ADVERTISEMENT

ಆಳ–ಅಗಲ: ಸಂಘಕ್ಕೆ ಮತ್ತೆ ಸರ್ಕಾರಿ ಮನ್ನಣೆ?

ಸರ್ಕಾರ ನೌಕರರು ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಹೇರಲಾಗಿದ್ದ ನಿರ್ಬಂಧ ಸದ್ದಿಲ್ಲದೆ ವಾಪಸ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 0:02 IST
Last Updated 25 ಜುಲೈ 2024, 0:02 IST
<div class="paragraphs"><p> ಆರ್‌ಎಸ್‌ಎಸ್‌</p></div>

ಆರ್‌ಎಸ್‌ಎಸ್‌

   

ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸದಸ್ಯರಾಗುವುದಕ್ಕೆ ಮತ್ತು ಅದರ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ 1966ರಲ್ಲಿ ಕೇಂದ್ರ ಸರ್ಕಾರ ಹೇರಿರುವ ನಿರ್ಬಂಧವನ್ನು ಎನ್‌ಡಿಎ ಸರ್ಕಾರ ಇತ್ತೀಚೆಗೆ ತೆರವುಗೊಳಿಸಿರುವುದು ರಾಜಕೀಯ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಕೇಂದ್ರವು ದಿಢೀರ್ ಆಗಿ ಈ ನಿರ್ಧಾರ ತೆಗೆದುಕೊಂಡ ಸಮಯ, ಉದ್ದೇಶಗಳ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ...

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಹಿಂದಿನ ಅವಧಿಗಳಲ್ಲಿ ಮಹತ್ವದ ವಿಚಾರಗಳ ಬಗ್ಗೆ ದಿಢೀರ್ ನಿರ್ಧಾರ ತಳೆದು ಜನರಲ್ಲಿ ಅಚ್ಚರಿ ಮೂಡಿಸುತ್ತಿತ್ತು. ಮೂರನೇ ಅವಧಿಯಲ್ಲಿಯೂ ಇಂತಹದ್ದೇ ಒಂದು ನಿರ್ಧಾರವನ್ನು ತೆಗೆದುಕೊಂಡು, ಅದನ್ನು ಸದ್ದಿಲ್ಲದೇ ಜಾರಿಗೆ ತಂದಿದೆ.

ADVERTISEMENT

ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸದಸ್ಯತ್ವ ಪಡೆಯುವುದಕ್ಕೆ ಮತ್ತು ಅದರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ತೆರವುಗೊಳಿಸಿದೆ.  

ವಾಸ್ತವವಾಗಿ, ಕೇಂದ್ರ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಜುಲೈ 9ರಂದೇ ಜ್ಞಾಪನಾ ‍ಪತ್ರವನ್ನು ಹೊರಡಿಸಿದೆ. ಆದರೆ, ಅದನ್ನು ಮೊದಲ ಬಾರಿಗೆ ಬಯಲಿಗೆ ತಂದಿದ್ದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಮುಖ್ಯಸ್ಥ ಪವನ್ ಖೇರಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್. ಜುಲೈ 21ರಂದು ‘ಎಕ್ಸ್‌’ನಲ್ಲಿ ಜ್ಞಾಪನಾ ಪತ್ರವನ್ನು ಇಬ್ಬರೂ ಹಂಚಿಕೊಂಡರು. ‘58 ವರ್ಷಗಳ ಹಿಂದೆ, ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸುವುದಂತೆ ಸರ್ಕಾರ ನಿಷೇಧಿಸಿತ್ತು. ಮೋದಿ ಸರ್ಕಾರವು ನಿಷೇಧವನ್ನು ಹಿಂತೆಗೆದುಕೊಂಡಿದೆ’ ಎಂದು ಪವನ್ ಖೇರಾ ಉಲ್ಲೇಖಿಸಿದ್ದರು.

