2025ರ ಜ.20ರಂದು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಗಾದಿಗೆ ಏರಿದ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಲಸೆ, ತೆರಿಗೆ ನೀತಿ ಮತ್ತಿತರ ಕಾರಣಗಳಿಂದ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸುತ್ತಿದ್ದಾರೆ. ಟ್ರಂಪ್ ಅವರಿಗೆ ಆಡಳಿತದಲ್ಲಿ, ನೀತಿ ನಿರೂಪಣೆಯಲ್ಲಿ ನೆರವಾಗುತ್ತಿರುವ, ಮುಖ್ಯ ಸಲಹೆ ಸೂಚನೆಗಳನ್ನು ನೀಡುತ್ತಿರುವ ನಂಬಿಕಸ್ಥರ ಒಂದು ತಂಡವೇ ಇದೆ. ಈ ತಂಡದಲ್ಲಿ ವ್ಯಾಪಾರ ಪರಿಣತಿ ಉಳ್ಳವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ವಲಸೆ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಭಿನ್ನ ವೃತ್ತಿಗಳ, ಭಿನ್ನ ಹಿನ್ನೆಲೆಯ ಜನರು ಇದ್ದಾರೆ. ಇವರನ್ನು ಟ್ರಂಪ್ ಅವರ ಆಡಳಿತದ ಬೆನ್ನೆಲುಬು ಎಂದೇ ವಿಶ್ಲೇಷಿಸಲಾಗುತ್ತಿದೆ. ಅವರ ಕೆಲವು ನಿರ್ಧಾರಗಳಿಗೆ ಜಾಗತಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದರೂ ಟ್ರಂಪ್ ಆಪ್ತರ ಪರ ದೃಢವಾಗಿ ನಿಂತಿದ್ದಾರೆ
ಮಾರ್ಕೊ ರುಬಿಯೊ (54): ವಿದೇಶಾಂಗ ಕಾರ್ಯದರ್ಶಿ
ಟ್ರಂಪ್ ಆಡಳಿತ ಕಠಿಣ ರಾಜಕೀಯ ನಿರ್ಧಾರಗಳಿಗೆ ಇವರೇ ಕಾರಣ ಎನ್ನಲಾಗುತ್ತಿದೆ. ಚೀನಾ ಅಮೆರಿಕದ ಪ್ರಮುಖ ಎದುರಾಳಿ ಎನ್ನುವುದು ಇವರ ಪ್ರತಿಪಾದನೆ. ಅಷ್ಟೇ ಅಲ್ಲ, ಕ್ಯೂಬಾ, ವೆನುಜುವೆಲಾ ದೇಶಗಳಿಗೆ ಸಂಬಂಧಿಸಿದ ನೀತಿಗಳೂ ಇವರದೇ ಕೊಡುಗೆ. ‘ಅಮೆರಿಕವೇ ಮೊದಲು’ ನೀತಿ ಇವರದ್ದೇ ಕೂಸು. ಜಾಗತಿಕ ಮಟ್ಟದಲ್ಲಿ ಸಂಘರ್ಷದ ಸ್ಥಳಗಳಿಗೆ ಅಮೆರಿಕದ ಸೇನೆಯನ್ನು ಕಳುಹಿಸುವುದಕ್ಕೆ ಇವರು ವಿರೋಧಿ. ಮಾನವ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿರುವ ಇವರು, ಅಮೆರಿಕವು ವಿದೇಶಗಳ ಮೇಲೆ ನಿರ್ಬಂಧ ಹೇರಬೇಕು ಎನ್ನುವ ನಿಲುವುಳ್ಳವರು. ರಕ್ಷಣೆ ಮತ್ತಿತರ ಕ್ಷೇತ್ರಗಳಲ್ಲಿ ಅಮೆರಿಕ–ಭಾರತದ ನಡುವಿನ ಒಪ್ಪಂದಗಳು ಕೊನೆಗೊಳ್ಳಬೇಕು ಎನ್ನುವ ನಿಲುವಿನ ಇವರು ಭಾರತವು ರಷ್ಯಾದೊಂದಿಗಿನ ಶಸ್ತಾಸ್ತ್ರ ಮತ್ತು ಇಂಧನ ವ್ಯವಹಾರವನ್ನು ನಿಲ್ಲಿಸಬೇಕು ಎನ್ನುತ್ತಾರೆ.
