ADVERTISEMENT

ಆಳ–ಅಗಲ | ಸ್ಮಾರ್ಟ್ ಸಿಟಿ: ಈಡೇರಿತೇ ಆಶಯ?

ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಮುಕ್ತಾಯ; ಕಾಮಗಾರಿಗಳ ಬಗ್ಗೆ ವ್ಯಾಪಕ ದೂರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 23:30 IST
Last Updated 6 ಏಪ್ರಿಲ್ 2025, 23:30 IST
   

ನಗರಗಳ ಜನರ ಜೀವನ ಮಟ್ಟವನ್ನು ಉತ್ತಮ‍ಪಡಿಸುವ ದಿಸೆಯಲ್ಲಿ ದೇಶದ ಆಯ್ದ 100 ನಗರಗಳಲ್ಲಿ ಕೇಂದ್ರ ಸರ್ಕಾರವು 2015ರಲ್ಲಿ ಸ್ಮಾರ್ಟ್ ಸಿಟಿ ಮಿಷನ್ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ರಸ್ತೆ, ಸಾರಿಗೆ ಮುಂತಾದ ಮೂಲಸೌಲಭ್ಯ ಅಭಿವೃದ್ಧಿಪಡಿಸುವುದು, ಸುಸ್ಥಿರ ಮಾರ್ಗಗಳನ್ನು ರೂಪಿಸುವುದು, ಜನರಿಗೆ ಉತ್ತಮ ಸೇವೆ ಒದಗಿಸುವುದು ಈ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸಿ ಮಾದರಿ ನಗರಗಳನ್ನು ರೂಪಿಸುವುದು ಯೋಜನೆಯ ಗುರಿ ಎಂದು ಸರ್ಕಾರ ಪ್ರತಿಪಾದಿಸಿತ್ತು. ಅದಕ್ಕೆ ಪೂರಕವಾಗಿ 100 ನಗರಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಈ ಯೋಜನೆಯ ಗಡುವು ಇದೇ ಮಾ.31ಕ್ಕೆ ಅಂತ್ಯಗೊಂಡಿದೆ.  

100 ನಗರಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ₹1,64,545 ಕೋಟಿ ವೆಚ್ಚದ 8,062 ಯೋಜನೆಗಳ ಪೈಕಿ 7,502 (ಶೇ 93) ಯೋಜನೆಗಳು ಪೂರ್ಣಗೊಂಡಿದ್ದರೆ, 560 (ಶೇ 7ರಷ್ಟು) ಇನ್ನೂ ನಡೆಯುತ್ತಿವೆ. 18 ನಗರಗಳಲ್ಲಿ ಮಾತ್ರ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆ; ಇವುಗಳಲ್ಲಿ ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 4 ನಗರಗಳು ಸೇರಿವೆ. ತೆಲಂಗಾಣ, ಮಣಿಪುರ, ಬಿಹಾರ, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳು ಯೋಜನೆ ಜಾರಿಯಲ್ಲಿ ಹಿಂದುಳಿದಿವೆ.

ಕರ್ನಾಟಕದ ಏಳು ನಗರಗಳು (ಬೆಂಗಳೂರು, ತುಮಕೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಶಿವಮೊಗ್ಗ, ದಾವಣಗೆರೆ) ಯೋಜನೆಯ ಅಡಿ ಆಯ್ಕೆಯಾಗಿದ್ದವು. ರಾಜ್ಯದಲ್ಲಿ ಯೋಜನೆಯ ಅಡಿ ಶೇ 95ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಪೂರ್ಣಗೊಂಡ ಬಹುತೇಕ ಕಾಮಗಾರಿಗಳ ಗುಣಮಟ್ಟ ಉತ್ತಮವಾಗಿಲ್ಲ ಎನ್ನುವ ಕೂಗು ವ್ಯಾಪಕವಾಗಿದೆ; ಹಲವೆಡೆ ಅವ್ಯವಹಾರವೂ ವರದಿಯಾಗಿದೆ. ಯೋಜನೆಯ ಉದ್ದೇಶ ಎಷ್ಟರಮಟ್ಟಿಗೆ ಸಾಕಾರಗೊಂಡಿದೆ ಎನ್ನುವ ಪ್ರಶ್ನೆಯೂ ಮೂಡಿದೆ.   