ಜೈರಾಂ ರಮೇಶ್ ಅವರು ಮೋದಿ ಸರ್ಕಾರವು ಹೊರಡಿಸಿರುವ ಜ್ಞಾಪನಾ ಪತ್ರದ ಜತೆಗೆ 1966ರಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಆರ್‌ಎಸ್‌ಎಸ್‌ ಜತೆಗೆ ಗುರುತಿಸಿಕೊಳ್ಳದಂತೆ ನಿಷೇಧ ಹೇರಿದ್ದ ಮೂಲ ಆದೇಶದ ಪ್ರತಿಯನ್ನೂ ಹಂಚಿಕೊಂಡಿದ್ದರು. ಜುಲೈ 22ರಂದು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಬಿಜೆಪಿ ಐಟಿ ಸೆಲ್ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು, ‘1966ರಲ್ಲಿ ಆರ್‌ಎಸ್‌ಎಸ್‌ ಮೇಲೆ ಹೇರಿದ್ದ ಅಸಾಂವಿಧಾನಿಕ ನಿಷೇಧವನ್ನು ಮೋದಿ ಸರ್ಕಾರವು ಹಿಂದಕ್ಕೆ ಪಡೆದಿದೆ’ ಎಂದು ಉಲ್ಲೇಖಿಸಿ, ಅದಕ್ಕೆ ಮತ್ತೊಂದು ಆಯಾಮ ನೀಡಿದರು.

ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೇನೆಂದರೆ, 1966ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ, 1964ರ ಭಾರತೀಯ ಸೇವಾ ನಿಯಮ (5) ಉಪನಿಯಮ (1)ರ ಪ್ರಕಾರ, ಸರ್ಕಾರಿ ಸಿಬ್ಬಂದಿ, ಆರ್‌ಎಸ್‌ಎಸ್‌ ಮತ್ತು ‘ಜಮಾತ್ ಎ ಇಸ್ಲಾಮಿ’ ಸಂಘಟನೆಗಳ ಸದಸ್ಯತ್ವ ಪಡೆಯುವುದನ್ನು ಮತ್ತು ಅವುಗಳ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿತ್ತು. ಮೋದಿ ಸರ್ಕಾರ ಜುಲೈ 9ರಂದು ಹೊರಡಿಸಿರುವ ಜ್ಞಾಪನಾ ಪತ್ರದಲ್ಲಿ ಆರ್‌ಎಸ್‌ಎಸ್‌ ಅನ್ನು ಈ ಹಿಂದಿನ 1966ರ ಆದೇಶದಿಂದ ಹೊರಗಿಟ್ಟಿರುವುದಾಗಿ ತಿಳಿಸಿದೆ. ಆದರೆ, ಜ್ಞಾಪನಾ ಪತ್ರದಲ್ಲಿ ಮತ್ತೊಂದು ಸಂಘಟನೆಯಾದ ‘ಜಮಾತ್ ಎ ಇಸ್ಲಾಮಿ’ ಕುರಿತು ‍ಪ್ರಸ್ತಾಪ ಮಾಡಿಲ್ಲ ಇದರ ಬಗ್ಗೆ ವಿರೋಧ ಪಕ್ಷಗಳು ಸೇರಿದಂತೆ ಹಲವರಿಂದ ಮೋದಿ ಸರ್ಕಾರದ ವಿರುದ್ಧ ಟೀಕೆ ಹಾಗೂ ವಿರೋಧ ವ್ಯಕ್ತವಾಗಿದೆ. 

ಆರ್‌ಎಸ್‌ಎಸ್‌ ಮೆಚ್ಚಿಸುವ ಪ್ರಯತ್ನವೇ? 