ಕಾಶ್ ಪಟೇಲ್ (44): ಎಫ್‌ಬಿಐ ನಿರ್ದೇಶಕ
ಭಾರತ ಸಂಜಾತ ಆಗಿರುವ ಇವರು ವಕೀಲರಾಗಿ ಅಮೆರಿಕದಲ್ಲಿ ಹೆಸರು ಮಾಡಿದವರು. ಟ್ರಂಪ್ ಆಪ್ತಬಳಗದಲ್ಲಿ ಒಬ್ಬರಾಗಿರುವ ಇವರು, ಪ್ರಸ್ತುತ ಅಮೆರಿಕದ ಮಹತ್ವದ ಹುದ್ದೆ ಅಲಂಕರಿಸಿದ್ದಾರೆ. ಎಫ್‌ಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಹಲವು ಮುಖ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಎಫ್‌ಬಿಐ ಸ್ವರೂಪವನ್ನೇ ಬದಲಿಸಿರುವ ಕಾಶ್ ಪಟೇಲ್, ಸಾವಿರಾರು ಸಿಬ್ಬಂದಿಯನ್ನು ವರ್ಗಾವಣೆ ಮಾಡಿ, ಆಡಳಿತಕ್ಕೆ ಚುರುಕು ತಂದಿದ್ದಾರೆ; ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಿದ್ದಾರೆ. ಎಫ್‌ಬಿಐನಲ್ಲಿ ತೀವ್ರಗತಿಯ ಬದಲಾವಣೆಗಳಿಗೆ ಕಾರಣರಾಗಿರುವ ಪಟೇಲ್ ಅವರ ಬಗ್ಗೆ ರಾಜಕೀಯ ಪಕ್ಷಪಾತ ಅನುಸರಿಸುತ್ತಿದ್ದಾರೆ ಎನ್ನುವುದು ಸೇರಿದಂತೆ ಹಲವು ರೀತಿಯ ಟೀಕೆಗಳೂ ವ್ಯಕ್ತವಾಗಿವೆ.
ಪೀಟರ್ ನವರೊ (76): ವ್ಯಾಪಾರ ಸಲಹೆಗಾರ
ಆರ್ಥಿಕ ತಜ್ಞರಾಗಿರುವ ಪೀಟರ್ ನವಾರೊ ಟ್ರಂಪ್ ಅವರ ವ್ಯಾಪಾರ ಮತ್ತು ತಯಾರಿಕಾ ನೀತಿಗಳ ಸಲಹೆಗಾರ. ಪಾಲುದಾರ ರಾಷ್ಟ್ರಗಳ ಮೇಲೆ ಗರಿಷ್ಠ ಸುಂಕ ಹೇರುವ ಟ್ರಂಪ್ ನಿರ್ಧಾರದ ಹಿಂದಿರುವ ವ್ಯಕ್ತಿ ಇವರು. ಆಕ್ರಮಣಕಾರಿ ವ್ಯಕ್ತಿತ್ವದ ನವರೊ ಅವರ ಆರ್ಥಿಕ ನೀತಿಯೂ ಅದೇ ಮಾದರಿಯದ್ದು. ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಭಾರತದ ವಿರುದ್ಧ ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ ಈಗ ಸುದ್ದಿಯಲ್ಲಿದ್ದಾರೆ. ರಷ್ಯಾ–ಉಕ್ರೇನ್ ಯುದ್ಧವನ್ನು ‘ಮೋದಿ ಯುದ್ಧ’ ಎಂದು ಕರೆದ ನಂತರ ಭಾರತವನ್ನು ‘ಸುಂಕಗಳ ಮಹಾರಾಜ’ ಎಂದು ಟೀಕಿಸಿದರು. ರಷ್ಯಾದೊಂದಿಗೆ ಮಾಡುತ್ತಿರುವ ತೈಲ ವ್ಯಾಪಾರದಿಂದ ಭಾರತದ ‘ಶ್ರೀಮಂತರು’ (ಬ್ರಾಹ್ಮಣರು) ಲಾಭ ಗಳಿಸುತ್ತಿದ್ದಾರೆ ಎಂದು ದೂರಿದರು. ಟ್ರಂಪ್ ಆಡಳಿತದ ನೀತಿ ವಿಶೇಷವಾಗಿ ಸುಂಕ ನೀತಿಯನ್ನು ವಿರೋಧಿಸುತ್ತಿರುವ ಇತರ ಆರ್ಥಿಕ ತಜ್ಞರ ಜೊತೆ ವಾಗ್ವಾದಕ್ಕೂ ಇಳಿದಿದ್ದಾರೆ.