ADVERTISEMENT

1. ಬೆಂಗಳೂರು: ರಿಪೇರಿಗೆ ಸಿದ್ಧವಾದ ‘ಸ್ಮಾರ್ಟ್’ ಕಾಮಗಾರಿಗಳು

ಬೆಂಗಳೂರಿನಲ್ಲಿ ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಅಡಿ 53 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವು 2022ರ ಜೂನ್‌ ಅಂತ್ಯಕ್ಕೆ ಮುಗಿಯಬೇಕಿತ್ತು. ಆದರೆ, ಮೂರು ಬಾರಿ ಅವಧಿ ವಿಸ್ತರಣೆಯಾಗಿದ್ದರೂ ‘ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ ಎಂಬ ವಿಶೇಷ ಉದ್ದೇಶಿತ ಘಟಕ //(ಎಸ್‌ಪಿಟಿ)// ರದ್ದಾಗುವ ಹಂತಕ್ಕೆ ಬಂದಿದ್ದರೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಇನ್ನೂ ಒಂದು ಕಾಮಗಾರಿ ಬಾಕಿ ಇದೆ. ಆದರೆ, ಪೂರ್ತಿ ಹಣ ಬಿಡುಗಡೆಯಾಗಿದ್ದು, ಅದರಲ್ಲಿ ಸುಮಾರು ₹90 ಕೋಟಿ ಉಳಿದಿದೆ. 

ಸ್ಮಾರ್ಟ್‌ ಸಿಟಿ ಯೋಜನೆಯ ಅಡಿ ₹933.30 ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅದರಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗಾಗಿ ₹860.85 ಕೋಟಿ ಹಣ ವೆಚ್ಚ ಮಾಡಲಾಗಿದೆ. ಸುಮಾರು ಶೇ 43.6ರಷ್ಟು ಹಣವನ್ನು 32 ರಸ್ತೆಗಳ ಅಭಿವೃದ್ಧಿಗೇ ವ್ಯಯಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ₹500 ಕೋಟಿ ಅನುದಾನವನ್ನು ನೀಡಿದ್ದು, ಅದರಲ್ಲಿ ₹66.7 ಕೋಟಿ ಆಡಳಿತ–ಸಿಬ್ಬಂದಿಗೆ ವೆಚ್ಚವಾಗಿದೆ.

ಅನೇಕ ಕಡೆ ಕಳಪೆ ಕಾಮಗಾರಿ ನಡೆದಿದ್ದು, ಪೂರ್ಣಗೊಂಡಿರುವ ಕಾಮಗಾರಿಗಳು ಈಗಾಗಲೇ ರಿಪೇರಿಯ ಹಂತಕ್ಕೆ ಬಂದಿವೆ. ಕೆಲವೆಡೆ ಒಳಚರಂಡಿ ನೀರು ರಸ್ತೆಗಳ ಮೇಲೆಯೇ ಹರಿಯುತ್ತಿದೆ. ಕೆ.ಆರ್‌.ಮಾರುಕಟ್ಟೆಯ ಆರ್ಥಿಕ ಕೇಂದ್ರದ ಮರುಅಭಿವೃದ್ಧಿ ಅವುಗಳ ಗಾಜುಗಳನ್ನು ಬದಲಾಯಿಸಿರುವುದಕ್ಕಷ್ಟೇ ಸೀಮಿತವಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ನೀಡಿರುವ //ವಿದ್ಯುತ್// ವಾಹನಗಳು ಉಪಯೋಗವಾಗದೇ ದೂಳು ಹಿಡಿದಿವೆ.