2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದಿತ್ತು. 10 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಈ ನಿರ್ಬಂಧವನ್ನು ತೆರವುಗೊಳಿಸಬಹುದಿತ್ತು. ಆದರೆ, ಆಗ ನಿರ್ಧಾರ ಕೈಗೊಳ್ಳದ ಬಿಜೆಪಿ, ಈಗ ಮೂರನೇ ಅವಧಿಯಲ್ಲಿ ಪೂರ್ಣ ಬಹುಮತ ಇಲ್ಲದಿದ್ದರೂ, ನಿರ್ಬಂಧ ವಾಪಸ್‌ ಪಡೆದಿದ್ದಾದರೂ ಏಕೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಬಿಜೆಪಿಯೊಂದಿಗೆ ಮುನಿಸಿಕೊಂಡಿರುವ ಆರ್‌ಎಸ್‌ಎಸ್‌ ಅನ್ನು ಮೆಚ್ಚಿಸಲು ಸರ್ಕಾರ ನಿರ್ಬಂಧ ತೆರವು ಮಾಡಿದೆ ಎಂದು ಪ್ರಮುಖವಾಗಿ ವಿಶ್ಲೇಷಿಸಲಾಗುತ್ತಿದೆ.

ಆರ್‌ಎಸ್ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ಬಾರಿಯ ಚುನಾವಣಾ ಫಲಿತಾಂಶದ ನಂತರ ನೀಡಿದ್ದ (ನಿಜವಾದ ಜನಸೇವಕನಿಗೆ ಅಹಂಕಾರ ಇರುವುದಿಲ್ಲ. ಬೇರೆಯವರಿಗೆ ನೋವುಂಟು ಮಾಡದೆ ಕೆಲಸ ಮಾಡುತ್ತಾನೆ) ಮತ್ತು ವಾರದ ಹಿಂದೆ ನೀಡಿದ್ದ (ಮನುಷ್ಯ ಸೂಪರ್‌ಮ್ಯಾನ್‌, ದೇವರು, ಭ‌ಗವಂತ ಆಗಲು ಬಯಸುತ್ತಾನೆ) ಹೇಳಿಕೆಗಳು ಪರೋಕ್ಷವಾಗಿ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡಿದ್ದವು ಎಂಬರ್ಥದಲ್ಲಿ ಚರ್ಚೆ ನಡೆದಿತ್ತು. ವಿರೋಧ ಪಕ್ಷದ ಮುಖಂಡರು ಈ ಹೇಳಿಕೆಗಳನ್ನು ಇಟ್ಟುಕೊಂಡು ಮೋದಿಯವರನ್ನು ಕುಟುಕಿದ್ದರು. 

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ‘ಪಕ್ಷವು ಈಗ ಬೆಳೆದಿದೆ. ಹಿಂದಿನಂತೆ ಆರ್‌ಎಸ್‌ಎಸ್‌ನ ಅಗತ್ಯ ಬೇಕಿಲ್ಲ. ತನ್ನ ವ್ಯವಹಾರಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಆರ್‌ಎಸ್‌ಎಸ್‌ ಒಂದು ಸೈದ್ಧಾಂತಿಕ ಸಂಘಟನೆಯಾಗಿದ್ದು, ಅದರ ಕೆಲಸವನ್ನು ಅದು ಮಾಡುತ್ತಿದೆ’ ಎಂದು ಹೇಳಿದ್ದರು. 

‘ಆರ್‌ಎಸ್‌ಎಸ್‌–ಬಿಜೆಪಿ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಈ ಚುನಾವಣೆಯಲ್ಲಿ ಸಂಘವು ಸಕ್ರಿಯವಾಗಿ ತೊಡಗಿಕೊಂಡಿಲ್ಲ’ ಎಂಬ ಮಾತುಗಳು ಚುನಾವಣೆ ಹೊತ್ತಿನಲ್ಲಿ ಕೇಳಿಬಂದಿದ್ದವು.

