚ್ಛತಾ ಸಿಬ್ಬಂದಿ ಸಂಗ್ರಹಿಸುತ್ತಾರೆ
‘ಗಂಗಾ ಮಾತೆಯ ಸೇವೆ ಮಾಡುವುದು ನನ್ನ ವಿಧಿ ಲಿಖಿತ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ವಾರಾಣಸಿಯಲ್ಲಿ ಗೆಲುವು ಸಾಧಿಸಿದ ಬಳಿಕ ಹೇಳಿದ್ದರು. ಗಂಗಾ ನದಿಯನ್ನು ಶುದ್ಧೀಕರಿಸುವ ಘೋಷಣೆಯನ್ನು ಮಾಡಿದ್ದರು. ಸರ್ಕಾರ ಇದೇ ಉದ್ದೇಶದಿಂದ ನಮಾಮಿ ಗಂಗೆ ಯೋಜನೆಯನ್ನೂ ಆರಂಭಿಸಿತ್ತು. ಇದಾಗಿ 11 ವರ್ಷಗಳು ಕಳೆದಿವೆ. ಗಂಗೆ ಇನ್ನೂ ಶುದ್ಧವಾಗಿಲ್ಲ. ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳದ ಸಮಯದಲ್ಲಿ ನದಿಯ ನೀರಿನ ಗುಣಮಟ್ಟದ ಕುರಿತಾಗಿ ಬಹಿರಂಗಗೊಂಡಿರುವ ಅಂಕಿಅಂಶ ಮತ್ತು ಮಾಹಿತಿ ಆತಂಕ ಹುಟ್ಟಿಸುವಂತಿವೆ. ಅದರ ಪ್ರಕಾರ, ಸಂಗಮದ ನೀರು ಕುಡಿಯುವುದಕ್ಕೆ ಇರಲಿ, ಸ್ನಾನಕ್ಕೂ ಯೋಗ್ಯವಾಗಿಲ್ಲ
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳವು ಜ.13ರಂದು ಆರಂಭವಾಗಿದ್ದು, ಫೆ. 26ರಂದು ಮುಗಿಯಲಿದೆ. ಈವರೆಗೆ 50 ಕೋಟಿಯಷ್ಟು ಮಂದಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಈ ವೇಳೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಪ್ರಯಾಗರಾಜ್‌ನಲ್ಲಿ ಸಂಗಮದ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಪಿ) ಹೇಳಿದೆ.
ಜ.12ರಿಂದ ಜ.24ರ ನಡುವೆ ಆರು ದಿನ ವಿವಿಧ ಸ್ಥಳಗಳಲ್ಲಿ ಗಂಗಾ, ಯಮುನಾ ನದಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದ ಸಿಪಿಸಿಬಿ, ಅದರ ಗುಣಮಟ್ಟದ ಪರೀಕ್ಷೆ ನಡೆಸಿತ್ತು. ಅದರ ಪ್ರಕಾರ, ಸಂಗಮದ ವಿವಿಧ ಸ್ಥಳಗಳಲ್ಲಿ ಫೀಕಲ್ ಕೋಲಿಫಾರ್ಮ್ (ಎಫ್‌ಸಿ) ಬ್ಯಾಕ್ಟೀರಿಯಾವು ಅನುಮತಿಸ್ಪಲ್ಪಟ್ಟ ಪ್ರಮಾಣಕ್ಕಿಂತ ಹೆಚ್ಚಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಿರುವ (ಎನ್‌ಜಿಟಿ) ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಅನುಮತಿಸಲ್ಪಟ್ಟ ಮಿತಿಯು 100 ಮಿಲಿಲೀಟರ್‌ಗೆ (ಎಂ.