2. ಮಂಗಳೂರು: 8 ಕಾಮಗಾರಿ ಅಪೂರ್ಣ

ನಗರದಲ್ಲಿ ಸ್ಮಾರ್ಟ್‌ ಸಿಟಿ  ಯೋಜನೆಯಡಿ ಕೈಗೆತ್ತಿಕೊಂಡ 8 ಕಾಮಗಾರಿಗಳು (ಒಟ್ಟು ₹260.17 ಕೋಟಿ ಮೊತ್ತ) ಇನ್ನೂ ಪೂರ್ಣಗೊಂಡಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ₹955.83 ಕೋಟಿ ಮೊತ್ತದಲ್ಲಿ 47 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ ₹475.58 ಕೋಟಿ ಮೊತ್ತದ ಒಟ್ಟು 39 ಕಾಮಗಾರಿಗಳು ಪೂರ್ಣಗೊಂಡಿವೆ.

ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ಸಂಸ್ಥೆಯು ಒಟ್ಟು 10 ಕಾಮಗಾರಿಗಳಿಗೆ ₹220 ಕೋಟಿ ಮೊತ್ತವನ್ನು ಒದಗಿಸಿದ್ದು, ಇವುಗಳನ್ನು ಬೇರೆ ಏಜೆನ್ಸಿಗಳು ಅನುಷ್ಠಾನಗೊಳಿಸಿವೆ. ಇವುಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿ, ಮಹಾಕಾಳಿ ಪಡ್ಪು ರೈಲ್ವೆ ಕೆಳಸೇತುವೆಯೂ ಸೇರಿದಂತೆ ಕೆಲವು ಕಾಮಗಾರಿಗಳು ಬಾಕಿ ಇವೆ. ನಾಲ್ಕು ಕಾಮಗಾರಿಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗಳೂ ಆಮೆಗತಿಯಲ್ಲಿ ನಡೆಯುತ್ತಿವೆ. 

3. ತುಮಕೂರು: 7 ವಾರ್ಡ್‌ಗಳಲ್ಲಿ ಮಾತ್ರ ಯೋಜನೆ

ತುಮಕೂರು ನಗರ ಆಯ್ಕೆಯಾಗಿದ್ದರೂ ಕೇವಲ 7 ವಾರ್ಡ್‌ಗಳನ್ನು ಮಾತ್ರ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಈ ವಾರ್ಡ್‌ಗಳಲ್ಲಿ ಮಾಡಿರುವ ಕಾಮಗಾರಿ ಬಹುತೇಕ ಕಳಪೆಯಾಗಿದೆ. ಯೋಜನೆಯ ಅಡಿ ಒಟ್ಟು ₹990 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ ₹936 ಕೋಟಿ ಖರ್ಚು ಮಾಡಲಾಗಿದೆ. ಯೋಜನೆಯಡಿ 194 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರೆ, 193 ಕಾಮಗಾರಿಗಳು ಮುಗಿದಿವೆ.

₹135 ಕೋಟಿ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ₹62 ಕೋಟಿಯಲ್ಲಿ ಜಿಲ್ಲಾ ಕ್ರೀಡಾಂಗಣ, ₹29.94 ಕೋಟಿ ವ್ಯಯಿಸಿ ನಗರ ಕೇಂದ್ರ ಗ್ರಂಥಾಲಯ ಅಭಿವೃದ್ಧಿ ಪಡಿಸಲಾಗಿದೆ. ಯೋಜನೆ ಮುಗಿದರೂ ಈ ಮೂರು ಕಟ್ಟಡಗಳನ್ನು ಪೂರ್ಣವಾಗಿ ಬಳಸಲು ಸಾಧ್ಯವಾಗಿಲ್ಲ. ‘ತುಮಕೂರು ಸಂತೆ’ ಹೆಸರಿನಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 16 ಮಳಿಗೆ ಹಂಚಿಕೆ ಕಾರ್ಯ ಆಗಿಲ್ಲ. ಬಿ.ಎಚ್‌.ರಸ್ತೆ, ರಿಂಗ್‌ ರಸ್ತೆ, ಮಂಡಿಪೇಟೆ ಮುಖ್ಯರಸ್ತೆ ಸೇರಿದಂತೆ ಬಹುತೇಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕೆಲಸ ಮುಗಿದ ಕೆಲವೇ ದಿನಗಳಿಗೆ ರಸ್ತೆಗಳು ಕುಸಿದು ಮತ್ತೆ ಮತ್ತೆ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  