ಫಲಿತಾಂಶವೂ ಬಿಜೆಪಿ ನಿರೀಕ್ಷೆಗೆ ವಿರುದ್ಧವಾಗಿ ಬಂದಿರುವುದರಿಂದ ಸರ್ಕಾರ ನಡೆಸಲು ಮೈತ್ರಿ ಪಕ್ಷಗಳ ಸಹಕಾರ ಅನಿವಾರ್ಯ ಎಂಬ ಪರಿಸ್ಥಿತಿ ಇದೆ. ಪ್ರಮುಖ ರಾಜ್ಯಗಳಲ್ಲಿ ಚುನಾವಣೆಗಳೂ ನಡೆಯಲಿವೆ. ಇಂತಹ ಸಂದರ್ಭದಲ್ಲಿ ಪಕ್ಷದ ಸಿದ್ಧಾಂತದ ತಾಯಿ ಬೇರು ಆರ್‌ಎಸ್‌ಎಸ್‌ನೊಂದಿನ ಸಂಬಂಧ ಇನ್ನಷ್ಟು ಹಳಸುವುದನ್ನು ತಪ್ಪಿಸಲು ಬಿಜೆಪಿ ಈ ತೀರ್ಮಾನ ಕೈಗೊಂಡಿದೆ ಎಂಬುದು ಈಗ ನಡೆಯುತ್ತಿರುವ ವಿಶ್ಲೇಷಣೆಯ ತಿರುಳು. 

ಮುಂದಿನ ವರ್ಷಕ್ಕೆ ಆರ್‌ಎಸ್‌ಎಸ್‌ ಸ್ಥಾಪನೆಯಾಗಿ 100 ವರ್ಷಗಳಾಗುತ್ತವೆ. ಸಂಘಟನೆಗೆ ಇನ್ನಷ್ಟು ಶಕ್ತಿ ತುಂಬಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರಬಹುದು ಎಂದು ಹೇಳುತ್ತದೆ ಮತ್ತೊಂದು ವಿವರಣೆ.

ಆದರೆ, ಆರ್‌ಎಸ್‌ಎಸ್‌ನ ವಾದವೇ ಬೇರೆ. ಇಂತಹ ಆದೇಶ ಇತ್ತು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಈಗ ಅದರ ಪ್ರಸ್ತುತತೆಯೂ ಇಲ್ಲ. ಆದೇಶ ಇದ್ದರೂ, ಸರ್ಕಾರಿ ನೌಕರರು ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು. ಆರ್‌ಎಸ್‌ಎಸ್‌ ಪ್ರಮುಖ ಆಶಯಗಳಾಗಿದ್ದ ರಾಮಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ತೆರವಿನಂತಹ ನಿರ್ಧಾರಗಳನ್ನು ಮೋದಿ ಸರ್ಕಾರ ಮಾಡಿದೆ. ಇದು ಅದಕ್ಕಿಂತ ದೊಡ್ಡ ನಿರ್ಧಾರವೇ ಎಂಬುದು ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡವರ ಪ್ರಶ್ನೆ.

1966ರ ಆದೇಶದಲ್ಲಿ ಏನಿದೆ?

‘ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಮತ್ತು ಜಮಾತ್‌–ಎ–ಇಸ್ಲಾಮಿ ಸಂಘಟನೆಗಳ ಸದಸ್ಯರಾಗುವುದು ಮತ್ತು ಅವುಗಳ ಚಟುವಟಿಕೆಗಳಲ್ಲಿ ಭಾಗವಹಿಸುವ ವಿಚಾರವಾಗಿ ಕೆಲವು ಅನುಮಾನಗಳು ವ್ಯಕ್ತವಾಗಿವೆ. ಈ ಎರಡು ಸಂಘಟನೆಗಳ ಚಟುವಟಿಕೆಗಳ ಸ್ವರೂಪಗಳು ಹೇಗಿರುತ್ತವೆ ಎಂದರೆ, ಅವುಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದು ಕೇಂದ್ರ ನಾಗರಿಕ ಸೇವಾ ನಿಯಮಗಳು–1964ರ 5ನೇ ನಿಯಮದ ಒಂದನೇ ಉಪನಿಯಮಕ್ಕೆ ವಿರುದ್ಧ ಎಂದು ಸರ್ಕಾರ ಯಾವಾಗಲೂ ಪರಿಭಾವಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಸಂಘಟನೆಗಳ ಸದಸ್ಯರಾಗಿರುವ ಅಥವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಯಾವುದೇ ನೌಕರರು ಶಿಸ್ತು ಕ್ರಮಕ್ಕೆ ಅರ್ಹರು’ ಎಂದು ಗೃಹ ಸಚಿವಾಲಯ 1966ರ ನವೆಂಬರ್‌ 30ರಂದು ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.    