ಪೀಟ್ ಹೆಗ್ಸೆಥ್ (45): ರಕ್ಷಣಾ ಕಾರ್ಯದರ್ಶಿ
ಮಾಜಿ ಸೇನಾಧಿಕಾರಿಯಾಗಿರುವ ಇವರು, ಪತ್ರಕರ್ತರೂ ಹೌದು. ಸಾಕಷ್ಟು ವಿರೋಧದ ನಡುವೆಯೂ, ರಕ್ಷಣಾ ಇಲಾಖೆಯನ್ನು ಯುದ್ಧ ಇಲಾಖೆ (ಡಿಪಾರ್ಟ್‌ಮೆಂಟ್ ಆಫ್ ವಾರ್) ಎಂದು ಮರುನಾಮಕರಣ ಮಾಡಿ, ಇಲಾಖೆಯಲ್ಲಿ ತೀವ್ರ ಬದಲಾವಣೆಗಳನ್ನು ತಂದವರು ಪೀಟ್ ಹೆಗ್ಸೆಥ್. ಭಾರತದ ರಕ್ಷಣೆಗೆ ಅಮೆರಿಕ ನೆರವು ನೀಡಲಿದೆ ಎಂಬ ಭರವಸೆಯೊಂದಿಗೆ ಉಭಯ ದೇಶಗಳ ನಡುವೆ ಒಂದು ದೀರ್ಘ ಕಾಲದ ರಕ್ಷಣಾ ಚೌಕಟ್ಟು ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಕ್ವಾಡ್ ಚಟುವಟಿಕೆಗಳು, ರಕ್ಷಣಾ ಉದ್ಯಮ ಪಾಲುದಾರಿಕೆ ಮತ್ತು ಸಹಭಾಗಿ ವ್ಯವಸ್ಥೆಯ ಮೂಲಕ ಭಾರತದೊಂದಿಗೆ ಸಮಗ್ರ ಸಂಬಂಧ ವೃದ್ಧಿಯ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ತುಳಸಿ ಗಬ್ಬಾರ್ಡ್ (44): ರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆ ಮುಖ್ಯಸ್ಥೆ
ಭಾರತ ಸಂಜಾತರಾಗಿರುವ ಇವರು ಮಾಜಿ ಸೇನಾಧಿಕಾರಿ. ಅಮೆರಿಕದ ಕಾಂಗ್ರೆಸ್ (ಸಂಸತ್) ಸದಸ್ಯೆಯೂ ಆಗಿದ್ದರು. ಪ್ರಸ್ತುತ ರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆ ಮುಖ್ಯಸ್ಥೆಯಾಗಿದ್ದು, ಈ ಹುದ್ದೆಗೆ ಏರಿದ ಮೊದಲ ಹಿಂದೂ ಎನ್ನಿಸಿಕೊಂಡಿದ್ದಾರೆ. ಬೇಹುಗಾರಿಕಾ ಸಂಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಇವರು, ಅದರ ಸಿಬ್ಬಂದಿಯ ಪೈಕಿ ಅರ್ಧದಷ್ಟು ಕಡಿತ ಮಾಡಿದ್ದಾರೆ. ಇವರ ಅರ್ಹತೆ ಮತ್ತು ಹಿಂದಿನ ರಾಜಕೀಯ ನಿಲುವುಗಳು ಭಾರಿ ವಿವಾದಕ್ಕೆ ಕಾರಣವಾಗಿವೆ. ಇವುಗಳ ನಡುವೆಯೂ ಬೇಹುಗಾರಿಕಾ ಸಂಸ್ಥೆಯಲ್ಲಿ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ಅವುಗಳನ್ನು ಜಾರಿಗೊಳಿಸಿದ ಹಿರಿಮೆ ಇವರದ್ದು.
ಹೋವಾರ್ಡ್ ಲುಟ್‌ನಿಕ್ (64): ಹಣಕಾಸು ಕಾರ್ಯದರ್ಶಿ
ಶತಕೋಟ್ಯಧಿಪತಿ ಆಗಿರುವ ಉದ್ಯಮಿ, ಟ್ರಂಪ್ ಆಡಳಿತದ ವ್ಯಾಪಾರ ಮತ್ತು ಹಣಕಾಸು ನೀತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ನಿರ್ವಹಿಸುತ್ತಿರುವ ಪ್ರಮುಖ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ‘ಬ್ರಿಕ್ಸ್’ ಸಂಘಟನೆಯಲ್ಲಿ ಭಾರತ ಭಿನ್ನ ರಾಷ್ಟ್ರ ಎಂದು ಹೇಳಿದ್ದ ಅವರು, ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾಗಳ ಪೈಕಿ ಪಶ್ಚಿಮದ ರಾಷ್ಟ್ರದ ಪರವಾದ ಸ್ಪಷ್ಟ ನಿಲುವನ್ನು ಹೊಂದಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಚೀನಾದ ಪ್ರಾಬಲ್ಯವನ್ನು ಹತ್ತಿಕ್ಕಲು ಅಮೆರಿಕ–ಭಾರತ ನಡುವೆ ಪ್ರಬಲ ವ್ಯಾಪಾರ ಒಪ್ಪಂದ ಇರುವುದು ಎಂಬುದು ಅವರ ಅಭಿಪ್ರಾಯ.