4. ಬೆಳಗಾವಿ: ಜನರಿಗೆ ಸಮರ್ಪಣೆ ಆಗದ 10 ಕಾಮಗಾರಿಗಳು
ಬೆಳಗಾವಿಯಲ್ಲಿ ₹1,000 ಕೋಟಿ ವೆಚ್ಚದಲ್ಲಿ 107 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈವರೆಗೆ 97 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ 10 ಕಾಮಗಾರಿಗಳಲ್ಲಿ ಕೆಲವು ಅಂತಿಮ ಹಂತದಲ್ಲಿದ್ದರೆ, ಉಳಿದವು ನನೆಗುದಿಗೆ ಬಿದ್ದಿವೆ.

ಕಣಬರಗಿ ಬಳಿಯ ‘ಸ್ಮಾರ್ಟ್‌ ಪಾರ್ಕ್‌’, ಬಸ್‌ ನಿಲ್ದಾಣ ಹಾಗೂ ಕಾಂಪ್ಲೆಕ್ಸ್‌ ಸೇರಿದಂತೆ 10 ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದರೂ ಜನರ ಬಳಕೆಗೆ ದಕ್ಕಿಲ್ಲ. ವ್ಯಾಕ್ಸಿನ್‌ ಡಿಪೊದಲ್ಲಿ ಮುಖ್ಯ ಕಾಮಗಾರಿಗಳು ಬಾಕಿ ಉಳಿದಿವೆ. ಏವಿಯೇಷನ್‌ ಗ್ಯಾಲರಿ, ಕಲಾ ಗ್ಯಾಲರಿ, ಗ್ರಾಮೀಣ ಭಾರತ ಗ್ಯಾಲರಿ, ಸಂಶೋಧನಾ ಸಭಾಂಗಣಗಳು ಇನ್ನೂ ನಿರ್ಮಾಣವಾಗಿಲ್ಲ. ಕೆಲವು ರಸ್ತೆ ಕಾಮಗಾರಿಗಳೂ ಬಾಕಿ ಉಳಿದಿವೆ. 

21 ಪ್ರಶಸ್ತಿ: ನವದೆಹಲಿಯಲ್ಲಿ ಈಚೆಗೆ ನಡೆದ ‘ಸ್ಮಾರ್ಟ್‌ಸಿಟಿ ಎಕ್ಸ್‌ಪೋ–2025’ರಲ್ಲಿ ಬೆಳಗಾವಿ ನಗರಕ್ಕೆ ‘ವರ್ಷದ ಅತ್ಯುತ್ತಮ ನಗರ ನಾಯಕ’ (Best City Leader of the Year) ಪ್ರಶಸ್ತಿ ಬಂದಿದೆ. ವಿಶ್ವಸಂಸ್ಥೆಯ ಪ್ರಶಸ್ತಿ, ಅತ್ಯುತ್ತಮ ಆಡಳಿತ ಪ್ರಶಸ್ತಿ, ಅತ್ಯುತ್ತಮ ನಾವೀನ್ಯತೆ ಪ್ರಶಸ್ತಿ, ಎಂಟರ್‌ಪ್ರೈಸ್ ಎಐ ಮತ್ತು ಬಿಗ್ ಡೇಟಾದಲ್ಲಿ ಅತ್ಯುತ್ತಮ ಪ್ರಶಸ್ತಿಯೂ ಸೇರಿದಂತೆ 21 ಪ್ರಶಸ್ತಿಗಳನ್ನು ಬೆಳಗಾವಿ ಸ್ಮಾರ್ಟ್‌ಸಿಟಿ ಪಡೆದುಕೊಂಡಿದೆ. ಬೆಳಗಾವಿಯಲ್ಲಿ ಘನತ್ಯಾಜ್ಯವನ್ನು ವೈಜ್ಞಾನಿಕ ಹಾಗೂ ಸಮರ್ಪಕವಾಗಿ ನಿರ್ವಹಣೆ ಮಾಡುವ ಕಾರ್ಯಕ್ಕಾಗಿ ಕೇಂದ್ರ ಸರ್ಕಾರದಿಂದ ₹135 ಕೋಟಿ ಹೆಚ್ಚುವರಿ ಅನುದಾನ ದೊರೆತಿದೆ. ಸಿಐಟಿಐಐಎಸ್‌ 2.0 ಅಡಿ ದೇಶದ 18 ನಗರಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಬೆಳಗಾವಿಯೂ ಒಂದಾಗಿದೆ.

