ADVERTISEMENT

ಆಳ–ಅಗಲ | ವಿದ್ಯಾರ್ಥಿಗಳ ಆತ್ಮಹತ್ಯೆ: ಉಸಿರು ಕಸಿಯುತ್ತಿರುವ ‘ಶಿಕ್ಷಣ’

ಬಿ.ವಿ. ಶ್ರೀನಾಥ್
Published 31 ಜುಲೈ 2025, 0:20 IST
Last Updated 31 ಜುಲೈ 2025, 0:20 IST
   
ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ಇಷ್ಟೊಂದು ಪ್ರಮಾಣದಲ್ಲಿ ಏಕೆ ಸಾಯುತ್ತಿದ್ದಾರೆ ಎಂದು ರಾಷ್ಟ್ರದ ಅತ್ಯುನ್ನತ ನ್ಯಾಯಾಲಯವೇ ಪ್ರಶ್ನಿಸುವ ಮಟ್ಟಕ್ಕೆ ಈ ಸಮಸ್ಯೆ ತೀವ್ರ ಸ್ವರೂಪ ತಾಳಿದೆ. 2012ರಲ್ಲಿ ಶೇ 4.91ರಷ್ಟಿದ್ದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವು 2022ರ ಹೊತ್ತಿಗೆ ಶೇ 7.63ಕ್ಕೆ ಹೆಚ್ಚಾಗಿದೆ. ಶಿಕ್ಷಣದಲ್ಲಿ ವಿಫಲವಾದರೆ, ಜೀವನದಲ್ಲಿಯೇ ವಿಫಲವಾದಂತೆ ಎಂದು ಕೆಲವು ವಿದ್ಯಾರ್ಥಿಗಳು ಭಾವಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳು, ನೀಟ್, ಐಐಟಿ ಕನಸುಗಳು ಆಕಾಂಕ್ಷಿಗಳ ಸಾವಿನಲ್ಲಿ ಪರ್ಯವಸಾನಗೊಳ್ಳುತ್ತಿವೆ. ಹಲವು ರೀತಿಯ ಒತ್ತಡ ಮತ್ತು ವೈಫಲ್ಯದಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಶೈಕ್ಷಣಿಕ ವ್ಯವಸ್ಥೆಯ ಪ್ರತಿಬಿಂಬವೂ ಆಗಿದೆ

ಐಐಟಿ ಖರಗಪುರದಲ್ಲಿ ನಾಲ್ಕನೇ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ ಕೋಲ್ಕತ್ತದ ರೀತಂ ಮಂಡಲ್ ಅವರು ಇದೇ ಜುಲೈ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷದ ಜನವರಿಯಿಂದ ಖರಗಪುರದ ಐಐಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಾಲ್ಕನೇ ವಿದ್ಯಾರ್ಥಿ ಅವರು. ಇದೇ ರೀತಿ ಗ್ರೇಟರ್ ನೋಯ್ಡಾದ ಶಾರದಾ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ದಂತ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದ ಜ್ಯೋತಿ ಶರ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಶೀಘ್ರ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದೆ. ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯುವ ದಿಸೆಯಲ್ಲಿ 15 ಅಂಶಗಳ ಮಾರ್ಗಸೂಚಿಯನ್ನು‍ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಪ್ರಕಟಿಸಿದೆ.

ದೇಶದ ಯಾವುದೋ ಭಾಗದಲ್ಲಿ ಯಾವುದೋ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ. ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ, ಅದರ ಹಿಂದೆ ಆತ/ಆಕೆಯ ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿರುತ್ತವೆ. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಪ್ರಮುಖವಾಗಿ ಪರೀಕ್ಷೆಯ ಒತ್ತಡ ಮತ್ತು ಶೈಕ್ಷಣಿಕ ವೈಫಲ್ಯ ಕಾರಣವಾಗಿರುತ್ತವೆ. ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಶೈಕ್ಷಣಿಕ ವ್ಯವಸ್ಥೆಯ ಪ್ರತಿಬಿಂಬವೂ ಆಗಿದೆ.       

ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ, ವಿದ್ಯಾರ್ಥಿಗಳ ಆತ್ಮಹತ್ಯೆ ಏಷ್ಯಾದಲ್ಲಿಯೇ ಹೆಚ್ಚು. ಕೊರಿಯಾದಲ್ಲಿ ಒಟ್ಟು ಆತ್ಮಹತ್ಯೆಗಳ ಪೈಕಿ ವಿದ್ಯಾರ್ಥಿ ಆತ್ಮಹತ್ಯೆಗಳ ಪಾಲು
ಶೇ 12.9. ಇರಾನ್‌ನ ಒಟ್ಟು ಆತ್ಮಹತ್ಯೆಗಳ ಪೈಕಿ ವಿದ್ಯಾರ್ಥಿ ಆತ್ಮಹತ್ಯೆಗಳ ಪಾಲು ಶೇ 5. ಬಾಂಗ್ಲಾದಲ್ಲಿ, ಪ್ರವೇಶ ಪರೀಕ್ಷಗಳಿಗೂ ಮುಂಚೆಯೇ ಶೇ 25ರಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. 

ADVERTISEMENT

ಸಾವಿಗೆ ಕಾರಣವಾಗುತ್ತಿರುವ ನಿರೀಕ್ಷೆ, ಒತ್ತಡ: ಭಾರತದಲ್ಲಿ ಶೈಕ್ಷಣಿಕ ಸಾಧನೆಗೆ ಅತಿಯಾದ ಒತ್ತು ನೀಡಲಾಗುತ್ತಿದ್ದು, ಅದು ಉತ್ತಮ ಭವಿಷ್ಯಕ್ಕೆ ದಾರಿ ಎಂದೇ ಪರಿಗಣಿಸಲಾಗುತ್ತಿದೆ. ನಿರ್ದಿಷ್ಟ ವಿಶ್ವವಿದ್ಯಾಲಯ/ಕಾಲೇಜುಗಳಲ್ಲಿ, ನಿರ್ದಿಷ್ಟ ಕೋರ್ಸ್‌ಗಲ್ಲಿಯೇ ಸೀಟು ಗಳಿಸಬೇಕು ಎನ್ನುವ ಪೋಷಕರ ಮತ್ತು ವಿದ್ಯಾರ್ಥಿಗಳ ಮನೋಭಾವವು ಒತ್ತಡ ಸೃಷ್ಟಿಸುತ್ತಿದೆ. ಅತಿ ಹೆಚ್ಚು ಅಂಕ ಗಳಿಸಬೇಕು ಎನ್ನುವ ಒತ್ತಡ, ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳು, ನೀಟ್, ಐಐಟಿ ಕನಸುಗಳು ಆಕಾಂಕ್ಷಿಗಳ ಸಾವಿನಲ್ಲಿ ಪರ್ಯವಸಾನಗೊಳ್ಳುತ್ತಿವೆ. ದೆಹಲಿ, ಚೆನ್ನೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪರೀಕ್ಷೆಗಳು ನಡೆಯುವ ಮತ್ತು ಫಲಿತಾಂಶ ಪ್ರಕಟಗೊಳ್ಳುವ ಸಂದರ್ಭದಲ್ಲಿ ಮನಶ್ಯಾಸ್ತ್ರಜ್ಞರು, ಆಪ್ತ ಸಮಾಲೋಚಕರ ಬಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು, ಕರೆ ಮಾಡುತ್ತಿರುವುದು ಸಮಸ್ಯೆಗೆ ಕನ್ನಡಿ ಹಿಡಿಯುತ್ತಿದೆ.