ಎಲ್) ಗರಿಷ್ಠ 2,500 ಎಂಪಿಎನ್. ಆದರೆ, ಸಂಗಮದ ಹಲವೆಡೆ ಈ ಪ್ರಮಾಣ ಹತ್ತಾರು ಪಟ್ಟು ಹೆಚ್ಚಿದೆ. ನೀರಿನ ಮಾಲಿನ್ಯ ಹೆಚ್ಚಾಗಲು ಇತರೆ ಕಾರಣಗಳ ಜತೆಗೆ ಮಹಾಕುಂಭ ಮೇಳದ ಅಂಗವಾಗಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸ್ನಾನ ಮಾಡುತ್ತಿರುವುದೂ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಂಗಮದಲ್ಲಿ ಗಂಗಾ ನದಿಯ ನೀರನ್ನು 2024ರ ಜ.12ರಂದು ಪರೀಕ್ಷೆ ಮಾಡಿದ್ದಾಗ ಅದರಲ್ಲಿ ಎಫ್‌ಸಿ ಪ್ರಮಾಣ 2,000 ಎಂಪಿಎನ್ ಇದ್ದರೆ, 2025ರ ಜ.14ರಂದು ಈ ಪ್ರಮಾಣವು 11 ಸಾವಿರ ಎಂಪಿಎನ್ ಆಗಿತ್ತು. ಜ.20ರ ಹೊತ್ತಿಗೆ 49,000 ಎಂಪಿಎನ್‌ನಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಶೃಂಗ್‌ವೇರ್‌ಪುರ ಘಾಟ್‌ನಲ್ಲಿ ಗಂಗಾನದಿಯ ನೀರಿನ ಗುಣಮಟ್ಟವನ್ನು 2025ರ ಜ.13ರಂದು ಪರೀಕ್ಷೆ ಮಾಡಿದಾಗ ಎಫ್‌ಸಿ ಪ್ರಮಾಣವು 23,000 ಎಂಪಿಎನ್ ಇದ್ದರೆ, ದೀಹಾ ಘಾಟ್‌ನಲ್ಲಿ ಅದರ ಪ್ರಮಾಣವು 33,000 ಎಂಪಿಎನ್ ಎಂದು ದಾಖಲಾಗಿದೆ. ಇದೇ ದಿನ ಓಲ್ಡ್ ನೈನಿ ಬ್ರಿಜ್ ಬಳಿ ಯಮುನಾ ನದಿಯ ನೀರಿನ ಗುಣಮಟ್ಟ ಪರೀಕ್ಷಿಸಿದಾಗ ಅದರಲ್ಲಿ ಎಫ್‌ಸಿ ಪ್ರಮಾಣವು 11,000 ಎಂಪಿಎನ್ ಇತ್ತು. 2025ರ ಜ.20ರಂದು ಅದರ ಅದೇ ಬ್ರಿಜ್ ಬಳಿ ಎಫ್‌ಸಿ ಪ್ರಮಾಣವು 23,000 ಎಂಪಿಎನ್ ಇತ್ತು. ಜ.20ರಂದು ಯಮುನಾ ನದಿಯು ಸಂಗಮವನ್ನು ಸೇರುವುದಕ್ಕೆ ಹಿಂದೆಯೇ ನೀರನ್ನು ಪರೀಕ್ಷೆ ಮಾಡಿದಾಗ ಅದರಲ್ಲಿ ಎಫ್‌ಸಿ ಪ್ರಮಾಣವು 33,000 ಇತ್ತು ಎಂಬುದಾಗಿ ವರದಿ ತಿಳಿಸಿದೆ.
ಗಂಗೆಯ ಶುದ್ಧೀಕರಣದ ವಿಚಾರಕ್ಕೆ ಭಾರಿ ಪ್ರಚಾರ ಸಿಕ್ಕಿದ್ದು ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ. ಅವರು ವಾರಾಣಸಿಯಿಂದ 2014ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಗೆದ್ದಾಗ ಗಂಗೆಯ ಶುದ್ಧೀಕರಣ ತಮ್ಮ ಪ್ರಮುಖ ಆದ್ಯತೆ ಎಂದಿದ್ದರು. ಆದರೆ, ಅವರ 11 ವರ್ಷಗಳ ಆಡಳಿತಾವಧಿಯಲ್ಲಿ ನೀಡಿದ್ದ ಭರವಸೆ ಈಡೇರಿಲ್ಲ. ನಮಾಮಿ ಗಂಗೆ ಯೋಜನೆ ಅಡಿ ಸಾವಿರಾರು ಕೋಟಿ ಖರ್ಚಾಗಿದ್ದರೂ ಗಂಗೆ ಮಲಿನವಾಗಿಯೇ ಇದ್ದಾಳೆ.