ಕೇಂದ್ರ ನಾಗರಿಕ ಸೇವಾ ನಿಯಮಗಳು 1964ರ 5ನೇ ನಿಯಮದ 1ನೇ ಉಪನಿಯಮ ಹೇಳುವುದೇನು?

ಸರ್ಕಾರಿ ನೌಕರ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯದಲ್ಲಿ ತೊಡಗಿಕೊಂಡಿರುವ ಅಥವಾ ತೊಡಗಿಕೊಳ್ಳಲಿರುವ ಸಂಘಟನೆಗಳ ಸದಸ್ಯರಾಗುವಂತಿಲ್ಲ ಅಥವಾ ಅವುಗಳೊಂದಿಗೆ ಗುರುತಿಸಿಕೊಳ್ಳುವಂತಿಲ್ಲ ಅಥವಾ ರಾಜಕೀಯ ಚಳವಳಿ, ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ನೆರವು ನೀಡುವಂತಿಲ್ಲ.

l 1948ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯ ಬಳಿಕ

l 1975ರಲ್ಲಿ ಇಂದಿರಾ ಗಾಂಧಿ ಅವರು ತುರ್ತು
ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ

l 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ
ಧ್ವಂಸ ಪ್ರಕರಣದ ನಂತರ

ನಿರ್ಧಾರಕ್ಕೆ ವಿರೋಧ ಏಕೆ?

ತಾತ್ವಿಕತೆಯ ಆಧಾರದ ಮೇಲೆ ಸರ್ಕಾರಿ ನೌಕರರನ್ನು ರಾಜಕೀಯಗೊಳಿಸುವ ಯತ್ನ

ನೌಕರರ ತಟಸ್ಥ ಮನೋಧರ್ಮಕ್ಕೆ ಸವಾಲು

ಸಾಂವಿಧಾನಕ ಸಂಸ್ಥೆಗಳ ಮೇಲೆ ಹಿಡಿತ ಮುಂದುವರೆಸುವ ಯತ್ನ

ಸಂವಿಧಾನದ ಅನುಸಾರ, ರಾಜಕೀಯ ಕಾರ್ಯಸೂಚಿ ಇಲ್ಲದೇ ಸಾಮಾಜಿಕ ಸಂಘಟನೆಯಾಗಿ ಮಾತ್ರ ಕೆಲಸ ಮಾಡುತ್ತೇವೆ ಎಂದು ನೆಹರು ಅವರಿಗೆ ಆರ್‌ಎಸ್‌ಎಸ್‌ ನೀಡಿದ್ದ ವಾಗ್ದಾನದ ಉಲ್ಲಂಘನೆ

ಆರ್‌ಎಸ್‌ಎಸ್‌ಗೆ ಭಾರತದ ವೈವಿಧ್ಯ, ಬಹುಸಂಸ್ಕೃತಿಗಳ ಬಗ್ಗೆ ನಂಬಿಕೆ ಇಲ್ಲ. ಅವರು ಹಿಂದೂ ರಾಷ್ಟ್ರೀಯತೆಯ ಮೇಲೆ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಾರೆ. ಹಾಗಾಗಿ ಇದು ಭಾರತದ ರಾಷ್ಟ್ರೀಯತೆಗೆ ವಿರುದ್ಧ

ಆಧಾರ: ಪಿಟಿಐ, ಎಎಫ್‌ಪಿ, ‘ಎಕ್ಸ್‌’ ವೇದಿಕೆಯ ಟ್ವೀಟ್‌ಗಳು, ಆರ್‌ಎಸ್‌ಎಸ್‌ ವೆಬ್‌ಸೈಟ್‌, 1966ರ ಆದೇಶ, ಕೇಂದ್ರ ನಾಗರಿಕ ಸೇವಾ ನಿಯಮಗಳು–1964

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.