ರಾಜಸ್ಥಾನದ ಕೋಟಾಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ವಿವಿಧ ಪ್ರವೇಶ ಪರೀಕ್ಷೆಗಳ ತರಬೇತಿಗಾಗಿ ಪ್ರತಿವರ್ಷ 2 ಲಕ್ಷಕ್ಕೂ ಹೆಚ್ಚು ಮಂದಿ ಬರುತ್ತಾರೆ. ದೆಹಲಿ, ಹೈದರಾಬಾದ್, ಬೆಂಗಳೂರು ನಗರಗಳಲ್ಲಿಯೂ ಅನೇಕ ಕೋಚಿಂಗ್ ಕೇಂದ್ರಗಳಿವೆ. ಇವುಗಳಲ್ಲಿ ಲಕ್ಷಾಂತರ ಮಂದಿ ತರಬೇತಿ ಪಡೆದರೂ ಯಶಸ್ಸು ಗಳಿಸುವುದು ಕೆಲವರು ಮಾತ್ರ. ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ವರದಿಗಳು ಕೋಟಾದಿಂದ ವರದಿಯಾಗುತ್ತಲೇ ಇರುತ್ತವೆ. ‌

ದೇಶದಲ್ಲಿ, ಕಳೆದ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಹೆಚ್ಚಾಗಿದ್ದು, ಉನ್ನತ ಶಿಕ್ಷಣದಲ್ಲಿ ತೊಡಗಿರುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಬಗ್ಗೆ ಕಳವಳ ಹುಟ್ಟಿಸುತ್ತಿದೆ. 18 ವರ್ಷದವರೆಗಿನ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪರೀಕ್ಷೆಗಳು ಪ್ರಮುಖ ಕಾರಣವಾದರೆ, 19ರಿಂದ 24 ವರ್ಷದವರೆಗಿನ ವಿದ್ಯಾರ್ಥಿಗಳಲ್ಲಿ ಇತರೆ ಕಾರಣಗಳೂ ಮುಖ್ಯ ಪಾತ್ರ ವಹಿಸುತ್ತಿವೆ. ಪರೀಕ್ಷೆಗಳ ಭಯ, ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳ ಭಯ ಯುವಜನರನ್ನು ಕೊಲ್ಲುತ್ತಿದೆ. 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಪೈಕಿ ಪರೀಕ್ಷಾ ಭಯದಿಂದ ಸತ್ತವರು
ಶೇ 16ರಷ್ಟು. 

ನಾಲ್ಕು ಪಟ್ಟು ಹೆಚ್ಚು: ವಿದ್ಯಾರ್ಥಿಗಳ ಅತ್ಮಹತ್ಯೆಗಳ ಬಗ್ಗೆ ಅಧಿಕೃತವಾದ, ಇತ್ತೀಚಿನ ಅಂಕಿಅಂಶಗಳೇ ಲಭ್ಯವಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ (ಎನ್‌ಸಿಆರ್‌ಬಿ) ಲಭ್ಯವಿರುವ 2022ರ ದತ್ತಾಂಶವೇ ಈ ಕುರಿತ ಇತ್ತೀಚಿನ ಅಂಕಿಅಂಶವಾಗಿದೆ. ಎನ್‌ಸಿಆರ್‌ಬಿ ದತ್ತಾಂಶವು ಪೊಲೀಸ್ ಇಲಾಖೆಯ ಎಫ್‌ಐಆರ್ ಆಧರಿಸಿದೆ. ವಾಸ್ತವವಾಗಿ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆಯು ಅಧಿಕೃತ ಸಂಖ್ಯೆಗಿಂತ ನಾಲ್ಕು ಪಟ್ಟು ಹೆಚ್ಚಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಭಾರತದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುವುದು ಒಂದು ಅಪರಾಧವಾಗಿರುವುದರಿಂದ ಮತ್ತು ಅದಕ್ಕೆ ಸಾಮಾಜಿಕ ತಾರತಮ್ಯವೂ ಇರುವುದರಿಂದ ಅನೇಕ ಪ್ರಕರಣಗಳು ದಾಖಲಾಗುತ್ತಿಲ್ಲ ಎನ್ನಲಾಗುತ್ತಿದೆ. 