2019ರಲ್ಲಿ ಪ್ರಯಾಗರಾಜ್ ನಲ್ಲಿ ನಡೆದ ಕುಂಭ ಮೇಳದಲ್ಲಿ ಪ್ರಧಾನಿ ಮೋದಿ ಅವರು ಪುಣ್ಯ ಸ್ನಾನ ಮಾಡಿದ ಸಂದರ್ಭ
ಗಂಗಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರತಿ ದಿನ 1,200 ಕೋಟಿ ಲೀಟರ್‌ಗಳಷ್ಟು ಕೊಳಚೆ ನೀರು ಉತ್ಪತ್ತಿಯಾಗುತ್ತದೆ. ಸದ್ಯ, ಇಲ್ಲಿ 400 ಕೋಟಿ ಲೀಟರ್ ಕೊಳಚೆ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯದ ಘಟಕಗಳಿವೆ. ಗಂಗಾ ನದಿ ದಂಡೆಯಲ್ಲಿರುವ ನಗರಗಳು, ಪಟ್ಟಣಗಳು (97 ಇವೆ) ಈಗಲೂ ಪ್ರತಿ ದಿನ 300 ಕೋಟಿ ಲೀಟರ್‌ಗಳಷ್ಟು ಕೊಳಚೆ ನೀರನ್ನು ನೇರವಾಗಿ ಗಂಗೆಯ ಒಡಲಿಗೆ ಹರಿಸುತ್ತಿವೆ. ಗಂಗೆಯ ಮಾಲಿನ್ಯದಲ್ಲಿ ಕೈಗಾರಿಕೆಗಳ ಪಾಲು ಶೇ 20ರಷ್ಟಿದೆ. ಈ ಪೈಕಿ ರಾಮನಗರ, ಕಾಳಿ ನದಿಗಳ ಅಚ್ಚುಕಟ್ಟು ಪ್ರದೇಶ ಹಾಗೂ ಕಾನ್ಪುರದಲ್ಲಿರುವ ಕಾರ್ಖಾನೆಗಳು ಕೈಗಾರಿಕಾ ಮಾಲಿನ್ಯದ ಮೂಲವಾಗಿವೆ. ಪ್ರತಿ ದಿನ 26 ಕೋಟಿ ಲೀಟರ್‌ಗಳಷ್ಟು ತ್ಯಾಜ್ಯ ನೀರು ನದಿಗೆ ಸೇರುತ್ತಿದೆ.
ನಮಾಮಿ ಗಂಗಾ ಯೋಜನೆ ಘೋಷಿಸುವಾಗ ಗಂಗಾ ನದಿ ಶುದ್ಧೀಕರಣಕ್ಕೆ ಸರ್ಕಾರ ಐದು ವರ್ಷಗಳ ಲೆಕ್ಕಾಚಾರ (ಮೊದಲ ಹಂತ) ಹಾಕಿಕೊಂಡಿತ್ತು. ಅದಕ್ಕಾಗಿ ₹20 ಸಾವಿರ ಕೋಟಿ ಅನುದಾನ ಮೀಸಲಿಟ್ಟಿತ್ತು. ಉದ್ದೇಶಿತ ಯೋಜನೆಗಳು ಪೂರ್ಣಗೊಳ್ಳದಿರುವುದರಿಂದ ಯೋಜನೆಯನ್ನು ಮತ್ತೆ ಐದು ವರ್ಷ ವಿಸ್ತರಿಸಿ (ಎರಡನೇ ಹಂತ), ಹೆಚ್ಚುವರಿ ₹22,500 ಕೋಟಿ ಬಜೆಟ್ ಮೀಸಲಿಟ್ಟಿದೆ. ಇದರಿಂದಾಗಿ ಯೋಜನೆಯ ಒಟ್ಟಾರೆ ಬಜೆಟ್ ₹42,500 ಕೋಟಿಗೆ ಏರಿಕೆಯಾಗಿದೆ. ₹39,604 ಕೋಟಿ ಅಂದಾಜು ವೆಚ್ಚದ 484 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಯೋಜನೆ ಆರಂಭಗೊಂಡ 11 ವರ್ಷಗಳಲ್ಲಿ ಕೇಂದ್ರ ಸರ್ಕಾರವು ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್‌ಎಂಸಿಜಿ) ₹18,138 ಕೋಟಿ ಹಣವನ್ನು ಮಾತ್ರ ಬಿಡುಗಡೆ ಮಾಡಿದೆ. ಎನ್‌ಎಂಸಿಜಿಯು ವೆಚ್ಚ ಮಾಡಿದ ಮೊತ್ತ ₹17,675 ಕೋಟಿ.