ಸ್ಕಾಟ್ ಬೆಸ್ಸೆಂಟ್ (63): ಖಜಾನೆ ಇಲಾಖೆ ಕಾರ್ಯದರ್ಶಿ
ಕೋಟ್ಯಧಿಪತಿ, ನಿಧಿ ನಿರ್ವಾಹಕರಾಗಿರುವ (ಹೆಜ್ ಫಂಡ್ ಮ್ಯಾನೇಜರ್) ಬೆಸ್ಸೆಂಟ್, ತೆರಿಗೆ ಕಡಿತ ಸೌಲಭ್ಯ ಮುಂದುವರಿಕೆ, ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವುದು ಮತ್ತು ಅಮೆರಿದ ಫೆಡರಲ್ ರಿಸರ್ವ್‌ನ ಪಾತ್ರವನ್ನು ಪರಾಮರ್ಶೆಗೆ ಒಳಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸುಂಕ ಸಮರದ ಸಂದರ್ಭದಲ್ಲಿ ಅಮೆರಿಕ–ಭಾರತದ ಸಂಬಂಧದ ಬಗ್ಗೆ ಮಾತನಾಡಿದ್ದ ಅವರು, ‘ಎರಡೂ ಶ್ರೇಷ್ಠ ದೇಶಗಳಾಗಿದ್ದು, ವ್ಯಾಪಾರ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲಿವೆ’ ಎಂದು ಹೇಳಿದ್ದರು. ಅದರ ಜೊತೆಗೆ, ಭಾರತವು ರಷ್ಯಾ ಮತ್ತು ಚೀನಾದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ಬಗ್ಗೆ ಎಚ್ಚರಿಸಿದ್ದ ಅವರು, ಇದು ಜಾಗತಿಕ ಸ್ಥಿರತೆಯನ್ನು ಹಾಳುಮಾಡುತ್ತದೆ ಎಂದಿದ್ದರು.
ರಾಬರ್ಟ್ ಎಫ್ ಕೆನೆಡಿ ಜ್ಯೂನಿಯರ್ (71): ಆರೋಗ್ಯ ಮತ್ತು ಮಾನವ ಸೇವೆ ಇಲಾಖೆ ಕಾರ್ಯದರ್ಶಿ
ಪರಿಸರ ಸಂರಕ್ಷಣೆ ಪರವಾಗಿ ಮಾತನಾಡುವ ರಾಬರ್ಟ್, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ವಿವಾದಿತ ವ್ಯಕ್ತಿ. ಆರೋಗ್ಯ ಇಲಾಖೆಯನ್ನು ಸಂಪೂರ್ಣವಾಗಿ ಪುನರ್‌ರಚಿಸುವ ಕಾರ್ಯ ಆರಂಭಿಸಿರುವ ಅವರು ನೂರಾರು ಆರೋಗ್ಯ ಕಾರ್ಯಕ್ರಮಗಳು ಮತ್ತು ಉದ್ಯೋಗವನ್ನು ಕಡಿತ ಮಾಡಿದ್ದಾರೆ. ಲಸಿಕೆ ನೀತಿ ಮತ್ತು ಆಟಿಸಂ ಸಂಶೋಧನೆ ವಿಚಾರದಲ್ಲಿ ವಿವಾದಾತ್ಮಕ ನಿರ್ಧಾರಗಳನ್ನು ಕೈಗೊಂಡು ಆರೋಗ್ಯ ಕ್ಷೇತ್ರದ ತಜ್ಞರು ಮತ್ತು ಮಾಧ್ಯಮದವರು ಮತ್ತು ಅವರ ಕುಟುಂಬದವರಿಂದಲೇ ಟೀಕೆಗೆ ಗುರಿಯಾಗಿದ್ದಾರೆ. ಹಾಗಿದ್ದರೂ, ಟ್ರಂಪ್ ಅವರ ಬೆಂಬಲದಿಂದ ಇನ್ನೂ ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.