5. ಶಿವಮೊಗ್ಗ: ಭ್ರಷ್ಟಾಚಾರದ ವಿರುದ್ಧ ಸರಣಿ ಪ್ರತಿಭಟನೆ

ಅವೈಜ್ಞಾನಿಕ ಕಾಮಗಾರಿ, ವಿಪರೀತ ಭ್ರಷ್ಟಾಚಾರ ಹಾಗೂ ನಗರದ ಅಂದ ಕೆಡಿಸಿದ ಆರೋಪಗಳ ಕಾರಣ ಇಲ್ಲಿನ ನಾಗರಿಕ ವೇದಿಕೆಯ ಸರಣಿ ಪ್ರತಿಭಟನೆಗಳ ನಡುವೆಯೇ ಶಿವಮೊಗ್ಗ ಸ್ಮಾರ್ಟ್‌ ಸಿಟಿ ಸಂಸ್ಥೆಯ ಕಾರ್ಯನಿರ್ವಹಣೆ ಮಾರ್ಚ್ 31ಕ್ಕೆ ಅಂತ್ಯಗೊಂಡಿದೆ.

ಶಿವಮೊಗ್ಗ ಸ್ಮಾರ್ಟ್‌ ಸಿಟಿ ಅಡಿ ₹938 ಕೋಟಿ ವೆಚ್ಚದಲ್ಲಿ ಒಟ್ಟು 76 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಯೋಗ ಭವನ, ಮ್ಯೂಸಿಯಂ, ಶಿವಪ್ಪ ನಾಯಕ ಅರಮನೆ ಪುನರ್‌ನಿರ್ಮಾಣ ಹಾಗೂ ತುಂಗಾ ನದಿಗೆ ದಂಡೆ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ನಿಯಮಬಾಹಿರವಾಗಿ ತಮ್ಮನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಆರೋಪಿಸಿ ಅಸಹಕಾರ ತೋರುತ್ತಿದ್ದ ಸಿಬ್ಬಂದಿಯಿಂದ ಪೊಲೀಸರ ಮಧ್ಯಪ್ರವೇಶದೊಂದಿಗೆ ದಾಖಲೆಗಳನ್ನು ಪಡೆಯಲಾಗಿದೆ. ಮೇಲಧಿಕಾರಿಗಳು ಹೆಚ್ಚುವರಿಯಾಗಿ ₹65 ಲಕ್ಷ ವೇತನ ರೂಪದಲ್ಲಿ ಪಡೆದಿದ್ದು, ಈ ಬಗ್ಗೆ ತನಿಖೆಯಾಗಬೇಕಿದೆ ಎನ್ನುವ ಒತ್ತಾಯ ಕೇಳಿಬಂದಿದೆ. 