ನಮಾಮಿ ಗಂಗಾ ಯೋಜನಾ ವ್ಯಾಪ್ತಿಯಲ್ಲಿ ಮಾಲಿನ್ಯ ಉಂಟು ಮಾಡುವಂತಹ (ಜಿಪಿಐ) 4,246 ಕೈಗಾರಿಕೆಗಳನ್ನು ಗುರುತಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‌ವರೆಗೆ 2,487 ಕೈಗಾರಿಕೆಗಳನ್ನು ವಾರ್ಷಿಕ ಪರಿಶೀಲನೆಗೆ ಒಳಪಡಿಸಲಾಗಿದೆ. ಈ ಪೈಕಿ 572 ಕಾರ್ಖಾನೆಗಳು ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸದಿರುವುದು ಕಂಡುಬಂದಿದೆ.
15 ಕಾರ್ಖಾನೆಗಳನ್ನು ಮುಚ್ಚುವಂತೆ ನೋಟಿಸ್ ನೀಡಲಾಗಿದ್ದು, 557 ಕೈಗಾರಿಕೆಗಳಿಗೆ ಶೋಕಾಸ್ ನೀಡಲಾಗಿದೆ.
ಗಂಗಾ ನದಿ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಅಂಶಗಳನ್ನು ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಪಟ್ಟಿ ಮಾಡಿದೆ. ಅದರಲ್ಲಿ ನದಿಯಲ್ಲಿ ಶವಗಳನ್ನು ವಿಲೇವಾರಿ ಮಾಡುತ್ತಿರುವುದೂ ಒಂದು ಕಾರಣ. ಶವ ಸಂಸ್ಕಾರದ ವೆಚ್ಚ ಭರಿಸಲು ಸಾಧ್ಯವಾಗದಿರುವ ಕಾರಣಕ್ಕೆ ಮೃತದೇಹಗಳನ್ನು ನದಿಗೆ ಎಸೆಯಲಾಗುತ್ತದೆ. ವಾರಾಣಸಿಯಲ್ಲೇ ವಾರ್ಷಿಕವಾಗಿ 40 ಸಾವಿರದಷ್ಟು ಅಂತ್ಯಸಂಸ್ಕಾರ ನಡೆಯುತ್ತವೆ. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಕಟ್ಟಿಗೆಗಳನ್ನು ಬಳಸಲಾಗುತ್ತದೆ. ಪೂರ್ಣವಾಗಿ ಸುಡದ ದೇಹವನ್ನು ನದಿಗೆ ಹಾಕಲಾಗುತ್ತದೆ. ಪ್ರಾಣಿಗಳ ಕಳೇಬರಗಳನ್ನು ಕೂಡ ನದಿಗೆ ಎಸೆಯ ಲಾಗುತ್ತದೆ.
ಉತ್ತರಾಖಂಡದಲ್ಲಿ ಹುಟ್ಟುವ ಗಂಗಾ ನದಿಯು ಉತ್ತರ ಪ್ರದೇಶ ಪ್ರವೇಶಿಸುತ್ತಿದ್ದಂತೆ ಮಲಿನಗೊಳ್ಳಲು ಆರಂಭವಾಗುತ್ತದೆ. ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲೂ ಮಲಿನವಾಗಿಯೇ ಹರಿಯುತ್ತದೆ
ಆಧಾರ: ಎಂಎನ್‌ಸಿಜೆ ವೆಬ್‌ಸೈಟ್, ರಾಜ್ಯಸಭೆಗೆ ಸಚಿವರು ನೀಡಿದ ಉತ್ತರ, ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಎನ್‌ಜಿಟಿಗೆ ಸಲ್ಲಿಸಿರುವ ವರದಿ,ಡೌನ್ ಟು ಅರ್ಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.