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಲಾಗಿದೆ. ಶಾಲೆಗಳು, ಪೋಷಕರು ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಮಾರ್ಗಸೂಚಿಗಳನ್ನೂ ರೂಪಿಸಲಾಗಿದೆ. ಪ್ರತಿ ವಿಶ್ವವಿದ್ಯಾಲಯದಲ್ಲಿಯೂ ಆಪ್ತ ಸಮಾಲೋಚನೆಯ ವ್ಯವಸ್ಥೆ ಕಲ್ಪಿಸಬೇಕೆಂದು ಯುಜಿಸಿ 2016ರಲ್ಲಿಯೇ ಆದೇಶಿಸಿದೆ. ಆತ್ಮಹತ್ಯೆ ತಡೆ ರಾಷ್ಟ್ರೀಯ ಕಾರ್ಯತಂತ್ರ (ಎನ್‌ಎಸ್‌ಪಿಎಸ್‌) 2022ರ ನವೆಂಬರ್ 21ರಿಂದ ಜಾರಿ ಮಾಡಲಾಗಿದೆ. ಎಲ್ಲ ಹಂತದ ಪರೀಕ್ಷಗಳಲ್ಲೂ ಪೂರಕ ಪರೀಕ್ಷೆಗಳನ್ನು ನಡೆಸುವುದು ಸೇರಿದಂತೆ ಹಲವು ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಸಹಾಯವಾಣಿಗಳನ್ನೂ ಆರಂಭಿಸಲಾಗಿದೆ. ಆದರೆ, ಹೆಚ್ಚಿನ ಕ್ರಮಗಳು ಕಾಗದದಲ್ಲಿಯೇ ಉಳಿದಿವೆ. ಪರಿಣಾಮವಾಗಿ, ದೇಶದ ಒಳಿತಿಗೆ ಬಳಕೆಯಾಗಬೇಕಾದ ಯುವಜನರ ಕೌಶಲ, ಕ್ರಿಯಾ ಸಾಮರ್ಥ್ಯ, ಪ್ರತಿಭೆ ಸಂಪೂರ್ಣವಾಗಿ ಅರಳುವ ಮುನ್ನವೇ ಕಮರಿಹೋಗುತ್ತಿವೆ. ಈ ದಿಸೆಯಲ್ಲಿ, ಶೈಕ್ಷಣಿಕ ಸಾಧನೆ ಅಷ್ಟೇ ಬದುಕಲ್ಲ ಎನ್ನುವುದನ್ನು, ಎಲ್ಲ ಸೋಲು, ವೈಫಲ್ಯಗಳ ಆಚೆಗೂ ಬದುಕಿದೆ ಎನ್ನುವುದನ್ನು ಯುವಜನರಿಗೆ ಅರ್ಥ ಮಾಡಿಸುವುದು ಮುಖ್ಯ ಎಂದು ಶಿಕ್ಷಣ ತಜ್ಞರು ಒತ್ತಾಯಿಸುತ್ತಲೇ ಇದ್ದಾರೆ.