6. ಹುಬ್ಬಳ್ಳಿ–ಧಾರವಾಡ: ಅವ್ಯವಹಾರ, ಅವ್ಯವಸ್ಥೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ₹930 ಕೋಟಿ ವೆಚ್ಚದಲ್ಲಿ 64 ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಅವುಗಳಲ್ಲಿ 60 ಕಾಮಗಾರಿ ಮುಕ್ತಾಯವಾಗಿದ್ದು, ಅವನ್ನು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸೇರಿ ವಿವಿಧ ಇಲಾಖೆಗಳಿಗೆ ಹಸ್ತಾಂತರಿಸಲಾಗಿದೆ. ಶೇ 95ರಷ್ಟು ಹಣ ವಿನಿಯೋಗಿಸಲಾಗಿದ್ದು, ಬಾಕಿ ಇರುವ ಕಾಮಗಾರಿಯ ₹55 ಕೋಟಿ ಮಾತ್ರ ಉಳಿದಿದೆ.

ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಾಮಗಾರಿ, ಗ್ರೀನ್ ಮೊಬಿಲಿಟಿ ಕಾರಿಡಾರ್‌ ಕಾಮಗಾರಿ ಕುಂಟುತ್ತಾ ಸಾಗುತ್ತಿವೆ. ಯೋಜನೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಸುರಿದಿದ್ದು ಬಿಟ್ಟರೆ, ಅವು ನಿರೀಕ್ಷಿತ ಅಂತ್ಯ ಕಂಡಿಲ್ಲ. ವೀರಮಾರುತಿ ನಗರದ ಕೊಳೆಗೇರಿ ನಿವಾಸಿಗಳಿಗಾಗಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯ, ಜನತಾ ಬಜಾರ್‌, ಮೀನು ಮಾರುಕಟ್ಟೆ ನವೀಕರಣ ಕಾಮಗಾರಿ ಮುಕ್ತಾಯವಾಗಿ ವರ್ಷಗಳೇ ಕಳೆದಿದ್ದರೂ ಅವು ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ. ನಗರದ 15 ಕಡೆ ನಿರ್ಮಿಸಲಾಗಿರುವ ಇ–ಶೌಚಾಲಯಗಳು ನಿರುಪಯುಕ್ತವಾಗಿವೆ.

ಕೆಲವು ಯೋಜನೆಗಳು ಪೂರ್ಣಗೊಂಡ ತಿಂಗಳೊಪ್ಪತ್ತಲ್ಲಿಯೇ ಅವಸಾನದಂಚಿಗೆ ತಲುಪಿವೆ. ಕೆಲವು ಕಾಮಗಾರಿಗಳ ವಿರುದ್ದ ಲೋಕಾಯುಕ್ತಕ್ಕೂ ದೂರು ಸಲ್ಲಿಕೆಯಾಗಿದೆ. ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅಳವಡಿಸಿರುವ ಸ್ಮಾರ್ಟ್ ಹೆಲ್ತ್‌ ಕೇರ್ ವ್ಯವಸ್ಥೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ವ್ಯಕ್ತವಾಗಿದ್ದು, ಪಾಲಿಕೆ ಸದನ ಸಮಿತಿ ರಚಿಸಿ ತನಿಖೆ ನಡೆಸುತ್ತಿದೆ. 

ನಗರದ ಹೊರವಲಯದಲ್ಲಿ ₹170 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿಯೇ ಅತಿದೊಡ್ಡ ಕ್ರೀಡಾ ಸಮುಚ್ಚಯ ನಿರ್ಮಾಣವಾಗುತ್ತಿದ್ದು, ನಗರದಿಂದ ದೂರ ಇರುವ ಕಾರಣ ಇದು ನಿರುಪಯಕ್ತವಾಗುವ ಸಾಧ್ಯತೆ ಹೆಚ್ಚು.

7. ದಾವಣಗೆರೆ: ಕಾಮಗಾರಿ ಸ್ಥಗಿತ     

ಪೂರ್ಣಗೊಳಿಸಲು ನಿಗದಿಪಡಿಸಿದ್ದ ಗಡುವು ಮುಗಿದಿರುವುದರಿಂದ ಸದ್ಯ ಯೋಜನೆಯ ಅಡಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಯೋಜನೆಯ ಅಡಿ ಕೈಗೆತ್ತಿಕೊಳ್ಳಲಾಗಿದ್ದ ಒಟ್ಟು 117 ಕಾಮಗಾರಿಗಳಲ್ಲಿ 111 ಪೂರ್ಣಗೊಂಡಿವೆ. ಕಾಮಗಾರಿಗಳ ಒಟ್ಟು ವೆಚ್ಚ ₹1,083 ಕೋಟಿ; ಪೂರ್ಣಗೊಂಡ ಕಾಮಗಾರಿಗಳ ಮೊತ್ತ ₹796 ಕೋಟಿ. 

ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣ, ಕುಂದುವಾಡ ಕೆರೆ ಅಭಿವೃದ್ಧಿ, ಮಂಡಕ್ಕಿ ಬಟ್ಟಿ ರಸ್ತೆ, ಹೊಂಡದ ವೃತ್ತದ ಕಲ್ಯಾಣಿ, ಥೀಮ್‌ ಪಾರ್ಕ್‌, ವಿದ್ಯುತ್ ಚಿತಾಗಾರ, ಇ– ಶೌಚಾಲಯ ಜಿಮ್, ‘ಪ್ಯಾನ್‌ ಸಿಟಿ’ ವಿಭಾಗದಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳು ಪೂರ್ಣಗೊಂಡಿವೆ. ತುಂಗಭದ್ರಾ ನದಿಗೆ ಬ್ಯಾರೇಜ್‌ ನಿರ್ಮಾಣ, ‌₹4.95 ಕೋಟಿ ವೆಚ್ಚದ ರಾಮ್‌ ಆ್ಯಂಡ್‌ ಕೋ ವೃತ್ತದ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಕೆಲ ಕಾಮಗಾರಿಗಳು ಬಾಕಿ ಇವೆ. ಬೈಸಿಕಲ್‌ ಶೇರಿಂಗ್‌ ಸೇರಿದಂತೆ ಹಲವು ಕಾಮಗಾರಿಗಳು ಸ್ಥಗಿತಗೊಂಡಿದೆ. ₹42 ಲಕ್ಷ ವೆಚ್ಚದ ಎಲೆಕ್ಟ್ರಿಕ್‌ ಆಟೊ, ನಗರದ ಪ್ರಮುಖ ಸ್ಥಳಗಳು ಹಾಗೂ ಉದ್ಯಾನಗಳಲ್ಲಿ ಒಟ್ಟು  ₹7.94 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಇ–ಶೌಚಾಲಯಗಳಿಗೆ ಸಾರ್ವಜನಿಕರ ಸ್ಪಂದನೆಯೇ ಇಲ್ಲವಾಗಿದೆ.

ಆಧಾರ: ಪ್ರಜಾವಾಣಿಯ ವಿವಿಧ ಬ್ಯೂರೊ, ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ

ಹುಬ್ಬಳ್ಳಿ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಉದ್ಘಾಟನೆ ದಿನವೇ ಹಳಿತಪ್ಪಿ ನಿಂತಿರುವ ಪುಟಾಣಿ ರೈಲು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಉದ್ಘಾಟನೆಗೆ ಸಿದ್ಧವಾಗಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ
ಸ್ಮಾರ್ಟ್‌ಸಿಟಿ ಯೋಜನೆ ಅಡಿ ಬೆಳಗಾವಿ ಬಳಿಯ ಕಣಬರಗಿ ಕೆರೆಗೆ ನಿರ್ಮಿಸಿದ ಉದ್ಯಾನದ ವಿಹಂಗಮ ನೋಟ
ಇ–ಟಾಯ್ಲೆಟ್‌ಗೆ ಬೇಕಿಗೆ ನಿರ್ವಹಣೆ
ಹುಬ್ಬಳ್ಳಿ ಹಳೇ ಕೋರ್ಟ್‌ ವೃತ್ತದ ಬಳಿ ಏಳು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಮಲ್ಟಿ ಲೇವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.