ಕಾರಣಗಳು

ಶೈಕ್ಷಣಿಕ ಒತ್ತಡ, ಅತಿಯಾದ ನಿರೀಕ್ಷೆ, ಆತ್ಮವಿಶ್ವಾಸದ ಕೊರತೆ, ವಿವೇಚನೆಯ ಕೊರತೆ, ಜಾತಿ ತಾರತಮ್ಯ/ದೌರ್ಜನ್ಯ, ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ, ಕಲಿಕಾ ನ್ಯೂನತೆ ಸೇರಿದಂತೆ ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಹಲವು ಕಾರಣಗಳಿರುತ್ತವೆ. ಜತೆಗೆ, ಮಕ್ಕಳ ಬಗೆಗಿನ ಪೋಷಕರ ಮಹತ್ವಾಕಾಂಕ್ಷೆ, ಕುಟುಂಬದಲ್ಲಿನ ಸಾಮಾಜಿಕ, ಆರ್ಥಿಕ ಸಮಸ್ಯೆಗಳು, ಸಂಬಂಧಗಳಲ್ಲಿನ ಸಮಸ್ಯೆಗಳು, ಹಿರಿಯರ ಟೀಕೆ, ಸಾಮರ್ಥ್ಯದ ಹೋಲಿಕೆ, ಬೆಂಬಲದ ಕೊರತೆ, ಮದ್ಯ, ಮಾದಕ ವಸ್ತು ಸೇವನೆಯ ಚಟವೂ ಯುವ ಮನಸ್ಸುಗಳು ಕಮರಲು ಕಾರಣವಾಗುತ್ತಿವೆ.

ಏನು ಮಾಡಬೇಕು? 

  • ಪ್ರತಿಯೊಂದು ವಿ.ವಿ./ಕಾಲೇಜಿನಲ್ಲಿಯೂ ಆಪ್ತ ಸಮಾಲೋಚನೆಯ ವ್ಯವಸ್ಥೆ ಇರಬೇಕು; ಖಿನ್ನತೆ, ಒತ್ತಡದಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಅಗತ್ಯ ನೆರವು ನೀಡಬೇಕು

  • ಮಾನಸಿಕ ಮತ್ತು ದೈಹಿಕ ಆರೋಗ್ಯ ನಿರ್ವಹಣೆಯ ಬಗ್ಗೆ ಶಾಲಾ– ಕಾಲೇಜುಗಳಲ್ಲಿಯೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು

  • ಸರ್ಕಾರ, ಪೋಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಎನ್‌ಜಿಒ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು

  • ರ‍್ಯಾಗಿಂಗ್, ಜಾತಿ/ಲಿಂಗ ತಾರತಮ್ಯ, ಲೈಂಗಿಕ ದೌರ್ಜನ್ಯಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು

  • ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಅತ್ಯುತ್ತಮ ಪದ್ಧತಿಗಳನ್ನು ಎಲ್ಲೆಡೆ ಅಳವಡಿಸಿಕೊಳ್ಳಬೇಕು

  • ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ಸಹಾಯವಾಣಿಗಳನ್ನು ಸ್ಥಾಪಿಸಿ, ಅವು ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು

  • ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವ ಹಾಗೂ ಪ್ರತಿಭಾ ವಿಕಾಸಕ್ಕೆ ಪೂರಕವಾದ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸಬೇಕು

ಪುರುಷರೇ ಹೆಚ್ಚು

ದೇಶದ ವಿದ್ಯಾರ್ಥಿ ಆತ್ಮಹತ್ಯೆಗಳಲ್ಲಿ (2022) ಮಹಾರಾಷ್ಟ್ರ (ಶೇ 14), ತಮಿಳುನಾಡು (ಶೇ 11), ಮಧ್ಯಪ್ರದೇಶ (ಶೇ 10), ‌ಉತ್ತರ ಪ್ರದೇಶ (ಶೇ 8) ಮತ್ತು ಜಾರ್ಖಂಡ್ (ಶೇ 6) ಅಗ್ರ ಸ್ಥಾನ ಪಡೆದಿವೆ. 2021ರ ಅಗ್ರ ಐದು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ (ಶೇ 7) ಸ್ಥಾನ ಪಡೆದಿತ್ತು; ರಾಜಸ್ಥಾನವು 571 ಆತ್ಮಹತ್ಯೆಗಳೊಂದಿಗೆ 10ನೇ ಸ್ಥಾನ ಪಡೆದಿತ್ತು. ಆತ್ಮಹತ್ಯೆಯಿಂದ ಸಾಯುತ್ತಿರುವ ವಿದ್ಯಾರ್ಥಿಗಳಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.